ಎಂದಾದರೊಂದು ದಿನ ನಾನು ಮಿಥಿಲೆಗೆ ಹೋಗಿ ಬೀದಿ ಬೀದಿಯನಲೆದು ನೋಡಿ ಬರುವೆ ರಾಮಭದ್ರನ ಕಥೆಯ ಹಾಡಿ ಕರಡಿಗೆಯಲ್ಲಿ ಜನಕರಾಜನ ಹೊಲದ ಮಣ್ಣ ತರುವೆ (ಮಿಥಿಲೆ) ನಾಲ್ಕು ದಶಕಗಳಿಗೂ ಮೀರಿದ ಕಾವ್ಯ ಪ್ರಯಾಣದಲ್ಲಿ ಕವಿ ಸುಬ್ಬಣ್ಣ ರಂಗನಾಥ ಎಕ್ಕುಂಡಿಯವರ ಬದುಕಿನ ಆದರ್ಶವು ಈ ಸಾಲುಗಳಲ್ಲಿ ಅನುರಣಿಸಿದೆ. ಅಧ್ಯಾತ್ಮದ ಹಂಬಲ ಮತ್ತು ಶ್ರಮಜೀವಿಗಳ ಪರವಾದ ಆದರ್ಶಗಳಿಂದ ಕೂಡಿದ ಈ ನುಡಿಯು ಎಕ್ಕುಂಡಿಯವರ ಕಾವ್ಯಧರ್ಮವನ್ನು ಧ್ವನಿಸುತ್ತದೆ. ‘ಮನುಷ್ಯ ಜೀವನದಲ್ಲಿ ದಿವ್ಯದ ಪೈರನ್ನು ಬಿತ್ತಿ ಬೆಳೆದವರನ್ನು ಹಾಗೂ ಹಸಿದವರನ್ನು, ಬಡವರನ್ನು ನನ್ನ ಕಾವ್ಯ ಒಳಗೊಂಡಿದೆ’ ಎನ್ನುವ ಮೂಲಕ ರಮ್ಯ ಮನೋಭಾವದಿಂದ ಬಿಡಿಸಿಕೊಂಡ ಎಕ್ಕುಂಡಿಯವರ ಕಾವ್ಯವು ಕುಸಿಯುವ ಕೈಗಳು ಮತ್ತು ಪ್ರಾರ್ಥಿಸುವ ಮನಸ್ಸುಗಳ ಕುರಿತು ಹಾಡಿತು. ಅದರಲ್ಲಿ ಕೊರಗುವ ಹೃದಯವಿದೆ. ನೀರು ತುಂಬಿದ ಕಣ್ಣುಗಳಿವೆ. ಶೋಷಿತರ ಪರವಾದ ದನಿಯಿದೆ. ಧೀರ ಚೇತನಗಳ ಸ್ಮರಣೆಯಿದೆ. ಅಪಾರದ ಅನ್ವೇಷಣೆಯಿದೆ. ಎಕ್ಕುಂಡಿಯರು ಹುಟ್ಟಿ ನೂರು ವರ್ಷಗಳು ತುಂಬುತ್ತಿರುವ ಈ ಹೊತ್ತಿನಲ್ಲಿ ಅವರ ಕಾವ್ಯದ ಮರ್ಮಗಳ ಬಗ್ಗೆ ಚರ್ಚಿಸುವುದು ಅರ್ಥಪೂರ್ಣವೆನಿಸುತ್ತದೆ. ‘ಬೆಳ್ಳಕ್ಕಿಗಳು’ ಎಂಬುದು ಎಕ್ಕುಂಡಿಯವರ ಕವನ ಸಂಕಲನದ ಹೆಸರು ಮಾತ್ರವಾಗಿರದೆ ಅವರು ಬಳಸಿಕೊಂಡ ಸಂಕೇತವೂ ಆಗಿದೆ. ‘ಬೆಳ್ಳಕ್ಕಿಗಳ ಕವಿ’ ಎಂದು ಕರೆಯುವ ಮಟ್ಟಿಗೆ ಅವುಗಳು ಪರಸ್ಪರ ಬೆಸೆದುಕೊಂಡಿವೆ. ಬಾಂದಳದ ಬಯಲಿನಲ್ಲಿ ರೆಕ್ಕೆ ಬಿಚ್ಚಿ ಹಾರುವ ಬೆಳ್ಳಕ್ಕಿಗಳು ದೇವತೆಗಳ ಲೋಕದಿಂದ ಬಂದಂತೆ ಭಾಸವಾಗುತ್ತವೆ. ಮಲ್ಲಿಗೆಯ ಸರದಂತೆ, ರತ್ನ ಹಾರದಂತೆ, ಬೆಳಕಿನ ಸರಪಳಿಯಂತೆ ಕಾಣುವ ಬೆಳ್ಳಕ್ಕಿಗಳು ಕವಿಯ ಮನದಲ್ಲಿ ರೋಮಾಂಚನವನ್ನು ಎಬ್ಬಿಸುತ್ತವೆ. ಕಡಲು ಮತ್ತು ಬಾನಿನ ನೀಲಿಯ ನಡುವೆ ಅಪಾರದಲ್ಲಿ ವಿಹರಿಸುವ, ಕೆಳಗಿಳಿದರೂ ಕಡಲಿನ ಅಪಾರದಲ್ಲಿ ವಿರಮಿಸುವ ಬೆಳ್ಳಕ್ಕಿಗಳು ಎಕ್ಕುಂಡಿಯವರ ಅಧ್ಯಾತ್ಮವನ್ನು ಕಟ್ಟಿಕೊಟ್ಟಿವೆ. ‘ನನ್ನ ಕಾವ್ಯಕ್ಕೆ ಬೆಳ್ಳಕ್ಕಿಗಳ ರೆಕ್ಕೆಗಳಿವೆ ಎಂದೇ ನನ್ನ ಪಾಲಿನ ಅಪಾರವನ್ನು ನಾನು ಹಾಡಿಕೊಳ್ಳುತ್ತೇನೆ. ಅಪಾರದ ಸೌಂದರ್ಯ, ಪ್ರೀತಿ ಮತ್ತು ದಾಹಗಳು ನನ್ನ ಕಾವ್ಯದ ತೋಳುಗಳಲ್ಲಿ ಅಡಗಿಕೊಂಡಿವೆ. ಪ್ರತಿಯೊಬ್ಬನ ಹೃದಯದಲ್ಲಿಯೂ ಒಂದು ಬೆಳ್ಳಕ್ಕಿಯಿದೆ. ಶುಭ್ರ ಸುಂದರ, ಬೆಳ್ಳಗೆ, ಲಾವಣ್ಯಪೂರ್ಣ. ಹೀಗಾಗಿ ಅಪಾರದ ದಾಹ ಎಲ್ಲರಿಗೂ ಸ್ವಾಭಾವಿಕ’ ಎಂದು ಅವರು ಹೇಳುತ್ತಾರೆ. ಸು. ರಂ. ಎಕ್ಕುಂಡಿಯವರು ಅವಿಭಜಿತ ಧಾರವಾಡ (ಈಗ ಹಾವೇರಿ) ಜಿಲ್ಲೆಯ ರಾಣಿಬೆನ್ನೂರಿನಲ್ಲಿ ಹುಟ್ಟಿ ಬೆಳೆದವರಾದರೂ ಅವರ ಪೂರ್ವಜರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಎಕ್ಕುಂಡಿಯವರಾಗಿದ್ದುದರಿಂದ ಆ ಊರಿನ ಹೆಸರು ಕವಿಯ ಹೆಸರಿನ ಮುಂದೆ ಸೇರಿಕೊಂಡಿದೆ. ಆನಂದಾಶ್ರಮ ಪ್ರೌಢ ಶಾಲೆಯ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸಲು ಅವರಿಗೆ ಅವಕಾಶವನ್ನು ನೀಡಿದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಸಮೀಪದ ಬೆಂಕಿಕೊಡ್ಲದ ನೆಲವು ಅವರ ಕಾವ್ಯಕ್ಕೆ ಸ್ಫೂರ್ತಿಯನ್ನು ಒದಗಿಸಿದೆ. ಅದರ ಸುತ್ತಲಿನ ಕಡಲ ತಡಿಯ ಪರಿಸರವು ಅಪಾರದ ದಾಹವನ್ನು ಉಂಟು ಮಾಡಿದೆ. ಕಡಲು ಮತ್ತು ಬೆಳ್ಳಕ್ಕಿಗಳೊಂದಿಗೆ ಬೆರೆತು ಬರೆಯಲು ಅವರಿಗೆ ಸಾಧ್ಯವಾಗಿದೆ. ಕರಾವಳಿಯ ಕಡಲ ತೀರದಲ್ಲಿ ತಮ್ಮ ಬದುಕಿನ ಭಾಗವನ್ನು ಕಳೆದುದರಿಂದ ಎಕ್ಕುಂಡಿಯವರ ಕಾವ್ಯವು ಅಲ್ಲಿನ ಪ್ರಕೃತಿಯ ತಾಳ, ಲಯ, ಶ್ರುತಿಗಳಿಗೆ ಹೊಂದಿಕೊಂಡಿದೆ. ಹಸಿರಿನ ಸುಂದರ ವನಗಿರಿ ಕಂದರ ಮಧುರ ನಿನಾನದಿ ಮೊಳಗಿದವು ಎಂಬ ಸಾಲುಗಳು ನಿಸರ್ಗದ ಚೆಲುವನ್ನು ಅನುಭವಿಸಿದ ಸಂಭ್ರಮದಿಂದ ಪ್ರೇರಣೆಯನ್ನು ಪಡೆದರೆ ಚಿನ್ನದ ಬಿಂದಿಗೆ ಬೆಳಕನು ಸುರಿಯಿತು ಮೂಡಲ ದೆಸೆಯಿಂದ ಮಂಜಿನ ಹನಿಗಳನೆಸೆಯುತ ಬಂದಿತು ಗಾಳಿ ಬೊಗಸೆಯಿಂದ ಎನ್ನುವಲ್ಲಿ ಮೂರ್ತ, ವರ್ಣಮಯ, ದೃಶ್ಯಾತ್ಮಕತೆಗಳು ಮನಮುಟ್ಟುತ್ತವೆ. ನೆಲ ಮುಗಿಲಿನ ಸಂತಾನವೆ ಮೋಡ ಮೂಡುವ ಮುಳುಗುವ ನೇಸರು ಕೂಡ ಭಗವಂತನ ಚೈತನ್ಯದ ದೀಪ ಚಂದ್ರಮ ನಭ ಲೋಬಾನದ ಧೂಪ ಎಂಬಂಥ ಆರಂಭಿಕ ರಚನೆಗಳಿಂದ ತೊಡಗಿ ತಮ್ಮ ಕಾವ್ಯ ಜೀವನದುದ್ದಕ್ಕೂ ರಚಿಸಿದ ನೂರಾರು ಕವಿತೆಗಳಲ್ಲಿ ಪರಿಸರ, ಪ್ರಕೃತಿಯ ಚೆಲುವು ಒಲವುಗಳು ಮೈವಡೆದಿವೆ. ತಮ್ಮ ದರ್ಶನಗಳಿಗೆ ಪ್ರಕೃತಿಯ ಸಾಹಿತ್ಯವನ್ನು, ಸಾಂಗತ್ಯವನ್ನು ಸಾಂಕೇತಿಕವಾಗಿ ಬಳಸಿಕೊಳ್ಳುತ್ತಾ ಸಾಗುವಾಗ ಗರಿಬಿಚ್ಚಿ ಹಾರಿದ ‘ಬೆಳ್ಳಕ್ಕಿಗಳು’ ಮತ್ತು ಅರಳಿದ ‘ಬಕುಲದ ಹೂವುಗಳ’ಲ್ಲಿ ಬದುಕು ಹಾಗೂ ಪ್ರಕೃತಿಯಲ್ಲಿ ಅಡಗಿರುವ ಸುಖ ಸೌಂದರ್ಯಗಳನ್ನು ಗುರುತಿಸಿ ಹಾಡುವ ಪ್ರಕ್ರಿಯೆಯು ಮುಂದುವರಿದಿದೆ. ಪ್ರಕೃತಿಯ ಜೊತೆಗಿನ ಅನುಸಂಧಾನದಲ್ಲಿ ವಿಶಿಷ್ಟವಾದ ನಾದಲೀಲೆಯನ್ನು ಒಳಗೊಂಡ ಎಕ್ಕುಂಡಿಯವರ ಕಾವ್ಯವು ಕಿವಿಗೆ ಇಂಪು ಮತ್ತು ಮನಸ್ಸಿಗೆ ತಂಪನ್ನು ನೀಡುವ ಆವರ್ತನೆಯ ಚೆಲುವನ್ನು ಪಡೆದುಕೊಂಡಿದೆ. ಅಮೃತ ಕುಂಭದ ಶೀತಲ ಬಿಂಬ ಧರಾತಲ ತುಂಬಿತು ಹನಿಯೆರಗಿ ಹಸುರಿನ ಹುಲ್ನೆಲಗಳ ಮೃದು ಶಯ್ಯೆಗೆ ಬಂದವು ಬಳುಕುತ ನೆಳಲೊರಗಿ ತಂಬೆಲೆರಲೆಯಿತು ಚಂದನ ಬನದಲಿ ನೆಳಲಿನ ಹೆಳಲನೆ ಬಾಚಿದೊಲು ಗಿರಿಗಳ ತಪ್ಪಲು ಕಂಗಳನಪ್ಪಲು ಗಿಡಗಳ ತೋಳನು ಚಾಚಿದೊಲು ಈ ಸಿದ್ಧಿಯಿಂದಾಗಿಯೇ ಇಂಥ ಸುಕುಮಾರ ಚೆಲುವಿನ ಸಾಲುಗಳು ಮೂಡಿ ಬಂದಿವೆ. ಪ್ರಕೃತಿಯ ವಿಲಾಸವು ಕವಿಯ ಜೀವನದರ್ಶನವನ್ನು ಅಭಿವ್ಯಕ್ತಿಸಲು ಬಳಕೆಯಾಗಿದೆ. ‘ಬೆಸೆದ ಬಂಡೆ’ ಕವಿತೆಯ ಸಾಲುಗಳಲ್ಲೂ ಅದನ್ನು ಕಾಣಬಹುದು. ದೂರವಿದ್ದವರನ್ನು ಹತ್ತಿರಕೆ ತರಬೇ ಕು, ಹರಿವ ನದಿಗೂ ಉಂಟು ಎರಡು ತೋಳು, ನೆಲವನಪ್ಪಿದ ಎರಡು ದಂಡೆ ಗಳ ಬಾಂಧವ್ಯ ಬೆಸೆಯಬೇಕಲ್ಲವೇ? ನಮ್ಮ ಬಾಳು. ಆಚೆಯಲ್ಲಿದ್ದವರು ಈಚೆಯಲ್ಲಿದ್ದವ ರು, ಭೂಮಿ ನಮ್ಮಯ ತಾಯಿ ಮುಗಿ ಲು ತಂದೆ ಒಳಗೆ ಹೋಳಾದರೂ ಮಣ್ಣು ಗಾಳಿಯು ಹಿಡಿದ, ಪ್ರಾಣಗಳ ಶ್ರುತಿಗೆ ನಾವೆಲ್ಲ ಒಂದೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದರ್ಶನಕ್ಕೆ ಹೊಳೆಯ ದಂಡೆಯು ಸಂಕೇತವಾಗುತ್ತದೆ. ಬಂಡೆ ಸ್ಥಾವರವಾದರೆ ಹೊಳೆ ಜಂಗಮವಾಗಿದೆ. ಜೀವನದ ಎರಡೂ ಲಯಗಳ ಗ್ರಹಿಕೆಗೆ ಇಲ್ಲಿ ಆಲಂಬನೆಯಿದೆ. ಎಕ್ಕುಂಡಿಯವರ ಕಾವ್ಯದಲ್ಲಿ ಪ್ರಕೃತಿಯ ಚೆಲುವನ್ನು ವಿವರಿಸುವ ಶಬ್ದ ಚಿತ್ರಗಳು ತುಂಬಿಕೊಂಡಿರುತ್ತವೆ ಎಂಬ ನಿಟ್ಟಿನಲ್ಲಿ ಮಾತ್ರ ಅವರ ಕಾವ್ಯವನ್ನು ಗ್ರಹಿಸಲಾಗುವುದಿಲ್ಲ. ಇಲ್ಲಿ ಬರುವ ವರ್ಣನೆ ಕೇವಲ ಸೌಂದರ್ಯದ್ದು ಮಾತ್ರವಲ್ಲ, ಬದುಕು ಗ್ರಹಿಸಬೇಕಾದ ಎತ್ತರದ ಸಿದ್ಧಿಯ ನೆಲೆಯದ್ದೂ ಆಗಿದೆ. ಶುದ್ಧವಾದ ಮತ್ತು ಅಂತಿಮವಾದ ಚೆಲುವಿನ ನೆಲೆಗಳನ್ನು ದರ್ಶಿಸುವುದೇ ಪ್ರಕೃತಿ ಸೌಂದರ್ಯದ ಅಭಿವ್ಯಕ್ತಿಯ ಹಿಂದಿನ ರಹಸ್ಯವಾಗಿದೆ. ಆದ್ದರಿಂದಲೇ ಎಕ್ಕುಂಡಿಯವರು ‘ಸಂತಾನ’ ಎಂಬ ಕವನ ಸಂಕಲನದ ಪೀಠಿಕೆಯಲ್ಲಿ ‘ನನ್ನ ಕವಿತೆಗಳ ತುಡಿತ ಇಮ್ಮುಖವಾಗಿದೆ. ಅದರ ಅಭಿವ್ಯಕ್ತಿಯ ತಕ್ಕಡಿಗೆ ಎರಡು ಪರಡಿಗಳಿವೆ. ಒಂದು ಜೀವನ, ಇನ್ನೊಂದು ಪ್ರಕೃತಿ’ ಎಂದಿರಬೇಕು. ಭಕ್ತಿ ಮತ್ತು ಅಧ್ಯಾತ್ಮದ ನಡುವೆ ತೂಗಾಡುವ ಚೈತನ್ಯವು ಎಕ್ಕುಂಡಿಯವರ ಕಾವ್ಯದ ಇನ್ನೊಂದು ಬಹುಮುಖ್ಯ ಆಶಯವಾಗಿದೆ. ‘ನರನೊಳಗಿನ ನಾರಾಯಣನುದಯಿಸಿ ನರಕಾಸುರನನ್ನು ಮೆಟ್ಟಿರಲಿ’ ಎಂಬ ಆದರ್ಶಸ್ಥಾಯಿಯಾದ ತಿಳುವಳಿಕೆಯನ್ನು ಇಲ್ಲಿ ಕಾಣಬಹುದು. ‘ಶ್ರೀ ಆನಂದತೀರ್ಥರು’ (1952) ಮತ್ತು ‘ಹಾವಾಡಿಗರ ಹುಡುಗ’ (1962) ಎಂಬ ಸಂಕಲನಗಳ ಕವಿತೆಗಳಲ್ಲಿ ಅಪಾರದ ಅನ್ವೇಷಣೆಯ ದಾಹವು ತುಂಬಿ ತುಳುಕುತ್ತದೆ. ಭಕ್ತಿಯ ಭಾಗ್ಯವನ್ನು ತೆರೆದ ಶಬರಿ, ಸುದಾಮ, ಗಜೇಂದ್ರ, ಪುರಂದರದಾಸ ಮೊದಲಾದವರೆಲ್ಲ ಕವಿಯ ಕುಲುಮೆಯಲ್ಲಿ ಕವಿತೆಯಾಗಿ ಮೂಡಿದ್ದಾರೆ. ದ್ವೈತದ ಮೇಲಿನ ಭಕ್ತಿ ಮತ್ತು ಅದರಿಂದ ಹುಟ್ಟಿದ ಮುಕ್ತಿಯ ಬೆಳಕು ತೋರಿದ ಹಾದಿಯು ಗೋಚರವಾಗುತ್ತದೆ. ‘ಅಂತರಂಗದ ಹೂವನಿತ್ತರೆ ತನ್ನನೇ ತಾನೀವ’ ಪರಮಾತ್ಮನ ಸ್ಪರ್ಶದ ಪುಳಕವನ್ನು ಅನುಭವಿಸುವ ಕುಬ್ಜೆಯಲ್ಲಿ ಮೂಡಿದ ಆತ್ಮವಿಶ್ವಾಸವು ಕವಿಯ ನಂಬಿಕೆಯ ದ್ಯೋತಕವಾಗಿದೆ. ಮುರಲೀಧರನನುಕಂಪಿಸಿ ನುಡಿದನು ಆಲಂಗಿಸಿದನು ಕುಬ್ಜಾಂಗನೆಯನು ಬಿಡುಗಡೆಯಿರದ ಸಮಾಗಮವುಂಟೆ ತ್ರಿವಿಕ್ರಮನ ಕಾರುಣ್ಯದ ಸೋಂಕಿಗೆ ಅವಳ ತ್ರಿವಕ್ರತೆಯಡಗಿತ್ತು ಅಪ್ಸರೆಯಾದಳು! ಎಂಬಲ್ಲಿ ಅದು ಶಬ್ದರೂಪವನ್ನು ಪಡೆಯುತ್ತದೆ. ತನುಮನಗಳಲ್ಲಿ ಕೃಷ್ಣನನ್ನು ತುಂಬಿಕೊಂಡಿದ್ದ ಆಕೆಯು ಆತನಿಗೆ ಶ್ರೀಗಂಧವನ್ನು ಲೇಪಿಸಿ ಕೇಶವ ನಾರಾಯಣ ಗೋವಿಂದ ಮಾಧವ ಮೇಘಶ್ಯಾಮ ಮುಕುಂದ ಮೋಹನ ಪುರುಷೋತ್ತಮ ಅರವಿಂದ ಗೋ ಗೋಪಾಲಕ ಪರಮಾನಂದ ಗೋವರ್ಧನ ಗಿರಿಧಾರಿ ಮುರಾರಿ ವನಮಾಲಾ ಪೀತಾಂಬರಧಾರಿ ಕಮಲವದನ ಕಮಲಾಕ್ಷ ಶ್ರೀಧರ ಸಂಕರ್ಷಣ ಶ್ರೀಹರಿ ಮುರಳೀಧರ ಎಂದು ಸ್ತುತಿಸುತ್ತಿದ್ದಂತೆ ಅವಳ ವಕ್ರತೆ ಅಡಗಿ, ಅಯೋಗ್ಯಳೆಂಬ ಕೀಳರಿಮೆ ಕರಗಿ ತ್ರಿವಿಕ್ರಮನೊಡನೆ ಒಂದಾಗುತ್ತಾಳೆ. ‘ನನ್ನ ಕಾವ್ಯವು ದಕ್ಷಿಣದ ಮಹಾನ್ ದಾರ್ಶನಿಕರಾದ ಆಚಾರ್ಯ ಮಧ್ವರಿಗಂತೂ ತುಂಬಾ ಋಣಿಯಾಗಿದೆ. ನನ್ನಲ್ಲಿ ‘ಅಪಾರ’ದ ದಾಹವನ್ನು ಹುಟ್ಟಿಸಿದವರೇ ಅವರು. ನಾವು ಬಾಳಿ ಬದುಕುವ ಈ ಜಗತ್ತು ಸತ್ಯ ಸೌಂದರ್ಯಗಳ ಅಮೂಲ್ಯ ಕೊಡುಗೆಯಾಗಿದೆಯೆಂದು ಅವರು ಹೇಳಿದ್ದಾರೆ’ ಎಂದ ಎಕ್ಕುಂಡಿಯವರ ಕಾವ್ಯದಲ್ಲಿ ಭಕ್ತಿಯು ಕ್ರಿಯಾತ್ಮಕವಾಗಿ ಎಡೆ ಪಡೆದಿದೆ. ವೇದವ್ಯಾಸರ ಉಪಾಸನೆಯಿಂದ ಸಿದ್ಧಿ ಪಡೆದ ಮನೆತನದಲ್ಲಿ ಹುಟ್ಟಿದ ಎಕ್ಕುಂಡಿಯವರು ಮಧ್ವಾಚಾರ್ಯರ ತತ್ವವಾದವನ್ನು ಅರಗಿಸಿಕೊಂಡು ಆಚರಣೆಗೆ ತಂದ ಯದುಪತಿ ಆಚಾರ್ಯರ ಕುಲದವರಾಗಿರುವುದರಿಂದ ಪುರಾಣದ ಮೇಲಿನ ಆದರ ಮತ್ತು ಭಕ್ತಿಭಾವಗಳು ಅವರಿಗೆ ಪರಂಪರಾಗತವಾಗಿ ಬಂದಿರಬಹುದು. ಜೀವರಥ ಉರುಳಿರಲು ಆಸೆಗಳ ತಳೆದು ಪುರುಷಾರ್ಥಗಳ ನಾಲ್ಕು ಬಿಳಿಗುದುರೆ ಎಳೆದು ದಾನದಲಿ ಧರ್ಮದಲಿ ತಪಗಳಲಿ ತೊಡಗಿ ಕರುಣೆಯ ಕರ್ಮಗಳ ಕೆರೆಯಲ್ಲಿ ಮುಳುಗಿ ವೇದಗಳ ದ್ರಷ್ಟಾರರು ಹುಡುಕಿದ ಗಮ್ಯವೆಲ್ಲಿದೆ ಎಂಬ ಕವಿಯ ಕುತೂಹಲದ ಪ್ರಶ್ನೆಗೆ ‘ತಿಳಿವಿನ ಬೆಳಕಿನ ಬಳಿಯಲ್ಲಿದೆ’ ಎಂಬ ಉತ್ತರವು ಸಿಗುತ್ತದೆ. ಸಾಮಾಜಿಕ ಪ್ರಜ್ಞೆ ಮತ್ತು ಸಮಾಜವಾದಿ ನಿಲುವು ಎಕ್ಕುಂಡಿಯವರ ಇನ್ನೊಂದು ಮಹತ್ವದ ಆಶಯವಾಗಿದೆ. ಪ್ರಗತಿಶೀಲ ಸಾಹಿತ್ಯ ಸಂದರ್ಭದಲ್ಲಿ ನಿರಂಜನರ ಸಂಪರ್ಕಕ್ಕೆ ಬಂದು ರಷ್ಯನ್ ಸಾಹಿತ್ಯದ ಅಧ್ಯಯನವನ್ನು ಮಾಡಿದ್ದರಿಂದ ಕಾರ್ಲ್‍ಮಾಕ್ರ್ಸ್ ಮೇಲಿನ ಒಲವು ಅವರಲ್ಲಿ ವಿಶಿಷ್ಟ ಕಾಣ್ಕೆಯನ್ನು ರೂಪಿಸಿತು. ಅವರ ಆರಂಭಿಕ ಕವಿತೆಗಳಲ್ಲಿ ಒಂದಾದ ‘ಮೀನುಪೇಟೆ’ಯಲ್ಲಿ ಬರುವ ಇಲ್ಲಿ ಸಾಲು ಕುಳಿತ ಹೆಣ್ಣು ಎಲ್ಲೊ ಮುಗಿಲಿನತ್ತ ಕಣ್ಣು ಕುಳಿತರಿಲ್ಲಿ ಮತ್ಸ್ಯಗಂಧಿ ಉಟ್ಟುಕೊಂಡು ಹರಕು ಚಿಂದಿ ಎಂಬ ಸಾಲುಗಳು ನಿರ್ಲಕ್ಷಿತ ಸಮುದಾಯದೆಡೆಗಿನ ಮಿಡಿತವನ್ನು ದಾಖಲಿಸುತ್ತವೆ. ಬಂಡವಲಿನ ಬುಟ್ಟಿಯಲ್ಲಿ ಜೀತವಾಗಿ ಹುಟ್ಟಿದಲ್ಲಿ ಬಲೆಗೆ ಬಿದ್ದ ಮೀನದಂತೆ ವಿಲಿವಿಲಿ ಮಣಿದಾಡಿದೆ ಎನ್ನುವ ಮೂಲಕ ಬಂಡವಾಳಶಾಹಿಗಳ ಅಟ್ಟಹಾಸ ಮತ್ತು ದುಡಿಯುವ ವರ್ಗದ ಅಸಹಾಯಕತೆಯನ್ನು ರೋಷದಿಂದ ಹೊರಹಾಕುತ್ತದೆ. ‘ಹಸಿದವರನ್ನೂ ಬಡವರನ್ನೂ ಕುರಿತು ಹೇಳಿದ ಕಾರ್ಲ್‍ಮಾಕ್ರ್ಸ್ ಮತ್ತು ಶ್ರಮಜೀವಿಗಳ ಮನಕರಗಿಸುವ ಕಥೆಗಳಲ್ಲಿ ಶೋಷಿತರ ಹಾಗೂ ನಿರಾಶ್ರಿತರ ಪರವಾಗಿ ಅದು ಕ್ಷೋಭೆಗೊಂಡು ಧ್ವನಿಯೆತ್ತಿದೆ’ ಎಂದು ಅಭಿಪ್ರಾಯಪಟ್ಟ ಎಕ್ಕುಂಡಿಯವರ ಕಾವ್ಯದ ಮಾಕ್ರ್ಸ್‍ವಾದವು ಅವರ ಬದುಕಿನ ಪರಿಸರದ ಹಿನ್ನೆಲೆಯಲ್ಲಿ ರೂಪುಗೊಂಡಿದೆ. ಒಬ್ಬನು ಇನ್ನೊಬ್ಬನನ್ನು ಸುಲಿದು ಬದುಕುವುದು ಗೌರವದ ಬದುಕಲ್ಲ ಎಂಬ ನಂಬಿಕೆಯಿಂದ ಈ ಧೋರಣೆಯು ಹುಟ್ಟಿಕೊಂಡಿದೆ. ‘ಬೆಳ್ಳಕ್ಕಿಗಳು’ (1982) ಸಂಕಲನದ ನಂತರದ ‘ಕಥನ ಕವನಗಳು’ (1985) ಮತ್ತು ‘ಬಕುಲದ ಹೂವುಗಳು’ (1991) ಸಂಕಲನಗಳಲ್ಲಿ ಸಮಾಜವಾದಿ ನಿಲುವು ಹರಳುಗಟ್ಟಿದೆ. ‘ರೊಟ್ಟಿ ಮತ್ತು ಕೋವಿ’ ಚರಿತ್ರೆಯ ರೂಪಕವಾಗಿ ಕಾಣಿಸುವುದು ಅದೇ ಹೆಸರಿನ ಕವಿತೆಯಲ್ಲಿ. ದುಡಿಮೆಯ ಮೂಲಕ ಜನತೆಗೆ ಅನ್ನ ಕೊಟ್ಟವರಿಗೆ ಅನ್ನ ಇಲ್ಲವಾಗಿರುವ ವಿಪರ್ಯಾಸವನ್ನು ವಿವರಿಸುತ್ತಾ ತಟ್ಟನೆ ನಿಂತು ನೋಡಿದೆ, ತೊಟ್ಟಿಯಾಚಿಂದ ಹಸಿದ ಹಾವುಗಳಂತೆ ಇಳಿದು ಒಳಗೆ ಎರಡು ಕೈಗಳು; ಸಿಕ್ಕ ಎಂಜಲಿನೆಲೆಯನ್ನು ಹಿರಿದು ತೆಗೆದವು, ಕಸದಿಂದ ಹೊರಗೆ ಅಂದುಕೊಂಡೆನು ನಾನು ಇವುಗಳೆ ಅಲ್ಲವೆ ಗಚ್ಚುಗಾರೆಯ ಹೊತ್ತು ಹಗಲು ಇರುಳು ಉಪ್ಪರಿಗೆ ಬಂಗಲೆಯ ನಿಲ್ಲಿಸಿಲ್ಲವೆ ಮತ್ತೆ ಇವುಗಳಿಂದಲ್ಲವೇ ಸುಖದ ನೆರಳು ಎನ್ನುವ ಮೂಲಕ ಶ್ರಮಿಕ ವರ್ಗದ ಸ್ಥಿತಿಗತಿಯ ಕುರಿತಾದ ಕಾಳಜಿಯನ್ನು ವ್ಯಕ್ತಪಡಿಸುವ ಕವಿತೆಯು ಬಡತನದ ನಿವಾರಣೆಗಾಗಿ ಬಡವರು ಕೋವಿಯನ್ನು ಎತ್ತಬೇಕಾದೀತು ಎಂದು ಎಚ್ಚರಿಸುತ್ತದೆ. ‘ಮತ್ಸ್ಯಗಂದಿ’ü, ‘ಹುಡುಗಿಯ ಕಥೆ’, ‘ಮೇಧಾತಿಥಿ’, ‘ನಾಗಿಯ ಕಥೆ’ ಮುಂತಾದ ಕವಿತೆಗಳು ಬಡತನ ಮತ್ತು ಶೋಷಣೆಯ ಕುರಿತು ಮನಮಿಡಿಯುವ ಚಿತ್ರಗಳನ್ನು ಕಟ್ಟಿಕೊಡುತ್ತವೆ. ಅವರ ಮಹತ್ವದ ಕವನಗಳಲ್ಲಿ ಒಂದಾಗಿರುವ ‘ದಾಸಿಮಯ್ಯ ಮತ್ತು ಬೆಕ್ಕು’ ವ್ಯಂಗ್ಯದ ಧಾಟಿಯಿಂದ ಗಮನವನ್ನು ಸೆಳೆಯುತ್ತದೆ. ಮಠದಲ್ಲಿ ಭಕ್ತಿಯ ಆವೇಶವನ್ನು ತೋರ್ಪಡಿಸುವರ ಎದುರು ದಾಸಿಮಯ್ಯನು ಬರುತ್ತಾನೆ. ಎಲ್ಲರೂ ಅವನನ್ನು ಗೇಲಿ ಮಾಡುತ್ತಾರೆ. ಆಗ ಅವರೆದುರು ಇಲಿ ಓಡುತ್ತದೆ. ಕಣ್ಣುಮುಚ್ಚಿ ಕುಳಿತ ಬೆಕ್ಕು ಇಲಿಯನ್ನು ಬೇಟೆಯಾಡುತ್ತದೆ. ಆಗ ದಾಸಿಮಯ್ಯನು ‘ಕಣ್ಮುಚ್ಚಿ ಕುಳಿತವರೆಲ್ಲ ಧ್ಯಾನ ಮಾಡುವುದಿಲ್ಲ ಯಾವುದೋ ಇಲಿಗೆ ಕಾದಿರುವರೆಂದು’ ಹೇಳುತ್ತಾನೆ. ಅದೇ ರೀತಿಯಲ್ಲಿ ‘ಇಬ್ಬರು ರೈತರು’ ಎಂಬ ರಚನೆಯೂ ಹಲವು ಅರ್ಥಗಳನ್ನು ಧ್ವನಿಸುತ್ತದೆ. ಇಬ್ಬರು ರೈತರು ಮಹಾಕವಿ ಕಾಳಿದಾಸನ ಮನೆಗೆ ಬರುತ್ತಾರೆ. ಆತನು ಬಂಗಾರದ ತಂಬಿಗೆಯಲ್ಲಿ ಅವರಿಗೆ ನೀರು ಕೊಡುತ್ತಾನೆ. ರೈತರು ಕಾಳಿದಾಸನ ಕಾವ್ಯವನ್ನು ಹೊಗಳುತ್ತಾ ‘ಮೇಘದೂತ’ದಲ್ಲಿ ರಾಮಗಿರಿಯಿಂದ ಅಲಕಾವತಿಗೆ ಮೋಡವನ್ನು ಕಳುಹಿಸಿದ ಬಗ್ಗೆ ಪ್ರಸ್ತಾಪಿಸಿ, ಆ ಕುರಿತೆ ಒಂದಷ್ಟು ತಮ್ಮ ಕೂಡ ಬಿನ್ನವಿಸಲು ಬಂದದ್ದು ನಾವಿಬ್ಬರೂ ಬಾಯೊಣಗಿ ನಿಂತಿಹುದು ನಮ್ಮ ಪೈರು ಹನಿ ನೀರಿಲ್ಲದೆ, ಮೋಡಕ್ಕೆ ಹೇಳುವಿರೆ? ದಾರಿಯಲಿದ್ದವರಿಗೂ ನೀರು ಸುರಿಸು ಎನ್ನುತ್ತಾರೆ. ಮೊದಲು ಹೊಟ್ಟೆಗೆ ಹಿಟ್ಟು. ಬಳಿಕ ಜುಟ್ಟಿಗೆ ಮಲ್ಲಿಗೆ. ಕಲೆ ಮತ್ತು ಕಾವ್ಯಗಳು ಹೊಟ್ಟೆ ತುಂಬಿದವರ ಬದುಕಿಗೆ ಸಂಕೇತವಾದರೂ ಕಾವ್ಯವು ನೆಲದೊಂದಿಗೆ ಸಂಬಂಧವನ್ನು ಬೆಸೆಯಬೇಕಾದ ಅಗತ್ಯವನ್ನು ಈ ಕವಿತೆಯು ಮನಗಾಣಿಸುತ್ತದೆ. ಎಕ್ಕುಂಡಿಯವರ ಗ್ರಹಿಕೆಯಲ್ಲಿ ಮಧ್ವ ಮತ್ತು ಮಾಕ್ರ್ಸ್ ಇಬ್ಬರೂ ಮುಖ್ಯರಾಗುತ್ತಾರೆ. ಇದೊಂದು ದ್ವಂದ್ವ ಎಂಬುದು ನಿಜವೇ. ಪ್ರಪಂಚದ ಸುಖ, ಕಲ್ಯಾಣ ಮತ್ತು ನೆಮ್ಮದಿಯನ್ನು ಬಯಸಿದ ಇವರಿಬ್ಬರ ದಾರಿಗಳು ಬೇರೆಯಾದರೂ ಗುರಿ ಒಂದೇ ಎಂಬುದು ಕವಿಯ ವಿಶ್ವಾಸವಾಗಿದೆ. ಎಕ್ಕುಂಡಿಯವರ ಮತ್ತೊಂದು ಮುಖ್ಯವಾದ ಅಭಿವ್ಯಕ್ತಿ ಎಂದರೆ ಕಥನ ಕವನಗಳು. ಪುರಾಣ, ಇತಿಹಾಸ, ಕಾಲ್ಪನಿಕ ಪ್ರಸಂಗಗಳನ್ನು ಎತ್ತಿಕೊಂಡು ತನ್ಮಯವಾಗಿ, ವರ್ಣಮಯವಾಗಿ, ನಾದಮಯವಾಗಿ ಕತೆಯನ್ನು ನಿರೂಪಿಸುವ ಕ್ರಮವು ಎಕ್ಕುಂಡಿಯವರಿಗೇ ಮೀಸಲು. ಆದ್ದರಿಂದ ಕಥನ ಕವನದ ಪಾರಂಪರಿಕ ವ್ಯಾಖ್ಯೆಯು ಎಕ್ಕುಂಡಿಯವರಲ್ಲಿ ಬದಲಾಗಿದೆ. ಕಥೆಯೊಳಗೆ ಕವನ ಎಂಬುದಕ್ಕೆ ಬದಲಾಗಿ ಕಥನವುಳ್ಳ ಕವನ ಎಂಬ ವ್ಯಾಖ್ಯಾನಕ್ಕೆ ಮನ್ನಣೆಯು ದೊರೆತಿದೆ. ‘ಮತ್ಸ್ಯಗಂಧಿ ಸತ್ಯವತಿ’, ‘ಕುಚೇಲೋಪಾಖ್ಯಾನ’, ‘ಹಿಟ್ಟು ಮತ್ತು ಮಲ್ಲಿಗೆ’, ‘ಅಶ್ವತ್ಥಾಮ’, ‘ಕಿಡಕಿ ಮತ್ತು ಗಾಲಿಗಳು’, ‘ಊರ್ವಶಿ’ ‘ಮಹಾಶ್ವೇತೆ’ ಎಂಬ ಕವಿತೆಗಳ ವಸ್ತುವನ್ನು ಗತ ಅಥವಾ ಪುರಾಣಗಳಿಂದ ಆಯ್ದುಕೊಂಡಿದ್ದರೂ, ಅವುಗಳ ಉದ್ದೇಶ ಬದುಕಿನ ಭವ್ಯತೆ ಮತ್ತು ಚೆಲುವುಗಳನ್ನು ಚಿತ್ರಿಸುವುದಾಗಿದ್ದರೂ ಅವರೆಲ್ಲರೂ ಬದುಕಿನ ವಿವಿಧ ಸ್ತರಗಳಿಂದ ಬಂದವರಾಗಿದ್ದರು ಎಂಬ ಗ್ರಹಿಕೆಯು ಅವರ ಕಥನ ಕವನಗಳನ್ನು ಶಾಶ್ವತವಾಗಿಸುತ್ತದೆ. ಶಬ್ದಗಳ ದೀಪಮಾಲೆಯ ಹಿಡಿದು ಬಂದವರು ನಕ್ಷತ್ರಗಳಿಗೆಣ್ಣೆ ನೀಡಿದವರು ಕತ್ತಲೆಯ ಗೂಡುಗಳ ಬಿಡಿಸಿ ಎಲ್ಲೆಲ್ಲಿಯೂ ಬೆಳಕಿನ ಹಾಡುಗಳ ಹಾಡಿದವರು ‘ಕಾಲುದೀಪ’ ಎಂಬ ಕವಿತೆಯ ಈ ಸಾಲುಗಳು ಎಕ್ಕುಂಡಿಯವರ ವ್ಯಕ್ತಿತ್ವದ ಮುದ್ರೆಯನ್ನು ಪಡೆದುಕೊಂಡಿವೆ. ಎಕ್ಕುಂಡಿಯವರು ಬರೆದ ಕತೆಗಳು ‘ನೆರಳು’ (1960) ಎಂಬ ಹೆಸರಿನಲ್ಲಿ, ಕನ್ನಡಕ್ಕೆ ಅನುವಾದಿಸಿದ ರಶ್ಯನ್ ಕವಿತೆಗಳು ‘ಪ್ರತಿಬಿಂಬ’ (1978) ಮತ್ತು ಮೌನದ ಹೊತ್ತು (1995) ಎಂಬ ಸಂಕಲನಗಳಲ್ಲಿ ಸಂಗ್ರಹಗೊಂಡಿವೆ. ಎರಡು ರಶ್ಯನ್ ಕಾದಂಬರಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಪು. ತಿ. ನ. ಕಾವ್ಯವನ್ನು ಕುರಿತಾದ ವಿಮರ್ಶಾ ಗ್ರಂಥವನ್ನು ಬರೆದಿದ್ದಾರೆ. ಆದರೆ ಅವರ ಕಾವ್ಯದ ಸವಿ, ಮಾರ್ದವತೆ, ಆಕರ್ಷಣೆಗಳು ಉಳಿದ ಬರಹಗಳನ್ನು ಗೌಣವಾಗಿಸಿವೆ. ಕಾವ್ಯ ರಚನೆಯಲ್ಲಿ ಕಂಡುಬರುವ ಲಯಗಾರಿಕೆ, ಬದ್ಧತೆ, ಮುಗ್ಧತೆಗಳಿಂದಾಗಿ ಅವರು ಓದುಗರಿಗೆ ಹತ್ತಿರವಾಗುತ್ತಾರೆ. ಅವರಿಗೆ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ, ಆದರ್ಶ ಶಿಕ್ಷಕ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮುದ್ದಣ ಕಾವ್ಯ ಪ್ರಶಸ್ತಿ ಮತ್ತು ‘ಬಕುಲದ ಹೂವುಗಳು’ ಎಂಬ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ದೊರಕಿದ್ದರೂ 20 ಅಗೋಸ್ತು 1995ರಂದು ತಮ್ಮ 72ನೇ ವಯಸ್ಸಿನಲ್ಲಿ ಅಪಾರವನ್ನು ಅರಸಿ ಹೋದ ಎಕ್ಕುಂಡಿಯವರನ್ನು ಕಾವ್ಯಾಸಕ್ತರು ಇಂದಿಗೂ ತಮ್ಮ ಹೃದಯದಲ್ಲಿ ಉಳಿಸಿಕೊಂಡಿರುವುದೇ ಅವರಿಗೆ ಸಂದಿರುವ ಅತ್ಯುನ್ನತ ಪ್ರಶಸ್ತಿಯಾಗಿದೆ.
ಅಪಾರದ ಬೆಳಕನ್ನರಸಿದ ಕವಿ ಎಕ್ಕುಂಡಿ
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್‌ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ಡಾ. ಸುಭಾಷ್ ಪಟ್ಟಾಜೆ
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ 'ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ' ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಹವ್ಯಾಸಿ ಕತೆಗಾರರಾಗಿರುವ ಇವರ ಕತೆ, ಕವಿತೆ, ಲೇಖನ ಮತ್ತು ಇನ್ನೂರಕ್ಕೂ ಮಿಕ್ಕ ಪುಸ್ತಕ ವಿಮರ್ಶೆಗಳು ಕನ್ನಡ ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ, ಡಿಜಿಟಲ್ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರಗೊಂಡಿವೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.
All Posts
1 thought on “ಅಪಾರದ ಬೆಳಕನ್ನರಸಿದ ಕವಿ ಎಕ್ಕುಂಡಿ”
ಅಪಾರದ ಬೆಳಕನ್ನರಸಿದ ಕವಿ ಸು.ರಂ.ಎಕ್ಕುಂಡಿಯವರ, ಕಥನವುಳ್ಳ ಕವನ ಸಾಹಿತ್ಯ ಕೃತಿಗಳ ಬಗೆಗಿನ, ತಮ್ಮ ವಿಶದವಾದ ಪ್ರಾಂಜಲ ಅನಿಸಿಕೆಗಳ ಮೂಲಕ, ಡಾ. ಸುಭಾಷ್ ಪಟ್ಟಾಜೆಯವರು, ಶಬರಿಯ ಕೆಲಸ ಮಾಡಿ, ಓದುಗರಿಗೆ, ಸ್ಥೂಲವಾಗಿ, ಸೂಕ್ಷ್ಮ ಮಾರ್ದವತೆಯ ಕವಿ ಹೃದಯದ ನಿಜ ಪರಿಚಯ ಮಾಡಿದ್ದಾರೆ. ಬದುಕಿನ ಹೋರಾಟದ ಸಮಯದ ಸೀಮಿತತೆಯಲ್ಲಿ, ಇಂಥವರ ಜೀವನ ದ್ರಷ್ಟಿಯನ್ನು, ಸರಳ ಪಾರದರ್ಶಿಕೆಯಲ್ಲಿ, ಯಶಸ್ವಿಯಾಗಿ ತೆರೆದಿಟ್ಟ ಲೇಖಕರ ಪ್ರಯತ್ನಕ್ಕೆ, ಧನ್ಯವಾದಗಳು!