ಪುಸ್ತಕ ಪರಿಚಯ ಪುಸ್ತಕದ ಹೆಸರು: ವನಿತೆಯರ ಆತ್ಮಶ್ರೀ (ಕಾನನದ ಮಲ್ಲಿಗೆಗಳನ್ನರಸುತ್ತ... ಅಂಕಣ ಬರಹಗಳ ಪುಸ್ತಕ) ಲೇಖಕಿ: ಮಾಲತಿ ಹೆಗಡೆ ಪುಟಗಳು: 168 ಬೆಲೆ: ₹160/- ಪ್ರಕಾಶನ: ಸಾಹಿತ್ಯ ಪ್ರಕಾಶನ ,ಹುಬ್ಬಳ್ಳಿ ವಿಜಯವಾಣಿ ಪತ್ರಿಕೆಯಲ್ಲಿ ಸುಮಾರು ಒಂದೂವರೆ ವರ್ಷ ವಾರಕ್ಕೊಂದರಂತೆ' ಸಾಂಗತ್ಯ ' ಎಂಬ ಹೆಸರಿನಡಿಯಲ್ಲಿ ಲೇಖಕಿ ಮಾಲತಿಯವರು ಸಮಾಜದಲ್ಲಿ ಅವಮಾನ,ನೋವುಗಳನ್ನು ಸಹಿಸಿದವರ, ಸಂಸಾರಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟವರ,ಒಂದು ಮೆಚ್ಚುಗೆಯ ಮಾತಿಗೆ ತಹತಹಿಸಿದವರ,ತಮ್ಮ ಕಷ್ಟದ ಬದುಕಿನಲ್ಲಿಯೂಬೇರೆಯವರಿಗೆ ಸಹಾಯ ಹಸ್ತ ಚಾಚಿದ ಮಹಿಳೆಯರನ್ನು ಮುಖತಃ ಭೇಟಿಯಾಗಿ ಅವರು ಈ ಎಲ್ಲ ದುಃಖ,ದುಗುಡಗಳ ಮಧ್ಯೆಯೂ ತಮ್ಮ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳದೆ ಹೋರಾಟದ ಬದುಕಿನೊಂದಿಗೆ ಹೆಜ್ಜೆ ಹಾಕಿ ಸಾಧನೆಯ ಹಾದಿಯಲ್ಲಿ ಸಾಗಿದ್ದನ್ನು ಬರೆದಿದ್ದಾರೆ. ಕೇವಲ ಸಾಧಕರಲ್ಲದೆ , ಬದುಕಿನಲ್ಲಿ ಹೋರಾಡಿ ಸೋತ ಮಹಿಳೆಯರ ಬಗ್ಗೆಯೂ ಹೃದಯ ಸ್ಪರ್ಶಿಯಾಗಿ ಉಲ್ಲೇಖಿಸಿದ್ದಾರೆ. ಒಟ್ಟು ನಲವತ್ತೆಂಟು ಲೇಖನಗಳ ಅಂಕಣ ಬರಹಗಳ ಸಂಕಲನವಿದು. ಈ ಬರಹಗಳು ಕೇವಲ ಪ್ರಖರ ಸ್ತ್ರೀವಾದಿ ಚಿಂತನೆಗಳನ್ನು ಮಾತ್ರ ಬಿಂಬಿಸದೆ ಸಮಾಜದ ಎಲ್ಲ ಕ್ಷೇತ್ರಗಳ ಸಾಮಾನ್ಯ ಮಹಿಳೆಯರ ನೋವು, ನಲಿವುಗಳನ್ನು ತೆರೆದಿಡುತ್ತವೆ. ಯಾವುದೇ ಒಂದು ನಿರ್ದಿಷ್ಟ ಚೌಕಟ್ಟಿಗೆ ಒಳಪಡದೆ ವಿಭಿನ್ನ ಪರಿಧಿಯೊಳಗೆ ಕೆಲಸ ಮಾಡಿದ ಮಹಿಳೆಯರ ಚಿತ್ರಣವನ್ನು ಮಾಲತಿಯವರು ಅತ್ಯಂತ ಸೂಕ್ಷ್ಮ ವಾಗಿ, ಸೂಕ್ತವಾಗಿ ತೆರೆದಿಟ್ಟಿದ್ದಾರೆ. 'ನಂದಿನಿ ಎಂಬ ನಗುವಿನ ದ್ವನಿ' ಲೇಖನದಲ್ಲಿ ಒಬ್ಬ ಅಂಧ ಮಹಿಳೆ ನಂದಿನಿಯ ಬಗ್ಗೆ ಬರೆದಿದ್ದಾರೆ. ನಂದಿನಿ ನಾಲ್ಕನೇ ಕ್ಲಾಸಿನಲ್ಲಿ ಓದುತ್ತಿದ್ದಾಗ..ನಿನಗೆ ಕಲಿಸಲು ಸಾಧ್ಯವಿಲ್ಲ ಎಂದು ಶಿಕ್ಷಕಿ ಶಾಲೆಯಿಂದ ಹೊರ ಹಾಕಲ್ಪಡುತ್ತಾರೆ. ನಂದಿನಿ ತನ್ನ ಚಿಕ್ಕಮ್ಮನ ಸಹಾಯದಿಂದ ಶಿಕ್ಷಣ ಸಚಿವರ ಶಿಫಾರಸು ಪತ್ರ ಪಡೆದು ವಿದ್ಯಭ್ಯಾಸ ಮುಂದುವರಿಸಿದ ಛಲಗಾತಿ. ಹೆತ್ತ ತಂದೆಯೇ ಇವಳನ್ನು ಯಾರು ಮದುವೆಯಾಗುತ್ತಾರೆ ಎಂದು ಹೀಯಾಳಿಸಿದಾಗ ಬದುಕಲ್ಲಿ ಏನಾದರೂ ಸಾಧಿಸ ಬೇಕು,ಮದುವೆಯೂ ಆಗಬೇಕು ಎಂಬ ನಿರ್ಧಾರ ಮಾಡಿದವರು. ಅದರಂತೆ ಸಾಧನೆಯನ್ನೂ ಮಾಡಿದವರು.ತಮ್ಮಂತೆ ಒಬ್ಬ ಅಂಧ ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡು ತಾವು ಹೆತ್ತ ಮಗಳ ಜೊತೆ ತಾಯಿ ಪ್ರೀತಿ ಕೊಟ್ಟು ಬೆಳೆಸುವ ಅವರ ಹೃದಯ ವೈಶಾಲ್ಯಕ್ಕೆ ಶ್ಲಾಘನೀಯ ಅವಮಾನ,ಅವಹೇಳನ ಸಹಿಸದ ನಂದಿನಿ ಸರಕಾರಿ ಹುದ್ದೆಗೆ ರಾಜೀನಾಮೆ ನೀಡಿ ಕಳೆದ ಹನ್ನೆರಡು ವರ್ಷಗಳಿಂದ ಬೆಂಗಳೂರಿನ ಆಕ್ಷನ್ ಏಡ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ. ಶಿಕ್ಷಣದಲ್ಲಿ ಸಮಾನತೆ, ಮಹಿಳಾ ಚಳುವಳಿಯ ಬಲವರ್ಧನೆಗಾಗಿ ಊರೂರು ಸುತ್ತುತ್ತ ,ಸೆಮಿನಾರ್ಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತ ,ಮಹಿಳಾ ದೌರ್ಜನ್ಯ ದ ವಿರುದ್ಧ ದ್ವನಿ ಎತ್ತಿದ್ದಾರೆ. 'ಅಂಗವಿಕಲರಿಗೆ ಬೇಕಾಗಿರುವುದು ಅನುಕಂಪವಲ್ಲ, ಸಹಕಾರ, ಸಹಬಾಳ್ವೆ. ಸಮರ್ಥರು, ಅಸಮರ್ಥರು ಎಂಬ ತಕ್ಕಡಿಯಲ್ಲಿ ತೂಗದೆ ,ಮೇಲ್ನೋಟದ ಊನಕ್ಕೆ ಮಣೆ ಹಾಕದೆ ಅಂತರಂಗದ ಚೆಲುವು, ಆತ್ಮ ಗೌರವಕ್ಕೆ ಬೆಲೆ ನೀಡಿ 'ಎನ್ನುವ ನಂದಿನಿಯವರ ಬದುಕು ಅನೇಕರಿಗೆ ಸ್ಪೂರ್ತಿದಾಯಕ. 'ಮಾಯಿಯ ಮಡಿಲು ಕರುಣೆಯ ಕಡಲು'ಲೇಖನದಲ್ಲಿ ಬಾಲವಿಧವೆ ಭಾಗೀರಥಿದೇವಿಯವರು ಜೀವನದ ಕಡು ಕಷ್ಟಗಳನ್ನು ಎದುರಿಸಿ,ಧೈರ್ಯದಿಂದ , ಆತ್ಮಸಮ್ಮಾನದಿಂದ ಇಂದು ಧಾರವಾಡದಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ವನಿತಾ ಸೇವಾ ಸಮಾಜ ಸ್ಥಾಪಿಸಿದ ಕತೆ ಹೇಳಿದ್ದಾರೆ. ಎಂಟನೆಯ ವಯಸ್ಸಿನಲ್ಲಿ ಮದುವೆಯಾಗಿ, ಹನ್ನೆರಡಕ್ಕೆ ಗಂಡನನ್ನು ಕಳೆದುಕೊಂಡು ವಿಧವೆಯಾಗಿ ಅತ್ತೆ ಕೊಡುವ ಕಷ್ಟ ತಾಳಲಾರದೆ ತವರು ಮನೆ ಸೇರಿದಾಗ,ತಂದೆಯ ಮರಣದಿಂದ ಬದುಕು ದಾರಿ ತಪ್ಪಿತ್ತು.ಗರ್ಭಿಣಿ ತಾಯಿಯ ಯೋಗಕ್ಷೇಮ,ಇಬ್ಬರು ತಂಗಿಯರ ಜವಾಬ್ದಾರಿ ಹೊತ್ತಾಗ ಅವರಿಗೆ ಕೇವಲ ಹದಿನೈದು ವರ್ಷ.ಜೀವನದಲ್ಲಿ ಬಿದ್ದ ಪೆಟ್ಟುಗಳು ಅವರನ್ನು ಗಟ್ಟಿಯಾಗಿಸಿದ್ದವು. ಜೀವನ ನಿರ್ವಹಣೆಗೆ ಹಣ ಸಾಲದಾದಾಗ ಗಂಡನ ಮನೆಗೆ ಹೋಗಿ ತನಗೆ ಕಾಯ್ದೆ ಪ್ರಕಾರ ಬರಬೇಕಾದ ಆಸ್ತಿಯನ್ನು ಪಡೆದವರು. ಮಾವನ ಮಗನಿಂದ ಓದು,ಬರಹ ಕಲಿತು ತಂಗಿಯರ ಮದುವೆ ಮಾಡಿ ಜವಾಬ್ದಾರಿ ಮುಗಿದಾಗ ಮುಂದೇನು ಎಂಬ ಪ್ರಶ್ನೆ ಕಾಡಿತ್ತು.ಅನಾರೋಗ್ಯದ ಕಾರಣ ಬೆಂಗಳೂರಿಗೆ ಹೋದಾಗ ಅಲ್ಲಿ ವೈದ್ಯನಿಂದ ಬಲತ್ಕಾರಗೊಳಪಡುವ ಸಂದರ್ಭದಲ್ಲಿ ತಪ್ಪಿಸಿಕೊಂಡಾಗ ಅಸಹಾಯಕ ಸ್ತ್ರೀಯರ ಬದುಕು ಎಷ್ಟು ಕಷ್ಟ ಎಂದು ಅರಿವಾಗಿತ್ತು. ನಿರ್ಗತಿಕ,ಅಸಹಾಯಕ ಮಹಿಳೆಯರಿಗಾಗಿ ತಮ್ಮೆಲ್ಲ ಆಸ್ತಿಯನ್ನು ಮಾರಿ 'ವನಿತಾ ಸೇವಾ ಸಮಾಜವನ್ನು ' ಕಟ್ಟಿದರು. ಅದರ ಏಳಿಗೆಗೆ ಬಗಲಲ್ಲಿ ಜೋಳಿಗೆ ಹಾಕಿಕೊಂಡು ಹಣ ಸಂಗ್ರಹಿಸಿದರು. ಪ್ರಾರಂಭದಲ್ಲಿ ಬಾಡಿಗೆ ಕಟ್ಟಡದಲ್ಲಿ ಇಬ್ಬರಿಂದ ಪ್ರಾರಂಭವಾಗಿತ್ತು ವನಿತಾ ಸೇವಾ ಸಮಾಜ. ಸ್ವಂತ ಕಟ್ಟಡದೊಂದಿಗೆ ಸಂಗೀತ,ನೀತಿ ಬೋಧೆ,ಕೈ ಕೆಲಸ,ಹೊಲಿಗೆ ಮುಂತಾದ ಇಪ್ಪತೈದು ತರಬೇತಿಗಳನ್ನು ಉಚಿತವಾಗಿ ಕಲಿಸುವ ಏರ್ಪಾಡು ಮಾಡಿದರು. ಅವರ ಸಮಾಜದಲ್ಲಿ ಆಶ್ರಯ ಪಡೆದವರಿಗೆ ಮಾಯಿಯಾಗಿದ್ದ ಭಾಗೀರಥಿಯವರು ಪ್ರಾಥಮಿಕ ,ಮಾಧ್ಯಮಿಕ ಶಾಲೆ, ಪ್ರಸೂತಿ ಗೃಹ ,ರಿಮ್ಯಾಂಡ ಹೋಮ್,ಕಸುಬು ಕೈಗಾರಿಕಾ ಕೇಂದ್ರವನ್ನೂ ಸ್ಥಾಪಿಸಿದರು. ಇವರ ಸಮಾಜ ಕಾರ್ಯ ಮೆಚ್ಚಿ ಮಹಾರಾಷ್ಟದ ಒಂದು ಸಂಸ್ಥೆ ಇವರಿಗೆ 'ಕೈಸರ್- ಇ -ಹಿಂದ್' ಪ್ರಶಸ್ತಿ ನೀಡಿತು. ಅವರು ಕಟ್ಟಿರುವ ಸಂಸ್ಥೆಯಲ್ಲಿ ಇಂದಿಗೂ ಸುಮಾರು 450 ಜನರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಅಲ್ಲಿ ಕಲಿತವರ ಮನದಲ್ಲಿ ಅವರ ನೆನಪು ಸದಾ ಹಸಿರಾಗಿರಲೆಂದು ಅವರ ಪುತ್ಥಳಿಯನ್ನು ಶಾಲೆಯ ಮುಂಭಾಗದಲ್ಲಿ ಅನಾವರಣಗೊಳಿಸಿದ್ದಾರೆ. ' ಬಸವ್ವನ ಖಾಲಿ ಕೊಡ 'ಲೇಖನದಲ್ಲಿ ಪ್ಲಾಸ್ಟಿಕ್, ಸ್ಟೀಲಿನ ದಬ್ಬಾಳಿಕೆಯಲ್ಲಿ ತನ್ನ ಅಸ್ತಿತ್ವ ಕಳೆದುಕೊಂಡ ಮಡಿಕೆ ತಯಾರಿಸುವ ಕುಂಬಾರಿಕೆ ಮಾಡುವ ಧಾರವಾಡ ಜಿಲ್ಲೆಯ ಮುಗದ ಗ್ರಾಮದ ೭೫ ರ ಹರೆಯದ ಬಸವ್ವನ ಕತೆಯನ್ನು ತೆರೆದಿಟ್ಟಿದ್ದಾರೆ. ಕೆಲಸ ಮಾಡದ ಗಂಡನ ಜೊತೆ ಮನೆಯ ಜಗುಲಿ,ದೇವಸ್ಥಾನದ ಜಗುಲಿಯ ಮೇಲೆ ಸಂಸಾರ ಮಾಡುತ್ತ ತಾನು ತವರು ಮನೆಯಲ್ಲಿ ಕಲಿತ ಕುಂಬಾರಿಕೆಯಿಂದ ಮಡಿಕೆ ತಯಾರು ಮಾಡಿ ತುಂಬಿದ ಬಸುರಿಯಾಗಿದ್ದಾಗಲೂ ತಲೆ ಮೇಲೆ ಹೊತ್ತು ಮಾರಿ ರೈತರು ಕೊಟ್ಟ ಕಾಳು ಕಡಿಯಿಂದ ಹಿಟ್ಟು ಬೀಸಿ,ಅಡುಗೆ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಬಸವ್ವನ ಬದುಕಿನ ಬವಣೆಯನ್ನು ತಿಳಿಸಿದ್ದಾರೆ.ಮಕ್ಕಳು, ಸೊಸೆಯಂದಿರು ಕುಂಬಾರಿಕೆಯನ್ನು ನಡೆಸಿಕೊಂಡು ಹೋಗುತ್ತಿದ್ದರೂ ತನ್ನ ಕರ್ತವ್ಯ ಮಾಡುವ ಬಸವ್ವ ಸುಮ್ಮನೆ ಕುಳಿತು ಕೊಳ್ಳುವುದಿಲ್ಲ . ಅಂದಿನ ದಿನಗಳಲ್ಲಿ ಮುಗದದ ಮಡಿಕೆಗಳಿಗೆ ಭಾರೀ ಬೇಡಿಕೆ ಇದ್ದು ರಾಜ್ಯದಲ್ಲಿಯೇ ಪ್ರಸಿದ್ದವಾಗಿದ್ದವು .ಆದರೆ ಇತ್ತೀಚೆಗೆ ಬೇಡಿಕೆ ಕಡಿಮೆಯಾಗಿ ಈ ವೃತ್ತಿ ಅವಸಾನದ ಅಂಚಿನಲ್ಲಿದೆ. ಸರಕಾರದಿಂದ ಸಿಕ್ಕ ಎರಡು ಗುಂಟೆ ಜಾಗದಲ್ಲಿ ಮಣ್ಣಿನ ಮನೆ ಹೆಂಚಿನ ಸೂರು ಕಟ್ಟಿಕೊಂಡಿರುವ ಬಸವ್ವ ಮೊಮ್ಮಕ್ಕಳಾದರೂ ನಾಲ್ಕು ಅಕ್ಷರ ಕಲಿತು ಅವರಿಗೊಂದು ಉದ್ಯೋಗ ದೊರಕಿದರೆ ಸಾಕೆನ್ನುವ ಅವಳು ...ದಿನಕ್ಕೆರಡು ರೊಟ್ಟಿ, ತಲಿಮ್ಯಾಲೊಂದು ಸೂರು ಐತಿ ಬದುಕಲು ಮತ್ತೇನು ಬೇಕು ಎನ್ನುವ ಅವಳ ಅಲ್ಪತೃಪ್ತ ಮನಸ್ಸು , ಆಸೆಗಳ ಕೋಟೆ ಕಟ್ಟುವ ಜನರ ಕಣ್ಣು ತೆರೆಸುವಂತಿದೆ. ಹಾಡಿನ ಹಾದಿ ಹೋರಾಟದ ಬದುಕು.. ' ಬರುವಾಗ ಬತ್ತಲೆ ಹೋಗುವಾಗ ಬತ್ತಲೆ ಇರುವಷ್ಟು ದಿನ ನಾವು ಬಾಳಬೇಕು ಉಳಿದರಿಗೂ ಬಾಳಲಿಕ್ಕ ಕೊಡಬೇಕು' ಎಂದು ಹೇಳುವ 'ಹಾಡಿನ ಹಾದಿ ಹೋರಾಟದ ಬದುಕು' ಲೇಖನದ ನಾಯಕಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಹಾಲಕ್ಕಿ ಜನಾಂಗದ ಸುಕ್ರಿ ಬೊಮ್ಮಗೌಡ. ತಮ್ಮ ಜಾನಪದ ಗಾಯನದಿಂದ,ಸಾಮಾಜಿಕ ಹೋರಾಟ ಗಳಿಂದ ರಾಷ್ಟ್ರದ ಗಮನ ಸೆಳೆದ ಸುಕ್ರಿಯವರು ಅಂಕೋಲಾ ಸಮೀಪದ ಬಡಗೇರಿಯವರು. ಹನ್ನೆರಡು ವರ್ಷಕ್ಕೆ ಬಡಗೇರಿಯ ಬೊಮ್ಮ ಗೌಡರನ್ನ ಮದುವೆಯಾದಾಗಲೇ ಇವರಿಗೆ ಸಾವಿರಾರು ಹಾಡುಗಳು ಕಂಠಪಾಠವಾಗಿದ್ದವು. ವಿದ್ಯೆ ಕಲಿಯದ ಇವರು ತಮ್ಮ ಅಜ್ಜಿ, ತಾಯಿಯಿಂದ ಕಥನ ಗೀತೆ,ಸಂಪ್ರದಾಯದ ಪದ,ಜೋಗುಳ ಪದ ಕಲಿತವರು. ಗಂಡ,ಇಬ್ಬರು ಮಕ್ಕಳನ್ನು ಕಳೆದುಕೊಂಡು ತಮ್ಮನ ಮಗನನ್ನು ದತ್ತು ತೆಗೆದುಕೊಂಡು ಬೆಳೆಸಿ ಮದುವೆ ಮಾಡಿದರೂ ಕೆಟ್ಟವರ ಸಂಗ ಮಾಡಿ ಕುಡಿತದ ಚಟಕ್ಕೆ ಆ ಮಗನೂ ಬಲಿಯಾದಾಗ ಉಳಿದದ್ದು ನೋವು ಮಾತ್ರ ಸುಕ್ರಿಯವರಿಗೆ ನೋವು ಮಾತ್ರ. ಹೆಚ್ಚು ಭೂಮಿ ಇದ್ದವರು ಇಲ್ಲದವರಿಗೆ ಕೊಟ್ಟರೆ ಎಲ್ಲರೂ ಸಂತೋಷದಿಂದ ಇರಬಹುದು ಎನ್ನುವ ಸರಳ ಸಮಾಜವಾದ ಸುಕ್ರಿಯವರದ್ದು. ಪರಿಸರ ಹೋರಾಟ,ಮಧ್ಯಪಾನ ನಿಷೇಧದಂತಹ ಚಳುವಳಿ,ಕಲಾ ಸೇವೆ, ಸಾಮಾಜಿಕ ಹೋರಾಟಗಳನ್ನು ಗಮನಿಸಿ ಸರಕಾರ ಇವರಿಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಶ್ರೀ ಪ್ರಶಸ್ತಿ,, ನಾಡೋಜ,ಆಳ್ವಾ ನುಡಿಸಿರಿ ಹೀಗೆ ಹಲವಾರು ಪ್ರಶಸ್ತಿ ಗಳು ದೊರಕಿದರೂ ಅವರ ಅರ್ಥಿಕ ಪರಿಸ್ಥಿತಿಯಲ್ಲಿ ಯಾವ ಬದಲಾವಣೆಯೂ ಆಗದೆ ಇಂದೂ ಕಾಡಿಗೆ ಹೋಗಿ ಕಟ್ಟಿಗೆ ತರುವ ಕಾಯಕ ಅಬಾಧಿತವಾಗಿ ನಡೆದಿದೆ. ಸರಕಾರ ಹಾಗೂ ಕಲಾಭಿಮಾನಿಗಳು ಕೊಟ್ಟ ಹಣದಿಂದ ಇಪ್ಪತ್ತು ಗುಂಟೆ ಜಾಗದಲ್ಲಿ ಪುಟ್ಟ ಮನೆ ಮಾಡಿಕೊಂಡು ಸೊಸೆ, ಮೊಮ್ಮಕ್ಕಳ ಜೊತೆ ಇದ್ದಾರೆ. ಎಪ್ಪತ್ತೆಂಟರ ಇಳಿ ವಯಸ್ಸಿನಲ್ಲೂ ಸುಕ್ರಿ ಹಾಲಕ್ಕಿ ಜನಾಂಗವನ್ನು ಪರಿಶಿಷ್ಟ ಜನಾಂಗಕ್ಕೆ ಸೇರಿಸಿ ಎಂದು ಹೋರಾಟ ನಡೆಸುತ್ತಿದ್ದಾರೆ. ನೆನಪಿನ ಬಲದ ಮೇಲೆ ಹಾಡು ಹಾಡುತ್ತ ಬದುಕಲಿಕ್ಕೆ ಬೇಕಾದ್ದು ಜನರ ವಿಶ್ವಾಸ ಮಾತ್ರ ದುಡ್ಡಲ್ಲ ಎನ್ನುವ ಸುಕ್ರಿಯವರ ಮಾತು ಎಷ್ಟು ನಿಜವಲ್ಲವೇ? ' ಶ್ರಮ ಬಂಡವಾಳದ ಶಾಂತಕ್ಕ ' ಧಾರವಾಡದಲ್ಲಿ 'ಹೋಳಿಗಿ ಶಾಂತಕ್ಕ ' ಎಂಬ ಹೆಸರಿನಿಂದ ಪ್ರಸಿದ್ಧರಾಗಿರುವ ಶಾಂತಕ್ಕರ ಮನೆ ಇರುವುದು ಧಾರವಾಡದ ಸಪ್ತಾಪುರದಲ್ಲಿ. ಪತಿಯ ಕೆಲಸ ಹೋದಾಗ ಎದೆಗುಂದದೆ , ಧಾರವಾಡಕ್ಕೆ ಕಾಲೇಜು ಶಿಕ್ಷಣಕ್ಕೆ ಬರುವ ವಿದ್ಯಾರ್ಥಿಗಳಿಗೆ ದೈನಂದಿನ ಊಟಕ್ಕೆ ಬೇಕಾಗುವ ರೊಟ್ಟಿ ಮಾಡಿ ಕೊಡುವ ಮೂಲಕ ಪ್ರಾರಂಭವಾದ ಇವರ ಉದ್ಯೋಗ ,ಹಬ್ಬ ಹರಿದಿನಗಳಿಗೆ ಬೇಕಾಗುವ ಹೂರಣದ ಹೋಳಿಗೆ, ಶೇಂಗಾ, ಎಳ್ಳು ಹುರಕ್ಕಿ ಬಳಸಿ ಮಾಡಿದ ಹೋಳಿಗೆ, ಚಕ್ಕುಲಿ,ಬೇಸನ್ ಉಂಡೆ, ಕೋಡುಬಳೆ,ಅವಲಕ್ಕಿ,ವಿಧ ವಿಧ ಚಟ್ನಿಗಳು ಹೀಗೆ ಗ್ರಾಹಕರ ಅವಶ್ಯಕತೆಗಳಿಗನುಸಾರವಾಗಿ ಮಾಡಿ ಕೊಡುವ ಖಾದ್ಯಗಳಿಗೆ ಇನ್ನಿಲ್ಲದ ಬೇಡಿಕೆ ಬಂದು ಇಂದು 'ಓಂ ಗೃಹ ಉದ್ಯೋಗ' ಎಂಬ ಹೆಸರಿನಿಂದ ಪ್ರಸಿದ್ದಿ ಪಡೆದಿದೆ. ಬೇರೆ ಬೇರೆ ರಾಜ್ಯಗಳಲ್ಲದೆ ಹೊರ ದೇಶಗಳಲ್ಲೂ ಇವರ ಖಾದ್ಯಗಳಿಗೆ ತುಂಬಾ ಬೇಡಿಕೆ ಇದೆ. ಹದಿನೈದು ವರ್ಷಗಳ ಉದ್ಯಮದ ಪಯಣದಲ್ಲಿ ವರ್ಷಕ್ಕೆ ಲಕ್ಷಾಂತರ ರೂಪಾಯಿ ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆದಿರುವ ಇವರು 'ಗ್ರಾಹಕರೇ ದೇವರು' ಎನ್ನುತ್ತಾರೆ. 'ಸಾವಿನೆದುರು ಬದುಕು ಹಿಡಿದವರು' ರಾಷ್ಟ್ರಕ್ಕಾಗಿ ಜೀವತೆತ್ತ ಗಂಡನನ್ನ ನೆನೆಯುತ್ತ ಕರುಳ ಕುಡಿಗಳನ್ನು ಬೆಳೆಸುವಾಗ ಸರಕಾರದಿಂದ ದೊರೆತ ಸಹಾಯದಿಂದ ಬದುಕ ಬಂಡಿ ಎಳೆಯುವಾಗ ಸಮಾಜದ ಕುಹಕ ನುಡಿಗಳು...'ನಿಮಗೇನು ಕಡಿಮೆ ಸರಕಾರ ಸಾಕಷ್ಟು ಕೊಟ್ಟದ 'ಎಂಬ ಮಾತನ್ನು ಅರಗಿಸಿಕೊಂಡು ಪೆಟ್ರೋಲ್ ಬಂಕ್ ಆರಂಭಿಸಿ, ಮಕ್ಕಳೊಡನೆ ಹೋರಾಟದ ಜೀವನ ಸಾಗಿಸುವುದು ,ಪತಿ ಯುದ್ದ ಭೂಮಿಯಲ್ಲಿ ಎದುರಿಸಿದ ಕಷ್ಟಕ್ಕೆ ಸಮಾನ ಎಂಬುದು , ಕಾರ್ಗಿಲ್ ಯುದ್ದದಲ್ಲಿ ಪತಿಯನ್ನು ಕಳೆದುಕೊಂಡ ನಿರ್ಮಲಾ ಕುಲಕರ್ಣಿ ಅವರ ಮನದಾಳದ ಮಾತು. ಹದಿನೆಂಟು ವರ್ಷ ಸೈನ್ಯದಲ್ಲಿ ಕೆಲಸ ಮಾಡಿ ಇನ್ನೇನು ಪೆನ್ಷನ್ ತೊಗೊಂಡು ಬೆಂಗಳೂರಿನಲ್ಲಿ ಮನೆ ಮಾಡಿ ಸುಖ ಸಂಸಾರದ ಕನಸು ಬಿತ್ತಿದ್ದ ಪತಿ ಕಾರ್ಗಿಲ್ ಯುದ್ದದಲ್ಲಿ ಮರಣ ಹೊಂದಿದಾಗ ಮಾಯಾದೇವಿ ಪೋತರಾಜ ಏಳು ತಿಂಗಳ ಗರ್ಭಿಣಿ. ಮೊದಲ ಮಗಳು ಆವಂತಿಕಾ,ಎರಡನೆಯವಳು ಅನುಷಿಕಾ .ಮನೆಯವರ ಹಾಗೂ ಸರಕಾರ ಕೊಟ್ಟ ಪರಿಹಾರ ಹಣದಲ್ಲಿ ಎಂಟು ಎಕರೆ ಹೊಲ ಖರೀದಿಸಿದ್ದಾರೆ. ಇಬ್ಬರೂ ಮಕ್ಕಳನ್ನು ಚೆನ್ನಾಗಿ ಓದಿಸಿದ್ದಾರೆ. 'ಒಬ್ಬಳನ್ನಾದರೂ ಸೈನ್ಯಕ್ಕೆ ಸೇರಿಸ ಬೇಕೆಂಬಾಸೆ.ಪತಿಯನ್ನು ಕಳೆದುಕೊಂಡು ಮತ್ತೆ ಮಗಳನ್ನು ಸೈನ್ಯಕ್ಕೆ ಸೇರಿಸಲು ಕಷ್ಟವಾಗುವುದಿಲ್ಲವೇ?' ಎಂಬ ಪ್ರಶ್ನೆಗೆ ಸಾವು ಎಲ್ಲಿದ್ದರೂ ಬರುತ್ತೆ ಅದಕ್ಕೇಕೆ ಹೆದರಬೇಕು. ಸೈನಿಕರಾಗಿ ದೇಶದ ಒಳಿತಿಗಾಗಿ ಬಲಿದಾನವಾಗುವುದೂ ಘನತೆಯ ಕಾರ್ಯ' ಎಂಬುದು ಅವರ ದೇಶ ಪ್ರೇಮದ ಮಾತು. ಉಮಾ ಶಂಕರ ಕೋಟಿ,ಸರೋಜಾ ಮಲ್ಲಯ್ಯಾ ಮೇಗಿಲ ಮಠ ಇವರೂ ಸಹ ಯುದ್ದದಲ್ಲಿ ಪತಿಯರನ್ನು ಕಳೆದುಕೊಂಡು ಮಕ್ಕಳ ಏಳಿಗೆಗಾಗಿ ಬದುಕು ಸವೆಸುತ್ತಿದ್ದಾರೆ. ಮಕ್ಕಳಿದ್ದವರು ಮಕ್ಕಳಿಗಾಗಿ ಜೀವಿಸಿದರೆ ಮದುವೆಯಾಗಿ ಕೈಯ ಮದರಂಗಿ ಮಾಸುವ ಮೊದಲೇ ಪತಿಯನ್ನು ಕಳೆದು ಕೊಳ್ಳುವರ ಬದುಕಂತೂ ಕೆಂಡದ ಮೇಲಿನ ರೊಟ್ಟಿಯಂತೆ. ಸಮಾಜದ ಕೊಂಕು ನುಡಿ, ಮನೆಯವರಿಂದಲೇ ದೌರ್ಜನ್ಯ, ಸರಕಾರದಿಂದ ಸಿಕ್ಕ ಪರಿಹಾರ ಕಿತ್ತು ಕೊಳ್ಳಲು ರಣ ಹದ್ದಿನಂತೆ ಕಾಯ್ದು ಕುಳಿತ ಸಂಬಂಧಿಗಳು , ಮರು ಮದುವೆಗೆ ತೊಡಕಾಗಿ ಕಾಡುವ ಪರಿಹಾರ ಧನ. ಇಂತಹ ಸಮಸ್ಯೆಗಳನ್ನು ಎದುರಿಸುತ್ತ ಸಮಾನ ಮನಸ್ಸಿನ ಇವರು ಸ್ನೇಹಿತೆಯರಾಗಿ ಒಬ್ಬರಿಗೊಬ್ಬರ ಕಷ್ಟ ಸುಖಕ್ಕೆ ಸ್ಪಂದಿಸುತ್ತ ಬದುಕು ಸಾಗಿಸುತ್ತಿದ್ದಾರೆ. 'ಸಿರಿಧಾನ್ಯಗಳಡುಗೆಯ ಮಾರ್ಗದರ್ಶಕಿ' ಹೆಚ್ಚು ನೀರು, ಗೊಬ್ಬರ ಬೇಡದ ಪೌಷ್ಟಿಕಾಂಶಗಳ ಆಗರವಾದ ಸಿರಿ ಧಾನ್ಯಗಳ ಕೃಷಿ ಮಾಡುವುದು ಮತ್ತು ಸಿರಿಧಾನ್ಯಗಳನ್ನು ಬಳಸಿ ಅಡುಗೆ ಮಾಡುವುದನ್ನು ತಿಳಿಸಲು 'ಸಮಷ್ಟಿ ಗ್ರಾಮೀಣ ಅಭ್ಯುದಯ ಕೇಂದ್ರವನ್ನು ' ಹುಟ್ಟು ಹಾಕಿದವರು ಧಾರವಾಡದ ಅನುರಾಧಾ ಶೇಷಗಿರಿಯವರು. ಅವರಿಗೆ ಸ್ವತಃ ಸಿರಿ ಧಾನ್ಯ ಉಪಯೋಗಿಸಿ ಅಡುಗೆ ಮಾಡುವುದು ಗೊತ್ತಿರದಿದ್ದರೂ ಅವುಗಳನ್ನು ಕೊಂಡು ತಂದು,ತಿಂದು ಅವುಗಳ ಮಹತ್ವವನ್ನರಿತು ಅವುಗಳು ಆರೋಗ್ಯಕ್ಕೆ ಹೇಗೆ ಪೂರಕವಾಗಿವೆ ಎಂಬುದನ್ನು ತಿಳಿದುಕೊಂಡವರು. ಪತಿಯೊಂದಿಗೆ ವಿವಿಧ ವಿಶ್ವವಿದ್ಯಾಲಯಗಳ ಸಿರಿಧಾನ್ಯ ವಿಭಾಗಕ್ಕೆ ಹೋಗಿ ಮಾಹಿತಿ ಕಲೆ ಹಾಕಿ,ಧಾನ್ಯಗಳನ್ನು ಉಪಯೋಗಿಸಿ ಅಡುಗೆ ಮಾಡುವುದನ್ನು ಕಲಿತವರು. ಸಿರಿ ಸಮಷ್ಟಿಯ ಸ್ವಯಂ ಸೇವಕರ ಮೂಲಕ ರೈತರಿಗೆ ಸಿರಿ ಧಾನ್ಯಗಳಾದ ಸಾವೆ,ನವಣೆ,ಹಾರಕಗಳ ಪರಿಚಯವನ್ನು ಹಳ್ಳಿ,ಹಳ್ಳಿಗಳಿಗೆ ತೆರಳಿ ಮಾಡಿಸಿದ ಪರಿಣಾಮ ರೈತರು ಆಸಕ್ತಿ ತೋರಲಾರಂಭಿಸಿದರು. ಅಂತಹ ಐವತ್ತು ರೈತರ ಒಂದೊಂದು ಗುಂಪು ಮಾಡಿ ಅವರಿಗೆ ಬಿತ್ತನೆ ಬೀಜ ಕೊಡಿಸಿ ,ಬೆಳೆಯುವ ಮಾಹಿತಿಯನ್ನು ಸಂಸ್ಥೆ ಕೊಡುತ್ತದೆ.ಪ್ರಾರಂಭದಲ್ಲಿ ಸಿರಿಧಾನ್ಯಗಳನ್ನು ಉಪಯೋಗಿಸಿ ಉಚಿತವಾಗಿ ಅಡುಗೆ ಮಾಡುವುದನ್ನು ಹೇಳಿ ಕೊಡಲು ಪ್ರಾರಂಭಿಸಿದ ಇವರಿಗೆ ಈಗ ಬೆಂಗಳೂರು,ಮುಂಬೈನಂತಹ ಮಹಾನಗರಗಳ ಸಂಘ ಸಂಸ್ಥೆ, ಮಹಿಳಾ ಮಂಡಳಗಳಿಂದ ಆಹ್ವಾನ ಬರುತ್ತಿದೆ. ಒಂದು ದಿನದ ಕಾರ್ಯಾಗಾರ ನಡಿಸಿ ಕೊಡುವ ಇವರು ಅದರ ಜೊತೆಗೇ ಸಿರಿ ಧಾನ್ಯಗಳಲ್ಲಿರುವ ನಾರಿನಂಶ,ಕಬ್ಬಿಣಾಂಶದ ಬಗ್ಗೆ, ಮಲಬದ್ದತೆಯ ನಿವಾರಣೆಗಾಗಿ,ಬೊಜ್ಜು ಇಳಿಸಲು, ಮಾನಸಿಕ ಒತ್ತಡ ಕಡಿಮೆ ಮಾಡಲು, ಥೈರಾಯ್ಡ್, ಬಿಪಿ, ಶುಗರ್ ಇರುವವರು ಸೇವಿಸಲು ಅತ್ಯಂತ ಸೂಕ್ತವಾದ ಆಹಾರ ಎಂಬ ಸಂಶೋಧಿತ ಸಂಗತಿಗಳನ್ನು ಅಡುಗೆ ಮಾಡುವುದರೊಂದಿಗೆ ವಿವರಿಸುವುದು ಅನುರಾಧಾರ ತರಬೇತಿಯ ವಿಶೇಷತೆ.ಅವರು ಕಲಿಸಿದ ಅಡುಗೆ ಮಾಡಿ ಸೇವಿಸುವುದರಿಂದ ತಮಗೆ ಉಂಟಾದ ಅನುಕೂಲಗಳನ್ನು ತಿಳಿಸಿ ಜನರು ಕೃತಜ್ಞತೆ ತಿಳಿಸಿದಾಗ ತಮ್ಮ ಶ್ರಮ ಸಾರ್ಥಕವಾದ ಧನ್ಯತಾಭಾವ ಅವರಿಗೆ. 'ನಾದ ಮಾಧುರ್ಯದ ಶಕ್ತಿ'ಸುಂದರವಾದ ಕಣ್ಣುಗಳಿರುವ ಧಾರವಾಡದ ಶಕ್ತಿ ಪಾಟೀಲರಿಗೆ ಕಣ್ಣು ಕಾಣಿಸದ ವಿಷಯ ಜನರಿಗೆ ಮೊದಲ ಬಾರಿ ಗೊತ್ತಾಗುವುದೇ ಇಲ್ಲ. ಬಾಲ್ಯದಲ್ಲಿಯೇ ಮ್ಯಾಕುಲರ್ ಡಿ ಜನರೇಶನ್ (ಕಣ್ಣಿನ ನರಗಳು ಸರಿಯಾಗಿ ಬೆಳೆಯದಿರುವ ಅಪರೂಪದ ಸ್ಥಿತಿ) ಸಮಸ್ಯೆ ಇತ್ತು.ಬಾಲ್ಯದಲ್ಲಿ ಮಸುಕು ಮಸುಕಾಗಿ ಕಾಣುತ್ತಿದ್ದ ದೃಷ್ಟಿ ಹದಿನಾರು ವರ್ಷವಾಗುವಷ್ಟರಲ್ಲಿ ಪೂರ್ತಿ ಮರೆಯಾಯಿತು. ಬಾಲ್ಯದಿಂದಲೇ ಮಧುರವಾಗಿ ಹಾಡುತ್ತಿದ್ದ ಶಕ್ತಿಯವರ ,ಶಕ್ತಿ ಸಂಪೂರ್ಣ ಸಂಗೀತ ಸಾಧನೆಗೆ ಮೀಸಲಾಯಿತು. ಸಂಗೀತದಲ್ಲಿ ಜ್ಯೂನಿಯರ್, ಸೀನಿಯರ್ , ವಿದ್ವತ್ತು ಪರೀಕ್ಷೆಗಳನ್ನು ಮುಗಿಸಿ , ಸಂಗೀತದಲ್ಲಿಯೇ ಬಿ.ಎ.ಮುಗಿಸಿ ,ಎಮ್ ಮ್ಯುಸಿಕ್ ಮುಗಿಸಿದವರು.ನಂತರ ಪ್ರಸಿದ್ದ ಗಾಯಕ ಶ್ರೀಪಾದ ಹೆಗಡೆಯವರಲ್ಲಿ ಗಾಯನ ಕಲಿತವರು. ದೆಹಲಿ, ಮುಂಬೈ, ಚೆನೈ, ಬೆಂಗಳೂರು, ಧಾರವಾಡ , ಗೋವಾ ಮುಂತಾದ ಕಡೆಯಲೆಲ್ಲ ಪ್ರತಿಷ್ಠಿತ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಇವರದು. 'ವಚನಮಂದಾರ' 'ಸುರಗಂಗಾ' ಎಂಬೆರಡು ಧ್ವನಿ ಸುರಳಿಗಳು ಬಂದಿವೆ. ಇವರ ಮಧುರ ಗಾಯನವನ್ನು ಮೆಚ್ಚಿ ಅನೇಕ ಸಂಘ ಸಂಸ್ಥೆಗಳು ಇವರನ್ನು ಗೌರವಿಸಿವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಸಾಗರದ ಸ್ವರಮೇಧಾ, ಜಸರಾಜ ಯುವ ಪುರಸ್ಕಾರ, ಮಲ್ಲಿಕಾರ್ಜುನ ಯುವ ಪುರಸ್ಕಾರ,೨೦೧೦ ರ ರಾಜ್ಯೋತ್ಸವ ಪ್ರಶಸ್ತಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಹಂಗಾಮಿ ಸಂಗೀತ ಅಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ ಅವರಿಗೆ ಆಸಕ್ತ ಮಕ್ಕಳಿಗೆ ನಿಸ್ವಾರ್ಥದಿಂದ ಸಂಗೀತ ಕಲಿಸುವ ಆಸೆ. ಶಕ್ತಿಯವರು ಡಾ.ನಂದಾ ಎಂ ಪಾಟೀಲ ಅವರ ಮಾರ್ಗದರ್ಶನದಲ್ಲಿ ನಾಲ್ಕು ವರ್ಷಗಳ ಸತತ ಪರಿಶ್ರಮದ ಫಲದಿಂದ 'ಸಂಗೀತ ಚಿಕೆತ್ಸೆಯ ಸ್ವರೂಪ ಮತ್ತು ಪರಿಣಾಮಗಳ ಕುರಿತು ಒಂದು ಅಧ್ಯಯನ' ಎಂಬ ವಿಷಯದಲ್ಲಿ ಪಿ.ಎಚ್.ಡಿ ಪದವಿ ಗಳಿಸಿದ್ದಾರೆ. ಆಕಾಶವಾಣಿಯ ಬಿ ಹೈ ಗ್ರೇಡ್ ಕಲಾವಿದರೂ ಹೌದು. ಗೆಳತಿ ಆರತಿ ಪಾಟೀಲ ಜೊತೆಗೂಡಿ 'ಅಭಿಜ್ಞಾ' ಎಂಬ ಸಂಸ್ಥೆ ಹುಟ್ಟು ಹಾಕಿ ಕಲಾವಿದರಿಗೆ ವೇದಿಕೆಯನ್ನೊದಗಿಸುವ ಕೆಲಸ ಮಾಡುತ್ತಿದ್ದಾರೆ. ಸಂಗೀತವೆನ್ನುವುದು ಶಕ್ತಿಯ ಪಾಲಿಗೆ ಕೇವಲ ಕಲೆಯಾಗದೆ ಅದು ಅವರ ಬದುಕೇ ಆಗಿದೆ. 'ಜಲಬಾಧೆಯ ಮೂಕ ರೋದನ' ಲೇಖನದಲ್ಲಿ ಲೇಖಕಿ ಶಾಲೆ,ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳು,ಪ್ರೈವೇಟ ಕಂಪನಿಗಳಲ್ಲಿ ,ಮಾಲ್ಗಳಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳಿಗೆ ಸ್ವಚ್ಚ ಶೌಚಾಲಯ, ನೀರಿನ ಅನುಕೂಲ ಇಲ್ಲದ ಕಾರಣ ನೀರು ಕುಡಿಯದೆ ಅನಾರೋಗ್ಯಕ್ಕೆ ತುತ್ತಾಗುವ ಪರಿಸ್ಥಿತಿ ಬಗ್ಗೆ ತಿಳಿಸಿದ್ದಾರೆ. ನಗರಗಳಲ್ಲಿ ಬೀದಿ ಬದಿ ಕುಳಿತು ವ್ಯಾಪಾರ ಮಾಡುವ ಮಹಿಳೆಯರಿಗೆ ಶೌಚಾಲಯದ ಸೌಲಭ್ಯ ಇಲ್ಲದ ಕಾರಣ ದಿನವಿಡೀ ನೀರು ಕುಡಿಯದೆ ಅನುಭವಿಸುವ ಯಾತನೆಗಳನ್ನು ಅವಲೋಕಿಸಿದಾಗ ,ಸಭ್ಯತೆಯ ಮುಸುಕಿನಲ್ಲಿ ನೈಸರ್ಗಿಕ ಕರೆಗಳನ್ನು ಹತ್ತಿಕ್ಕುತ್ತಲೇ ಹೆಚ್ಚಿನ ಹೆಣ್ಣು ಮಕ್ಕಳು ದಿನ ಕಳೆಯುವುದು ಬೇಸರವುಂಟು ಮಾಡುತ್ತದೆ. ಇರುವ ಸಾರ್ವಜನಿಕ ವ್ಯವಸ್ಥೆಯನ್ನು ಕೇವಲ ದೂರುವುದಲ್ಲದೆ ಸ್ವಚ್ಚವಾಗಿಡುವ ನಾಗರಿಕ ಪ್ರಜ್ಞೆ ಯನ್ನೂ ಬೆಳೆಸಿಕೊಳ್ಳ ಬೇಕು.'ನಾವು ಕಲಿಯುವ ಶಾಲಾ ಕಾಲೇಜುಗಳಲ್ಲಿ , ಕೆಲಸ ಮಾಡುವ ಸ್ಥಳಗಳಲ್ಲಿ ಸ್ವಚ್ಚ ಶೌಚಾಲಯಗಳು ಬೇಕು'ಎನ್ನುವುದು ಒಂದು ಮಹಿಳಾ ಆಂದೋಲನವಾಗ ಬೇಕು ಎನ್ನುವುದು ಲೇಖಕಿಯ ಆಶಯ. ಹೀಗೆ 'ವನಿತೆಯರ ಆತ್ಮಶ್ರೀ' ಪುಸ್ತಕದ ೪೮ ಬರಹಗಳು ಅನೇಕ ಮಹಿಳೆಯರ ಯಶೋಗಾಥೆ, ನೋವು, ನಲಿವು,ಅವರ ಜೀವಪರ ಚಿಂತನೆಗಳನ್ನು ಹಿಡಿದಿಡುತ್ತವೆ.ಬದುಕಿನಲ್ಲಿ ಸೋತವರಿಗೆ ಸ್ಪೂರ್ತಿ ನೀಡುವಂತಹ ಲೇಖನಗಳಿವು ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಇಂಥ ಪುಸ್ತಕ ಮನೆಯ ಗ್ರಂಥಾಲಯದಲ್ಲಿದ್ದರೆ ಮನ ಸೋತಾಗ ಓದಿದರೆ ಮತ್ತೆ ಆತ್ಮವಿಶ್ವಾಸ ಪುಟಿದೇಳುವುದು ಎಂಬ ನಂಬಿಕೆ ನನ್ನದು. * ಪುಷ್ಪಾ ಹಾಲಭಾವಿ ಧಾರವಾಡ.
ಓದಿದರೆ ಆತ್ಮವಿಶ್ವಾಸ ಪುಟಿದೇಳುವುದು ‘ವನಿತೆಯರ ಆತ್ಮಶ್ರೀ’
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್‌ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ಪುಷ್ಪಾ ಹಾಲಭಾವಿ
ಪುಷ್ಪಾ ಹಾಲಭಾವಿ ಧಾರವಾಡ ನಿವಾಸಿ.ಕಥೆ ,ಕವನ ಬರೆಯುವುದರಲ್ಲಿ,ಓದುವುದರಲ್ಲಿ ಆಸಕ್ತಿ.
ಬರೆದ ಕಥೆ,ಕವನಗಳು ಸ್ತ್ರೀ ಜಾಗೃತಿ ಮಾಸ ಪತ್ರಿಕೆ, ಮಂಗಳ ವಾರ ಪತ್ರಿಕೆ, ವಿಜಯವಾಣಿ ದೀಪಾವಳಿ ವಿಶೇಷಾಂಕ, ಬಣಜಿಗ ಬಂಧು, ಪ್ರಜಾಪರ್ವ,ಸಾಹಿತ್ಯ ಸಖಿ ತ್ರೈಮಾಸಿಕ ಪತ್ರಿಕೆ, ವಿಶ್ವಧ್ವನಿ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಬರೆದ ಕಥೆಗಳಿಗೆ ಪುಸ್ತಕ ಬಹುಮಾನ ,ನಗದು ಬಹುಮಾನ ದೊರಕಿದೆ.ಸಾಹಿತ್ಯಕ ಗುಂಪುಗಳಿಗೆ ಬರೆದ ಕಥೆಗಳಿಗೆ ಪ್ರಶಂಸಾ ಪತ್ರದ ಜೊತೆಗೆ ನಗದು ಬಹುಮಾನವೂ ದೊರಕಿದೆ. ಅಡುಗೆ, ಕೈ ತೋಟ ಮಾಡುವುದು ಇತರ ಹವ್ಯಾಸಗಳು.
All Posts