( ಚಿತ್ರ : ಸೃಷ್ಟಿ ಗುರುಸಿದ್ಧಯ್ಯಾ ಸ್ವಾಮಿ)
೧೨ನೇ ಶತಮಾನದಲ್ಲಿ ಆಗಿಹೋದ ಬಸವಣ್ಣ ಅಂದು ವಿಶೇಷ ಕ್ರಾಂತಿಯನ್ನು ಮಾಡುವ ಮೂಲಕ 'ಯುಗ ಪ್ರವರ್ತಕ' ಎಂಬ ಕೀರ್ತಿಗೆ ಭಾಜನನಾಗಿದ್ದಾನೆ.
ಇಂದಿನ ವಿಜ್ಞಾನ ಯುಗದಲ್ಲೂ ಕೂಡ ಹಲವರ ದೃಷ್ಟಿಯಲ್ಲಿ ಬಸವಣ್ಣ ವೀರಶೈವ ಧರ್ಮ ಸ್ಥಾಪಕ ಅಥವಾ ಉದ್ಧಾರಕನೇ ಆಗಿದ್ದಾನೆ. ವೀರಶೈವ ಚೌಕಟ್ಟನ್ನು ಸ್ವಲ್ಪ ಬದಿಗಿಟ್ಟ ಅನಂತರವೂ ಬಸವಣ್ಣನ ಸಾಧನೆಗಳನ್ನು ವಿವಿಧ ನೆಲೆಗಳಲ್ಲಿ ಗುರುತಿಸಲು ಸಾಧ್ಯವಿದೆ. ಈ ಕಾರ್ಯ ಇಂದಿನ ಅಗತ್ಯವೂ ಆಗಿದೆ.
ವೃತ್ತಿಯಿಂದ ಬಸವಣ್ಣ ಬಿಜ್ಜಳನ ರಾಜಭಂಡಾರಿಯಾಗಿದ್ದ, ಆತನಿಗೆ ಹಣ, ರೂಪ, ಯೌವನಗಳ ಕೊರತೆ ಇರಲಿಲ್ಲ. ಮನಸ್ಸು ಮಾಡಿದ್ದರೆ ಆತ ಸಾಕಷ್ಟು ಹಣ ಸಂಪಾದಿಸಿ ಐಷಾರಾಮದಿಂದ ಕಾಲ ಕಳೆಯಬಹುದಾಗಿತ್ತು. ಆದರೆ ಬಸವಣ್ಣ ಹಾಗೆ ಮಾಡಲಿಲ್ಲ. ತನ್ನ ಸುತ್ತಲಿನ ಸಮಾಜದಲ್ಲಿಯ ವಿವಿಧ ರೀತಿಯಲ್ಲಿ ತುಳಿತಕ್ಕೊಳಗಾದ ಜನರನ್ನು ಕಂಡು ಮರಗುತ್ತಾನೆ. ಅದೇ ವೇಳೆಯಲ್ಲಿ ಪ್ರಜೆಗಳಿಂದ ಹಿಡಿದು ಪ್ರಭುಗಳವರೆಗೆ ಅಸಂಖ್ಯ ಜನ ಸುಮ್ಮನೆ ತಮ್ಮ ಪಾಡಿಗೆ ತಾನಿದ್ದಂತೆ. 'ಅಯ್ಯೋ ಪಾಪ ! ಎಂದು ಸುಮ್ಮನಿರಲಿಲ್ಲ. ಅಂದಿನ ವರೆಗಿನ ಧರ್ಮ ಶಾಸ್ತ್ರ ಗ್ರಂಥಗಳ ಅಧ್ಯಯನ ಆತ ಮಾಡಿದ್ದ. ಆತನ ಓದು ಅಂದಿನವರೆಗೆ ಓದಿದ ಜನರಂತೆ ಗಿಳಿಪಾಠವಾಗಿರಲಿಲ್ಲ. ಆ ಎಲ್ಲ ಕೃತಿಗಳಲ್ಲಿ ದಾಖಲಾದ ಶೋಷಣೆ ಮಾಡುವವರ ಪರ ಇದ್ದ ವಿಧಾನಗಳ ಬಗ್ಗೆ ಆತನಿಗೆ ಸಿಟ್ಟು ಬಂತು. ತುಳಿತಕ್ಕೊಳಗಾಗದವರನ್ನೆಲ್ಲ ಬಡಿದೆಬ್ಬಿಸಲು ಉಪಾಯವೊಂದನ್ನು ಹುಡುಕಿದ. ಅವರಲ್ಲಿ ಜಾಗೃತಿ ಮೂಡಿಸಲು ಪ್ರತಿದಿನ ಚರ್ಚಾಕೂಟಗಳನ್ನು ಆರಂಭಿಸಿದ, ಬುದ್ಧಿ ಜೀವಿಯೊಬ್ಬ ಸ್ವ ಪ್ರೇರಣೆಯಿಂದ ಸಮಾಜಪರ ಚಿಂತಕನಾಗಿ ತುಳಿತಕ್ಕೊಳಗಾದವರನ್ನು ಬಡಿದೆಬ್ಬಿಸಲು ಮುಂದಾದದ್ದು ಇದು ಜಗತ್ತಿನ ಇತಿಹಾಸದಲ್ಲಿಯ ಪ್ರಥಮ ಉದಾಹರಣೆಯಾಗಿದೆ.
ಬಸವಣ್ಣ ಪ್ರತಿದಿನ ಕಾಯಕದ ನಂತರ ಸಂಜೆಯ ಬಿಡುವಿನ ವೇಳೆಯಲ್ಲಿ ತನ್ನ ಸಮವಿಚಾರಿಗಳೊಂದಿಗೆ ವಿವಿಧ ವಿಷಯಗಳ ಕುರಿತು ಮುಕ್ತವಾಗಿ ಚರ್ಚಿಸುತ್ತಿದ್ದ, ಬಸವಣ್ಣನ ಪ್ರಗತಿಪರ ವಿಚಾರಗಳಿಂದ ಜನ ಪ್ರಭಾವಿತರಾದರು. ಈ ಸುದ್ದಿ ತಿಳಿದ ಜನ ತಂಡೋಪತಂಡವಾಗಿ ಚರ್ಚೆಯಲ್ಲಿ ಭಾಗವಹಿಸಲು ಕಲ್ಯಾಣಕ್ಕೆ ಬರತೊಡಗಿದರು. ಕರ್ನಾಟಕದಿಂದ ಬಂದ ಜನರ ಲೆಕ್ಕವೇ ಇಲ್ಲ. ನೆರೆಯ ಆಂಧ್ರ, ಮಹಾರಾಷ್ಟ್ರ ಮುಂತಾದ ರಾಜ್ಯಗಳಿಂದಲೂ ಜನ ಬಂದರು. ಪ್ರಸಾರ ಮಾಧ್ಯಮಗಳೇ ಇಲ್ಲದ ಅಂದಿನ ಕಾಲದಲ್ಲಿ ಓರಿಸಾ, ಕಾಶ್ಮೀರ, ಆಫಘಾಣಿಸ್ಥಾನ ದಿಂದಲೂ ಜನರು ಬಂದರೆಂದರೆ ಬಸವಣ್ಣನ ವಿಚಾರಗಳು ಅಂದು ಎಷ್ಟೊಂದು ಪ್ರಭಾವ ಬೀರಿದ್ದವು ಎಂಬುದನ್ನು ಊಹಿಸಬಹುದು.
ಬಸವಣ್ಣ ಮತ್ತು ಅವನ ಅನುಯಾಯಿಗಳು ಸೇರಿ ಚರ್ಚಿಸುತ್ತಿದ್ದ ವಿಷಯಗಳಲ್ಲಿ ಯಾವುದೇ ರೀತಿಯ ಭೇದಗಳಿರಲಿಲ್ಲ. ಆತ್ಮೋದ್ಧಾರ ಮತ್ತು ಸಮಾಜೋದ್ಧಾರವೇ ಬಸವಣ್ಣನ ಪ್ರಮುಖ ಗುರಿಯಾಗಿತ್ತು. ಬಸವಣ್ಣ ಹುಟ್ಟುಹಾಕಿದ ಅನುಭವ ಮಂಟಪ ಇಂದಿನ 'ಸರ್ವ ಧರ್ಮ ಸಮ್ಮೇಳನ' ಕ್ಕಿಂತ ಸಂಪೂರ್ಣ ಭಿನ್ನವಾಗಿತ್ತು. ಇಂದಿನ ಇಂಥ ಸಮ್ಮೇಳನಗಳು ಕೆಲ ಮಟ್ಟಗೆ ಒಳ್ಳೆಯ ಉದ್ದೇಶಗಳನ್ನು ಹೊಂದಿದ್ದರೂ ಅವು ಔಪಚಾರಿಕ ಎಂಬ ಮಾತನ್ನು ಅಲ್ಲಗಳೆಯುವಂತಿಲ್ಲ. ಬಸವಣ್ಣ ಆರಂಭಿಸಿದ 'ಅನುಭವ ಮಂಟಪ' ಅನೌಪಚಾರಿಕ ವೇದಿಕೆಯಾಗಿತ್ತು. ಅದು ಒಂದೆರಡು ದಿನಗಳ ಕಾರ್ಯಕ್ರಮವೂ ಆಗಿರದೆ ಪ್ರತಿನಿತ್ಯ ನಡೆಯುವ ಚಟುವಟಿಕೆಯಾಗಿತ್ತು.
ಆಧುನಿಕ ಜಗತ್ತು ಸಾಕ್ಷರತೆಯ ಡಂಗುರ ಸಾರುತ್ತಿದ್ದರೂ ಹೆಬ್ಬೆರಳಿನ ಸಹಿ ಇನ್ನೂ ಸಂಪೂರ್ಣವಾಗಿ ಮಾಯವಾಗಿಲ್ಲ. ಇನ್ನು ೧೨ನೆಯ ಶತಮಾನದ ಪರಿಸ್ಥಿತಿ ಹೇಗಿರಬೇಡ? ಮೇಲ್ದಾತಿಯವರ ಗುತ್ತಿಗೆ ವಿಷಯವಾಗಿದ್ದ ಶಿಕ್ಷಣಗಂಗೆಯನ್ನು ಬಸವಣ್ಣ ಅಲ್ಲಿ ಸೇರಿದವರಿಗೆಲ್ಲ ತಲುಪಿಸಿದ. ಅಲ್ಪಾವಧಿಯಲ್ಲಿ ಜನ ಅಕ್ಷರಸ್ಥರಾಗಿ ಗ್ರಂಥಗಳನ್ನು ಓದತೊಡಗಿದರು ಚರ್ಚೆಯಲ್ಲಿ ಮುಕ್ತವಾಗಿ ಚರ್ಚಿಸಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದುದು ಜಗತ್ತಿನ ಪ್ರಥಮ ಉದಾಹರಣೆಯಾಗಿದೆ.
ಜನರಲ್ಲಿ ಜಾಗೃತಿ ಮೂಡಿದಂತೆಲ್ಲ ಅವರು ಸಂಪ್ರದಾಯದ ವಿರುದ್ಧ ಸಿಡಿದೆದ್ದರು. ಮುರೋಹಿತಶಾಹಿಯನ್ನು ಪ್ರಶ್ನಿಸಿದರು. ಜಿಡುಗಟ್ಟಿದ ಸಂಪ್ರದಾಯವನ್ನು ಪ್ರಖರ ವೈಚಾರಿಕತೆಯ ಬೆಂಕಿಯ ಮೇಲಿಟ್ಟು ಕಾಯಿಸಿದರು. ಮೂಢ ನಂಬಿಕೆಗಳ ಬೇರುಗಳನ್ನೇ ಹಿಡಿದು ಅಲ್ಲಾಡಿಸಿದರು. ಸ್ವರ್ಗ ನರಕ ಮುಂತಾದವುಗಳನ್ನು ನಿರ್ಭಯವಾಗಿ ನಿರಾಕರಿಸಿ 'ಕಾಯಕವೇ ಕೈಲಾಸ' ಎಂದು ನಂಬಿ ಕಾಯಕಕ್ಕೆ ಮಹತ್ವ ಕೊಟ್ಟರು ಶರಣರ ಆ ಎಲ್ಲ ಕಾಯಕಗಳು ಸಮಾನ ಅಂದರೆ ಶ್ರೇಣಿರಹಿತವಾಗಿದ್ದವು. ಇದು ವಿಶ್ವದ ಅತಿದೊಡ್ಡ ಮತ್ತು ಪ್ರಪ್ರಥಮ ಸಮಾಜೋಧಾರ್ಮಿಕ ಚಳುವಳಿಯಾಗಿದೆ.
ಬಸವಾದಿ ಶರಣರು ನಡೆದಂತೆ ನುಡಿದರು, ನುಡಿದಂತೆ ನಡೆದರು. ಅದಕ್ಕಾಗಿಯೇ ಅವರ ಮಾತುಗಳು ಜಗತ್ತಿನ ಎಲ್ಲ ಕಾಲದ ಎಲ್ಲ ಜನರಿಗೆ ಮಾದರಿಯಾಗಿವೆ. ೧೨ನೆಯ ಶತಮಾನಕ್ಕಿಂತ ಮೊದಲು ಕೆಲವೇ ಕೆಲವು ಜನರು ಉಪಯೋಗಿಸಿದ 'ವಚನ' ಎಂಬ ಸಾಹಿತ್ಯ ಪ್ರಕಾರವನ್ನು ಬಸವಾದಿ ಶರಣರು ತಮ್ಮ ಅಭಿವ್ಯಕ್ತಿ ಮಾಧ್ಯವನ್ನಾಗಿ ಬಳಸಿದರು. ಅವರು ಆಡಿದ, ಹಾಡಿದ ಮಾತುಗಳು 'ವಚನ'ಗಳಾಗಿ ಲಿಖಿತರೂಪದಲ್ಲಿ ಇಂದಿಗೂ ಉಳಿದಿಕೊಂಡಿವೆ. ಅಂದಿನವರೆಗೆ ದೇವಭಾಷೆ ಎನಿಸಿದ ಪಂಡಿತರ ಸಂಸ್ಕೃತ ಭಾಷೆಯನ್ನು ನಿರಾಕರಿಸಿ, ಜನವಾಣಿಯಾದ ಕನ್ನಡದಲ್ಲಿ ವಚನಗಳನ್ನು ಬರೆದು ಜನವಾಣಿಯನ್ನೇ ದೇವವಾಣಿಯ ಎತ್ತರಕ್ಕೆ ಏರಿಸಿದರು. ಈ ವಚನಗಳು ವಿಶ್ವಸಾಹಿತ್ಯಕ್ಕೆ ಕನ್ನಡದ ಅಮೂಲ್ಯ ಕೊಡುಗೆಗಳಾಗಿವೆ.
ಬಸವಣ್ಣ ಮಾಡಿದ ಇನ್ನೊಂದು ವಿಶೇಷ ಉಪಕ್ರಮವೆಂದರೆ ಅಂತರ್ಜಾತಿ ವಿವಾಹ. ಇಂದಿನ ೨೧ನೆಯ ಶತಮಾನದಲ್ಲೂ ಅಂತರ್ಜಾತಿ ವಿವಾಹಕ್ಕೆ ಸಮಾಜ ಮನ್ನಣೆ ದೊರೆತಿಲ್ಲ. ಅಂದಮೇಲೆ ಬಸವಣ್ಣನ ಧೈರ್ಯ ಮೆಚ್ಚಲೇಬೇಕು. ಆದರೆ ಇದೇ ಘಟನೆ ಕಲ್ಯಾಣ ವಿಪ್ಲವಕ್ಕೆ ಕಾರಣವಾಯಿತು. ಅಂದು ಕಾಲ ಪಕ್ವವಾಗಿರಲಿಲ್ಲ. ಇಂದು ಕೂಡ ಕಾಲ ಪೂರ್ತಿ ಪಕ್ಷವಾಗಿರದಿದ್ದರೂ ಸ್ವಲ್ಪ ಸುಧಾರಿಸಿದೆ ಎನ್ನಬಹುದು. ಈ ಸುಧಾರಣೆ ಅಂದು ಬಸವಣ್ಣ ಬಿತ್ತಿದ ಪ್ರಗತಿಪರ ಆಚಾರ-ವಿಚಾರಗಳ ಫಲವೇ ಆಗಿದೆ. ಮುಂಬರುವ ಸತ್ ಆಚಾರ ವಿಚಾರಗಳುಳ್ಳ ನವಸಮಾಜ ನಿರ್ಮಿತಿಗೆ ಭದ್ರ ಬುನಾದಿ ಹಾಕಿದವ ಬಸವಣ್ಣ ಎಂಬ ಮಾತು ಎಲ್ಲರೂ ಒಪ್ಪಲೇಬೇಕಾದದ್ದು.
ಬಸವಣ್ಣ ತನ್ನ ವೃತ್ತಿ ಜೀವನದಲ್ಲಿ ಹಗರಣಗಳಿಗೆ ಕೈಹಾಕಿ ದುಡ್ಡು ಎಂದೂ ಸಂಪಾದಿಸ ಬಯಸಲಿಲ್ಲ. ಕಲ್ಯಾಣ ಕ್ರಾಂತಿಯ ಸಮಯದಲ್ಲಿ ರಾಜನಿಗೂ ಅಂಜದೆ ತನ್ನ ತತ್ವಗಳಿಗೆ ಬದ್ಧನಾಗಿ ಮಂತ್ರಿಪದವಿಯನ್ನೇ ತ್ಯಜಿಸಿದ ಧೀರ ವ್ಯಕ್ತಿ. ಉನ್ನತ ಹುದ್ದೆಯಲ್ಲಿದ್ದರೂ ಸದಾ ಮುಗಿದ ಕೈ ಬಾಗಿದ ತಲೆಯ ಸಜ್ಜನಿಕೆಯ ಸಾಕಾರಮೂರ್ತಿ. ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ಬಸವಣ್ಣ ಕೇವಲ ರಾಜಕಾರಣಿಗಳಿಗಷ್ಟೇ ಅಲ್ಲ, ಜಗತ್ತಿನ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾನೆ.
ಬಸವಣ್ಣನ ಸಾಧನೆಗಳಲ್ಲಿಯ ಕೆಲವು ಜಾಗತಿಕ ಮಟ್ಟದ ವಿಶೇಷತೆಗಳನ್ನು ಹೇಗೆ ಪಟ್ಟಿಮಾಡಬಹುದು.
1.ಉನ್ನತ ಹುದ್ದೆಯಲ್ಲಿದ್ದರೂ ಐಷಾರಾಮಿ ಜೀವನ ನಡೆಸದೆ ಸರಳ ಜೀವನ ನಡೆಸಿದ ಪ್ರಥಮ ವ್ಯಕ್ತಿ.
2.ಸಮಾಜಪರ ಚಿಂತನೆ ಮಾಡಿದ ಬಹುಶಃ ಪ್ರಥಮ ಬುದ್ಧಿಜೀವಿ.
- ತುಳಿತಕ್ಕೊಳಗಾದವರನ್ನು ಒಂದುಗೂಡಿಸಿ ಅವರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದ ಪ್ರಥಮ ಸಂಘಟಕ.
- ಪ್ರಪ್ರಥಮ ಪ್ರಗತಿಪರ ವಿಚಾರವಾದಿ.
- ಪ್ರಸಾರ ಮಾಧ್ಯಮಗಳೇ ಇಲ್ಲದ ಕಾಲದಲ್ಲೂ ಮತ್ತು ಇಂದು ಸಹ ಅತಿ ಹೆಚ್ಚು ಪ್ರಭಾವ ಬೀರಿದ ವ್ಯಕ್ತಿ.
- ಮುಕ್ತ ಚರ್ಚೆಗಾಗಿ ವೇದಿಕೆ ಸ್ಥಾಪಿಸಿದ ಪ್ರಥಮ ಸಂಘಟಕ
- ಲಿಂಗ, ಜಾತಿ, ವರ್ಗ, ವರ್ಣ ಮುಂತಾದ ಭೇದಗಳನ್ನಳಿಸಿ ಎಲ್ಲರನ್ನು ಒಂದುಗೂಡಿಸಿದ ಪ್ರಥಮ ಸಂಘಟಕ.
8.12ನೆಯ ಶತಮಾನದಲ್ಲೇ ಸರ್ವರಿಗಾಗಿ ಶಿಕ್ಷಣಕೊಡಲು ಸಾಕ್ಷರತೆಯ ಪತಾಕೆ ಹಾರಿಸಿದ
ಪ್ರಥಮ ವ್ಯಕ್ತಿ. - ಎಲ್ಲ ವರ್ಗದ ಜನರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಮಂಡಿಸಿದ ಪ್ರಥಮ ಘಟನೆ.
- ಜಿಡ್ಡುಗಟ್ಟಿದ ಸಂಪ್ರದಾಯ ಮತ್ತು ಮೂಢನಂಬಿಕೆಗಳ ವಿರುದ್ಧ ಆರಂಭಿಸಿದ ಪ್ರಥಮ ಹೋರಾಟ. (ಹೋರಾಟದ ನೇತಾರ ಬಸವಣ್ಣ).
- ಪ್ರಪ್ರಥಮ ಶ್ರೇಣಿರಹಿತ ಕಾಯಕ ವ್ಯವಸ್ಥೆ.
- ಪ್ರಪಥಮ ಮತ್ತು ಬೃಹತ್ ಸಮಾಜೋಧಾರ್ಮಿಕ ಚಳುವಳಿ.
- ಆ ಮೊದಲು ಅಲ್ಪಪ್ರಮಾಣದಲ್ಲಿ ಬಳಸಲ್ಪಡುತ್ತಿದ್ದ ‘ವಚನ’ ಸಾಹಿತ್ಯ ಪ್ರಕಾರವನ್ನು ಅಭಿವ್ಯಕ್ತಿ, ಮಾಧ್ಯಮವಾಗಿ ಸಾಮೂಹಿಕ ಮತ್ತು ಪ್ರಭಾವಿ ಬಳಕೆ ಪ್ರಪ್ರಥಮವಾಗಿ ಆಯಿತು.
- ಪ್ರಪಪ್ರಥಮವಾಗಿ ಎಲ್ಲ ವರ್ಗದ ಜನರಿಂದ ಸಾಮೂಹಿಕವಾಗಿ ವಿಪುಲ ಸಾಹಿತ್ಯ ರಚನೆ.
- ಪ್ರಪಪ್ರಥಮವಾಗಿ ಪಂಡಿತರ ಭಾಷೆಯನ್ನು ನಿರಾಕರಿಸಿ ಜನವಾಣಿಯನ್ನು
ಸಾಮೂಹಿಕವಾಗಿ ಬಳಸಿ ಸಾಹಿತ್ಯ ರಚನೆ, - ಅಂತರ್ಜಾತಿ ವಿವಾಹ ಏರ್ಪಡಿಸಿದ ಬಹುಶಃ ಪ್ರಥಮ ವ್ಯಕ್ತಿ.
- ಎಂಥ ವೇಳೆಯಲ್ಲೂ ತತ್ವಗಳಿಂದ ವಿಚಲಿತನಾಗದೆ. ತತ್ವಸಿದ್ಧಾಂತಗಳಿಗಾಗಿ ಮಂತ್ರಿಪದವಿಯನ್ನೇ ತ್ಯಜಿಸಿದ ಬಹುಶಃ ಪ್ರಥಮ ವ್ಯಕ್ತಿ.
ಈ ಪಟ್ಟಿ ಇನ್ನೂ ಬೆಳೆಯಬಲ್ಲದು. ನಡೆದಂತೆ ನುಡಿದ ನುಡಿದಂತೆ ನಡೆದ ಬಸವಣ್ಣ ಸರ್ವರಿಗೂ ಎಂದೆಂದೂ ಮಾದರಿಯಾಗಿ ನಿಲ್ಲುತ್ತಾನೆ. ಸಮಸ್ತ ಮನುಕುಲದ ಸರ್ವತೋಮುಖ ಏಳೆಗಾಗಿ ಶ್ರಮಿಸಿದ ಬಸವಣ್ಣ ಮಹಾಮಾನವತಾವಾದಿ ಯಾಗಿದ್ದಾನೆ. ಅದಕ್ಕಾಗಿ ಆತನಿಗೆ ವಿಶ್ವಗುರು, ಮಹಾತ್ಮ ಎಂಬ ಮುಂತಾದ ಬಿರುದುಗಳನ್ನು ಜನರೇ ನೀಡಿ ಗೌರವಿಸಿದ್ದಾರೆ. ಸಂಪೂರ್ಣ ಜಗತ್ತಿನ ಇತಿಹಾಸದಲ್ಲಿ ಬಸವಣ್ಣನಂತೆ ಯುಗಪ್ರವಾಹದ ದಿಕ್ಕನ್ನೇ ಬದಲಿಸಿದ ಬೇರೆ ಉದಾಹರಣೆಗಳು ಸಿಗುವುದಿಲ್ಲ. ಅದಕ್ಕಾಗಿಯೇ ಬಸವಣ್ಣ ‘ಯುಗ ಪ್ರವರ್ತಕ’ ನೆನಿಸಿದ್ದಾನೆ.
- ಡಾ. ಗುರುಸಿದ್ಧಯ್ಯಾ ಶಿವರಾಚಯ್ಯಾ ಸ್ವಾಮಿ
ಸಹಾಯಕ ಪ್ರಾಧ್ಯಾಪಕರು
ಕನ್ನಡ ವಿಭಾಗ
ಸಿ.ಬಿ. ಖೇಡಗಿ ಮಹಾವಿದ್ಯಾಲಯ
ಅಕ್ಕಲಕೋಟ, ಮಹಾರಾಷ್ಟ್ರ 413216