ನನ್ನಿರುಳ ಕನಸುಗಳಿಗೆ ಮೆತ್ತನೆಯ ಕಲ್ಪನೆ ಹೊರೆಸಿ ನನ್ನದೇ ವಿಚಾರಗಳಲ್ಲಿ ತೇಲುವಂತೆ ಮಾಡಿದ್ದು ಮಚ್ಚರದಾನಿ ಗುಯ್ ಗುಯ್ ರಾಗ ಹಾಡುವ ರಕ್ತವ ಮೈಯಿಂದ ಶಕ್ತಿಮೀರಿ ಹೀರುವ ದಾಷ್ಟ್ಯ ಸೊಳ್ಳೆಗಳಿಂದ ರಕ್ಷಿಸಿದ್ದು ಈ ಪರದೆಯೇ ಆಯಸ್ಸು ಮನುಷ್ಯನಂತೆ ಇದಕ್ಕೂ ಉಂಟು ಅಲ್ಲೊಂದು ಇಲ್ಲೊಂದು ತೂತುಗಳು ನುಸುಳುವ ಸೊಳ್ಳೆಗಳ ಕಾಟ ಹೆಚ್ಚಾಗಿ, ಹೋಯಿತು ಮಚ್ಚರದಾನಿ ಕಿಮ್ಮತ್ತು ಅಲ್ಲಲ್ಲಿ ತೇಪೆ ಹಚ್ಚಿದರೂ ಬಲಹೀನವಾದ ಅದರ ಬಾಹುಗಳು ಸೊಳ್ಳೆಗಳ ಆಕ್ರಮಣ ಮುಂದುವರೆದು ನಿಸ್ಸಹಾಯಕವಾಗಿ ನೋಡಿತ್ತು ಹೊಸದು ಕೋಣೆ ತುಂಬಿತು ನವವಧು ಅಕ್ಕಿ ಸೇರು ಒದೆಯುವಂತೆ ವಿನ್ಯಾಸ, ಬಣ್ಣ, ರಕ್ಷಣೆ ಎಲ್ಲವೂ ಮೀರಿಸಿತ್ತು ಹಳೆಯದನು ಹೊಸದನ್ನು ಕೆಕ್ಕರಿಸಿ ನೋಡಿತ್ತು ಮುಗುಳುನಗೆ ಹೊಸದರಲ್ಲಿ ವಯ್ಯಾರ ಬಿನ್ನಾಣ ಅಬ್ಬಾ!!! ಹಳೇದು ಕಣ್ಣು ತೆರದೇ ಇತ್ತು ಹಳೆಯದಾದಷ್ಟು ಹಳೆಯದಕ್ಕೆ ಬೆಲೆಯಿಲ್ಲ, ಉಪಯೋಗಕ್ಕೆಬಾರದು ಹಾಗೆ ಚೆಲ್ಲಬೇಕು ಕಸದಬುಟ್ಟಿಗೆ ಸಂತೃಪ್ತವಾಗಿ ಹೋಗಲೇಬೇಕು ಅದು ಮನೆಯಿಂದ ಬೇಸರಿಸಿಯೇ ಮಚ್ಚರದಾನಿಗೂ ಮನುಷ್ಯನಿಗೂ ಅಂಥ ಭೇದವಿಲ್ಲ * ಮಾಲಾ. ಮ. ಅಕ್ಕಿಶೆಟ್ಟಿ. ಬೆಳಗಾವಿ.
