ಪ್ರೀತಿಯೆಂಬ ಮಾಯೆ

“ಓದು ಮಗಳೇ ಓದು. ಎಷ್ಟು ಓದಬೇಕೆನ್ನಿಸುತ್ತೋ ಓದು. ಏನು ಓದಬೇಕೆನ್ನಿಸುತ್ತೋ ಓದು..” ಹೇಳುತ್ತಿರುತ್ತಿದ್ದ ರಾಘವ.
“ನಿಮ್ಮ ಮಾತು ಕೇಳಿದ್ರೆ ಮಗಳಿಗೆ ಮದುವೆ ಮಾಡೋ ಯೋಚನೇನೇ ಇದ್ದ ಹಾಗೆ ಕಾಣ್ತಿಲ್ಲ..”
“ಬಿಡೇ, ಮದುವೆ ಆಗೋದು ಇದ್ದಿದ್ದೇ. ಆಗದೇ ಇದ್ರೆ ಪ್ರಪಂಚ ಮುಳುಗಿ ಹೋಗಲ್ಲ. ನಿನ್ನ ಮಗಳು ದೊಡ್ಡ ಆಫೀಸರ್‌ ಆದ್ರೆ ಕೋಡು ಬರಲ್ವಾ ನಿಂಗೆ?”
“ಹಾಲಿಲ್ಲ, ಬಟ್ಟಲಿಲ್ಲ, ಗುಟುಕ್‌ ಅಂದ್ರಂತೆ. ನಿನ್ನೆ. ಮೊನ್ನೆ ಪಿ.ಯು,ಸಿ.ಗೆ ಸೇರ್ಕೊಂಡಿದಾಳೆ. ಆಗ್ಲೇ ನೀವು ಆಕಾಶಕ್ಕೆ ಏಣಿ ಹಾಕ್ತಿದೀರಿ..”
“ಈಗ್ಲಿಂದ ಅವಳ ಮನಸ್ಸನ್ನ ತಯಾರು ಮಾಡ್ಬೇಕು ಕಣೇ. ಮಕ್ಕಳ ಮನಸ್ಸು ಅಂದ್ರೆ ಮೇಣ ಇದ್ದ ಹಾಗೆ. ನಾವು ಯಾವ ಆಕಾರ ಕೊಡ್ತೀವೋ ಅದೇ ಆಕಾರಕ್ಕೆ ಬರುತ್ತೆ”
“ಬರ್ಲಿಲ್ಲ ಅಂತಿಟ್ಕೊಳ್ಳಿ. ಈಗಿನ ಮಕ್ಕಳು ನಮ್ಮ ಹಾಗೆ ಪೆದ್ದರಲ್ಲ. ವಯಸ್ಸಿಗಿಂತಾ ಹೆಚ್ಚು ತಿಳಿವಳಿಕೆ ಇರುತ್ತೆ..”
“ಮಾತೆತ್ತಿದ್ರೆ ಅಪಶಕುನ ಹೇಳ್ತಿ ನೀನು. ಇದೇ ಓದು, ಅದೇ ಓದು ಅಂತ ಅವಳಿಗೆ ಬಲವಂತ ಮಾಡಲ್ಲ ನಾನು. ಅವಳಿಗಿಷ್ಟವಾಗಿದ್ದನ್ನ ಓದ್ಲಿ. ಏನಾದ್ರೂ ಸಾಧಿಸಿ ತೋರಿಸ್ಲಿ. ತಲೆಗೆಳೆದರೆ ಕಾಲಿಗಿಲ್ಲ, ಕಾಲಿಗೆಳೆದರೆ ತಲೆಗಿಲ್ಲ ಅನ್ನೋ ದರಿದ್ರ ಬದುಕು ನಮ್ಮ ಕಾಲಕ್ಕೆ ಮುಗೀಲಿ. ಮಗಳು ತನ್ನ ಕಾಲ ಮೇಲೆ ನಿಂತ್ಕೊಂಡು ಸುಖವಾಗಿರ್ಲಿ..”
“ದರಿದ್ರ ಬದುಕು ಅಂತ ಯಾಕಂತೀರಿ? ದೇವರು ನಮಗೇನು ಕಮ್ಮಿ ಮಾಡಿಲ್ಲ. ಉಣ್ಣೋಕೆ, ಉಡೋಕೆ ಅರೆ ಆಗದಷ್ಟು ಕೊಟ್ಟಿದಾನೆ..”
”ಕೊಟ್ಟಿದಾನೆ, ಕೊಟ್ಟಿದಾನೆ. ಸ್ವಂತದ್ದೊಂದು ಗೂಡು ಮಾಡ್ಕೊಳ್ಳೋ ಯೋಗ್ತಿ ಕೊಡೋಕಾಗ್ಲಿಲ್ಲ ನಿನ್ನ ದೇವ್ರಿಗೆ. ಬಾಡಿಗೆಮನೇಲೇ ಬದುಕು ಮುಗಿದು ಹೋಗುತ್ತೇನೋ. ಅಥವಾ ಮಗಳು ಓದಿ, ದೊಡ್ಡ ಕೆಲಸಕ್ಕೆ ಸೇರಿ….”
“ಅಪ್ಪ, ಅಮ್ಮನನ್ನ ಉಯ್ಯಾಲೆಮಣೆ ಮೇಲೆ ಕೂರಿಸಿ ತೂಗಿ..”
ಮಾಲಿನಿಯ ಮಾತಿನಲ್ಲಿ ಕುಚೋದ್ಯವೋ, ವ್ಯಂಗ್ಯವೋ, ವಿಷಾದವೋ ಏನೋ ಒಂದು ಹಣಿಕಿ ಹಾಕುವುದು ಹೊಸದೇನಲ್ಲ ಎಂದು ಅವಳ ಸ್ವಭಾವವನ್ನು ಅರ್ಥೈಸಿಕೊಂಡ ರಾಘವನಿಗೆ ಗೊತ್ತಿದೆ. ಸಾಧಾರಣವಾಗಿ ಮಹತ್ವಾಕಾಂಕ್ಷೆ ಹೆಚ್ಚಿಗೆ ಇರುವುದು ಹೆಣ್ಣುಮಕ್ಕಳಿಗೆ ಎನ್ನುವ ಅವನ ತಿಳಿವಳಿಕೆ ಹೆಂಡತಿಯ ವಿಷಯದಲ್ಲಿ ಸುಳ್ಳಾಗಿದೆ. ಮಾಲಿನಿ ಬದುಕನ್ನು ಅರ್ಥ ಮಾಡಿಕೊಂಡಿರುವ ಪರಿಯೇ ಬೇರೆ. ʼಯಾವುದು ಆಗ್ಬಾರ್ದು ಅಂತ ನೀವು ಪದೇ ಪದೇ ಉರು ಹಾಕ್ತಿರ್ತೀರೋ ಅದೇ ಆಗ್ಬಿಡುತ್ತೆ. ಹತ್ತು ಉದಾಹರಣೆ ಉಂಟು ನನ್ಹತ್ರʼ ಅನ್ನುತ್ತಾಳೆ ಮಾಲಿನಿ.
“ಸ್ವಲ್ಪ ತಿರುಗಾಮುರುಗಾ ಮಾಡಿ ಹೇಳಿದ್ರೆ ಯಾವುದು ಆಗ್ಬೇಕು ಅಂತ ಕುತ್ತಿಗೇವರೆಗೆ ನಾವು ಆಸೆ ಇಟ್ಕೊಂಡಿರ್ತೀವೋ ಅದು ಆಗಲ್ಲ ಅಂತ ನೀನು ಹೇಳೋದಾ?”
“ಹಾಗೆಲ್ಲಿ ಹೇಳ್ದೆ ನಾನು?”
“ಮತ್ತೆ?”
“ಬಿಡಿ, ಅವಳ ಓದು ಮುಗಿಯೋಕೆ ಕಡಿಮೇಂದ್ರೂ ನಾಲ್ಕೈದು ವರ್ಷ ಉಂಟಲ್ಲ? ಈಗ್ಲೇ ಯಾಕೆ ಗುಡ್ಡ ಗುಣಿಸೋದು?”
ಇಂತಾ ಮಾತುಕತೆಗಳು ಗಂಡ, ಹೆಂಡಿರ ನಡುವೆ ಅವೆಷ್ಟು ಬಾರಿ ನಡೆದಿವೆಯೋ ಯಾರಿಟ್ಟಿದ್ದಾರೆ ಲೆಕ್ಕ? ಎಲ್ಲರ ಮನೆಯ ಹಾಗೆ ಇವರ ಮನೆಯಲ್ಲೂ. ಗಂಡ, ಹೆಂಡತಿ ಅಂದರೆ ವಾದ ವಿವಾದ ಇದ್ದಿದ್ದೇ.
**
ಅಪ್ಪನ ಕನಸನ್ನು ಆವಾಹಿಸಿಕೊಂಡ ಐಶ್ವರ್ಯ ಅದನ್ನು ಈಡೇರಿಸುವ ಪಣ ತೊಟ್ಟವಳಂತೆ ಓದಿನಲ್ಲಿ ತನ್ನನ್ನು ಮನಃಪೂರ್ವಕವಾಗಿ ತೊಡಗಿಸಿಕೊಂಡಿದ್ದಳು. ಪರಿಣಾಮವಾಗಿ ಸ್ಕೂಲ್‌ ಫೈನಲ್‌ನಲ್ಲಿ ೯೭%. ಪರಿಣಾಮವಾಗಿ ಒಳ್ಳೆಯ ಕಾಲೇಜಿನಲ್ಲಿ ಪ್ರವೇಶ. ಪರಿಣಾಮವಾಗಿ ಅವಳು ಇಚ್ಛಿಸಿದ ಐಚ್ಛಿಕ ವಿಷಯಗಳು ಕೈಗೆಟುಕಿ ಓದಿನಲ್ಲಿ ಮತ್ತಷ್ಟು ಆಸ್ಥೆ. ಬರೀ ಬುದ್ಧಿವಂತಿಕೆ ಇದ್ದರೆ ಸಾಲದು, ಅದರೊಡನೆ ಕಠಿಣ ಅಭ್ಯಾಸವೂ ಅತ್ಯಗತ್ಯ ಎಂಬುದನ್ನು ರಾಘವ ಮಗಳ ತಲೆಗೆ ತುಂಬಿಸಿದ್ದ. ಪಿ.ಯು.ಎರಡನೇ ವರ್ಷಕ್ಕೆ ಬಂದಾಗ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಎಂಬಂತೆ ಓದುತ್ತಿದ್ದಳು ಹುಡುಗಿ. ಕಾಲೇಜಿನಲ್ಲಿ ಕೇಳಿದ ಪಾಠಪ್ರವಚನಗಳಷ್ಟೇ ಸಾಲದು ಎನ್ನುವ ಬಹುಜನರ ನಂಬಿಕೆಯಂತೆ ಸಾವಿರಾರು ರೂಪಾಯಿ ಸುರಿದು ಮಗಳನ್ನು ಖಾಸಗಿ ಟ್ಯೂಷನ್ನಿಗೆ ಸೇರಿಸಿದ್ದ. ಬೆಳಗಿಂದ ರಾತ್ರಿಯವರೆಗೆ ಮಗಳು ದಣಿಯುತ್ತಿದ್ದುದನ್ನು ಕಂಡು ಹೆತ್ತಮ್ಮನಿಗೆ ಕನಿಕರ. ತಟ್ಟೆಯಲ್ಲಿ ಅನ್ನ ಕಲೆಸಿಕೊಡುವುದು ಮಾತ್ರವಲ್ಲ, ಎಷ್ಟೋ ಸಲ ತುತ್ತು ತಿನ್ನಿಸಿ, ಮಗಳ ಕೈಯಿಂದ ಮೂರುಕಾಸಿನ ಮನೆಕೆಲಸ ಮಾಡಿಸುತ್ತಿರಲಿಲ್ಲ ಮಾಲಿನಿ. ಅವಳ ಒಳ ಉಡುಪುಗಳನ್ನೂ ಒಗೆದು ಕೊಡುವಷ್ಟು ಅತಿರೇಕದ ಪ್ರೀತಿ. ಗಂಡನ ಮಹತ್ವಾಕಾಂಕ್ಷೆಯನ್ನು ಹಗುರವಾಗಿ ಪರಿಗಣಿಸಿದಂತಾ ತೋರ್ಪಡಿಕೆಯಲ್ಲೂ ಕನಸುಗಳು ಅವಳಲ್ಲೂ ಮೊಳಕೆಯೊಡೆದಿದ್ದುವು, ನಾಳಿನ ರಂಗಿನ ಕನಸುಗಳು..

ತಪ್ಪಿದ್ದೆಲ್ಲಿ? ಗೊತ್ತಾಗುತ್ತಿಲ್ಲ. ಪ್ರೀತಿಯೆಂಬ ಮಾಯೆ ಮಗಳನ್ನು ಆವರಿಸಿಕೊಂಡು ಆಟವಾಡಿಸಲು ಶುರು ಮಾಡಿದೆಯೆಂಬುದು ಹೆತ್ತವರಿಗೆ ಗೊತ್ತೇ ಆಗಿರಲಿಲ್ಲ. ಅವರ ಕಣ್ಣಲ್ಲಿ ಮಗಳು ಇನ್ನೂ ಅಬೋಧ ಹುಡುಗಿ. ಏನಂದರೇನೂ ಅರಿಯದ ಮುಗ್ಧೆ. ಬಾಗಿಲು ಮುಚ್ಚಿಕೊಂಡ ಕೋಣೆಯಲ್ಲಿ ಐಶ್ವರ್ಯ ಪಾಠಪ್ರವಚನಗಳಲ್ಲಿ ತಲ್ಲೀನಳಾಗಿರುತ್ತಾಳೆಂದು ಇವರು ನಂಬಿಕೊಂಡಿದ್ದರೆ ಅಲ್ಲಿ ಮೊಬೈಲು ನಡುರಾತ್ರಿ ಮೀರಿದರೂ ಸಂದೇಶ ರವಾನಿಸುತ್ತಿರುತ್ತಿತ್ತು. ಸ್ವೀಕರಿಸುತ್ತಿರುತ್ತಿತ್ತು. ಕನಸಿನರಮನೆಗೆ ಬಾಗಿಲು ತೆರೆಯುತ್ತಿತ್ತು. ಇಂಜಿನಿಯರಿಂಗ್‌ಗೆ ಮೆರಿಟ್‌ ಸೀಟು ತೆಗೆದುಕೊಂಡು ತಮ್ಮ ಹೆಮ್ಮೆಯನ್ನು ಮೆರೆಸುತ್ತಾಳೆಂದುಕೊಂಡಿದ್ದ ಮಗಳು ಕನಿಷ್ಠ ಅಂಕಗಳನ್ನು ತೆಗೆದು ಪಾಸು ಮಾಡಿಕೊಂಡಾಗ ಎದೆ ಒಡೆದುಕೊಂಡ ಹೆತ್ತವರು ಅಂದುಕೊಂಡಿದ್ದೇ ಬೇರೆ. ಎಲ್ಲೋ ಮೋಸ ಆಗಿದೆ. ಮತ್ತೊಮ್ಮೆ ಅಂಕಪಟ್ಟಿಯ ಪರಿಷ್ಕರಣೆಯಾಗಬೇಕು ಅಥವಾ ಮತ್ತೊಮ್ಮೆ ಪೇಪರುಗಳ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಬೇಕು. ಈಗಾಗಲೇ ಮಗಳ ಓದಿನ ಖರ್ಚಿಗೆ ಏದುಬ್ಬಸ ಬಿಡುತ್ತಾ ಗಾಡಿ ಎಳೆಯುತ್ತಿದ್ದ ರಾಘವ ಸೋತು ಕಂಗಾಲಾಗಿದ್ದ. ʼಯಾಕೆ ಹೀಗಾಯ್ತು? ನಮಗೇ ಯಾಕೆ ಹೀಗಾಯ್ತು? ಯಾವ ಗ್ರಹಚಾರ? ಅಥವಾ ತಮ್ಮ ಸಂಸಾರಕ್ಕೆ ಆಗದವರೇನಾದರೂ ಮಾಟ ಮಾಡಿಸಿದರೇ? ಹುಚ್ಚು ಮನಸ್ಸಿಗೆ ಹತ್ತು ಹಳವಂಡಗಳು. ಅತ್ತು, ಕರೆದು, ನೆಲ ಕಚ್ಚಬೇಕಾದ ಮಗಳು ನಿರುದ್ವಿಗ್ನಳಾಗಿ ಓಡಾಡಿಕೊಂಡಿದ್ದಾಳೆ.
“ಯಾಕೆ ಹೀಗಾಯ್ತು ಕಂದಾ? ಪರೀಕ್ಷೇಲಿ ಚೆನ್ನಾಗೇ ಬರೆದಿದ್ದಿ ಅಲ್ವಾ?”
“ಇಲ್ಲ…” ಅಂದಿದ್ದಳು ಮಗಳು ಕಿವಿಯ ಬಳಿಯೇ ಸಿಡಿಲು ಹಾದು ಹೋದಂತೆ ದಂಪತಿ ಅದುರಿ ಬಿದ್ದಿದ್ದರು. “ಏನಂತಿದ್ದಿ? ಚೆನ್ನಾಗಿ ಓದಿರ್ಲಿಲ್ವಾ ನೀನು? ಏನು ಕಮ್ಮಿ ಮಾಡಿದ್ವಿ ನಿಂಗೆ? ಕೂತ್ಗೊಂಡು ಓದೋಕೆ ಏನು ರೋಗ ಬಡಿದಿತ್ತು ನಿಂಗೆ?” ಕೊನೆಯ ವಾಕ್ಯ ತನ್ನ ಗಂಡ ಆಡಿದ್ದಾ ಎಂಬಂತೆ ದಿಗಿಲಿನಿಂದ ಅವನ ಮುಖ ನೋಡಿದ್ದಳು ಮಾಲಿನಿ. ಮಗಳನ್ನು ತಲೆಯ ಮೇಲೆ ಹೊತ್ತು ಮೆರವಣಿಗೆ ಮಾಡಿಸುತ್ತಿದ್ದವನಿಂದ ಇಂತಾ ಮಾತು? ತೀವ್ರ ಹತಾಶೆ ಎನ್ನುವುದು ನಾಲಿಗೆಯನ್ನು ಹರಿತವಾಗಿಸಿತ್ತು. ವಿವೇಕವನ್ನು ನುಂಗಿ ಹಾಕಿತ್ತು. ಮಾಲಿನಿ ಮಗಳ ಭುಜ ಬಳಸಿ ಎದೆಗೊರಗಿಸಿಕೊಂಡಿದ್ದಳು. ಅನಿರೀಕ್ಷಿತ ಆಘಾತದಿಂದ ಮಗಳು ಮತಿಭ್ರಮಣೆಗೊಳಗಾಗಿ ಏನೋ ಮಾತಾಡುತ್ತಿದ್ದಾಳೆಂದು ಹೆತ್ತ ಕರುಳಿನ ನಂಬುಗೆ. ಇಲ್ಲ, ಭ್ರಮಾಧೀನಳಾಗಿ ಮಾತಾಡಿದ್ದಲ್ಲ ಐಶ್ವರ್ಯ. ವಾಸ್ತವವನ್ನು ಜೀರ್ಣಿಸಿಕೊಂಡೇ ಮಾತಾಡುತ್ತಿದ್ದಾಳೆ ಮಗಳು ಮತ್ತು ಇದು ಹೀಗೇ ಆಗುತ್ತದೆ ಎನ್ನುವ ನಿರೀಕ್ಷೆ ಕೂಡಾ ಅವಳಿಗಿತ್ತು ಎನ್ನುವಂತಿದೆ ಅವಳ ವರ್ತನೆ.
“ಏನಾಗಿದ್ಯೇ ನಿಂಗೆ? ಯಾಕೆ ಇಷ್ಟು ಕಡಿಮೆ ನಂಬರ್‌ ಬಂತು?” ಕಣ್ಣೀರು ಕಪಾಲಕ್ಕಿಳಿಯುತ್ತಿರಲು ಆರ್ತಳಾಗಿ ಮಗಳನ್ನು ನೋಡುತ್ತಾ ಕೇಳಿದ್ದಳು ಮಾಲಿನಿ.
“ಓದು ನಂಗೆ ತಲೆಗೆ ಹತ್‌ತಿಲ್ಲ ಅಮ್ಮಾ. ಯಾವುದೋ ಒಂದು ಡಿಗ್ರಿ ಮಾಡ್ಕಂತೀನಿ. ಸಾಕು ಇಷ್ಟು ನಂಬರು..”
“ಯಾವುದೋ ಒಂದು ಡಿಗ್ರಿ ಮಾಡ್ಕೊಳ್ಳೋಕೆ ಇಷ್ಟು ದುಡ್ಡು ಸುರಿದಿದ್ದಾ? ಪ್ರೈವೇಟ್‌ ಟ್ಯೂಷನ್‌ ಅಂತ ಅದು ಬೇರೆ..” ರಾಘವನ ಗಂಟಲು ಗದ್ಗದಿಸಿ ಮುಂದಿನ ಮಾತು ನಿಂತು ಹೋಯ್ತು.
“ನಿಮ್ಮ ಆಸೆ ಪೂರೈಸಿಕೊಳ್ಳೋಕೆ ನನ್ನ ಬಲಿಪಶು ಮಾಡ್ತಿದೀರಾ? ನನ್ನಷ್ಟಕ್ಕೆ ನನ್ನ ಬಿಟ್ಬಿಡಿ..” ಮಗಳು ಕೋಣೆ ಸೇರಿ ಬಾಗಿಲು ಹಾಕಿಕೊಂಡಿದ್ದಳು.
“ಏನಾದ್ರೂ ಹೆಚ್ಚುಕಮ್ಮಿ ಮಾಡ್ಕೊಂಡ್ರೆ ಏನ್ರೀ ಗತಿ? ಜಾಸ್ತಿ ಮಾತಾಡೋಕೆ ಹೋಗ್ಬೇಡಿ..” ಗಂಡನಿಗೆ ತಾಕೀತು ಮಾಡಿದ್ದಳು ಮಾಲಿನಿ. ಬಾಡಿಗೆಮನೆಯಲ್ಲಿದ್ದ ಒಂದೇ ರೂಮನ್ನು ಮಗಳ ಓದಿಗೆ ತೆರವು ಮಾಡಿಕೊಟ್ಟು ನಡುಮನೆ ಸೇರಿಕೊಂಡಿದ್ದ ದಂಪತಿ ಅವಳನ್ನು ಒಂಟಿಯಾಗಿರಲು ಬಿಟ್ಟಿದ್ದೇ ತಪ್ಪಾಗಿ ಹೋಯ್ತು ಎಂದು ತಲೆ ಚಚ್ಚಿಕೊಂಡಿದ್ದರು. ಅವಳ ಮೇಲೆ ನಿಗಾ ಇಡಲು ಸಾಧ್ಯವಾಗದಂತೆ ಏಕಾಂತ ಕಲ್ಪಿಸಿಕೊಟ್ಟಿದ್ದೇ ದುಬಾರಿಯಾಯ್ತಾ? ಪಶ್ಚಾತ್ತಾಪ ಕೂಡಾ ಮಗಳ ಮುಖದಲ್ಲಿ ಗೋಚರಿಸುತ್ತಿಲ್ಲ. ಹೆತ್ತವರ ಪ್ರೀತಿ ಎಂದರೆ, ಮಕ್ಕಳ ಕುರಿತಾದ ಅಪೇಕ್ಷೆ ಎಂದರೆ ಇಷ್ಟು ಕ್ಷುಲ್ಲಕವೇ? ಅದು ತಮ್ಮ ಹಕ್ಕು ಎಂದು ಭಾವಿಸಿಕೊಳ್ಳುತ್ತಾರೆಯೇ ಈಗಿನ ಮಕ್ಕಳು? ಏನಾಗಿದೆ ಈಗಿನ ಹುಡುಗರಿಗೆ? ಈಗಿನವರಿಗಾ ಅಥವಾ ಹಿಂದಿನಿಂದ ಹೀಗೇ ಇದ್ದಿದ್ದಾ? ಹೆಚ್ಚು ಮಕ್ಕಳಿರುತ್ತಿದ್ದ ಮನೆಯಲ್ಲಿ ಈ ಥರದ ನಿರೀಕ್ಷೆಗಳೇ ಇರದೆ ಹೇಗೋ ಬೆಳೆಯುತ್ತಿದ್ದರು. ಏನೋ ಓದುತ್ತಿದ್ದರು. ಏನೋ ಒಂದು ಬದುಕು ಕಟ್ಟಿಕೊಳ್ಳುತ್ತಿದ್ದರು. ಆಗಿದ್ದು ಆಗಿ ಹೋಗಿದೆ. ʼಮಗಳ ಮನ ಒಲಿಸಿ, ಮತ್ತೊಮ್ಮೆ ಪರೀಕ್ಷೆ ಬರೆಸಿ, ಹಳೆಯದು ಮರುಕಳಿಸದಂತೆ ಅವಳನ್ನು ಸರಿದಾರಿಯಲ್ಲಿ ನಡೆಸಿ..ʼ ರಾಘವ ಉಗುಳು ನುಂಗಿಕೊಳ್ಳುತ್ತಾ ಭವಿಷ್ಯದ ಚಿಂತೆಯಲ್ಲಿ ಕಳೆದು ಹೋಗಿದ್ದ.

“ಸಾಕು ಇಷ್ಟು ನಂಬರು. ಇಷ್ಟು ಬಂದಿದ್ದೇ ಹೆಚ್ಚು..” ಮಗಳು ಅಪ್ಪನ ಆಸೆಗೆ ತಣ್ಣೀರೆರಚಿದ್ದಳು. ʼಏನಾಗಿದ್ಯೇ ನಿಂಗೆ? ಏನಾಗಿದ್ಯೇ ನಿಂಗೆ?ʼ ಸುತ್ತಿ ಬಳಸಿ ಹಲವು ಸಲ ಹಲವು ರೀತಿಯಲ್ಲಿ ಕೇಳಿ ಕೇಳಿ ಕೇಳಿ ಮಗಳ ಬಾಯಿ ಬಿಡಿಸಿದ್ದಳು ಮಾಲಿನಿ. ಓದುವುದಕ್ಕಿಂತಾ ಮದುವೆಯಾಗುವುದರ ಬಗ್ಗೆ ಮನಸ್ಸು ಜೋತು ಬಿಟ್ಟಿದ್ದಾಳೆ ಹುಡುಗಿ. ಯಾರನ್ನೋ ಪ್ರೀತಿಸುತ್ತಿದ್ದಾಳಂತೆ. ʼಮದುವೆಯಾಗುವುದಾದರೆ ಅವನನ್ನೇ..ʼ ಎಂದು ದೃಢ ನಿರ್ದಾರ ಮಾಡಿದ್ದಾಳೆ. ಪ್ರೀತಿ ಮುನ್ನೆಲೆಗೆ ಬಂದಿದೆ. ಓದು ಹಿಂದೆ ಬಿದ್ದಿದೆ. ದಿವಸಾ ಓಡಾಡುವ ಬಸ್ಸಿನಲ್ಲಿ ಬೆಳೆದ ಪರಿಚಯ. ಎರಡು ವರ್ಷಗಳಲ್ಲಿ ಪ್ರೀತಿ ಬೇರು ಬಿಟ್ಟು ಭದ್ರವಾಗಿದೆ. ಅವಾಕ್ಕಾಗಿದ್ದಳು ಹೆತ್ತಮ್ಮ. ಪ್ರೀತಿಸುವ ವಯಸ್ಸಾ ಇದು? ಅಥವಾ ಪ್ರೀತಿಗೆ ವಯಸ್ಸಿನ ಹಂಗಿಲ್ಲವೇ? ಹೇಗಿದ್ದ ಹುಡುಗಿ ಹೇಗಾಗಿಬಿಟ್ಟಳು? ಮುಂದಿನ ಭವ್ಯ ಭವಿಷ್ಯದ ಕನಸು ಕಾಣಬೇಕಾಗಿದ್ದವಳು ಯಾರದೋ ಹಿಂದೆ ಬಿದ್ದು, “ಹುಚ್ಚನೇ ನಿಂಗೆ? ಯಾರೋ ದಾರೀಲಿ ಸಿಕ್ಕಿದೋರನ್ನ ಪ್ರೀತಿ ಮಾಡ್ತೀನಿ ಅಂತೀಯಲ್ಲ, ಇದಕ್ಕೆ ಪ್ರೀತಿ ಅನ್ನಲ್ಲ ಕಣೇ. ಆಕರ್ಷಣೆ ಅಂತಾರೆ. ಈ ವಯಸ್ಸಲ್ಲಿ ಹೀಗೆಲ್ಲಾ ಅನ್ನಿಸೋದು ತಪ್ಪಲ್ಲ. ಆದರೆ ಅದೇ ಮಖ್ಯ ಅಂದ್ಕೊಳ್ಳೋದು ತಪ್ಪು. ಈಗ್ಲೇ ಮದುವೆಯಾಗ್ತೀನಿ ಅಂತಿದೀಯಲ್ಲ, ತಲೆ ಕೆಟ್ಟಿರೋದು ಹೌದು..”
“ಅವನ ಮನೇಲಿ ಮದುವೆಗೆ ಒತ್ತಾಯ ಮಾಡ್ತಿದಾರಂತೆ ಅಮ್ಮಾ. ಅದಕ್ಕೇ…”
“ಅದಕ್ಕೆ?”
“ಇವತ್ತಲ್ಲಾ ನಾಳೆ ನಿಂಗೆ ಹೇಳ್ಬೇಕು ಅಂತಿದ್ದೆ. ಆದ್ರೆ ಅಪ್ಪನ್ನ ನೆನೆಸ್ಕೊಂಡು ಹೆದರಿಕೆಯಾಗ್ತಿತ್ತು..”
“ಅಷ್ಟಾದ್ರೂ ಅಂಜಿಕೆ ಇಟ್ಕೊಂಡಿದೀಯಲ್ಲ, ಈಗ್ಲಾದ್ರೂ ಹೆತ್ತೋರ ಮಾತಿಗೆ ಬೆಲೆ ಕೊಡು. ಚೆನ್ನಾಗಿ ಓದಿ ಮುಂದೆ ಬಾ. ಆಗ್ಲೂ ಅವನನ್ನೇ ಮದುವೆ ಆಗ್ಬೇಕು ಅನ್ನಿಸ್ತಿದ್ರೆ ಆಗ ನೋಡೋಣ..”
“ಅಲ್ಲೀವರೆಗೆ ಅವನು ಕಾಯ್ಬೇಕಲ್ಲ?”
“ಕಾಯ್ದಿದ್ರೆ ಬಿಡ್ಲಿ. ಅವನ ಪ್ರೀತಿ ಎಷ್ಟಿದೆ ಅಂತ ಗೊತ್ತಾದ ಹಾಗಾಗುತ್ತೆ”
“ಸುಮ್ನಿರು ಅಮ್ಮಾ. ನಾವಿಬ್ರೂ ಎಷ್ಟು ತಲೆ ಕೆಡಿಸ್ಕೊಂಡಿದೀವಿ ಗೊತ್ತಾ? ಅದೆಲ್ಲಾ ನಿಂಗೊತ್ತಾಗಲ್ಲ..”
ಆಹಾ, ಅಮ್ಮನಿಗೆ ಪ್ರೀತಿಯ ಪಾಠ ಹೇಳಿ ಕೊಡುವಷ್ಟು ಬೆಳೆದು ದೊಡ್ಡವಳಾಗಿದ್ದಾಳೆ ಮಗಳು. ʼಹೇಳಿದ್ದು ಕೇಳು. ಇಲ್ದಿದ್ರೆ ಎರಡು ಬಿಗೀತೀನಿ. ಹಲ್ಲುದುರಿಸ್ತೀನಿ..ʼ ಎಂದೆಲ್ಲಾ ನಾಲಿಗೆ ಹರಿಬಿಡುವ ಹಾಗಿಲ್ಲ. ಸೂಕ್ಷ್ಮ ವಿಚಾರ. ಒಂದು ಹೋಗಿ ಮತ್ತೊಂದಾದರೆ? ಜೀವಮಾನವಿಡೀ ಕೊರಗುತ್ತಾ ಇರಬೇಕಾದೀತು. ಏನಿದೆ ಪರಿಹಾರ? ಅಪ್ರಬುದ್ಧ ವಯಸ್ಸಿನ ಮಕ್ಕಳು ಪ್ರೀತಿ, ಪ್ರೇಮ ಎನ್ನುವ ದೊಡ್ಡ ದೊಡ್ಡ ಪದಗಳ ಮಾತಾಡುವುದು, ಹೆತ್ತವರನ್ನು ಧಿಕ್ಕರಿಸಿ ಮನೆ ಬಿಟ್ಟು ಓಡಿ ಹೋಗುವುದು, ಕೆಲವೊಮ್ಮೆ ಜೀವಕ್ಕೇ ಆಪತ್ತು ತಂದುಕೊಳ್ಳುವುದು ಹೊಸ ವಿಷಯವೇನಲ್ಲ. ತಮಗೆ ತಿಳಿಯುವುದಿಲ್ಲ. ಬೇರೆಯವರು ಹೇಳಿದ್ದನ್ನು ಕೇಳುವುದಿಲ್ಲ. ಪ್ರೀತಿ ಅಂದರೆ ಅದೇನೋ ದೊಡ್ಡ ಆದರ್ಶದ ಸಮಾಚಾರ ಎನ್ನುವ ಭ್ರಮೆ. ಸುತ್ತಲಿನ ವಾತಾವರಣ ಅಂತದು. ನೋಡುವ ಸಿನಿಮಾಗಳು ಅಂತವು. ಕೇಳುವ ಸುದ್ದಿಗಳು ಅಂತವು. ಸಾಲದ್ದಕ್ಕೆ ಇಂತಾದ್ದಕ್ಕೆಲ್ಲಾ ಪ್ರಚೋದಿಸುವ, ಹಾದಿ ಸುಗಮಗೊಳಿಸುವ ಕೈಲಿರುವ ಮೊಬೈಲು. ಹೇಳುತ್ತಿದ್ದಾಳೆ ಐಶ್ವರ್ಯ, “ಅವನಿಗೂ ಗೌರ್ಮೆಂಟ್‌ ಕೆಲಸ ಉಂಟಲ್ವಾ ಅಮ್ಮ? ನಾನೂ ಓದಿ ಕೆಲಸಕ್ಕೆ ಸೇರ್ಕೋತೀನಿ. ಈಗ ನೀವಿರೋದಕ್ಕಿಂತಾ ಚೆನ್ನಾಗೇ ಇರ್ತೀವಿ”
“ನಮ್ಮ ಸುದ್ದಿ ನಿಂಗೆ ಬೇಡ. ಭಾರೀ ಮುಂದುವರಿದಿದ್ದಿ..”ಕ್ರುದ್ಧಳಾಗಿ ಹೇಳಿದಳು ಮಾಲಿನಿ, ಅವಡುಗಚ್ಚಿಕೊಳ್ಳುತ್ತಾ…
**
ಮಗಳು ದಿನಾ ಓಡಾಡುತ್ತಿದ್ದ ಬಸ್ಸಿನ ನಿರ್ವಾಹಕನನ್ನು ಮದುವೆಯಾಗಲು ತುದಿಗಾಲಿನಲ್ಲಿ ನಿಂತಿರುವುದು ರಾಘವನ ನಿದ್ದೆಗೆಡಿಸಿತ್ತು. ಜಾತಿಯ ಅಡ್ಡ ಗೋಡೆ ಉಗುಳು ನುಂಗಿಕೊಳ್ಳುವಂತೆ ಮಾಡಿತ್ತು. ಈ ಕಾಲದಲ್ಲಿ ಅದಕ್ಕೆಲ್ಲಾ ತೀರಾ ತಲೆ ಕೆಡಿಸಿಕೊಳ್ಳಬಾರದು ಅಂದುಕೊಂಡರೂ ಚೇಳು ಕುಟುಕಿದಂತೆ ಮನಸ್ಸಿನೊಳಗೆ ಚುಚ್ಚುವ ಯಾತನೆ. ಏನೂ ಅಗಬಹುದಿತ್ತು ಮಗಳು ಜೀವ ಒತ್ತೆಯಿಟ್ಟು ಆ ಸೌಕರ್ಯ ತಾವು ಒದಗಿಸಿಕೊಡುತ್ತಿದ್ದೆವು. ಯಾರೋ? ಎಂತವನೋ? ನೋಡಿ, ಕೇಳಿ, ವಿಚಾರಿಸಿ, ವಿಮರ್ಶಿಸಿ ಮಾಡಿದ ಮದುವೆಗಳೆಷ್ಟೋ ಹದ ತಪ್ಪಿರುವಾಗ ಇದೆಂತಾ ಹುಡುಗಾಟ? “ಬೇಡ ಕಣೇ. ಮೊದಲು ನಿನ್ನ ಓದು ಮುಗೀಲಿ..” ಗಂಡ, ಹೆಂಡತಿ ಗಿಣಿಗೆ ಹೇಳಿದಂತೆ ಬುದ್ಧಿ ಹೇಳಿದರು. ಇವರು ಬುದ್ಧಿವಾದ ಹೇಳಿದಷ್ಟೂ ಮಗಳ ಮೊಂಡು ಹಟ ಹೆಚ್ಚುಹೆಚ್ಚಾಯ್ತು.
“ನಿಮ್ಮ ಮಾತೇ ನಡೀಬೇಕು ಅಂತ ಯಾಕೆ ಅಂದ್ಕೋತೀರಿ ನೀವು? ನಂಗೂ ಮನಸ್ಸು ಅನ್ನೋದು ಇರಲ್ವಾ?” ಸಣ್ಣ ಬಾಯಲ್ಲಿ ದೊಡ್ಡ ಮಾತು ಬಂತು. ರಾಘವ ಕೊನೇ ಅಸ್ತ್ರ ಪ್ರಯೋಗ ಮಾಡಿದ,
“ವರ್ಷ ಹದಿನೆಂಟಾಗಿರ್ಬೇಕು ಅಂತ ಗೊತ್ತಿಲ್ಲನೇ ನಿಂಗೆ? ಮೊದಲೇ ಮದುವೆ ಮಾಡ್ಕೊಂಡ್ರೆ ಅವನನ್ನ ಒದ್ದು ಒಳಗೆ ಹಾಕ್ತಾರೆ..”
“ಗೊತ್ತಿದೆ ಅಪ್ಪಾ. ಹದಿನೆಂಟು ತುಂಬೋಕೆ ಇನ್ನೆಷ್ಟು ತಿಂಗಳು ಮಹಾ? ಅಲ್ಲೀವರೆಗೆ ಕಾಯ್ತೀವಿ..”
ಪರಿಸ್ಥಿತಿ ಕೈ ಮೀರಿದೆ ಎಂದು ಗೊತ್ತಾಯ್ತು ದಂಪತಿಗೆ. ತೀರಾ ಒತ್ತಡ ಹಾಕಿದರೆ, ಗೃಹಬಂಧನ ವಿಧಿಸಿದರೆ ಏನೂ ಆಗಬಹುದು. ಮಗಳನ್ನು ಕಳೆದುಕೊಳ್ಳುವುದು, ಉಳಿಸಿಕೊಳ್ಳುವುದು ತಮ್ಮ ಕೈಲಿದೆ. ಇಲ್ಲಿ ಅನುನಯ ನಾಟುವುದಿಲ್ಲ. ಬುದ್ಧಿಮಾತು ಪಥ್ಯವಾಗುವುದಿಲ್ಲ. ದಂಪತಿ ಕೊರಗು ಹಚ್ಚಿಕೊಂಡರು. ಮಹತ್ವಾಕಾಂಕ್ಷೆಯ ರಾಘವ ಮುದ್ದು ಮಗಳು ಅನಿರೀಕ್ಷಿತವಾಗಿ ಕೊಡಮಾಡಿದ ಈ ಪ್ರಹಾರದಿಂದ ಹೆಂಡತಿಗಿಂತಾ ಹೆಚ್ಚು ಘಾಸಿಗೊಂಡಿದ್ದ, ನೋವುಣ್ಣುತ್ತಿದ್ದ ಎನ್ನುವ ಸತ್ಯವನ್ನು ದಿನೇ ದಿನೇ ಎಂಬಂತೆ ನವೆದು ಹೋಗುತ್ತಿದ್ದ ಅವನ ದೈಹಿಕ ಸ್ಥಿತಿ ಎಂತವರಿಗಾದರೂ ಅರ್ಥ ಮಾಡಿಸುತ್ತಿತ್ತು. ಕಂಗಾಲಾಗಿರುವ ಅಪ್ಪನನ್ನು ನೋಡಿಯಾದರೂ ಮಗಳು ಕರಗಬಾರದೇ? ನಿರ್ಧಾರ ಬದಲಿಸಬಾರದೇ ಎಂದು ಪರಿತಪಿಸುತ್ತಿದ್ದಳು ಮಾಲಿನಿ.
“ಒಂದಿಷ್ಟು ಸಮಯ ಕೊಡು ಕಂದಾ. ನಾಲ್ಕು ವರ್ಷ ಕಳೀಲಿ..” ಮತ್ತದೇ ಪುನರಾವರ್ತನೆ.
“ಹೇಗಾಗುತ್ತೆ ಅಮ್ಮಾ? ಅವನ ಮನೇಲಿ..”
“ಯಾರೇ ಅವನು ಮನೆ ಹಾಳ? ಸಾಯ್ಲಿ ಅವನು. ಸುಖವಾಗಿದ್ದ ಸಂಸಾರಕ್ಕೆ ಬೆಂಕಿ ಹಚ್ಬಿಟ್ಟ..”
“ಅಪ್ಪಂಗೆ ಯಾರಾದ್ರೂ ಕೆಟ್ಟ ಮಾತು ಅಂದ್ರೆ ಸುಮ್ನಿರ್ತೀಯಾ ನೀನು?”
“ಅವರ ಜೊತೆ ಇಪ್ಪತ್ತು ವರ್ಷ ಸಂಸಾರ ಮಾಡಿದೀನಿ ಕಣೇ. ಯಾರನ್ನ ಯಾರಿಗೋ ಹೋಲಿಸ್ಬೇಡ..”
“ನಾನೂ ಮಾಡ್ತೀನಿ, ನೋಡ್ತಿರು..”
ಇಲ್ಲ. ಹೆಬ್ಬಂಡೆ ಕರಗುತ್ತಿಲ್ಲ. ಪ್ರೀತಿಯ ಪಿತ್ಥ ಇಳಿಯುತ್ತಿಲ್ಲ. ʼಒಮ್ಮೆ ಅವನನ್ನು ಮನೆಗೆ ಕರೆಸಿಕೊಳ್ಳುವ ಮಾತುʼ ಅಪ್ಪ, ಅಮ್ಮನ ಬಾಯಿಂದ ಉದುರಿ ಬೀಳಲಿ ಎಂದು ಮಗಳು ನಿರೀಕ್ಷಿಸುತ್ತಿದ್ದಾಳೇನೋ. ಕೊನೇಪಕ್ಷ ಒಂದೇ ಜಾತಿಯಾದರೂ ಆಗಿದ್ದರೆ ಅವಳ ಹಣೆಬರಹಕ್ಕೆ ಅವಳನ್ನು ಬಿಟ್ಟು ಬಿಡಬಹುದಿತ್ತೇನೋ. ಅದರಿಂದಲೇ ಮನಸ್ಸು ಈ ಸಂಬಂಧವನ್ನು ನಿಷ್ಠುರವಾಗಿ ನಿರಾಕರಿಸುತ್ತಿದೆಯೇನೋ. ಎಲ್ಲರಿಗೂ ಅವರವರ ಜಾತಿಯ ಕುರಿತಾಗಿ ಇರುವುದಿಲ್ಲವೇ ಅಭಿಮಾನ? ಆ ಕಾರಣದಿಂದಲೇ ಈಗಲೂ ಜೀವ ತಗೆಗೆಯುವಂತಾ ಘಟನೆಗಳು ನಡೆದು ಪ್ರಚಾರಕ್ಕೆ ಬರುವುದಿಲ್ಲವೇ? ಜಾತಿಯ ಚೌಕಟ್ಟಿನೊಳಗಿನ ಬದುಕು ಅಂದರೆ ಭದ್ರತೆಯ ಭಾವನೆ. ಎಲ್ಲರೊಡನೊಂದಾಗಿ ಬಾಳುವ ಸುಖ, ನೆಮ್ಮದಿ. ಮೀರಿದರೆ ಯಾವ ಆಪತ್ತು ಬರುತ್ತದೆಯೋ ಯಾರು ಬಲ್ಲರು? ಮೋಹದ ಪೊರೆ ಕಳಚಿ ವಾಸ್ತವದರ್ಶನವಾದಾಗ ಹಿಮ್ಮರಳುವ ಹಾದಿ ಮುಚ್ಚಿ ಹೋಗಿರುವುದಿಲ್ಲವೇ? ದಾರಿ ಕಂಡುಕೊಂಡರೂ ಎಂದೆಂದೂ ಮಾಸದ ಕಲೆ ಉಳಿದು ಹೋಗುವುದಲ್ಲವೇ? ಯೋಚಿಸಿದಷ್ಟೂ ದಂಪತಿಯ ತೊಳಲಾಟ ಹದ್ದು ಮೀರುತ್ತಿತ್ತು. ʼವರ್ಷ ಹದಿನೆಂಟಾಗುವುದನ್ನು ಮಗಳು ಕಾದು ಕೂತಿದ್ದಾಳೆʼ ಎನ್ನುವ ಸತ್ಯ ರಾಘವನನ್ನು ವಿಲಿವಿಲಿಗುಟ್ಟಿಸುತ್ತಿತ್ತು. ನಿದ್ದೆ ಕೆಡಿಸಿತ್ತು,. ʼಇಂತಾದ್ದು ಲೋಕದಲ್ಲಿ ಬೇಕಾದಷ್ಟು ನಡೆಯುತ್ತೆ. ನಮ್ಮನೇಲೂ ನಡೀತು ಅಂತ ಸಮಾಧಾನ ಮಾಡ್ಕೋಬೇಕಪ್ಪಾ. ಹೀಗೇ ಆದ್ರೆ ಆರೋಗ್ಯ ಕೆಡಿಸ್ಕೋತೀರಿ ನೀವು..” ಗಂಡನನ್ನು ಸಾಂತ್ವನಿಸುತ್ತಿದ್ದಳು ಮಾಲಿನಿ. ʼಸಮಾಧಾನ ಮಾಡ್ಕೊಳ್ಳಿʼ, ʼಸಮಾಧಾನ ಮಾಡ್ಕೊಳ್ಳಿʼ ಇದು ತುದಿನಾಲಿಗೆಯ ಮಾತು ಎಂದು ಹೇಳುವವರಿಗೂ ಗೊತ್ತಿರುತ್ತದೆ, ಕೇಳುವವರಿಗೂ ಗೊತ್ತಿರುತ್ತದೆ. ಆದರೂ ಅಪ್ರಿಯ ಘಟನೆಗಳು ನಡೆದ ಸಂದರ್ಭದಲ್ಲಿ ಚಲಾವಣೆಯಾಗುತ್ತಲೇ ಇರುತ್ತದೆ, ನಿರಂತರವಾಗಿ. ರಾಘವನಿಂದ ಸಮಾಧಾನ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ ಎನ್ನುವುದಕ್ಕೆ ನಡೆದ ಘಟನೆ ಸಾಕ್ಷಿಯಾಯ್ತು. ಮಗಳ ಹದಿನೆಂಟನೆಯ ಹುಟ್ಟಿದಹಬ್ಬದ ದಿನವೇ ರಾಘವನಿಗೆ ಹೃದಯಾಘಾತವಾಯ್ತು. ʼಮಗಳು ಮನೆ ಬಿಟ್ಟು ಹೋಗುವ ದಿನ ಬಂದೇಬಿಟ್ಟಿತುʼ ಎನ್ನುವ ಸತ್ಯವನ್ನು ಅರಗಿಸಿಕೊಳ್ಳಲಾಗದೆ ಬಡಪಾಯಿ ತಂದೆಯೊಬ್ಬನ ಹೃದಯ ಒಡೆದು ಹೋಗಿದ್ದೇ? ಅಥವಾ ಅವನ ಆಯುಷ್ಯ ಅಷ್ಟೇ ಎಂದು ವಿಧಿಲಿಖಿತವಾಗಿತ್ತೇ? ಒಂದಕ್ಕೊಂದು ತಳುಕು ಹಾಕಿಕೊಂಡಿದ್ದುವು ಅಂದರೆ ಸತ್ಯ ಹೇಳಿದಂತಾಗುತ್ತದೆಯೇನೋ.
**
ಮಾಲಿನಿ ಪಿಟ್ಟೆಂದು ಉಸಿರೊಡೆಯಲಿಲ್ಲ. ʼತಂದೆಯನ್ನು ತಿಂದುಕೊಂಡೆʼ ಎಂದು ಮಗಳನ್ನು ದೂರಲಿಲ್ಲ. ಆಗಿದ್ದು ಆಗಿಹೋಗಿದೆ. ಹೊರಪ್ರಪಂಚಕ್ಕೆ ಇದರ ವಾಸನೆ ಕೂಡಾ ಬಡಿಯಲಿಲ್ಲ. ನಡೆಯಬೇಕಾದ ಕ್ರಿಯಾಕರ್ಮಗಳು ಸಂಬಂಧಿಗಳ ನೆರವಿನಿಂದ ಸಾಂಗವಾಗಿ ನಡೆದು ಹೋದುವು. ಐಶ್ವರ್ಯ ಪಾಪಪ್ರಜ್ಞೆಯಿಂದ ಕುಸಿದು ಹೋಗಿದ್ದಳೇ? ʼತಂದೆಯ ಸಾವಿಗೆ ತಾನು ಕಾರಣಳಾದೆʼ ಎನ್ನುವ ವಿಷ ಗಂಟಲನ್ನು ಸುಡುತ್ತಿತ್ತೇ? ಅಮ್ಮನ ಕೊರಳು ತಬ್ಬಿ ಬಿಕ್ಕಿ ಬಿಕಿ ಅತ್ತ ಹುಡುಗಿ ಮುಂದೆಂದೂ ತನ್ನ ಮದುವೆಯ ಕುರಿತು ಮನೆಯಲ್ಲಿ ಚಕಾರ ಎತ್ತಲಿಲ್ಲ. ಬಿ.ಎಸ್ಸಿ.ಗೆ ಸೇರಿಕೊಂಡಿದ್ದವಳು ಚೇತರಿಸಿಕೊಂಡು ಯಾವಾಗಿನಂತೆ ಕಾಲೇಜಿಗೆ ಹೋಗಿ ಬರತೊಡಗಿದ್ದಳು. ʼಈ ಬುದ್ಧಿ ಮೊದಲೇ ಇರಬಾರದಿತ್ತಾ?ʼ ಏಕಾಂತದಲ್ಲಿ ನೊಂದುಕೊಳ್ಳುತ್ತಿದ್ದಳು ಮಾಲಿನಿ.

                            **

ಕಾಲಚಕ್ರ ಮತ್ತೊಂದು ಸುತ್ತು ಉರುಳಿತು. ಅನುಕಂಪದ ಆಧಾರದ ಮೇಲೆ ಐಶ್ವರ್ಯ ಅಪ್ಪನ ಕೆಲಸದ ಹಕ್ಕುಗಾರ್ತಿಯಾದಳು. ಬಿ.ಎಸ್ಸಿ.ಯ ಓದು ಅರ್ಧಕ್ಕೆ ನಿಂತಿತು. ಉದ್ಯೋಗ ಅತ್ಯಾವಶ್ಯಕವಾಗಿದ್ದ ಪರಿಸ್ಥಿತಿಯಲ್ಲಿ ಮಗಳ ನಿರ್ಣಯಕ್ಕೆ ಪ್ರತಿ ಹೇಳಲಿಲ್ಲ ಮಾಲಿನಿ. ಹಿತೈಷಿಗಳ ಸಹಕಾರದಿಂದ, ಸರ್ಕಾರದ ನೀತಿಯಿಂದ ಎಲ್ಲಾ ಸುಮುಖವಾಗಿ ನಡೆದು ಆ ಮನೆಯಲ್ಲಿ ಮತ್ತೊಮ್ಮೆ ಮಾಲಿನಿಯ ಮುಖದಲ್ಲಿ ಸಮಾಧಾನದ ಸೆಳಕು ʼಆಗಿದ್ದೆಲ್ಲಾ ಒಳ್ಳೆಯದಕ್ಕೇ..ʼ ಎಂದು ಇದಕ್ಕೇ ಹೇಳುವುದಾ? ಅಪ್ಪ ತೀರಿಕೊಂಡು ಮಗಳಿಗೆ ಜೀವನದ ಪಾಠ ಕಲಿಸಿದರಾ? ಸಾವಿನ ಶೋಕದಲ್ಲಿ ಮೋಹದ ಪಾಶ ಕಡಿದು ಹೋಯ್ತು ಅಂದುಕೊಂಡಳು ಮಾಲಿನಿ. ಮಗಳು ವಯಸ್ಸಿಗಿಂತಾ ಮೀರಿ ದೊಡ್ಡವಳಾಗುತ್ತಿದ್ದಾಳೆ. ಸಂಸಾರದ ನೊಗಕ್ಕೆ ಹೆಗಲು ಕೊಟ್ಟಿದ್ದಾಳೆ. ಅವಳ ಮೇಲಿನ ಅಲ್ಪ ಸ್ವಲ್ಪ ಅಸಮಾಧಾನವನ್ನೂ ಮರೆತುಬಿಟ್ಟಿತು ಮಾತೃಹೃದಯ.
.

“ಅಮ್ಮಾ, ನಾಳಿನ ತಿಂಡಿ ಸ್ವಲ್ಪ ಜಾಸ್ತಿ ಮಾಡಿಡು. ಅವನು ಮನೆಗೆ ಬರ್ತಾನೆ..” ಸಹಜವಾಗಿ ಎಂಬಂತೆ ಹೇಳಿದಳು ಐಶ್ವರ್ಯ, ಅದೊಂದು ಸಂಜೆ.
“ಯಾರೇ?” ಒಣಗಿದ ಗಂಟಲಲ್ಲಿ ಪ್ರಶ್ನಿಸಿದಳು ಮಾಲಿನಿ.
“ಅವನೇ ಅಮ್ಮಾ, ಮದುವೆ ಆಗ್ತೀನೀಂತ ಹೇಳಿರ್ಲಲ್ವಾ? ಮರೆತೇಬಿಟ್ಟಿದೀಯಾ?”
“ಅವನ ಮದುವೆಗೆ ಮನೇಲಿ ಅರ್ಜೆಂಟ್‌ ಮಾಡ್ತಿದಾರೆ ಅಂತಿದ್ದಿ. ಇಲ್ಲೀವರೆಗೆ ಕಾದು ಕೂತಿದಾನಾ?”
“ಕಾಯಬೇಕಾದ ಪರಿಸ್ಥಿತಿ ಬಂತಲ್ಲ..” ಮುಗುಮ್ಮಾಗಿ ಹೇಳಿದಳು ಮಗಳು
.ಪ್ರತಿಯಾಗಿ ಮಾತಾಡದಿದ್ದರೂ ಅಪ್ರತಿಭಳಾಗಿದ್ದಳು ಮಾಲಿನಿ. ಪೂರ್ವಯೋಜಿತವಾಗಿ ಇದನ್ನೆಲ್ಲಾ ಮಾಡಿದಳೇ ಮಗಳು? ನಾನು ಕೈತುತ್ತು ತಿನ್ನಿಸಿ ಬೆಳೆಸಿದ ಕಂದ? ಅಪ್ಪ ಕಣ್ಣರೆಪ್ಪೆಯಂತೆ ಕಾಪಾಡಿಕೊಂಡಿದ್ದ ಮಗು? ಕೊನೇಪಕ್ಷ ಹೆತ್ತ ತಾಯಿಯಾದ ತನಗಾದರೂ ಅಂತರ್ಯ ಬಿಟ್ಟು ಕೊಡಲಿಲ್ಲ ಅಂದರೆ ಏನರ್ಥ? ʼಮದುವೆಯಾದ ಹೆಣ್ಣುಮಕ್ಕಳಿಗೆ ಅಪ್ಪನ ಕೆಲಸ ಸಿಗಲ್ವಂತೆ. ಪುಣ್ಯಾತ್ಮ, ಮಗಳು ಅಂದ್ರೆ ಪ್ರಾಣ ಬಿಡ್ತಿದ್ದ. ಅವಳಿಗೊಂದು ದಿಕ್ಕು ತೋರಿಸಿ ಹೋದʼ ಮನೆಗೆ ಬಂದ ಹಿತೈಷಿಯೊಬ್ಬರು ಪ್ರಾಸಂಗಿಕವಾಗಿ ಹೇಳಿದ ಮಾತು ಫಕ್ಕನೆ ನೆನಪಿಗೆ ಬಂದಿತ್ತು ಮಾಲಿನಿಗೆ.. ಅನುಮಾನದ ಹುಳು ತಲೆ ಹೊಕ್ಕಿತ್ತು. ಹೀಗೊಂದು ಕಾನೂನು ಅಥವಾ ಪದ್ಧತಿ ಇರುವುದೇ ಹೌದಾದರೆ ಈ ಕಾರಣಕ್ಕಾಗಿಯೇ ಮಗಳು ಮದುವೆಯಾಗಲು ವಿಳಂಬ ಮಾಡಿದಳೇ? ಈಗ ದಾರಿ ಸುಗಮವಾಯಿತೆಂಬ ನಿಶ್ಚಿಂತೆಯಲ್ಲಿ ಮದುವೆಯ ಮಾತು ಮುನ್ನೆಲೆಗೆ ಬರುತ್ತಿದೆಯೇ? ಇದೆಲ್ಲಾ ಅವನದೇ ಉಪದೇಶವೇ? ಗೊತ್ತಿದ್ದೂ ಗೊತ್ತಿದ್ದೂ ಮಗಳು ಹೆತ್ತಮ್ಮನನ್ನು ಅಜ್ಞಾನದಲ್ಲಿಟ್ಟಿದ್ದರೆ ಅದು ತನ್ನ ತಾಯ್ತನಕ್ಕೆ ಮಾಡಿದ ವಂಚನೆ, ಅಕ್ಷಮ್ಯ ಅಪರಾಧ ಅನಿಸತೊಡಗಿ ಮಗಳನ್ನು ಕೇಳಲಾಗದೆ, ನುಂಗಿಕೊಳ್ಳಲೂ ಆಗದೆ ಚಡಪಡಿಸಿದಳು ಮಾಲಿನಿ.

  • ವಸುಮತಿ ಉಡುಪ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter