ಹಿತ್ತಲ ಬದಿಯಲಿ ಬೆಳೆದ ಮೂಲಿಕೆಗಳನ್ನು ಆಯ್ದು ತಂದು ಜೀರಿಗೆ ಬೆರೆಸಿ ಕುದಿಸಿ ಇಡುತ್ತಾಳೆ ಆಕೆ ತನ್ನ ಕಾಡಿದ ಅದೇ ಬಾಲ್ಯದ ನೋವು ಇವರ ಕಾಡದಿರಲಿ ಎಂದು. ಕಾಡುತ್ತವೆ ನೆನಪು 'ನಿನ್ನೆ ನೆನೆಯಿಟ್ಟ ಕಾಳುಗಳು ಇಂದು ಮೊಳಕೆಯೊಡೆದಿವೆ ಜೋಪಾನವಾಗಿ ತೆಗೆದಿಡುವ ಕೆಲಸವಾಗಬೇಕು. ಮೊಳಕೆ ಮುರಿಯದಂತೆ ಜಾಗೃತಿಯಲ್ಲಿ, ದಷ್ಟಪುಷ್ಟ ಸಸಿಗಳು ದೃಢಮೊಳಕೆಯಿಂದ ಮಾತ್ರ ಸಾಧ್ಯ' –ಎನ್ನುತ್ತಿರುತ್ತಾಳೆ. ನೂಲಿನಂತೆ ಸೀರೆ ಆಗಬೇಕೆಂದು ಚೆಂದದ ಗಟ್ಟಿನೂಲಲ್ಲೇ ನೇಯ್ದರೂ ಈಗೀಗ ಸೀರೆಗಿಲ್ಲ ಅದೇ ಆಕಾರ ಬಣ್ಣ ಧಾಡಸಿತನ ಎತ್ತೆತ್ತಿ ಒಗೆದರೂ ಹರಿಯದ ಆ ಕಾಲದ ಸೀರೆ ಇವಲ್ಲ ಕಸಿವಿಸಿಯಾಗುತ್ತಾಳೆ ಆಕೆ 'ಬರಿ ಚೆಂದ ಅಲ್ಲ ಬದುಕು ಆತ್ಮಬಲ ಬೇಕು 'ಎನ್ನುತ್ತಿರುತ್ತಾಳೆ. ಎಂದೋ ಎಡವಿಕೊಂಡ ಕಾಲು ನೋವು ಮರುಕಳಿಸಿ ಘಾಸಿ ಮಾಡುತ್ತವೆ. 'ತಣ್ಣೀರನ್ನಾದರೂ ತಣಿಸಿ ಕುಡಿಯಲು ಹೇಳು' ಹೇಳುತ್ತಾನೆ ಆಕೆಗೆ ಕೇಳಲೆಂದೆ- ಎತ್ತರಿಸಿದ ದನಿಯಲ್ಲಿ 'ಬೇಡಿದ್ದನ್ನು ಕೊಡಿಸಬೇಡ ' ತಾಕತ್ತು ಮಾಡುತ್ತಾನೆ ಆಗಾಗ ಚಟವಾದೀತು, ಹಟವಾದೀತು ಬಯಕೆಗಳು ಬೆಳೆದಂತೆ- ಎನ್ನುತ್ತಾನೆ ರಾಗಕ್ಕೆ ತೆರನಾದ ತಾಳ ಆಕೆಯದು. ಬಿರುಸಾದ ಗಾಳಿಗೂ ಬಗ್ಗಿಲ್ಲ ಗಿಡಗಳು ಸ್ವಲ್ಪ ಸೊಟ್ಟಗಾದರೂ ಈ ಅರೆಗಳಿಗೆ ನೆಟ್ಟಗೆ ನಿಲ್ಲುತ್ತವೆ ಮರುಗಳಿಗೆ ಗಾಳಿ ಎದುರಿಸಿ ಗೊತ್ತು ಬಯಲ ಗಿಡಗಳಿಗೆ ಬೆಳೆಯಬೇಕು, ಕಲಿಯಲಿ ಇವರೂ ಅವರಂತೆ ಎನ್ನುತ್ತಾನೆ ಆತ ತೊಗಲ ಹೊದಿಕೆಯ ಹೊದಿಸಿ ರಕ್ತಕ್ಕೆ ಕೆಂಪು ಸುರಿದವರು ಅವರು ಕಾಡುತ್ತದೆ ನೆನಪು ಕಾಡುತ್ತಲೇ ಇರುತ್ತವೆ ನೆನಪು. *ನಾಗರೇಖಾ ಗಾಂವಕರ
ಕಾಡುತ್ತವೆ ನೆನಪು
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್‌ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ನಾಗರೇಖಾ ಗಾಂವಕರ
ನಾಗರೇಖಾ ಗಾಂವಕರ -ವೃತ್ತಿಯಿಂದ ಉಪನ್ಯಾಸಕಿ,
ಪ್ರಕಟಿತ ಕೃತಿಗಳು:
ಏಣಿ ಮತ್ತು ಪದಗಳೊಂದಿಗೆ ನಾನು, ಬರ್ಫದ ಬೆಂಕಿ[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ, ಆಂಗ್ಲ ಸಾಹಿತ್ಯ ಲೋಕ [ಅಂಕಣ ಬರಹ ಕೃತಿ]
ಪ್ರಶಸ್ತಿಗಳು:
“ ಏಣಿ” ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾರಾಮಲಿಂಗಪ್ಪದತ್ತಿ ಪ್ರಶಸ್ತಿ,
‘ಬರ್ಫದ ಬೆಂಕಿ ‘ಕವನ ಸಂಕಲನಕ್ಕೆ ಡಾ. ಬೆಟಗೇರಿ ಕೃಷ್ಣಶರ್ಮ ಕಾವ್ಯ ಪ್ರಶಸ್ತಿ 2019, ಹಾಗೂ ಕರ್ನಾಟಕ
ಲೇಖಕಿಯರ ಸಂಘ, ಬೆಂಗಳೂರು ಕೊಡುವ ಗೀತಾದೇಸಾಯಿ ಕಾವ್ಯ ಪ್ರಶಸ್ತಿ ಲಭಿಸಿದೆ.
“ಮೌನದೊಳಗೊಂದು ಅಂತರ್ಧಾನ” ಕಥಾ ಸಂಕಲನ ಹಸ್ತಪ್ರತಿಗೆ ಜಗಜ್ಜ್ಯೋತಿ ಕಲಾವೃಂದ ಡೊಂಬಿವಿಲಿ, ಮುಂಬಯಿ ಕೊಡ ಮಾಡುವ ಶ್ರೀಮತಿ ಸುಶೀಲಮ್ಮಕಥಾ ಪ್ರಶಸ್ತಿ- 2019 ಲಭಿಸಿದೆ.
ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮ ಕಥಾ ಬಹುಮಾನ 2018 , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋರ್ನಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ 2018, ಇತ್ಯಾದಿ ಬಂದಿರುತ್ತವೆ.
All Posts