ನೀನಿಲ್ಲವೆಂದರೆ…

"ಭೈಯ್ಯಾ, ಡಾಕ್ಟರ್ ಬಂದಿದ್ದಾರೆ..."
"ಯಾವ ಡಾಕ್ಟರ್...? ಯಾಕೆ ಬಂದಿದ್ದಾರೆ...? ಎಲ್ಲಿದ್ದಾರೆ...? ಯಾರಿಗೆ ಹುಷಾರಿಲ್ಲ? ನಿನಗೋ, ಅಮ್ಮನಿಗೋ, ಅಪ್ಪನಿಗೋ...?"
"ಅಣ್ಣಾ, ಸೀರೀಜ್ ಆಫ್ ಕ್ವೆಶ್ಚೆನ್ಸ್ ಕೇಳಿದರೆ ಹೇಗೆ ಉತ್ತರಿಸಲಿ? ಗಾಬರಿ ಬೀಳಬೇಡ. ಮನೆಯಲ್ಲಿ ಎಲ್ಲರೂ ಹುಷಾರಾಗಿದ್ದಾರೆ."
"ಮತ್ಯಾಕೆ ಡಾಕ್ಟರ್ ಸಿರಿ...?"
"ಅಣ್ಣಾ, ನಿನ್ನ ಮಾಜಿ ಲವ್ವರ್ ಡಾ.ಸಂಕಲ್ಪಾ ಬಂದಿದ್ದಾಳೆ."
"ಇದರಿಂದ ನನಗೇನಾಗಬೇಕಿದೆ? ಬೆಳಗ್ಗೆ ತೋಟಕ್ಕೆ ಹೋಗುವಾಗ ನೀನು, ಅಮ್ಮ, ಅಪ್ಪ ಎಲ್ಲರೂ ಚೆನ್ನಾಗೇ ಇದ್ದಿರಿ. ತೋಟದಿಂದ ಬರುವಷ್ಟರಲ್ಲಿ ಯಾರಿಗೆ ಏನಾಯಿತೋ ಎಂದು ಗಾಬರಿಯಾಗಿ ಬಿಟ್ಟಿತು. ಕುತೂಹಲ ಹುಟ್ಟು ಹಾಕಲು ಸುಮ್ಮಸುಮ್ಮನೇ ಡಾಕ್ಟರ್ ಬಂದಿದ್ದಾರೆ ಅಂತ ಹೇಳಿದ್ಯಾಕೆ...? `ಡಾ.ಸಂಕಲ್ಪಾ ಬಂದಿದ್ದಾಳೆ ಅಂತ ನೇರವಾಗಿ ಹೇಳಬಹುದಿತ್ತಲ್ಲ? ನಿನ್ನ ತುಂಟತನಕ್ಕೆ ಮಿತಿಯಿಲ್ಲ. ನನ್ನನ್ನು ಗೋಳು ಹೊಯ್ದುಕೊಳ್ಳುವುದಕ್ಕೆ ನಿನ್ನ ಮೈಉಬ್ಬುತ್ತದೆ. ಚಂಡಿ-ಚಾಮುಂಡಿ, ಭದ್ರಕಾಳಿ!"
"ಹೌದಪ್ಪಾ, ಹೌದು. ನಾನು ಚಂಡಿ-ಚಾಮುಂಡಿ, ಭದ್ರಕಾಳಿ. ಈಗಿನ ಕಾಲದಲ್ಲಿ ಹೀಗಿದ್ದರೇನೇ ಸರ್ವೈವ್ವ್ ಆಗೋದು. ಹೌದು, ನಿನ್ನೆ ರಾತ್ರಿ ಮಲಗುವಾಗ ನಾನು ಹೇಳಿದ್ದಾದರೂ ನೆನಪಿದೆಯಾ...?"
"ಅದೇ ಬೆಳಗ್ಗೆ ತೋಟಕ್ಕೆ ಹೋಗುವಾಗ ನಿನ್ನನ್ನು ಕರೆದುಕೊಂಡು ಹೋಗಬೇಕಾಗಿತ್ತು ಅಲ್ಲವೇ? ಆದರೆ ನೀನೋ ಗಾಢನಿದ್ರೆಯಲ್ಲಿದ್ದಿ. `ಅಯ್ಯೋ ಪಾಪ, ಮುದ್ದಿನ ತಂಗಿ ಪರೀಕ್ಷೆಗಾಗಿ ನಿದ್ದೆಗೆಟ್ಟು ಓದಿ ಬಸವಳಿದಿದ್ದಾಳೆ; ಬೆಳಗಿನ ಸಕ್ಕರೆ ನಿದ್ದೆಯನ್ನು ಹಾಳುಮಾಡುವುದೇಕೆ? ಇನ್ನೂ ತುಸು ಹೊತ್ತು ಮಲಗಲಿ. ಸಾಯಂಕಾಲ ಬಿಸಿಲಿನ ತಾಪ ಕಡಿಮೆಯಾದ ನಂತರ ತೋಟಕ್ಕೆ ಕರೆದುಕೊಂಡು ಹೋದರಾಯಿತು' ಎಂದು ಮನದಲ್ಲೇ ಅಂದುಕೊಂಡು ನಿನ್ನ ನಿದ್ರಾಭಂಗ ಮಾಡಲಿಲ್ಲ ಅಷ್ಟೇ ತಂಗೆಮ್ಮಾ."
"ಹೌದಾ...? ನೀನು ಬಿಟ್ಟು ಹೋಗಿದ್ದಕ್ಕೆ ಬೆಳಗ್ಗೆ ಎಂಟುಗಂಟೆಯವರೆಗೆ ಗಡದ್ದಾಗಿ ಮಲಗಿದ್ದೆ. ಎದ್ದ ನಂತರ ಬ್ರಷ್‍ಮಾಡುತ್ತಾ ವರಾಂಡದಲ್ಲಿ ತಿರುಗಾಡುತ್ತಿದ್ದಾಗ ತಮ್ಮ ಮನೆಯ ಕಂಪೌಂಡ್‍ನಲ್ಲಿ ಸಂಕಲ್ಪಾ ಮಂದನಗೆ ಬೀರುತ್ತಾ ನನ್ನ ಜೊತೆಗೆ ಮಾತಿಗಿಳಿದಳು. ನಿನ್ನೆಯಷ್ಟೇ ಬಂದಿದ್ದಾಳಂತೆ."
"ಬಂದಿರಬಹುದು, ಬಂದಿರಬಹುದು. ಡಾಕ್ಟರ್ ಇನ್ ಆಯುರ್ವೇದಿಕ್ ಮೆಡಿಸಿನ್ಸ್‍ದಲ್ಲಿ ಪದವಿಯನ್ನು ಪಡೆದುಕೊಂಡು ಬಂದಿರಬಹುದು. ಅವಳು ಬಂದಿರುವುದಕ್ಕೂ, ನನಗೂ ಏನು ಸಂಬಂಧ...? ಅದರಲ್ಲೇನು ಅಂಥಹ ವಿಶೇಷತೆ ಇದೆ?"
"ಬೆಳಗ್ಗೆ ಅವಳ ಮಾತುಗಳನ್ನು ಗಮನಿಸಿದರೆ ಅದರಲ್ಲೇನೋ ವಿಶೇಷತೆ ಇದೆ ಎಂದು ನನಗನಿಸಿತು. ಅವಳಿಗೆ ನಿನ್ನೊಂದಿಗೆ ಮಾತಾಡಬೇಕಿದೆಯಂತೆ...?"
"ನನ್ನೊಂದಿಗೆ ಮಾತಾಡುವಂಥಹದ್ದೇನಿದೆ...?"
"ಅದೇನೆಂದು ಗೊತ್ತಿಲ್ಲಪ್ಪ! ಆದರೆ ಅವಳ ಮಾತಿನ ಭಾವದಲ್ಲಿ ಅದೆಂಥಹದೋ ಬೇಡಿಕೆ ಇತ್ತೆಂದು ಹೇಳಬಲ್ಲೆ. ಅದೇನು ಸಂಕಲ್ಪ ಮಾಡಿಕೊಂಡಿದ್ದಾಳೋ ಸಂಕಲ್ಪಾ?"
"ಸಿರಿಗೌರಿ ಈಗಾಗಲೇ ಅದೇನೋ ಸಂಕಲ್ಪ ಮಾಡಿಕೊಂಡು ಪ್ರೀತಿಗಾಗಿ ಮಿಡಿಯುತ್ತಿದ್ದ ನನ್ನೆದೆಗೆ ಒದ್ದು ದೂರ ಸರಿದಿರುವುದು ನಿನಗೆ ಗೊತ್ತೇ ಇದೆ. ಈಗ ಅದೇನು ಹೊಸ ಸಂಕಲ್ಪ ಮಾಡಿರಲಿಕ್ಕೆ ಸಾಧ್ಯವಿದೆ...?"
"ಅಣ್ಣಾ, ಅವಳೀಗ ಪ್ರಮಾಣ ಪತ್ರ ಪಡೆದಿರುವ ಡಾಕ್ಟರ್. ಪ್ರೀತಿಯಲ್ಲಿ ನೊಂದಿರುವ ನಿನ್ನೆದೆಗೆ ಹೊಸ ಮುಲಾಮು ಹಚ್ಚಬಹುದೇನೋ?"      
"ಉರಿಯುವ ಬೆಂಕಿಗೆ ತುಪ್ಪವನ್ನು ಸುರಿಯಬೇಕೆಂದಿರುವಿಯಾ ಸಿರಿ...? ಬೆಕ್ಕಿಗೆ ಚೆಲ್ಲಾಟವಾದರೆ ಇಲಿಗೆ ಪ್ರಾಣ ಸಂಕಟ!"
"ಅಣ್ಣಾ, ನಾನು ಅಂಥಹವಳು ಅಂತ ನಿನಗನ್ನಿಸುತ್ತಿದೆಯೇ...?"
"ಹಾಗೆಂದೂ ಅಂದುಕೊಂಡಿಲ್ಲ."
"ಮತ್ತೆ...? ಇರಲಿ, ಸಂಜೆ ಐದು ಗಂಟೆಗೆ ಹೇಗೂ ನೀನು ತೋಟದಲ್ಲಿಯೇ ಇರುವುದು ನಿತ್ಯದ ದಿನಚರಿಯಲ್ಲವೇ? ಸಂಕಲ್ಪಾಳನ್ನು ತೋಟಕ್ಕೆ ಕರೆದುಕೊಂಡು ಬರುವೆ. ಮಾತುಗಳು ಅದೇನಿದ್ದರೂ ಅವಳಿಗೆ ಗೊತ್ತು, ನಿನಗೆ ಗೊತ್ತು ಅಷ್ಟೇ. ಮಾತು ಮರೆತ ಮನಸುಗಳು ನಿಮ್ಮಿಬ್ಬರವು ಅಲ್ಲವೇ...?"
"ಸರಿ, ಸರಿ. ಸದ್ಯಕ್ಕೆ ನನಗೆ ತಿಂಡಿ ಕೊಡುವಿಯಾ? ಹೊಟ್ಟೆ ತುಂಬಾ ಹಸಿದಿದೆ. ಮತ್ತೆ ಬೇಗ ತೋಟಕ್ಕೆ ಹೊರಡಬೇಕಿದೆ. ತೋಟದಲ್ಲಿ ಬಹಳಷ್ಟು ಜನ ಕೂಲಿಯವರು ಇದ್ದಾರೆ."
"ಆಯಿತು ಬಾ ಅಣ್ಣಾ, ತಿಂಡಿ ಕೊಡುವೆ" ಎಂದೆನ್ನುತ್ತಾ ಸಿರಿಗೌರಿ ತನ್ನಣ್ಣ ಉಮಾಶಂಕರನಿಗೆ ತಿಂಡಿ ಹಾಕಿಕೊಡಲು ಮುಂದಾದಳು. ಜಲಜಾಕ್ಷಿಯವರು ಮಕ್ಕಳಿಬ್ಬರ ಮಾತುಗಳನ್ನು ಮೌನದಲ್ಲೇ ಆಲಿಸುತ್ತಾ ದೋಸೆ ಹೊಯ್ಯುತ್ತಿದ್ದಳು. ತಟ್ಟೆಗೆ ದೋಸೆ, ಆಲೂಪಲ್ಲೆ, ಕಾಯಿಚಟ್ನಿ ಹಾಕಿಕೊಂಡು ಸಿರಿಗೌರಿ ಅಣ್ಣನ ಮುಂದಿಟ್ಟಳು. 
ಸಂಕಲ್ಪಾ ವೈದ್ಯಕೀಯ ಪದವಿ ಬಿಎಎಮ್ಮೆಸ್‍ನ್ನು ಮುಗಿಸಿಕೊಂಡು ಎರಡು ದಿನಗಳ ಹಿಂದೆಯಷ್ಟೇ ಊರಿಗೆ ಬಂದಿದ್ದಳು. ಸಂಕಲ್ಪಾಳ ತಂದೆ-ತಾಯಿಗಳ ಮನೆ ಮತ್ತು ಉಮಾಶಂಕರನ ತಂದೆ-ತಾಯಿಗಳ ಮನೆ ಅಕ್ಕ-ಪಕ್ಕವೇ. ಅವರ ಮನೆಯ ಕಂಪೌಂಡ್ ಇವರ ಮನೆಯ ಕಂಪೌಂಡಿಗೆ ಹತ್ತಿಕೊಂಡೇ ಇದೆ. ಸಂಕಲ್ಪಾಳ ತಂದೆ ಗುರುಶಾಂತಪ್ಪ ಊರಿನಲ್ಲಿ ದೊಡ್ಡ ಕುಳವೇ. ವ್ಯವಸಾಯದ ಜೊತೆಗೆ ಒಳ್ಳೇ ಕಿರಾಣಿ ವ್ಯಾಪಾರವೂ ಇತ್ತು. ಗುರುಶಾಂತಪ್ಪ ಮತ್ತು ಉಮಾಶಂಕರನ ತಂದೆ ಸಂಬಂಧಿಕರೇ. ಸಂಕಲ್ಪಾ ಸಿರಿಗೌರಿಗಿಂತ ಎರಡು ವರ್ಷ ದೊಡ್ಡವಳು. ಉಮಾಶಂಕರನಿಗಿಂತ ಸಂಕಲ್ಪಾ ನಾಲ್ಕೈದು ವರ್ಷ ಚಿಕ್ಕವಳು ಅಷ್ಟೇ. ಸಂಕಲ್ಪಾ ಮತ್ತು ಸಿರಿಗೌರಿ ತುಂಬಾ ಆತ್ಮೀಯ ಗೆಳತಿಯರಾಗಿದ್ದರು ಮೂರು ವರ್ಷಗಳ ಹಿಂದೆ. ಆದರೆ ಈಗ ಇಬ್ಬರಲ್ಲಿ ಅಂಥಹ ಆತ್ಮೀಯತೆ ಉಳಿದಿಲ್ಲ. ಬರೀ ಹಾಯ್, ಬಾಯ್ ಅಷ್ಟೇ ಮುಂದುವರಿದುಕೊಂಡು ಬಂದಿವೆ.
                     ****
ಸಾಯಂಕಾಲ ಐದು ಗಂಟೆಯಾಗಿತ್ತು. "ಸಿರಿ, ತೋಟಕ್ಕೆ ಹೊರಡೋಣವೇ...? ನೀನು ರೆಡಿನಾ...?" ಎಂದೆನ್ನುತ್ತಾ ಸಂಕಲ್ಪಾ ಸಿರಿಗೌರಿಯ ಮನೆಗೆ ಬಂದಾಗ ಸಿರಿಗೌರಿ ತನ್ನಮ್ಮನ ಜೊತೆಗೆ ಮಾತಿಗೆ ಕುಳಿತಿದ್ದಳು.
"ಬಾ ಬಾ ಸಂಕಲ್ಪಾ. ನಿನ್ನ ದಾರಿಯನ್ನೇ ನೋಡುತ್ತಿರುವೆ." ಸಿರಿ ಗೆಳತಿಗೆ ಸ್ವಾಗತ ಕೋರಿದ್ದಳು. 
"ನಮಸ್ತೆ ಆಂಟಿ. ಹೇಗಿರುವಿರಿ...?" ಸಂಕಲ್ಪಾ ಜಲಜಾಕ್ಷಿಯವರ ಜೊತೆಗೆ ಉಭಯಕುಷಲೋಪರಿಗೆ ಮುಂದಾಗಿದ್ದಳು. ಚಹ ಕುಡಿದುಕೊಂಡು ಗೆಳತಿಯರಿಬ್ಬರೂ ತೋಟದ ಕಡೆಗೆ ಹೆಜ್ಜೆ ಹಾಕಿದರು. ಮನೆಯಿಂದ ಬರೀ ಮುಕ್ಕಾಲು ಕಿಮೀ ದೂರ ಅಷ್ಟೇ.  
"ಸಿರಿ, ಒಂದು ಮಾತು ಕೇಳುತ್ತೇನೆ. ತಪ್ಪಾಗಿ ಭಾವಿಸಬಾರದು..." ಸಂಕಲ್ಪಾ ಅನುಮಾನಿಸುತ್ತಾ ಮಾತಿಗೆ ನಾಂದಿ ಹಾಡಿದ್ದಳು ಗೆಳತಿಯೊಂದಿಗೆ ಊರ ಸರಹದ್ದು ದಾಟುತ್ತಿದ್ದಂತೆ.
"ಸಂಕಲ್ಪಾ, ಅನುಮಾನವೇಕೆ? ಅದೇನೆಂದು ಕೇಳು..." ಸಿರಿಯ ದೃಷ್ಟಿ ಸಂಕಲ್ಪಾಳ ಮುಖದಲ್ಲಿ ನೆಟ್ಟಿತ್ತು.
"ನಿಮ್ಮಣ್ಣ ಕೈಯಲ್ಲಿದ್ದ ಕೆಲಸವನ್ನು ಬಿಟ್ಟುಬಂದು ಭೂಮಿತಾಯಿಯ ಸೇವೆಗೆ ನಿಂತುಬಿಟ್ಟಿದ್ದಾನೆ. ಕೃಷಿಯನ್ನೇ ಮುಖ್ಯ ಉದ್ಯೋಗವಾಗಿ ಮಾಡಿಕೊಂಡಿದ್ದಾನಲ್ಲ, ಈ ಕೃಷಿ ಲಾಭದಾಯಕವಾಗಿದೆಯೇ...?"
"ಅಣ್ಣನ ಕೃಷಿ ಲಾಭದಾಯಕವಾಗಿರುವುದರಿಂದಲೇ ನನ್ನ ಬಿಇ ಯಾವುದೇ ಸಾಲವಿಲ್ಲದೇ ಮುಗಿಯುವ ಹಂತದಲ್ಲಿದೆ. ಹೊಟ್ಟೆ-ಬಟ್ಟೆ, ಮಾಮೂಲಿ ಖರ್ಚುಗಳಿಗೇನೂ ತೊಂದರೆ ಇಲ್ಲ. ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ ಎಂಬಂತಿದ್ದೇವೆ ಅಷ್ಟೇ. ಒಂದಂತೂ ಸತ್ಯ ಅಣ್ಣನಿಗೆ ಕೆಲಸದಲ್ಲಿದ್ದಾಗ ಇದ್ದಂಥಹ ಒತ್ತಡ ಮಾತ್ರ ಈಗಿಲ್ಲ. ಅವನೀಗ ಖುಷಿಖುಷಿಯಿಂದ ಇದ್ದಾನೆ. ಬೆಂಗಳೂರಿನ ವಾತಾವರಣಕ್ಕೆ ಅಣ್ಣ ಹೊಂದಿಕೊಂಡಿರಲಿಲ್ಲ. ಅಲರ್ಜಿ ತುಂಬಾ ಕಾಡುತ್ತಿತ್ತು. ಯಾವಾಗಲೂ ರನ್ನಿಂಗ್ ನೋಜ್, ಕೆಮ್ಮು ಅವನನ್ನು ಗೋಳುಹೊಯ್ದುತ್ತಿದ್ದವು. ಮೇಲಾಗಿ ಅಲ್ಲಿ ಹೆಚ್ಚುಕಡಿಮೆ ಬರೀ ನೈಟ್ ಶಿಫ್ಟ್‍ನಲ್ಲಿ ಅವನು ಕೆಲಸ ಮಾಡಬೇಕಾಗಿದ್ದರಿಂದ ನಿದ್ದೆ ಸರಿಯಾಗಿ ಆಗದೇ ತುಂಬಾ ಒದ್ದಾಡಿಬಿಟ್ಟ. ಈಗ ಇಲ್ಲಿ ಅವನಿಗೆ ಕೈತುಂಬಾ ಕೆಲಸ, ಕಣ್ತುಂಬ ನಿದ್ದೆ. ಅಣ್ಣ ಬಸವಣ್ಣ ಹೇಳಿದಂತೆ ಕಾಯಕದಲ್ಲಿ ಕೈಲಾಸ ಕಾಣುತ್ತಿದ್ದಾನೆ. ಇಲ್ಲಿ ಟೆನ್ಸೆನ್ ಫ್ರೀಯಾಗಿದ್ದಾನೆ ಅಂತಾನೇ ಹೇಳಬಹುದು." ಸಿರಿಗೌರಿಯ ಮಾತುಗಳು ಸಂಕಲ್ಪಾಳ ಕಿವಿಯೊಳಗೆ ಇಳಿಯುತ್ತಿದ್ದಂತೆ ಅವಳ ಮನಸ್ಸು ಹಳೆಯ ನೆನಪಿನ ಉಗ್ರಾಣವನ್ನು ಹೊಕ್ಕಿತು.

ಉಮಾಶಂಕರ್ ಮೈಕ್ರೋಬಯಾಲಜಿಯಲ್ಲಿ ಎಂಎಸ್ಸಿ ಮುಗಿಸಿದಾಗ ಸಂಕಲ್ಪಾ ಬಳ್ಳಾರಿಯ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಮೊದಲ ವರ್ಷದ ಬಿಎಎಮ್ಮೆಸ್‍ಗೆ ಸೇರಿಕೊಂಡಿದ್ದಳು. ಸಿರಿಗೌರಿ ಆಗಷ್ಟೇ ಎಸ್ಸೆಸ್ಸೆಲ್ಸಿ ಮುಗಿಸಿ ಮೊದಲನೇ ಪಿಯುಗೆ ಸೇರಿಕೊಂಡಿದ್ದಳು. ಸಿರಿಗೌರಿ ಮತ್ತು ಸಂಕಲ್ಪಾ ಮೊದಲಿನಿಂದಲೂ ಖಾಸಾ ಗೆಳತಿಯರೇ. ಅವಳು ಇವಳ ಮನೆಗೆ ಬರುವುದು, ಇವಳು ಅವಳ ಮನೆಗೆ ತಿರುಗುವುದು ಸಾಮಾನ್ಯವಾಗಿತ್ತಾದರೂ ಸಂಕಲ್ಪಾಳಿಗೆ ಸಿರಿಯ ಮನೆಗೆ ಎಡತಾಕುವುದಕ್ಕೆ ಉಮಾಶಂಕರ್ ಎಂಬ ಆಯಸ್ಕಾಂತವಿತ್ತು. ಉಮಾಶಂಕರ್ ಎಂದರೆ ಸಂಕಲ್ಪಾಳಿಗೆ ತುಂಬಾ ಅಚ್ಚುಮೆಚ್ಚು ಮೊದಲಿನಿಂದಲೂ. ಐದೂ ಮುಕ್ಕಾಲು ಅಡಿ ಎತ್ತರದ ಸ್ಫುರದ್ರೂಪಿ ತರುಣ ಉಮಾಶಂಕರ್. ಎದೆಯ ಮೊಗ್ಗುಗಳು ಹಿಗ್ಗಿದಂತೆ ಸಂಕಲ್ಪಾಳ ಎದೆಯೊಳಗೆ ಕನಸಿನ ಮೆರವಣಿಗೆ ತೇರನೇರಿ ಸಾಗತೊಡಗಿದ್ದವು. ಉಮಾಶಂಕರ್ ತುಂಬಾ ಚೆಲುವನಾಗಿ ಕಾಣತೊಡಗಿದ್ದ. ಪ್ರೀತಿಯ ಸೆಳೆತ ಅವಳೆದೆಯ ಬಡಿತವನ್ನು ಹೆಚ್ಚಿಸಲು ಮುಂದಾಗಿತ್ತು. ಅವನ ನೋಟಕ್ಕೆ ಅವಳ ಮನಸ್ಸು ಹಂಬಲಿಸುತ್ತಿತ್ತು. `ಅವನ ನಗುವಿನ ಹೊಂಬೆಳಕು ಚಂದಿರನ ಬೆಳದಿಂಗಳನ್ನು ನಾಚಿಸುವಂತಿದೆ; ಕಂಗಳ ನೋಟ ಕೋಲ್ಮಿಂಚನ್ನು ಮೀರಿಸುವಂತಿದೆ' ಎಂದು ಕನವರಿಸುತ್ತಿದ್ದಳು ಚೆಲುವೆ ಸಂಕಲ್ಪಾ. ಅವಳ ಹೃದಯದಲ್ಲಿ ಉಮಾಶಂಕರ್ ಒಲವಿನ ಮಳೆಗರೆಯತೊಡಗಿದ್ದ, ಪ್ರೀತಿಯ ಬೆಳೆ ಬಿತ್ತತೊಡಗಿದ್ದ. 
ಎಂಎಸ್ಸಿ ಮುಗಿಯುತ್ತಿದ್ದಂತೆ ಉಮಾಶಂಕರನಿಗೆ ಬೆಂಗಳೂರಿನ ಪ್ರತಿಷ್ಠಿತ ಔಷಧಿ ಕಂಪನಿಯೊಂದರಲ್ಲಿ ಕೆಲಸ ಸಿಕ್ಕಿತ್ತು. ತಂದೆ-ತಾಯಿಗಳ ಶುಭಾಶೀರ್ವಾದ, ಸಿರಿಗೌರಿ ಮತ್ತು ಸಂಕಲ್ಪಾಳ ಶುಭ ಹಾರೈಕೆಗಳೊಂದಿಗೆ ಖುಷಿಖುಷಿಯಿಂದ ಉದ್ಯೋಗಕ್ಕೆ ಸೇರಿಕೊಂಡಿದ್ದ. ಉಮಾಶಂಕರ್ ಬೆಂಗಳೂರಿನಲ್ಲಿ ನೌಕರಿಗೆ ಸೇರಿಕೊಂಡಿದ್ದಕ್ಕೆ ಸಂಕಲ್ಪಾಳೂ ಬಹಳಷ್ಟು ಸಂತಸ ಅನುಭವಿಸಿದ್ದಳು. ಉಮಾಶಂಕರನೊಂದಿಗೆ ಮೊಬೈಲಿನಲ್ಲಿ ಮಾತಾಡುವಾಗ ಸಂಕಲ್ಪಾಳ ಹೃದಯದ ಬಡಿತದಲ್ಲಿ ಏರು-ಪೇರಾಗುತ್ತಿತ್ತು.       
ಸಂಕಲ್ಪಾ ಎರಡನೇ ವರ್ಷದ ಬಿಎಎಮ್ಮೆಸ್‍ಗೆ ಸೇರಿಕೊಂಡಿದ್ದರೆ ಉಮಾಶಂಕರ್ ಒಂದು ವರ್ಷದ ಉದ್ಯೋಗ ಪರ್ವ ಮುಗಿಸಿದ್ದ. ಆ ವರ್ಷ ದಸರಾ ಹಬ್ಬಕ್ಕೆ ಇಬ್ಬರೂ ಊರಿಗೆ ಬಂದಿದ್ದರು. ಪರಸ್ಪರ ಏಕಾಂತದಲ್ಲಿ ಮಾತಾಡಲು ಇಬ್ಬರಿಗೂ ಅವಕಾಶ ಸಿಕ್ಕಾಗ ಸಂಕಲ್ಪಾ ಸದುಪಯೋಗ ಪಡೆಯದೇ ಇರಲಿಲ್ಲ. 
"ಉಮಾ, ಯಾಕೋ ತುಸು ಇಳಿದು ಹೋಗಿರುವ ಹಾಗೆ ಕಾಣುತ್ತಿರುವಿ...? ಬೆಂಗಳೂರಿಗೆ ಹೋದವರೆಲ್ಲರೂ ಪಿಜ್ಜಾ, ಅದೂ-ಇದೂ ತಿಂದು ಗುಂಡಗುಂಡಗೆ ಆಗುತ್ತಿದ್ದಾರೆ. ನೀನು ನೋಡಿದರೆ ಹೀಗೆ! ಅದೇಕೋ...?" ಎಂದು ನಗೆಯಾಡಿದ್ದಳು. ಕಾಲೇಜು ಕಟ್ಟೆ ಏರಿದ ನಂತರ ಅವಳು ಉಮಾಶಂಕರನಿಗೆ ಆತ್ಮೀಯತೆಯಿಂದ, `ಉಮಾ' ಇಲ್ಲವೇ, `ಶಂಕರ್' ಎಂದು ಕರೆಯುವಷ್ಟು ಸಲಿಗೆ ಬೆಳೆಸಿಕೊಂಡಿದ್ದಳು. 
"ಸಂಕಲ್ಪಾ, ಯಾಕೋ ನನಗೆ ಬೆಂಗಳೂರಿನ ಹವಾಮಾನ ಒಗ್ಗುತ್ತಿಲ್ಲ ಕಣೇ. ಬೆಂಗಳೂರಿಗೆ ಹೋದಕೂಡಲೇ ನೆಗಡಿ ಹಿಡಿದು ಬಿಡುತ್ತದೆ. ಜೊತೆಗೆ ಕೆಮ್ಮೂ ಸಹ ಕಾಡಿಸಲು ಪ್ರಾರಂಭಿಸಿದೆ. ಊಟದ ತೊಂದರೆಯನ್ನೂ ಅನುಭವಿಸುತ್ತಿದ್ದೇನೆ. ಕೆಲಸದಲ್ಲಿ ಸಾಕಷ್ಟು ಒತ್ತಡವಿದೆ. ಅದೂ ಅಲ್ಲದೇ ನನಗೆ ರಾತ್ರಿಯಲ್ಲಿ ಪಾಳೆಯಲ್ಲಿ ಕೆಲಸವಿರುವುದರಿಂದ ನಿದ್ದೆಯೂ ಸರಿಯಾಗಿ ಆಗುತ್ತಿಲ್ಲ. ಹೀಗೇ..." ಎಂದು ಉಮಾಶಂಕರ್ ಸಮಜಾಯಿಸಿ ನೀಡಿದ್ದ.
"ಹಾಗೆಂದರೆ ಹೇಗೋ...? ಬೆಂಗಳೂರಿನಲ್ಲಿ ಮನೆಯೂಟ ಬೇಕೆಂದರೆ ಬೇಗ ಮದುವೆಯಾಗಬೇಕು ಅಷ್ಟೇ. ಈಗೀಗ ಎಲ್ಲಾ ಕೆಲಸಗಳಲ್ಲಿ ಒತ್ತಡ ಇದ್ದಿದ್ದೇ. ಒತ್ತಡ ನಿಭಾಯಿಸುವುದನ್ನು ಕಲಿತುಕೊಳ್ಳಬೇಕು ಅಷ್ಟೇ."
"ಏನೋ, ಎಲ್ಲವನ್ನೂ ನಿಭಾಯಿಸಲು ಹರಸಾಹಸ ಮಾಡುತ್ತಿದ್ದೇನೆ. ಕಾದು ನೋಡಬೇಕಷ್ಟೇ."
"ಯಾವುದಕ್ಕೂ ಆರೋಗ್ಯದ ಬಗ್ಗೆ ಗಮನವಿರಲಿ. `ಉಮಾ, ನನ್ನ ಮನದ ತುಂಬೆಲ್ಲಾ ನಿನ್ನದೇ ಬಿಂಬ ತುಂಬಿದೆ. ನನ್ನ ಹೃದಯದ ಗೋಡೆಯ ಮೇಲೆ ನಿನ್ನ ಹೆಸರೇ ರಾರಾಜಿಸುತ್ತಿದೆ. ಆಯ್ ಲವ್ ಯು ಉಮಾ" ಎಂದು ರಾಗವಾಗಿ ಉಲಿದು ತನ್ನೆದೆಯೊಳಗಿನ ತುಡಿತವನ್ನು ಬಯಲಿಗಿಟ್ಟು ಸಂಕಲ್ಪಾ ನವಿರಾಗಿ ಅವನ ಮುಂಗೈಯನ್ನು ಅದುಮಿದ್ದಳು.
"ಸಂಕಲ್ಪಾ, ನನ್ನೆದೆಯೊಳಗೂ ನಿನ್ನ ಬಗ್ಗೆ ಪ್ರೀತಿಯ ಭಾವನೆಗಳು ಹರಿದಾಡುತ್ತಿರುವುದು ನಿಜ. ಆದರೆ, `ಸಂಕಲ್ಪಾ ಎಂಬ ಹೆಣ್ಣು ನನಗೆ ಎಟುಕದ ಹಣ್ಣು' ಎಂದು ಅಂದುಕೊಂಡು ಸುಮ್ಮನಿರುವೆ."
"ಅದೇಕೆ ಹಾಗೆ ಹೇಳುತ್ತಿರುವಿಯೋ...?"
"ನೀವೋ ಆಗರ್ಭ ಶ್ರೀಮಂತರು. ನಿನ್ನ ಹೆತ್ತವರು ಒಪ್ಪಬೇಕಲ್ಲ? ಮೇಲಾಗಿ ನೀನು ಡಾಕ್ಟರಾಗುವವಳು. ನನ್ನಂಥಹ ಎಂಎಸ್ಸೀ ಹುಡುಗ ನಿನಗೆ ಇಷ್ಟವಾಗುವುದು ಕಷ್ಟದ ಮಾತೇ!"
"ಉಮಾ, ಈ ಅನುಮಾನ, ಬಿಗುಮಾನಗಳೆಲ್ಲವನ್ನೂ ಗಾಳಿಯಲ್ಲಿ ತೂರಿಬಿಡು. ಈ ಆಸ್ತಿ-ಅಂತಸ್ತುಗಳು ಪ್ರೀತಿಯ ಪ್ರವಾಹದೆದುರು ಸೆಣಸಲಾರವು. ಹೇಗೂ ನೀನು ನೌಕರಿಯಲ್ಲಿರುವಿ. ನೀನಿರುವಲ್ಲೇ ನನ್ನದೊಂದು ಸಣ್ಣ ಪ್ರ್ಯಾಕ್ಟೀಸ್ ಪ್ರಾರಂಭಿಸಿದರೆ  ಜೀವನ ಆರಾಮದಾಯಕವಾಗಿ ನಡೆಯುತ್ತೆ. ಡೋಂಟ್ ವರಿ, ಮೈ ಹೂಂನಾ...?" ಎಂದೆನ್ನುತ್ತಾ ಸಂಕಲ್ಪಾ ಉಮಾಶಂಕರನನ್ನು ಬಿಗಿದಪ್ಪಿಕೊಂಡು ತನ್ನ ಪ್ರೀತಿಯನ್ನು ಸ್ಪಷ್ಟಪಡಿಸಿದ್ದಳು. ಅಂದಿನಿಂದ ಅವರಿಬ್ಬರೂ ಪ್ರೇಮಿಗಳಾಗಿ ಬಿಟ್ಟರು. ಇವರ ಪ್ರೀತಿಯ ಒಡನಾಟದ ಸುಳಿವು ತುಂಟ ಸಿರಿಗೌರಿಯ ಹೃದಯದರಿವಿಗೆ ಬರದಿರಲಿಲ್ಲ. ಖುಷಿಖುಷಿಯಿಂದ ಅವರ ಪ್ರೀತಿ ಹೆಮ್ಮರವಾಗಿ ಬೆಳೆಯಲು ಉತ್ತೇಜನ ನೀಡಿದಳು. ಸಂಕಲ್ಪಾ ತನ್ನತ್ತಿಗೆಯಾಗಿ ಬರುವುದಕ್ಕೆ ಅವಳಿಗೆ ಅಪರಿಮಿತ ಸಂತಸವಿತ್ತು.
ಆದರೆ ಉಮಾಶಂಕರ್ ಮತ್ತು ಸಂಕಲ್ಪಾ ಅಂದುಕೊಂಡಂತೆ ಆಗಲಿಲ್ಲ. ಉಮಾಶಂಕರನಿಗೆ ಅಲರ್ಜಿ ಉಲ್ಬಣಿಸತೊಡಗಿತು. ಔಷಧೋಪಚಾರಕ್ಕೆ ಮಣಿಯಲಿಲ್ಲ. ನೌಕರಿ ಮಾಡುವುದು ಹಿಂಸೆ ಅನಿಸತೊಡಗಿತು. ಬೆಂಗಳೂರಿನಲ್ಲಿ ಅಲರ್ಜಿ ಅವನನ್ನು ಬಾಧಿಸುತ್ತಿತ್ತು. ಊರಿಗೆ ಬಂದಾಗ ಒಂದೆರಡು ದಿನಗಳಲ್ಲಿ ಅದು ತನ್ನಿಂದ ತಾನಾಗಿಯೇ ಮಾಯವಾಗುತ್ತಿತ್ತು. ಆ ಸಾರೆ ಯುಗಾದಿ ಹಬ್ಬಕ್ಕೆ  ಬಂದಾಗ ಮಗ ಇಳಿದು ಹೋಗಿದ್ದನ್ನು ಕಂಡು ತಾಯಿ ಹೃದಯ ಮಮ್ಮಲ ಮರುಗಿತು.
"ಅಲ್ವೋ ಶಂಕರಾ, ಈ ರೀತಿ ಕಷ್ಟ ಅನುಭವಿಸುತ್ತಾ ಆ ನೌಕರಿ ಮಾಡಲೇಬೇಕೆಂದೇನಾದರೂ ಇದೆಯಾ? ನಿನ್ನ ಆರೋಗ್ಯ ಮುಖ್ಯ ನಮಗೆ. ನಿನ್ನನ್ನು ನೋಡುವುದಕ್ಕಾಗುತ್ತಿಲ್ಲ ನನಗೆ. ಊರಿಗೆ ಬಂದಕೂಡಲೇ ನಿನ್ನ ಆರೋಗ್ಯ ಸುಧಾರಿಸುತ್ತಿದೆ ಎಂದಾದ ಮೇಲೆ ಬೆಂಗಳೂರಿನ ಹವಾಮಾನ ನಿನಗೆ ಒಗ್ಗುತ್ತಿಲ್ಲ ಅಂತಾನೇ ಅಲ್ಲವೇ? ಅಲ್ಲಿದ್ದು ನೀನೇಕೆ ಕೈ, ಬಾಯಿ ಸುಟ್ಟುಕೊಳ್ಳಬೇಕು? ನಮಗಿರುವುದು ನೀನು ಮತ್ತು ಸಿರಿಗೌರಿ. ಗೌರಿ ಕೊಟ್ಟ ಮನೆಯನ್ನು ಬೆಳಗುವವಳು. ಮೂವತ್ತೈದು ಎಕರೆ ಭೂಮಿ ಇದೆ, ಮನೆಯಿದೆ. ಊರಲ್ಲಿದ್ದುಕೊಂಡು ಭೂಮಿತಾಯಿಯನ್ನು ನಂಬಿಕೊಂಡು ದುಡಿದರೆ ಆ ತಾಯಿ ನಮ್ಮ ಜೀವನ ನಡೆಸಲಿಕ್ಕಿಲ್ಲವೇ? ಸದ್ಯಕ್ಕಂತೂ ನಿಮ್ಮಪ್ಪಾಜಿ ಇದನ್ನೇ ಮಾಡುತ್ತಿದ್ದಾರೆ. ಊರ ಮುಂದಿನ ಹಳ್ಳದ ದಂಡೆಯ ಹದಿನೈದು ಎಕರೆ ಹೊಲದಲ್ಲಿ ಬೋರು-ಗೀರು ಹೊಡೆಸಿ ನೀರಾವರಿ ಮಾಡಿದರೆ ಬಂಗಾರದ ಬೆಳೆ ಬೆಳೆಯಬಹುದು. ನಂಬಿದವರ ಕೈ ಬಿಡುವುದಿಲ್ಲ ಭೂದೇವಿ. ಮನಸ್ಸಿದ್ದರೆ ಮಾರ್ಗವಿದೆ. ಛಲವಿದ್ದರೆ ಆ ಭೂಮಿಯಲ್ಲಿ ನೀನು ಏನನ್ನಾದರೂ ಸಾಧಿಸಿ ತೋರಿಸಬಹುದು. ಪ್ರಾಮಾಣಿಕ ಪ್ರಯತ್ನ, ಪರಿಶ್ರಮ, ಶ್ರದ್ಧೆ ಬೇಕು ಅಷ್ಟೇ. ಮಗು, ಆ ನೌಕರಿ ಸಾಕು. ಊರಿಗೆ ಬಂದುಬಿಡು. ನೀನು ನಮ್ಮೊಂದಿಗೆ ಇದ್ದ ಹಾಗೇನೂ ಆಗುತ್ತೆ" ಎಂದಿದ್ದಳು ಜಲಜಾಕ್ಷಿ ಮಗನ ತಲೆಗೂದಲುಗಳಲ್ಲಿ ಹಿತವಾಗಿ ಬೆರಳಾಡಿಸುತ್ತ. 
"ಅಮ್ಮಾ, ಈಗೀಗ ನಾನೂ ಇದನ್ನೇ ಯೋಚಿಸುತ್ತಿದ್ದೇನೆ. ಕೈಯಲ್ಲಿದ್ದ ನೌಕರಿ ಬಿಟ್ಟು ಹುಡುಗ ದುಡುದುಡು ಬಂದುಬಿಟ್ಟ ಅಂತ ನೀವು ಅಂದ್ಕೊಳ್ಳಬಾರದು ಎಂದು ನನ್ನೆದೆಯೊಳಗೇ ಇಟ್ಟುಕೊಂಡು ಕುದಿಯುತ್ತಿರುವೆ. ನನ್ನ ವಿಚಾರಕ್ಕೆ ಈಗ ನಿನ್ನಿಂದ ಚಾಲನೆ ದೊರೆಯುತ್ತಿದೆ. ಮತ್ತೆ ಅಪ್ಪಾಜೀ ಏನನ್ನುತ್ತಾರೆ? ಅದನ್ನೂ ಯೋಚಿಸಬೇಕಲ್ಲವೇ...?"
"ಅವರೇನು ಅನ್ನುತ್ತಾರೆ? ಅವರಿಗೂ ನೀನು ಇಲ್ಲಿಗೆ ಬರಬೇಕೆಂಬ ಹಂಬಲವಿದೆ." ಜಲಜಾಕ್ಷಿ ಮಗನೆದೆಯಲ್ಲಿ ಧೈರ್ಯ ತುಂಬಿದ್ದಳು. ಆ ರಾತ್ರಿ ಊಟದ ಸಮಯದಲ್ಲಿ ಉಮಾಶಂಕರ್ ತನ್ನ ತಂದೆ ಚೆನ್ನವೀರಪ್ಪನವರೊಂದಿಗೆ ವಿಷಯ ಪ್ರಸ್ತಾಪಿಸಿದ್ದ. ಅವರು ಒಂದೇ ಮಾತಿಗೆ ಅನುಮೋದನೆ ನೀಡಿದ್ದರು. ನಂತರ ಉಮಾಶಂಕರ್ ಊರಿಗೆ ಬಂದಿದ್ದ ಬೆಂಗಳೂರಿನ ಸಂಬಂಧ ಕಡಿದುಕೊಂಡು. ಸಿರಿಗೌರಿಯೂ ಸಂತೋಷದಿಂದ ಕುಣಿದಾಡಿದ್ದಳು. ಉಮಾಶಂಕರ್ ಈ ವಿಷಯ ಸಂಕಲ್ಪಾಳಿಗೆ ತಿಳಿಸಿರಲಿಲ್ಲವಾದರೂ ಅವಳ ತಂದೆ-ತಾಯಿಗಳಿಂದ ಮಾಹಿತಿ ಹೋಗಿತ್ತು. ಸುದ್ದಿ ತಿಳಿದ ಸಂಕಲ್ಪಾ ಕೆಂಡಾಮಂಡಲಳಾಗಿದ್ದಳು. ತಕ್ಷಣ ಫೋನಾಯಿಸಿ ಹಿಗ್ಗಾ-ಮುಗ್ಗಾ ಕೈತೆಗೆದುಕೊಂಡಿದ್ದಳು. 
"ಉಮಾ, ಈಗಿನ ಕಾಲದಲ್ಲಿ ನೌಕರಿ ಸಿಗುವುದೇ ಕಷ್ಟ. ನೀನು ಇದ್ದ ನೌಕರಿ ಬಿಟ್ಟು ಬಂದಿರುವಿಯಲ್ಲ, ನಿನ್ನಂಥಹ ಮೂರ್ಖ ಬೇರೆ ಯಾರೂ ಇರಲಿಕ್ಕಿಲ್ಲ. ಹೌದು, ಒಕ್ಕಲುತನದಲ್ಲಿ ಅದೇನು ಲಾಭವಿದೆ ಎಂದು ಓಡೋಡಿ ಬಂದಿರುವಿ? ನಿನ್ನದು ಅವಸರದ, ತಪ್ಪುತಪ್ಪಾದ ಬಾಲಿಶ ನಿರ್ಧಾರ. ಇನ್ನೂ ಕಾಲ ಮಿಂಚಿಲ್ಲ. ಆದಷ್ಟು ಬೇಗ ಬೇರೆ ಕಡೆಗೆ ನೌಕರಿ ಹುಡುಕಿಕೊಂಡು ಆರಾಮದಿಂದ ಇರುವುದನ್ನು ಕಲಿತುಕೊಳ್ಳು. ಬೇಸಾಯ ಮಾಡಿದವರು ಯಾರು ಸುಖದಿಂದ ಇದ್ದಾರೆ...? `ಬೇಸಾಯ ಅಂದ್ರೆ ನೀ ಸಾಯ, ನಾ ಸಾಯ, ಮನೆಮಂದಿ ಸಾಯಾ' ಅಂತ ಹೇಳಿರುವುದು ಸುಳ್ಳಲ್ಲ. ಸರಿಯಾಗಿ ಆಲೋಚಿಸು."
"ಸಂಕಲ್ಪಾ, ನಾನು ಸಾರಾಸಗಟಾಗಿ ಯೋಚಿಸಿಯೇ ಕೃಷಿಕಾಯಕದ ನಿರ್ಧಾರ ತೆಗೆದುಕೊಂಡಿರುವೆ. `ಕೈ ಕೆಸರಾದರೆ ಬಾಯಿ ಮೊಸರು', `ಒಕ್ಕಲಿಗನೊಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ' ಎಂಬ ಸತ್ಯದ ಮಾತುಗಳನ್ನು ಹಿರಿಯರೇ ಹೇಳಿದ್ದಾರೆ. ಮತ್ತೆ ನಾನು ಬೆಂಗಳೂರಿಗೆ ಹೋಗಲಾರೆ. ಮೇಲಾಗಿ ಇದು ನನ್ನ ಆರೋಗ್ಯದ ಪ್ರಶ್ನೆಯೂ ಹೌದು."
"ಇದೇ ನಿನ್ನ ಅಂತಿಮ ನಿರ್ಧಾರವೇ...?"
"ಹೌದು ಸಂಕಲ್ಪಾ."
"ಹಾಗಾದರೆ ನಾನು ನಿನ್ನ ಮೇಲಿನ ಪ್ರೀತಿಯನ್ನು ವಾಪಾಸು ತೆಗೆದುಕೊಳ್ಳುವೆ. ನಿನ್ನಂಥಹ ಕೃಷಿಕನನ್ನು ವರಿಸುವ ವಿಚಾರ ನನಗಿಲ್ಲ. ನನ್ನ ಮೇಲಿನ ಪ್ರೀತಿಯನ್ನು ಉಳಿಸಿಕೊಳ್ಳಬೇಕೆಂದರೆ ನೀನು ನೌಕರಿಯಲ್ಲಿರಬೇಕು ಅಷ್ಟೇ."
"ಇದೇ ನಿನ್ನ ಅಂತಿಮ ನಿರ್ಧಾರವೇ...?"
"ಹೌದು, ಹೌದು, ಹೌದು."
"ಸರಿ ನಿನ್ನಿಷ್ಟ. ನಮ್ಮ ಪ್ರೀತಿಯನ್ನು ಉಳಿಸಿಕೊಳ್ಳುವ ಮನಸ್ಸು ನಿನಗೆ ಇಲ್ಲದ ಮೇಲೆ ನಿನ್ನಂಥಹವಳಿಗಾಗಿ ಹಂಬಲಿಸುವುದು ಮೂರ್ಖತನ. ಬೈ" ಎಂದು ಉಮಾಶಂಕರ್ ಹೇಳುವಷ್ಟರಲ್ಲಿ ಸಂಕಲ್ಪಾಳೇ ಫೋನ್ ಕಟ್‍ಮಾಡಿದ್ದಳು. ಚಿಗುರಿ ಹಬ್ಬಿ ಬೆಳೆಯಬೇಕಿದ್ದ ಸಂಕಲ್ಪಾ-ಉಮಾಶಂಕರರ ಪ್ರೀತಿಯ ಬಳ್ಳಿ ಕಮರಿ ಹೋಗಿತ್ತು ಹೂವು, ಕಾಯಿ, ಹಣ್ಣು ಕೊಟ್ಟು ಸಾರ್ಥಕತೆ ಪಡೆಯುವುದಕ್ಕೆ ಮುಂಚೆ. 
"ಸಂಕಲ್ಪಾ, ನೀನು ಎಲ್ಲೋ ಕಳೆದು ಹೋಗಿರುವ ಹಾಗಿದೆ...? ನಾನು ಹೇಳಿದ್ದನ್ನು ಕೇಳಿಸಿಕೊಂಡೆಯಾ ಹೇಗೆ...?" ಗೌರಿಯ ಮಾತಿನಿಂದ ಸಂಕಲ್ಪಾಳ ಯೋಚನಾ ಸರಪಳಿ ತುಂಡಾಗಿತ್ತು.   
"ಹಾಂ, ಹೂಂ ಗೌರಿ. ನಿನ್ನ ಮಾತುಗಳೆಲ್ಲವನ್ನೂ ಕೇಳಿಸಿಕೊಂಡೆ. ಅದ್ಯಾವುದೋ ವಿಷಯ ಮನಸ್ಸಿನಲ್ಲಿ ಕೊರೆಯುತ್ತಿತ್ತು. ಅದಿರಲಿ, ಉಮಾನ ಕೃಷಿ ಲಾಭದಾಯಕವಾಗಿರುವುದಾದರೆ ಒಳ್ಳೆಯದೇ? ಮತ್ತೆ ಮದುವೆಯ ವಯಸ್ಸು ಮೀರುತ್ತಿದೆಯಲ್ಲ...? ಇನ್ನೂ ಮದುವೆಯಾಗುವ ವಿಚಾರದಲ್ಲಿ ಇಲ್ಲವೇನು ನಿನ್ನಣ್ಣ...?"
"ಅದೇನೋ ಗೊತ್ತಿಲ್ಲ, ಸದ್ಯ ಬೇಡವೆನ್ನುತ್ತಿದ್ದಾನೆ. ಮತ್ತೆ ನಿಂದೂ ಬಿಎಎಮ್ಮೆಸ್ ಮುಗೀತು. ಪ್ರ್ಯಾಕ್ಟೀಸ್ ಎಲ್ಲಿ ಶುರುಮಾಡಬೇಕೆಂದಿರುವಿ? ಅಂಥವಾ ಎಂಡಿ ಮಾಡಬೇಕೆಂದಿರುವಿಯಾ ಹೇಗೆ...? ಮದುವೆ ಬಗ್ಗೆ ಯೋಚಿಸಿರುವಿಯಾ? ಕಾಲೇಜಲ್ಲಿ ಲವ್ವೂ, ಗಿವ್ವೂ... ಎನಿಥಿಂಗ್ ಸ್ಪೆಶಲ್...?"
"ಈಗಷ್ಟೇ ಕೋರ್ಸ ಮುಗಿದಿದೆ. ಬೇರೆ ಯಾವುದರ ಬಗ್ಗೆನೂ ಯೋಚಿಸಿಲ್ಲ. ಲವ್ವೂ-ಗಿವ್ವೂ ಅಂಥಹದ್ದೇನಿಲ್ಲ ಸಿರಿ." ಗೆಳತಿಯರಿಬ್ಬರೂ ಹೀಗೇ ಮಾತಾಡಿಕೊಂಡು ಬರುತ್ತಿರುವಷ್ಟರಲ್ಲಿ ಹಾದಿ ಸವೆದಿತ್ತು. ತೋಟ ಬಂದಿತ್ತು. ಹಾದಿ ಬದಿಯ ಸಸ್ಯಕಾಶಿಯ ಚೆಲುವನ್ನು ಕಣ್ಮನಗಳಲ್ಲಿ ತುಂಬಿಕೊಂಡು ಸಂತಸದಿಂದ ಬೀಗುತ್ತಾ ಹೆಜ್ಜೆ ಹಾಕುತ್ತಿದ್ದರು. ಹಸಿರೆಂದರೆ ಉಸಿರೇ ಎಂಬಷ್ಟು ಖುಷಿ ಅವರಿಗೆ.    

ಸಿರಿಗೌರಿ ಮತ್ತು ಸಂಕಲ್ಪಾ ಬರುತ್ತಿರುವುದನ್ನು ದೂರದಿಂದಲೇ ನೋಡಿದ ಉಮಾಶಂಕರ್, "ಬಾ ಬಾ ಸಂಕಲ್ಪಾ. ಬಹಳ ವರ್ಷಗಳ ನಂತರ ನೀನು ನಮ್ಮ ತೋಟಕ್ಕೆ ಬರುತ್ತಿರುವಿ. ನೀನೀಗ ಡಾ.ಸಂಕಲ್ಪಾ ಅಲ್ಲವೇ? ಹಾರ್ದಿಕ ಅಭಿನಂದನೆಗಳು" ಎಂದೆನ್ನುತ್ತಾ ಅವರ ಹತ್ತಿರ ಬಂದು ಸ್ವಾಗತಿಸಿದ್ದ. ಆತ್ಮೀಯತೆಯ ಭಾವ, ಸ್ನೇಹದ ಸೆಳಕು ಮೇಳೈಸಿದ್ದವು ಅವನ ನಡೆ, ನುಡಿಯಲ್ಲಿ. 
"ಹೌದೌದು ಉಮಾ. ಸುಮಾರು ನಾಲ್ಕು ವರ್ಷಗಳ ನಂತರ ನಿಮ್ಮ ತೋಟಕ್ಕೆ ಕಾಲಿಡುತ್ತಿದ್ದೇನೆ. ನೀನು ಈ ಜಮೀನಿನ ಉಸ್ತುವಾರಿಯನ್ನು ವಹಿಸಿಕೊಂಡ ನಂತರ ಪ್ರಕೃತಿಮಾತೆ, ಹಸಿರುಡುಗೆಯ ಚೆಲುವೆ ನಿನ್ನೀ ಭೂದೇವಿಯ ಮಡಿಲಲ್ಲಿ ಹಾಯಾಗಿ ಪವಡಿಸಿದ್ದಾಳೆ, ನಳನಳಿಸುತ್ತಿದ್ದಾಳೆ ಎಂದೆನಿಸುತ್ತಿದೆ. ತುಂಬಾ ಖುಷಿಯಾಗುತ್ತಿದೆ ನಿನ್ನ ತೋಟದ ಚೆಲುವಿನ ವೈಯಾರವನ್ನು ಕಂಡು. ನನ್ನ ಕಣ್ಮನಗಳು ಸಂತಸದಿಂದ ಬೀಗುತ್ತಿವೆ." ತೋಟದಲ್ಲಿನ ಹಸಿರು ಸಿರಿಗೆ ಸಂಕಲ್ಪಾ ಆನಂದತುಂದಿಲಳಾಗಿದ್ದಳು, ಭಾವಪರವಶಳಾಗಿದ್ದಳು. 
"ಮೊದಲು ತೋಟವನ್ನು ಒಂದು ಸುತ್ತುಹಾಕಿ ಬರೋಣವೇ...?" ಶಂಕರನ ಮಾತಿಗೆ ಇಬ್ಬರೂ ತಲೆದೂಗಿದ್ದರು. ಅಷ್ಟರಲ್ಲಿ ಸಮೀಪದ ಲೇಬರ್ ಶೆಡ್‍ನಲ್ಲಿ ವಾಸಿಸುತ್ತಿದ್ದ ಕೂಲಿಯಾಳು ರಂಗಪ್ಪನ ಮಗಳು ಅನಿತಾ, "ಅಕ್ಕಾ, ಗೌರಿ ಅಕ್ಕಾ, ಅಮ್ಮ ಕರೆಯುತ್ತಿದ್ದಾಳೆ. ತಕ್ಷಣ ಬರಬೇಕಂತೆ..." ಎಂದು ಕೂಗು ಹಾಕಿದ್ದರಿಂದ, "ಅಣ್ಣಾ, ನೀನು ಸಂಕಲ್ಪಾಳಿಗೆ ತೋಟವನ್ನು ತೋರಿಸಿಕೊಂಡು ಬಾ. ನಾನು ರಂಗಪ್ಪನ ಹೆಂಡತಿಯ ಜೊತೆಗೆ ಮಾತಾಡುತ್ತಿರುತ್ತೇನೆ" ಎಂದೆನ್ನುವಷ್ಟರಲ್ಲಿ ಸಂಕಲ್ಪಾ ಗೌರಿಯ ಕಡೆಗೆ ಪ್ರಶ್ನಾರ್ಥಕವಾಗಿ ದೃಷ್ಟಿ ಹರಿಸಿದಳು. 
"ಪರವಾಗಿಲ್ಲ, ಅಣ್ಣನ ಜೊತೆಗೆ ಹೋಗಿ ಬಾ. ಮೇಲಾಗಿ ಶಿವಪೂಜೆಯಲ್ಲಿ ಕರಡಿಯಂತೇಕೆ ನಾನು...?" ಗೌರಿ ಅವಳಿಗೆ ಅಭಯಹಸ್ತ ನೀಡಿದಾಗ ಸಂಕಲ್ಪಾ ಉಮಾಶಂಕರನ ಜೊತೆಗೆ ಮೆಲ್ಲಗೇ ಹೆಜ್ಜೆ ಹಾಕಿದಳು ತೋಟ ಸುತ್ತುವ ತವಕದಲ್ಲಿ. ಕೈಬೀಸಿ ಕರೆಯುತ್ತಿದ್ದ ಹಸಿರು ಸಸ್ಯಕಾಶಿಯ ಸೆಳೆತ ಅವಳೆದೆಯಲ್ಲಿ ಚುಂಬಕರಾಗ ಹಾಡತೊಡಗಿತ್ತು. ಎಂಟೆಕರೆಯಲ್ಲಿ ದಾಳಿಂಬೆ ಫಲವಿಸಿದ್ದರೆ, ನಾಲ್ಕೆಕರೆಯಲ್ಲಿ ಪೇರಲ ಘಮಗುಡುತ್ತಿದ್ದರೆ ಎರಡೆಕರೆಯಲ್ಲಿ ನುಗ್ಗೆ ತೊನೆದಾಡುತ್ತಿತ್ತು ತನ್ನ ಮಾರುದ್ದದ ಕಾಯಿಗಳೊಂದಿಗೆ. ಉಳಿದ ಒಂದೆಕರೆಯಲ್ಲಿ ಮೆಣಸಿನಕಾಯಿ, ಬದನೇಕಾಯಿ ಕಾಯಿಪಲ್ಲೆಗಳು ವಿಜೃಂಭಿಸುತ್ತಿದ್ದವು. ಉಮಾಶಂಕರ್ ನಿಧಾನವಾಗಿ ಬಣ್ಣಿಸತೊಡಗಿದ್ದ ತನ್ನ ಕೃಷಿಯಶೋಗಾಥೆಯನ್ನು. ಸಂಕಲ್ಪಾ ಅಷ್ಟೇ ಕುತೂಹಲದಿಂದ ಆಲಿಸಿ ಆನಂದಿಸತೊಡಗಿದ್ದಳು.

ತೋಟವನ್ನು ಸುತ್ತಿಸುತ್ತ ಉಮಾಶಂಕರ್ ಸಂಕಲ್ಪಾಳನ್ನು ಹೊಲದ ಆಚೆ ಬದಿಗಿದ್ದ ಹಳ್ಳದ ಹತ್ತಿರ ಕರೆದುಕೊಂಡು ಹೋಗಿದ್ದ. ನೀರು ಚೆನ್ನಾಗಿಯೇ ಇತ್ತು ಹಳ್ಳದಲ್ಲಿ. ಬಾಗಿ, ಬಳುಕಿ ವೈಯ್ಯಾರದಿಂದ ಮನಮೋಹಕವಾಗಿ ಜುಳುಜುಳು ನಿನಾದ ಸೃಷ್ಟಿಸುತ್ತ ನಿಧಾನಗತಿಯಲ್ಲಿ ಹರಿಯುತ್ತಿದ್ದಳು ಗಂಗೆ ಗಮ್ಯವನ್ನು ಸೇರಲು. ಎಸ್ಸೆಸ್ಸೆಲ್ಸಿ ಮುಗಿಯುವವರೆಗೆ ಪ್ರತಿ ವರ್ಷ ಕಾರ ಹುಣ್ಣಿಮೆಯ ದಿನ ಬುತ್ತಿ ಕಟ್ಟಿಕೊಂಡು ಸಿರಿ ಮತ್ತು ಗೆಳತಿಯರೊಂದಿಗೆ ಹಳ್ಳಕ್ಕೆ ಬಂದು ಹಳ್ಳದಲ್ಲಿ ನೀರಾಟ, ಚೆಲ್ಲಾಟವಾಡುತ್ತಾ ಸಂಜೆಯವರೆಗೆ ಮುದದಿಂದ ಸಂಭ್ರಮಿಸುತ್ತಿದ್ದ ದಿನಗಳು ಸಂಕಲ್ಪಾಳ ಕಣ್ಣ ಮುಂದೆ ಹಾದು ಹೋಗಿ ಅವಳೆದೆಯಲ್ಲಿ ಕಚಗುಳಿ ಇಟ್ಟವು. ಉಮಾಶಂಕರನ ಮಾತುಗಳಿಗೆ ಅವಳು `ಹೂಂ'ಗುಟ್ಟುತ್ತಿದ್ದರೂ ವಿದ್ಯಾಭ್ಯಾಸ ಮುಗಿಸಿ ಊರಿಗೆ ಬರುವುದಕ್ಕೆ ಒಂದು ವಾರದ ಮುಂಚೆ ಸಹಪಾಠಿ ಗೆಳತಿ ನಿವೇದಿತಾಳೊಂದಿಗೆ ನಡೆದ ಮಾತುಗಳು ಅವಳ ಮನಃಪಟಲದಲ್ಲಿ ಹರಿದಾಡಿದವು.
"ನಿವೇದಿತಾ, ನಮ್ಮ ಸಹಾಯಕ ಪ್ರೊಫೆಸರ್ ಡಾ.ದರ್ಶನ್ ಹೇಗೆ...?" 
"ಯಾಕೆ... ಲವ್ವಾ...?"
"ಏ... ಏ... ಏನೂ ಇಲ್ಲ ಕಣೇ. ಹಾಗೇ ಸುಮ್ಮನೇ ಕೇಳಿದೆ..."
"ನೀನು ದಿಟ್ಟವಾಗಿ ಉತ್ತರಿಸಿದರೆ ನಾನು ಅವನ ಬಗ್ಗೆ ಸ್ಪಷ್ಟ ಮಾಹಿತಿ ಕೊಡುವೆ. ಇಲ್ಲದಿದ್ದರೆ ಇಲ್ಲ ಅಷ್ಟೇ."
"ಲವ್ವಂತಾ ಏನೂ ಇಲ್ಲ. ಆದರೆ ಈ ನನ್ನ ಹುಚ್ಚುಕೋಡಿ ಮನಸ್ಸು ಅವನೆಡೆಗೆ ವಾಲತೊಡಗಿದೆ. ಮಾತಿನಲ್ಲಿ ಮೋಡಿ ಮಾಡುತ್ತಿದ್ದಾನೆ. ಅವನ ಮಾತಿನಲ್ಲಿ ಒಲವಿನ ಒರತೆಯಿದೆ. ಅವನ ನೋಟದ ಚುಂಬಕ ಶಕ್ತಿಗೆ ನನ್ನ ದಿಲ್ ಚಿತ್ ಆಗುತ್ತಿದೆ. ಮೇಲಾಗಿ ಡಾ.ದರ್ಶನ್ ಮೊನ್ನೆಯಷ್ಟೇ ನನಗೆ ಪ್ರೋಪೋಜ್ ಮಾಡಿದ. ಅದಕ್ಕೇ..." 
"ಇಷ್ಟೇನಾ... ಅಥವಾ...? ಡೇಟಿಂಗ್-ಗೀಟಿಂಗ್...? ಮುಟ್ಟುವಿಕೆ-ತಟ್ಟುವಿಕೆ...? ಹಗ್ಗಿಂಗ್-ಗಿಗ್ಗಿಂಗ್ ಅಂತ ನಿನ್ನೆದೆಯೊಳಗೆ ಚಿಲಿಪಿಲಿ ಗಾನ ಹಾಡಿರುವನಾ? ಅಥವಾ ನೀನೇ ಅವನೆದೆಯೊಳಗೆ ಸೇರಿಕೊಂಡು ಪಿಸುಗುಟ್ಟಿರುವಿಯಾ...? ಅಥವಾ ಹಾವಿನಂತೆ ತಳಿಕೆ ಹಾಕಿಕೊಂಡು ಭುಸುಗುಟ್ಟಿದ್ದು ಇದೆಯಾ...?"
"ಅದೆಂಥಹದೂ ಇಲ್ಲ ಮಾರಾಯಿತಿ." 
"ಎನಿವೇ, ಸರಿಯಾದ ಸಮಯದಲ್ಲಿ ಅವನ ಬಗ್ಗೆ ಎನ್ಕೈಯರಿ ಮಾಡುತ್ತಿರುವುದು ಒಳ್ಳೆಯದೇ."
"ಹೌದಾ...? ಅದೇಕೆ...?"
"ಸಂಕಲ್ಪಾ ಈ ಡಾ.ದರ್ಶನ್ ಒಬ್ಬ ಬೇವಕೂಫ್, ಬದ್ಮಾಶ್, ಬೇಇಜ್ಜತ್ ಆದಮಿ ಹೈ." ನಿವೇದಿತಾ ಹೇಳಿದಾಗ ಸಂಕಲ್ಪಾಳಿಗೆ ಅಚ್ಚರಿಯ ಜೊತೆಗೆ ನಿರಾಸೆ.  
"ಏಕೆ...?"
"ಸಂಕಲ್ಪಾ, ಅವನೊಬ್ಬ ರೋಗ್. ಅಚ್ಚ ಕನ್ನಡದಲ್ಲಿ ಹೇಳಬೇಕೆಂದರೆ ಅವನೊಬ್ಬ ಕಚ್ಚೆ ಹರುಕ. ಇಂಟರ್ನಲ್ ಎಕ್ಸಾಂಗಳಲ್ಲಿ  ಹುಡುಗಿಯರ ಎದೆಗೆ ಕೈಹಾಕಲು ಪ್ರಯತ್ನಿಸಿ ಕಪಾಳಮೋಕ್ಷ ಮಾಡಿಕೊಂಡಿದ್ದು ಹೊರಗೆಲ್ಲೂ ಸುದ್ದಿಯಾಗಿಲ್ಲ. ನಮ್ಮ ಜೂನಿಯರ್ ಬ್ಯಾಚಿನ ಹುಡುಗಿರನ್ನು ಗೋವಾಕ್ಕೆ ಕರೆದುಕೊಂಡು ಹೋಗಿ ಸಕತ್ತಾಗಿ ಎಂಜಾಯ್ ಮಾಡುತ್ತಿದ್ದಾನೆ. ಈಗ ನಿನ್ನನ್ನು ಯಾಮಾರಿಸಲು ಹರಸಾಹಸ ಮಾಡುತ್ತಿರುವ ಹಾಗಿದೆ...? ನೀನೇನು ಹೇಳಿದಿ ಅವನ ಪ್ರೋಪೋಜಲ್‍ಗೆ...? ಹಿರಿಹಿರಿ ಹಿಗ್ಗಿರಬೇಕಲ್ಲ ಅವನ ಜೇನಂಥಹ ಮಾತುಗಳಿಂದ...?" 
"ಹಿರಿಹಿರಿ ಹಿಗ್ಗಿದ್ದೇನೋ ನಿಜ. ಅದೇನೋ ಗೊತ್ತಿಲ್ಲ, ಕೊಲ್ಲುವವನಿಗಿಂತ ಕಾಯುವವನು ಮೇಲು ಅಂತ ಹೇಳ್ತಾರಲ್ಲ, ಅದು ನಿಜ. ನಿನ್ನ ಜೊತೆಗೆ ಮಾತಾಡಿ ನನ್ನ ಮನದಿಂಗಿತವನ್ನು ಬಿಚ್ಚಿಡಲು ಮನಸ್ಸು ತೀರ್ಮಾನಿಸಿತು. ಯೋಚನೆ ಮಾಡಲು ಸಮಯದ ಅವಕಾಶ ಕೇಳಿದೆ ಅಷ್ಟೇ."
"ಸಮಯೋಚಿತ ಬೆಸ್ಟ್ ಡಿಸಿಜೆನ್." 
"ಹೌದು, ನೀನೇನಾದರೂ ಅವನ ಪ್ರೀತಿಯ ಸುಳಿಗೆ ಸಿಲುಕಿದ್ದೆಯಾ ಹೇಗೆ...?"
"ಥೂ! ಸಂಕಲ್ಪಾ, ಅವನನ್ನು ಲವ್ ಮಾಡೋವಷ್ಟು ಮೂರ್ಖಳಲ್ಲ ನಾನು. ನಾನು ಈಗಾಗಲೇ ನನ್ನ ಪ್ರೀತಿಯ ಹುಡುಗನ ಬಗ್ಗೆ ಹೇಳಿಕೊಂಡಿರುವೆ. ಅದು ಅಚಲ. ನನ್ನ ಪ್ರೇಮಿ ಒಬ್ಬ ರೈತ ಅಂತ ಹೇಳಿಕೊಳ್ಳುವುದಕ್ಕೆ ನನ್ನೆದೆ ಉಕ್ಕಿ ಬರುತ್ತಿದೆ, ಅಭಿಮಾನದಿಂದ ಹೃದಯ ಸಂಭ್ರಮಿಸುತ್ತಿದೆ. ಇರಲಿ, ನೀನೂ ನಿನ್ನ ಮಾಜಿ ಲವ್ವರನ ಬಗ್ಗೆ ಹೇಳಿದ್ದು ನನಗೆ ಪಕ್ಕಾ ನೆನಪಿದೆ. ಅವನು ಬೆಂಗಳೂರಿನಲ್ಲಿನ ತನ್ನ ನೌಕರಿ ಬಿಟ್ಟು ಊರಿನಲ್ಲಿ ಕೃಷಿ ಮಾಡುತ್ತಿರುವುದಕ್ಕೆ ಅವನಿಂದ ದೂರಾಗಿರುವಿ ಎಂದು ಹೇಳಿದ್ದೂ ನನ್ನ ನೆನಪಿನ ಉಗ್ರಾಣದಲ್ಲಿ ತಳವೂರಿ ಕುಳಿತಿದೆ. ಅವನ ಹೆಸರು ಅದೇನೋ `ಉಮಾ', `ಶಂಕರ್' `ಉಮಾಶಂಕರ್' ಅಂತ ಹೇಳಿದ್ದೂ ನೆನಪಿನಲ್ಲಿ ಇದೆ. ಅವನೊಬ್ಬ ಆದರ್ಶ ವ್ಯಕ್ತಿ, ಕೃಷಿಯಲ್ಲಿ ಸಾಧಕ, ಮದುವೆಯಾಗದೇ ಇರುವ ಒಂಟಿ ಸಲಗ ಎಂದು ತುಸು ದಿನಗಳ ಹಿಂದೆಯಷ್ಟೇ ಹೇಳಿರುವಿ. ಮೋಸ್ಟ್ಲಿ ಅವನು ನಿನ್ನ ಪ್ರೀತಿಯನ್ನು ಮರೆತಿರಲಾರ. ಅದಕ್ಕೇ ಇನ್ನೂ ಮದುವೆಯಾಗಿಲ್ಲವೆಂದು ಅನಿಸುತ್ತಿದೆ. ಅಂಥಹ ಸಭ್ಯ, ಶ್ರೇಷ್ಠ ವ್ಯಕ್ತಿಯನ್ನು ಕಳೆದುಕೊಳ್ಳುತ್ತಿರುವ ನೀನೊಬ್ಬ ಮಹಾಮೂರ್ಖಳು ಅಷ್ಟೇ. ಈಗಲೂ ಕಾಲ ಮಿಂಚಿಲ್ಲ. ಅವನೆದೆಯ ಗಾಯಕ್ಕೆ ಪ್ರೀತಿಯ ಮುಲಾಮು ಹಚ್ಚಿ ಅವನನ್ನು ನಿನ್ನವನನ್ನಾಗಿ ಮಾಡಿಕೊಳ್ಳುವುದು ಜಾಣತನ ಅಂತ ನನ್ನ ಅನಿಸಿಕೆ. ಹೇಗೂ ನಿನ್ನೂರು ತಾಲೂಕು ಕೇಂದ್ರ. ಊರಲ್ಲೇ ನಿನ್ನ ವೈದ್ಯಕೀಯ ವೃತ್ತಿ ಆರಂಭಿಸಬಹುದು. ನಿನ್ನೆದೆಯಾಳುವವನು ಹಗಲಿರುಳೂ ನಿನ್ನ ಜೊತೆಗೇ ಇರುತ್ತಾನೆ. ಮತ್ತಿನ್ನೇನು ಬೇಕು ಪ್ರೀತಿಯ ಜೀವನಕ್ಕೇ...? ಇಷ್ಟು ಸಾಕು ತಾನೇ? ಪ್ರೀತಿಯೇ ಜೀವನ ಎಂಬುದನ್ನು ಮರೆಯಬೇಡ. ಮರೆತು ಮರುಗಬೇಡ. ಆ ಹುಡುಗನ ಪ್ರಾಂಜಲ ಪ್ರೀತಿಗೆ ಮೋಸ ಮಾಡಬೇಡ. ಹುಷಾರ್! ದೃಢ ಸಂಕಲ್ಪ ಮಾಡು ಸಂಕಲ್ಪಾ." 
"ನಿವೇದಿತಾ, ಇವು ನಿನ್ನ ಮನದಾಳದ ಮಾತುಗಳೇ...?"
"ಹೌದು ಸಂಕಲ್ಪಾ. ಆಲ್ ದಿ ಬೆಸ್ಟ್" ಎಂದೆನ್ನುತ್ತಾ ನಿವೇದಿತಾ ಸಂಕಲ್ಪಾಳನ್ನು ಆಲಂಗಿಸಿ ಹಾರೈಸಿದಾಗ ಅವಳ ಮನದಂಗಳಲ್ಲಿ ನಗೆಮೂಡಿ ಅಚಲವಾಗಿ ನಿಂತಿತು. 

"ಹಳ್ಳದ ನೀರಿನಲ್ಲಿಳಿದು ತಣ್ಣಗಿನ ನೀರನ್ನು ಮುಖಕ್ಕೆರಚಿಕೊಂಡಾಗ ಸಂಕಲ್ಪಾಳಿಗೆ ತುಂಬಾ ಹಾಯೆನಿಸಿತು. ಅವಳ ಮುಖದಲ್ಲಿನ ಸಂತೃಪ್ತಿಭಾವವನ್ನು ಕಂಡು ಉಮಾಶಂಕರ್ ಸಂಭ್ರಮಿಸಿತೊಡಗಿದ್ದ.
"ನಿನ್ನ ತೋಟ ನೋಡಿ ತುಂಬಾ ಖುಷಿಯಾಯಿತು. ನಿನ್ನ ಸಾಧನೆಯನ್ನು ಕಂಡು ಎದೆಯುಬ್ಬಿ ಬರುತ್ತಿದೆ. ಶಂಕ್ರೂ, ಒಂದೆರಡು ಪರ್ಸನಲ್ ಮಾತು ಕೇಳಲೇ...?" ಎದೆಯಲ್ಲಿ ಆತ್ಮೀಯ ಭಾವ ಪುಟಿದೇಳುತ್ತಿದ್ದಾಗ `ಶಂಕ್ರೂ' ಎಂದು ಉಮಾಶಂಕರನನ್ನು ಸಂಬೋಧಿಸುವುದು ಅವಳಿಗೆ ಮೊದಲಿನಿಂದಲೂ ರೂಢಿ.
"ಅದೇನೆಂದು ಕೇಳು. ಸಂಕೋಚವೇಕೆ?"
"ಶಂಕ್ರೂ, ಇನ್ನೂ ಮದುವೆಯಾಗುವ ಮನಸ್ಸಿಲ್ಲವೇ...?"
"ಈಗಿನ ಕಾಲದಲ್ಲಿ ಹುಡುಗಿಯರ ಸಂಖ್ಯೆಯೇ ಕಡಿಮೆ. ಅಂಥಹುದರಲ್ಲಿ ಈ ರೈತನನ್ನು ವರಿಸಲು ಹೆಣ್ಣುಗಳು ಮುಂದೆ ಬರುತ್ತಾರೆಯೇ...? ನನಗೂ ಸದ್ಯ ಮನಸ್ಸಿಲ್ಲ."
"ನೀನು ಹೇಳುತ್ತಿರುವುದು ಭಾಗಶಃ ಸುಳ್ಳು ಎಂದು ನನಗೆ ಮನದಟ್ಟಾಗಿದೆ. ಒಳ್ಳೊಳ್ಳೆ ರೂಪಸಿಯರ ಪ್ರೋಪೋಜಲ್‍ಗಳು ಬಂದಿದ್ದವು ಎಂದು ನನಗೆ ತಿಳಿದಿದೆ..."
"ಸದ್ಯಕ್ಕೆ ಮದುವೆಯಾಗುವ ಮನಸ್ಸಿಲ್ಲವೆಂದು ಆಗಲೇ ಹೇಳಿದೆನಲ್ಲ...? ನಾನು ಕೃಷಿಯಲ್ಲಿ ಸಾಧಿಸುವುದು ಬಹಳಷ್ಟಿದೆ. ಮುಂದೆ ನೋಡುವಾ?"
"ಅಂದರೆ ಈ ಸಂಕಲ್ಪಾಳನ್ನು ನೀನು ಮರೆತಿರುವ ಹಾಗೆ ಕಾಣುವುದಿಲ್ಲ ಅಲ್ಲವೇ...?"
"ಹಾಗೇ ತಿಳಿದುಕೋ. ನನ್ನ ಅಭ್ಯಂತರವೇನಿಲ್ಲ."
"ಬೇರೆ ಯಾವ ಹುಡುಗಿಯೂ ನಿನ್ನ ಮನಸ್ಸನ್ನು ತುಂಬಲಿಲ್ಲವೇ...?"
"ನಾನು ಜೀವನದಲ್ಲಿ ಇಷ್ಟಪಟ್ಟು ಪ್ರೀತಿಸಿದ್ದು ಒಬ್ಬಳನ್ನೇ. ಹಾಗಿರುವಾಗ ಇನ್ನೊಬ್ಬಳು ನನ್ನ ಮನಸ್ಸನ್ನು ತುಂಬುವ ಪ್ರಶ್ನೆಯೇ ಉದ್ಭವಿಸುವುದಿಲ್ಲ."
"ನಿನ್ನ ಪ್ರೀತಿಯ ಹುಡುಗಿ ಇನ್ನೊಬ್ಬನನ್ನು ಮದುವೆಯಾಗಿ ಹಾಯಾಗಿರುವುದಾದರೂ ನೀನು ಮದುವೆಯಾಗುವುದಿಲ್ಲವೇ...?"
"ಅವಳ ಸುಖವೇ ನನ್ನ ಸುಖ ಎಂದುಕೊಳ್ಳುವೆ."
"ಮನುಷ್ಯ ಇಷ್ಟು ಭಾವುಕನಾಗಬಾರದು...?"
"ನಾನು, ನನ್ನ ಭಾವನೆಗಳು ಅಷ್ಟೇ."
"ಹಾಗಾದರೆ ಹೀಗೆ ಮಾಡುವಾ...?" ಎಂದೆನ್ನುತ್ತಾ ಉಮಾಶಂಕರನನ್ನು ಬಿಗಿದಪ್ಪಿಕೊಂಡು, "ಈ ನನ್ನೆದೆಯ ಬಡಿತಕ್ಕೆ ನಿನ್ನೆದೆಯ ಬಡಿತವೇ ಇಷ್ಟವಂತೆ. ಹೀಗಾಗಿ ನನ್ನೆದೆ ನಿನ್ನೆದೆಯೊಂದಿಗೆ ಈಗ ಪಿಸುಮಾತಿಗಿಳಿದಿದೆ. ಕೇಳಿಸುತ್ತಿದೆ ತಾನೇ...? ನೀನಿಲ್ಲವೆಂದರೆ ನಾನಿರಲು ಸಾಧ್ಯವೇ...?" ಎಂದೆನ್ನುತ್ತಾ ಸಂಕಲ್ಪಾ ಮೊಗವೆತ್ತಿ ಉಮಾಶಂಕರನ ಮುಖದಲ್ಲಿನ ಭಾವನೆಗಳನ್ನು ಓದತೊಡಗಿದಳು. 
"ಸ್ಪಷ್ಟವಾಗಿ ಕೇಳಿಸುತ್ತಿದೆಯಲ್ಲ...?" ಎಂದೆನ್ನುತ್ತಾ ಉಮಾಶಂಕರ್ ಅವಳೆದೆಯಲ್ಲಿ ಮುಖವಿರಿಸಿ ಸಂಭ್ರಮಿಸತೊಡಗಿದಾಗ ಸಂಕಲ್ಪಾಳ ಎದೆಯಲ್ಲೂ ಸಂಭ್ರಮದಲೆಗಳ ಮಿಡಿತ ಆಕಾಶದೆತ್ತರಕ್ಕೆ ಪುಟಿಯತೊಡಗಿದ್ದವು.
"ಅಣ್ಣಾ, ಎಲ್ಲಿರುವಿರಿ...?" ಸಿರಿಗೌರಿ ಕೂಗು ಹಾಕುತ್ತಾ ಇವರತ್ತ ಹೆಜ್ಜೆ ಹಾಕತೊಡಗಿದಾಗ ಆಗಷ್ಟೇ ಸಂಕಲ್ಪಾ ಉಮಾಶಂಕರನ ಅಪ್ಪುಗೆಯಿಂದ ಹೊರಬರುತ್ತಿದ್ದುದನ್ನು ಗಮನಿಸಿ, `ಈ ದಿನ ಮಹಾಸುದಿನ. ಈ ಬೆಸುಗೆ ಚಿರಂತನವಾಗಿರಲಿ’ ಎಂದು ಹಾರೈಸುತ್ತಾ ಅವರಿಬ್ಬರನ್ನು ಸಮೀಪಿಸಿದಾಗ ಹಕ್ಕಿಗಳ ಚಿಲಿಪಿಲಿ ಗಾನದ ಶುಭ ಹಾರೈಕೆ ಮುಗಿಲು ಮುಟ್ಟುವಂತಿತ್ತು. 


* ಶೇಖರಗೌಡ ವೀ ಸರನಾಡಗೌಡರ್, 
ತಾವರಗೇರಾ-583279, ತಾ : ಕುಷ್ಟಗಿ, ಜಿ : ಕೊಪ್ಪಳ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ನೀನಿಲ್ಲವೆಂದರೆ…”

  1. N.K.Dalabanjan

    A very beautiful love story with fantastic narration.I hope those who read this story will also hear inner voice of the writer. Congratulations sir👍👍🙏🙏

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter