ಮುಖ

“ನಮಸ್ಕಾರ”
ದನಿ ಕೇಳಿದೊಡನೆ ಹಜಾರದಲ್ಲಿ ಅಗಲ ಬೆತ್ತದ ಕುರ್ಚಿಯ ಮೇಲೆ ಕುಳಿತು ಕಾಲು ಚಾಚಿಕೊಂಡಿದ್ದ ನಂಜುಂಡ ತನ್ನ ಮುಖಕ್ಕೆ ಅಡ್ಡವಾಗಿ ಹಿಡಿದ ಪತ್ರಿಕೆಯನ್ನು ಕೆಳಕ್ಕೆ ಸರಿಸಿ ನೋಡಿದ. “ಯಾರು?” ಥಟ್ಟನೆ ಏನೋ ಹೊಳೆದಂತೆ “ಹ್ಞಾ! ಪೇಪರಿನವರೋ? ಬನ್ನಿ ಕೂತ್ಕೊಳ್ಳಿ” ಎನ್ನುತ್ತಾ ಸೋಫಾದ ಕಡೆ ಬೊಟ್ಟು ಮಾಡಿ “ನಿನ್ನೆ ಫೋನಲ್ಲಿ ಮಾತಾಡಿದ್ದೆವಲ್ಲ ನಾವು? ಅಂದ ಹಾಗೆ ಹೆಸರೇನಂದ್ರಿ ನೀವು?” ಎಂದ.
“ಶಿವದಾಸ”
“ಹ್ಞಾ! ಅಂದ ಹಾಗೆ ಶಿವದಾಸ, ಮೊದಲೇ ಹೇಳಿಬಿಡ್ತೇನೆ. ಪೇಪರಿನವರು ತುಂಬ ಸತಾಯಿಸ್ತಿದ್ದಾರೆ ನನ್ನನ್ನು. ಅವತ್ತೊಬ್ಬರ ಬಳಿ ಬಾಯಿತಪ್ಪಿ ಹೀಗೇ ಒಂದು ವಿಷಯ ಹೇಳಿದ್ದುಂಟು. ಪೇಪರಲ್ಲಿ ಬಂದು ಪ್ರಚಾರವಾಗಲಿ ಅಂತಲ್ಲ. ಹಾಗೆಲ್ಲ ಆಗ್ತದೆ ಅಂತ ಗೊತ್ತಿದ್ರೆ ನಾನು ಹೇಳ್ತಿರಲಿಲ್ಲ. ಈಗ ನೋಡಿ, ಮೊನ್ನೆಯಿಂದ ಅವರಿವರು ಬಂದು ‘ಅದು ಹೌದೊ ಇದು ಹೌದೊ’ ಅಂತ ಕೇಳಿ ಉಪದ್ರ ಕೊಡ್ತಿದ್ದಾರೆ. ನೀವೀಗ ಎಷ್ಟನೆಯವರೋ ಗೊತ್ತಿಲ್ಲ. ನಾನ್ಯಾಕೆ ಆ ಸಂಗತಿ ಹೇಳಿದೆ ಅಂತ ಈಗ ಬೇಜಾರಾಗ್ತದೆ. ಆದ್ರೆ ಸುಳ್ಳು ಹೇಳಿ ನಂಗೇನಾಗ್ಬೇಕು ಹೇಳಿ”
ಸರಿಯಾಗಿ ಪರಿಚಯ ಆಗುವ ಮೊದಲೇ ಎಂಥ ಮಾತುಗಳಪ್ಪ ಎಂದು ಶಿವದಾಸನಿಗೆ ಪಿಚ್ಚೆನಿಸಿದರೂ ಮುಜುಗರವನ್ನು ತೋರಿಸಿಕೊಳ್ಳದೆ ಹೇಳಿದ “ನೋಡಿ ನಂಜುಂಡನವರೇ, ನಾನು ಹಾಗೆಲ್ಲ ಕಿರಿಕಿರಿ ಮಾಡಲು ಬಂದವನಲ್ಲ. ನಿನ್ನೆ ನನ್ನ ಆಫೀಸಿಗೆ ನೀವು ಫೋನ್ ಮಾಡಿ ‘ರಜತಗಿರಿಯ ತಪ್ಪಲಲ್ಲಿ ಈಗಲೂ ವಾಸವಾಗಿರುವ ಕಾಡುಮನುಷ್ಯರ ಬಗ್ಗೆ ಮಾತನಾಡೋದಕ್ಕಿದೆ. ಅದರ ಬಗ್ಗೆ ಲೇಖನ ತಯಾರು ಮಾಡಿದ್ರೆ ತುಂಬಾ ಉಪಕಾರವಾಗ್ತದೆ’ ಅಂತ ಹೇಳಿದ್ದರಿಂದ ಬಂದಿದ್ದೇನೆ. ಸಾಧ್ಯವಿದ್ದರೆ ಈಗಲೇ ಹೊರಟುಬಿಡೋನು. ರಜತಗಿರಿ ಬೆಟ್ಟ ಹೇಗೂ ಇಲ್ಲೇ ಸಮೀಪದಲ್ಲಿದೆ. ಕಾಡುಬೆಟ್ಟಗಳನ್ನೆಲ್ಲ ಒಮ್ಮೆ ನೋಡಬೇಕು. ನಿಮ್ಮ ಮಾತಿಗೆ ತಕ್ಕ ಪುರಾವೆ ಹುಡುಕಬೇಕು. ಹಾಗಾಗಿ ಕೆಲವೊಮ್ಮೆ ಮಾತುಕತೆ ನಡೆಸಬೇಕಾಗಿಯೂ ಬಂದೀತು. ಅದೆಲ್ಲ ತೊಂದರೆ ಅಂತ ಭಾವಿಸಿ ಸುಮ್ಮನೆ ಕೂತ್ರೆ ಲೇಖನ ಪರಿಣಾಮ ಬೀರಲಿಕ್ಕಿಲ್ಲ. ಆದಷ್ಟು ಸಾಕು ಅಂತ ಮನಸ್ಸಲ್ಲಿದ್ರೆ ನೀವು ನನ್ನೊಟ್ಟಿಗೆ ಬರೋದು ಬೇಡ. ಕಾಡುಮನುಷ್ಯರನ್ನು ಕಂಡದ್ದೆಲ್ಲಿ ಅಂತ ಹೇಳಿದ್ರೆ ಸಾಕು. ಒಬ್ಬನೇ ಹೋಗ್ತೇನೆ”
ಅದನ್ನು ಕೇಳುತ್ತಿದ್ದಂತೆ ನಂಜುಂಡನ ಮುಖದಲ್ಲಿ ಅಸಮಾಧಾನದ ಗಂಟುಗಳು ಹೆಚ್ಚಾದವು. ಅಗಲವಾದ ಗಡ್ಡದಲ್ಲಿ ಮೊಳೆತ ರೋಮಗಳನ್ನು ಸವರುತ್ತಾ ತುಸು ಹೊತ್ತು ಧ್ಯಾನಸ್ಥನಂತೆ ಕುಳಿತುಕೊಂಡ. ಕಣ್ಣು ತೆರೆದ ಬಳಿಕ ಮೋರೆ ಸಡಿಲವಾದಂತೆನಿಸಿತು. ಒಳಗೆ ನೋಡುತ್ತಾ ಗಟ್ಟಿದನಿಯಲ್ಲಿ ಹೇಳಿದ “ಹೆಣ್ಣೇ, ಬಾಯಾರಿಕೆಗೇನಾದ್ರೂ ಕೊಡು ಇವರಿಗೆ”
ಸ್ವಲ್ಪ ಹೊತ್ತಿನ ಬಳಿಕ ಒಳಗಿನಿಂದ ಗೆಜ್ಜೆಗಳ ದನಿ ಕೇಳಿಬರುತ್ತಿದ್ದಂತೆ ಶಿವದಾಸನ ಕಣ್ಣುಗಳು ಅತ್ತ ಕಡೆ ನೆಟ್ಟವು. ಅಬ್ಬ! ಎಂಥ ಸುಂದರ ಯುವತಿ. ದೀರ್ಘವಾದ ರೆಪ್ಪೆಯ ಕೆಳಗೆ ಹೊಳೆಯುವ ಕಣ್ಣುಗಳು. ಗೋಧಿ ಬಣ್ಣದ ಮುಖದಲ್ಲಿ ಕುಂಕುಮದಿಂದ ಬರೆದಂಥ ತುಟಿ. ತಟ್ಟೆಯಲ್ಲಿ ತಿಂಡಿ ಮತ್ತು ಕಾಫಿ ಲೋಟಗಳನ್ನು ಹಿಡಿದ ನೀಳವಾದ ಬೆರಳುಗಳು. ಕಪ್ಪು ಬಣ್ಣದಿಂದ ಮಿನುಗುವ ಕೂದಲರಾಶಿ. ಗಂಭೀರವಾದರೂ ಮೃದುವಾದ ಮುಖ. ಅಷ್ಟು ಎತ್ತರವೂ ಅಲ್ಲದ, ತೀರಾ ಗಿಡ್ಡವೂ ಅಲ್ಲದ ಕಾಂತಿಯಿಂದ ಬೆಳಗುವ ಪ್ರಮಾಣಬದ್ಧ ಮೈ.
“ಕಾವೇರಿ, ಇವರು ಶಿವದಾಸ್. ‘ಉದಯಸೂರ್ಯ’ ಪೇಪರಿನೋರು”
ನಂಜುಂಡ ಹಾಗೆನ್ನುತ್ತಲೇ ಶಿವದಾಸನ ಮೈಯಲ್ಲಿ ಮಿಂಚು ಹರಿದಂತಾಯಿತು. ಇವಳೇನಾ ಕಾವೇರಿ? ನನ್ನ ನೆರೆಮನೆಯಲ್ಲಿದ್ದ ಕಾವೇರಿ? ಗುರುತೇ ಸಿಗುತ್ತಿಲ್ಲವಲ್ಲ! ಅದ್ಭುತವನ್ನು ಕಂಡ ಅಚ್ಚರಿಯ ನಗೆಯೊಂದಿಗೆ ‘ನಮಸ್ತೆ’ ಎಂದಾಗ ತುಟಿಯಂಚಿನಲ್ಲಿ ಬಿಗುಮಾನದ ಕಿರುನಗೆಯನ್ನು ಸೂಸುತ್ತಾ ‘ನಮಸ್ಕಾರ’ ಎಂದಷ್ಟೇ ಹೇಳಿ, ಎರಡು ಹೆಜ್ಜೆ ಹಿಂದೆ ಸರಿದು ಹಜಾರದ ಬಾಗಿಲ ಚೌಕಟ್ಟಿಗೆ ಮೈ ಒರಗಿಸಿ ನಿಂತಳು. ಏನಿದು? ನನ್ನನ್ನೇಕೆ ಅಪರಿಚಿತನಂತೆ ನೋಡುತ್ತಿದ್ದಾಳೆ? ಗುರುತು ಸಿಗಲಿಲ್ಲವೇ? ಎಂದುಕೊಂಡ. ಆಘಾತವಾಯಿತೇ? ಆತಂಕವಾಯಿತೇ? ಗಾಬರಿಯಾಯಿತೇ? ಗೊತ್ತಾಗಲಿಲ್ಲ ಅವನಿಗೆ. ಸುಮ್ಮನೆ ಅವಳ ಮುಖವನ್ನೇ ಓದುತ್ತಿದ್ದ. ಎಷ್ಟು ವರ್ಷವಾಯಿತು? ನಾನೂ ಅವಳೂ ಕೂಡಿ ಆಡಿದ್ದು ಬೆಳೆದದ್ದು…
ಆಕೆ ಹೀಗೇ ಕಣ್ಣು ತಪ್ಪಿಸಿ ಹೊರಗೆ ನೋಡಿದಾಗ, ಬೆನ್ನಿಗೇ ನಂಜುಂಡನೊಮ್ಮೆ ಗಂಟಲು ಕೆರೆದಾಗ ಶಿವದಾಸ ಕಿಡಿ ತಗುಲಿದಂತೆ ಎಚ್ಚರಗೊಂಡ. ಹೇಗೆ ಮಾತನಾಡಿಸುವುದೆಂದು ತಿಳಿಯದೆ ಚಹಾದ ಲೋಟವನ್ನು ತುಟಿಗಿರಿಸುತ್ತಿದ್ದಂತೆ ನಂಜುಂಡ ಆಕೆಯನ್ನೊಮ್ಮೆ ದುರುಗುಟ್ಟಿ ನೋಡಿದಂತೆನಿಸಿತು. ಆಕೆ ಮಾತಿಲ್ಲದೆ ಒಳಗೆ ನಡೆದಳು.
“ರಜತಗಿರಿಯ ತಪ್ಪಲಲ್ಲಿ ಕಾಡುಮನುಷ್ಯನ ಕುಟುಂಬ ಈಗಲೂ ಉಳಿದುಕೊಂಡು ಬಂದಿದೆ ಅನ್ನುತ್ತೀರೋ ನೀವು?”
ನಂಜುಂಡನ ಮನಸ್ಸನ್ನು ಸೆಳೆಯುವ ಉದ್ದೇಶದಿಂದ ಶಿವದಾಸ ಪ್ರಶ್ನಿಸಿದ.
“ಹೌದು ಅಂತ ಕಾಣ್ತದೆ. ಇಲ್ಲಿಂದಾಚೆಗೆ ಗಾಳಿ ಬೆಳಕು ಸರಿಯಾಗಿ ಕಾಣದ ಕಾಡು ಇದೆ. ಕೆಲವೊಮ್ಮೆ ಹುಲಿ ಕರಡಿಗಳು ಕಾಣಿಸಿಕೊಂಡದ್ದೂ ಉಂಟು. ಒಂದುದಿನ ಹೀಗೇ ಹೊರಟೆ ಕಾಡು ನೋಡಲು. ಸಂಜೆವರೆಗೆ ತಿರುಗಾಡಿ ವಿಶ್ರಾಂತಿ ಪಡೆಯಲು ಜಾಗವಿದೆಯೋ ಅಂತ ಆಚೀಚೆ ನೋಡುತ್ತಿದ್ದಂತೆ ಯಾವುದೋ ಪ್ರಾಣಿಯೊಂದು ಬಂಡೆಗಲ್ಲಿನ ಮೇಲೆ ಕೂತು ನನ್ನನ್ನೇ ಪಿಳಿಪಿಳಿ ನೋಡ್ತಿತ್ತು. ಕರಡಿ ಅಂತಲೇ ತಿಳಿದು ಬಂದೂಕು ಎತ್ತಿಕೊಂಡೆ. ಅಷ್ಟರಲ್ಲಿ ಅದು ಎರಡು ಕಾಲಿನ ಮೇಲೆ ಎದ್ದು ನಿಂತು ಒಂದೇ ಓಟ”
“ಅದು ಮನುಷ್ಯನೇ ಅಂತ ಹೇಗೆ ಹೇಳುತ್ತೀರಿ?”
“ಇನ್ನೇನು ಭೂತವುಂಟೋ ಕಾಡಿನಲ್ಲಿ? ಅಷ್ಟೂ ಸಂಶಯವಿದ್ರೆ ಇಲ್ಲಿಗೇಕೆ ಬಂದ್ರಿ? ಸುಳ್ಳು ಹೇಳಿದ್ರೆ ನಂಗೇನು ನಿಧಿ ಸಿಗ್ತದಾ?”
ನಂಜುಂಡ ಒಮ್ಮಿಂದೊಮ್ಮೆಲೆ ಸಿಡಿದ.
“ಅದು ಓಡಿತು. ನಾನೂ ಓಡಿದೆ. ಸ್ವಲ್ಪ ದೂರದಲ್ಲಿ ಅದೇ ತರದ ಇನ್ನೊಂದು ಪ್ರಾಣಿ ಅದರೊಟ್ಟಿಗೆ ಸೇರಿಕೊಂಡಿತು. ಅದು ಹೆಣ್ಣು. ಉದ್ದುದ್ದ ಕೂದಲು. ಸೊಂಟಕ್ಕೆ ಮಾತ್ರ ಏನೋ ಸುತ್ತಿಕೊಂಡಿತ್ತು. ಎರಡೂ ಗಕ್ಕನೆ ನಿಂತು ನನ್ನತ್ತ ಕಲ್ಲೆಸೆದವು. ಗಾಬರಿ ಬಿದ್ದು ಹಿಂದಕ್ಕೆ ಸರಿಯುವಾಗ ನನಗರಿಯದಂತೆ ಗುಂಡು ಹಾರಿತು. ಬಂದೂಕಿನ ಸದ್ದು ಕೇಳಿದಾಗ ವಿಕಾರವಾಗಿ ಕಿರುಚುತ್ತಾ ಕಣ್ಮರೆಯಾದವು. ನಂಗೆ ಹೆದರಿಕೆಯಾಗಿ ಮನೆಗೆ ಓಡಿ ಬಂದೆ. ಈ ವಿಷಯ ಹೇಗೋ ಪೇಪರಿನವರಿಗೆ ತಲುಪಿ, ಈಗ ಆಚೆಗೂ ಇಲ್ಲ ಈಚೆಗೂ ಇಲ್ಲ ಅನ್ನುವ ಹಾಗಾಗಿದೆ”
ಶಿವದಾಸನು ನಂಜುಂಡನನ್ನೇ ನೋಡಿದ. ಅವನ ಮುಖಭಾವ ಶಾಂತವಾಗಿದ್ದರೂ ಬಿಗಿದ ತುಟಿಗಳ ಹಿಂದೆ ಸಪ್ತಸಾಗರ ಭೋರ್ಗರೆಯುತ್ತಿತ್ತು. ಅರಳಿದ ಕಣ್ಣುಗಳ ಹಿಂದೆ ಜ್ವಾಲಾಮುಖಿ ಕೆಂಡಕಾರುತ್ತಿತ್ತು. ಯಾರನ್ನೋ ಹಿಸುಕುವಂತೆ ಕೈಗಳು ಗಾಳಿಯಲ್ಲಿ ಮುಷ್ಠಿಗಟ್ಟುತ್ತಿದ್ದವು. ಬೆಂಕಿಯ ಮೇಲೆ ಕುಳಿತವನಂತೆ ಒದ್ದಾಡುತ್ತಿದ್ದ. ಬೋನಿನಲ್ಲಿ ಸಿಕ್ಕಿಹಾಕಿಕೊಂಡ ಪ್ರಾಣಿಯಂತೆ ಅತ್ತಿತ್ತ ಸುಳಿಯುತ್ತಿದ್ದ.
“ತೋರಿಸ್ತೇನೆ. ನಾನು ಯಾರೂಂತ ಎಲ್ಲರಿಗೂ ತೋರಿಸ್ತೇನೆ. ಚಿಕ್ಕದಿರುವಾಗ ನಾನು ಕಳ್ಳತನ ಮಾಡಿ ಊರು ಬಿಟ್ಟು ಓಡಿದೆ ಅಂದ್ರು. ಆಮೇಲೆ ಮುಂಬೈಯಲ್ಲಿ ಸ್ಮಗ್ಲಿಂಗ್, ಕಳ್ಳ ಸಾಗಣಿಕೆ ಮಾಡ್ತೇನೆ ಅಂತ ಹೇಳಿದ್ರು. ಸಿಕ್ಕಿಬಿದ್ದು ಜೈಲಲ್ಲಿದ್ದೇನೆ ಅಂತಲೂ ಸುದ್ದಿ ಮಾಡಿದ್ರು. ಒಬ್ಬ ವ್ಯಕ್ತಿ ಕಣ್ಣಾಚೆಗೆ ಹೋದ್ರೆ ಬಾಯಿಗೆ ಬಂದ ಹಾಗೆ ಬೊಗಳಿ ಮರ್ಯಾದೆ ತೆಗೆಯೋದು. ನಾನು ಏನು ಮಾಡಿದ್ರೂ ಇವರಿಗೇನು? ಇವರಪ್ಪನ ಗಂಟೇನು ಹೋಯ್ತು? ನಾನು ಮರ್ಯಾದಸ್ಥನಾಗಿಯೇ ಬದುಕಿದ್ದೇನೆ. ಸತ್ಯ, ಧರ್ಮ, ನ್ಯಾಯ, ನೀತಿ ಮಾರ್ಗಗಳಲ್ಲೇ ಹೋಗಿದ್ದೇನೆ”
“ಅರೆ! ಏನಾಯ್ತೀಗ? ಸಮಾಧಾನ ಸಮಾಧಾನ” ಎನ್ನುತ್ತಾ ಶಿವದಾಸ ಅವನನ್ನು ಕದಲಿಸಲು ಯತ್ನಿಸಿದರೂ ಅದನ್ನು ಕೇಳಿಸಿಕೊಳ್ಳದವನಂತೆ “ಮನೆ! ನನ್ನ ಮನೆ! ಅದನ್ನು ಕೆಡವಲು ನಾನು ಬಿಡಲಿಕ್ಕಿಲ್ಲ. ಶಿವದಾಸ, ನನ್ನ ಪರವಾಗಿ ನೀನು ಜಗತ್ತಿಗೆ ಉತ್ತರ ಕೊಡಬೇಕು. ಕಾಡುಮನುಷ್ಯರ ರಹಸ್ಯ ನಿಜ ಅಂತ ಸಾರಬೇಕು. ಇಡೀ ಲೋಕ ಅದನ್ನು ನೋಡ್ತದೆ. ನಿಂಗೆಷ್ಟು ಬೇಕೋ ಅಷ್ಟು ಕೊಡ್ತೇನೆ ಶಿವದಾಸಾ” ಎನ್ನುತ್ತಾ ನಂಜುಂಡ ಗಬಕ್ಕನೆ ಅವನ ಕೈ ಹಿಡಿದುಕೊಂಡ.
“ಸರಿ ನಂಜುಂಡನವರೇ. ನಿನ್ನೆ ನೀವು ಹೇಳಿದಂತೆ ನಮ್ಮ ಪತ್ರಿಕೆಯ ಮಾಲಕತ್ವದಲ್ಲಿರುವ ಟಿ. ವಿ ಚಾನೆಲ್‍ನವರನ್ನೂ ಕರೆಸಿ ಕಾಡುಮನುಷ್ಯರ ಚಲನೆಯನ್ನು ವೀಡಿಯೋ ಮಾಡಿಸ್ತೇನೆ. ಸಮಾಧಾನದಿಂದಿರಿ”
“ಹಾಗಿದ್ದರೆ ಇಲ್ಲಿ ಕೇಳಿ” ನಂಜುಂಡನ ದನಿಯಲ್ಲಿ ವ್ಯಗ್ರತೆಯನ್ನು ಅದುಮಿ ಹಿಡಿದ ಗಾಂಭೀರ್ಯವಿತ್ತು. “ಇವತ್ತು ರಾತ್ರಿ ಇಲ್ಲೇ ಇದ್ದು ನಾಳೆ ವೀಡಿಯೋ ಮುಗಿಸ್ಕೊಂಡೇ ಹೋಗಿ. ಅದಕ್ಕಿರುವ ಎಲ್ಲ ಏರ್ಪಾಡುಗಳನ್ನು ನಾನು ಮಾಡ್ತೇನೆ”
“ಎಂಥ ಏರ್ಪಾಡು?”
“ಏರ್ಪಾಡು ಅಂದ್ರೆ ಮ್… ಚಿತ್ರೀಕರಣದ ಏರ್ಪಾಡು. ಅದಕ್ಕೆ ಕಪ್ಪು ಮೈಯ ಸ್ವಲ್ಪ ಜನರು ಬೇಕು. ನೀವು ಮಂಡೆಬಿಸಿ ಮಾಡ್ಬೇಡಿ. ಅವರನ್ನು ನಾನು ಹೊಂದಿಸಿ ಕೊಡ್ತೇನೆ. ನೀವು ವೀಡಿಯೋ ಮಾಡಿದ್ರೆ ಸಾಕು”
“ಆಗಲಿ” ಏನೂ ತಿಳಿಯದವನಂತೆ ಶಿವದಾಸ ತಲೆಯಾಡಿಸಿದ.
“ಒಂದು ಮಾತು” ನಂಜುಂಡ ತನ್ನ ಕೈಯನ್ನು ಬಾಯಿಗಡ್ಡವಾಗಿ ಹಿಡಿದು ಹೇಳಿದ “ನನ್ನ ಹೆಂಡತಿ ಇದರ ಬಗ್ಗೆ ಏನಾದ್ರೂ ಹೇಳಬಹುದು. ಅದನ್ನು ನಂಬಬೇಡಿ. ಅವಳಿಗೆ ನನ್ನನ್ನು ಕಂಡರಾಗುವುದಿಲ್ಲ. ಕೆಲಸದವರ ಹತ್ರ ನನ್ನನ್ನು ದಿನಾ ಬೈಯುತ್ತಿರುತ್ತಾಳೆ. ಹಾಗಾಗಿ ಅವಳು ನಂಗೆ ವಿರುದ್ಧವಾಗಿಯೇ ಮಾತಾಡಿಯಾಳು. ಅದನ್ನೆಲ್ಲ ಮನಸ್ಸಿನಲ್ಲಿಟ್ಟುಕೊಳ್ಳಬೇಡಿ. ಅವಳು ಬರೇ ಕೆಟ್ಟವಳು”
“ಹಾಗೇನಿಲ್ಲ” ಶಿವದಾಸ ಬಾಯಿತಪ್ಪಿ ಉಸುರಿದಾಗ ಅವನತ್ತ ಖಡ್ಗದಂಥ ನೋಟವನ್ನು ಬೀಸಿ ಎಸೆದ ನಂಜುಂಡ.
“ನಿಮಗೇನು ಗೊತ್ತು? ಎಂಥವನನ್ನೂ ಒಳಗೆ ಹಾಕಿಕೊಳ್ಳುವ ಸಾಮಥ್ರ್ಯವುಂಟು ಅವಳಿಗೆ. ಕೈಹಿಡಿದ ಗಂಡನಿಗಿಂತಲೂ ಬಾಕಿದ್ದವರ ಹತ್ರ ಪ್ರೀತಿ. ಈ ಊರಿನ ಹಲವರನ್ನು ನನ್ನ ವಿರುದ್ಧ ಎತ್ತಿ ಕಟ್ಟಿದ್ದಾಳೆ. ನನ್ನ ಪಿಸ್ತೂಲು, ಕತ್ತಿ, ಕೋವಿಗಳೆಲ್ಲ ಕಾಣೆಯಾಗ್ತಾ ಇವೆ. ಇರಲಿ. ಅವರೆಲ್ಲ ಸೇರಿ ಏನು ಮಾಡ್ತಾರೋ ನೋಡ್ತೇನೆ”
ಶಿವದಾಸ ಕೋಣೆಯೊಳಗೆ ನಿಂತುಕೊಂಡು ಯೋಚನೆಯಲ್ಲಿ ಮುಳುಗಿದ್ದ. ಅಸ್ಪಷ್ಟ ನೋವು. ಮುಜುಗರ. ಕೆಂಡದಲ್ಲಿ ಬಿದ್ದ ಹುಳ. ಕಾವೇರಿ ಏಕೆ ಹೀಗೆ ಮಾಡಿದಳು?
ಹೋಗಲಿ. ಇನ್ನು ಅದರ ಕುರಿತು ಚಿಂತಿಸುವುದರಲ್ಲೇನೂ ಅರ್ಥವಿಲ್ಲ ಎಂದುಕೊಂಡು ಎತ್ತಲೋ ಹರಿಯುತ್ತಿದ್ದ ಯೋಚನೆಗಳನ್ನು ತಡೆ ಹಿಡಿದುಕೊಂಡ. ಕಾಡುಮನುಷ್ಯರ ಇರುವಿಕೆಯ ಬಗ್ಗೆ ತನ್ನದೇ ಆದ ಊಹೆಯನ್ನು ಕಲ್ಪಿಸಿಕೊಂಡು ಮನದಲ್ಲೇ ವಿಶ್ಲೇಷಣೆಯನ್ನು ನಡೆಸಿದ. ಕೊನೆಗೆ ಒಂದಕ್ಕೊಂದು ಸರಿ ಬಾರದೆ ಗುಬ್ಬಿಗೂಡು ಎಣಿಸಿದವನಂತೆ ಸುಸ್ತಾದ. ಏನು ಮಾಡುವುದು? ಈ ರಹಸ್ಯವನ್ನು ಹೇಗೆ ಭೇದಿಸುವುದು? ಯೋಚಿಸುತ್ತಾ ನಿಂತಿರುವಾಗ ಹಿಂದಿನಿಂದ ಬಾಗಿಲು ಹಾಕಿದ ಸದ್ದು. ಮೃದುವಾದ ಹೆಜ್ಜೆ ಸಪ್ಪಳ.
“ಹೇಗಿದ್ದಿ ಶಿವಾ?”
ತಿರುಗಿ ನೋಡಿದಾಗ ಕಾವೇರಿ ನಸುಗತ್ತಲಲ್ಲಿ ನಿಂತಿರುವುದನ್ನು ನೋಡಿ ಜೀವ ಜಲ್ಲೆಂದಿತು. ಅವಳು ತನ್ನನ್ನು ಮರೆತೇ ಬಿಟ್ಟಿದ್ದಾಳೆ ಎಂದು ಭಾವಿಸಿ ಪ್ರಕ್ಷುಬ್ಧಗೊಂಡ ಶಿವದಾಸನ ಮನಸ್ಸು ಮುಗುಳ್ನಗುತ್ತಾ ಬರುತ್ತಿರುವಳ ಮುಖ ಕಂಡು ಸಿಹಿನೀರಿನಂತೆ ತಿಳಿಯಾಯಿತು. ಕೈಯಲ್ಲಿದ್ದ ಸಿಗರೇಟಿನ ಕಿಡಿಯನ್ನು ಆರಿಸಿ ಕೆಳಗೆ ಒಗೆದು ಹೇಳಿದ. “ನಿನ್ನ ಕೋಣೆ ಅಂತ ತಿಳಿಯದೆ ಇಲ್ಲಿಗೆ ಬಂದುಬಿಟ್ಟೆ”
“ಇಲ್ಲ ಶಿವಾ. ಇವತ್ತಿನ ಮಟ್ಟಿಗೆ ಇದು ನಿನ್ನ ಕೋಣೆಯೇ”
“ಮತ್ತೆ ನೀನು?”
“ನೀರು ಕೊಟ್ಟು ಹೋಗೋಣಾಂತ ಬಂದೆ. ರಾತ್ರಿಯಲ್ಲಿ ಎಲ್ಲಾದ್ರೂ ಬಾಯಾರಿಕೆಯಾದ್ರೆ ನೀನು ಉಪ್ಪರಿಗೆ ಇಳಿದು ಬರಬೇಕಲ್ಲ” ಎನ್ನುತ್ತಾ ತನ್ನ ಕೈಯಲ್ಲಿದ್ದ ನೀರಿನ ಲೋಟವನ್ನು ಮಂಚದ ಬಳಿಯಿದ್ದ ಪೀಠದ ಮೇಲಿಟ್ಟು ಮತ್ತೊಮ್ಮೆ ಮುಗುಳ್ನಕ್ಕಳು. “ಅದ್ಯಾಕೆ ಹಾಗೆ ನೋಡ್ತಿದ್ದಿ?” ಹತ್ತಿರ ಬರುತ್ತಾ ಕೇಳಿದಳು. “ಊಟ ಹಿಡಿಸಿತಾ?” ಉತ್ತರ ಬಾರದಿರುವುದನ್ನು ಕಂಡು ಮತ್ತೆ ಪ್ರಶ್ನಿಸಿದಳು. “ಇಲ್ಲೇ ನಿಲ್ಲಿಸಿಕೊಂಡದ್ದಕ್ಕೆ ಬೇಸರವಾ?”
“ಹಾಗೇನಿಲ್ಲ”
“ಮತ್ತೆ?
“ನಂಜುಂಡ ಹೇಳಿದ ಕಾಡುಮನುಷ್ಯರ ಸಂಗತಿ ಕಾಡ್ತಾ ಇದೆ. ಕಾಡುಮನುಷ್ಯರು ಈಗಲೂ ಇದ್ದಾರೆಂದರೆ…”
ಅದನ್ನು ಕೇಳುತ್ತಲೇ ಅವಳ ಮುಖಭಾವ ಬದಲಾಯಿತು. ಏನೋ ಆಲೋಚಿಸುತ್ತಿರುವಂತೆ ಕಂಡಳು. ನಂತರ ನೀಳವಾದ ಉಸಿರುಬಿಟ್ಟು ಅವನ ಬಳಿಗೆ ಬಂದು ಕೈಹಿಡಿದಳು. ಏನನ್ನೋ ಹೇಳಲು ತವಕಿಸುವ ಸ್ನಿಗ್ಧ ನಿರ್ಮಲ ಕಣ್ಣುಗಳು.
“ಬಾ ನಿನ್ನಲ್ಲಿ ಸ್ವಲ್ಪ ಮಾತಾಡುವುದಕ್ಕಿದೆ.”
ತನ್ನ ಸ್ಪರ್ಶದಿಂದ ಕೀಲುಗೊಂಬೆಯಂತಾದವನನ್ನು ಒಳಕೋಣೆಯ ಮಂಚದ ಬಳಿ ಕರೆದುಕೊಂಡು ಹೋಗಿ ಕುಳ್ಳಿರಿಸಿ ಅವನನ್ನೇ ಮೃದುವಾಗಿ ನೋಡುತ್ತಾ ಕೇಳಿದಳು.
“ಕಾಡುಮನುಷ್ಯರು ಇದ್ದಾರೆ ಅಂತ ನೀನು ನಂಬ್ತೀಯಾ?”
“ನೋಡಿಯೇ ತೀರ್ಮಾನಿಸಬೇಕಷ್ಟೆ”
“ಈ ಊರಿನಲ್ಲಿ ಅದೆಷ್ಟೋ ಹಿರಿಯರಿದ್ದಾರೆ. ಸೊಪ್ಪುಸದೆ, ಔಷಧ ಅಂತ ಕಾಡಿನ ತುಂಬಾ ತಿರುಗಿದ್ದಾರೆ. ಅವರಿಗೆ ಅಂಥದ್ದೇನೂ ಕಾಣಲಿಲ್ಲ. ಹಣ, ಅಧಿಕಾರದ ಅಮಲು ತಲೆಗೇರಿದವರಿಗೆ ಮಿಕ್ಕುಳಿದವರೆಲ್ಲರೂ ಕಾಡುಮನುಷ್ಯರೇ. ಒಂದೆರಡು ವರ್ಷಗಳ ಹಿಂದೆ ಏನಾಯ್ತು ಗೊತ್ತ? ನೆರೆಮನೆಯ ಗೋಪಾಲನ ತಂಗಿ ಲಕ್ಷ್ಮಿ ಸೊಪ್ಪು ತರಲೆಂದು ಕಾಡಿಗೆ ಹೋದಾಗ ನಂಜುಂಡನಿಗೆ ಕರಡಿಯಂತೆ ಕಂಡು ಗುಂಡು ಹಾರಿಸಿದನಂತೆ. ಅಲ್ಲಿಗೆ ಅವಳ ಕತೆ ಮುಗಿಯಿತು. ಮತ್ತೇನೋ ಆಗಿ ಮುಗಿಸಿಬಿಟ್ಟನೆಂದೂ ಸುದ್ದಿಯಿದೆ. ನಂಜುಂಡ ಹೇಳಿ ಕೇಳಿ ದೊಡ್ಡ ಮನುಷ್ಯ. ಎಲ್ಲವೂ ಅಲ್ಲಲ್ಲಿಗೆ ಸರಿಯಾಗಿ ಹೋಯ್ತು”
ಶಿವದಾಸನ ಮುಖದ ಮೇಲೆ ನೆರಳು ಹಾದುಹೋದಂತಾಯಿತು. ಎದೆಯೊಳಗೆ ಭೂಕಂಪವಾದಂತೆ ಸದ್ದಾಗತೊಡಗಿತು.
“ಪೋಲೀಸರು…”
ಕಾವೇರಿಯ ತುಟಿಯಂಚಿನಲ್ಲಿ ನೋವಿನ ನಗೆ ಮೂಡಿತು. “ಅವಳ ತಂದೆ ಕಣ್ಣಪ್ಪ ದೂರು ಕೊಟ್ಟ ಮರುದಿನವೇ ಪೋಲೀಸರು ನಂಜುಂಡನನ್ನು ಹಿಡ್ಕೊಂಡು ಹೋದ್ರು. ಏನೂ ಆಗಿಲ್ಲವೆಂಬಂತೆ ವಾಪಾಸು ಬಂದೂ ಬಿಟ್ಟ. ಕೆಲವು ದಿನಗಳ ಬಳಿಕ ಯಾರದ್ದೋ ಗದ್ದೆ ಬದಿಯ ಪೊದೆಗಳೆಡೆಯಲ್ಲಿ ಕಂಡು ಬಂತು ಕಣ್ಣಪ್ಪನ ಹೆಣ”
ಶಿವದಾಸನ ಮೈಯೊಳಗೆ ಸ್ಪೋಟವಾದಂತಾಯಿತು. ಚರ್ಮದ ರಂಧ್ರಗಳಲ್ಲೆಲ್ಲ ಬೆವರಿನ ಸೂಕ್ಷ್ಮ ತುಂತುರುಗಳು ಹೊಮ್ಮಿ ನಿಂತವು. ಮೈಯನ್ನು ಹೊಕ್ಕ ಅಸ್ಪಷ್ಟ ಭೀತಿ ನಿಧಾನಕ್ಕೆ ಅವನ ಅಂತರಂಗವನ್ನು ವ್ಯಾಪಿಸತೊಡಗಿತು.
“ಊರ ಹೊರಗೆ ನಂಜುಂಡನನ್ನು ದೇವರಂತೆ ಕಾಣ್ತಾರಲ್ಲ!”
ಇಡೀ ದೇಹವನ್ನೇ ಅಲ್ಲಾಡಿಸುವಷ್ಟು ತೀಕ್ಷ್ಣವಾದ ನಿಟ್ಟುಸಿರು ಅವಳ ಎದೆಯಾಳದಿಂದ ಹೊರ ಹೊಮ್ಮಿತು. “ಶಿವಾ, ಮನುಷ್ಯ ಅನ್ನದಿಂದ ಬದುಕುತ್ತಾನೆ ಅನ್ನೋದು ಸುಳ್ಳು. ಅವನು ಮನುಷ್ಯನೆನಿಸಿಕೊಳ್ಳೋದು ಹಣದಿಂದ. ಹಣ ಅಧಿಕಾರಗಳಿದ್ದರೆ ಎಲ್ಲವೂ ಇದೆ. ಅದಿಲ್ಲದ್ದರಿಂದ ನನ್ನ ಬದುಕು ಹೀಗಾಯ್ತು” ಎನ್ನುತ್ತಾ ಮೈ ತಿರುಗಿಸಿ ಎದುರಿದ್ದ ಕಿಟಿಕಿಯ ಕಡೆ ನಡೆಯುತ್ತಾ ತೋಟದಾಚೆ ಹರಿಯುತ್ತಿರುವ ಹಳ್ಳಕ್ಕೆ ಮುಖ ಕೊಟ್ಟು ನಿಂತಳು. ತೋಟದ ಬದಿಗೆ ಘಾತಿಸಿ ಹರಿಯುವ ಪ್ರವಾಹ ಅಸ್ವಸ್ಥ ಅಲೆಗಳನ್ನೆಬ್ಬಿಸುತ್ತಿತ್ತು. ತಣ್ಣಗೆ ಕೊರೆಯುತ್ತಿದ್ದ ಸರಳುಗಳನ್ನು ಎರಡೂ ಕೈಗಳಿಂದ ಹಿಡಿದುಕೊಂಡು ಹೇಳಿದಳು. “ಅವತ್ತು ನಿನ್ನಪ್ಪ ಮನೆಗೆ ಬಂದಿದ್ರು. ‘ಶಿವದಾಸನಿಗೆ ಕಾವೇರಿಯನ್ನು ಕೊಡುವೆಯಾ?’ ಅಂತ ಕೇಳಿದ್ರು. ಚಿಕ್ಕಪ್ಪ ಮಾತಾಡಲಿಲ್ಲ. ‘ಮಕ್ಕಳ ಇಷ್ಟ ನೆರವೇರಲಿ ಕರುಣಾಕರಾ’ ಅಂದ್ರು ನಿನ್ನಪ್ಪ. ಸ್ವಲ್ಪ ಹೊತ್ತು ಸುಮ್ಮನಿದ್ದ ಚಿಕ್ಕಪ್ಪ ‘ಅದು ಹೇಗಾಗ್ತದೆ ದಾಮೋದರಣ್ಣ? ಇಲ್ಲಿಂದ ಕೆಮ್ಮಿದ್ರೆ ಅಲ್ಲಿಗೆ ಕೇಳುವಷ್ಟು ಹತ್ತಿರದ ಮನೆಗೆ ಕೊಟ್ಟರೆ ಅದೊಂದು ಚಂದವಾ?’ ಅಂತ ಹೇಳಿ, ಅವರನ್ನು ಸಾಗ ಹಾಕಿದ ಮೇಲೆ ಒಳಬಂದು ನನಗೆ ಹೇಗೆ ಹೊಡೆದನೆಂದರೆ ಅಬ್ಬಾ! ಅದನ್ನು ನೆನೆಯುವಾಗ ಈಗಲೂ ಜುಮ್ಮೆನ್ನುತ್ತದೆ ಮೈ. ಬಾರುಕೋಲಿನ ತುದಿ ತಾಗಿದಲ್ಲೆಲ್ಲ ಚರ್ಮ ಕಿತ್ತು ರಕ್ತ ಹರಿಯುತ್ತಿತ್ತು. ತಡೆಯಲಾರದೆ ಅತ್ತಾಗ ಮತ್ತಷ್ಟು ಜೋರಾಗುತ್ತಿತ್ತು ಏಟು. ಕಣ್ಮುಚ್ಚಿ, ಹಲ್ಲು ಕಚ್ಚಿ ಎಲ್ಲವನ್ನೂ ಸಹಿಸಿದೆ. ‘ಇನ್ನೆಲ್ಲಾದ್ರೂ ಅವರ ಮನೆಯೆದುರು ಸುಳಿದ್ರೆ, ಶಿವದಾಸನೊಂದಿಗೆ ಮಾತಾಡಿದ್ರೆ ಸಿಗಿದು ತೋರಣ ಕಟ್ತೇನೆ’ ಎಂದ. ನನ್ನ ಬಯಕೆ ಬೂದಿಯಾಯಿತು. ಯಾವ ಆಸೆಯೂ ಕೈಗೂಡುವುದಿಲ್ಲ ಅಂತ ಸ್ಪಷ್ಟವಾಯಿತು. ಒಮ್ಮೊಮ್ಮೆ ಕಲ್ಪನೆಯು ಮನಸ್ಸಿನ ತಡೆಯನ್ನು ಕಿತ್ತು ಹರಿದರೂ ಕತ್ತಲ ದಾರಿಗಳ ನಡುವೆ ನಿಂತಂತೆ ದಿಗ್ಭ್ರಮೆಯಾಗುತ್ತಿತ್ತು. ಆದದ್ದಾಗಲಿ. ಹುಟ್ಟಿದ ತಪ್ಪಿಗೆ ಹೇಗಾದ್ರೂ ಬದುಕಿದರಾಯಿತು ಅಂತ ಮನಸ್ಸನ್ನು ಗಟ್ಟಿ ಮಾಡಿಕೊಂಡೆ. ಕೆಲವು ದಿನಗಳ ನಂತರ ನಂಜುಂಡ ಬಂದ. ಬಿಗಿದು ಬೀಗಿದ ಮುಖ. ನಡೆನುಡಿಯಲ್ಲಿ ಎದ್ದು ಕಾಣುವ ಗತ್ತು. ಆ ಕ್ಷಣಕ್ಕಾದರೂ ಚಿಕ್ಕಮ್ಮನಿಗೆ ಎಲ್ಲಿಂದ ಬಂತೋ ಒಳ್ಳೆಯ ಬುದ್ಧಿ, ‘ಈ ಸಂಬಂಧ ಬೇಡ’ ಅಂದು ಬಿಟ್ಟಳು. ಆದರೆ ಚಿಕ್ಕಪ್ಪ…”
“ನಿನ್ನ ಮದುವೆ ಸುದ್ದಿ ಕೇಳಿ ದಿಗಿಲಾಗಿತ್ತು. ಎದೆಯೊಡೆದಂತಾಗಿತ್ತು. ಆಮೇಲೆನಿಸಿತು- ನೀನು ಮಾಡಿದ್ದೂ ಸರಿ. ಎಷ್ಟು ದಿನ ಅಂತ ಸುಮ್ಮನೇ ಕುಳಿತುಕೊಳ್ಳಲು ಸಾಧ್ಯ? ನಿನ್ನ ಚಿಕ್ಕಪ್ಪ ಕುಣಿದಾಡಿರಬಹುದಲ್ಲ ಶ್ರೀಮಂತ ಅಳಿಯ ಸಿಕ್ಕಿದ ಅಂತ”
“ಹೌದು. ಗಂಡಿಗೆ ಕೈತುಂಬಾ ಸುರಿದು ಮದುವೆ ನಡೆಸುವ ಕಾಲದಲ್ಲಿ ಗಂಡೇ ಬಂದು ಇಂತಿಷ್ಟು ಕೊಡ್ತೇನೆ ಅಂದ್ರೆ ಸಂತಸವಾಗದೆ ಇರ್ತದಾ? ನನ್ನನ್ನು ಕೇಳೋರು ಯಾರು?”
“ಆಗಲಿ. ಅಂತೂ ಸುಖವಾಗಿದ್ದೀಯಲ್ಲ”
“ಸುಖ?” ತುಟಿಯಂಚಿನಲ್ಲೇ ನೋವಿನಿಂದ ನಕ್ಕು ನುಡಿದಳು “ಯಾವುದೋ ಪ್ಲಾಂಟರುಗಳೊಡನೆ, ರಾಜಕಾರಣಿಗಳೊಡನೆ, ಅಧಿಕಾರಿಗಳೊಡನೆ ನಂಜುಂಡನ ಗೆಳೆತನ. ಒಂದು ವಾರ ಅವ ಅಲ್ಲಿಗೆ ಹೋದರೆ ಇನ್ನೊಂದು ವಾರ ಅವರು ಇಲ್ಲಿಗೆ. ಆಗ ಇಲ್ಲಿ ಭರ್ಜರಿ ಕೋಳಿ ಅಡುಗೆಯಾಗಬೇಕು. ಜೊತೆಗೆ ಬ್ರಾಂಡಿ ಸಮಾರಾಧನೆ. ಆಮೇಲೆ… ಆಮೇಲೆ”
“ಕಾವೇರಿ!” ದಿಗಿಲು ಬಿದ್ದ ಶಿವದಾಸನ ಬಾಯಿಯಿಂದ ಹೊರಬಿದ್ದ ಉದ್ಗಾರ ಅಪೇಕ್ಷೆಯನ್ನು ಮೀರಿ ದೊಡ್ಡದಾದಾಗ ಅವಳ ಮಾತುಗಳು ಅಲ್ಲಿಗೆ ನಿಂತವು. ದೀರ್ಘವಾಗಿ ಉಸಿರೆಳೆದುಕೊಳ್ಳುತ್ತಿದ್ದಂತೆ ಅಳು ಉಕ್ಕಿ ಬಂದರೂ ಗಂಟಲಲ್ಲಿ ಕಟ್ಟಿ ನಿಂತ ಬಿಕ್ಕನ್ನು ಕಷ್ಟಪಟ್ಟು ತಹಬದಿಗೆ ತಂದುಕೊಂಡಳು. ಮೋಡವನ್ನು ಸೀಳಿ ಎರಗಿದ ಮಿಂಚು ನೇರ ತನ್ನ ಮೈಗೆರಗಿದಂತಾಗಿ ಅವನ ಕಣ್ಣು ಕತ್ತಲಿಟ್ಟಿತು. ಹಿತವಾಗಿ ಬೀಸುತ್ತಿದ್ದ ಗಾಳಿ ಭಾರವಾಗಿ ಅವನನ್ನು ಒದೆಯತೊಡಗಿತು. ಎಲ್ಲೆಲ್ಲಿಂದಲೋ ಚಿಗಿತು ದ್ವಿಗುಣಿಸಿ ಹಾರುತ್ತಾ ಎತ್ತರಕ್ಕೆ ತುಂಬುವ ಮಳೆಹಾತೆಗಳಂತೆ ಯೋಚನೆಗಳು ಗಿರಕಿ ಹೊಡೆಯತೊಡಗಿದವು. ಎದೆಯಾಳದಿಂದ ನೋವಿನ ಸೆಲೆ ಚಿಮ್ಮಿ ಬರತೊಡಗಿತು. “ಇಷ್ಟೆಲ್ಲ ಸಹಿಸಿಕೊಂಡು…”
ಅವಳ ತಲೆ ತಗ್ಗಿತು. “ಬಾ ಶಿವಾ, ಇಲ್ಲಿ ಬಾ” ಎಂದು ಅವಳು ತಿರುಗಿ ನೋಡದೆ ಕರೆದಳು. ಅವನು ಸ್ವಲ್ಪ ಹೊತ್ತು ಹಾಗೇ ಕುಳಿತಿದ್ದು ನಂತರ ಎದ್ದು ಕಿಟಿಕಿಯ ಬಳಿ ಹೋದ. ಅವನು ಹಿಂದೆ ಬಂದು ನಿಂತೊಡನೆ ಅವಳು ತನ್ನ ಎಡಗೈಯನ್ನು ತಲೆಯ ಹಿಂದಕ್ಕೆ ಒಯ್ದು ಬೆನ್ನಿನ ಮೇಲೆ ಕಪ್ಪು ಪರದೆಯಂತೆ ಹರಡಿಕೊಂಡಿದ್ದ ಅಲೆ ಅಲೆಯಾದ ಕೂದಲರಾಶಿಯನ್ನು ಭುಜದ ಕೆಳಗೆ ಜಾರಿಸುತ್ತಿದ್ದಂತೆ ಮೋಡದ ಮುಸುಕಿನಿಂದ ಬೇರ್ಪಟ್ಟ ಅರ್ಧಚಂದ್ರನಂಥ ಬೆನ್ನು ಅವನ ಕಣ್ಣೆದುರು ಹರಡಿಕೊಂಡಿತು. ಹಿಂಭಾಗದಲ್ಲಿ ದಟ್ಟವಾಗಿದ್ದ ಕೂದಲು ಅತ್ತ ಸರಿಯುತ್ತಲೇ ಶಿವದಾಸನ ದೇಹದುದ್ದಕ್ಕೂ ಆಘಾತದ ತೆರೆಗಳು ಸಂಚರಿಸಿದವು. ನಡುವೆ ಕಾಲುವೆ ಬಿಟ್ಟು ಉಬ್ಬಿದ ಬೆನ್ನಿನ ತುಂಬಾ ಮೊಡವೆಯಂಥ ಗುರುತು. ಕಂದುಬಣ್ಣದ ಬರೆಗಳು.
“ಬಂದವರನ್ನು ಒಪ್ಪಿಕೊಳ್ಳದಿದ್ದರೆ ನಂಜುಂಡನ ಕಡೆಯಿಂದ ಸನ್ಮಾನ.”
ಅವನ ಮೈ ಮರಗಟ್ಟಿದಂತೆನಿಸಿತು. ಮನದೊಳಗೆ ಅಸ್ಪಷ್ಟ ಯಾತನೆಯ ನೀರ ಬುಗ್ಗೆಗಳು. ಅವನು ಆಳವಾಗಿ ಉಸಿರೆಳೆದುಕೊಳ್ಳುತ್ತಾ ಕಣ್ಣು ಮುಚ್ಚಿ ಅವಳ ಬೆನ್ನಿನ ಮೇಲೆ ಕೈಯಾಡಿಸಿದ. ಬೆಚ್ಚಗೆ ಮೃದುವಾಗಿದ್ದರೂ ತರಿತರಿಯಾಗಿರುವ ಬೆನ್ನು. ತನ್ನ ಹೆಗಲ ಮೇಲಿದ್ದ ಅವನ ಎಡಗೈಯನ್ನು ಅಮುಕಿ ಕಾವೇರಿ ತನ್ನ ಕೊರಳನ್ನು ಮಾತ್ರ ಹಿಂದಕ್ಕೆ ಹೊರಳಿಸಿದಳು. ಅರೆಮುಚ್ಚಿದ ಅವಳ ಕಣ್ಣುಗಳಲ್ಲಿ, ಮೂಗಿನಿಂದ ಜಾರುತ್ತಿದ್ದ ನಿಟ್ಟುಸಿರಿನಲ್ಲಿ ನೋವು ತುಂಬಿತ್ತು. ಗಾಳಿಗೆ ಹಾರುತ್ತಾ ತನ್ನ ಕೊರಳ ಹಿಂದಕ್ಕೆ ತಗಲುವ ಸೆರಗನ್ನು ಹಿಡಿದು ಅವಳ ಭುಜದ ಸುತ್ತ ಹೊದೆಸುತ್ತಿದ್ದಂತೆ ಶಿವದಾಸನ ಕಲ್ಪನೆಯಲ್ಲಿ ತೇಲಿತು ರಾತ್ರಿಯ ನೋವಿನ ದನಿಗಳು. ಮುಲುಗುಟ್ಟುವ, ಬಿಕ್ಕಳಿಸುವ ಆರ್ತನಾದದ ಸದ್ದುಗಳು. ಅವನು ತಲೆ ಕೊಡವಿ ಆವೇಶವನ್ನು ಹತ್ತಿಕ್ಕಲೆತ್ನಿಸಿದ. ಮನ ತುಂಬ ತುಮುಲ. ಎದೆಯೆಲ್ಲ ಭಾರ. ತುಸು ಹೊತ್ತಿನ ಮೌನದ ಬಳಿಕ ಏನೆನ್ನಬೇಕೆಂದು ತಿಳಿಯದವನಂತೆ “ನಾನು ಹೋಗ್ತೇನೆ” ಎನ್ನುವಾಗ ಅವನ ಕೊರಳು ಕಟ್ಟಿತು. “ಪರಾಗಿಲ್ಲ ಶಿವಾ” ಅವನ ಮುಂಗೈ ಸವರುತ್ತಾ ಕಾವೇರಿ ಅಂದಳು “ನಿನ್ನನ್ನು ಒಂದು ಗಳಿಗೆ ಕಾಣಲು ಸಾಧ್ಯವಾಯಿತಲ್ಲ. ನನ್ನ ಬಗ್ಗೆ ಚಿಂತಿಸಿ ತಲೆ ಕೆಡಿಸಿಕೊಳ್ಳಬೇಡ. ನಾನಿಲ್ಲಿ ಸಂತಸದಿಂದಿದ್ದೇನೆ ಅಂತ ನಿನ್ನ ತಂದೆ ತಾಯಿಯರಿಗೆ ಹೇಳು” ಎನ್ನುತ್ತಿದ್ದಂತೆ ಅವಳ ಕಣ್ಣಲ್ಲಿ ಕೂಡಿದ್ದ ನೀರು ಕೆನ್ನೆಯ ಮೇಲೆ ಇಳಿಯಿತು. ಅವನು ಮಾತಿಲ್ಲದೆ ಚೀಲ ಹಿಡಿದೆದ್ದ. “ಹಣದ ಅಗತ್ಯವಿದ್ದುದರಿಂದ ನಂಜುಂಡನ ಮಾತಿಗೆ ಒಪ್ಪಿಕೊಳ್ಳಬೇಕಾಯ್ತು. ಆದರೆ ನಾನಿನ್ನು ಆ ಕೆಲಸ ಮಾಡುವುದಿಲ್ಲ. ನಿಶ್ಚಿಂತೆಯಿಂದ ದುಡಿಯುತ್ತೇನೆ. ಕುಟುಂಬಕ್ಕೆ ಸಾಕಾಗುವಷ್ಟು ಸಿಕ್ಕಿದರೆ ಸಾಕು. ಲೆಕ್ಕಕ್ಕಿಂತ ಹೆಚ್ಚು ಅಪೇಕ್ಷೆ ಪಡೋದಿಲ್ಲ. ಯಾರ ಕಣ್ಣಿಗೂ ಮಣ್ಣೆರಚಲು ಯತ್ನಿಸೋದಿಲ್ಲ. ಗ್ರಹಚಾರ ಕೆಟ್ಟು ಸಿಕ್ಕಿಬಿದ್ದು ತಿಂದದ್ದೆಲ್ಲ ಕಕ್ಕಿಬಿಡುವ ಪ್ರಸಂಗವೂ ಬೇಡ”
ಕಾವೇರಿಯ ಬಾಯಿಯಿಂದ ಮಾತೇ ಹೊರಡಲಿಲ್ಲ. “ನಂಜುಂಡ ಬರುವ ಮೊದಲು ಹೆದ್ದಾರಿ ಸೇರಬೇಕು” ಎಂದು ತನಗೆ ತಾನೇ ಹೇಳಿಕೊಳ್ಳುತ್ತಾ ಕಾಲುಗಳನ್ನು ಕಷ್ಟಪಟ್ಟು ಸೆಳೆದುಕೊಂಡು ಮುಂದೆ ಹೋದವನು ಎರಡು ಸಲವೂ ತಿರುಗಿ ನೋಡಿದ. ಹೋಗಿ ಬರಲೇ ಎಂದ.
“ಏ ಹೆಣ್ಣೇ ಬಾಗಿಲು ತೆರೆಯೇ”
ಮುಚ್ಚಿದ ಬಾಗಿಲಿನ ಹೊರಗಿನಿಂದ ದನಿ ಕೇಳಿಬರುತ್ತಿದ್ದಂತೆ ಶಿವದಾಸ ಸಿಡಿಲು ಹೊಡೆದ ಮರದಂತೆ ಸ್ತಬ್ಧನಾದ.
ನಂಜುಂಡ!
“ಬಾಗಿಲು ಮುರ್ದು ಒಳಗೆ ಹೋಗುವ”
ಅವನ ಜೊತೆಯಲ್ಲಿದ್ದವರ ದನಿಯನ್ನು ಕೇಳುತ್ತಿದ್ದಂತೆ ಕಾವೇರಿಯ ಮುಖ ಬಿಳುಚಿಕೊಳ್ಳತೊಡಗಿತು. ತುಟಿಗಳು ಹುಳಗಳಂತೆ ಒದ್ದಾಡತೊಡಗಿದವು. ಶಿವದಾಸ ಧುಮುಗುಟ್ಟುತ್ತಾ ಒಂದೊಂದೇ ಹೆಜ್ಜೆ ಮುಂದಿಡುತ್ತಿದ್ದಂತೆ ಅವಳು ಓಡಿ ಅವನಿಗೆದುರಾಗಿ ನಿಂತು ಎರಡೂ ಕೈಗಳನ್ನು ಶಿಲುಬೆಯಂತೆ ಅಡ್ಡಕ್ಕೆ ಚಾಚಿ “ಶಿವಾ ನೀನಿಲ್ಲಿಂದ ಹೋಗು” ಎನ್ನುತ್ತಾ ಅವನನ್ನು ಹಿಂಬಾಗಿಲಿನ ಕಡೆ ತಿರುಗಿಸಲು ಯತ್ನಿಸಿದಳು. ಆದರೆ ಅವನು ಕಲ್ಲಾಗಿದ್ದ. ಗಂಟಿಕ್ಕಿದ ಹುಬ್ಬಿನ ಕೆಳಗೆ ಹೊಳೆಯುವ ಕಣ್ಣುಗಳು ಕೆಂಡ ಕಾರುತ್ತಿದ್ದವು. ದವಡೆಯ ಎಲುಬುಗಳು ಕಂಪಿಸುತ್ತಿದ್ದವು.
“ಕಾಲಿಗೆ ಬೀಳ್ತೇನೆ ಶಿವಾ. ಒಮ್ಮೆ ಹೋಗು ಇಲ್ಲಿಂದ”
“ಹೆದರಬೇಡ. ಏನೂ ಆಗಲಿಕ್ಕಿಲ್ಲ” ಅವನ ದೃಢತೆ ಬರೇ ಮಾತಿನಲ್ಲಿ ಮಾತ್ರವಲ್ಲ ಅವಳ ಭುಜಗಳನ್ನು ಹಿಡಿದ ಬೆರಳುಗಳ ಬಿಗಿಯಿಂದಲೂ ವ್ಯಕ್ತವಾಗುತ್ತಿತ್ತು.
“ಏನು ಹೆಣ್ಣೇ, ಅಷ್ಟು ಸೊಕ್ಕು ಬಂತಾ ನಿಂಗೆ? ಅತಿಥಿಗಳು ಬರುವಾಗ ಅವರನ್ನು ಸತ್ಕರಿಸೋದು ಬಿಟ್ಟು ಬಾಗಿಲು ಹಾಕ್ಕೊಂಡು ಒಳಗೆ ಕೂತಿದ್ದೀಯಾ? ಮರ್ಯಾದೆಗೆ ಬಾಗಿಲು ತೆಗೀತೀಯೋ ಅಥವಾ…”
ಹೊರಗಿನಿಂದ ಬಾಗಿಲಿಗೆ ಗುದ್ದುವ ಸದ್ದಾಗುತ್ತಲೇ ಇತ್ತು.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter