ತೆರೆದ ಬಾಗಿಲು

                                        ಚಿತ್ರ: ಮಂಗಳಾ ಶೆಟ್ಟಿ

ತೆರೆದ ಕಿಟಿಕಿಗಳ ಮೂಲಕ ಪಕ್ಕದ ಮನೆಯಲ್ಲಿ ಬೆಳಕು ಕಾಣಿಸುತ್ತಿತ್ತು. ನಿದ್ದೆಗೆಟ್ಟು ಹೊರಳಾಡುತ್ತಿದ್ದ ಕಾವೇರಿ ಒಮ್ಮೆಲೆ ಎದ್ದು ಕುಳಿತಳು. ಕತ್ತಲಲ್ಲಿ ಕೈ ತಡಕಾಡಿತು. ಬೆರಳನ್ನು ಬೆಡ್‍ಲ್ಯಾಂಪಿನ ಗುಂಡಿಯ ಮೇಲಿಡುತ್ತಿದ್ದಂತೆ ಕೋಣೆ ಜಗ್ಗನೆ ಬೆಳಗಿತು. ಮೇಜಿನ ಮೇಲಿದ್ದ ಗಡಿಯಾರವನ್ನು ನೋಡಿದರೆ ಗಂಟೆ ಹನ್ನೆರಡು! ಅವಳು ತುಟಿ ಕಚ್ಚಿದಳು. ನಿರ್ಧಾರ ಮುಖದ ಮೇಲೆ ಅಚ್ಚೊತ್ತಿತು. ಕೋಣೆಯ ಬಾಗಿಲನ್ನು ತೆರೆದಳಾದರೂ ಹೊಸ್ತಿಲನ್ನು ದಾಟಲು ಹಿಂಜರಿದಳು. ಏನಾದರಾಗಲಿ ಅಂದುಕೊಂಡು ಹೆಗಲ ಸುತ್ತ ಸೆರಗು ಹೊದ್ದು ಹೆಜ್ಜೆ ಹೆಜ್ಜೆಗೂ ಅಳುಕುತ್ತಿದ್ದ ಎದೆಯನ್ನು ಬಿಗಿ ಹಿಡಿದುಕೊಂಡು ನಡೆಯತೊಡಗಿದಳು. ಬಾಗಿಲ ಬಿರುಕಿನೆಡೆಯಿಂದ ಮಿಂಚಿ ಬಂದ ಬೆಳಕಿನ ಗೀರು ತನ್ನ ಎದೆಯ ಮೇಲೆ ಊರಿದಾಗ ಅವಳು ಗಕ್ಕನೆ ನಿಂತಳು. ಬಾಗಿಲನ್ನು ಮುಟ್ಟಿದಾಗ ಅವಳ ಪೇಶಿಯೊಮ್ಮೆ ಸೆಟೆದಂತಾಯಿತು. ಹಿಡಿಯನ್ನು ಜಗ್ಗಿ ನೂಕಿದ ಬಳಿಕ ಆಕೆ ಸಣ್ಣಕ್ಕೆ ಕೆಮ್ಮಿದ್ದರಿಂದಲೋ, ಒಳಗೆ ಬಂದು ಬಾಗಿಲು ಮುಚ್ಚಿದ ಸದ್ದು ಕೇಳಿದ್ದರಿಂದಲೋ ಹಾಸಿಗೆಯಲ್ಲಿ ಮಲಗಿದ್ದವನ ಮುಖದಿಂದ ಹೊದಿಕೆ ಕೆಳಗೆ ಸರಿಯಿತು.
“ಯಾರು? ಓಹ್ ಕಾವೇರಿ! ಇದೇನು ಇಷ್ಟೊತ್ತಲ್ಲಿ…”
ಕಕ್ಕಾವಿಕ್ಕಿಯಾಗಿ ತೊದಲಿದವನ ದನಿಯಲ್ಲಿದ್ದ ಗಲಿಬಿಲಿಯನ್ನು ಗುರುತಿಸಿ ಅವಳೆಂದಳು.
“ಬೇಡ ಗೋಪಾಲ. ದೀಪ ಬೇಡ. ಆರಿಸಿಬಿಡು.”
ಅವನು ದೀಪವನ್ನು ಆರಿಸಿ ಎದ್ದು ಕುಳಿತ. ಆಕೆ ಹತ್ತಿರ ಬಂದು ಆತನಿಂದ ಸ್ವಲ್ಪ ದೂರ ಕುಳಿತಳು.
“ಇಷ್ಟು ಹೊತ್ತಲ್ಲಿ ಇಲ್ಲಿಗೆ ಬಂದುದಕ್ಕೆ…”
“ಛೆ! ನಿನ್ನ ಮನಸ್ಸು ನಂಗೆ ತಿಳಿಯದೇ? ತಪ್ಪು ಮಾಡಿದ್ದು ನಾನು. ಎಷ್ಟಾದ್ರೂ ಹೊರಗಿನವನು. ರಾತ್ರಿ ಹೊತ್ತಲ್ಲಿ ಬಂದು ನಿಮ್ಮಿಬ್ರ ಜಗಳದಲ್ಲಿ ತಲೆ ಹಾಕಬಾರ್ದಿತ್ತು.”
“ಹೊರಗೋ? ನೀನು ನಂಗೆ ಹೊರಗೋ? ಹಾಗೆಲ್ಲ ಹೇಳ್ಬಾರ್ದು ಗೋಪಾಲ”
“ನಂಜುಂಡ…”
“ಎಲ್ಲಿಗೋ ಹೋದ”
“ಅವ ನಿನ್ನನ್ನು ಹೊಡೀತಿರುವಾಗ ನಾನು ಅಲ್ಲಿಗೆ ಬಂದು ತಡೆದುದಕ್ಕೆ ನಿನ್ನನ್ನೇನಾದ್ರೂ…”
“ಅದೆಲ್ಲ ಯಾವತ್ತೂ ಇದ್ದದ್ದೇ. ಇಲ್ಲದಿದ್ರೆ ಬೇರೇನಾದ್ರೂ ಕಾರಣ ಸಿಗ್ತದೆ ಅವನಿಗೆ”
“ನೀನ್ಯಾಕೆ ಅವನೊಂದಿಗೆ ಇರುತ್ತೀ? ತವರಿಗೆ ಹೋಗಬಹುದಲ್ಲ?”
“ಅದಕ್ಕೊಂದು ಕಾಲ ಎಂಬುದುಂಟಲ್ಲ. ಆಮೇಲೆ ಅಲ್ಲಿ ಸ್ಥಾನವೆಲ್ಲಿದೆ? ಆತ್ಮಹತ್ಯೆ ಮಾಡಬೇಕೆಂದು ಯೋಚಿಸಿದ್ದೆ. ಆದರೆ ಜೀವ ಇರೋವರೆಗೂ ಇಂಥ ಬದುಕನ್ನು ಬಾಳಬೇಕಾದ್ದೇ ಅಲ್ವಾ?”
“ಇದೆ ರೀತಿ?”
“ಬೇರೆ ಮಾರ್ಗವೇನುಂಟು? ನಂಜುಂಡನನ್ನು ಬಿಟ್ಟು ಬೇರೆಯವನನ್ನು ಮದುವೆಯಾಗು ಅಂತ ನೀನು ಹೇಳಬಹುದು. ಕೊನೆಗೆ ಅವನು ಮಾಡೋದೂ ಹೀಗೇ ಅಲ್ವಾ?”
“ಕಾವೇರಿ!”
“ನಂಗೊತ್ತು ನೀನೇನು ಹೇಳುವೆ ಅಂತ. ‘ನಿಂಗೆ ಎಂಥ ಗಂಡನ್ನೂ ಆಕರ್ಷಿಸುವ ಶಕ್ತಿಯಿದೆ. ಮಾಟವಾದ ಮೈಕಟ್ಟಿದೆ. ಆದ್ದರಿಂದ ಹೇಗಾದ್ರೂ ಮಾಡಿ ನಂಜುಂಡನ ಮನಸ್ಸನ್ನು ಗೆಲ್ಲು. ಇಲ್ಲವೇ ವಿಷ ಕೊಟ್ಟು ಕೊಲ್ಲು’ ಎನ್ನಬಹುದು. ಒಂದ್ವೇಳೆ ನಾನು ಹಾಗೆ ಮಾಡಿದೆ ಅಂತಿಟ್ಕೋ. ಬಳಿಕ ನಾನು ಹೋಗೋದಾದ್ರೂ ಎಲ್ಲಿಗೆ?”
“ಎದೆಗೆ ಬಿದ್ದ ಪೆಟ್ಟಿನ ನೋವು ನಿನ್ನನ್ನು ಈ ರೀತಿ ಮಾತಾಡಿಸ್ತಿದೆ. ಹೆಣ್ಣನ್ನು ಅರ್ಥಮಾಡಿಕೊಳ್ಳೋ ಗಂಡಿಗೂ ಜನ್ಮಕೊಟ್ಟಿದೆ ಈ ಭೂಮಿ”
ಕಾವೇರಿಯ ಬಾಡಿದ ಕಣ್ಣುಗಳು ಅರಳಿದವು. ಅವನ ಕೈ ಹಿಡಿದುಕೊಂಡು ತುಟಿಯಂಚಿನಲ್ಲೇ ನೋವಿನಿಂದ ನಕ್ಕಳು. ಮುಖದ ಮೇಲೆ ನೆರಳು ಹಾದುಹೋದಂತಾಯಿತು.
“ಕಾವೇರಿ, ಕಳೆದ ವಾರವೂ ಸರಿಯಾಗಿ ನಿದ್ದೆ ಬಂದಿರಲಿಲ್ಲ ನಂಗೆ. ಹತ್ತೂವರೆಗೆ ಮಂಪರು. ಹನ್ನೆರಡಕ್ಕೆ ಎಚ್ಚರ. ಕಣ್ಣು ತೆರೆದು ನೋಡಿದರೆ ನಿಮ್ಮ ಮನೆಯಲ್ಲಿ ಜಗಳ. ನಿಮ್ಮಿಬ್ಬರ ಮಾತುಗಳು ಪರಸ್ಪರ ಢಿಕ್ಕಿ ಹೊಡೆದು ಅರ್ಥ ಕಳೆದುಕೊಳ್ಳುತ್ತಿದ್ದವು. ಮಾತು ಮುಗಿಯುವ ಮುನ್ನ ಪಟಾಕಿಯ ಸರಕ್ಕೆ ಬೆಂಕಿ ಬಿದ್ದಂತೆ ಏಟುಗಳ ಸದ್ದು ಸುತ್ತಲೂ ಮಾರ್ದನಿಸುತ್ತಾ ಅಲೆ ಅಲೆಯಾಗಿ ಮೇಲೇಳತೊಡಗಿತು. ಎದ್ದು ಓಡಿ ಬಂದೆ ಅತ್ತ ಕಡೆಗೆ. ಜೋರಾಗಿ ಗದರಿಸುವ, ಬೈಯುವ ತೊದಲು ದನಿ ಹಿನ್ನೆಲೆ ಸಂಗೀತದಂತೆ ಹತ್ತಿರವಾಗತೊಡಗಿತು. ಗೇಟಿನ ಬಳಿ ತಲುಪುತ್ತಿದ್ದಂತೆ ನಂಜುಂಡ ಕಾಲನ್ನು ಜೋರಾಗಿ ಅಪ್ಪಳಿಸುತ್ತಾ ಬರುತ್ತಿರುವುದು ಕಾಣಿಸಿತು. ಹೊರಗೆ ಹೋಗುವ ಮುನ್ನ ಬಾಗಿಲ ಬಳಿ ತಿರುಗಿ ನಿಂತು ಅವಜ್ಞೆಯಿಂದಲೋ ಹಗೆಯಿಂದಲೋ ಒಳಗೆ ದಿಟ್ಟಿಸಿದ ಬಳಿಕ ವೇಗವಾಗಿ ಹೊರನಡೆದು ಎತ್ತಲೋ ಹೋದ. ನಿನ್ನ ಮನೆಯ ಬಾಗಿಲು ಅರ್ಧ ತೆರೆದಿತ್ತು. ಮಂಚದ ಕೆಳಗೆ ನೀನು ಹೆಣದಂತೆ ಬಿದ್ದಿದ್ದೆ. ನೆಲದ ಮೇಲೆ ಸೆರಗು ಸತ್ತ ಹಾವಿನಂತೆ ಹರಿದು ಹೋಗಿತ್ತು. ಎರಡೂ ಕಾಲುಗಳು ಒಂದೊಂದು ಕಡೆ ಚಾಚಿದ್ದವು. ಕುಂಕುಮ – ಕೂದಲು ಕೆದರಿತ್ತು. ಕಣ್ಣುಗಳು ಮುಚ್ಚಿಕೊಂಡಿದ್ದವು. ಹಣೆ ಮೂಗು ಕೆನ್ನೆಗಳ ಮೇಲೆ ಬೆವರಿನ ಹನಿಗಳು ಕೂಡಿ ನಿಂತಿದ್ದವು. ಬಲಗೈ ಮಂಚದ ಅಡಿಗೆ ಹೋಗಿತ್ತು. ಅರೆತೆರೆದ ಸೀರೆ ರವಿಕೆಗಳಲ್ಲಿ ಹೇಗು ಹೇಗೋ ಕಾಣಿಸುತ್ತಿದ್ದೆ. ಮೈ ಅಲ್ಲಾಡಿಸಿ ಕರೆದರೆ ಉತ್ತರವಿಲ್ಲ. ಅರಳಿದ ತುಟಿ, ಮೂಗಿನೆದುರು ಕೈಹಿಡಿದಾಗ ನಿನ್ನ ಉಸಿರು ಬೆರಳಿಗೆ ತಾಗಿತು. ಕಿಟಿಕಿಯ ಗೂಡಿನೊಳಗೆ ಗಾಜಿನ ಜಾಡಿಯಲ್ಲಿದ್ದ ನೀರನ್ನು ತೆಗೆದುಕೊಂಡು ನಿನ್ನ ತಲೆಗೆ ತಟ್ಟಿದೆ. ನೀನು ಎಚ್ಚರಗೊಳ್ಳುತ್ತಿದ್ದಂತೆ ಅಂದುಕೊಂಡೆ ಇನ್ನು ಹೀಗೆ ಆಗಲು ಬಿಡುವುದಿಲ್ಲ ಅಂತ. ಅದಕ್ಕೇ ಇವತ್ತು ಅವ ನಿಂಗೆ ಹೊಡೆದಾಗ ನಾನು ಬಂದು ಬೈದದ್ದು. ಪೋಲೀಸರಿಗೆ ದೂರು ಕೊಡ್ತೇನೆ ಅಂದದ್ದು. ಹೆಣ್ಣಿನ ವಿಷಯದಲ್ಲಿ ಜೈಲಿಗೆ ಹೋದರೆ ಅಲ್ಲೇ ಕೊಳೆಯಬೇಕಾಗುತ್ತದೆ ಅಂತ ಹೆದರಿಸಿದ್ದು.”

ತನ್ನ ಕೈಯೊಳಗೆ ಭದ್ರವಾಗಿದ್ದ ಆಕೆಯ ಮುಂಗೈ ಬೆರಳುಗಳು ನುಗ್ಗುನುರಿಯಾಗುವಂತೆ ಹುರಿಗೊಳ್ಳುತ್ತಿರುವುದು ಅನುಭವಕ್ಕೆ ಬರುತ್ತಿದ್ದಂತೆ ಗೋಪಾಲನ ಮಾತು ಅಲ್ಲಿಗೇ ನಿಂತಿತು. ಕಾವೇರಿಯ ತುಟಿಗಳು ಅದುರುತ್ತಿದ್ದವು. ನಿಸ್ತೇಜವಾದ ಮುಖದ ಮಾಂಸಪೇಶಿಗಳು ಕರಗಿ ಕೆನ್ನೆ ಬೆವರಿಟ್ಟಿತ್ತು. ಶಬ್ದಗಳ ಧಾರೆಯನ್ನು ದುರ್ಗಮವಾದ ತಾಣದಿಂದ ಹೊರಗೆಳೆದು ತೆಗೆಯುವಂತೆ ಕಷ್ಟಪಡುತ್ತಾ ಅವಳು ಹೇಳಿದಳು.

“ನನ್ನ ಬಾಳು ಗೋಜಲು ಗೋಜಲಾದ ಬಲೆ. ಕಲ್ಲು ಮುಳ್ಳು ತುಂಬಿದ ಕಾಡು ಹಾದಿ. ಮುಟ್ಟಿದ್ದು ಮಣ್ಣು. ಮೆಟ್ಟಿದ್ದು ಮುಳ್ಳು. ಚಿಕ್ಕಂದಿನಲ್ಲೇ ತಂದೆ ತಾಯಿಯರನ್ನು ಕಳೆದುಕೊಂಡ ನಾನು ಚಿಕ್ಕಪ್ಪ ಚಿಕ್ಕಮ್ಮನ ಪಾಲಿಗೆ ಮಗಳಾಗಲಿಲ್ಲ. ಅವರ ಮಕ್ಕಳ ಜೊತೆ ಶಾಲೆಗೆ ಹೋದರೂ ನಾನು ಅವರ ತೊತ್ತು. ತಂದೆತಾಯಿಯರ ಒಬ್ಬಳೇ ಮಗಳಾಗಿ ಬೆಳೆಯಬೇಕಿದ್ದವಳು ಕಸ ಬಳಿಯುವವಳ ಮಗಳಿಗಿಂತ ಕಡೆಯಾದೆ. ಸುತ್ತಲೂ ಕುಣಿಯುತ್ತಿದ್ದ ಸುಖಸಂತೋಷಗಳು ಮನದಲ್ಲಿ ಆಸೆಯ ಅಲೆಯೆಬ್ಬಿಸಿ ಹಿಂಸಿಸುತ್ತಿದ್ದವು. ಕೆನ್ನೆ ಮೇಲಿನ ಗೆರೆಗಳು, ಬೆನ್ನ ಮೇಲಿನ ಬಾಸುಂಡೆಗಳು, ಕಿತ್ತು ಹೋಗುತ್ತಿದ್ದ ಕೂದಲುಗಳು ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಅವರ ಮಕ್ಕಳ ವರ್ತನೆಗೆ ಸಾಕ್ಷಿ ನುಡಿಯುತ್ತಿದ್ದವು. ಪಾತ್ರೆ ತಿಕ್ಕುತ್ತಲೋ, ಕಸಗುಡಿಸುತ್ತಲೋ ಇದ್ದ ನನ್ನನ್ನು ಯಾರಾದರೂ ನೋಡಿದರೆ ಚಿಕ್ಕಮ್ಮ ಹುಲಿಯಾಗುತ್ತಿದ್ದಳು. ಆ ಕಿರುಕುಳ, ನೋವುಗಳನ್ನು ಹೇಗೆ ತಡೆದುಕೊಂಡೆನೋ ಇವತ್ತಿಗೂ ಆಶ್ಚರ್ಯ. ಅವಳೊಮ್ಮೆ ಒಂದೆರಡು ಸಲ ನನ್ನನ್ನು ಕೂಗಿದಳಂತೆ. ಹೊರಗೆ ನಲ್ಲಿಯಲ್ಲಿ ನೀರು ಬಿಟ್ಟಿದ್ದರಿಂದ ಆ ಸದ್ದಿನಲ್ಲಿ ನನಗೆ ಅದು ಕೇಳಿಸಲಿಲ್ಲ. ಇದ್ದಕ್ಕಿದ್ದಂತೆ ನುಗ್ಗಿ ಬಂದವಳು ‘ಯಾರ ಚಂದ ನೋಡ್ತಾ ಇದ್ದೀಯೆ ಸೂಳೆಮುಂಡೆ’ ಎಂದು ಕಾದ ಸಟ್ಟುಗದಲ್ಲೇ ಬಾರಿಸಿದಾಗ ‘ಅಯ್ಯಯ್ಯೋ’ ಎಂದು ಚೀರಿದ ನೆನಪು ಈಗಲೂ ಮೈನಡುಗಿಸುತ್ತದೆ. ಅದೇ ದಿನ ಹೇರುಗಟ್ಟಲೆ ಬಟ್ಟೆ ಹೊತ್ತು ಹಳ್ಳಕ್ಕೆ ಹೋದವಳು ಒಮ್ಮೆಯೂ ಕಾಣದಿದ್ದ ತಂದೆತಾಯಿಯರನ್ನು ನೆನೆದು, ಕಣ್ಣಿನ ಸುತ್ತ ಕತ್ತಲು ಕವಿಯುವಷ್ಟು ಅತ್ತು ಇನ್ನು ಯಾವ ಕರ್ಮಕ್ಕೆ ಬದುಕಬೇಕೆಂದು ನೀರಿಗೆ ಧುಮುಕಿದೆ. ಕಣ್ಣು ಬಿಟ್ಟಾಗ ಕಂಡದ್ದು ಮೂಲೆಮನೆ ರಾಜೀವಿಯ ಮುಖ. ನನ್ನ ತಲೆ ಅವಳ ಮಡಿಲಲ್ಲಿ. ಹೇಳಲು ಏನೂ ಹೊಳೆಯದೆ ಅವಳೆದೆಯಲ್ಲಿ ಮುಖ ಹುದುಗಿಸಿ ಗೊಳೋ ಎಂದು ಅತ್ತುಬಿಟ್ಟೆ. ನನ್ನ ಮೈಕೈಗಳಲ್ಲಿ ಮೂಡಿದ ಸಟ್ಟುಗದ ಗುರುತು ಅವಳಿಗೆ ಎಲ್ಲವನ್ನೂ ತಿಳಿಸಿರಬೇಕು. ಅಂದಿನಿಂದ ಆಕೆ ನನ್ನ ತಾಯಿಯಾದಳು. ವಾರಕ್ಕೊಮ್ಮೆಯಾದರೂ ಮನೆಯವರ ಕಣ್ಣುತಪ್ಪಿಸಿ ಅವಳ ಮಡಿಲಲ್ಲಿ ದುಃಖವನ್ನು ಮರೆಯುತ್ತಿದ್ದೆ. ಅವರ ಮಗ ಶಿವದಾಸನಿಗೆ ನನ್ನನ್ನು ತಂದುಕೊಳ್ಳಬಹುದೆಂಬ ಮಾತು ಕೇಳಿದಾಗ ಹಿತವಾದ ಗಾಳಿಬೀಸಿ ನರನಾಡಿಗಳಲ್ಲಿ ಏನೋ ಹರಿದುಹೋದಂತಾಯಿತು. ಅವನ ದುಂಡಗಿನ ಮುಖ, ಅರಳಿದ ಕಣ್ಣು, ಬಲಿಷ್ಠವಾಗಿ ಮಿಂಚುವ ಅಂಗಾಂಗಗಳು ಕಣ್ಣಿಗೆ ಕಟ್ಟಿದವು. ಬವಣೆಯ ಬೆಟ್ಟ ಕರಗಿತೆಂದು ಸಂತಸಗೊಂಡೆ. ಒಂದು ಮಧ್ಯಾಹ್ನ ಕೆರೆಗೆ ಹೋದವಳು ಕೊಡದಲ್ಲಿ ನೀರು ತುಂಬಿ ಸೊಂಟದ ಮೇಲಿಟ್ಟುಕೊಂಡಿದ್ದೆ. ಆದರೆ ಒಗೆದ ಬಟ್ಟೆಗಳನ್ನು ತುಂಬಿದ ಕುಕ್ಕೆಯನ್ನು ಎತ್ತಲು ಸಾಧ್ಯವಾಗಲಿಲ್ಲ. ಸುತ್ತಲೂ ನೋಡಿದಾಗ ತನ್ನ ದನಗಳಿಗೆ ನೀರು ಕುಡಿಸಲೆಂದು ಬಂದಿದ್ದ ಶಿವದಾಸ ‘ಕುಕ್ಕೆ ಎತ್ತಿ ಕೊಡಲಾ’ ಎಂದಾಗ ಬೇರೆ ದಾರಿಯಿಲ್ಲದೆ ಒಪ್ಪಿದೆ. ಅವನು ಹತ್ತಿರ ಬಂದು ಕುಕ್ಕೆಯನ್ನು ಎತ್ತಿ ಕಂಕುಳಿಗೆ ಕೊಡುತ್ತಿದ್ದಂತೆ ಯಾರೋ ನಮ್ಮನ್ನು ನೋಡಿದರು. ಆ ರಾತ್ರಿ ನರಕದ ರಾತ್ರಿ. ಚಿಕ್ಕಪ್ಪ ನನಗೂ ಶಿವದಾಸನಿಗೂ ಸಂಬಂಧ ಕಲ್ಪಿಸಿ ಅನ್ನಬಾರದ ಮಾತುಗಳನ್ನು ಹೇಳುತ್ತಾ ಮುಖಮೂತಿ ನೋಡದೆ ಚಚ್ಚಿಬಿಟ್ಟ. ತಡೆಯಲಾರದೆ ಅತ್ತರೆ ಮತ್ತಷ್ಟು ಜೋರಾಗುತ್ತಿತ್ತು ಏಟು. ‘ಇನ್ನು ಮುಂದೆ ಅವರ ಮನೆಯೆದುರು ಸುಳಿದರೆ, ಮಾತನಾಡಿದರೆ ಸಿಗಿದು ತೋರಣ ಕಟ್ತೇನೆ’ ಅಂದ. ಸುದ್ದಿ ತಿಳಿದೋ ಏನೋ ಒಂದು ವಾರದ ನಂತರ ಶಿವದಾಸನ ತಂದೆ ಕುಲದ ಹಿರಿಯರನ್ನು ಕರೆದುಕೊಂಡು ಬಂದು ನನ್ನನ್ನು ತಮ್ಮ ಮಗನಿಗೆ ಕೊಡಬೇಕೆಂದು ಕೇಳಿಕೊಂಡರು. ಚಿಕ್ಕಪ್ಪ ಅವರನ್ನು ಬಾಯಿಗೆ ಬಂದಂತೆ ಬೈದು ‘ಇಲ್ಲಿಂದ ಏಳಿ ಮೊದಲು. ಗಂಜಲನೀರು ಹಾಕ್ಬೇಕು’ ಅಂದ. ಅಲ್ಲಿಗೆ ಎಲ್ಲವೂ ಮುಗಿಯಿತು”
“ಛೇ”
“ಪದವಿ ಪರೀಕ್ಷೆ ಇನ್ನೂ ಮುಗಿದಿರಲಿಲ್ಲ. ಬಂತು ಮನೆಯ ಮುಂದೆ ಸವಾರಿ. ತೋರಣಕಟ್ಟೆಯ ನಂಜುಂಡನಿಗೆ ಹೆಣ್ಣು ಬೇಕಂತೆ. ನನ್ನನ್ನು ಯಾರು ಕೇಳುತ್ತಾರೆ? ಹೆಣ್ಣು ನೋಡುವ ಶಾಸ್ತ್ರವೇನೋ ಇತ್ತು. ಬಿರುಸಿನ ಮುಖ. ಖಡ್ಗದಂಥ ನೋಟ. ಬಿಗಿದ ತುಟಿ. ದಪ್ಪಗಿನ ಕೊರಳನ್ನು ಸುತ್ತಿಕೊಂಡ ಕಪ್ಪು ದಾರದ ಮಾಲೆ. ಎಡಗೈ ತುಂಬಾ ಮಿಂಚುವ ಉಂಗುರಗಳು. ಯಾರನ್ನು ನೋಡಿದರೆ ಕಣ್ಣುಗಳಲ್ಲಿ ಬೆಳಕು ಹೊತ್ತಿಕೊಳ್ಳಬೇಕಿತ್ತೋ, ಮುಖಕ್ಕೆ ನೆತ್ತರು ಅಪ್ಪಳಿಸಬೇಕಿತ್ತೋ, ಮೈ ಅರಳಿ ರೋಮ ನಿಮಿರಬೇಕಿತ್ತೋ ಏನೂ ಅನಿಸದೆ ತಣ್ಣಗೆ ನಡುಗಿದೆ. ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೇನೆ. ಬಿರುಗಾಳಿಗೆ ಸಿಕ್ಕಿ ಬಾಳು ನುಚ್ಚು ನೂರಾಗುತ್ತಿದೆ ಎಂದುಕೊಂಡು ಎಂದೋ ಸತ್ತ ಹೆತ್ತವರನ್ನು ನೆನೆದು ‘ಅಪ್ಪಾ ಅಮ್ಮಾ’ ಎಂದು ಕೂಗೋಣವೆಂದರೆ ಕೊರಳನ್ನು ಯಾರೋ ಒತ್ತಿ ಹಿಡಿದಂತಾಗಿತ್ತು. ಚಿಕ್ಕಮ್ಮನ ಹತ್ತಿರ ಹೇಳಲು ಹೋದಾಗ ಆಕೆ ಪಕ್ಕದ ಮನೆಯವರಲ್ಲಿ ‘ಮನೆ ಅಂದರೆ ಎಂಥ ಮನೆ ನಂಜುಂಡನದ್ದು! ಅರಮನೆಯೇ ಸರಿ. ಇಡೀ ಮರವನ್ನೇ ತಂದು ನಿಲ್ಲಿಸಿದಂತಿದ್ದ ಬಾಗಿಲು. ತಬ್ಬಿ ಹಿಡಿದರೂ ಎರಡು ಕೈ ಮುಟ್ಟಲಾರದು. ದಪ್ಪ ಬಾಗಿಲು ಮುಚ್ಚಿ ಕದ ಹಾಕಿದರೆ ನುಸಿಯೂ ಅಲ್ಲಾಡುವಂತಿಲ್ಲ. ಅಂಥವನ ಹೆಂಡತಿಯಾಗಬೇಕಾದರೆ ಪುಣ್ಯ ಮಾಡಬೇಕು. ಅವ ಮಾಡದ ಕೆಲಸಗಳಿಲ್ಲ. ಅವನೆಂದರೆ ಸಾಕ್ಷಾತ್ ದೇವರಿದ್ದಂತೆ’ ಎಂದು ಹೇಳುತ್ತಿರುವುದು ಕೇಳಿಸಿತು. ಯಾರಾದರೇನು? ಒಮ್ಮೆ ಪಾರಾದರೆ ಸಾಕೆನಿಸಿತ್ತು. ಮೂಕಪಶುವಿನಂತೆ ತಲೆತಗ್ಗಿಸಿ ನಡೆದೆ ನಂಜುಂಡನ ಕೈಯಲ್ಲಿ ಕೈಯಿಟ್ಟು…” ಎನ್ನುತ್ತಿದ್ದಂತೆ ಆಕೆಯ ಕಣ್ಣಿನಲ್ಲಿ ಕೂಡಿದ್ದ ನೀರು ಕೆನ್ನೆಯ ಮೇಲೆ ಹರಿದು ತನ್ನ ಅಂಗೈಯನ್ನು ಹಿಡಿದಿದ್ದ ಗೋಪಾಲನ ಮುಂಗೈ ಮೇಲೆ ಬಿತ್ತು.
“ಗೋಪಾಲ, ನಾನಿನ್ನು ಹೋಗಬಹುದಲ್ಲ”
“ಯಾಕೆ? ನಿದ್ದೆ ಬರುತ್ತದೆಯಾ?”
“ಇಲ್ಲ. ನಿನ್ನ ನಿದ್ದೆಗೆ ಅಡ್ಡಿ ಮಾಡೋದು ಬೇಡ ಅಂತ…”
“ಇನ್ನೆಲ್ಲಿಯ ನಿದ್ದೆ? ಬೆಳಗಾಗುವುದಕ್ಕಾಯ್ತಲ್ಲ”
“ಹಾಗಿದ್ರೆ ಸರಿ. ಮತ್ತೆ ಕಾಣುವ” ಎನ್ನುತ್ತಾ ಆಕೆ ಕುಳಿತಲ್ಲಿಂದ ಎದ್ದಾಗ ಗೋಪಾಲ ಹೇಳಿದ.
“ನಿನ್ನ ಮನೆಯವರೆಗೆ ನಾನೂ…”
“ಯಾಕೆ? ನಂಗೇನೂ ಹೆದರಿಕೆಯಿಲ್ಲ”
“ಅಲ್ಲೆಲ್ಲಾದರೂ ನಂಜುಂಡನಿದ್ದರೆ?”
“ಇಲ್ಲ. ಯಾರದ್ದೋ ಸೆರಗು ಹಿಡ್ಕೊಂಡು ಬಿದ್ದಿರ್ತಾನೆ. ಇವತ್ತಿನ ಮಟ್ಟಿಗೆ ಇತ್ತ ಕಡೆ ತಲೆ ಹಾಕಲಾರ” ಎನ್ನುತ್ತಾ ಅವನನ್ನು ಒಂದು ಸಲ ದಿಟ್ಟಿಸಿ ಹೊರಗಿಳಿದು ಮೆಟ್ಟಿಲುಗಳನ್ನು ದಾಟಿದ ಬಳಿಕ ಮತ್ತೆ ತಿರುಗಿ ನೋಡಿದಳು.
ಗೋಪಾಲ, ನೀನು ನನಗೇನಾಗಬೇಕು?
ಸುಂದರವಾದ, ಸುಖಕರವಾದ ಪ್ರಶ್ನೆಯನ್ನು ಅವಳ ಮನಸ್ಸು ಪುನರುಚ್ಛರಿಸಿತು. ನಿನ್ನನ್ನು ನೆನೆಯುವಾಗ ನಾನು ಅಸಹಾಯಕಳಲ್ಲ ಎಂಬ ಭಾವನೆ ಮೂಡಲು ಕಾರಣವೇನು? ನಿನ್ನನ್ನು ನೋಡುವಾಗ ಮನದ ಮೂಲೆಯಲ್ಲಿ ನಾಚಿಕೆ ಮೂಡುವುದೇಕೆ? ನಿನ್ನನ್ನು ಒಮ್ಮೆ ನೋಡಲು ಸಾಧ್ಯವಾಗುತ್ತಿದ್ದರೆ, ನನ್ನ ನೋವುಗಳನ್ನು ಹೇಳಲು ಸಾಧ್ಯವಾಗುತ್ತಿದ್ದರೆ ಎಂದು ಮನಸ್ಸು ತೊಳಲಾಡುವುದೇಕೆ? ನೀನು ನನ್ನನ್ನು ಆಗಾಗ ವಿಚಾರಿಸಿಕೊಂಡು ಹೋಗುತ್ತಿದ್ದುದರಿಂದಲೇ? ಮೃದುವಾಗಿ ಮೈಸವರುವಂಥ ಮಾತುಗಳನ್ನಾಡುತ್ತಿರುವುದರಿಂದಲೇ? ಬಿಲ್ಲಿನಂತೆ ಬಾಗಿದ ಹುಬ್ಬಿನಡಿಯಲ್ಲಿ ಮಿನುಗುವ ನಿನ್ನ ಕಣ್ಣುಗಳಿಂದ ಪ್ರೀತಿ, ನಂಬಿಕೆ, ಸಾಂತ್ವನ, ಸಹಾನುಭೂತಿಯ ಕಿರಣಗಳು ಹಾದು ಬರುತ್ತಿರುವುದರಿಂದಲೇ? ನನ್ನ ಗಾಯಗಳಿಗೆಲ್ಲ ತುಟಿಯೊತ್ತಿ ವಾಸಿ ಮಾಡಲಿಚ್ಛಿಸುವಂಥ ನೋಟ ಸದಾ ಊದಿಕೊಂಡಿರುತ್ತಿದ್ದ ನನ್ನ ಕೆನ್ನೆ, ಒಡೆದ ಹಣೆ, ಬಾತುಕೊಂಡ ಕಣ್ಣು, ನೆತ್ತರು ಒಸರುವ ಮೂಗು, ಹರಿದ ತುಟಿ, ಜಜ್ಜಿದ ಗಲ್ಲ- ಕೊರಳ ಬದಿ, ಕಿಬ್ಬೊಟ್ಟೆ, ಹೊಕ್ಕುಳ ಮತ್ತು ಬೆನ್ನ ಮೇಲಿನ ಗೀರುಗಳನ್ನು ಮುಲಾಮಿನಂತೆ ಸವರುತ್ತಿರುವುದರಿಂದಲೇ? ಆದರೆ ನಾನೆಲ್ಲಾದರೂ ನಂಜುಂಡನ ವಿಚಾರವೆತ್ತಿದಾಗ ನಿನ್ನ ಮುಖದಲ್ಲಿ ಮೋಡ ಕವಿದಂತಾಗಿ, ಬಿಗಿದು ಪುಟಿಯುವಂತಿದ್ದ ಮೈ ಶಿಲೆಯಂತೆ ಜಡವಾಗಿ, ನಗುವ ಕಣ್ಣುಗಳು ಪಾತಾಳದಲ್ಲಿ ಅಡಗಿದ ಹಾವನ್ನು ಹುಡುಕುವಂತೆ ತೀಕ್ಷ್ಣವಾಗಿ, ಹೊತ್ತಿ ಉರಿಯುವ ಉಗ್ರಜ್ವಾಲೆ ಕ್ಷಣಮಾತ್ರದಲ್ಲೇ ಹಿಮಗಡ್ಡೆಯಾಗುವುದೇಕೆ? ಎಷ್ಟೋ ಬಾರಿ ನನ್ನನ್ನುಬೆಚ್ಚಿ ಬೀಳಿಸುವಂಥ, ಮೈಯಲ್ಲಿ ಅಸ್ಪಷ್ಟ ಭೀತಿಯ ಮಂಜು ಕವಿಯುವಂತೆ ಮಾಡುವ ನಿನ್ನ ಮುಖದ ಬಿರುಸಿನ ಹಿಂದೆ ಅಡಗಿದ ರಹಸ್ಯವೇನು?


“ಕಾವೇರಿ, ನಂಜುಂಡನ ಬಗ್ಗೆ ಮಾತಾಡಲು ನಂಗೆ ಸ್ವಲ್ಪವೂ ಇಷ್ಟವಿಲ್ಲ. ಆದರೆ ನೀನು ಅಷ್ಟೂ ಒತ್ತಾಯ ಮಾಡಿದ್ದರಿಂದ ಹೇಳ್ತೇನೆ” ಗೋಪಾಲನ ಮುಂದಿನ ಮಾತಿಗೆ ಅದು ಪೀಠಿಕೆಯಾಯಿತು “ನಂಜುಂಡನದ್ದು ಈ ಮನೆಯೇ ಅಲ್ಲ. ಅವನ ತಾಯಿ ಘಟ್ಟದವಳು. ಭೂಕುಸಿತವಾದಾಗ ಮನೆಮಠ ಕಳಕೊಂಡು ಗಂಡನ ಜೊತೆ ಬಂದವಳಿಗೆ ಈ ಮನೆಯ ಯಜಮಾನರು ‘ನೀವಿಲ್ಲೇ ಇರಿ ಅದು ಇದು ಮಾಡ್ತಾ’ ಎಂದು ಇಲ್ಲೇ ಪಕ್ಕದಲ್ಲಿ ಬಿಡಾರ ಹಾಕಿಕೊಟ್ರು. ತೋಟ-ಹಿತ್ತಿಲು ನೋಡಿಕೊಳ್ಳೋದು, ತೆಂಗು, ಅಡಿಕೆ, ಕರಿಮೆಣಸು, ಬಾಳೆಗೊನೆಗಳನ್ನು ಕೊಯ್ದು ಮಾರೋದು, ಸೊಪ್ಪುಸೆದೆ ಮಾಡೋದು, ದನ ಮೇಯಿಸೋದು ಗಂಡನ ಕೆಲಸವಾದರೆ ಯಜಮಾನರ ಮನೆಯ ಕಸ ಗುಡಿಸೋದು, ತೊಳೆಯೋದು, ರಂಗೋಲಿ ಹಾಕೋದು ಇವಳ ಕೆಲಸ. ಯಜಮಾನ್ರದ್ದು ಒಳ್ಳೆ ಆರೋಗ್ಯ-ವಯಸ್ಸು. ಹೆಂಡತಿ ಚಿಕ್ಕಪ್ರಾಯದಲ್ಲೇ ತೀರಿಕೊಂಡಿದ್ದಳು. ಆಮೇಲೆ ಇವಳೊಂದಿಗೆ ಸಂಬಂಧ ಬೆಳೆಯಿತು. ನಂಜುಂಡ ಹುಟ್ಟಿದ. ಯಜಮಾನ್ರು ಬದುಕಿರುವವರೆಗೆ ಅವನ ದಮ್ಮಿರಲಿಲ್ಲ. ಅವರು ಹಾಗೆ ಸತ್ತದ್ದಲ್ಲವೆಂದೂ ಅಮ್ಮ-ಮಗ ಇಬ್ಬರೂ ಸೇರಿ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡ್ಕೊಂಡು ಕೊಂದು ಹಾಕಿದರೆಂದೂ ಸುದ್ದಿಯಿತ್ತು. ಆಮೇಲೇನು? ಅಲ್ಪನಿಗೆ ಐಶ್ವರ್ಯ ಬಂದ್ರೆ ಅರ್ಧರಾತ್ರೀಲಿ ಕೊಡೆ ಹಿಡಿದ ಎಂಬ ಹಾಗೆ ಸುರುವಾಯಿತಲ್ಲ ನಂಜುಂಡನ ಕಾರುಬಾರು. ದಾಯಾದಿಗಳೊಂದಿಗೆ ಜಗಳ. ಹೊಡೆದಾಟ. ಹಿರಿಯರು ಕಿರಿಯರೆಂಬ ಭೇದವೆನ್ನದೆ ಎಲ್ಲರ ಮೇಲೂ ಎಗರಾಟ. ಕೊನೆಗೆ ಅವ ಎಲ್ಲರನ್ನು ಹದ್ದುಬಸ್ತಿನಲ್ಲಿಟ್ಟುಕೊಂಡ. ಅವರ ಸ್ವಯಾರ್ಜಿತ ಸೊತ್ತುಗಳನ್ನೂ ತನ್ನ ಅಪ್ಪನದ್ದೆಂದು ಕಬಳಿಸಿದ. ಆಮೇಲೆ ಕೋರ್ಟು, ಕೇಸು, ಧಮಕಿ, ಬೈಗುಳ, ಹೊಡೆದಾಟ, ಸಾವು…”
ಎನ್ನುತ್ತಿದ್ದಂತೆ ಗೋಪಾಲನಿಗೆ ಏದುಸಿರು ಒತ್ತಿ ಬರತೊಡಗಿತು. ಚೂರಿಯಿಂದ ಗೀರಿದಂತೆ ಹಣೆ ನೆರಿಗೆ ಕಟ್ಟತೊಡಗಿತು. ಹುರಿಹಗ್ಗದಂತೆ ನರ ಬಿಗಿದುಕೊಳ್ಳತೊಡಗಿತು. ಮುಖದಲ್ಲಿ ಹರಿದ ಉಗ್ರಕ್ಷೋಭೆ ಎಷ್ಟು ಯತ್ನಿಸಿದರೂ ಹಿಂಗದೆ ಮುಖದಲ್ಲಿಡೀ ಮಡುಗಟ್ಟಿತು.
“ಹಾಗೆ ಸತ್ತವರಲ್ಲಿ ನನ್ನಪ್ಪನೂ ಒಬ್ಬ”
ಗೋಪಾಲನ ದನಿ ಉಕ್ಕಿ ಕಂಪಿಸುತ್ತಿತ್ತು. ಮುಖಭಾವ ಶಾಂತವಾಗಿದ್ದರೂ ಬಿಗಿದ ತುಟಿಗಳ ಹಿಂದೆ ಸಪ್ತಸಾಗರ ಭೋರ್ಗರೆಯುತ್ತಿತ್ತು. ಅರಳಿದ ಕಣ್ಣುಗಳ ಹಿಂದೆ ಜ್ವಾಲಾಮುಖಿ ಕೆಂಡಕಾರುತ್ತಿತ್ತು. ಯಾರನ್ನೋ ಹಿಸುಕುವಂತೆ ಕೈಗಳು ಗಾಳಿಯಲ್ಲಿ ಮುಷ್ಠಿಗಟ್ಟುತ್ತಿದ್ದವು. ನಡುಮನೆಯಲ್ಲಿ ನೆರಳು ಕುಣಿಯುತ್ತಿತ್ತು. ಕಾವೇರಿಯ ಮುಖದಲ್ಲಿ ಪ್ರೇತಕಳೆ ತಾಂಡವವಾಡುತ್ತಿತ್ತು. ಕಗ್ಗಾಡಿನಲ್ಲಿ ತಾನು ಉಸಿರುಕಟ್ಟಿ ಓಡುತ್ತಿರುವಂತೆ, ಇನ್ನೇನು ಸತ್ತೇ ಹೋಗುವೆನೋ ಎಂಬಂತೆ ಬಸವಳಿದು ನಿಂತಾಗ ಇಡೀ ಜಗತ್ತೇ ತನ್ನ ಸುತ್ತ ತಿರುಗುತ್ತಿರುವಂತೆ ಭಾಸವಾಗಿ ಗೋಡೆಗೊರಗಿ ನಿಂತರೂ ಬಿಗಿಹಿಡಿದ ಉಸಿರನ್ನು ಬಿಡಲಾಗಲಿಲ್ಲ.
“ಈ ಮನೆ ನಾಶವಾಗಿ ಅಲ್ಲಿಡೀ ಬಿದಿರು ಬೆಳೆಯಲಿ. ನಂಜುಂಡ ಕುಡಿದದ್ದೆಲ್ಲ ಹಾಲಾಹಲವಾಗಲಿ”
ದಾಯಾದಿಗಳ ಶಾಪದ ಪ್ರತಿಧ್ವನಿಗಳು ಗೋಡೆ ಗೋಡೆಗಳಿಂದಲೂ ಮಾರ್ದನಿಸಿದಂತಾಗಿ ಆಕೆ ನಿಂತಲ್ಲೇ ಕುಸಿದಳು. ಶಾಪ ತನಗೋ ಈ ಮನೆಗೋ? ವಿಚಿತ್ರ ರೀತಿಯ ಭಾವೋದ್ವೇಗವು ಆಕೆಯ ಕತ್ತು ಹಿಸುಕತೊಡಗಿತು. ದಾರಿ ತಪ್ಪಿ ಬಂದು ಎಲ್ಲೋ ಸಿಕ್ಕಿಹಾಕಿಕೊಂಡಿದ್ದೇನೆ. ಹೇಗಾದರೂ ಮಾಡಿ ಇಲ್ಲಿಂದ ಓಡಿ ಹೋಗಬೇಕು. ಆದರೆ ಎಲ್ಲಿಗೆ? ಹೇಗೆ?
ಯಾವುದೋ ಒಂದು ಕೆಟ್ಟ ಉಸಿರು ಮೈಗೆ ತಾಗಿ ಅವಳನ್ನು ನಿಶ್ಚಲಗೊಳಿಸಿದಂತೆ, ಕ್ರಮೇಣ ಇಡೀ ಶರೀರವನ್ನೇ ಬಿಗಿದಂತೆ…
ನಾನು ಎಲ್ಲ ಶಕ್ತಿಯನ್ನು ಕಳೆದುಕೊಂಡಿದ್ದೇನೆ.
ಶೂನ್ಯ ಆವರಿಸಿತು ಮೈಯೊಳಗೆ.


“ಕಾವೇರೀ, ಅನಾಹುತವಾಯ್ತು. ನಂಜುಂಡ ನಡುರಸ್ತೆಯಲ್ಲಿ ಬಿದ್ದು…”
ಗೋಪಾಲನ ಮಾತು ಕೇಳಿದಾಗ ಕಾವೇರಿಗೆ ಏನೂ ಆಗಲಿಲ್ಲ. ಉಸಿರನ್ನು ಒಳಗೆಳೆದುಕೊಳ್ಳಲೂ ಆಗಲಿಲ್ಲ. ಕಟ್ಟಿಕೊಂಡ ಉಸಿರನ್ನು ಹೊರಬಿಡಲೂ ಆಗಲಿಲ್ಲ.
ಹೆಣವನ್ನು ಯಾರೋ ಹೊತ್ತುಕೊಂಡು ಬಂದರು. ಹತ್ತಿರ ಹೋಗುತ್ತಿದ್ದಂತೆ ಎಲ್ಲಿ ಬಿದ್ದು ಬಿಡುವೆನೋ ಎಂದೆನಿಸಿದರೂ ಆಕೆ ಹೇಗೋ ಸಂಭಾಳಿಸಿಕೊಂಡಳು.
ನಂಜುಂಡನ ತಲೆ ಒಡೆದಿತ್ತು. ಮುಖ ಹಿಂಡಿಹೋಗಿತ್ತು. ದೇಹದಲ್ಲಿಡೀ ನೆತ್ತರು ಹರಿದಿತ್ತು.
“ಎಷ್ಟು ಒಳ್ಳೆಯ ಮನುಷ್ಯ. ಧಾರಾಳಿ. ನಮ್ಮ ಊರಲ್ಲೇ ಇಂಥ ಮನುಷ್ಯ ಇಲ್ಲ.”
“ಹೀಗೇ ಕುಸಿದು ಬಿದ್ದನಾ ಅಥವಾ…”
“ಯಾರ್ಯಾರ ಹೆಂಡಿರ ಮೇಲೆ ಕೈ ಹಾಕಿದ್ರೆ…”
“ಬಿದ್ದಲ್ಲೇ ನೆತ್ತರು ಉಗುಳುತ್ತಿದ್ದನಂತೆ.”
“ಹೆಂಡದಲ್ಲಿ ವಿಷ ಇದ್ದಿರಬಹುದು.”
“ನೆಲಕ್ಕೆ ಬಿದ್ದು ಹೊರಳಾಡುತ್ತಿದ್ದ. ಕಣ್ಣು ಮತ್ತು ಹಲ್ಲುಗಳು ಸಿಡಿದು ಬಿದ್ದಿದ್ದವು.”
“ಮಾಟ ಇಟ್ಟಿರಬಹುದು.”
ಏನೋ ಗುಸುಗುಸು. ಸುಮ್ಮನೇ ಮಾತನಾಡುತ್ತಿದ್ದಾರೋ ಅಥವಾ ನನ್ನ ಕಿವಿಗೆ ಬೀಳಲಿ ಎಂದೋ? ಕಾವೇರಿ ಗಕ್ಕನೆ ತಲೆಯೆತ್ತಿ ನೋಡಿದಳು. ಏನೂ ಆಗಿಲ್ಲವೆಂಬಂತೆ ಗೋಪಾಲನು ಚಟ್ಟವನ್ನು ಕಟ್ಟುತ್ತಿದ್ದ.

*******

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter