ಜಾಹೀರಾತಿನ ಗುಂಗಿನಲ್ಲಿ….

ಮಾರುಕಟ್ಟೆಯಲ್ಲಿ ಬಿಕರಿಯಾಗುವ ಬಹಳಷ್ಟು ಉತ್ಪನ್ನಗಳು, ದೊರಕುವ  ಸೇವೆಗಳು  ಜಾಹೀರಾತು ಎನ್ನುವ ಮೋಹಾಂಗನೆಯ ಮೋಡಿಯಿಂದಾಗಿ ಜನಸಾಮಾನ್ಯರ ಗಮನ ಸೆಳೆಯುತ್ತಿರುವುದು ತೆರೆದಿಟ್ಟ ಗುಟ್ಟು. ಈಗೀಗಂತೂ ಈ ಜಾಹೀರಾತುಗಳ ಭರಾಟೆ ಜೋರಾಗಿಯೇ ಇದೆ. ಕಟ್ಟಡ ಸಾಮಾಗ್ರಿ, ಕೃಷಿ ಬಳಕೆಯ ಉಪಕರಣಗಳು, ರಾಸಾಯನಿಕ ಗೊಬ್ಬರ, ಕೀಟನಾಶಕ, ಉಡುವ ಬಟ್ಟೆ, ತೊಡುವ ಆಭರಣ, ಗೃಹೋಪಯೋಗಿ ವಸ್ತುಗಳು,  ನಿವೇಶನ, ಮನೆ, ಫ್ಲ್ಯಾಟ್ ಖರೀದಿ, ಎಲ್ಲಕ್ಕಿಂತ ಮಿಗಿಲಾಗಿ ದಿನಬಳಕೆಯ ವಸ್ತುಗಳೆಲ್ಲಕ್ಕೂ ಜಾಹೀರಾತಿನ ಕುಮ್ಮಕ್ಕಿದೆ. ಅಡಿಯಿಂದ ಮುಡಿಯವರೆಗೆ ನಾವು ಬಳಸುವ ವಸ್ತುಗಳೆಲ್ಲವೂ ಜಾಹೀರಾತಿನಲ್ಲಿ ಮಿಂದು ಬಂದವುಗಳೆ. ಇವಿಷ್ಟೇ ಏಕೆ ಸಂಗೀತ, ಯಕ್ಷಗಾನ, ಹಾಸ್ಯ ಕಾರ್ಯಕ್ರಮಗಳಿಂದ ಹಿಡಿದು ಎಲ್ಲ ಬಗೆಯ ಸಭೆ, ಸಮಾರಂಭ, ರಾಜಕೀಯ ಯಾತ್ರೆ, ಸಮಾವೇಶಗಳವರೆಗೂ ಇದರ ಕಬಂಧಬಾಹು ಚಾಚಿದೆ. 

        ಜಾಹೀರಾತಿನ ವೈಖರಿ, ವಿನ್ಯಾಸ, ಪ್ರಸ್ತುತಿಗಳನ್ನು ಗಮನಿಸಿದಾಗ ಇದರ ವ್ಯಾಪ್ತಿಗೆ, ಕ್ರಿಯಾಶೀಲತೆಗೆ ದಕ್ಕದ ಸಾಧ್ಯತೆಗಳೇ ಇಲ್ಲ ಅನಿಸುತ್ತದೆ. ಟಿವಿಗಳಲ್ಲಿ ಬರುವ ಕೆಲವೊಂದು ಜಾಹೀರಾತುಗಳು ಅವರು ಪ್ರಚುರಗೊಳಿಸುವ ವಸ್ತು ಯಾವುದೆಂದು ಅರ್ಥೈಸಿಕೊಳ್ಳಲು ನಾವು ತಲೆಕೆರೆದುಕೊಳ್ಳಬೇಕಾಗುತ್ತದೆ. ಕೆಲವು ಜಾಹೀರಾತುಗಳು ತುಂಬ ಅಪ್ಯಾಯಮಾನವಾಗಿರುತ್ತವೆ. ಪಾರ್ಲೆ ಜಿ ಬಿಸ್ಕತ್ತಿನ ಹಳೆಯ ಜಾಹೀರಾತಿನಲ್ಲಿ ಚಿಕ್ಕ ಹುಡುಗನೊಬ್ಬ ಬಿಸ್ಕತ್ತು ಪೊಟ್ಟಣವನ್ನು ಕೈಯಲ್ಲಿ ಹಿಡಿದು ಬಿಸ್ಕತ್ತೊಂದನ್ನು ತಿನ್ನುತ್ತಾ ನಡೆದಾಗ ಎದುರಿನಿಂದ ಬರುವ ಅವನದೇ ವಯಸ್ಸಿನ ಮುದ್ದು ಹುಡುಗಿ ಅವನು ತಿನ್ನುವುದನ್ನೇ ನೋಡುತ್ತಾ ಹೋಗುತ್ತಾಳೆ. ಇಬ್ಬರೂ ಪರಸ್ಪರ ಹಿಂತಿರುಗಿ ಹಾಗೆಯೇ ನೋಡುತ್ತಾ ನಡೆಯುವಾಗ ಹುಡುಗ ತಕ್ಷಣ ಹಿಂತಿರುಗಿ ಬಂದು ಬಿಸ್ಕತ್ತೊಂದನ್ನು ಅವಳಿಗೆ ಕೊಡುತ್ತಾನೆ. ಇಲ್ಲಿ ಬಿಸ್ಕತ್ತಿನ ರುಚಿಯಲ್ಲಿ ಮಕ್ಕಳ ನಡುವಿನ ನವಿರಾದ ಪ್ರೀತಿಯ ಎಳೆಯ ಭಾವ ಗೋಚರಿಸದೆ ಇರದು. 

        ನಿಮ್ಮ ಚಹಾಕ್ಕೆ ಬಣ್ಣ, ರುಚಿ, ಪರಿಮಳವಿದೆಯೇ... ಎಂದು ಕೇಳುತ್ತಾ ಬೇರೆ ಚಹಾಪುಡಿಗಳನ್ನು ಎತ್ತಿ ಆಡುವ ಪರಿಯಲ್ಲಿ, ಕೈ ತೊಳೆಯುತ್ತಾ ಇರು... ಅಂತ ಇತರ ಸಾಬೂನುಗಳನ್ನು ಮೂದಲಿಸುವ ಮಾತಿನಲ್ಲಿ, ಆಟದಲ್ಲಿ ಮೈಯೆಲ್ಲಾ ಕೊಳೆಯಾಗಿಸಿ ಬರುವ ಹುಡುಗನ ಅಂಗಿ ಕ್ಷಣಾರ್ಧದ ಒಗೆತದಲ್ಲಿ ಬಿಳುಪೇರುವ ಡಿಟರ್ಜಂಟಿನ ಅಚ್ಚರಿಯನ್ನು ಸಾಬೀತುಪಡಿಸುವಲ್ಲಿ, ನಿಮ್ಮ ಪೇಸ್ಟಿನಲ್ಲಿ ಉಪ್ಪಿದೆಯೇ... ಎಂದು ಹಠಾತ್ತನೆ ಪ್ರತ್ಯಕ್ಷಳಾಗುವ ಕನ್ನಿಕೆ ಕೇಳುವ ಕೊಶ್ಚನ್ನಿನಿಂದ  ಹೀಗೂ ಇದೆಯೇ... ಎಂದು ನಾವು ತಬ್ಬಿಬ್ಬುಗೊಳ್ಳುವಲ್ಲಿ, ಅಜ್ಜಿ ಕುಟ್ಟಿಮಾಡಿದ ಸಾಂಬಾರುಪುಡಿಯ ರುಚಿಯಲ್ಲಿ, ಹರಳುಹರಳಾಗಿರುವ ತುಪ್ಪದ ಘಮದಲ್ಲಿ ಮಿಂದೇಳುವ ಜಾಹೀರಾತುಗಳು ನಮ್ಮ ಮೈಮನಸ್ಸನ್ನು ಆವರಿಸಿಬಿಡುತ್ತವೆ. ಗಂಡಸರು ಬಳಸುವ ವಸ್ತುಗಳ ಪರಿಣಾಮಕ್ಕೆ ಫಿದಾ ಆಗುವ ಹೆಣ್ಣುಗಳ ಪರಿಯಂತೂ ಹೇಳತೀರದು. ಪರಿಚಿತರ ಮನೆಯಲ್ಲಿ ಸವಿದ ತಿಂಡಿಯ ನೆನಪಿನಲ್ಲಿ  ಅವರನ್ನು ಗುರುತುಹಿಡಿಯಲು ಸೋಲುವ ಮಾವನ ಮರೆಗುಳಿತನವನ್ನು  ಜಾಹೀರಾತೊಂದರಲ್ಲಿ ಸೊಸೆ ತಿದ್ದುತ್ತಾಳೆ. ಅಡುಗೆ ಎಣ್ಣೆಯೊಂದರಲ್ಲಿ ಕರಿದ ತಿಂಡಿಗಳನ್ನು ಸವಿದ ಆ ಮಹಾನುಭಾವ ಮಾವನ ಅತಿನೆನಪಿನೆದುರು ಪರಿಚಯವನ್ನು ಮರುಕಳಿಸುವ ಶಕ್ತಿ ಗೋತಾ ಹೊಡೆಯುತ್ತದೆ. ಸೂರ್ಯೋದಯಕ್ಕೆ ಮುಂಚೆ ಎದ್ದು ಶುಚಿರ್ಭೂತಳಾಗಿ ಮನೆಯೆದುರು ರಂಗೋಲಿ ಇಡುವ ಹೆಂಡತಿ ರಂಗೋಲಿಯ ಬಗ್ಗೆ ಗಂಡನಿಗೆ ಕೇಳಿದ ಪ್ರಶ್ನೆಗೆ ಹಾರಿಕೆಯ ಉತ್ತರ ಕೊಡುವ ಅವನು ಉತ್ತರರೂಪದಲ್ಲಿ ಹಬೆಯಾಡುವ ಕಾಫಿಯನ್ನು ಹೆಂಡತಿಗೆ ಕೊಡುತ್ತಾ   ಜಾಣ್ಮೆಯ ನಗು ನಕ್ಕಾಗ ಅವಳ ಮುಖದಲ್ಲಿ ಅರಳುವ ಕೃತಜ್ಞತೆಯ ಭಾವಲಹರಿ ಕಾಫಿ ಜಾಹೀರಾತಿನ ಸಫಲತೆಯನ್ನು ಸಾರುತ್ತದೆ. 

        ವಾಶಿಂಗ್ ಪೌಡರ್ ನಿರ್ಮಾ.... ಹಾಲಿನಂತ ಬಿಳುಪು... ಜಾಹೀರಾತಿನ ಹಾಡಾಗಲಿ.... ಜಲಪಾತದ ಅಡಿಯಲ್ಲಿ ಮೈಚಳಿ ಬಿಟ್ಟು ಲಿರಿಲ್ ಸೋಪಿನ ಬುರುಗಿನೊಂದಿಗೆ ಮೀಯುವುದನ್ನು ಸುಖಿಸುವ ಹೆಣ್ಣು ಯಾರ ಮನಸ್ಸಿನಿಂದ ಮರೆಯಾಗಲು ಸಾಧ್ಯ? ಒಂದು ರೂಪಾಯಿ ಹೆಚ್ಚಿಗೆ ಕೊಡಬೇಡಿ; ಹಣವೇನು ಸುಮ್ಮನೆ ಬರುವುದಿಲ್ಲ... ಎಂಬ ಬಂಗಾರದಂಗಡಿಯ ಜಾಹೀರಾತು ಮೋಡಿಗೆ ಮರುಳಾಗುವವರೇ ಹೆಚ್ಚು. ಕೊರೊನಾ ಕಾಲದಲ್ಲಿ ಕೇಜಿ ನೀರುಳ್ಳಿಗೆ ನೂರಿಪ್ಪತ್ತು ರೂಪಾಯಿಯಾದಾಗ ಗೂಡ್ಸ್ ಗಾಡಿಗಳಲ್ಲಿ ನೂರು ರೂಪಾಯಿಗೆ ಮೂರು ಕೇಜಿ ಅಂತ ಅಬ್ಬರಿಸಿ ಬೊಬ್ಬಿರಿವ ಗಲಾಟೆಯಲ್ಲಿ ಕೊಂಡು ತಂದರೆ ಅರ್ಧ ಕೊಳೆತ ಅವನ್ನೆಲ್ಲ ಸ್ವಚ್ಛಗೊಳಿಸಿ  ಬಳಸಲು ಸಿಕ್ಕಿದ್ದು ಕೇಜಿಕ್ಕಿಂತಲೂ ಕಡಿಮೆ ನೀರುಳ್ಳಿ. ನಾವೆಷ್ಟು ಜಾಣರು ಅಲ್ಲವೇ? ಎರಡು ಕೊಂಡರೆ ಒಂದು ಫ್ರೀ ಎನ್ನುವ ರೆಡಿಮೇಡ್ ಬಟ್ಟೆಯಂಗಡಿಗಳ ಜಾಹೀರಾತಿನಲ್ಲಿರುವ ಸ್ಟಾರ್ ಮಾರ್ಕ್ ಗುಟ್ಟು ಒಳಹೊಕ್ಕರೆ ಮಾತ್ರ ಗೊತ್ತಾಗುವಂತದ್ದು. 

        ಕೆಲವೊಂದು ಜಾಹೀರಾತುಗಳು ಪ್ರಾತ್ಯಕ್ಷಿಕತೆಯ ಹೆಚ್ಚುಗಾರಿಕೆಯಿಂದ ಗಮನ ಸೆಳೆಯುತ್ತವೆ. ನಾವೊಮ್ಮೆ ಗಿರಿಶ್ರೇಣಿ ಉದಕಮಂಡಲಕ್ಕೆ ಹೋದಾಗ ಅಲ್ಲಿ ಹೆಜ್ಜೆ ಹೆಜ್ಜೆಗೆ ಸಿಗುವ ಚಾದಂಗಡಿಯವರು ಕೈಬೀಸಿ ಕರೆಯುವ ಮೋಹಕ ಕರೆಗೆ ಬಲಿಬಿದ್ದೆವು. ಅಲ್ಲಿ ಅವರು ಮಾರಲು ಇಟ್ಟ ವಿವಿಧ ಬಗೆಯ ಚಹಾ ಹುಡಿಗಳನ್ನು ಪರಿಚಯಿಸುತ್ತಾ ಎಲ್ಲದರ ಸ್ಯಾಂಪಲ್ ಟೀಯನ್ನು ಗುಟುಕರಿಸಲು ಕೊಟ್ಟು ಉತ್ಕೃಷ್ಟವೂ, ದುಬಾರಿಯೂ ಆದ ಚಹಾ ಪೌಡರನ್ನು ಖರೀದಿಸುವಂತೆ ಮಾಡಿದರು. ಅತಿ ಬೆಲೆಬಾಳುವ ವಸ್ತುವಿನಂತೆ ಅದನ್ನು ಜೋಪಾನವಾಗಿ ಹೊತ್ತುತಂದು ಮನೆಯಲ್ಲಿ ಚಹಾ ಕುದಿಸಿದರೆ ಯಾವ ವಿಶೇಷತೆಯೂ ಹೊರಸೂಸಲಿಲ್ಲ. ಅಲ್ಲಿಗೆ ನಾವು ಟೋಪಿ ಬಿದ್ಹಾಂಗಾಯಿತು ಅನ್ನಿ. ದಟ್ಟ ಅರಣ್ಯಪ್ರದೇಶಗಳ ಸೆರಗಿನಲ್ಲಿ ನೀವು ಎಂದಾದರು ಪ್ರವಾಸ ಕೈಗೊಂಡಿದ್ದಲ್ಲಿ ಅರಣ್ಯವಾಸಿಗಳು ಜೇನು ತೊಟ್ಟಿಕ್ಕುವ ಜೇನುಹುಟ್ಟಿನೊಂದಿಗೆ ನಮ್ಮ ಗಮನ ಸೆಳೆಯುತ್ತಾರೆ. ಅಲ್ಲಿ ತಾಜಾ ಜೇನು ಸಿಕ್ಕರೆ ಸಿಗಲೂಬಹುದು. 

       ಉಡುಪಿಯ ಉದ್ಯಾವರದಲ್ಲೊಂದು ಪ್ರಸಿದ್ಧ  ಬಟ್ಟೆ ಮಳಿಗೆಯಿದೆ. ಸಾಮಾನ್ಯವಾಗಿ ಘಟ್ಟದ ಮೇಲಿಂದ ಕೆಳಗಿನವರೆಗೂ ಜನ ತಮ್ಮ ಮನೆಯ ಮದುವೆಯಂತಹ ಶುಭ ಸಮಾರಂಭಗಳಿಗೆ ಬಟ್ಟೆ ಖರೀದಿಸಲು ಅಲ್ಲಿಯೇ ಹೋಗುತ್ತಾರೆ. ಅಲ್ಲಿ ನೀವು ನಿಮಗಿಷ್ಟದ ಒಂದಿಷ್ಟು ಸೀರೆಗಳನ್ನು ಪಕ್ಕಕ್ಕೆ ತೆಗೆದಿರಿಸಿದರೆ, ಆ ಸೀರೆಗಳಲ್ಲಿ ಉಟ್ಟ ನಂತರ ನೀವು ಹೇಗೆ ಮಿಂಚಿತ್ತೀರಿ ಅನ್ನುವ ಕಲ್ಪನೆಯನ್ನು ಸಾಕಾರಗೊಳಿಸುವಂತೆ ಅಲ್ಲಿರುವ ನೀರೆಯರು ನಿಮಗೆ ಕ್ಷಣಾರ್ಧದಲ್ಲಿ ಒಂದಾದ ಮೇಲೊಂದರಂತೆ ಅವೆಲ್ಲ ಸೀರೆಗಳನ್ನು ಯಾವುದೋ ಕೈಚಳಕದಲ್ಲಿ ನಿಲುಗನ್ನಡಿಯೆದುರು ಉಡಿಸಿ, ಸಾಲದೆಂಬಂತೆ ಕೊರಳಿಗೊಂದು ಸರವನ್ನು ಇಳಿಬಿಟ್ಟು ಹೇಗೆ ಕಾಣ್ತೀರಿ ನೋಡಿ ಅಂತ ಮೆಚ್ಚುಗೆಯ ಹುಬ್ಬೇರಿಸುತ್ತಾರೆ. ಇದು ಪ್ರಾತ್ಯಕ್ಷಿಕ ಜಾಹೀರಾತಿನ ಪರಿಭಾಷೆಯಲ್ಲದೆ ಮತ್ತೇನು?.      

        ಮೊನ್ನೆ ನಮ್ಮ ಫ್ಲ್ಯಾಟಿನ ಬಾಲ್ಕನಿಯಲ್ಲಿ ನಿಂತಾಗ ವಿಚಿತ್ರವಾದ ಪ್ರಾತ್ಯಕ್ಷಿಕೆಯ ಜಾಹೀರಾತಿಗೆ ಸಾಕ್ಷಿಯಾದೆ. ತೆರೆದ ಗೂಡ್ಸ್ ಅಟೋವೊಂದರಲ್ಲಿ ಕತ್ತೆಯನ್ನು ಹೇರಿದ ವ್ಯಕ್ತಿಯೊಬ್ಬ ಕತ್ತೆ ಹಾಲು... ಕತ್ತೆ ಹಾಲು... ಅಂತ ಎಲ್ಲರಿಗೂ ಕೇಳುವಂತೆ ಧ್ವನಿವರ್ಧಕದಲ್ಲಿ ಕೂಗುತ್ತಿದ್ದ. ಬೇಕಾದವರಿಗೆ ಕತ್ತೆ ಹಾಲನ್ನು ಎದುರಿಗೇ ಹಿಂಡಿಕೊಡುವ ಸವಲತ್ತಿನೊಂದಿಗೇ ಅವನು ಬೀದಿಗಿಳಿದಿದ್ದ. ದುರಾದೃಷ್ಟವಶಾತ್ ನನಗದನ್ನು  ನೋಡುವ ಭಾಗ್ಯ ಸಿಗಲಿಲ್ಲ. ಕತ್ತೆ ಹಾಲೂ ಮಾರಾಟವಾಗುತ್ತದೆ ಎನ್ನುವ ಸತ್ಯ ನನಗಾಗಲೇ ಗೊತ್ತಾದದ್ದು. ಕತ್ತೆ ಹಾಲು ಔಷಧೀಯ ಗುಣವುಳ್ಳದ್ದು ಎಂದು ಅವರಿವರು ಪಿಸುಗುಟ್ಟಿದಾಗ ನಿಜಾಂಶ ಗೊತ್ತಾಯಿತು. ಜಾಹೀರಾತಿನ ಭರಾಟೆ ಇನ್ನೇನೆಲ್ಲವನ್ನು ಒಳಗೊಂಡಿದೆಯೋ ಕಂಡ ನೀವೇ ಹೇಳಬೇಕು.

*******************

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

4 thoughts on “ಜಾಹೀರಾತಿನ ಗುಂಗಿನಲ್ಲಿ….”

  1. Very beautifully described the importance of Advertising. In this Era of development of Technology Era.The items of advertisement are selected and their effects on general public.The article is very good.

  2. Jagannath Kulkarni

    Beautiful narration. I was smiling all the way while reading your article. Specially Udyavarada seere, I remembered late Sri Mohan Udyavar who is popularly known as Udaywar, he was chief Manager at sm gulbarga and main branch Raichur.

  3. A very beautiful writing. This is first time I heard of selling donkey milk that too in a city like Bangalore. The article shows your keen observation of advertisement, right from LIRIL SOAP.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter