ದಿನಾ ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ‘ಸೊಪ್ಪೋ..’ ಎಂದು ಕೂಗಿಕೊಂಡು ಹೋಗುವ ಮನುಷ್ಯ ಕಳೆದ ಒಂದು ವಾರದಿಂದ ನಾಪತ್ತೆ. ಅವನು ಹೀಗೆ ಬರುತ್ತಿಲ್ಲವೆಂಬ ವಿಷಯ ಮೊದಲೆರಡು ದಿನ ಗೊತ್ತೇ ಆಗಿರಲಿಲ್ಲ. ತೀರಾ ಅನಿವಾರ್ಯವಲ್ಲದಿದ್ದರೆ ಅವನ ಬಳಿ ನಾನು ಸೊಪ್ಪು ಕೊಳ್ಳುವುದಿಲ್ಲ. ಒಂದಕ್ಕೆ ಒಂದೂವರೆ ರೇಟು ಹೇಳುತ್ತಾನೆ ಎನ್ನುವುದು ನನ್ನ ಗುಮಾನಿ. ಅಲ್ಲಲ್ಲ, ಅನುಭವ. ಅವನ ಬಳಿ ಚರ್ಚೆ ಮಾಡುವ ಹಾಗೂ ಇಲ್ಲ. ಚರ್ಚೆಗೆ ಬಗ್ಗುವ ಕುಳ ಅಲ್ಲ ಅವನು. ‘ವರ್ತನೆಯೋರು ಇದಾರೆ, ತಗಂತಾರೆ’ ಎಂದು ನಿವಾರಿಸಿಕೊಂಡು ಹೋಗಲು ಒಂಟಿಕಾಲಲ್ಲಿ ಕಾದು ನಿಂತಿರುತ್ತಾರೆ. ‘ಸಾವಯವ ಕೃಷಿ’ ವಿಧಾನದಲ್ಲಿ ಸೊಪ್ಪು ಬೆಳೆಯುವವನು ತಾನು ಎಂದು ಅವನ ಹೆಗ್ಗಳಿಕೆ. ಅವನ ಹತ್ತಿರ ಸೊಪ್ಪು ಕೊಂಡರೆ ಅದರಿಂದ ತಯಾರಿಸುವ ಮೇಲೋಗರಗಳಿಗೆ ವಿಶಿಷ್ಟ ರುಚಿ, ಪರಿಮಳ. ‘ಸಾವಯವ’ ಅನ್ನುವ ಪದ ಕೇಳಿದರೆ ಅಂತಾ ಉತ್ಪನ್ನಗಳನ್ನು ಕೊಳ್ಳಲು ಮುಗಿಬೀಳುವ ಜನರೇ ಇದ್ದಾರೆ. ಸ್ಟಾರ್ ಹೋಟೆಲುಗಳಿಗೆ ಹೋಗಿ ಹೊಟ್ಟೆಬಿರಿ ತಿಂದು, ತಿಂಗಳ ಖರ್ಚಿಗಾಗುವಷ್ಟು ದುಡ್ಡು ತೆತ್ತು, ಮೇಲೆ ಟಿಪ್ಸೂ ಕೊಟ್ಟು ಬರುವ ಜನ ಮನೆ ಮುಂದೆ ತರಕಾರಿ ಮಾರಲು ಬರುವವರ ಜೊತೆ ಒಂದು, ಎರಡು ರೂಪಾಯಿಗೆ ಚೌಕಾಶಿ ಮಾಡುವುದು ನಾಚಿಕೆಗೇಡು, ವಿಪರ್ಯಾಸ ಎನ್ನುವ ಹೇಳಿಕೆಯೇ ಉಂಟು. ಅದು ಸತ್ಯ ಕೂಡಾ. ನಾಲ್ಕಾಣೆ, ಎಂಟಾಣೆಗೆ ಚೌಕಾಶಿ ಮಾಡುವ ಜಾಯಮಾನ ನನ್ನದಲ್ಲ. ಆದರೆ ಸುಕಾಸುಮ್ಮನೆ ಕೇಳಿದಷ್ಟು ದುಡ್ಡು ಬಿಸಾಕಲು ವರ್ಷಾನುಗಟ್ಟಲೆಯಿಂದ ರೂಢಿಸಿಕೊಂಡು ಬಂದ ಮನೋಧರ್ಮ ಬಿಡುವುದಿಲ್ಲ. ಮೊದಲೇ ಹೇಳಿದಂತೆ ಅನಿವಾರ್ಯ, ಅವಸರ ಇದ್ದಾಗಲಷ್ಟೇ ಆ ಮನುಷ್ಯನಿಂದ ಸೊಪ್ಪು ಕೊಳ್ಳುತ್ತಿದ್ದ ನನಗೆ ದಿನವೂ ಕೇಳುತ್ತಿದ್ದ ಪರಿಚಿತ ದನಿ ಕಿವಿಗೆ ಬೀಳುತ್ತಿಲ್ಲವೆಂಬ ಸತ್ಯ ಅರಿವಿಗೆ ಬರುತ್ತಿದ್ದಂತೆ ಅಭ್ಯಸ್ಥವಾಗಿದ್ದ ಒಂದು ದಿನಚರಿ ಕ್ರಮ ತಪ್ಪಿದ ಅನುಭವ. ‘ವಯಸ್ಸಾಗಿತ್ತು ಮನುಷ್ಯನಿಗೆ. ಪೆಟ್ಟಿಗೆ ಕಟ್ಟಿದನಾ?’ ಎನ್ನುವ ಸಂಶಯ. ಖಾಯಿಲೆ, ಗೀಯಿಲೆ? ಇರಬಹುದು ಏನೂ. ಯಾಕೆ ಇಷ್ಟುದ್ದದ ಪುರಾಣ ಹೇಳಿದೆ ಅಂದರೆ ನಮ್ಮ ದೈನಂದಿನ ಬದುಕಿಗೆ ಯಾವ ರೀತಿಯಲ್ಲೂ ವ್ಯತ್ಯಯವಾಗದ ಸನ್ನಿವೇಶಗಳೂ ಕೂಡಾ ರೂಢಿಯಿಂದ ನಮ್ಮ ಬದುಕಿನೊಳಗೊಂದು ಸ್ಥಾನ ಪಡೆದುಕೊಂಡು, ಅವುಗಳಲ್ಲಿ ಹೆಚ್ಚುಕಮ್ಮಿಯಾದರೆ ಏನೋ ಕೊರತೆಯ ಅನುಭವವಾಗುವ ಮಾನಸಿಕ ಸ್ಥಿತಿಯ ಕುರಿತು. ಇನ್ನೊಂದು ಸಣ್ಣ ಉದಾಹರಣೆಯೊಂದಿಗೆ ಈ ಮಾತಿಗೆ ಪುಷ್ಟಿ ಕೊಡುವ ಪ್ರಯತ್ನ ಮಾಡುತ್ತೇನೆ. ನಮ್ಮ ಬೀದಿಯ ಮನೆಯೊಂದರಲ್ಲಿ ಬಾಡಿಗೆಗಿರುವವರ ಕುರಿತು ನಮಗೆ ಯಾವುದೇ ಬಳಕೆ ಇರುವುದಿಲ್ಲ. ಆ ಮನೆಯ ಮುಂದೆ ನಡೆದು ಹೋಗುವಾಗಲೊಮ್ಮೆ ಗೇಟಿನ ಎದುರು ಅರಳಿದ ರಂಗೋಲಿ, ಕಾಂಪೌಂಡಿನ ಮೇಲೆ ಒಣ ಹಾಕಿದ ಬಟ್ಟೆ, ಒಳಗಿಂದೆಲ್ಲೋ ಕೇಳುವ ಮಗುವಿನ ಅಳು, ಹೀಗೆ ಆ ಮನೆ ಅಂದರೆ ಅದರ ಕುರಿತು ನಮ್ಮಲ್ಲೊಂದು ಭಾವಲೋಕ ತನ್ನಷ್ಟಕ್ಕೆ ಸೃಷ್ಟಿಯಾಗಿರುತ್ತದೆ, ನಮಗೆ ಅರಿವಿಲ್ಲದೆಯೇ. ಹೆಚ್ಚೆಂದರೆ ಗೇಟಿನ ಮೇಲೆ ಹತ್ತಿಳಿಯುತ್ತಿರುವ ಆ ಮನೆಯ ಮಗು ರಸ್ತೆಯಲ್ಲಿ ಓಡಾಡುವವರೆಡೆಗೆ ಮುಗ್ಧವಾಗಿ ‘ಟಾ.. ಟಾ..’ ಮಾಡುವಂತೆ ನಮ್ಮೆಡೆಗೂ ಕೈಯಾಡಿಸಿ, ಮುದ್ದುಮುಖದ ಮೇಲೊಂದು ಚಂದದ ನಗು ಅರಳಿಸಿ, ನಾವೂ ಅದರೆಡೆಗೆ ಕೈಯಾಡಿಸಿ ನಗುನಗುತ್ತಾ ಹೋಗುವ ಪ್ರಸಂಗ ಬಂದಿರಬಹುದು. ಒಂದು ದಿನ ಆ ಮನೆಯೆದುರು ಲಾರಿ ಬಂದು ನಿಲ್ಲುತ್ತದೆ. ಮನೆಯೊಳಗಿನ ಸಾಮಾನುಗಳನ್ನು ಕೂಲಿಯಾಳುಗಳು ಲಾರಿಗೆ ಸಾಗಿಸುತ್ತಾರೆ. ಖಾಲಿಯಾಗುತ್ತಿದೆ ಬಾಡಿಗೆ ಮನೆ. ಒಮ್ಮೆಯಾದರೂ ಅವರೊಡನೆ ಮಾತಾಡಿದ ಉದಾಹರಣೆ ಇಲ್ಲ. ಆದರೂ ಸಣ್ಣದೊಂದು ಖಾಲಿತನ ಮನಸ್ಸನ್ನು ಕಾಡುತ್ತದೆ. ಅಲ್ಲಿ ಆಡುತ್ತಿದ್ದ ಕಂದ ಇನ್ನು ಯಾವತ್ತೂ ಕಣ್ಣಿಗೆ ಬೀಳುವುದಿಲ್ಲವೆಂಬ ವಿಷಯ ಮನಸ್ಸನ್ನು ಗೀರುತ್ತದೆ. ಮೊದಲೇ ಮಾತಾಡಿ ಪರಿಚಯ ಮಾಡಿಕೊಳ್ಳಬಹುದಿತ್ತಾ? ಮಗುವನ್ನೊಮ್ಮೆ ಎದೆಗಪ್ಪಿಕೊಂಡು ಮುದ್ದು ಮಾಡಬಹುದಿತ್ತಾ? ಭಾವುಕ ಮನಸ್ಸಿನವರಾಗಿದ್ದರೆ ಹೀಗೆನ್ನಿಸಬಹುದು. ಮತ್ತೆ ನಾಲ್ಕಾರು ದಿನಕ್ಕೆ ಎಲ್ಲಾ ಮರೆತು ಹೋಗುತ್ತದೆ ಅನ್ನಿ. ದಿನವೂ ವಾಕಿಂಗಿನ ಹೊತ್ತಿನಲ್ಲಿ ಎದುರಾಗುವ ಮುಖಗಳಾಗಿರಬಹುದು, ಮಾಲ್ನಲ್ಲಿ ಸಿಗುವವರಿರಬಹುದು, ಅಥವಾ ದೇವಸ್ಥಾನದಲ್ಲಿ ಕಾಣುವವರಿರಬಹುದು, ನೋಡಿ ನೋಡಿಯೇ ಅಂತವರೊಂದಿಗೆ ಪರಿಚಿತ ಭಾವವೊಂದು ಬೆಳೆದು ಬಿಟ್ಟಿರುತ್ತದೆ. ಮನೆಗೆ ಪೇಪರ್ ಹಾಕುವವರು, ಹಾಲು ತಂದುಕೊಡುವವರು, ಕೊನೆಗೆ ಕೇಬಲ್ನ ದುಡ್ಡು ವಸೂಲು ಮಾಡಲು ಬರುವವರೂ ವರ್ಷಾನುಗಟ್ಟಲೆಯ ಮುಖ ಪರಿಚಯದಿಂದ ಬಳಕೆಯಾಗಿಬಿಟ್ಟಿರುತ್ತಾರೆ. ಸದಾ ಕಣ್ಣಿಗೆ ಬೀಳುತ್ತಿದ್ದವರು ಹಠಾತ್ತಾಗಿ ಕಾಣದಿದ್ದರೆ ತಟ್ಟನೆ ಮನಸ್ಸಿಗೆ ಅರಿವಾಗಿಬಿಡುತ್ತದೆ. ಯಾವ ಸಂವಹನವೂ ಇಲ್ಲದಿದ್ದರೂ, ಸಂಬಂಧ ವ್ಯವಹಾರಕ್ಕಷ್ಟೇ ಸೀಮಿತವಾಗಿದ್ದರೂ, ಅವರು ನಮಗೆ ಅನ್ಯರಲ್ಲವೆನಿಸುವುದೇ ಮನಸ್ಸಿನ ಸೋಜಿಗ. ಇವೆಲ್ಲಾ ಕೊಂಡಿಯಲ್ಲದ ಕೊಂಡಿಗಳು. ನಾಮಮಾತ್ರಕ್ಕೆ ಬೆಸೆದುಕೊಂಡಿರುವ ಅದೃಶ್ಯ ತಂತುಗಳು. ಬಂಧುಬಾಂಧವರ ನಡುವಿನ ಕೊಂಡಿ ಇಷ್ಟು ತೆಳುವಾದದ್ದೇನಲ್ಲ. ಆದರೆ ಕೆಲವು ಸಂಬಂಧಗಳು ‘ಎಷ್ಟೋ ಅಷ್ಟು..’ ಅನ್ನುವ ಹಾಗೆ, ಲೋಕದ ಕಣ್ಣಿಗೆ ಕಾಣುವಷ್ಟು ಮಾತ್ರಾ ಜೀವ ಉಳಿಸಿಕೊಂಡಿರುತ್ತವೆ. ಇದಕ್ಕೆ ನಾನಾ ಕಾರಣಗಳಿರಬಹುದು. ಒಬ್ಬರು ಉದ್ಧಾರವಾಗುತ್ತಿದ್ದರೆ ಅದನ್ನು ಸೈಸಿಕೊಳ್ಳಲಾಗದೆ ಹೊಟ್ಟೆಯಲ್ಲಿ ಹತ್ತಿಕೊಳ್ಳುವ ಕಿಚ್ಚು ಸಂಬಂಧಗಳಲ್ಲೇ ಹೆಚ್ಚು. ‘ನೆಂಟರು’ ಎಂದ ಮೇಲೆ ಪರಸ್ಪರ ಆಪಾದನೆಗಳು ಇದ್ದೇ ಇರುತ್ತವೆ ಅನ್ನುವುದು ಹೆಚ್ಚು ಜನ ಕಂಡುಕೊಂಡಿರುವ ಸತ್ಯ. ‘ಹಾಗೆಂದರು’, ‘ಹೀಗೆ ನಡೆದುಕೊಂಡರು’ ಎಂದೆಲ್ಲಾ ವರ್ಷಾನುಗಟ್ಟಲೆಯ ಹಿಂದಿನ ನೆನಪುಗಳನ್ನು ಅತ್ಯಾಪ್ತರೊಡನೆ ಹಲುಬುತ್ತಾ, ಇಂತವರ ಒಡನಾಟವನ್ನು ನೆಪಕ್ಕಷ್ಟೇ ಉಳಿಸಿಕೊಳ್ಳುವವರೂ ಇರುತ್ತಾರೆ. ಇನ್ನು ಕೆಲವು ಉದಾರ ಹೃದಯಿಗಳು ‘ಲೋಕ ಇರುವುದೇ ಹೀಗೆ’ ಎಂಬಂತೆ ಏನೆಲ್ಲವನ್ನೂ ನುಂಗಿಕೊಂಡು ಸಂಬಂಧವನ್ನು ಹಾರ್ದಿಕವಾಗಿ ಉಳಿಸಿಕೊಳ್ಳಲು ಹೆಣಗುತ್ತಾರೆ. ನಮ್ಮ ಕಷ್ಟಕಾಲದಲ್ಲಿ ಕಿಂಚಿತ್ತೂ ಸ್ಪಂದಿಸದ ಇಂತಾ ಹಗುರ ಸಂಬಂಧಗಳನ್ನು ‘ಕೊಂಡಿಯಲ್ಲದ ಕೊಂಡಿಗಳು’ ಅಂದರೆ ಬಹುಶಃ ತಪ್ಪಾಗಲಿಕ್ಕಿಲ್ಲ. ಹಾಗಾದರೆ ನಮ್ಮ ಬದುಕಿನೊಡನೆ ನಿಜವಾಗಿ ಬೆಸೆದುಕೊಂಡು ನಮ್ಮ ಶ್ರೇಯೋಭಿವೃದ್ದೀಯನ್ನು ಸಂಭ್ರಮಿಸುವ ಮಂದಿ ಯಾರು? ಕುಟುಂಬ ಸದಸ್ಯರನ್ನು ಹೊರತುಪಡಿಸಿ ಯಾರು ನಮ್ಮನ್ನು ಹೃದಯಕ್ಕೆ ಹಚ್ಚಿಕೊಂಡಿರುತ್ತಾರೆ? ಮೆಚ್ಚಿಕೊಂಡಿರುತ್ತಾರೆ? ಉತ್ತರ ಅವರವರ ಅನುಭವಕ್ಕೆ ಬಿಟ್ಟಿದ್ದು, ಆ ಅನುಭವ ಸತ್ಯವಾಗಿದ್ದು ಎಂದು ಅವರಿಗೆ ಪ್ರಾಮಾಣಿಕವಾಗಿ ಅನಿಸಿದರೆ ಮಾತ್ರಾ. ಡಿ.ವಿ.ಜಿ.ಯವರಂತಾ ಮಹಾನುಭಾವರು ಸಂಬಂಧಗಳ ಕುರಿತಾಗಿ ಏನು ಹೇಳಿದ್ದಾರೆಂದು ನೆನಪಿಸುತ್ತಾ ಲೇಖನ ಮುಗಿಸುತ್ತೇನೆ. ಸ್ಥೂಲ ಸೂಕ್ಷ್ಮ ವಿವೇಕರಹಿತೇಷ್ಟ ಬಂಧುಜನ ಕಾಲದಂಷ್ಟ್ರಕೆ ನಿನ್ನ ಮೃದುಗೊಳಿಪ ಭಟರು ಸಾಲವನು ನಿನ್ನಿಂದ ಸಲಿಸಿಕೊಳಬಂದವರು ತಾಳುಮೆಯವರೊಳಿರು _ಮಂಕುತಿಮ್ಮ. *******
