ಅಪ್ಪೆಮಿಡಿ ಉಪ್ಪಿನಕಾಯಿಯ ರುಚಿಯೇ ಭಿನ್ನ. ಒಂದು ಮಿಡಿ ತಿಂದರೆ ಮತ್ತೊಂದು ತಿನ್ನಬೇಕೆನ್ನುವಾಸೆ. ತಿಂದ ಮೇಲೆ ದಿನವಿಡೀ ಅದೇ ಪರಿಮಳದ ತೇಗು. ಅಪ್ಪೆಮಿಡಿಯ ವೈಶಿಷ್ಟ್ಯವೇ ಇದಾಗಿದೆ. ಇದರ ಮಹತ್ವ ಅರಿವಾದದ್ದು ಮುಂಬೈಗೆ ಬಂದ ಮೇಲೆ. ನಮ್ಮ ಕಟ್ಟಡದಲ್ಲಿ ವಾಸವಾಗಿರುವ ದಾಂಡೇಲಿ ಮೂಲದ ಮಹಿಳೆಯೊಬ್ಬರು ಕೊಟ್ಟ ಅಪ್ಪೆಮಿಡಿ ಉಪ್ಪಿನಕಾಯಿಯನ್ನು ತಿಂದಂದಿನಿಂದ ಅಪ್ಪಿಮಿಡಿಯ ಬಗ್ಗೆ ವಿಶೇಷ ಕುತೂಹಲ ಮೂಡತೊಡಗಿತು. ಈವರೆಗಿನ ನನ್ನ ಅನ್ವೇಷಣೆಯಲ್ಲಿ ಅಸಲಿ ಅಪ್ಪೆಮಿಡಿ ಉಪ್ಪಿನಕಾಯಿ ಸಿಕ್ಕಿದ್ದು ಸೂಡೂರಿನ ನಾಗಭೂಷಣ ಭಟ್ಟರ ಮನೆಯಲ್ಲಿ.
ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಸೂಡೂರಿನಲ್ಲಿ ನಾಗಭೂಷಣ್ ಭಟ್ಟರು ಆರು ಎಕರೆ ಜಾಗದಲ್ಲಿ ನಾಲ್ನೂರು ಅಪ್ಪೆಮಿಡಿಯ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಮೂಲತಃ ಹೊಸನಗರದ ಕೀಳಂಬಿಯವರಾದ ಭಟ್ಟರ ತಂದೆ ಸುಮಾರು ಮೂವತ್ತಾರು ವರ್ಷಗಳ ಹಿಂದೆ ಸೂಡೂರಿನಲ್ಲಿ ಇಪ್ಪತ್ತು ಎಕರೆ ಖಾಲಿ ಜಮೀನನ್ನು ಖರೀದಿಸಿದ್ದರು. ಅದರಲ್ಲಿ ಏಳು ಎಕರೆಯ ವಿಸ್ತಾರದಲ್ಲಿ ಅಡಿಕೆ ಗಿಡಗಳನ್ನು ಹಾಕಿದರು. ಆದರೆ ಅಡಿಕೆ ಫಲ ಕೊಡುವವರೆಗೆ ಏನಾದರೊಂದು ಆದಾಯ ಬೇಕಿತ್ತು. ತೊಂಡೆಕಾಯಿ, ಬೀನ್ಸ್, ಹೀರೇಕಾಯಿ, ಬಾಳೆ, ಬದನೆಕಾಯಿ, ಮೆಣಸು, ಶುಂಠಿ, ಲಿಂಬೆ ಅರಶಿನ ಮುಂತಾದವುಗಳನ್ನು ಬೆಳೆಯಲಾರಂಭಿಸಿದರು. ವರ್ಷಕ್ಕೆ ಸುಮಾರು ಹತ್ತು ಕ್ವಿಂಟಲ್ನಷ್ಟು ತೊಂಡೆಕಾಯಿ ಆಗುತ್ತಿತ್ತು. ಹಬ್ಬ ಹರಿದಿನಗಳಲ್ಲಿ ಅರಶಿನ ಎಲೆಗಳಿಗೆ ಬೇಡಿಕೆ ಇರುತ್ತಿತ್ತು. ಎಲ್ಲವನ್ನು ಅವರೇ ಮಾರುಕಟ್ಟೆಗೆ ಕೊಂಡು ಹೋಗಿ ಮಾರುತ್ತಿದ್ದರು. ಅದರಿಂದ ಬಂದ ಆದಾಯವನ್ನು ಉಳಿದ ಜಮೀನನ್ನು ಅಭಿವೃದ್ದಿ ಪಡಿಸುವುದಕ್ಕೆ ವಿನಿಯೋಗಿಸುತ್ತಿದ್ದರು.
ತನ್ನ ತಂದೆಯ ಕನಸನ್ನು ಅರ್ಥಪೂರ್ಣವಾಗಿ ಸಾಕಾರಗೊಳಿಸಿದವರೆಂದರೆ ನಾಗಭೂಷಣ ಭಟ್. ಅವರು ತೋಟದ ಬೆಳೆಗಳಲ್ಲಿ ಹೆಚ್ಚಿನ ಎಲ್ಲ ಬೆಳೆಗಳನ್ನು ತಮ್ಮ ಜಮೀನಿನಲ್ಲಿ ಬೆಳೆಸಿದ್ದಾರೆ. ‘ಒಂದೇ ಬೆಳೆಯನ್ನು ನಂಬಿ ಇರಬಾರದು, ಒಂದು ಬೆಳೆ ಕೈಕೊಟ್ಟರೆ ಇನ್ನೊಂದು ಬೆಳೆ ಕೈ ಹಿಡಿಯುತ್ತದೆ. ನಿರಂತರ ಆದಾಯ ಬರಬೇಕೆಂದರೆ ಉಪಬೆಳೆಗಳನ್ನು ಬೆಳೆಯಬೇಕು’ ಎಂಬುದು ಭಟ್ಟರ ನಿಲುವು. ಕರ್ನಾಟಕದಲ್ಲಿ ಉತ್ತಮವಾದ ರೀತಿಯಲ್ಲಿ ಅಪ್ಪೆಮಿಡಿ ಕೃಷಿ ಮಾಡಿದವರಲ್ಲಿ ಇವರೇ ಪ್ರಮುಖರು. ಭಟ್ಟರ ಜಮೀನಿನ ಪಕ್ಕದಲ್ಲಿ ಕುಮದ್ವತಿ ನದಿ ಹರಿಯುತ್ತದೆ. ಅದರ ದಡದಲ್ಲಿ ಸಾಲಾಗಿ ಕೆಲವು ಅಪ್ಪೆಮಿಡಿ ಮರಗಳಿವೆ. ಅದರಲ್ಲಿ ಕೆಲವು ವಿಧಗಳಿದ್ದು ಒಂದು ಮರದಲ್ಲಿ ಎರಡು ಮೂರು ಕ್ವಿಂಟಾಲ್ನಷ್ಟು ಅಪ್ಪೆಮಿಡಿ ಸಿಗುತ್ತಿತ್ತು. ಅದಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆಯೂ ಇತ್ತು. ‘ನಾವು ಯಾಕೆ ಎಕರಗಟ್ಲೆ ಅಪ್ಪೆಮಿಡಿ ಬೆಳೆಯಬಾರದು’ ಎಂದು ಯೋಚಿಸಿ ಹದಿನೈದು ವರ್ಷಗಳ ಹಿಂದೆ ಅದರಲ್ಲಿ ಹೇರಳವಾಗಿ ಕಾಯಿ ಬಿಡುವ, ಒಳ್ಳೆಯ ಪರಿಮಳವಿರುವ ತಳಿಯನ್ನು ಆರಿಸಿ, ಮೃದುಕಾಂಡ ಕಸಿ ಮಾಡಿ ನೆಟ್ಟರು. ಐದಾರು ಎಕರೆಯಲ್ಲಿ ಭತ್ತದ ಬೆಳೆ ಮಾಡಿ ಅದರ ಬದುವಿನಲ್ಲಿಯೂ ಅಪ್ಪೆಮಿಡಿ ಗಿಡಗಳನ್ನು ಹಾಕಿದರು.
ಖರ್ಚು ಕಡಿಮೆ; ಹೆಚ್ಚು ಆದಾಯ
‘ಹವಮಾನ ವೈಪರೀತ್ಯದಿಂದ ಕೆಲವೊಂದರಲ್ಲಿ ಪ್ರತಿವರ್ಷ ಕಾಯಿ ಬಿಡುವುದಿಲ್ಲ. ಸಾಧ್ಯವಾದಷ್ಟು ವರ್ಷವೂ ಕಾಯಿ ಬಿಡುವಂಥ ತಳಿಗಳನ್ನೇ ಹಾಕಿದ್ದೇವೆ’ ಅನ್ನುವ ಭಟ್ಟರು, ಕ್ವಾಡ್ರಿಗೆ ಜೀರಿಗೆ, ಸೂಡೂರು ಅಪ್ಪೆ, ಕೊರೊಂಬಳ್ಳಿ ಅಪ್ಪೆ. ಲೋಕಲ್ ಮಿಡಿ ಈ ನಾಲ್ಕು ತಳಿಗಳಲ್ಲಿ ಜೀರಿಗೆ ಮಿಡಿ, ಮತ್ತು ಸೂಡೂರು ಅಪ್ಪೆಮಿಡಿ ಗಿಡಗಳನ್ನು ಹೆಚ್ಚು ಹಾಕಿದ್ದಾರೆ. ‘ನೆಟ್ಟ ಐದಾರು ವರ್ಷಕ್ಕೆ ಫಲ ಬರುತ್ತದೆ. ವಿಶೇಷ ಆರೈಕೆ ಬೇಕಾಗಿಲ್ಲ. ಬೇರೆ ಕೃಷಿಗೆ ಹೋಲಿಸಿದರೆ ಇದಕ್ಕೆ ಖರ್ಚು ಕಡಿಮೆ. ಚೆನ್ನಾಗಿ ಕಾಯಿ ಬಿಟ್ಟರೆ ಹತ್ತು ವರ್ಷ ಪ್ರಾಯದ ಮರದಲ್ಲಿ ಐವತ್ತು ಸಾವಿರದಷ್ಟು ಆದಾಯ ಬಂದರೆ, ಹದಿನೈದು ವರ್ಷದ ಮರದಲ್ಲಿ ಒಂದು ಲಕ್ಷದ ತನಕವೂ ಆದಾಯ ಇದೆ’ ಎಂದು ಭಟ್ಟರು ಹೇಳುತ್ತಾರೆ. ಮಲೆನಾಡಿನಲ್ಲಿ ಪ್ರಾಕೃತಿಕವಾಗಿ ಇದ್ದಂಥ ಅಪ್ಪೆ ಮಿಡಿ ಮರಗಳನ್ನು ಜನರು ಕಡಿದು ಎಲ್ಲ ನಾಶ ಮಾಡಿದ್ದಾರೆ. ಆದರೆ ಅದಕ್ಕೆ ಈಗ ಒಳ್ಳೆಯ ಮಾರುಕಟ್ಟೆ ಇರುವುದರಿಂದ ತಮಿಳುನಾಡಿನಂಥ ಬೇರೆ ಬೇರೆ ಪ್ರದೇಶದಿಂದ ಹುಡುಕಿ ತಂದು ಮೃದು ಕಾಂಡ ಕಸಿ ಮಾಡಿ ಅಪ್ಪೆಮಿಡಿ ಗಿಡಗಳನ್ನು ಅಭಿವೃದ್ದಿ ಪಡಿಸುತ್ತಿದ್ದಾರೆ. ಮೃದುಕಾಂಡ ಕಸಿ ಮಾಡಿದ ಅಪ್ಪೆ ಮಿಡಿ ಗಿಡಗಳು ಕೊಡೆಯಾಕಾರದಲ್ಲಿ (ಬುಶ್ ಆಕಾರದಲ್ಲಿ) ಬೆಳೆಯುತ್ತವೆ. ಈ ಗಿಡಗಳು ಚೆನ್ನಾಗಿ ಬೆಳೆಯಲು ತುಂಬ ಬಿಸಿಲು ಬೇಕು. ನಾಟಿ ಮಾಡಿದ ನಂತರ ಎರಡು ವರ್ಷ ನೀರು ಬೇಕಾಗುತ್ತದೆ. ಆನಂತರ ನೀರಿನ ಅವಶ್ಯಕತೆ ಇರುವುದಿಲ್ಲ.
ಅಪ್ಪೆ ಮಿಡಿ ಇತರ ಮಾವಿನ ಮಿಡಿಗಿಂತ ತುಂಬ ಪರಿಮಳ ಇರುತ್ತದೆ. ಅಪ್ಪೆಮಿಡಿ ಹೌದೋ ಅಲ್ಲವೋ ಎಂದು ಪರೀಕ್ಷಿಸಬೇಕಾದರೆ ಅದರ ಸೊನೆಗೆ ಬೆಂಕಿ ಕೊಟ್ಟರೆ ಸಾಕು ಹೊತ್ತಿ ಉರಿಯುತ್ತದೆ. ತುಂಬ ಸೊನೆ ಇರುವುದರಿಂದಲೇ ಉಪ್ಪು ನೀರಲ್ಲಿ ಹಾಕಿದರೂ ಮೃದುವಾಗದೆ ತಿನ್ನಲು ಗರಿಗರಿಯಾಗಿರುತ್ತದೆ. ಮೂರು ನಾಲ್ಕು ವರ್ಷಗಳಾದರೂ ಅದು ಕೆಡುವುದಿಲ್ಲ. ಆದ್ದರಿಂದಲೇ ಈ ಮಾವಿನ ಮಿಡಿಗೆ ತುಂಬಾ ಬೇಡಿಕೆ ಇದೆ. “ಮಾರುಕಟ್ಟೆಯಲ್ಲಿ ಒಂದು ಕೆಜಿ ಕಾಯಿ ಮಿಡಿಗೆ ಮುನ್ನೂರು- ಮುನ್ನೂರ ಐವತ್ತು ರೂಪಾಯಿ ಬೆಲೆ ಇರುತ್ತದೆ. ಉಪ್ಪಿನಕಾಯಿ ಮಾಡಿದರೆ ಎರಡು ಕ್ವಿಂಟಲ್ಗೆ ಒಂದು ಲಕ್ಷ ರೂಪಾಯಿ ಆದಾಯ ಬರುತ್ತೆ” ಎಂದು ಭಟ್ಟರು ಹೇಳುತ್ತಾರೆ. ಕೆಲವೊಂದು ಉಳಿದು ಹಣ್ಣಾದರೆ ಅಪ್ಪೆ ಸಾರು ಅಂತ ಮಾಡುತ್ತಾರಂತೆ. ಅದು ತುಂಬ ಪರಿಮಳದಿಂದ ಕೂಡಿದ್ದು ಊಟಕ್ಕೆ ರುಚಿಕರವಾಗಿರುತ್ತದೆ.
ನರ್ಸರಿ ಬೆಳೆಯಲ್ಲೂ ನಿಪುಣರು
ಅಪ್ಪೆ ಮಿಡಿ ಮರದಲ್ಲಿ ಹೂ ಬಿಟ್ಟು ಒಂದು ತಿಂಗಳಲ್ಲಿ ಕಾಯಿ ಕೊಯ್ಯುತ್ತಾರೆ. ಸೊನೆ ಹೋಗಬಾರದು ಅನ್ನುವ ಉದ್ದೇಶದಿಂದ ಮಿಡಿಯ ತೊಟ್ಟು ಇಡುತ್ತಾರೆ. ಒಂದು ಕೆಜಿ ಜೀರಿಗೆ ಮಿಡಿ ಉಪ್ಪಿನಕಾಯಿಗೆ 650ರೂ, ಸೂಡೂರು ಅಪ್ಪೆಮಿಡಿಗೆ 600ರೂ, ಸಾದಾ ಅಪ್ಪೆಮಿಡಿಗೆ 550ರೂ ಬೆಲೆ ಇದೆ. ಬೇರೆ ಮಿಡಿಯನ್ನು ಬೆರಸದೆ ಗುಣಮಟ್ಟವನ್ನು ಕಾಯ್ದುಕೊಂಡಿರುವುದರಿಂದ ಯಾವುದೇ ಬ್ರ್ಯಾಂಡ್ ಇಲ್ಲದೆ ಗ್ರಾಹಕರು ಅಪ್ಪೆಮಿಡಿ ಉಪ್ಪಿನಕಾಯಿಯನ್ನು ಮನೆಗೆ ಬಂದು ತೆಗೆದುಕೊಂಡು ಹೋಗುತ್ತಾರೆ. ನಾಗಭೂಷಣ್ ಭಟ್ ಅವರ ಈ ಎಲ್ಲ ಕೆಲಸ ಕಾರ್ಯಗಳಿಗೆ ಬೆಂಬಲವಾಗಿ ನಿಂತವರು ಅವರ ಪತ್ನಿ ಜ್ಯೋತಿ ಅಷ್ಟು ಉಪ್ಪಿನಕಾಯಿಯನ್ನು ಅವರೇ ಸ್ವತಃ ಮಾಡುತ್ತಾರೆ. ತುಂಬ ಸ್ವಾದಿಷ್ಟಕರವಾಗಿ ತಯಾರಿಸುವುದರಿಂದ ಜೂನ್ ಅಂತ್ಯದ ಒಳಗಡೆ ಉಪ್ಪಿನಕಾಯಿ ಖಾಲಿಯಾಗಿಬಿಡುತ್ತದೆ. ಅವರ ಮಗನೂ ರಜಾದಿನಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿಯೇ ವ್ಯಸ್ಥನಾಗಿರುತ್ತಾನೆ. ನಾಗಭೂಷಣ ಭಟ್ಟರ ಕುಟುಂಬ ನರ್ಸರಿ ಬೆಳೆಯನ್ನೂ ಮಾಡುತ್ತಿದ್ದಾರೆ. ಅವರೇ ಮೃದುಕಾಂಡ ಕಸಿ ಮಾಡುತ್ತಾರೆ. ಹೊಸನಗರ ತೀರ್ಥಹಳ್ಳಿ ತಳಿಗಳ ಇಪ್ಪತ್ತು ಸಾವಿರ ಅಡಿಕೆ ಗಿಡಗಳಿವೆ. ಆದರೂ ಬೇಡಿಕೆಗೆ ತಕ್ಕ ಹಾಗೆ ಪೂರೈಕೆ ಮಾಡುವುದಕ್ಕೆ ಆಗುತ್ತಿಲ್ಲವಂತೆ. ಭಟ್ಟರು ಅಳವಡಿಸಿಕೊಂಡ ಕೃಷಿ ನೀತಿ ಆಸಕ್ತಿಯುಳ್ಳ ಕೃಷಿಕರಿಗೆ ಒಂದು ಮಾದರಿಯಾಗಿದೆ.
ಸಂಪರ್ಕ: ನಾಗಭೂಷಣ ಭಟ್(9900737474)
2 thoughts on “ಸೂಡೂರಿನಲ್ಲಿದೆ ಒಳ್ಳೆಯ ಗುಣಮಟ್ಟದ ‘ಅಪ್ಪೆಮಿಡಿ’ ಉಪ್ಪಿನಕಾಯಿ”
How to purchase pickles
How to purchase