“ಒಂದು ಸಮಾಜದ, ಕಾಲಖಂಡದ ಅನುಭವಗಳ ದಾಖಲೆ ಕಳೆದು ಹೋಗಬಾರದು”-ಡಾ.ಬಿ.ಜನಾರ್ದನ ಭಟ್

ಡಾ. ಬಿ. ಜನಾರ್ದನ ಭಟ್ :
ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಡಾ. ಬಿ. ಜನಾರ್ದನ ಭಟ್ (ಜನನ 1959) ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್ ಎಂ. ಎ. ಪದವಿ, ಸಿ.ಐ.ಇ.ಎಫ್.ಎಲ್.ನ ಪಿ.ಜಿ.ಡಿ.ಟಿ.ಇ. ಪದವಿ, ಮೈಸೂರು ಮುಕ್ತ ವಿಶ್ವವಿದ್ಯಾಲಯದ ಕನ್ನಡ ಎಂ.ಎ. ಪದವಿಗಳನ್ನು ಪಡೆದು, ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್. ಡಿ. ಪಡೆದಿದ್ದಾರೆ. ಸರಕಾರಿ ಪ.ಪೂ. ಕಾಲೇಜುಗಳಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಮತ್ತು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ‘ಉತ್ತರಾಧಿಕಾರ’ (ವರ್ಧಮಾನ ಪ್ರಶಸ್ತಿ), ‘ಹಸ್ತಾಂತರ’ (ಕನ್ನಡ ಸಾಹಿತ್ಯ ಪರಿಷತ್ತಿನ ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ), ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’ (ಕ.ಸಾ.ಪ.ದ ಭಾರತೀಸುತ ದತ್ತಿ ಪ್ರಶಸ್ತಿ), ‘ಕಲ್ಲು ಕಂಬವೇರಿದ ಹುಂಬ’ (ತರಂಗ ಮಿನಿ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ), ‘ಬೂಬರಾಜ ಸಾಮ್ರಾಜ್ಯ’ (ಕ.ಸಾ.ಪ.ದ ಗುಬ್ಬಿ ಮುರುಗಾರಾಧ್ಯ ದತ್ತಿ ಪ್ರಶಸ್ತಿ ಮತ್ತು ಮಾಸ್ತಿ ಕಾದಂಬರಿ ಪುರಸ್ಕಾರ), ಮತ್ತು ‘ಗಮ್ಯ’ ಅವರ ಕಾದಂಬರಿಗಳು. 'ಮತ್ತೆ ನಾವು ಹಿಂದಿನಂತೆ' ಸಂಕಲನವೂ ಸೇರಿದಂತೆ ಆರು ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ.
ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಹೀಗೆ ವಿವಿಧ ಪ್ರಕಾರಗಳಲ್ಲಿ ಕೃತಿ ರಚಿಸಿರುವ ಡಾ. ಬಿ. ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 96. ವಿಮರ್ಶೆಗಾಗಿ ವಿ.ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿ ಪುರಸ್ಕೃತರು. ಅವರ ಸಮಗ್ರ ಸಾಹಿತ್ಯ ಸಾಧನೆಗಾಗಿ ವಿಶುಕುಮಾರ್ ಪ್ರಶಸ್ತಿಯನ್ನು ಪಡೆದಿದ್ದಾರೆ.  
ವಿಳಾಸ: 
ಬಿ. ಜನಾರ್ದನ ಭಟ್
ಅಕ್ಷರ, ದೇವಸ್ಥಾನದ ರಸ್ತೆ
ಅಂಚೆ: ಬೆಳ್ಮಣ್ಣು. 576111
ದೂರವಾಣಿ: 9481145775

ಆರು ಕಥಾಸಂಕಲನಗಳು, ಎಂಟು ಕಾದಂಬರಿಗಳು, ಮೂವತ್ತಕ್ಕೂ ಹೆಚ್ಚು ವಿಮರ್ಶಾ ಕೃತಿಗಳು, ಮೂರು ವೈಚಾರಿಕಾ ಕೃತಿಗಳು, ಹದಿನೈದಕ್ಕೂ ಹೆಚ್ಚು ಮಕ್ಕಳ ಸಾಹಿತ್ಯ/ ಅನುವಾದ ಕೃತಿಗಳು, ಹಾಗೂ ವಿವಿಧ ಸಂಪಾದನಾ ಕೃತಿಗಳನ್ನು (‘ನಾಡಿಗೆ ನಮಸ್ಕಾರ’ ಮಾಲಿಕೆಯಲ್ಲೇ ಇನ್ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಇವರು ಸಂಪಾದಿಸಿದವರು- ಅವನ್ನು ಹೊರತುಪಡಿಸಿ) ಒಟ್ಟು ಸೇರಿಸಿದರೆ ನೂರು ಕೃತಿಗಳಷ್ಟು ಹತ್ತಿರ ಹತ್ತಿರ ಪ್ರಕಟಿಸಿರುವ ಕನ್ನಡದ ಪ್ರಖ್ಯಾತ ವಿಮರ್ಶಕ, ಕತೆಗಾರ, ಕಾದಂಬರಿಕಾರ ಜೊತೆಗೆ ಪತ್ರಕರ್ತರೂ ಆಗಿರುವ ಸೇವಾನಿವೃತ್ತ ಪ್ರಾಂಶುಪಾಲ ಡಾ. ಬಿ. ಜನಾರ್ದನ್ ಭಟ್ ಅವರು ಇಂಗ್ಲಿಷ್ ಉಪನ್ಯಾಸಕರಾಗಿದ್ದರೂ ಕನ್ನಡ ಸಾಹಿತ್ಯದ ಮೇಲೆ ಅಪಾರ ಪ್ರೀತಿಯನ್ನು ತೋರಿಸುತ್ತಾ ಬಂದವರು. ಅವರು ತಾನು ಬರೆದುದಕ್ಕಿಂತಲೂ ಹಲವು ಪಟ್ಟು ಇತರರನ್ನು ಬರೆಸಿ ಬೆಳೆಸಿದವರು.


ಬಹುಶ ಕನ್ನಡ ವಿಮರ್ಶಾ ಲೋಕದಲ್ಲಿ ಅಪರೂಪದ ದೃಶ್ಯವನ್ನು ಇಲ್ಲಿ ಹೇಳಬೇಕೆನಿಸುತ್ತದೆ. ಉದಯವಾಣಿ, ಮುಂಗಾರು, ಹೊಸದಿಗಂತ, ವಿಜಯ ಕರ್ನಾಟಕ, ಕನ್ನಡ ಜನ ಅಂತರಂಗ, ವಿಶ್ವವಾಣಿ, ಪ್ರಜಾವಾಣಿ….ಸಹಿತ ಇಷ್ಟೊಂದು ದೈನಿಕಗಳ ರವಿವಾರದ ಸಾಪ್ತಾಹಿಕದಲ್ಲಿ ಪುಸ್ತಕ ವಿಮರ್ಶೆ ಮಾಡಿದವರಿದ್ದರೆ ಅದು ಡಾ. ಜನಾರ್ದನ್ ಭಟ್ ಒಬ್ಬರೇ ಅನ್ನಬಹುದು. ಇನ್ನು ಸಾಹಿತ್ಯ ಪತ್ರಿಕೆಗಳಲ್ಲಿ ಮಾಡಿದ ವಿಮರ್ಶೆ ಅದು ಬೇರೆನೇ ಇದೆ. ಆಶ್ಚರ್ಯ ಅಂದರೆ ಇವರು ವಿವಿಧ ಪತ್ರಿಕೆಗಳಿಗೆ ಸಂಕ್ಷಿಪ್ತ ವಿಮರ್ಶೆ ಮಾಡಿದಾಷ್ಟೆ ಗಂಭೀರವಾದ ಸುದೀರ್ಘ ವಿಮರ್ಶೆಗಳನ್ನೂ ಮಾಡುತ್ತಾ ಬಂದವರು. (ಪತ್ರಿಕೆಗಳಲ್ಲಿ ಇಂದು ದೀರ್ಘ ವಿಮರ್ಶೆಗಳಿಗೆ ಸ್ಥಳಾಭಾವ ಇರುವುದು). ಈ ಎರಡೂ ಪ್ರಕಾರದ ವಿಮರ್ಶೆಗಳನ್ನು ಬರೆಯುವವರಲ್ಲಿ ಇವರದು ಗಮನಾರ್ಹ ಹೆಸರು.


1988ರಲ್ಲಿ ಮೂಡಬಿದ್ರೆಯಲ್ಲಿ ಜರಗಿದ ನಾಲ್ಕನೇ ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನದ ದಿನಗಳಿಂದ ನನಗೆ ಡಾ.ಜನಾರ್ದನ್ ಭಟ್ ಪರಿಚಿತರು. ಆ ಸಮ್ಮೇಳನದ ಸಾಹಿತ್ಯ ಸ್ಪರ್ಧೆಯಲ್ಲಿ ನನ್ನ ಕತೆ ಮತ್ತು ಕವನಕ್ಕೆ ಎರಡೂ ವಿಭಾಗದಲ್ಲಿ ಪ್ರಥಮ ಬಹುಮಾನ ಬಂದಾಗ ನನ್ನ ಮುಂಬಯಿ ವಿಳಾಸಕ್ಕೆ “ಸಾಹಿತ್ಯದಲ್ಲಿ ಇನ್ನಷ್ಟು ಸಾಧನೆ ಮಾಡುವಂತಾಗಲಿ” ಎಂದು ಪ್ರೋತ್ಸಾಹದ ಒಂದು ಅಂಚೆ ಕಾರ್ಡ್ ಪ್ರಥಮ ಬಾರಿಗೆ ಬರೆದಿದ್ದರು. ಆ ಮೂಲಕ ಪರಿಚಯವಾದ ನಮ್ಮ ಸ್ನೇಹ, ಸಾಹಿತ್ಯಕ ಚರ್ಚೆ ವರ್ಷದಿಂದ ವರ್ಷಕ್ಕೆ ಗಟ್ಟಿಯಾಗುತ್ತಾ ಬಂದಿದೆ. ಈ ತನಕ ನಾನೇನಾದರೂ ಚಿಕ್ಕ ಪುಟ್ಟ ಸಾಹಿತ್ಯಕ್ಷೇತ್ರದಲ್ಲಿ ಸಾಧನೆ ಮಾಡಿದ್ದರೆ ಅದರ ಹಿಂದೆ ಡಾ. ಬಿ. ಜನಾರ್ದನ್ ಭಟ್ ಅವರ ಪ್ರೋತ್ಸಾಹವೇ ಸಿಂಹಪಾಲು. ಆ ಕಾಲ ಮೊಬಯಿಲ್ ಇಲ್ಲದ ದಿನಗಳಾದರೂ ನಮ್ಮ ನಡುವೆ ಪತ್ರ ವ್ಯವಹಾರಗಳು ನಿರಂತರ ನಡೆಯುತ್ತಿತ್ತು.


ವರ್ಷ 1999 ರಲ್ಲಿ ಗಣೇಶೋತ್ಸವದ ನಂತರ ನಾನೊಮ್ಮೆ ಅನಿವಾರ್ಯವಾಗಿ ಮುಂಬಯಿ ತ್ಯಜಿಸಿ ಮಂಗಳೂರಿಗೆ ಹೋಗಿ ನೆಲೆಸುವ ಪ್ರಸಂಗ ಬಂದಿತ್ತು. ವರ್ಷ 2004 ರ ಉತ್ತರಾರ್ಧದಲ್ಲಿ ಮತ್ತೆ ಮುಂಬಯಿಗೆ ವಾಪಸ್ಸು ಬರುವ ತನಕ ಈ ಐದು ವರ್ಷಗಳ ಕಾಲ ನಾನು ಮಂಗಳೂರಲ್ಲಿದ್ದಾಗ ಅವರ ಬೆಳ್ಮಣ್ಣು ಮನೆಗೆ ಹೋಗಿ ಸಾಹಿತ್ಯದ ಚರ್ಚೆ ಮಾಡಿದ್ದಕ್ಕೆ ಲೆಕ್ಕವಿರದು. 2000 ದಲ್ಲಿ ಕಾಂತಾವರ ಕನ್ನಡ ಸಂಘ ಪ್ರಕಟಿಸಿರುವ ‘ದ.ಕ.ಜಿಲ್ಲಾ ಶತಮಾನದ ಕವಿತೆಗಳು’ ಮತ್ತು 2001 ರಲ್ಲಿ ಪುತ್ತೂರು ಕರ್ನಾಟಕ ಸಂಘ ಪ್ರಕಟಿಸಿರುವ ‘ದ.ಕ.ಜಿಲ್ಲಾ ಶತಮಾನದ ಕತೆಗಳು’ ಇವೆರಡೂ ಮಹತ್ವದ ಸಾಹಿತ್ಯಕ ದಾಖಲೆಗಳು. ಇವುಗಳ ಸಂಪಾದಕರಾಗಿದ್ದವರು ಡಾ. ಬಿ. ಜನಾರ್ದನ್ ಭಟ್. ಈ ಸಮಯ ನನಗೆ ನಮ್ಮ ಮುಂಬಯಿಯ ಪ್ರಖ್ಯಾತ ಕಾದಂಬರಿಕಾರ ಯಶವಂತ ಚಿತ್ತಾಲರು ನೆನಪಾಗುತ್ತಾರೆ. ಅವರು ‘ಪುರುಷೋತ್ತಮ’ ಕಾದಂಬರಿ ಬರೆಯುತ್ತಿದ್ದ ದಿನಗಳಲ್ಲಿ ನಾನು ವಾರ ವಾರವೂ ಚಿತ್ತಾಲರ ಮನೆಗೆ ಹೋಗುತ್ತಿದ್ದೆ. ಚಿತ್ತಾಲರು ತಾವು ಆ ವಾರದಲ್ಲಿ ಬರೆದಿದ್ದ ಪುರುಷೋತ್ತಮ ಕಾದಂಬರಿಯ ಬರೆದಷ್ಟು ಪುಟಗಳನ್ನು ಓದಿ ಹೇಳುತ್ತಿದ್ದರು.ಅನಂತರ ನಾವು ಅದರ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಚಿತ್ತಾಲರು ತಮ್ಮ ಪುರುಷೋತ್ತಮ ಕಾದಂಬರಿ ಪ್ರಕಟವಾದಾಗ ‘ವಾರವಾರವೂ ಮನೆಗೆ ಬಂದು ಚರ್ಚಿಸುತ್ತಿದ್ದ….ಜೋಕಟ್ಟೆ’ ಅಂತಲೇ ಅವರ ಮಾತಿನಲ್ಲಿ ಬರೆದಿದ್ದರು. ಈ ದೃಶ್ಯ ಮರುಕಳಿಸಿದ್ದು ಡಾ. ಬಿ. ಜನಾರ್ದನ್ ಭಟ್ ಅವರು ದ.ಕ.ಜಿಲ್ಲಾ ಶತಮಾನದ ಕವಿತೆಗಳು ಮತ್ತು ದ.ಕ.ಜಿಲ್ಲಾ ಶತಮಾನದ ಕತೆಗಳು ಗ್ರಂಥದ ಸಂಪಾದಕರಾಗಿದ್ದ ದಿನಗಳು. ಆ ದಿನಗಳಲ್ಲಿ ನನಗೆ ಸಾಕಷ್ಟು ಮಹತ್ವದ ಕೃತಿಗಳನ್ನು ಅವರ ಮನೆಯಲ್ಲಿ ಓದುವ ಅವಕಾಶವೂ ಸಿಕ್ಕಿತ್ತು. ಅವಿಭಜಿತ ದ.ಕ. ಜಿಲ್ಲಾ ಶತಮಾನದ ಕವನಗಳು ಕೃತಿಯ ಕವನಗಳ ಆಯ್ಕೆಯ ಪರಿಶೀಲನಾ ಸಮಯ ಈ ಜಿಲ್ಲೆಯಿಂದ ಮುಂಬಯಿಗೆ ವಲಸೆ ಹೋಗಿ ಅಲ್ಲಿಯೂ ಕವನ ಸಂಕಲನಗಳನ್ನು ಪ್ರಕಟಿಸಿದ್ದ ಕೆಲವು ಲೇಖಕರ ಕೃತಿಗಳನ್ನೂ ನಾನು ಡಾ. ಜನಾರ್ದನ್ ಭಟ್ ಅವರಿಗೆ ನೀಡಿದ್ದೆ. ಯಾಕೆಂದರೆ ದ.ಕ.ಜಿಲ್ಲೆಯಿಂದ ವಲಸೆ ಹೋದ ಮುಂಬಯಿಯವರು ಪ್ರಕಟಿಸಿರುವ ಕವನ ಸಂಕಲನಗಳಲ್ಲಿ, ಕತಾ ಸಂಕಲನಗಳಲ್ಲಿ ಉತ್ತಮ ಅನಿಸಿದರೆ ಶತಮಾನದ ಈ ಸಂಕಲನಗಳಲ್ಲಿ ಡಾ.ಜನಾರ್ದನ್ ಭಟ್ ಅವರು ಸೇರಿಸಬಹುದು ಎಂದು. ಅಂತೆಯೇ ಅವರು ಅವುಗಳನ್ನು ಓದಿ ಮುಂಬಯಿಯ ಹಲವಾರು ಕವಿಗಳ ರಚನೆಗಳನ್ನು ಶತಮಾನದ ಕವನ ಸಂಕಲನದಲ್ಲಿ ಪ್ರಕಟಿಸಿರುವುದು ಮರೆಯುವಂತಿಲ್ಲ.


ಪತ್ರಕರ್ತ ಡಾ.ಜನಾರ್ದನ್ ಭಟ್:
1996ರಲ್ಲಿ ಒಮ್ಮೆ ಮಂಗಳೂರಿಗೆ ನಾನು ಬಂದಿದ್ದಾಗ ಡಾ.ಬಿ. ಜನಾರ್ದನ್ ಭಟ್ ಅವರು ‘ಕನ್ನಡ ಜನ ಅಂತರಂಗ’ ಪತ್ರಿಕಾ ಕಛೇರಿಗೆ ನನ್ನನ್ನು ಕರೆದೊಯ್ದಿದ್ದರು. ಅದು ‘ಕರಾವಳಿ ಅಲೆ’ – ‘ಕೆನರಾ ಟೈಮ್ಸ್’ ಬಳಗದ ಪತ್ರಿಕೆಯಾಗಿತ್ತು. ‘ಕನ್ನಡ ಜನ ಅಂತರಂಗ’ ದೈನಿಕದ ಸಾಪ್ತಾಹಿಕ ವಿಭಾಗವನ್ನು ಡಾ. ಜನಾರ್ದನ್ ಭಟ್ ನೋಡಿಕೊಳ್ಳುತ್ತಿದ್ದರು. ಅಲ್ಲಿ ಪತ್ರಿಕೆಯ ಸಂಪಾದಕರಾದ ಬಿವಿಸೀ ಅವರನ್ನು ನನಗೆ ಪರಿಚಯಿಸಿದರು.
ಆ ವರ್ಷದಿಂದ ಮೊದಲ್ಗೊಂಡು ನಾನು ಸುಮಾರು ಐದು ವರ್ಷ ಕಾಲ ‘ಕರಾವಳಿ ಅಲೆ’, ‘ಕನ್ನಡ ಜನ ಅಂತರಂಗ’ ಪತ್ರಿಕೆಗೆ ಮುಂಬಯಿ ವರದಿಗಾರನಾಗಿದ್ದೆ. (1999 ರ ಕೊನೆಗೆ ವಾಪಸ್ ಮಂಗಳೂರಿಗೆ ಬಂದರೂ) 2001 ರ ತನಕ ‘ಕರಾವಳಿ ಅಲೆ’, ‘ಕನ್ನಡ ಜನ ಅಂತರಂಗ’ಕ್ಕೆ ಬರೆಯುತ್ತಿದ್ದೆ. ಡಾ.ಜನಾರ್ದನ್ ಭಟ್ ಸಾಪ್ತಾಹಿಕ ಪುರವಣಿಯ ಕೆಲಸಗಳಿಗಾಗಿ 2000-2001ರ ಆ ದಿನಗಳಲ್ಲಿ ತಿಂಗಳಿಗೆ ಹಲವುಬಾರಿ ಬೈಕಂಪಾಡಿಯಲ್ಲಿನ ಕನ್ನಡ ಜನ ಅಂತರಂಗ ದೈನಿಕದ ಕಚೇರಿಗೆ ಹೋಗುತ್ತಿದ್ದಾಗಲೆಲ್ಲ ನಾನೂ ಅವರ ಜೊತೆಗೆ ಹೋಗಿ ಬರುತ್ತಿದ್ದೆ. ಆವಾಗ ‘ಕರಾವಳಿ ಅಲೆ’ ಬಳಗದಲ್ಲಿ ನಮ್ಮ ಮುಂಬಯಿಯಿಂದಲೇ ಬಂದಿದ್ದ ಪತ್ರಕರ್ತ ಸ್ನೇಹಿತ ಯು.ಕೆ. ಕುಮಾರನಾಥ ಅವರೂ ಇದ್ದುದರಿಂದ ‘ಕರಾವಳಿ ಅಲೆ’ ಬಳಗ ಹೆಚ್ಚು ಹತ್ತಿರವಾಗಿತ್ತು.


ಕತೆಗಾರ- ಕಾದಂಬರಿಕಾರ:
ಆರು ಕಥಾಸಂಕಲನ, ಎಂಟು ಕಾದಂಬರಿ ಪ್ರಕಟಿಸಿದ್ದಾರೆ ಎಂದಾಗ ಕೇವಲ ವಿಮರ್ಶಕ ಡಾ.ಬಿ.ಜನಾರ್ದನ್ ಭಟ್ ಅನ್ನುವುದಾದರೂ ಹೇಗೆ? ಅವರ ಪ್ರಕಟಿತ ಪುಸ್ತಕಗಳೆಲ್ಲ ನನ್ನ ಗ್ರಂಥ ಭಂಡಾರದಲ್ಲಿದೆ. ಹೆಚ್ಚಿನವುಗಳನ್ನು ಓದಿದ್ದೇನೆ. ಅವರ ಕತೆಗಳದೇ ಒಂದು ವಿಶೇಷತೆ ಇದೆ. ‘ಮತ್ತೆ ನಾವು ಹಿಂದಿನಂತೆ’ ಅವರ ಆಯ್ದ ಕತೆಗಳ ಸಂಕಲನ. ಹಳ್ಳಿಯ ರಾಜಕೀಯದ ಚಿತ್ರಣ ಮತ್ತು ಸಮಾಜ ವಿಮರ್ಶೆ ಅವರ ಇತ್ತೀಚಿನ ಅನೇಕ ಕತೆಗಳಲ್ಲಿ ಎದ್ದು ಕಾಣುವಂಥದ್ದು. ಅವರು ಫ್ಯಾಂಟಸಿ ಮಾದರಿಯ ಕತೆಗಳನ್ನೂ ಬರೆದಿದ್ದಾರೆ. ಅವರ ಈವಾಗಿನ ಕತೆಗಳಲ್ಲಿ ವರ್ತಮಾನದ ಬದುಕಿನಲ್ಲಿ ಪ್ರಭಾವ ಬೀರುವ ಚಾರಿತ್ರಿಕ ವಿದ್ಯಮಾನಗಳನ್ನು ಕತೆಯಾಗಿಸುವುದನ್ನೂ ಕಾಣುತ್ತಿದ್ದೇವೆ. ಕೆಲವು ಲಘು ಧಾಟಿಯ ಕತೆಗಳನ್ನೂ ಬರೆದದ್ದಿದೆ. ಇನ್ನು ಅವರ ಸಂಪಾದನೆಯ ‘ಓಬೀರಾಯನ ಕಾಲದ ಕತೆಗಳು’ ಕನ್ನಡಕ್ಕೆ ಮಹತ್ವದ ಕೃತಿಗಳಲ್ಲಿ ಒಂದೆನಿಸಿದೆ. ವಿಶ್ವದ ಪ್ರಖ್ಯಾತ ಕತೆಗಾರರ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ ‘ಜಗತ್‍ಪ್ರಸಿದ್ಧ ಸಣ್ಣ ಕತೆಗಳು’ ಕೂಡಾ ಗಮನಾರ್ಹ.
2007 ರಲ್ಲಿ ‘ಉತ್ತರಾಧಿಕಾರ’ ಕಾದಂಬರಿಯ ಮೂಲಕ ಅವರು ಕಾದಂಬರಿ ರಚನೆಗೂ ಇಳಿದರು. ವಿಶೇಷ ಅಂದರೆ ಅವರೇ ಹೇಳಿಕೊಂಡಂತೆ ಈ ಕಾದಂಬರಿಯನ್ನು ಬರೆಯಲು ಪ್ರಾರಂಭಿಸಿದ್ದು ಅವರು ಇಪ್ಪತ್ತು ವರ್ಷಗಳ ಹಿಂದೆಯಂತೆ. ಇದೀಗ ಅವರು ಒಟ್ಟು ಎಂಟು ಕಾದಂಬರಿಗಳನ್ನು ಬರೆದಿದ್ದಾರೆ. ಡಾ. ಬಿ. ಜನಾರ್ದನ್ ಭಟ್ ಅವರು ಕಾದಂಬರಿಗಾಗುವಷ್ಟು ದೊಡ್ಡ ಹರಹಿನ ಜೀವನಾನುಭವ ಇರುವ ಕಥಾವಸ್ತುಗಳನ್ನು ಮಾತ್ರ ಆಯ್ಕೆ ಮಾಡುತ್ತಾರೆ. ‘ಉತ್ತರಾಧಿಕಾರ’, ‘ಹಸ್ತಾಂತರ’, ‘ಅನಿಕೇತನ’ ಈ ತ್ರಿವಳಿ ಕಾದಂಬರಿಗಳ ಮೂಲಕ ಕಾದಂಬರಿ ಕ್ಷೇತ್ರಕ್ಕೆ ಭರ್ಜರಿ ಎಂಟ್ರಿ ಕೊಟ್ಟವರು. ಅನಂತರ ಈ ಮೂರು ಕಾದಂಬರಿಗಳ ಬಗ್ಗೆ ಬಂದ ವಿವಿಧ ವಿಮರ್ಶೆಗಳನ್ನು ಒಳಗೊಂಡ ‘ನಡುಕಣಿ ತ್ರಿವಳಿ’ ಎನ್ನುವ ಕೃತಿಯೂ (ಸಂ: ನೀಲಾವರ ಸುರೇಂದ್ರ ಅಡಿಗ) ಪ್ರಕಟವಾಗಿದೆ.
ದಕ್ಷಿಣ ಕನ್ನಡದ ನಡುಕಣಿ ಎಂಬ ಕಾಲ್ಪನಿಕ ಹಳ್ಳಿಯಲ್ಲಿ 1930 ರಿಂದ 1975 ರ ವರೆಗೆ ನಡೆದ ಸ್ಥಿತ್ಯಂತರಗಳನ್ನು ಚಿತ್ರಿಸುವ ಮೂಲಕ ಇಡಿಯ ದಕ್ಷಿಣ ಕನ್ನಡ ಜಿಲ್ಲೆಯ ಆ ಕಾಲದ ನೈಜ ಚಿತ್ರಣವನ್ನು ಅವರು ಈ ಕಾದಂಬರಿಗಳಲ್ಲಿ ನೀಡಿದ್ದಾರೆ. ನಾನೂ ದ. ಕ.ಜಿಲ್ಲೆಯವನೆ. ಇಲ್ಲಿನ ಸಮಗ್ರ ಜೀವನವನ್ನು ಸಾಂಕೇತಿಕವಾಗಿ ಹೇಳುವ ಅವರ ಪ್ರಯತ್ನಗಳಲ್ಲಿ ಕರಾವಳಿ ಜಿಲ್ಲೆಯ ಜೀವನ ಕ್ರಮಗಳನ್ನೆಲ್ಲ ಪರಿಚಯಿಸುವ ವಾಸ್ತವ ಕತೆಗಾರಿಕೆ ಈ ಕಾದಂಬರಿಗಳಲ್ಲಿರುವುದು ಗಮನಿಸಿದ್ದೇನೆ. ಅದರ ಜೊತೆ ಅವರು ಬಳಸುವ ಸಂಕೇತಗಳು ಕೂಡಾ ಗಮನಿಸಬೇಕು. ಕಾದಂಬರಿಯಲ್ಲಿ ನೇರವಾಗಿ ಚಿತ್ರಿತವಾದ ಜೀವನ ಕ್ರಮವನ್ನು ಅರ್ಥಮಾಡಿ ಕೊಳ್ಳಬೇಕಾದ ರೀತಿಯನ್ನು ಅದು ತೋರಿಸಿಕೊಡುತ್ತದೆ. ಉದಾಹರಣೆಗೆ ಕಾದಂಬರಿಗಳಲ್ಲಿ ಬರುವ ದೇವಸ್ಥಾನ ಅನ್ನುವುದು ಸ್ಥಳೀಯ ಬದುಕಿನ ಸಂಸ್ಕೃತಿ ಹಾಗೂ ಸಮಾಜದ ಸಾಮರಸ್ಯಕ್ಕೆ ಸಂಕೇತವಾಗಿದೆ ಅನ್ನಬಹುದು. ಅವರು ನಾಲ್ಕನೆಯ ಕಾದಂಬರಿ ‘ಮೂರು ಹೆಜ್ಜೆ ಭೂಮಿ’ ಬರೆದುದರ ಸಂದರ್ಭ ಗಮನಿಸಬೇಕು. ಅವರು ಹೇಳುತ್ತಾರೆ-
“ಮೊದಲ ಮೂರು ಕಾದಂಬರಿಗಳನ್ನು ಬರೆದ ಮೇಲೆಯೂ ನನ್ನನ್ನು ಒಂದು ಅತೃಪ್ತಿ ಕಾಡುತ್ತಿತ್ತು. ಅದು, ಕಾಲಗರ್ಭಕ್ಕೆ ಸಂದು ಹೋಗುತ್ತಿರುವ ನನ್ನ ಪರಿಸರದ ಜನಸಮುದಾಯಗಳ ಒಂದು ಕಾಲದ ಬದುಕು ಮತ್ತು ಆ ಬದುಕಿನ ಮೂಲಕ ಅನಾವರಣವಾದ ಸತ್ಯಗಳನ್ನು ಗ್ರಹಿಸಲು ಬೇಕಾದ ಅಂತರ ಮತ್ತು ಸಾಮೀಪ್ಯ ನನಗೆ ಇರುವ ನಂಬಿಕೆಯಿಂದ ಆ ಅನುಭವಕ್ಕೆ ಸಿಕ್ಕಿದ ಸತ್ಯಗಳನ್ನು ದಾಖಲಿಸಲು ಇನ್ನೊಂದು ಕಾದಂಬರಿಯನ್ನು ಬರೆಯಲೇ ಬೇಕೆನ್ನುವುದೇ ಆಗಿತ್ತು.”
ಹೌದು, ಅವರ ಕಾದಂಬರಿಯಲ್ಲಿ ತುಳುನಾಡಿನ ಜನರ ಬದುಕಿನ ಕ್ರಮ, ಸಹಬಾಳ್ವೆ ಮತ್ತು ದೈವ ದೇವರುಗಳ ವೈವಿಧ್ಯಮಯ ಆರಾಧನೆಗಳು, ಜಾನಪದ ಅಧ್ಯಯನಗಳು …..ಹೀಗೆ ಪ್ರಸಕ್ತ ವಿಚಾರಗಳನ್ನೆಲ್ಲ ಆನುಷಂಗಿಕವಾಗಿ ದಾಖಲಿಸಿರುತ್ತಾರೆ.


ಸಾಹಿತ್ಯ ವಿಮರ್ಶೆ:
ವಿಮರ್ಶಕರೆಂದೇ ಪ್ರಸಿದ್ಧರಾದ ಡಾ.ಬಿ. ಜನಾರ್ದನ್ ಭಟ್ ಅವರು ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ವಿಮರ್ಶಾ ಕೃತಿಗಳನ್ನು ಸಾಹಿತ್ಯಲೋಕಕ್ಕೆ ನೀಡಿದ್ದಾರೆ. ಅವುಗಳಲ್ಲಿ ‘ವಿನೂತನ ಕಥನ ಕಾರಣ’, ‘ಸಾಹಿತ್ಯ ವಿಮರ್ಶೆ: ಒಂದು ಪ್ರವೇಶಿಕೆ’, ‘ಭಾಷಾಂತರ ಅಧ್ಯಯನ: ಒಂದು ಪ್ರವೇಸಿಕೆ’, ‘ಸಾದರ ಸ್ವೀಕಾರ’, ‘ನಾಲ್ಕು ಪ್ರಸ್ತಾವನೆಗಳು’ ……. ಹೀಗೆಲ್ಲ ಹಲವಾರು ಬಹು ಉಪಯುಕ್ತ ಸಾಹಿತ್ಯ ಕೃತಿಗಳನ್ನು ವಿಮರ್ಶಾ ಲೋಕಕ್ಕೆ ನೀಡಿದ್ದಾರೆ.
ಇತ್ತೀಚಿನ ‘ವಿನೂತನ ಕಥನ ಕಾರಣ'(2022) ಕೃತಿ ತಂದದ್ದಕ್ಕೆ ಅವರು ಹೇಳುತ್ತಾರೆ-
“ಆಯ್ದ ವಿಮರ್ಶಾ ಬರಹಗಳ ಒಂದು ಸಂಕಲನವನ್ನು ತಂದು ಸಾಹಿತ್ಯಾಸಕ್ತರ ಮತ್ತು ಸಾಹಿತ್ಯದ ವಿದ್ಯಾರ್ಥಿಗಳ ಅಧ್ಯಯನಕ್ಕೆ ಒದಗಿಸಬೇಕು ಎನ್ನುವ ಆಸೆಯಿತ್ತು. ಯಾಕೆಂದರೆ ನನ್ನ ವಿಮರ್ಶೆಯ ಬರಹಗಳ ಹಲವು ಸಂಕಲನಗಳು ಬಂದಿವೆ. ಕಾಲಾನುಕ್ರಮದಲ್ಲಿ ಪ್ರಕಟವಾದ ಅಂತಹ ಪುಸ್ತಕಗಳಲ್ಲಿ ಸೇರಿಕೊಂಡಿರುವ ಕೆಲವು ಮುಖ್ಯ ದೀರ್ಘ ಪ್ರಬಂಧಗಳು, ವಿಚಾರಗೋಷ್ಠಿಗಳಲ್ಲಿ ಮಂಡಿಸಿದ ಪ್ರಬಂಧಗಳು, ವಿಶೇಷ ಸಂಚಿಕೆಗಳಿಗಾಗಿ ಆಹ್ವಾನಿತ ಲೇಖನಗಳು ಸೇರಿದಂತೆ ಒಂದು ಕೃತಿ ಸಮೀಕ್ಷೆ ಮತ್ತು ಸಾಹಿತಿಗಳ ಬದುಕು ಬರಹಗಳ ಸಮೀಕ್ಷೆಗಳನ್ನು ಹೊರತುಪಡಿಸಿ ವಿವಿಧ ಬಗೆಯ ಸಾಹಿತ್ಯ ಚಿಂತನೆ ಮತ್ತು ವಿಮರ್ಶೆಯ ಬರಹಗಳನ್ನು ಒಂದು ಸಂಪುಟದಲ್ಲಿ ಕೊಟ್ಟರೆ ಆಸಕ್ತರಿಗೆ ಉಪಯೋಗವಾದೀತು ಎಂದು ನಂಬಿದ್ದೇನೆ. ಇದು ನನ್ನ ಸಾಹಿತ್ಯ ವಿಮರ್ಶೆಯ ಮುಖ್ಯ ಬರಹಗಳ ಸಂಪುಟ ಎಂದು ಹೇಳಬಹುದು” ಎಂದಿದ್ದಾರೆ.
ಇತ್ತೀಚೆಗೆ ನಾನು ಬೆಳ್ಮಣ್ಣಿನ ಅವರ ಮನೆಗೆ ಹೋಗಿದ್ದಾಗ ಪತ್ರಿಕಾ ವಿಮರ್ಶೆ ಮತ್ತು ಗಂಭೀರ ವಿಮರ್ಶೆಗಳ ಕುರಿತಂತೆ ಒಂದಷ್ಟು ಮಾತುಕತೆ ನಡೆಸಿದ್ದೆವು. ಆವಾಗ ಅವರ ‘ಸಾಹಿತ್ಯ ವಿಮರ್ಶೆ: ಒಂದು ಪ್ರವೇಶಿಕೆ’ ಕೃತಿಯನ್ನು (2021) ನೆನಪಿಸಿದರು. ಅದರಲ್ಲಿ ಮೊದಲ ಲೇಖನ ‘ಸಾಹಿತ್ಯ ವಿಮರ್ಶೆ ಅಂದರೆ ಏನು?’ ಎನ್ನುವುದರಲ್ಲೇ ಉತ್ತರವನ್ನು ಕಂಡೆ.
ಅದರಲ್ಲಿ “ಕೃತಿಗಳ ಮೌಲ್ಯಮಾಪನ ಮಾಡುವುದಕ್ಕೆ ಸರ್ವಸಮ್ಮತವಾದ ಮಾನದಂಡ ಇಲ್ಲ ಎನ್ನುವುದೇ ಈ ಕ್ಷೇತ್ರದ ವೈಶಿಷ್ಟ್ಯ” ಅಂದಿದ್ದಾರೆ. ಅಂದರೆ ವಿವಿಧ ಸಿದ್ಧಾಂತಗಳಿಗೆ ಸೇರಿದ ಚಿಂತಕರು ತಮ್ಮದೇ ಆದ ಮಾನದಂಡಗಳನ್ನು ನಿರ್ಮಿಸಿಕೊಂಡಿರುತ್ತಾರೆ….ಕಾಲಕಾಲಕ್ಕೆ ವಿವಿಧ ವಿಮರ್ಶಾ ಸಿದ್ಧಾಂತಗಳು ಹುಟ್ಟಿಕೊಳ್ಳುತ್ತಲೇ ಇವೆ.
ಪತ್ರಿಕೆಗಳ ಪುಸ್ತಕ ಪರಿಚಯ:
ಒಂದು ಸಾಹಿತ್ಯ ಕೃತಿಯ ವಿಶ್ಲೇಷಣೆ ಮಾಡಿ, ಅದರ ಹೂರಣ, ಶೈಲಿ, ಆಶಯ ಇತ್ಯಾದಿಗಳ ಪರಿಚಯವನ್ನು ಮಾಡಿಕೊಟ್ಟು, ಓದುಗರೇ ಅರ್ಥಮಾಡಿಕೊಳ್ಳುವಂತೆ ಸೂಚ್ಯವಾಗಿ ಮೌಲ್ಯಮಾಪನ ಮಾಡುವ ಅಥವಾ ಮೌಲ್ಯಮಾಪನ ಮಾಡದೆ ಪರಿಚಯ ಮಾಡುವುದಕ್ಕೆ ಸೀಮಿತವಾಗುವ ‘ಪುಸ್ತಕ ಪರಿಚಯ’ ವಿಧಾನವು ಕೂಡ ಒಂದು ಉಪಯುಕ್ತ ವಿಮರ್ಶೆಯ ವಿಧಾನವಾಗಿದೆ. ಸಾಹಿತ್ಯಕ ಮೌಲ್ಯವುಳ್ಳ ಇಂತಹ ಪುಸ್ತಕ ಪರಿಚಯಗಳ ಮೂಲಕ ಓದುಗರು ಆ ಕೃತಿಯ ಕುರಿತು ತಮ್ಮದೇ ಆದ ಅಭಿಪ್ರಾಯಗಳನ್ನು ತಳೆಯಲು ಸಾಧ್ಯವಿದೆ. ಮೂಲ ಕೃತಿಯನ್ನು ಓದಬೇಕೆಂಬ ಆಸಕ್ತಿ ಹುಟ್ಟಿಸಲು ನೆರವಾಗುವ ಈ ಬಗೆಯ ಪುಸ್ತಕ ಸಮೀಕ್ಷೆಗಳನ್ನು ಬರೆಯಲು ಕೂಡ ವಿಮರ್ಶೆಯ ಪರಿಭಾಷೆಯ ಅರಿವಿರಬೇಕಾಗುತ್ತದೆ. ಪ್ರಸ್ತುತ ಪುಸ್ತಕದಲ್ಲಿ ಈ ಬಗೆಯ ಸಾಮಾನ್ಯ ಪುಸ್ತಕ ಪರಿಚಯ ಮತ್ತು ಮೌಲ್ಯಮಾಪನ ಮಾಡುವ ಎರಡೂ ವಿಧಾನಗಳನ್ನು ಪರಿಚಯಿಸಲಾಗಿದೆ.


ಇನ್ನು ಪತ್ರಿಕೆಗಳ ಪುಸ್ತಕ ವಿಮರ್ಶೆಯ ಮಿತಿ: ಪತ್ರಿಕೆಗಳ ವಿಮರ್ಶೆಯ ಮೇಲಿರುವ ಟೀಕೆ ಏನೆಂದರೆ, ಇವರಿಗೆ ಮೌಲ್ಯಮಾಪನ ವಿಮರ್ಶೆಗೆ ಬೇಕಾದ ‘ಡಿಸ್‍ಇಂಟರೆಸ್ಟೆಡ್‍ನೆಸ್’ (‘ಸ್ವಾರ್ಥರಾಹಿತ್ಯ’ ಇದು ಮ್ಯಾಥ್ಯೂ ಅರ್ನಾಲ್ಡ್ ಬಳಸುವ ಶಬ್ದ) ಇಲ್ಲ ಎನ್ನುವುದು. ಸಮಕಾಲೀನ ಸಂದರ್ಭದಲ್ಲಿ ಲೇಖಕನು ಕೂಡ ತನ್ನ ಬಗ್ಗೆ ಬಂದ ವಿಮರ್ಶೆಯನ್ನು ಓದುವುದರಿಂದ ವಿಮರ್ಶಕನಿಗೆ ತನಗೆ ಪ್ರಾಮಾಣಿಕವಾಗಿ ಅನಿಸಿದ್ದನ್ನು ಹೇಳಲು ಧೈರ್ಯ ಇಲ್ಲದಿರಬಹುದು…….ಎಂಬ ಅನುಮಾನ ಮುಂದಿಟ್ಟಿದ್ದಾರೆ.
ಪುಸ್ತಕ ಮಾಹಿತಿ: ಇನ್ನು ಪತ್ರಿಕೆಗಳಲ್ಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ‘ಪುಸ್ತಕ ಮಾಹಿತಿ’ ಅಂಕಣಗಳು ಸಾಹಿತ್ಯ ವಿಮರ್ಶೆ ಅನಿಸಿಕೊಳ್ಳುವುದಿಲ್ಲ. ಪುಸ್ತಕಗಳ ಲೇಖಕರ ಹೆಸರು, ಪ್ರಕಾಶಕರ ವಿಳಾಸ, ಪ್ರಕಟಣೆಯ ವರ್ಷ, ಗಾತ್ರ ಬೆಲೆ, ಪುಸ್ತಕದ ವಿಷಯ ಇತ್ಯಾದಿಗಳ ಮಾಹಿತಿ ಎನ್ನುವಷ್ಟಕ್ಕೆ ಸೀಮಿತವಾಗಿರುತ್ತವೆ. ಹೆಚ್ಚೆಂದರೆ ಪುಸ್ತಕದ ಸಾರಾಂಶವನ್ನು ತಿಳಿಸುವುದು ಕಂಡುಬರುತ್ತದೆ. ಇವುಗಳನ್ನು ಸಾಹಿತ್ಯ ವಿಮರ್ಶೆ ಎಂದು ಪರಿಗಣಿಸಲಾಗುವುದಿಲ್ಲ ಎನ್ನುತ್ತಾರೆ. ಆದರೆ ನಾಟಕ ಪ್ರದರ್ಶನಗಳ ವಿಮರ್ಶೆಯನ್ನು ತಜ್ಞರೇ ಮಾಡುವುದು ಸೂಕ್ತ ಎಂದಿದ್ದಾರೆ.
ಸಾಹಿತ್ಯದ ಸಂದರ್ಭದಲ್ಲಿ ಪದೇ ಪದೇ ‘ಸಾಹಿತ್ಯ ವಿಮರ್ಶೆ’ ಎಂಬ ಜೋಡಿ ಪದವನ್ನು ಬಳಸುವ ಬದಲಿಗೆ ಕೇವಲ ‘ವಿಮರ್ಶೆ’ ಎಂದು ಬಳಸುವ ಕ್ರಮವಿದೆ. ಇಲ್ಲಿಯೂ ಅದೇ ಕ್ರಮವನ್ನು ಅನುಸರಿಸಲಾಗಿದೆ. ಇವರಿಗೆ ಪಾಠದ ಅನುಭವ ಒಂದೆಡೆ ಇದೆ. ಅತ್ತ ಇಂಗ್ಲಿಷ್ ಎಂಎ. ಮಾಡಿದವರು. ಪಠ್ಯಪುಸ್ತಕವನ್ನೂ ಬರೆದಿದ್ದಾರೆ. ಪುಸ್ತಕ ವಿಮರ್ಶೆ, ಕತೆ, ಕಾದಂಬರಿ ಹೀಗೆಲ್ಲ ಬರೆಯುತ್ತಾ ಹೋದವರು ಡಾ.ಭಟ್.
ಪತ್ರಿಕೆಗಳಿಗೆ ವಿಮರ್ಶಕರಾಗಿ:
ಉದಯವಾಣಿಯ ರವಿವಾರದ ಸಾಪ್ತಾಹಿಕಕ್ಕೆ ಪುಸ್ತಕ ವಿಮರ್ಶೆ ಬರೆಯಲು ಆರಂಭಿಸಿದ ಕತೆಯನ್ನು ಅವರು ಹೀಗೆ ಹೇಳುತ್ತಾರೆ: “ನಾನು ಇಂಗ್ಲಿಷ್ ಎಂ.ಎ. ಮಾಡಿ ಬಂದ ಹೊಸದರಲ್ಲಿ ‘ಕಾವ್ಯದ ಮಿತಿ’ ಎಂಬ ಲೇಖನವನ್ನು ಬರೆದು ಉದಯವಾಣಿಗೆ ಕಳುಹಿಸಿದೆ. ಬನ್ನಂಜೆ ಅವರು ಅದನ್ನು ಸಾಪ್ತಾಹಿಕದ ಮುಖಪುಟ ಲೇಖನವಾಗಿ ಪ್ರಕಟಿಸಿದ್ದಲ್ಲದೆ ಒಂದು ಪತ್ರ ಬರೆದರು. ಅವರನ್ನು ಉದಯವಾಣಿ ಕಛೇರಿಯಲ್ಲಿ ಭೇಟಿ ಮಾಡಲು ಆಹ್ವಾನಿಸಿದ್ದ ಪತ್ರ ಅದು. ಅಲ್ಲಿಗೆ ಹೋದಾಗ ಅವರು, ನನ್ನ ವಿದ್ಯಾಭ್ಯಾಸ ಮತ್ತು ಉದ್ಯೋಗದ ಬಗ್ಗೆ ವಿಚಾರಿಸಿದರು. “ನಿಮ್ಮ ಲೇಖನ ಓದಿದಾಗ ನೀವು ಇಂಗ್ಲಿಷ್ ಎಂ.ಎ. ಓದಿರಬಹುದು ಎಂದು ಅಂದಾಜು ಮಾಡಿದೆ. ಕನ್ನಡ ಸಾಹಿತ್ಯವನ್ನೂ ಓದಿಕೊಂಡಿದ್ದೀರಿ. ನೀವು ಉದಯವಾಣಿ ಸಾಪ್ತಾಹಿಕಕ್ಕೆ ನಿಯಮಿತವಾಗಿ ಪುಸ್ತಕ ವಿಮರ್ಶೆ ಮಾಡುತ್ತೀರಾ?” ಎಂದು ನನ್ನನ್ನು ಕೇಳಿದರು. ಸಂತೋಷದಿಂದ ಒಪ್ಪಿಕೊಂಡು ಅವರು ನಿವೃತ್ತರಾಗುವವರೆಗೂ ಸಾವಿರಾರು ಪುಸ್ತಕಗಳಿಗೆ ಸಮೀಕ್ಷೆ ಬರೆದಿದ್ದೆ. ನನ್ನನ್ನು ವಿಮರ್ಶಕ ಎಂದು ಗುರುತಿಸುವಂತೆ ಮಾಡಿದ್ದು ಬನ್ನಂಜೆ ಗೋವಿಂದಾಚಾರ್ಯರೇ. ನನಗೆ ವಿಮರ್ಶಕನಾಗಬೇಕೆಂಬ ಯಾವ ಆಸೆಯೂ ಇರಲಿಲ್ಲ! ಹೀಗೆ ಹಲವು ಯುವಕರನ್ನು ಬನ್ನಂಜೆಯವರು ಪ್ರೇರೇಪಿಸಿ ಕನ್ನಡ ಸಾಹಿತ್ಯದಲ್ಲಿ ತೊಡಗಿಕೊಳ್ಳುವಂತೆ ಮಾಡಿದ್ದರು” ಎಂದು ಪತ್ರಿಕೆಗಾಗಿ ತನ್ನ ಪುಸ್ತಕ ವಿಮರ್ಶೆಯ ಆರಂಭದ ಘಟನೆಯೊಂದನ್ನು ಸ್ಮರಿಸಿದ್ದಾರೆ.
ಬನ್ನಂಜೆ ಗೋವಿಂದಾಚಾರ್ಯರು ಉದಯವಾಣಿಗೆ ವಿಮರ್ಶೆ ಬರೆಯಲು ಹೇಳಿದಂತೆ, ಇತ್ತ ಬಿ.ವಿ ಸೀತಾರಾಮ್ ಮಂಗಳೂರಿನ ‘ಕೆನರಾ ಟೈಮ್ಸ್’ಗೆ ಅವರನ್ನು ಕರೆದರು. ಇಂಗ್ಲಿಷ್ ಉಪನ್ಯಾಸಕರಾಗಿದ್ದರಿಂದ ‘ಕೆನರಾ ಟೈಮ್ಸ್’ಗೆ ವರದಿ ಮಾಡಲು ಇವರು ಸಮರ್ಥರೆಂದು ಬಿವಿಸೀ ಅವರು ತಿಳಿದು ” ನಾರ್ಮಲ್ ಗೌರವ ಧನವೂ ನೀಡುವೆ” ಅಂದರು. ಹಾಗೆ ಇಂಗ್ಲಿಷ್ ಪತ್ರಿಕೆಗೆ ವರದಿಗಾರರಾಗಿಯೂ ಕರ್ತವ್ಯ ನಿರ್ವಹಿಸಿದ ಅನುಭವ ಅವರಿಗಿದೆ. ಇದರಿಂದ ಪಡುಬಿದ್ರಿ ಮತ್ತು ಕಡಂದಲೆಗಳಲ್ಲಿ ಪ್ರತಿಭಟನೆಯ ಅಲೆಗಳನ್ನೆಬ್ಬಿಸಿದ ಬೃಹತ್ ಯೋಜನೆಗಳ ಒಳಸುಳಿಗಳನ್ನು ತಿಳಿಯಲು, ಈ ಪ್ರದೇಶಗಳಲ್ಲಿ ತಿರುಗಾಡಿ ಜನಜೀವನವನ್ನು ತಿಳಿಯಲು ಅವಕಾಶವಾಯಿತು ಎನ್ನುತ್ತಾರೆ ಜನಾರ್ದನ್ ಭಟ್.
ಅವರ ಹೊಸ ವಿಮರ್ಶಾ ಪುಸ್ತಕಗಳು ಪ್ರಕಟವಾದ ಈ ಸಂದರ್ಭದಲ್ಲಿ ಕೆಲವು ಪ್ರಶ್ನೆಗಳನ್ನು ಕೇಳೋಣ ಅನಿಸಿತು.

ಪ್ರಶ್ನೆ: ಪತ್ರಿಕಾ ವಿಮರ್ಶೆಗಳನ್ನು ಬರೆಯುವುದರಿಂದ ನಿಮ್ಮ ಗಂಭೀರ ವಿಮರ್ಶಾ ಬರಹಗಳಿಗೆ ಅಡಚಣೆ ಏನಾದರೂ ಬಂದದ್ದು ಇದೆಯೋ? ಎರಡೂ ಪ್ರಕಾರವನ್ನು ಹೇಗೆ ನೀವು ನಿಭಾಯಿಸಿರುವಿರಿ? ಕನ್ನಡದ ಅನೇಕ ದೈನಿಕಗಳ ರವಿವಾರದ ಸಾಪ್ತಾಹಿಕಕ್ಕೆ ನೀವು ಪುಸ್ತಕ ವಿಮರ್ಶೆಗಳನ್ನು ಮಾಡಿರುವಿರಿ…..
ಡಾ.ಜನಾರ್ದನ್ ಭಟ್: ಮೊದಲಿಗೇ ಹೇಳುವೆ, ನನ್ನ ಬರಹಗಳನ್ನು ಇಂಗ್ಲಿಷ್ನಲ್ಲಿ ಮುಂದುವರಿಸುವುದೋ ಕನ್ನಡದಲ್ಲೋ… ಎನ್ನುವುದು ನನ್ನ ಆರಂಭದ ಗೊಂದಲವಾಗಿತ್ತು. ನಾನು ‘ಕೆನರಾ ಟೈಮ್ಸ್’ಗೆ ಇಂಗ್ಲಿಷ್ನಲ್ಲೇ ಆವಾಗ ಬರೆಯುತ್ತಿದ್ದೆನಲ್ಲ. ಆದರೂ ನನ್ನ ಮುಖ್ಯ ಇಚ್ಛೆ ಇದ್ದುದು ನಾನು ಕತೆಗಾರ ಮತ್ತು ಕಾದಂಬರಿಕಾರ ಆಗಬೇಕು ಎಂದು. ಆದರೆ ಅವಕಾಶಗಳು ವಿಮರ್ಶೆಯಲ್ಲಿ ಸಿಕ್ಕಾಗ ಅದನ್ನೂ ಮುಂದುವರಿಸಿ ಬಳಸಿಕೊಂಡೆ.
ನಾನು ಉದಯವಾಣಿಯಲ್ಲಿ ಪುಸ್ತಕ ವಿಮರ್ಶೆ ಆರಂಭಿಸುವಾಗ ಸುಮಾರು ಸಾವಿರ ಶಬ್ದಗಳ ತನಕ ಬರೆಯಲು ಅವಕಾಶ ಇತ್ತು. ನಂತರದ ದಿನಗಳಲ್ಲಿ ಬೇರೆ ಪತ್ರಿಕೆಗಳಿಗೆ ಬರೆಯಲು ಆರಂಭಿಸಿದೆ. ಕ್ರಮೇಣ ಅದರ ಅರ್ಧದಷ್ಟು ಶಬ್ದಗಳಲ್ಲಿ ಬರೆಯಬೇಕಾಗಿ ಬಂತು. ಇತ್ತೀಚಿನ ವರ್ಷಗಳಲ್ಲಿ ಪುಸ್ತಕ ವಿಮರ್ಶೆ 250 ರಿಂದ 300 ಪದಗಳಿಗೆ ಸೀಮಿತಗೊಳಿಸಿ ಬರೆಯಬೇಕಾಗಿದೆ.
ಇಲ್ಲಿ ನಾನು ಕ್ರಿಕೆಟ್ ಆಟದಲ್ಲಿರುವ 20- ಟ್ವಂಟಿ, ವನ್ ಡೇ ಮತ್ತು ಟೆಸ್ಟ್ ಮ್ಯಾಚ್‍ಗಳನ್ನು ಉಲ್ಲೇಖಿಸುವೆ. ಎಷ್ಟು ಸಮಯ ಅಥವಾ ಓವರ್‍ಗಳು ಲಭ್ಯ, ನಾವು ಹೊಡೆಯಬಹುದಾದ ಗರಿಷ್ಠ ಸ್ಕೋರ್ ಎಷ್ಟು – ಅದನ್ನು ಗಮನದಲ್ಲಿರಿಸಿ ಆಡಬೇಕಲ್ಲ. ಹಾಗೆ ನಾನೂ ಪತ್ರಿಕೆಗಳಿಗೆ ವಿಮರ್ಶೆ ಮಾಡುವಾಗ ಎಷ್ಟು ಬರೆಯಬೇಕು ಎಂದು ಗಮನಿಸ್ತೇನೆ. ಗೋಷ್ಟಿ ಸೆಮಿನಾರ್ ಗಳಲ್ಲಿ ಕೆಲವು ಕಡೆ ಪ್ರಬಂಧ ಮಂಡನೆ ಒಂದು ಗಂಟೆ ಕಾಲಾವಕಾಶ ಇರುತ್ತದೆ. ಇನ್ನು ಕೆಲವೆಡೆ ಅರ್ಧ ಮುಕ್ಕಾಲು ಗಂಟೆ ಕೊಡುತ್ತಾರೆ. ಇನ್ನು ಹಲವೆಡೆ ಇಪ್ಪತ್ತು ನಿಮಿಷ ಮಾತ್ರ ಅವಕಾಶ ಕೊಡುತ್ತಾರೆ. ನಾವು ಪ್ರಬಂಧ ಮಂಡನೆಯನ್ನು ಕೊಟ್ಟ ಸಮಯಕ್ಕೆ ಹೊಂದಿಸಿಕೊಳ್ಳುತ್ತೇವೆ. ಆದರೆ ಕೃತಿ ರೂಪದಲ್ಲಿ ಬಂದಾಗ ನಾವು ಪುಟಗಳ ಮಿತಿಯನ್ನು ಹಾಕುವುದಿಲ್ಲ. ನನ್ನ ಒಂದು ವಿಮರ್ಶಾ ಲೇಖನ ನೂರು ಪುಟವೂ ಇರುವುದನ್ನು ನೀವು ನೋಡಬಹುದು. ಅದು ಮೂಲದಲ್ಲಿ ಒಂದು ಗಂಟೆಯ ಭಾಷಣವಾಗಿತ್ತು. ಆಮೇಲೆ ಅದನ್ನು ವಿಸ್ತರಿಸಿ ಬರೆದೆ.
ಇನ್ನು ಪತ್ರಿಕಾ ವಿಮರ್ಶೆಗಳನ್ನು ಅನೇಕರು ಬರೆದಿದ್ದಾರೆ. ಜಿ. ಎಸ್. ಆಮೂರ್, ಸಿ. ಎನ್. ರಾಮಚಂದ್ರನ್, ಎಚ್ಚೆಸ್ಸಾರ್, ಗಿರಡ್ಡಿ ಮುಂತಾದ ಹಿರಿಯ ವಿಮರ್ಶಕರೂ ಬರೆಯುತ್ತಿದ್ದರು. ನಾನು ಕೃತಿಯನ್ನು ವಿಮರ್ಶಿಸುವಾಗ ಮೂರು ಅಂಶ ಗಮನಿಸ್ತೇನೆ. ಅವು – ಕೃತಿ ಏನನ್ನು ಹೇಳುತ್ತದೆ? – ಎನ್ನುವುದರ ಸಾಮಾನ್ಯ ಪರಿಚಯ, ಅದರ ವೈಶಿಷ್ಟ್ಯ ಮತ್ತು ಮೌಲ್ಯ ಮಾಪನ.
ಇಲ್ಲಿ ಒಂದುಮಾತು ಹೇಳಬೇಕೆನಿಸಿದೆ. ನಾನು ಗಂಭೀರ ಸಾಹಿತ್ಯ ವಿಮರ್ಶೆಗಳನ್ನು ಮತ್ತು ಗಂಭೀರ ಅಲ್ಲದ ಪುಸ್ತಕ ಸಮೀಕ್ಷೆಗಳನ್ನು ಬರೆದಿದ್ದೇನೆ. ಈ ಎರಡೂ ಪ್ರಕಾರದ ವಿಮರ್ಶೆಗಳನ್ನು ಸೇರಿಸಿ ಅನಂತರ ಪುಸ್ತಕವನ್ನೂ ಮಾಡಿದ್ದೇನೆ. ನಂತರ ಅದು ತಪ್ಪು ಅನಿಸಿತು ಹಾಗೂ ಗಂಭೀರ ವಿಮರ್ಶೆಗಳದ್ದೇ ಬೇರೆಯೇ ಆದ ವಿಮರ್ಶಾಕೃತಿಯನ್ನು ತಂದಿರುವೆ- ಅದೇ ‘ವಿನೂತನ ಕಥನ ಕಾರಣ’
ಆನ್ವಯಿಕ ವಿಮರ್ಶಾ ಕ್ಷೇತ್ರದಲ್ಲಿ ಬಹಳ ಮಹತ್ವದ ಪುಸ್ತಕ 2022ರ ‘ವಿನೂತನ ಕಥನ ಕಾರಣ’.
ಪ್ರಶ್ನೆ: ನೀವು ಸಾಮಾನ್ಯವಾಗಿ ಗದ್ಯಬರಹಗಳನ್ನೇ ಬರೆಯಲು ಹೇಳುತ್ತೀರಿ. ಇಂದಿನ ಕನ್ನಡ ಕಾವ್ಯಕ್ಷೇತ್ರದ ಬಗ್ಗೆ…
ಡಾ.ಜನಾರ್ದನ್ ಭಟ್ : ಈಗ ನಾವು ಕಾಣುತ್ತಿರುವುದು ಕನ್ನಡ ಕವಿತೆ ಅಲ್ಲ. ಕವನಗಳು. ಕವಿತೆ ಅಂದರೆ ಕಿರುಗಾತ್ರದ ಹಾಡುಗಬ್ಬ, ಕವನ ಅಲ್ಲ. ಬೇಂದ್ರೆ, ಕುವೆಂಪು, ಕೆ.ಎಸ್.ನ. ಇವರೆಲ್ಲ ಬರೆದದ್ದು ಕವಿತೆಗಳನ್ನು. ಅಡಿಗರ ಮೋಹನ ಮುರಳಿ, ಕೆಂದಾವರೆ, ಇದು ಬಾಳು ಮುಂತಾದವೆಲ್ಲ ಕವಿತೆಗಳು; ‘ಭೂತ’, ‘ಶ್ರೀ ರಾಮ ನವಮಿಯ ದಿವಸ’ ಇವೆಲ್ಲ ಕವನಗಳು. ಭಾಷೆಯಲ್ಲಿ ಹಾಡುಗಳು, ಭಾವಗೀತೆಗಳೂ ಬೇಕು. ಸುಬ್ರಾಯ ಚೊಕ್ಕಾಡಿಯವರ ‘ಮುನಿಸು ತರವೇ’ ಹಾಡಿನ ಜನಪ್ರಿಯತೆಯನ್ನು ಗಮನಿಸಿರಿ. ಹೊಸ ಕವಿಗಳ ಯಾವುದಾದರೂ ಕವನ ನಿಮ್ಮ ನೆನಪಿನಲ್ಲಿದ್ದರೆ ತಿಳಿಸಿ, ನೋಡೋಣ?
ಆಧುನಿಕ ಕವನಗಳು ಒಂದು ಅನುಭವದ ಅಥವಾ ವಿಷಯದ ಒಂದು ಆಲಂಕಾರಿಕ ಪ್ರತಿಪಾದನೆ. ಅಡಿಗರು, ತಿರುಮಲೇಶರು, ಎಚ್ಚೆಸ್ವಿ, ಎಸ್.ಎಸ್. ಶಿವಪ್ರಕಾಶ್, ರಾಮಚಂದ್ರ ದೇವ ಮುಂತಾದವರು ಈ ಮಾರ್ಗದಲ್ಲಿ ದಾರಿ ತೋರುವ ಹಾಗೆ ಬರೆದಿದ್ದಾರೆ. ಮೊಗಸಾಲೆ, ಚೊಕ್ಕಾಡಿ ಮುಂತಾದವರು ಬೇರೆ ದಾರಿಯಲ್ಲಿ ಬರೆದು ತೋರಿಸಿದ್ದಾರೆ. ಆದರೆ ಹೆಚ್ಚಿನ ಕವಿಗಳು ಬೇರೆ ಕಾವ್ಯವನ್ನು ಅಭ್ಯಾಸ ಮಾಡದೆ ತಮ್ಮ ಅಭಿಪ್ರಾಯಗಳನ್ನೇ ಕವನಗಳೆಂದು ಬರೆಯುತ್ತಿರುವುದರಿಂದ ಮಹತ್ವದ ಕವನಗಳು ಕನ್ನಡದಲ್ಲಿ ಸೃಷ್ಟಿಯಾಗುತ್ತಿಲ್ಲ. ಅಭಿಪ್ರಾಯಗಳ ಮಂಡನೆಗಳೇ ಕವನಗಳೆಂದು ಪ್ರಕಟವಾಗುತ್ತಿವೆ; ಅನುಭವಗಳ ಪ್ರತಿಮಾತ್ಮಕ ನಿರ್ಮಿತಿಗಳು ಬರುತ್ತಿಲ್ಲ.
ಪ್ರಶ್ನೆ : ನಿಮ್ಮ ಹಲವು ಕಾದಂಬರಿಗಳಲ್ಲಿ ಇತಿಹಾಸ, ತುಳುನಾಡಿನ ಜನರ ಬದುಕಿನ ಕ್ರಮ, ದೈವ ದೇವರುಗಳ ಆರಾಧನೆಗಳು, ಜಾನಪದ ಅಧ್ಯಯನಗಳು …..ಇಂಥದ್ದಕ್ಕೇ ಆದ್ಯತೆ ನೀಡಿದ್ದೀರಿ. ಇತ್ತೀಚಿನ ‘ಬೂಬರಾಜ ಸಾಮ್ರಾಜ್ಯ’ ಕಾದಂಬರಿಯ ತನಕವೂ…..ಇದಕ್ಕೆ ಏನಾದರೂ ಪ್ರೇರಣೆ….?
ಡಾ. ಭಟ್: ಇತಿಹಾಸ ನನ್ನ ಇಂಟ್ರೆಸ್ಟಿಂಗ್ ಸಬ್ಜೆಕ್ಟ್. ‘ಉತ್ತರಾಧಿಕಾರ’ ಮೊದಲ ಕಾದಂಬರಿ. ಒಂದು ಸಮಾಜದ ಒಂದು ಕಾಲಖಂಡದ ಅನುಭವಗಳ ದಾಖಲೆ ಕಳೆದು ಹೋಗಬಾರದು ಎಂದೇ ಈ ಕಾದಂಬರಿಯ ರಚನೆಗೆ ಮುಂದಾದೆ. ಸ್ವಾತಂತ್ರ್ಯ ಪೂರ್ವದ ಇತಿಹಾಸವನ್ನು ಇಲ್ಲಿ ಬರೆದಿದ್ದೇನೆ. ನನ್ನ ಏಳು ಕಾದಂಬರಿಗಳಲ್ಲಿ ಆರು ಕಾದಂಬರಿ ಇತಿಹಾಸ ಅಥವಾ ಚರಿತ್ರೆಯನ್ನು ವರ್ತಮಾನದ ಜತೆಗೆ ಮುಖಾಮುಖಿಯಾಗಿಸಿ ಪರಿಶೀಲಿಸುವಂಥದ್ದು. ನಾನು ಬೇರೆ ಬೇರೆ ಬಗೆಯಲ್ಲಿ ಇತಿಹಾಸವನ್ನು ಬಳಸಿಕೊಂಡಿದ್ದೇನೆ. ಇನ್ನು ‘ಹಸ್ತಾಂತರ’ ಕಾದಂಬರಿಯಲ್ಲಿ ಸಾಮಾಜಿಕ ಚರಿತ್ರೆ ಇದೆ. ‘ಅನಿಕೇತನ’ ವರ್ತಮಾನದ ಕೈಗಾರಿಕೀಕರಣಗಳ ಚರಿತ್ರೆ. ‘ಮೂರು ಹಜ್ಜೆ ಭೂಮಿ’ ಕಾದಂಬರಿ ನನ್ನ ಇತಿಹಾಸ ಪ್ರಜ್ಞೆಯ ಮತ್ತೊಂದು ಕಾದಂಬರಿ.
ಇತ್ತೀಚಿನ ‘ಬೂಬರಾಜ ಸಾಮ್ರಾಜ್ಯ’ವನ್ನು ನೀವು ಪ್ರಕಟಣೆಗೆ ಮೊದಲೇ ಓದಿದವರು. ಅದರಲ್ಲಿ ಹೇಳಿದಂತೆ ಈ ಕಾದಂಬರಿ ನನಗೆ ತೃಪ್ತಿ ಕೊಟ್ಟ ಕಾದಂಬರಿ. ಸಮಾಜದ ಸಂಸ್ಕøತಿಯನ್ನು ಅರಿಯುವಲ್ಲಿ ಸದ್ಯದ ಜತೆಗೆ ಪೂರ್ವ ಕಾಲವನ್ನೂ, ಸಾರ್ವಕಾಲಿಕ ಮನುಷ್ಯ ವರ್ತನೆಗಳನ್ನೂ ಒಟ್ಟಾಗಿ, ಜತೆಯಾಗಿ ಗ್ರಹಿಸುವ ಪ್ರಯತ್ನವನ್ನು ಈ ಹಿಂದೆ ‘ಉತ್ತರಾಧಿಕಾರ’, ‘ಹಸ್ತಾಂತರ’ ಮತ್ತು ‘ಮೂರು ಹೆಜ್ಜೆ ಭೂಮಿ’ ಕಾದಂಬರಿಗಳಲ್ಲಿ ನಾನು ಮಾಡಿದ್ದೇನೆ. ‘ಬೂಬರಾಜ ಸಾಮ್ರಾಜ್ಯ’ದಲ್ಲಿ ಈ ಪ್ರಯತ್ನ ಬೇರೊಂದು ಬಗೆಯಲ್ಲಿ ನಡೆದಿದೆ. ನನ್ನ ಹಿಂದಿನ ಕಾದಂಬರಿಗಳಲ್ಲಿ ಇಪ್ಪತ್ತನೆಯ ಶತಮಾನದ ತುಳುನಾಡಿನ ಚಿತ್ರಣಗಳು ಆನುಷಂಗಿಕವಾಗಿ ಬಂದಿದ್ದರೆ ಈ ಕಾದಂಬರಿಯ ಮುಖ್ಯ ಭಾಗವಾಗಿ ಒಂದು ಕಥಾನಕವಿದ್ದು, ಅದರಲ್ಲಿ ಸುಮಾರು ಏಳನೆಯ ಶತಮಾನದ ತುಳುನಾಡಿನ ಒಂದು ರಾಜ್ಯದ ಕಾಲ್ಪನಿಕ ಚಿತ್ರಣವಿದೆ. ಆದರೆ ಮುಖ್ಯವಾದ ಸಂಗತಿ ಏನೆಂದರೆ ಕಾದಂಬರಿಯ ತುಳುನಾಡಿನ ಪ್ರಾಚೀನ ಕಥನ ಪ್ರಸ್ತುತ ಸಮಾಜವನ್ನು ಚಿತ್ರಿಸುವ ಉದ್ದೇಶವುಳ್ಳದ್ದು. ತುಳುನಾಡಿನ ಪ್ರಾಚೀನ ಇತಿಹಾಸ, ನಾಗರಿಕತೆ ಮತ್ತು ಸಂಸ್ಕøತಿಗಳ ಕುರಿತಾದ ನನ್ನ ಅಧ್ಯಯನವು ಈ ಕಾದಂಬರಿಯ ಒಳಗಿನ ಕಥಾನಕವಾಗಿ ದಾಖಲಾಗಿದೆ.
ಈ ರೀತಿ ಪ್ರತೀ ಕಾದಂಬರಿಯೂ ಏನಾದರೂ ಹೇಳಿದ್ದೇನೆ. ‘ಮೂರು ಹೆಜ್ಜೆ ಭೂಮಿ’ಯಲ್ಲಿ ಬೃಹತ್ ಕಾದಂಬರಿಯೊಂದರ ವಿರುದ್ಧ ಗಂಜಿಕೇಂದ್ರ ಮಾಡಿಕೊಂಡು ಹೋರಾಟ ಮಾಡುವ ಚಿತ್ರಣ ಇದೆ. ಅದು ವರದಿಗಾರನಾಗಿ ನಾನು ಕಂಡು, ವರದಿ ಮಾಡಿದ ಹೋರಾಟದ ವಾಸ್ತವ ಚಿತ್ರಣವೇ.
ಬೂಬರಾಜ್ಯ ಸಾಮ್ರಾಜ್ಯ ಇತಿಹಾಸದ ಬಗ್ಗೆನೇ ಇದೆ. ಕಲ್ಲು ಕಂಬವೇರಿದ ಹುಂಬದಲ್ಲೂ ದೈವಾರಾಧನೆ, ಜಾನಪದ ಅಧ್ಯಯನ ಇದೆ. ನಮ್ಮ ಸಂಸ್ಕೃತಿ ಮತ್ತು ಇತಿಹಾಸ ನನಗೆ ಯಾವಾತ್ತೂ ಮುಗಿಯದ ಅನುಭವದ ಅಕ್ಷಯಪಾತ್ರೆ. ಅವನ್ನೆಲ್ಲ ನಾನು ಯಥೋಚಿತವಾಗಿ ಯೂಸ್ ಮಾಡುತ್ತೇನೆ. ಸಮಾಜವನ್ನು ಗ್ರಹಿಸಲು ಇದೆಲ್ಲ ಗ್ರಹಿಕೆಗಳು ಬೇಕಾಗುತ್ತದೆ. ಇತಿಹಾಸವನ್ನು ಇತಿಹಾಸವಾಗಿಯೇ ಓದುತ್ತೇನೆ. ನಂತರ ಕಾದಂಬರಿ ರೂಪದಲ್ಲಿ ಬರೆಯಬೇಕು ಅಂತ ಅನಿಸಿದ್ರೆ ಬರೆಯುತ್ತೇನೆ.
ಸಮಾಜದಲ್ಲಿ ನಡೆಯುವ ಸ್ಥಿತ್ಯಂತರಗಳನ್ನು ಒಳ ತೋಟಿಗಳನ್ನು ಗ್ರಹಿಸಿ ದಾಖಲು ಮಾಡುವುದು ಕಾದಂಬರಿಕಾರನ ಕರ್ತವ್ಯ ಎಂದು ನಾನು ಭಾವಿಸಿದ್ದೇನೆ. ಸಮಾಜ ಎದುರಿಸುವ ತಲ್ಲಣಗಳ ಮೂಲವನ್ನು ಗ್ರಹಿಸಿ, ವಿದ್ಯಮಾನಗಳ ಸತ್ಯವನ್ನು ಮತ್ತು ಅಂತಃಸತ್ವವನ್ನು ಗ್ರಹಿಸಿ ಅದನ್ನು ಕಾದಂಬರಿ ರೂಪದಲ್ಲಿ ಬರೆಯಬೇಕೆನ್ನುವುದು ನನ್ನ ಆಸೆ.
ಪ್ರಶ್ನೆ: ಈಗಿನ ಪೀಳಿಗೆಯ ಅನೇಕ ಲೇಖಕರಿಗೆ ನೀವು ಪತ್ರಕರ್ತರೂ ಆಗಿರುವಿರಿ ಎಂದು ತಿಳಿದಿರಲಾರದು. ಕೆನರಾ ಟೈಮ್ಸ್ ಪತ್ರಿಕೆಯ ಜೊತೆಗೆ ಸೇರಿಕೊಂಡ ಆ ದಿನಗಳ ಬಗ್ಗೆ …..
ಡಾ.ಜ.ಭಟ್: ನಾನು ‘ಕೆನರಾ ಟೈಮ್ಸ್’ ಇಂಗ್ಲಿಷ್ ಪತ್ರಿಕೆಗೆ ವಿಶೇಷ ವರದಿಗಾರ ಅಥವಾ ಪ್ರತಿನಿಧಿಯಾಗಿ ಕೆಲಸ ಮಾಡ್ತಿದ್ದೆ. ಸಂಪಾದಕರಾದ ಬಿವಿ ಸೀತಾರಾಮ್ ಅವರಿಂದಾಗಿ ನಾನು ಪತ್ರಿಕೋದ್ಯಮಕ್ಕೆ ಬಂದೆ. ಆವಾಗ ಕರಾವಳಿಯಲ್ಲಿ ಕೊಜೆಂಟ್ರಿಕ್ಸ್ ಉಷ್ಣವಿದ್ಯುತ್ ಸ್ಥಾವರದ ಗಲಾಟೆ ಜೋರಾಗಿತ್ತು. ಅದು ನಾನು ಕೆಲಸ ಮಾಡುತ್ತಿದ್ದ ಪಡುಬಿದ್ರಿಯಲ್ಲಿಯೇ. ನಾನು ಕೆನರಾ ಟೈಮ್ಸ್ ಗೆ ಅದರ ವರದಿ ಮಾಡುತ್ತಿದ್ದೆ. ಸುಧಾದಲ್ಲೂ ವಿಶೇಷ ಮುಖಪುಟ ಲೇಖನ ಬರೆದಿದ್ದೆ, ಪತ್ರಕರ್ತ ಮಿತ್ರ ಜಯಂತ ಪಡುಬಿದ್ರಿ ಅವರ ಜತೆಗೆ ಸೇರಿ. ನಾವು ಸಾಕಷ್ಟು ಕ್ಷೇತ್ರಕಾರ್ಯ ಮಾಡಿದ್ದೆವು. ಜಯಂತ ಪಡುಬಿದ್ರಿ ಅವರು ಉದಯವಾಣಿಯ ವರದಿಗಾರನಾಗಿದ್ದರು. ಕಡಂದಲೆಯಲ್ಲಿ ಕಲರ್ ಫ್ಯಾಕ್ಟರಿ ಕಾಲಿಡಲಿದೆ ಎಂಬ ಬಗ್ಗೆ ಬಹು ದೊಡ್ಡ ವಿವಾದ ಎದ್ದ ದಿನಗಳವು. ಅದರ ವಿರುದ್ಧ ಬರೆದದ್ದಕ್ಕೋ ಏನೋ, ಜಯಂತ್ ಪಡುಬಿದ್ರಿ ಇದ್ದಕ್ಕಿದ್ದಂತೆ ನಿರುದ್ಯೋಗಿಯಾದರು. ನನಗಾದರೆ ಅದು ಆಂಶಕಾಲಿಕ ಚಟುವಟಿಕೆ, ಹಣಕ್ಕಾಗಿ ಅಲ್ಲ, ಅದರ ಖುಷಿಗಾಗಿ – ಅನುಭವಕ್ಕಾಗಿ- ಮಾಡುತ್ತಿದ್ದ ಕೆಲಸ.
ನಾನು ಹಲವು ವರ್ಷ ‘ಕೆನರಾ ಟೈಮ್ಸ್’ಗೆ ಇಂಗ್ಲಿಷಲ್ಲಿ ಬರೆಯುತ್ತಿದ್ದೆ, ಅನಂತರ ನಾನು ಕನ್ನಡ ಸಾಹಿತಿಯೂ ಹೌದು ಎಂದು ಬಿ.ವಿ.ಸೀ. ಅವರಿಗೆ ಗೊತ್ತಾಗಿ ಅವರದೇ ‘ಕನ್ನಡ ಜನ ಅಂತರಂಗ’ದ ಸಾಪ್ತಾಹಿಕ ವಿಭಾಗದ ಜವಾಬ್ದಾರಿ ನೀಡಿದರು.
ಪ್ರಶ್ನೆ: ಕೊನೆಯದಾಗಿ ಏನಾದರೂ ಹೇಳುವುದಿದ್ದರೆ…
ಡಾ. ಬಿ. ಜನಾರ್ದನ ಭಟ್: ನಾನು ಸಾಹಿತ್ಯಿಕ ಕೆಲಸಗಳನ್ನು ಮತ್ತು ಅನುಭವಗಳ ಸಾಹಿತ್ಯಿಕ ದಾಖಲೀಕರಣವನ್ನು ನನ್ನ ಸಂತೋಷಕ್ಕಾಗಿ ಮಾಡಿದ್ದೇನೆ. ಅದರಿಂದ ನಾನು ಬಹಳಷ್ಟು ಕಳೆದುಕೊಂಡಿದ್ದೇನೆ. ಅದನ್ನು ಲೋಕಕ್ಕೆ ತಿಳಿಸದೆ ನನ್ನ ಬಗ್ಗೆ ಅಭಿಮಾನವಿರುವ ನನ್ನ ಮಿತ್ರರಿಗೂ, ಓದುಗರಿಗೂ ಕೃತಜ್ಞತೆಗಳನ್ನು ತಿಳಿಸಬಯಸುತ್ತೇನೆ. ಸಾಹಿತ್ಯದಿಂದ ಆದ ಲಾಭವೆಂದರೆ ನಿಮ್ಮಂತಹ ನೂರಾರು ಮಿತ್ರರನ್ನು ಸಂಪಾದಿಸಿದ್ದೇನೆ. ನಾನು ನನ್ನ ಉದ್ಯೋಗದಿಂದ ನಿವೃತ್ತನಾಗಿ ಸಮಾಜದ ಸ್ಮರಣೆಯಿಂದ ಮರೆಯಾಗದೆ ಇನ್ನೂ ಪ್ರಸ್ತುತನಾಗಿ ಇದ್ದೇನೆಂದರೆ ಅದಕ್ಕೆ ಸಾಹಿತ್ಯವೇ ಕಾರಣ. ಧನ್ಯವಾದಗಳು.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter