ಪಲ್ಲಟ

                                                ಚಿತ್ರ: ಮಂಗಳಾ ಶೆಟ್ಟಿ     

ಬೆಳಗಿನ ಆರೂವರೆಯ ಸಮಯ. ಮಗದದ ಹದಗೆಟ್ಟ ಮಣ್ಣಿನ ರಸ್ತೆಯ ಎರಡೂ ಕಡೆ ಒತ್ತಟ್ಟೊತ್ತಾಗಿ ಇರುವ ಮನೆಗಳ ಬಾಗಿಲುಗಳು ಒಂದೊಂದಾಗಿ ತೆರೆಯಲಾರಂಭಿಸಿತ್ತು. ಎಲ್ಲರ ಮನೆಯ ಉರಿಯೊಲೆಗಳ, ಅಡಿಗೆಮನೆಯೊಲೆಗಳ ಕಪ್ಪನೆಯ ಹೊಗೆ ಓಣಿಯ ತುಂಬೆಲ್ಲ ಹರಡಿತ್ತು. ಕುಂಬಾರ ಭರಮ್ಯಾನ ಮನಿ ಆ ಸಾಲಿನಲ್ಲೊಂದು. ಅವನ ಹೆಂಡತಿ ನಿಂಗಿ ಬಾಗಿಲಿಗೆ ಥಳಿ ಹೊಡೆದು ರಂಗೋಲಿ ಇಕ್ಕಿ ಮಕ್ಕಳು ಏಳುವುದರೊಳಗೆ ಅಡುಗೆ ಮುಗಿಸಿಬಿಡಬೇಕೆಂದು ಲಗುಬಗೆಯಲ್ಲಿ ಬಡಬಡನೇ ರೊಟ್ಟಿ ಬಡಿಯಲಾರಂಭಿಸಿದಳು. ‘ಒಂದೀಟು ದೌಡ್ ಎದ್ದು ಮಣ್ಣ ಹದಾ ಮಾಡ್ತೀರೇನು?’ ಎಂದು ಗಟ್ಟಿಯಾಗಿ ಕೇಳಿದಳು. ‘ಇನ್ನೂ ಮಕ್ಕೊಂಡ್ರ ಈಕಿ ಬಾಯ್ ಮಾಡಿಕೊಂತ ಇರತಾಳೂ’ ಎಂದು ಗೊಣಗುತ್ತ ಎನ್ನುತ್ತ ಎದ್ದ ಭರಮ ಹೊದ್ದ ಕೌದಿಯನ್ನು ಮುದ್ದೆ ಮಾಡಿ ಮೂಲೆಗೆಸೆದು ಬಚ್ಚಲಿಗೆ ಹೊರಟ. ಮಾರಿ ತೊಳೆದವನೇ ‘ಒಂದ ಕಪ್ ಚಾ ಕೊಡತೀಯೋ ಬರೀ ಕೆಲ್ಸ ಮಾಡಂತಿಯೋ’ ಎಂದು ಗುರುಗುಟ್ಟಿ ಅಲ್ಲೇ ಕುಕ್ಕರುಗಾಲಿನಲ್ಲಿ ಕುಳಿತ.
ಹೆಂಡತಿ ಕೊಟ್ಟ ಚಹಾ ಕುಡಿದವನೇ ಮನೆಯ ಮುಂದಿನ ನೆನೆದ ಮಣ್ಣಿನ ರಾಶಿಗೆ ಇಳಿದು, ತುಳಿದು ಹದ ಮಾಡಲಾರಂಭಿಸಿದ. ಅಷ್ಟರಲ್ಲಿ ದನಕ್ಕೆ ಹುಲ್ಲು ಕೊಯ್ಯಲು ಕುಡುಗೋಲು ಹಿಡಿದು ಹೊಲದತ್ತ ಹೊರಟ ಶರಣಪ್ಪ ಭರಮ್ಯಾನ ನೋಡಿ ನಿಂತ. ‘ನಮ್ಮ ಹಾಂಗ ಹಟ್ಟಿ, ಹೊಲಾ ಸಂಭಾಳಿಸೋ ಕಷ್ಟ ಇಲ್ಲಪಾ ನಿನಗ. ಮನ್ಯಾಗ ದುಡಿದ್ರಾತು’ ಅಂದ!.
ಭರಮ್ಯಾ ಶರಣಪ್ಪನನ್ನು ನೋಡಿ ಒಂದು ಪೆಚ್ಚು ನಗೆ ಬೀರಿದ. ಅಷ್ಟಕ್ಕೂ ಬಿಡದೆ ಶರಣಪ್ಪ ‘ಭರಮ್ಯಾ ನಿನಗ ಒಂದ್ರಾಶಿ ಮಣ್ಣ ಸಿಕ್ಕರೆ ಸಾಕೇಳಪ್ಪಾ. ಹಂಡೆ, ಮಡಕೆ, ಕುಡಿಕೆ, ಪಣತಿ ಎಲ್ಲಾ ಮಾಡಿ ಮಾರತೀದಿ, ಮನ್ಯಾಗ ಕುಂತು ಝಣಾ ಝಣಾ ರೊಕ್ಕಾ ಎಣಸತೀದಿ’ ಎಂದ. ಭರಮ್ಯಾಗ ಏನು ಹೇಳಲೂ ತಿಳಿಯದೇ ಸುಮ್ಮನೇ ತಲೆಯನ್ನೊಮ್ಮೆ ಪರಪರ ಕೆರೆದುಕೊಂಡು ಪೆಚ್ಚು ನಗೆ ಬೀರಿದ. ಅಷ್ಟರಲ್ಲಿ ರೊಟ್ಟಿ ಮಾಡಿ ಮುಗಿಸಿದ ನಿಂಗಿ ಗಂಡನ ಜೋಡಿ ಯಾರು ಮಾತಾಡಕ ಹತ್ಯಾರು ನೋಡಾಕ ಮನೀ ಮುಂಬಾಗಿಲಿಗೆ ಬಂದಳು. ಆಕಿಗೂ ಶರಣಪ್ಪ ಅಂದಿದ್ದ ಮಾತು ಕೇಳಿತ್ತು. ‘ಹೌದ ನಮ್ಮ ಕೈಯಾಗ ಭಾಳ ರೊಕ್ಕ ಆಡತಾವು. ಶರಣಪ್ಪಣ್ಣಾ, ನಮ್ಮ ತಿಗರಿ, ಭಟ್ಟಿ ಮತ್ತ ನಿಮ್ಮ ಹೊಲಾ ಬದಲಿ ಮಾಡಿಕೊಳ್ಳೋಣೇನು ಹಾಂಗಾದ್ರ? ಎಂದಳು ವ್ಯಂಗ್ಯವಾಗಿ.
ಪೆಚ್ಚಾದ ಶರಣಪ್ಪ ‘ಏ ಹಾಂಗ ಒಂದ ನೆಗಿಚಾಟಿಕೆ ಮಾಡಿದೆ ಬಿಡವ್ವಾ’ ಎಂದು ಅಲ್ಲಿಂದ ಜಾಗ ಖಾಲಿ ಮಾಡಿದ. ‘ನಮ್ಮ ಹೊಟ್ಟಿ ಸಂಕ್ಟ ನಮಗ ಗೊತ್ತು. ಭಟ್ಯಾಗ ಒಂದರ್ಧ ತಾಸು ಇಂಥಾ ಮಂದೀನ ತುಂಬಿ ಉರಿ ಹಚ್ಚಬೇಕು’ ಎಂದಳು ಸಿಟ್ಟಿನಲಿ ಗೊಣಗಿ ಮನೆಯೊಳಗೆ ನಡೆದಳು ನಿಂಗಿ.
ಆರನೆಯ ತರಗತಿ ಓದುತ್ತಿದ್ದ ರವಿ, ಹತ್ತನೆಯ ತರಗತಿ ಓದುತ್ತಿದ್ದ ಚಿತ್ರಾ ಇನ್ನು ಮಲಗಿರುವುದನ್ನು ಕಂಡು ನಿಂಗಿಯ ಸಿಟ್ಟು ನೆತ್ತಿಗೇರಿತು. ‘ಬಣ್ಣದ ಸೂರ್ಯಾ ಬೆಳ್ಳಗಾಗ್ಯಾನ ಇನ್ನೂ ಮಕ್ಕೊಂಡೆ ಇದ್ದೀರಿ. ಏನ ಮಕ್ಳೋ ಏನೋ, ಏಳ್ರೀ ಮ್ಯಾಲಕ್ಕ, ಬಿಸಿನೀರು ಕಾಸಿಟ್ಟೇನಿ ಝಳಕಾ ಮಾಡಿಕೊಂಡಕ್ಯಾರ ಗಡಾನ ನಾಷ್ಟಾ ಮಾಡ ಬರ್ರಿ’ ಎಂದು ಗದರಿಕೆಯ ಉದಯ ರಾಗ ಹಾಡಿದಳು.
ಧಡಪಡಿಸಿ ಎದ್ದ ರವಿ ಮೊದಲು ತಾನೇ ಝಳಕ ಮಾಡುವುದಕ್ಕೆ ಕುಂಟುತ್ತಾ ಹೋದ. ಏನು ಕೆಲಸ ಮಾಡದೇ ನಾಷ್ಟಾ ಮಾಡಲು ಹೋದರೆ ಬೈಗಳು ಖಚಿತ ಎನ್ನುವದು ಚಿತ್ರಾಗೆ ಅರಿವಿತ್ತು. ಲಗುಬಗೆಯಿಂದ ಮನೆಯ ಹಿಂಭಾಗಕ್ಕೆ ಹೋಗಿ ಹಸಿ ಮಡಕೆಗಳನ್ನು ನೆರಳಿನಲ್ಲಿ ಒಣಗಿಸಲು ಸಾಲಾಗಿ ಜೋಡಿಸಿಲಾರಂಭಿಸಿದಳು.
ಮಕ್ಕಳಿಬ್ಬರೂ ನಾಷ್ಟಾ ಮುಗಿಸಿ ಶಾಲೆಗೆ ಹೋದರು. ಪೋಲಿಯೋದಿಂದ ಸೆಣೆತು ಹೋದ ಕಾಲುಗಳನ್ನು ಎಳೆಯುತ್ತಾ ತೆವಳಿದಂತೆ ನಡೆಯುವ ಮಗನನ್ನು ನೋಡಿ ನಿತ್ಯದಂತೆಯೇ ನೋಯುತ್ತ ನಿಂಗಿ ಅಡುಗೆಮನೆ ಸ್ವಚ್ಛಗೊಳಿಸಿ ಮನೆಯ ಹಿಂದಿನ ಭಾಗಕ್ಕೆ ಹೋದಳು. ಅಲ್ಲಿರುವ ಇಳಿಮಾಡಿನ ಜಾಗದಲ್ಲಿ ಅವರು ಸಿದ್ಧಪಡಿಸಿದ ನೂರಾರು ಮಡಕೆಗಳು, ಮಣ್ಣಿನ ಒಲೆಗಳು, ಒಂದೆಡೆ ತಿಗರಿ, ಇನ್ನೊಂದೆಡೆ ಭಟ್ಟಿ ಇದ್ದವು. ಹಿಂದಿನ ದಿನ ಮಾಡಿಟ್ಟ ಮಡಕೆಗಳು ಹಸಿ ಇವೆಯೇ ಎಂದು ಪರೀಕ್ಷಿಸಿದಳು, ಒಂದು ಮರದ ತುಂಡನ್ನು ಎಳೆದು ಅದರ ಮೇಲೆ ಕುಳಿತಳು. ಕಟ್ಟಿಗೆಯ ಪಟ್ಟಿಯೊಂದನ್ನು ತೆಗೆದುಕೊಂಡು ಮಡಕೆಗೆ ಪೆಟ್ಟು ಹಾಕುತ್ತ ಅದರ ಆಕಾರ ತಿದ್ದಲಾರಂಭಿಸಿದಳು. ನಿಂಗಿ ನೀವು ಇನ್ನೂ ಕುಂಭಾರಿಕೆನೇ ಮಾಡಾಕ ಹತ್ತೀರೇನು? ಮಾರಲು ಹೋದಲ್ಲೆಲ್ಲ ಕೇಳುವ ಪ್ರಶ್ನೆ ಕಿವಿಯೊಳಗೆ ಕುಂತೇ ಬಿಟ್ಟತೋ ಏನೋ ಒಮ್ಮೆ ತಲೆ ಕೊಡವಿಕೊಂಡಳು. ‘ನಿನ್ನ ಮದವಿ ಮಾಡಿ ಕೊಡೋ ಮುಗದ ಊರಂದ್ರೆ ಏನ ಅನಕೊಂಡಿ? ಊರಿನ್ಯಾಗÀ ಭರ್ಜರಿ ದೊಡ್ಡ ಕೆರೆ ಅದ ಏನವ್ವಾ. ಬೇಕಾದಷ್ಟು ಮಣ್ಣ ತಂದಕೊಳ್ಳಾಕ ಅನಕೂಲ ಐತಿ. ಊರಿನ್ಯಾಗ ಒಂದೈವತ್ತು ಕುಂಬಾರರ ಕುಟುಂಬ ¨ ಅದಾವು. ಎಲ್ಲಾರು ಸೇರಿಕೊಂಡ ಸೊಸ್ಯಟಿ ಮಾಡಿಕೊಂಡಾರ. ಅಂದ್ರ ಏನ ತಿಳಿದಿದಿ? ಭಾರಿ ಊರದು’ ಎಂದ ಅಪ್ಪನ ಮಾತು ಸುಳ್ಳಿರಲಿಲ್ಲ. ಮತ್ತ ಯಾಕ ಹಿಂಗ ನಮ್ಮ ಬಾಳುವೆ …ಜಿಗಿ ಇಲ್ಲದ ಮಣ್ಣಿನ ಹಾಂಗ ಆಗ್ಯದ? ನಿಂಗಿ ತನ್ನ ಬದುಕಿನ ಹಳೇ ನೆನಪುಗಳನ್ನೆಲ್ಲ ಹೆಕ್ಕಿ ತೆಗೆದಳು.
***
ಆರನೇತ್ತಾ ಸಾಲಿ ಕಲಿಯುವಾಗಲೆ ದೊಡ್ಡಾಕಿ ಆದಳು ಎಂದು ಶಾಲೆ ಬಿಡಿಸಿದ್ದರು ಅಪ್ಪ ಅವ್ವ. ‘ನಾ ಇನ್ನೂ ಕಲಿತೇನಪ್ಪಾ’ ಎಂಬ ಹಟ ಹೊಳೆಯಲ್ಲಿ ಮಳೆ ಹೊಯ್ದಂತಾಗಿತ್ತು.
‘ಕಲತ ಏನ ನೌಕ್ರಿ ಮಾಡೂದೈತೇನೂ? ಅ್ರದು ಆಗೂ ಹೋಗೂ ಮಾತಲ್ಲ. ನೌಕ್ರಿ ಅಂದ್ರ ರೊಕ್ಕಾ ವಶೀಲಿ ಎಲ್ಲಾ ಬೇಕಾಗತಾವ ಅದೆಲ್ಲ ನಮ್ಮ ಕೈಯಾಗ ಆಗೂ ಮಾತಲ್ಲ. ತೆಲಿಯಾಗಿಂದ ತೆಗಿ ಅದನ್ನ. ಹದಿನೆಂಟ ತುಂಬಿತಂದ್ರ ನಿನ್ನ ಅಕ್ಕಾಗೋಳನ್ನ ಮದಿ ಮಾಡಿ ಕೊಟ್ಟ ಹಾಂಗ ನಿಂದೂ ಮದವಿ ಮಾಡಂವಾ ನಾ. ಮತ್ತ ಕುಂಬಾರಕಿ ಮಾಡಾವ್ರನ್ನೇ ಅಳಿಯನನ್ನಾಗಿ ಹುಡಕತೇನಿ’ ಎಂದು ಖಡಾ ಖಂಡಿತವಾಗಿ ನುಡಿದ್ದಿದ್ದ ತನ್ನಪ್ಪ ಶೇಕಪ್ಪ.
ತಾಯಿ ಪಾರೋತಿ ‘ಅಲ್ಲಾ ಆಕಿ ವಯಸ್ಸಿನಾವ್ರೂ ಮೈನೆರೆದ ಮ್ಯಾಲೂ ಇನ್ನೂ ಸಾಲಿಗೆ ಹೋಗಾಕ ಹತ್ಯಾರ..ಈಕಿನೂ..’ ಮೆತ್ತಗ ಏನೋ ಹೇಳಲು ಯತ್ನಿಸಿದಳು.
‘ಇದ ನನ್ನ ಮನಿ ಐತಿ. ಇಲ್ಲಿ ನಾ ಹೇಳಿದ ಹಾಂಗ ನಡಿಬೇಕು ತಿಳಿತೇನಿಲ್ಲೋ.. ನೀ ಮಕ್ಕಳ ಪರಾ ವಕೀಲಿಕಿ ಮಾಡಾಕ ಬರಬ್ಯಾಡ’ ಎಂದು ಕಟುವಾಗಿ ನುಡಿದ ಶೇಕಪ್ಪ ಮಾಡುತ್ತಿದ್ದ ಅರ್ಧ ಉಂಡ ಊಟದ ತಾಟಿನಲ್ಲಿಯೇ ಕೈತೊಳೆದು ಕಾಲಿನ ಮೇಲಿದ್ದ ಟವೆಲ್ಲನ್ನು ಕೊಡವಿ ಹೆಗಲ ಮೇಲೆ ಹಾಕಿಕೊಂಡು ಊರ ಹೊರಗಿನ ಗುಡಿ ಕಟ್ಟೆಗೆ ಹೋಗಿ ಕುಳಿತವನು ರಾತ್ರಿ ತನಕ ಅಲ್ಲಿಯೇ ಕಲ್ಲು ಬಂಡೆಯಂತೆ ಕುಳಿತಿದ್ದ.
ಅವನ ಸಿಟ್ಟು ಹಠದ ಅರಿವಿದ್ದ ನಿಂಗಿ ಪಾರೋತಿ ಇಬ್ಬರೂ ಅವನಿದ್ದಲ್ಲಿಗೇ ಹೋಗಿ ‘ನೀವ ಹೇಳಿದ ಹಾಂಗ ಕೇಳತೀವಿ. ಇದಿರು ಮಾತ ಹೇಳಂಗಿಲ್ಲ” ಎಂದು ಗೋಗರೆದ ಮೇಲೆಯೇ ಶೇಕಪ್ಪನ ಸಿಟ್ಟು ಕರಗಿ ಮನೆಗೆ ಬಂದಿದ್ದ.
‘ಹೆಣ್ಣ ಮಕ್ಕಳಂದ್ರೆ ಮುಂಜಾನೇಲಿಂದ ರಾತ್ರಿ ಮಟಾ ದುಡಿದ್ರು ಉಸ್ಸೋ ಉಸ್ಸ ಅನಬಾರ್ದು. ಹಾಂಗ ದುಡಿಯಾದು ಕಲಿಬೇಕೇನವ್ವಾ. ನಾಳೇಲಿಂದ ಮುಂಜಾನೆ ಅವ್ವಾನ ಜೋಡಿ, ಆಮ್ಯಾಲ ನನ್ನ ಜೋಡಿ ಕೆಲಸಕ್ಕೆ ಹತ್ತಬೇಕು’ ಎಂದು ತನಗೆ ಕಟ್ಟಪ್ಪಣೆ ಮಾಡಿದ ಶೇಕಪ್ಪ.
ಮುಂಜಾನೆ ಊರ ಹೊರಗಿರೋ ಬಾವ್ಯಾಗಿಂದ ನೀರು ಹೊತ್ತು ತರೋದು, ಕಾಯಿಪಲ್ಲೆ ಹೆಚ್ಚೋದು ಭಕ್ರಿ ಬಡಿಯೋದು.. ಮುಗಿಸಿ ನಾಷ್ಟಾ ಮುಗಿಸಿದ ತಾನು ಅಪ್ಪನ ಕಲಿಕಾ ಶಾಲೆಗೆ ಹಾಜರಿ ಹಾಕಬೇಕಾಗುತ್ತಿತ್ತು. ‘ಮಣ್ಣ ಹಿಂಗ ಜರಡಿ ಹಿಡಿಬೇಕೇನವ್ವಾ, ಅದನ್ನ ನೀರು ಹಾಕಿ ನೆನಿಯಾಕ ಬಿಡಬೇಕು.. ಹದ ಮಾಡಿದ ಮಣ್ಣು ತಿಗರಿ ಮಾಲಿಟ್ಟು ಹೀಂಗ ತಿರುಗಿಸಬೇಕು’.. ಹೀಗೆ ಪ್ರತಿಯೊಂದು ಕೆಲಸವನ್ನೂ ಅಚ್ಚುಕಟ್ಟಾಗಿ ಅಪ್ಪ ತನಗೆ ಕಲಿಸಿದ್ದ. ಹದಿನೆಂಟು ತುಂಬುವುದರೊಳಗೆ ಅಪ್ಪನ ಗರಡಿಯಲ್ಲಿ ಸ್ವತಂತ್ರವಾಗಿ ಮಣ್ಣಿನ ಎಲ್ಲಾ ಬಗೆಯ ಕೆಲಸಗಳನ್ನೂ ಕಲಿತಿದ್ದೆ.
ಅಪ್ಪ ಮುಗದದ ಭರಮಪ್ಪನ ಸಂಬಂಧ ಹುಡುಕಿದಾಗ ಚಕಾರವೆತ್ತದೇ ಸುಮ್ಮನೇ ಮದುವೆಗೊಪ್ಪಬೇಕಯ್ತು. ಹೊಸ್ತಿಲು ದಾಟಿ ತುಂಬಿದ ಮನೆಯ ಹಿಂಭಾಗಕ್ಕೆ ಹೋದರೆ ದೂರದಿಂದ ಕಾಣುವ ವಿಶಾಲವಾದ ಮುಗದದ ಕೆರೆ ತನ್ನೊಡಲಲ್ಲಿ ಸಾಕಷ್ಟು ಹೂಳನ್ನೂ ನೀರನ್ನೂ ತುಂಬಿಕೊಂಡಿರುವುದು ಕಾಣುತ್ತಿತ್ತು. ‘ದುಡಿಯಾಕ ರಟ್ಟಿ ಗಟ್ಟಿ ಇದ್ರ ನಮ್ಮೂರಿನ್ಯಾಗ ಮಣ್ಣು ನೀರಿಗಿ ಕೊರತೆ ಇಲ್ಲೇಳವ್ವಾ. ನಿಮ್ಮತ್ತಿ ಇನ್ನ ಗಟ್ಟಿ ಅದಾಳು ಅಡಗಿ ಮಾಡತಾಳೂ. ನೀ ನಮ್ಮ ಜೋಡಿ ಕೆಲಸಾ ಮಾಡವ್ವಾ’ ಎಂದು ತನಗೆ ಮಾವ ಶಂಕ್ರಪ್ಪ ತಾಕೀತು ಮಾಡಿದ.
ಶಂಕ್ರಪ್ಪ ತಯಾರಿಸುವ ನಾಡ ಹೆಂಚಿಗೆ ಬಲು ಬೇಡಿಕೆ ಇತ್ತು. ‘ಎಂಥಾ ಚೊಲೋ ಹಂಚ ಮಾಡತಾನ ಶಂಕ್ರಪ್ಪ. ಮಳೆಗಾಲದಲ್ಲಿ ಒಂದ ತಟಾಕು ಸೋರಂಗಿಲ್ಲ’ ಎಂದು ಸುತ್ತಮುತ್ತಲ ಹಳ್ಳಿಯವರು ಹೊಗಳುತ್ತಿದ್ದರು. ಮನೆಯ ಬಳಿ ಬಂದು ಖರೀದಿಸಿ ಚಕ್ಕಡಿ ತಂದು ತುಂಬಿಕೊಂಡು ಹೋಗುತ್ತಿದ್ದರು. ತನ್ನ ಮದುವೆಯಾಗಿ ಏಳು ವರ್ಷದವರೆಗೆ ಶಂಕ್ರಪ್ಪ ಬದುಕಿದ್ದ. ‘ನಾಲ್ಕಕ್ಷರಾ ಕಲತಾಳು ನಮ್ಮ ಸೊಸಿ’ ಎಂದು ವಿಶೇಷ ಅಭಿಮಾನ ತಾಳಿದ್ದ ಶಂಕ್ರಪ್ಪ ತಾನು ಮಾಡುತ್ತಿದ್ದ ಮಡಿಕೆ ಕುಡಿಕೆ, ಪಣತಿಗಳನ್ನೆಲ್ಲ ದೊಡ್ಡ ಬೆತ್ತದ ಚೂಳಿಯಲ್ಲಿ ತುಂಬಿ ತಿರುಗಾಡಿ ಮಾರಿಕೊಂಡು ಬರಲು ತನಗೆ ಹೇಳುತ್ತಿದ್ದ. ಪ್ರತಿ ಮಂಗಳವಾರ, ಶುಕ್ರವಾರ ಸುತ್ತಮುತ್ತಲಿನ ಹತ್ತೂರಿಗೆ ಓಡಾಡಿ ಮಡಕೆ ಮಾರುತ್ತಿದ್ದೆ. ಒಮ್ಮೊಮ್ಮೆ ಭರಮಪ್ಪನೂ ತನ್ನ ಜೊತೆಗೂಡುತ್ತಿದ್ದ.
ಮುಗುದ ಊರಿನ ಸಾವಕಾರ್ ಲಿಂಗೇಗೌಡ್ರು ಹೊಸಮನೆ ಕಟ್ಟಿಸಿದಾಗ ಮಾಡಿಗೆ ಮಂಗಳೂರು ಹೆಂಚು ತರಿಸಿ ಹೊದೆಸಿದರು. ಕೇಸರಿ ಬಣ್ಣದ ಮಂಗಳೂರು ಹಂಚಿನ ಮಾಡು ಕಪ್ಪುನಾಡ ಹಂಚಿನ ಮನೆಗಳಿಂತ ಭಿನ್ನವಾಗಿ, ಎಲ್ಲರ ಕಣ್ಣಿಗೆ ಚೆಂದವಾಗಿ ಕಾಣಿಸಿತು. ಊರಿನ ಅನುಕೂಲಸ್ಥರೆಲ್ಲ ತಮ್ಮ ಮನೆಗೂ ಮಂಗಳೂರು ಹಂಚು ಹಾಕಿಸಲಾರಂಭಿಸಿದರು. ಕಿರಾಣಿ ಅಂಗಡಿ ದ್ಯಾಮಪ್ಪ ಮಂಗಳೂರು ಹಂಚಿನ ವ್ಯಾಪಾರವನ್ನೂ ಶುರು ಮಾಡಿದ.. . ನಾವು ತಯಾರಿಸುವ ನಾಡ ಹೆಂಚಿಗೆ ಬೇಡಿಕೆ ಕುಸಿಯಲಾರಂಭಿಸಿತು.
ಬಚ್ಚಲು ಮನೆಯಲ್ಲಿ ಜಾರಿ ಬಿದ್ದಿದ್ದೇ ನೆವವಾಗಿ ಹಾಸಿಗೆ ಹಿಡಿದ ಅತ್ತೆ ಎರಡೇ ತಿಂಗಳಿನಲ್ಲಿ ಸತ್ತೇ ಹೋದಳು. ಹೆಂಡತಿ ಸತ್ತ ಮೇಲೆ ಮಾವ ಕೆಲಸದಲ್ಲಿ ಆಸಕ್ತಿ ಕಳೆದುಕೊಂಡ. ನಿಂಗಿಯ ಮಗಳನ್ನು ಆಟವಾಡಿಸುತ್ತ ಕುಳಿತುಕೊಳ್ಳುತ್ತಿದ್ದ. ಏನೇ ತಿಂದರ್ರೂ ಪಚನ ಆಗಂಗಿಲ್ಲ ಎನ್ನುತ್ತ ಆಹಾರ ಸೇವಿಸುವುದನ್ನೇ ಕಡಿಮೆ ಮಾಡಿದ. ವರ್ಷದೊಳಗೆ ಮಾವನೂ ತೀರಿಕೊಳ್ಳುವ ಹೊತ್ತಿಗೆ ಹಂಚು ಮಾರಿ ಜೀವನ ಸಾಗಿಸುವುದೇ ಕಷ್ಟ ಎನ್ನುವಂತಾಗಿತ್ತು.
‘ಮನ್ಯಾಗ ಯಾರರೆ ಅದೀರೇನು’ ಕೂಗು ನಿಂಗಿಯನ್ನು ವಾಸ್ತವಕ್ಕೆ ತಂದಿತ್ತು, ಊರಾಗಿನ ತುದಿ ಮನಿ ಮಾರಪ್ಪ ನಿಂಗಿ ತಯಾರಿಸಿದ ಒಂದು ಹೆಂಚಿನ ಒಲೆಯನ್ನು ಖರೀದಿ ಮಾಡಿದ. ‘ನಿಮದ ಒಂದ ಮನಿತನ ಈ ಊರಾಗ ಮಣ್ಣಿನ ಕೆಲ್ಸಾ ಮಾಡಿಕೊಂಡು ಉಳದತಿ. ಏನವ್ವಾ ತಂಗಿ, ಜೀವ್ನಾ ಮಾಡೂವಷ್ಟ ಗಳಕಿ ಐತೇನವ್ವಾ?.. ಕಳಕಳಿಯಿಂದ. ಅಟೀಟ ಐತಿ.. ಹೆಂಗೋ ನಡದತಿ ಯಜ್ಜಾ ಎಂದು ನಿಂಗಿ ಮಾತು ಮರೆಸಿದಳು.
ತಂದೆ ಸತ್ತ ನಂತರ ಭರಮಪ್ಪನೂ ಕುಂಬಾರಿಕೆ ಬಿಟ್ಟು ಕೂಲಿ ಕೆಲಸಕ್ಕೆ ಮನಸ್ಸು ಮಾಡಿದ್ದ.
‘ನಾಡಹಂಚು ಕೇಳಾವ್ರಿಲ್ಲ ಅಂತಾ ಧಂಧೇ ಬಿಡೂದು ಬ್ಯಾಡಾ. ಹೂವಿನ ಗಿಡಾ ನೆಡಲಿಕ್ಕೆ ಬರೋ ಅಂಥಾವ್ವು ಕುಂಡಾ ಮಾಡೋಣ್ರೀ, ನಮ್ಮಪ್ಪ ಅದನ್ನ ಮಾಡಾದು ನನಗ ಕಲಿಸಿಕೊಟ್ಟಾನ’ ಎಂದು ತಾನು ಹಿಡಿದ ಪಟ್ಟು ಬಿಡದೇ ಗಂಡನ ಮನ ಒಲಿಸಿದ್ದಳು ನಿಂಗಿ. ಅಷ್ಟೆ ಅಲ್ಲ ಗಂಡನಿಗೂ ಕುಂಡ ಮಾಡುವುದನ್ನು ಕಲಿಸಿದಳು.
ಮೂರು ಗಾತ್ರದ ಕುಂಡಗಳನ್ನು ಮಾಡಿ ಧಾರವಾಡ ಸಂತೆಯಲ್ಲಿ ಮಾರುತ್ತಿದ್ದಳು ನಿಂಗಿ. ಕ್ರಮೇಣ ಅದು ಜನಪ್ರಿಯವಾಗಲಾರಂಭಿಸಿದಾಗ ಊರಿನ ಉಳಿದ ಕುಂಬಾರರೂ ನಿಂಗಿಯಿಂದ ಕುಂಡ ತಯಾರಿಸುವುದನ್ನು ಕಲಿತರು. ಬಗೆ ಬಗೆಯ ಕುಂಡ ತಯಾರಿಸಲಾರಂಭಿಸಿದರು. ಧಾರವಾಡದ ಪಾರ್ಕುಗಳಲ್ಲಿ, ಕೃಷಿ ವಿಶ್ವವಿದ್ಯಾಲಯಗಳಲ್ಲಿ ಮುಗದದ ಕುಂಡಗಳು ಕಾಣಿಸಿಕೊಂಡವು. ಆರೇಳು ವರ್ಷದಲ್ಲಿ ಮುಗದದ ಕುಂಬಾರಿಕೆ ಜನಪ್ರಿಯತೆಯ ಗರಿಷ್ಟ ಮಟ್ಟಕ್ಕೇರಿತು.
ಎಲ್ಲ ಕುಂಬಾರರೂ ಸೇರಿ ಸೊಸೈಟಿಮಾಡಿಕೊಂಡು ಲಕ್ಷಾಂತರ ಕುಂಡ ತಯಾರಿಸಿ ವಿವಿಧ ನಗರಗಳಿಗೆ ಹೋಲ್ಸೇಲ್ ನಲ್ಲಿ ಮಾರಾಟ ಮಾಡಿದರು. ಕುಂಬಾರರೆಲ್ಲರ ಆರ್ಥಿಕ ಪರಿಸ್ಥಿತಿ ಸುಧಾರಿಸಿತು. ಬೇಡಿಕೆ ಹೆಚ್ಚಾದಂತೆ ಕೆಲ ಕುಂಬಾರರು ಕುಂಡಗಳ ಗುಣಮಟ್ಟದ ಕಡೆಗೆ ಗಮನ ಹರಿಸದೇ ಸರಿಯಾಗಿ ಸುಟ್ಟು ಗಟ್ಟಿ ಮಾಡದೇ ಸೊಸೈಟಿಗೆ ತಂದಿಡತೊಡಗಿದರು. ಗಿರಾಕಿಗಳಿಂದ ದೂರುಗಳು ಬರಲಾರಂಭಿಸಿದವು.. ಕುಂಡಗಳ ಬೇಡಿಕೆ ಕುಸಿಯಿತು.
‘ನಿಯತ್ತಿಂದ ದುಡಿಯಾಕ ಏನ ರೋಗ ಬಡದೈತೋ ನಮ್ಮೂರ ಮಂದಿಗೆ’ ಎಂದು ಪೇಚಾಡಿಕೊಂಡಳು ನಿಂಗಿ….
******
ನಿಂಗಿಗೆ ಹುಟ್ಟಿದ ಮಗ ಹುಟ್ಟು ಅಂಗವಿಕಲ. ಅವನ ಚಿಕಿತ್ಸೆಗೆ ಪ್ರತಿ ತಿಂಗಳೂ ಸಾವಿರಾರು ರೂಪಾಯಿ ವ್ಯಯಿಸಬೇಕಾದ ಪರಿಸ್ಥಿತಿ. ಮನೆಯಲ್ಲಿ ಆರ್ಥಿಕ ಮುಗ್ಗಟ್ಟು ಕಾಣಿಸಿಕೊಂಡಿತು. ‘ನಾವು ಮಾಡಿದ ಕುಂಡಗಳನ್ನಾ ಇನ್ನ ಮ್ಯಾಲ ಸೊಸೈಟಿಗೆ ಹಾಕೂದು ಬ್ಯಾಡ. ಮೊದಲಿನ ಹಾಂಗ ನಾವೇ ಮಾರೋಣು’ ಎಂದು ನಿಂಗಿ ದೃಢವಾಗಿ ನುಡಿದಳು.
‘ಇವೆಲ್ಲಾ ತೆಲಿನೋವು ಬ್ಯಾಡಾಗೇತಿ, ನಾ ಕೂಲಿಗೆ ಹೊಕ್ಕೇನಿ’ ಮತ್ತೆ ಭರಮಪ್ಪ ರಾಗ ತೆಗೆದ.
“ಕುಲ ಕಸುಬು ಬಿಡೂದು ಬ್ಯಾಡ್ರೀ. ಇಷ್ಟ ವರಷಾ ಅದೇ ದುಡಿಕಿ ಮ್ಯಾಲ ಜೀವ್ನಾ ಮಾಡೇವಿ.ನಾ ಏನರೆ ದಾರಿ ಹುಡುಕುತೇನಿ ನಾವೊಂದೇ ಮಾರೂದಂದ್ರ ಕುಂಡಗಳಿಗೂ ಗಿರಾಕಿ ಹುಡುಕೂದು ಕಷ್ಟ ಐತಿ. ಖಾನಾಪುರದಾಗ ನೀರಿನ ಹೂಜಿ, ಒಲಿ.. ಹೀಂಗ ಏನೇನೋ ಮಾಡಾಕ ಹದಿನೈದು ದಿನಾ ತರಬೇತಿ ಕೊಡತಾರಂತ. ಹುಡುಗೂರನ್ನ ತೌರ ಮನ್ಯಾಗ ಬಿಟ್ಟ ನಾ ಹೋಗಿ ತರಬೇತಿ ತಗೊಂಡ ಬರತೇನಿ” ಎಂದಳು ನಿಂಗಿ.
‘ಎಷ್ಟರ ಹಠಮಾರಿ ಇದ್ದಿ ನೀ. ನೀನೂ ತೆಲಿ ಕೆಡಿಸಿಕೊಳ್ಳತೀದಿ, ನಂದು ತೆಲಿ ಕೆಡಿಸತಿದಿ’ ಎಂದು ಭರಮಪ್ಪ ಹೇಳಿದರೂ ನಿಂಗಿ ತನ್ನ ನಿರ್ಧಾರ ಬದಲಿಸಲಿಲ್ಲ.
****
ಊರಿನ ಕುಂಬಾರರೆಲ್ಲ ಮಣ್ಣಿನ ಕೆಲಸದ ಆಸಕ್ತಿ ಕಳೆದುಕೊಂಡು ಒಬ್ಬೊಬ್ಬರಾಗಿ ಬೇರೆ ಬೇರೆ ಕೆಲಸಕ್ಕೆ ಹೊರಟರು. ‘ಪ್ಲಾಸ್ಟಿಕ್ ಬಂದ ಮ್ಯಾಲ ಕುಂಬಾರರು ತಯಾರು ಮಾಡಿದ್ದನ್ನ ಕೇಳಾವ್ರು ಯಾರದಾರ’ ಎನ್ನುವ ಮಾತು ಊರಿನ ಹಲವರ ಬಾಯಲ್ಲಿ!. ಯಾವ ಪರಿಸ್ಥಿತಿಯಲ್ಲಿಯೂ ನಿಂಗಿ ಮಾತ್ರ ಕುಂಬಾರಿಕೆ ಬಿಡಲು ಸಿದ್ಧಳಿರಲಿಲ್ಲ.
ಖಾನಾಪುರದಿಂದ ತರಬೇತಿ ತೆಗೆದುಕೊಂಡು ಬಂದಳು ನಿಂಗಿ. ಬೇಸಿಗೆಯಲ್ಲಿ ನೀರು ತುಂಬಿಡುವ ಗಡಿಗೆಗಳನ್ನು ಹೊಸ ಆಕಾರದಲ್ಲಿ ತಯಾರಿಸಿ ಅದಕ್ಕೆ ನಲ್ಲಿ ಜೋಡಿಸುವುದನ್ನು ಆರಂಭಿಸಿದಳು. ಅದು ಬೇಸಿಗೆಯಲ್ಲಿ ಬಡವರ ಮನೆಯ ಪ್ರಿಡ್ಜ ಎಂಬಂತೆ ಮಾರಾಟವಾಗುತ್ತಿತ್ತು. ಸಿದ್ಧಒಲೆ, ಹೂದಾನಿ ತಯಾರಿಸಿದಳು..ಗಂಡನನ್ನು ಮಕ್ಕಳನ್ನು ದುಡಿಮೆಯಲ್ಲಿ ತೊಡಗಿಸುತ್ತಿದ್ದಳು.
ಮನೆಯವರೆಲ್ಲ ಎಷ್ಟೇ ಕಷ್ಟಪಟ್ಟು ದುಡಿದರೂ ತಯಾರಿಸಿದ ವಸ್ತುಗಳು ನಿಧಾನಗತಿಯಲ್ಲಿ ಮಾರಾಟವಾಗುತ್ತಿತ್ತು. ಬೆಳೆಯುವ ಮಕ್ಕಳು, ಏರುತ್ತಿರುವ ಮನೆಯ ಖರ್ಚು ವೆಚ್ಚ ನಿಭಾಯಿಸಲು ಕಷ್ಟವಾಗುತ್ತಿತ್ತು.
‘ಕೆರಿ ಹೂಳೆತ್ತಿ ತರೋ ಖರ್ಚು ಎಷ್ಟ ಆಗೇತಿ, ಭಟ್ಟಿಗಿ ಉರಿ ಹಚ್ಚಾಕ ಕಟ್ಟಗಿ ಕಡಿಯಾಕ ಹೋದ್ರೆ ಫಾರೆಸ್ಟಿನವ್ರು ಹಿಡಕೊಂಡ ಕುಂದರತಾರ. ನಾ ಒಲ್ಲೆ ಕುಂಬಾರಕಿ’ ಎಂದು ಭರಮಪ್ಪ ಆಗಾಗ ಕ್ಯಾತೆ ತೆಗೆಯುತ್ತಲೇ ಇರುತ್ತಿದ್ದ.
‘ಮತ್ತ ಶುರುವಾತೇನು ನಿಮ್ಮ ರಾಗ, ನೀವೇನು ಮಾಡಾವ್ರು ಹಂಗದ್ರ? ಕೂಲಿ ಕೆಲ್ಸ ಮಾಡಾಕ ಹೊಕ್ಕೀನಿ ಅಂತೀರಿ, ಮುಂಜಾನಿಂದ ಸಂಜಿ ಮಟಾ ಮಣಭಾರದ ಮೂಟೆ ಹೊತ್ತು ಹಾಕಿದ್ರೀ ಅಂದ್ರ ಮೂರ ದಿನದಾಗ ಹಾಸಿಗಿ ಹಿಡಿತೀರಿ. ಒಂದಲ್ಲಾ ಒಂದ ದಿನ ಮತ್ತ ನಾವು ಮಾಡೋ ಕೆಲಸಕ್ಕ ಬೇಡಿಕೆ ಬಂದೇ ಬರತದ’ ಎಂದಳು ನಿಂಗಿ.
‘ಹೂ ಬರತದ ಬರತದ..ಇನ್ನ ನಾಲ್ಕೈದು ವರ್ಷಕ್ಕ ಮಗಳು ಮದವಿಗೆ ಬರತಾಳ. ನಮಗ ಹೊಲಾ ಇಲ್ಲ ಆಸ್ತಿ ಇಲ್ಲ.. ಇರೋದು ಇದೊಂದ ಹಳೆ ಮನಿ. ಯಾವ ಬ್ಯಾಂಕಿನ್ಯಾಗೂ ಒಂದ ರೂಪಾಯಿ ಸಾಲ ಹುಟ್ಟಂಗಿಲ್ಲ, ಆಗ ಏನ ಮಾಡತೀದಿ ವಿಚಾರ ಮಾಡಿ ನನಗ ಹೇಳ’ ಎಂದು ಹೆಂಡತಿಗೆ ಗಟ್ಟಿಸಿ ಕೇಳಿ ಹೊರ ನಡೆದ ಭರಮಪ್ಪ. ನಿಂಗಿಯ ಮನಸ್ಸು ಹೊಯ್ದಾಟಕ್ಕೆ ಸಿಲುಕಿತ್ತು.
*
ಧಾರವಾಡದ ಪ್ರಸಿದ್ಧ ಲಕ್ಷ್ಮಿ ನಾರಾಯಣ ಜಾತ್ರೆ ನಡೆದಿತ್ತು. ನಿಂಗಿ ಆದಷ್ಟು ವ್ಯಾಪಾರ ಆಗಲಿ ಎಂದು ನಿತ್ಯವೂ ಮುಂಜಾನೆ ಬೇಗ ಎದ್ದು ಅಡುಗೆ ಮಾಡಿಟ್ಟು ಒಂದಿಷ್ಟು ಹಣತೆಗಳು ಮಡಕೆ ಕುಡಿಕೆಗಳನ್ನೆಲ್ಲ ಚೀಲದಲ್ಲಿ ತುಂಬಿಕೊಂಡು ಜಾತ್ರೆಗೆ ಹೋಗುತ್ತಿದ್ದಳು. ಜಾತ್ರೆ ಬೀದಿಯಲ್ಲಿ ಪುಟ್ಟ ಅಂಗಡಿ ಬಾಡಿಗೆಗೆ ಹಿಡಿದಿದ್ದಳು. ಒಂದು ಕಡೆ ಸ್ಟೀಲ್ ಪಾತ್ರೆ ಮಾರುವ ಅಂಗಡಿ, ಇನ್ನೊಂದೆಡೆ ಪ್ಲಾಸ್ಟಿಕ್ ಬುಟ್ಟಿ, ಬಕೆಟ್ ಮಾರುವ ಅಂಗಡಿ, ಎದುರಿಗೆ ಪಿಂಗಾಣಿ ಪಣತಿಯ ಅಂಗಡಿಯ ನಡುವೆ ನಿಂಗಿ ಮಾರುತ್ತಿದ್ದ ವಸ್ತುಗಳು ಅಷ್ಟೇನೂ ಆಕರ್ಷಕವಾಗಿ ಕಾಣುತ್ತಿರಲಿಲ್ಲ. ಜಾತ್ರೆಗೆ ಪ್ರವಾಹದಂತೆ ಬರುವ ಜನರು ಬೆಲೆ ಕೇಳಿ ಕೇಳಿ ಸುಮ್ಮನೆ ಮುಂದೆ ಹೋಗುತ್ತಿದ್ದರು. ತೀರಾ ಕೆಲವರು ಮಾತ್ರ ಹಣತೆಗಳನ್ನು ಖರೀದಿಸುತ್ತಿದ್ದರು.
‘ನಾ ಬ್ಯಾಡ ಬ್ಯಾಡಾ ಅಂದ್ರೂ ಅಂಗಡಿ ಬಾಡಗಿ ಹಿಡಿದಿದಿ.. ಎಲ್ಲಾ ಲುಕ್ಸಾನ ಆಕ್ಕೇತಿ, ಯಾಪಾರ ಆಗಂಗಿಲ್ಲ ಏನಿಲ್ಲ. ಇಲ್ಲಿಗ ಬಂದು ಮುಂಜಾನಿಂದ ಸಂಜಿ ಮಟಾ ನೊಣಾ ಹೊಡಕೊಂತ ಕುಂದ್ರೂದು’ ಎಂದು ಆಗಾಗ ಭರಮಪ್ಪ ಸಿಡಿಮಿಡಿ ಮಾಡುತ್ತಿದ್ದ. ನಿಂಗಿ ಗಂಡನ ಮಾತು ಕೇಳಿಯೂ ಕೇಳದಂತೆ ಸುಮ್ಮನೆ ಕುಳಿತಿದ್ದಳು ಯಾರೇ ಬಂದರೂ ಉತ್ಸಾಹದಿಂದ ಅಂಗಡಿಯಲ್ಲಿದ್ದ ವಸ್ತುಗಳನ್ನೆಲ್ಲ ತೋರಿಸುತ್ತಿದ್ದಳು. ಜಾತ್ರೆ ಶುರುವಾಗಿ ವಾರವೇ ಕಳೆದಿತ್ತು.
‘ಇನ್ನ ಎರ್ಡ ದಿನಾ ಆದ್ರ ಜಾತ್ರೆ ಮುಗೀತತಿ. ಇದು ಕೊನೇ ಜಾತ್ರಿ ನಾವೂ ಹೋಗುದ. ಮಾಡಿದ ಸಾಮಾನ ತರೂದು ಹೊಳ್ಳಿ ಮನಿಗಿ ಒಯ್ಯಾದು. ಇನ್ನ ಅಂಗಡಿ ಹಾಕೋ ವಿಚಾರ ಕೈಬಿಡ ನೀ’ ಎಂದು ಭರಮಪ್ಪ ಮತ್ತೆ ಮತ್ತೆ ಹೇಳುತ್ತಲೇ ಇದ್ದ. ‘ದ್ಯಾವ್ರೇ ನಿನ್ನ ನಂಬಿ ಬಂದೀನಿ ನಾ ಏನರ ಒಂದ ದಾರಿ ತೋರಿಸವ್ವ ಲಕ್ಷ್ಮವ್ವಾ’ ಎಂದು ಮೌನವಾಗಿ ಬೇಡಿಕೊಳ್ಳುತ್ತಿದ್ದ ನಿಂಗಿ ಗಂಡನಿಗೆ ಪ್ರತಿ ನುಡಿಯುವುದನ್ನೇ ಬಿಟ್ಟು ಸುಮ್ಮನಿರುತ್ತಿದ್ದಳು.
ಅಂದು ಶುಕ್ರವಾರ. ನಲವತ್ತರ ಹರಯದ ಲಕ್ಷಣವಾದ ಹೆಂಗಸೊಬ್ಬಳು ನಿಂಗಿಯ ಅಂಗಡಿಗೆ ಬಂದಳು. ‘ಏನವ್ವ ನೀವೆ ಮಾಡೀರೇನು ಇವೆಲ್ಲ” ಎಂದು ಕೇಳಿದಳು.
‘ಹೂನ್ರೀ. ಇವೆಲ್ಲ ನಾವೇ ಮನಿ ಮಂದಿ ಕೂಡಿ ಮಾಡೀವ್ರೀ’ ಎಂದಳು ನಿಂಗಿ.
ಹೂಜಿ, ಮಡಿಕೆ ಕುಡಿಕೆ ಒಲೆ, ಹಣತೆ ಒಂದೊಂದನ್ನು ಮುಟ್ಟಿ ಮುಟ್ಟಿ ಪರೀಕ್ಷಕ ದೃಷ್ಟಿಯಿಂದ ನೋಡಿ ಎಲ್ಲವುಗಳ ಬೆಲೆಯನ್ನು ವಿಚಾರಿಸಿದಳು ಅವಳು. ‘ಎಷ್ಟ ವರ್ಷದಿಂದ ಕುಂಬಾರಿಕಿ ಮಾಡೀರಿ ಭಾಳ ಚೊಲೋ ಮಾಡೀರಿ’ ಎಂದಳು.
‘ಮ್ಯಾಡಮ್ಮಾರ್ರೀ ಇದ್ರಾಗೇ ನಮ್ಮ ಜೀವ್ನಾರೀ. ಬುದ್ದಿ ಬಂದಾಗಿಂದ ಇದೇ ಕೆಲ್ಸಾರೀ ನಾವು ಮಾಡಿದ್ದು. ಈಗ ಇದನ್ನ ಬಳಕೆ ಮಾಡೋ ಮಂದೀನೇ ಕಮ್ಮ ಆಗ್ಯಾರ್ರೀ’ ಎನ್ನುವಾಗ ನಿಂಗಿಯ ಕಣ್ಣಿಂದ ಎರಡು ಹನಿ ನೀರು ಹನಿದಿತ್ತು.
‘ನಾವು ಚಂದನಮಟ್ಟಿ ಅಂತಾ ಒಂದು ಮಾನವ ನಿರ್ಮಿತ ಪ್ರವಾಸಿ ತಾಣ ಮಾಡೇವಿ. ಹಿಂದಿನ ಕಾಲದಾಗ ನಮ್ಮ ಜನಪದರು ಹ್ಯಾಂಗ ಜೀವ್ನಾ ಮಾಡತಿದ್ರೂ ಅನ್ನೋದನ್ನ ತೋರ್ಸೋ ಹಂಗ ಮಾಡೇವಿ. ಅದಕ್ಕ ಭಾಳ ಮಂದಿ ಪ್ರವಾಸಗರು ಬರತಾರ. ಅವ್ರೀಗೆ ಊಟ, ತಿಂಡಿ ಕೊಡಾಕ ಮಣ್ಣಿನ ತಾಟು, ಚಹಾ ಕೊಡಾಕ ಮಣ್ಣಿನ ಕಪ್ಪ ಬೇಕಾಗ್ಯಾವ. ಅದನ್ನ ಸತತ ಮಾಡಿಕೊಡಾಕ ಬೇಕು ಅಂತಾ ಕುಂಬಾರರನ್ನ ಹುಡುಕಾಕ ಹತ್ತಿದ್ನಿ. ನೀವು ಮಾಡಿಕೊಡತೀರೇನು? ನಿಮ್ಮ ಕೆಲಸಾ ಮನ್ನ ಮನ್ಸಿಗಿ ಬಂದತಿ.. ಅಂದ ಹಾಂಗ ನನ್ನ ಹೆಸರು ಸುಲೋಚನಾ ಅಂತ’ ಎಂದು ಮಾತು ನಿಲ್ಲಿಸಿದಳು ಅವಳು.
‘ಮಾಡಿ ಕೊಡತೇವ್ರೀ ಮೇಡಮ್ಮಾರ. ಆ ತಾಯಿ ಲಕ್ಷ್ಮಿನೇ ಬಂದು ಕೇಳಿದಂಗಾತ್ರಿ’ ಎಂದು ಸಂಭ್ರಮಿಸಿದಳು ನಿಂಗಿ.
…***
ಈಗ ಚಂದನ ಮಟ್ಟಿಗೆ ಬರುವ ಪ್ರವಾಸಿಗರು ನಿಂಗಿ ಮಾಡಿದ ಇಕೋ ಫ್ರೆಂಡ್ಲಿ ತಾಟಿನಲ್ಲಿ ಊಟ ಮಾಡುತ್ತಾರೆ. ಇಟ್ ಈಸ್ ವೆರಿ ನೈಸ್ ಎನ್ನುತ್ತಾ ಚಹಾ ಹೀರುತ್ತಾರೆ. ಅಲ್ಲೇ ಮೂಲೆಯಲ್ಲಿರುವ ಅಂಗಡಿಯಲ್ಲಿ ನೀರಿನ ಹೂಜಿಯನ್ನೂ ಖರೀದಿಸುತ್ತಾರೆ
ಸುಲೋಚನಾ ಮೇಡಮ್ಮಾರು ಕೊಟ್ಟ ಆರ್ಡರ ಪೂರೈಸುವುದಕ್ಕೆ ಹಗಲಿರುಳು ದುಡಿಯುವ ನಿಂಗಿಯೆದುರು ಅವಳ ಗಂಡ ಕೂಲಿಗೆ ಹೋಗುವ ರಾಗ ಹಾಡುವುದನ್ನು ನಿಲ್ಲಿಸಿದ್ದಾನೆ! ಕೃತಕ ಕಾಲಿನ ಅಳವಡಿಕೆಯಾದ ನಂತರ ನಿಂಗಿಯ ಮಗ ನೆಟ್ಟಗೆ ನಡೆದಾಡುತ್ತಾನೆ ಮಗಳು ಚಿತ್ರಾ ಫೈನ್ ಆರ್ಟ ಕೋರ್ಸ ಸೇರಿಕೊಂಡು ತಾಯಿ ಮಾಡಿದ ಹೂದಾನಿಗಳ ಮೇಲೆ ಚೆಂದದ ಚಿತ್ತಾರ ಬಿಡಿಸುತ್ತ ಚೆಂದನಮಟ್ಟಿಯಲ್ಲಿ ಒಂದು ಆರ್ಟ ಗ್ಯಾಲರಿ ಮಾಡುವ ಕನಸು ಕಾಣುತ್ತಿದ್ದಾಳೆ.
‘ಒಂದು ತಾಟೂ ಅಕ್ಕಮುಕ್ಕಾಗಬಾರದೇನ್ರವ್ವಾ. ನಮ್ಮ ಒಂದ ಕೆಲ್ಸಾ ನೋಡಿ ಹತ್ತ ಕೆಲ್ಸಾ ಸಿಗಬೇಕು’.. ಎಂದು ತನ್ನ ಕೆಲಸದ ಸಹಾಯಕಿಯರಾಗಿ ಕೆಲಸ ಮಾಡುವವರಿಗೆ ಸೂಚನೆ ಕೊಡುತ್ತಿದ್ದ ನಿಂಗಿಯ ಮೊಗದಲ್ಲಿ ಪ್ರಸನ್ನ ಭಾವವಿತ್ತು..

                           * ಮಾಲತಿ ಹೆಗಡೆ
                                                                               
                             
                              
                          
                             

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter