ಬಿ. ಜನಾರ್ಧನ್ ಭಟ್ ರವರದ್ದು ಬಹುಮುಖ ಪ್ರತಿಭೆ. ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಅವರು ಪ್ರಯೋಗ ನಡೆಸಿ ಕನ್ನಡ ಸಾರಸ್ವತ ಲೋಕಕ್ಕೆ ಯಶಸ್ವೀ ಮತ್ತು ಅನನ್ಯ ಕೃತಿಗಳನ್ನು ನೀಡಿದವರು.
“ಬೂಬರಾಜ ಸಾಮ್ರಾಜ್ಯ” ಇದು ಇವರ ೬ನೆಯ ಕಾದಂಬರಿ. ಈ ಕಾದಂಬರಿ ಪ್ರಾಚೀನ ತುಳು ಇತಿಹಾಸದಲ್ಲಿ ನಡೆದ ಮತ್ತು ಆಧುನಿಕ ಶಿಕ್ಷಣ ಕ್ಷೇತ್ರದಲ್ಲಿ ನಡೆಯುವ ಕ್ರೌರ್ಯವನ್ನು ರೋಚಕವಾಗಿ ಚಿತ್ರಿಸುತ್ತದೆ. ಇವರೇ ಹೇಳುವಂತೆ ಇದು ೭ನೆಯ ಶತಮಾನದ ತುಳುನಾಡಿನ ಒಂದು ರಾಜ್ಯದ ಕಾಲ್ಪನಿಕ ಚಿತ್ರಣ ಮತ್ತು ತುಳುನಾಡಿನ ಪ್ರ್ರಾಚೀನ ಇತಿಹಾಸ , ನಾಗರಿಕತೆ ಮತ್ತು ಸಂಸ್ಕೃತಿಯ ಬಗೆಗಿದೆ.
ತುಳುನಾಡನ್ನು ಆಳಿದ ಭೂವರಾಹ ಪಾಂಡ್ಯರಾಜನ ಸಾಹಸ, ರಾಜಕೀಯ ಚಾಣಾಕ್ಷತನ, ದೊರಾಲೋಚನೆ ಮತ್ತು ಸ್ತ್ರೀ ದೌರ್ಬಲ್ಯವನ್ನು ದಾಖಲಿಸುದರೊಂದಿಗೆ, ಕಾದಂಬರಿ ಆ ಕಾಲದ ಜನಜೀವನ, ನಂಬಿಕೆ, ವ್ಯಾಪಾರವನ್ನು ತಿಳಿಸುತ್ತದೆ. ಕ್ಷುಲ್ಲಕ ಕಾರಣಕ್ಕಾಗಿ ಸುಂದರಿಯಾದ ಚಂದ್ರಬಾಗಿಯ ಕೊಲೆ ಮತ್ತು ಅದರ ಪ್ರತಿಕ್ಕಾರಕ್ಕಾಗಿ ರಾಜನ ಕೊಲೆ ಮತ್ತು ಚುಂಯ ಬೊಂಯ ಇವರಿಬ್ಬರ ವಿನಾಕಾರಣ ಕೊಲೆ, ನಂತರ ನಡೆದ ರಾಜಕೀಯ ಬದಲಾವಣೆಯನ್ನು ಬಹಳ ಸ್ವಾರಸ್ಯಕರವಾಗಿ ಬಣ್ಣಿಸಲಾಗಿದೆ. ಕೇರಳದ ರಾಜ ಕುಲಶೇಕರ್ ನಾರ್ಮುಡಿ ಚೇರನ್ ದಕ್ಷ ಆಡಳಿತಗಾರನಾಗಿ ವ್ಯಾಪಾರ ಅಭಿವೃದ್ಧಿಯಲ್ಲಿ ಆಸಕ್ತನಾಗುವುದು, ವೇಶ್ಯಾವೃತ್ತಿ ಮತ್ತು ಗುಲಾಮಗಿರಿಯನ್ನು ದಮನಿಸುವುದು ಹಾಗೆಯೇ ಪಾಂಡ್ಯ ರಾಜ ವಂಶದ ಬಗ್ಗೆ ದಯಾಮಯಿ ಆಗಿರುವುದು ಓದುಗರಿಗೆ ಹಿತವೆನಿಸುತ್ತದೆ.
ಕಾದಂಬರಿಯ ಇನ್ನೊಂದು ಭಾಗದಲ್ಲಿ ಶಿಕ್ಷಣ ಸಂಸ್ಥೆ ಯೊಂದರಲ್ಲಿ ನಡೆಯುವ ರಾಜಕೀಯ, ಮತ್ಸರ, ಪ್ರಾಂಶುಪಾಲರ ಸೋಗಲಾಡಿತನ, ಸಹೋದ್ಯೋಗಿ ಒಬ್ಬನ ಕ್ರೌರ್ಯ ಬಹಳ ಮಾರ್ಮಿಕವಾಗಿ ಅನಾವರಣಗೊಳ್ಳುತ್ತದೆ. ಕಾದಂಬರಿಯ ನಾಯಕ ನೇರ ನುಡಿಯ, ಸಾತ್ವಿಕ ಸ್ವಭಾವದ , ಪ್ರತಿಭಾವಂತ, ದಕ್ಷ ಉಪನ್ಯಾಸಕ ಕೃಷ್ಣ ಚಂದ್ರ ಇಲ್ಲಿ ಅಮಾನವೀಯತೆ ಮತ್ತು ಕ್ರೌರ್ಯಕ್ಕೆ ಬಲಿಯಾಗುತ್ತಾನೆ. ಖಳ ನಾಯಕ ರಂಜನ್ ಕುಮಾರ್ ತನ್ನ ದುಷ್ಟತನಕ್ಕೆ ಉಳಿದ ಶಿಕ್ಷಕರನ್ನು, ಕೆಲ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರನ್ನು ಬಳಸಿಕೊಂಡು, ಪುಡಿ ರಾಜಕಾರಣಿ ವಿರಾಗ್ ನನ್ನ ಒಲಿಸಿಕೊಂಡು ರಾಜಕೀಯ ಪಕ್ಷ ಒಂದರ ನೆರವಿನಿಂದ ಕೃಷ್ಣ ಚಂದ್ರನನ್ನುಸಂಪೂರ್ಣ ಮುಗಿಸುವ ಯತ್ನಕ್ಕೆ ತೊಡಗಿದರೊ, ವಿಫಲನಾಗುತ್ತಾನೆ. ಇಲ್ಲಿ ಕೃಷ್ಣ ಚಂದ್ರನಿಗೆ ಧರ್ಮ ಯುದ್ಧದಲ್ಲಿ ನೆರವಾಗುವ ಉಪ ನಿರ್ದೇಶಕ ಕುಂಜತ್ತೂರ್, ದೇವರಾಜ ರಾಯರು, ಶಿವಪ್ರಸಾದ್ ಮತ್ತು ಗುರುರಾಜ ನಮ್ಮ ಸಾಮಾಜಿಕ, ಸರಕಾರೀ ವ್ಯವಸ್ಥೆಯಲ್ಲಿ ಇನ್ನೂ ಆಶಾವಾದದ ಕಿರಣಗಳು ಇವೆ ಅನ್ನೂದನ್ನ ಸಾರುತ್ತದೆ. ಮದುವೆಯಾಗಿದ್ದು ಅನೈತಿಕ ಸಂಬಂಧ ಹೊಂದಿದ ಗೇಟ್ ಭಾರತಿ ವಿಚ್ಛೇದನದಲ್ಲಿ ನ್ಯಾಯದ ನಿರೀಕ್ಷೆಯಲ್ಲಿರುವುದು (ಅವಳಿಗೆ ನಿರೀಕ್ಷೆಯ ನ್ಯಾಯ ಸಿಗುವುದು) ಮತ್ತು ಕೃಷ್ಣ ಚಂದ್ರರ ಮಹಿಳಾ ಸಹೋದ್ಯೋಗಿಗಳು ಸನ್ನಿಧಿಯ ಸಾವಿನಲ್ಲೂ ಒಂದು ಹೆಣ್ಣಿನ ನೋವನ್ನು ದೌರ್ಜನ್ಯವನ್ನು ಕಾಣದಿರುವುದು ಸಾಮಾಜಿಕ ದುರಂತವೇ ಸರಿ. ಇದಕ್ಕೆ ತದ್ವಿರುದ್ದವಾಗಿ ಅನ್ನಪೂರ್ಣ ಮೆಸ್ ನಡೆಸುವ ಗಿರಿಜಕ್ಕ ಲಕ್ಷ್ಮಿಯಕ್ಕ ಬದುಕಿನ ಸಂಘರ್ಷದಲ್ಲಿ ಅಜೇಯರಾಗಿ ವಿಜೇಯರಾಗಿ ತಮ್ಮ ಅದ್ಭುತ ವ್ಯಕ್ತಿತ್ವ ದಿಂದ ಓದುಗರನ್ನು ಸೆರೆ ಹಿಡಿಯುತ್ತಾರೆ.
ಇತಿಹಾಸದಲ್ಲಿ ಆಸಕ್ತರಿಗೆ ಈ ಕಾದಂಬರಿ ಇಷ್ಟವಾಗುದರಲ್ಲಿ ಸಂದೇಹವಿಲ್ಲ. ಕಾದಂಬರಿಯಲ್ಲಿ ಕೆಲವೆಡೆ ಸಂಶೋಧನೆಗೆ ಸಂಬಂದಿಸಿದ ಚರ್ಚೆ ಮತ್ತು ವಿವರ ತುಸು ಹೆಚ್ಚೇ ಅನಿಸಿ ರಸ ಭಂಗ ಅನಿಸಿದರೂ, ವಿಷಯಕ್ಕೆ ಪೂರಕ ವಾದ್ದರಿಂದ ಅನಿವಾರ್ಯ ಅನ್ನಬಹುದು.
ಕಾದಂಬರಿಯಲ್ಲಿ ಪಾತ್ರ ಚಿತ್ರಣ, ಸನ್ನಿವೇಶ ಜೋಡಣೆ, ಸ್ವಭಾವ ನಿರೂಪಣೆ ಚೆನ್ನಾಗಿ ಬಂದಿದೆ. ಕಾಲೇಜಿನಲ್ಲಿ ಉಪನ್ಯಾಸಕರಿಗೆ ಪಾಠದ ಹೊರತಾಗಿ ನೀಡುವ ಇತರ ಜವಾಬ್ದಾರಿಯ ಪರಿಚಯವಾಗುತ್ತದೆ. ಉಪನ್ಯಾಸಕರ ಧರ್ಮ ಸಂಕಟವೂ ಅರ್ಥವಾಗುತ್ತದೆ. ಮಾತ್ರವಲ್ಲ, ಉಪನಿರ್ದೇಶಕ, ಜಿಲ್ಲಾಧಿಕಾರಿ, ಶಿಕ್ಷಣ ಇಲಾಖೆ ಮುಂತಾದವರ ವಿವಿಧ ಒತ್ತಡಗಳು ಓದುಗರಿಗೆ ಪರಿಚಯವಾಗುತ್ತದೆ.
ಕಾದಂಬರಿಯ ಕೊನೆಯಲ್ಲಿ ನಡೆಯುವ ಕೋಲ ಪೂರ್ಣ ರೀತಿಯ ವಿಡಂಬನೆ ಯಾಗಿದೆ. ಕೊಲೆಯಾದ ರಾಜ, ಚಂದ್ರಬಾಗಿ, ಮತ್ತು ಕುಂಯ ಬೊಂಯ ದೈವಗಳಾಗುವುದು, ಊರಿನವರು ಅವಕ್ಕೆ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿ ಕೋಲ ನಡೆಸುವುದು ಒಂದು ಮೇರು ವಿಡಂಬನೆ. ಹಾಗೆಯೇ , ಕೃಷ್ಣಚಂದ್ರ ಮತ್ತು ಅವರ ಗೆಳೆಯ, ಇದೇ ದೈವಗಳ ಬಗ್ಗೆ ಬರೆದ ‘ಪಾಂಡ್ಯ ಪ್ರತಿಷ್ಠಾನ ಕಾವ್ಯ’ ಪ್ರಕಟಿಸಲು ಅದೇ ದೈವಗಳಲ್ಲಿ ಅನುಮತಿ ಕೇಳುವುದು ಹಾಸ್ಯಸ್ಪದ ಮತ್ತು ಇನ್ನೊಂದು ವಿಡಂಬನೆ .
ಒಟ್ಟಿನಲ್ಲಿ ಕಾದಂಬರಿ ಮನಸ್ಸಿಗೆ ಮುದ ನೀಡಿದೆ, ವಿಚಾರ ಮಂಥನಕ್ಕೆ ಆಸ್ಪದ ಮಾಡಿದೆ. ಜನಾರ್ದನ್ ಭಟ್ ರವರಿಗೆ ಅಭಿನಂದನೆಗಳು.