ಬೀದಿ ಜಗಳವೂ ಪ್ರಬಂಧವೆ!

ಪ್ರಬಂಧ ಪ್ರಕಾರವೆಂಬುದು ಮಾಮೂಲಿ ಲೇಖನವಲ್ಲ; ಕತೆಯಂತೂ ಅಲ್ಲವೇ ಅಲ್ಲ. ಒಂದು ವಸ್ತುವನ್ನೆತ್ತಿಕೊಂಡು ಅದರ ಸುತ್ತ ಏನೆಲ್ಲ ಚಿಂತನೆಗಳು, ಮಸಾಲೆಗಳು ಲಭಿಸಬಲ್ಲುದೋ ಅದೆಲ್ಲವನ್ನೂ ಒಂದಕ್ಕೊಂದು ಪೂರಕವಾಗುವಂತೆ ಪೋಣಿಸುತ್ತಲೇ ಒಂದು ಪ್ರಬಂಧವನ್ನು ಕಟ್ಟಕೊಳ್ಳಬಹುದು. ಅಥವಾ ಅವು ಹಾಗೆಯೇ ಇರಬೇಕೆಂದೇನೂ ಇಲ್ಲ; ಒಂದು ವಿಷಯ, ಅದಕ್ಕೆ ಪೂರಕವಾದ ಅದೇ ವಿಷಯದ ರೆಂಬೆಕೊಂಬೆಗಳು! ಹಾಗೂ ಆಗಬಹುದು. ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ಕೆ. ಸತ್ಯನಾರಾಯಣ ಅವರು ಗದ್ಯಬರವಣಿಗೆಗೆ ಹೆಸರಾದವರು. ಮುಖ್ಯವಾಗಿ ಕಾದಂಬರಿ ಹಾಗೂ ಸಣ್ಣಕತೆ ಅವರ ಆಡುಂಬೊಲ. ಅವುಗಳಷ್ಟೇ ವಿಶ್ವಾಸದಿಂದ ಅವರು ಪ್ರಬಂಧಗಳನ್ನೂ ಬರೆಯುತ್ತಾರೆ.

ʻಬೀದಿ ಜಗಳಗಳುʼ ಎಂಬುದು ಅವರ ಏಳನೆಯ ಪ್ರಬಂಧ ಸಂಕಲನ. ಇಲ್ಲಿಯ ಪ್ರಬಂಧಗಳನ್ನು ಯಾವುದೇ ನಿರ್ದಿಷ್ಟ ಪ್ರಬೇಧಕ್ಕೆ ಸೇರಿಸುವ ಅಗತ್ಯವಾಗಲೀ ಪ್ರಯತ್ನವಾಗಲೀ ಹಠವಾಗಲೀ ಬೇಕಾಗಿಲ್ಲ. ʻಬೀದಿ ಜಗಳಗಳುʼ ಎನ್ನುವ ಪ್ರಬಂಧದ ಶಿರೋನಾಮೆಯನ್ನೇ ನೋಡಿ, ಅದೊಂದು ಬಗೆಯ ಹರಟೆಯನ್ನು ಮೈಗೂಡಿಸಿಕೊಂಡ ಲಕ್ಷಣವಿದೆ. ಅದೇ ಭಾವ ʻನಾನೇಕೆ ಜಾತಿವಾದಿಯಲ್ಲ?ʼ ಎಂಬ ಪ್ರಬಂಧದಲ್ಲಿ ಕಾಣುವುದಕ್ಕೆ ಸಾಧ್ಯವಿಲ್ಲ. ʻಬೀದಿಜಗಳಗಳʼಲ್ಲಿ ಪ್ರಬಂಧಕಾರ ಲೋಕದ ಡೊಂಕನ್ನು ಮುಖ್ಯವಾಗಿಸಿದರೆ ʻನಾನೇಕೆ ಜಾತಿವಾದಿಯಲ್ಲʼ ಎಂಬ ಪ್ರಬಂಧದಲ್ಲಿ ಆತ ತನ್ನ ಒಳಗನ್ನು ಶೋಧಿಸುತ್ತಾನೆ.

ಪ್ರತಿ ಪ್ರಬಂಧದಲ್ಲಿ ಒಂದಾದರೂ ನಮ್ಮ ಊಹೆಯನ್ನು ಮೀರಿದ ದೃಷ್ಟಾಂತವಾಗಲೀ ಉದಾಹರಣೆಯಾಗಲೀ ಇದ್ದೇ ಇರುತ್ತದೆ. ನಾವು ಯಾವುದನ್ನು ಪ್ರಬಂಧದ ವಸ್ತುವಲ್ಲ ಎಂದುಕೊಳ್ಳುತ್ತೇವೆಯೋ ಅದನ್ನೂ ಪ್ರಬಂಧಕಾರರು ಬಿಡುವುದಿಲ್ಲ. ʻಸಂಬಂಧಗಳನ್ನು ಏಕೆ ತೊರೆಯಬೇಕು?ʼ ಎಂಬ ಒಂದು ವಸ್ತು. ಹೀಗೊಂದು ಪ್ರಶ್ನೆಯನ್ನು ಕೇಳಿದಾಗ, ʻಇದು ವಿವರಣೆಯನ್ನು ಬಯಸುತ್ತದೆʼ ಎಂಬುದು ನಮ್ಮ ಅರಿವಿಗೆ ಬಂದೇ ಬರುವುದು. ಅಂಥ ಪ್ರಶ್ನೆಕೇಳಿ ಉತ್ತರ ಪಡೆಯಬೇಕೆಂಬುದು ಪ್ರಬಂಧಕಾರರಿಗಷ್ಟೇ ಹೊಳೆಯುವುದು.

ʻಬೀದಿಜಗಳ ಮತ್ತು ಇತರ ಪ್ರಬಂಧಗಳುʼ ಸಂಕಲನದಲ್ಲಿ ಹದಿನಾರು ವೈವಿಧ್ಯಮಯ ಪ್ರಬಂಧಗಳಿವೆ. ಒಂದೊಂದು ಪ್ರಬಂಧವೂ ಅದರ ವ್ಯಾಪ್ತಿಯಲ್ಲಿ ಅಥವಾ ಪರಿಮಿತಿಯಲ್ಲಿ ರೋಚಕವೂ ಉತ್ತರದಾಯಿತ್ವವುಳ್ಳವುಗಳೂ ಆಗಿವೆ. ʻನಮಗೇ ಯಾಕೆ ಹೀಗಾಗುತ್ತೆ?ʼ ಎಂಬ ಪ್ರಬಂಧವನ್ನೇ ನೋಡಿ. ಇದು ಒಂದು ಸಾಮಾನ್ಯ ಹೇಳಿಕೆ. ಕಷ್ಟ ಬಂದಾಗ ಇಂಥ ಮಾತು ಎಲ್ಲರ ಬಾಯಲ್ಲೂ ಬರುವಂಥದ್ದೆ. ಆದರೆ ಇಲ್ಲಿ ಅದಷ್ಟಕ್ಕೇ ನಿಲ್ಲುವುದಿಲ್ಲ. ನಾವು ನಮ್ಮ ಸಂಸಾರ, ನಮ್ಮ ಸಮಾಜ, ಗೆಳೆಯರು, ಶತ್ರುಗಳು, ದ್ವೇಷ, ಅಸೂಯೆ, ಅದೃಷ್ಟ, ದುರದೃಷ್ಟ ಸ್ಪರ್ಧಾತ್ಮಕತೆ, ಲೌಕಿಕ, ಆಧ್ಯಾತ್ಮಿಕ, ಪುರಾಣ -ಹೀಗೆ ಅನೇಕ ವಿಚಾರಗಳು ನಿಕಷಕ್ಕೊಡ್ಡಲ್ಪಡುತ್ತವೆ. ಮೂಲಧಾತುವೊಂದೆ: ʻನಮಗೇ ಏಕೆ ಹೀಗಾಗುತ್ತದೆʼ ಎಂಬುದು.
ಒಮ್ಮೆ ಇಂಥ ಪ್ರಬಂಧದ ಹೂರಣ ನಮ್ಮ ಮನಸ್ಸಿನಲ್ಲಿ ಅಂಟಿ ಕೂತರೆ – ಸಂದರ್ಭ ಬಂದಾಗಲೆಲ್ಲ- ನಾವು ತೆಗೆದುಕೊಳ್ಳಬಹುದಾದ ನಿಲುಮೆಯನ್ನು ನಿಗದಿಗೊಳಿಸುವುದು ಸುಲಭಸಾಧ್ಯವಾಗಬಹುದು. ಅದು ಇಂಥ ಪ್ರಬಂಧಗಳ ಹಿರಿಮೆ.

ಕೆಲವೆಲ್ಲ ವಿಚಾರಗಳು ನಮಗೆ ಗೊತ್ತಿದ್ದರೂ ಅದಕ್ಕೆ ನಾವೊಂದು ನಿರ್ದಿಷ್ಟ ಚೌಕಟ್ಟು ನೀಡಿರುವುದಿಲ್ಲ. ಇಂಥ ಪ್ರಬಂಧಗಳನ್ನು ಓದಿದಾಗಲೇ ಅದು ಹಾಗೂ ಅಂತಹ ವಿಚಾರಗಳು ನಮ್ಮ ಒಳಗನ್ನು ಪ್ರವೇಶಿಸುವುದು. ʻಹ್ಯಾಂಗರ್ಸ್‌ ಆನ್‌ʼ ಎಂಬ ಒಂದು ಪ್ರಬಂಧ ಇದರಲ್ಲಿದೆ. ಅದು ನನಗೂ ನಮ್ಮೆಲ್ಲರಿಗೂ ಸಂಬಂಧ ಪಡುವ ವಿಷಯವೆಂದು ಮನವರಿಕೆಯಾದದ್ದು ಅದನ್ನು ಓದಿದ ಮೇಲೆಯೇ. ಅಡಿಗರ ನನ್ನಾವತಾರ ಎಂಬ ಕವನದಿಂದ ಸ್ಫೂರ್ತಿಗೊಂಡು ಬರೆದೆನೆಂದು ಪ್ರಬಂಧಕಾರರು ಹೇಳಿದರೂ ಅದೊಂದು ವಿನೂತನ ವಸ್ತುವೆ. ಇನ್ನೊಬ್ಬರ ನೆರಳಲ್ಲಿ ಇರುವುದನ್ನು ಸದಾ ಇಷ್ಟಪಡುವವರು ನಮ್ಮಲ್ಲಿ ಹಲವರಿರುತ್ತಾರೆ. ಅಂಥವರು ನಮಗಿಂತ ತುಸು ಕೆಳಸ್ತರದವರಂತೆ ಇರುವುದು ಸಾಮಾನ್ಯ. ಅವರು ನಮ್ಮನ್ನು ಹಿಡಿದು ತೂಗಾಡುತ್ತಾರೆ. ಅದೇ ಹೊತ್ತಿಗೆ ನಾವು ನಮಗಿಂತ ಉನ್ನತ ಸ್ತರದವರೆಂದು ನಂಬಿಕೊಂಡ ವ್ಯಕ್ತಿಗಳನ್ನು ಹಿಡಿದು ನೇತಾಡುತ್ತಿರುತ್ತೇವೆ. ಎಂತಹ ವಿಚಿತ್ರ. ಹ್ಯಾಂಗರ್ಸ್‌ ಆನ್‌ ಪ್ರಬಂಧ ಓದಿದ ಮೇಲೆ ನನ್ನ ಮೇಲೆ ಪ್ರಭಾವ ಬೀರಿದವರಿಗೆ ನಾನು ಸದಾ ಋಣಿಯಾಗಿರುವುದೂ ನಾನು ಪ್ರಭಾವೀ ವ್ಯಕ್ತಿಯೆಂದು ನಂಬಿ, ನನ್ನ ಅನುಯಾಯಿಗಳಾಗಿರುವ ವ್ಯಕ್ತಿಗಳ ಎದುರು ನಾನು ಬೀಗುವುದೂ ನಡೆಯುತ್ತದೆ. ನನಗಿದು ಮೊದಲೇ ಗೊತ್ತಿತ್ತು ಅಂದುಕೊಂಡಿದ್ದರೂ ಅದಕ್ಕೊಂದು ಮೌಲಿಕ ಚೌಕಟ್ಟು ಒದಗಿದ್ದು ಈಗಲೆ.

ಇಂತಹ ಹಲವು ಪ್ರಬಂಧಗಳು ನಮ್ಮ ತಿಳುವಳಿಕೆಯನ್ನು ವಿಸ್ತರಿಸುತ್ತಾ ಹೋಗುತ್ತವೆ. ʻಒಳಾಂಗಣದ ಬದುಕುʼ ಮನೆಯ ಒಳಾಂಗಣದಿಂದ ಹೊರಟು ಮನಸ್ಸಿನ ಒಳಾಂಗಣದ ಶೋಧವನ್ನೂ ಮಾಡುತ್ತದೆ. ʻಇತರೆಯವರುʼ ಎಂಬ ಸಾಧಾರಣ ಎನಿಸಬಹುದಾದ ವಿಷಯವೊಂದು ಕೇವಲ ಸಾಧಾರಣ ವಿಷಯವಲ್ಲ ಎಂಬುದನ್ನು ತಿಳಿಸಿಕೊಡುತ್ತದೆ. ʻಪ್ರಬಂಧಕಾರನಿಗೆ ಉಪದೇಶಾಮೃತʼವೆಂಬುದು ಇಡಿಯ ಸಂಕಲನದ ಮುನ್ನುಡಿಯೋಪಾಧಿಯ ಪ್ರಬಂಧ. ಹೀಗೆ ಒಂದೊಂದು ಪ್ರಬಂಧವೂ ಅದರದ್ದೇ ಆದ ವ್ಯಾಪ್ತಿ, ಶೋಧನೆ, ವಿಮರ್ಶೆ -ಎಲ್ಲವನ್ನೂ ಒಳಗೊಂಡು, ಓದುಗರ ಮನಸ್ಸನ್ನು ತುಸುವಾದರೂ ಮುಂದಕ್ಕೆ ಕೊಂಡೊಯ್ಯುತ್ತವೆ ಎಂಬುದರ ಬಗ್ಗೆ ಸಂದೇಹವೇನೂ ಇಲ್ಲ.

ಹಾಗೆಂದು ಕೆ. ಸತ್ಯನಾರಾಯಣ ಅವರು ಬರೆದಿರುವ ಎಲ್ಲ ಪ್ರಬಂಧಗಳನ್ನೂ ನಾನು ಪೂರ್ತಿ ಒಪ್ಪಕೊಂಡಿದ್ದೇನೆಂದೇನೂ ಅಲ್ಲ. ಉದಾಹರಣೆಗೆ, ʼಮೊದಮೊದಲ ಓದುಗರುʼ ಎಂಬ ಪ್ರಬಂಧದಲ್ಲಿ ಹೇಳಿರುವ ಎಲ್ಲವನ್ನೂ ಒಪ್ಪಿಕೊಂಡರೂ ಲೇಖಕನೇ ತನ್ನ ಕೃತಿಯ ಮೊದಲ ಓದುಗನಾಗಿರುತ್ತಾನೆ. ಅವನೊಳಗೆ ಒಬ್ಬ ಲೇಖಕನೂ ಓರ್ವ ವ್ಯಕ್ತಿಯೂ (ವಿಮರ್ಶಕನೂ) ಇರುವುದರಿಂದ ಆತನೇ ಮೊದಮೊದಲ ಓದುಗ. ಅದನ್ನು ಒಪ್ಪಿಕೊಂಡರೆ ಪ್ರಬಂಧದ ವ್ಯಪ್ತಿ ಕುಂಠಿತಗೊಳ್ಳುತ್ತದೆ.

ಕೆ. ಸತ್ಯನಾರಾಯಣ ಅವರು ವರ್ತಮಾನ ಕಾಲದ ನಮ್ಮ ನಡುವಿನ ಅತ್ಯುತ್ತಮ ಪ್ರಬಂಧ ರಚಕರಲ್ಲೊಬ್ಬರು ಎಂಬುದರ ಬಗ್ಗೆ ನನಗೆ ತರ್ಕವಿಲ್ಲ.

ಬೀದಿಜಗಳಗಳು ಮತ್ತು ಇತರ ಪ್ರಬಂಧಗಳು
-ಕೆ. ಸತ್ಯನಾರಾಯಣ
ನ್ಯೂ ವೇವ್‌ ಬುಕ್ಸ್‌,
ಬಸವನಗುಡಿ,
ಬೆಂಗಳೂರು-೫೬೦೦೦೪

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter