ಕುಂಬಳಕಾಯಿ ಕಳ್ಳ

ಕುಂಬಳದ ಹೊಲದಲ್ಲೇ
ಕುಂಬಳಕಾಯಿ ಕಳ್ಳ
ಸಿಕ್ಕಿಬಿದ್ದರೆ ಹೇಗಿರುತ್ತದೆ!

ಹೆಗಲು ಮುಟ್ಟಿ ನೋಡಿಕೊಂಡಾನೇ
ಅಥವಾ ಹುಳ್ಳಗೆ ನಕ್ಕಾನೇ
ಸಭ್ಯನೆಂದು ತೋರಿಸಿಕೊಳ್ಳಲು
ನಿಮ್ಮನ್ನೇ ಕಳ್ಳನೆಂದು ಬಿಂಬಿಸಲು

ನಿಮ್ಮ ಹೆಗಲಲ್ಲೇ ಕೊಳೆಯಿದೆಯೆಂದು
ಹೇಳಬಹುದೇ
ಕಾಲಿಗಂಟಿದೆ ಕೆಸರು ಕೈಯಲ್ಲಿದೆ ಬೂದಿ
ಅನ್ನಬಹುದೇ
ಕ್ರಿಮಿಕೀಟಗಳ ಬಾಧೆ ಅಧಿಕ
ಬಳ್ಳಿ ಕರಟುತ್ತಿದೆ ಬಿಸಿಲಿಗೆ
ನೀರುಪೂರೈಕೆ ಸಾಲದು
ಪೋಷಕಾಂಶಗಳ ಕೊಡಬೇಕು
ಎಂದೆಲ್ಲ ದೇಶಾವರಿ ಮಾತಾಡಬಹುದೇ

ಅಥವಾ ಕೃಷಿಯ ಸಂಕಷ್ಟಗಳು
ಕೊಯ್ಲು ಮತ್ತು ಸಾಗಾಟದ ಸಮಸ್ಯೆ
ಮಾರುಕಟ್ಟೆಯ ಅನಿಶ್ಚಯತೆ
ಅಸಮರ್ಪಕ ಧಾರಣೆ
ದಾಸ್ತಾನಿನ ತೊಂದರೆ
ಹೀಗೆ... ಹೀಗೆ ರೈತರ ಬವಣೆಗಳ ಬಗ್ಗೆ

ರಾಜಕೀಯ ಆಗುಹೋಗು
ಯುದ್ಧ ತೈಲಬಿಕ್ಕಟ್ಟು ಬೆಲೆಯೇರಿಕೆ
ಅಂತಾರಾಷ್ಟ್ರೀಯ ವಿದ್ಯಮಾನಗಳ ಕುರಿತು
ನಿಷ್ಣಾತ ರಾಜನೀತಿಜ್ಞನ ಒಳ ವಿಶ್ಲೇಷಣೆಯ ಹಾಗೆ
ಅಥವಾ ಶಿಕ್ಷಣಕ್ಷೇತ್ರದ ಬಗ್ಗೆ

ನೀವು ನಿಂತಲ್ಲೇ ಬಾಕಿ
ನಿಮ್ಮ ಹೆಗಲಿಗೆ ಬೂದಿಯ ಹಚ್ಚಿ
ಕುಂಬಳಕಾಯಿಗಳ ಟೆಂಪೋಗೆ ಹೇರಿ
ಅವ ಪರಾರಿ.

ಈಗ ಕಳ್ಳನಾಗುವ ಸರದಿ ನಿಮ್ಮದು!

  *- ಡಾ. ವಸಂತಕುಮಾರ ಪೆರ್ಲ*

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಕುಂಬಳಕಾಯಿ ಕಳ್ಳ”

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter