ಕಾವ್ಯಾಲಯ ಪ್ರಕಾಶಕರಿಂದ 1976ರಲ್ಲಿ ಮೊದಲ ಮುದ್ರಣ ಕಂಡ ‘ಹಸುರು ಹೊನ್ನು’, ಡಾ. ಬಿ. ಜಿ. ಎಲ್. ಸ್ವಾಮಿಯವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೃತಿ. ಬಹಳ ಜನಪ್ರಿಯವಾದ ಈ ಕೃತಿಯ ಮರುಮುದ್ರಣದ ಹೊಣೆಯನ್ನು ಕಾವ್ಯಾಲಯದ ಸಹಯೋಗದೊಂದಿಗೆ ವಸಂತ ಪ್ರಕಾಶನದವರು ವಹಿಸಿಕೊಂಡಿದ್ದಾರೆ. ಸಸ್ಯ ಶಾಸ್ತ್ರದ ಕುರಿತ ಮಾಹಿತಿಯ ಕೈಪಿಡಿಯಂತಿರುವ ಒಂದು ಕೃತಿಯನ್ನು ಜನಸಾಮಾನ್ಯರಿಗೂ ಆಸಕ್ತಿ ಮೂಡಿಸುವಂತೆ ಹಾಸ್ಯಮಯ ಸನ್ನಿವೇಶಗಳನ್ನೊಳಗೊಂಡ ಕಥಾ ಹಂದರದೊಳಗೆ, ಸಾಹಿತ್ಯಾಸಕ್ತರಿಗೂ ಪ್ರಿಯವಾಗುವಂತೆ ಅಲ್ಲಲ್ಲಿ ಕನ್ನಡ, ಸಂಸ್ಕೃತ, ತಮಿಳು ಸಾಹಿತ್ಯದ ಪ್ರಸ್ತಾಪ ತರುತ್ತಾ ಹೀಗೂ ರಚಿಸಲೂ ಸಾಧ್ಯವೇ ಎಂದು ಅಚ್ಚರಿ ಮೂಡಿಸುವ ಕೃತಿಯಿದು.
ತಮ್ಮ ತಂದೆಯವರಾದ ಶ್ರೀ ಡಿ.ವಿ. ಗುಂಡಪ್ಪನವರು “ನೀನು ಕನ್ನಡದಲ್ಲಿ ಬರೆಯುವುದು ಬೇಡ, ಮನೆಗೊಬ್ಬನಿದ್ದೇನಲ್ಲ ನಾನು, ಸಾಕು” ಎಂದು ಬುದ್ಧಿಮಾತು ಹೇಳುತ್ತಿದ್ದರೂ, ಬರವಣಿಗೆಯನ್ನು ಓದಿ ಹುರಿದುಂಬಿಸುವ ಮಾತುಗಳನ್ನಾಡುತ್ತಿದ್ದುದನ್ನೂ, ‘ಹಸುರು ಹೊನ್ನು’ ಹಸ್ತ್ರ ಪ್ರತಿಯನ್ನು ಓದಿಸಿ ಕೇಳಿಯಾದ ಮೇಲೆ ಕನ್ನಡದಲ್ಲಿ ಇಂಥ ಪುಸ್ತಕಗಳು ಬೇಕು ಎಂದು ಹೇಳಿ, ಪುಸ್ತಕ ಅಚ್ಚಾಗುವುದರ ಒಳಗಾಗಿ ಕಣ್ಣು ಮುಚ್ಚಿದ್ದನ್ನೂ ಸ್ವಾಮಿಯವರು ಸ್ಮರಿಸಿದ್ದಾರೆ. ಡಿವಿಜಿಯವರು ನೀನು ಕನ್ನಡದಲ್ಲಿ ಬರೆಯುವುದು ಬೇಡವೆಂದು ಹೇಳಿದ್ದರಲ್ಲಿ ಕನ್ನಡ ಪುಸ್ತಕಗಳಿಗೆ, ಸಾಹಿತ್ಯಕ್ಕೆ ಪ್ರೋತ್ಸಾಹ ದೊರೆಯುತ್ತಿಲ್ಲದರ ಕುರಿತು ನೋವಿನ ಛಾಯೆ ಇತ್ತೇನೋ ಎನ್ನಿಸದೆ ಇರದು.
ಸಸ್ಯ ಶಾಸ್ತ್ರಜ್ಞರಾದ ಸ್ವಾಮಿಯವರು ಈ ಕೃತಿಯಲ್ಲಿ ನೂರಾರು ಗಿಡಮರಬಳ್ಳಿಗಳ ಪರಿಚಯ, ಅವುಗಳ ಮೂಲ ಸ್ಥಳ, ವಲಸೆಯಾಗಿದ್ದರೆ ಅದರ ಇತಿಹಾಸ, ಬೆಳೆಯುವ ಪರಿಸರ, ಉಪಯುಕ್ತ ಗುಣಗಳು, ವೈಜ್ಞಾನಿಕ ಹೆಸರು, ಜಾತಿ, ಕುಟುಂಬ, ಅವುಗಳ ವಿಶೇಷತೆ (ಹೆಣ್ಣು ಮರ, ಗಂಡು ಮರ ಬೇರೆ ಇರುವವೋ ಅಥವಾ ಒಂದೇ ಮರದಲ್ಲಿ ಹೆಣ್ಣು ಹೂತೆನೆ, ಗಂಡು ಹೂತೆನೆ ಇರುವುವೋ, ಅವುಗಳ ವಂಶಾಭಿವೃದ್ಧಿ ಹೇಗೆ) ಮುಂತಾದ ವಿಷಯಗಳನ್ನು ವಿವರಿಸಿದ್ದಾರೆ. ನಮಗೆ ಬಹಳ ಪರಿಚಿತ ಮರಗಳಾದ ಹಲಸು, ಜಾಯಿಕಾಯಿ, ಮಾವು (ಹುಳಿ ಮಾವು, ಕಸಿ ಮಾವುಗಳ ಕುತೂಹಲಕಾರಿ ವಿವರ),ಟಾಪಿಯೋಕ, ಆರ್ಕಿಡ್, ಮಜ್ಜಿಗೆ ಹುಲ್ಲು, ಮೆಣಸು, ನಿತ್ಯ ಪುಷ್ಪ ಮುಂತಾದವುಗಳ ಕುರಿತು ಆಶ್ಚರ್ಯಕರ ಸಂಗತಿಗಳು ಇಲ್ಲಿ ತಿಳಿಯಲು ಸಿಗುತ್ತವೆ. ಬೇಕಾದ ಸಸ್ಯದ ಕುರಿತು ಮಾಹಿತಿಯನ್ನು ನೋಡಿಕೊಳ್ಳಲು ಸುಲಭವಾಗುವಂತೆ ಕೃತಿಯ ಕೊನೆಯಲ್ಲಿ ಆಕಾರಾದಿ ಪಟ್ಟಿ ನೀಡಿರುವುದು ಉಪಯುಕ್ತವಾಗಿದೆ, ಕೃತಿ ಸಂಗ್ರಹಯೋಗ್ಯವಾಗಿದೆ.
ಪ್ರಾಧ್ಯಾಪಕರು ಮತ್ತು ಗೈಡ್ಗಳೊಂದಿಗೆ ವರ್ಷಕ್ಕೆ ಎರಡು ಮೂರು ಸಲ ಗಿಡಮರಗಳ ಪರಿಚಯ, ಸಂಗ್ರಹಣೆಗಾಗಿ ಬೇರೆ ಬೇರೆ ಅರಣ್ಯ ಪ್ರದೇಶಗಳನ್ನು ಸುತ್ತುವುದು ಸಸ್ಯ ಶಾಸ್ತ್ರದ ಸ್ನಾತಕೋತ್ತರ ವಿದ್ಯಾರ್ಥಿಗಳ ಅಧ್ಯಯನದ ಅಂಗವಾಗಿದೆ. ಚೆನ್ನೈನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾಗ ಸ್ವಾಮಿ ಅವರು ತಮ್ಮ ವಿದ್ಯಾರ್ಥಿಗಳೊಂದಿಗೆ ಮಾಡಿದ ಇಂತಹ ಸುತ್ತಾಟದ ವಿವರವನ್ನು ಕಾಡಿನಲ್ಲಿ, ಕ್ಯಾಂಪಿನಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದ ಹಾಸ್ಯ ಭರಿತ ಸನ್ನಿವೇಶಗಳ ಜೊತೆಗೆ ಬಹಳ ಸಹಜವಾಗಿ, ಸ್ವಾರಸ್ಯಕರವಾಗಿ ಕಟ್ಟಿಕೊಟ್ಟಿದ್ದಾರೆ. ಅವರಿಗೆ ಈ ಶೈಕ್ಷಣಿಕ ಪ್ರವಾಸಕ್ಕಾಗಿ ತಗಲುವ ಖರ್ಚನ್ನು ಭರಿಸಲು ಹಿಂದೆ ಮುಂದೆ ನೋಡುವ ಪ್ರಾಂಶುಪಾಲರು ಸ್ವಾಮಿಯವರಿಗೆ ನೀಡುವ ಕಿರುಕುಳಗಳು, ಅದಕ್ಕೆ ಸ್ವಾಮಿಯವರ ಜಾಣತನದ ಜವಾಬು, ಹೊಂದಾಣಿಕೆಗಳು ಈ ಎಲ್ಲಾ ಅನುಭವ ಕಥನದ ಜೊತೆಗೆ ಮೇಲೆ ಹೇಳಿದಂತೆ ಸಸ್ಯಗಳ ಉಪಯುಕ್ತ ವಿವರಣೆಗಳನ್ನು ಸೇರಿಸಿ ಒಂದು ವಿಶಿಷ್ಟವಾದ ಕೃತಿಯನ್ನಾಗಿಸಿದ್ದಾರೆ. ಮಧ್ಯ ಮಧ್ಯ ಅವರೇ ರಚಿಸಿದ ಗಿಡಮರಬಳ್ಳಿ, ಹಣ್ಣುಕಾಯಿಬೀಜಗಳ ಚಿತ್ರಗಳು, ಕೃತಿಯಲ್ಲಿ ಬರುವ ವ್ಯಕ್ತಿಗಳ ವ್ಯಂಗ್ಯ ರೇಖಾಚಿತ್ರಗಳೂ ಸಹ ಸೊಗಸಾಗಿವೆ.
ವಿದ್ಯಾರ್ಥಿ ಸಮೂಹದಲ್ಲಿ ಆಗುವ ಅನೇಕ ಹಾಸ್ಯ ಪ್ರಸಂಗಗಳು, ಕಾಡಿನಲ್ಲಿ ಮಹಿಳಾಮಣಿಗಳ ತಾಕಲಾಟ, ಪೀಕಲಾಟ, ಉದ್ದದ ಕೊಂಬೆಗಳನ್ನು ಚಟ್ಟದ ಮೇಲೆ ಸಾಗಿಸಿದ ಪ್ರಸಂಗ, ಅದನ್ನು ನೋಡಿ ಯಾರೋ ಸತ್ತರು ಎಂದು ಊರವರು ಭಾವಿಸುವುದು, ಊಟ ತಿಂಡಿ ವಿಷಯಗಳಲ್ಲಿ ವಿದ್ಯಾರ್ಥಿಗಳ ಪುಂಡಾಟಗಳು, ಪ್ರಾಂಶುಪಾಲರ ಆಜ್ಞೆಯಂತೆ ಸಾಮಾನು ಹೊರಲು ದಿನಗೂಲಿಯ ಆಳುಗಳಿಗಿಂತ ಕತ್ತೆಗಳು ಅಗ್ಗವೆಂದು ಅವನ್ನು ತರಿಸುವ ಏರ್ಪಾಟಾಗುವುದು (ಗಾರ್ದಭ ಪುರಾಣ) ಇಂತಹ ನವಿರಾದ ಪ್ರಸಂಗಗಳು ಕೃತಿಯ ನೀರಸತ್ವವನ್ನು ಹೋಗಲಾಡಿಸುವಲ್ಲಿ ಸಹಾಯಕವಾಗಿವೆ. ಜೊತೆಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಳ್ಳೆಯ ಅಧ್ಯಯನ ಪೂರ್ಣ ಕಾರ್ಯಗಳಿಗೆ ಒದಗುವ ಅಡಚಣೆಗಳನ್ನು, ಶೋಚನೀಯ ಪರಿಸ್ಥಿತಿಯನ್ನು ಸ್ವಾಮಿಯವರು ಇಲ್ಲಿ ತೆರೆದಿಟ್ಟಿದ್ದಾರೆ. ನಡು ನಡುವೆ “ಪಾಂಡಿತ್ಯಕ್ಕೂ ವಿಧಿಗೂ ಸಂಬಂಧವಿಲ್ಲ. ಪಾಂಡಿತ್ಯ ಗಳಿಸುವುದರ ಹೊಣೆಯೆಲ್ಲವೂ ನಿಮ್ಮ ಕೈಲಿ ಇರುತ್ತದೆ; ನಿಮ್ಮ ಪಾಂಡಿತ್ಯಕ್ಕೆ ತಕ್ಕುದಾದ ಸಂಭಾವನೆಯನ್ನೂ, ಸಾಮಾಜಿಕ ಪುರಸ್ಕಾರವನ್ನೂ ಒದಗಿಸುವುದು ವಿಧಿಯ ಕೈಲಿದೆ” ಎಂಬಂತಹ ತಮ್ಮ ಅನುಭವದ, ನಂಬಿಕೆಯ ಮಾತುಗಳನ್ನು ವಿದ್ಯಾರ್ಥಿಗಳೊಂದಿಗೆ ಸೂಕ್ತವಾಗಿ ಹಂಚಿಕೊಂಡಿದ್ದಾರೆ.
ಇತಿಹಾಸ ಮತ್ತು ಸಾಹಿತ್ಯಾಸಕ್ತರೂ ಆಗಿರುವ ಸ್ವಾಮಿಯವರು ಕೃತಿಯಲ್ಲಿ ಅಲ್ಲಲ್ಲಿ ವೇದ, ಪುರಾಣ, ಇತಿಹಾಸ, ಸಾಹಿತ್ಯ ಚರಿತ್ರೆ, ಜಾನಪದಗಳಲ್ಲಿ ಪರಿಸರದ, ಗಿಡಮರಗಳ ಕುರಿತು ದೊರೆಯುವ ಉಲ್ಲೇಖಗಳನ್ನೂ ನೀಡಿದ್ದಾರೆ. ಉದಾಹರಣೆಗೆ ಕದಂಬ ವೃಕ್ಷದ ವಿವರಣೆ ತಾಳಗುಂದ ಶಾಸನದಲ್ಲಿ ಇರುವ ಕುರಿತು, ಇತರ ಹಲವು ಗ್ರಂಥಗಳಲ್ಲಿ, ವೇದ,ಪುರಾಣಗಳಲ್ಲಿ ಸಿಗುವ ವಿವರಣೆ, ಅದಕ್ಕಿದ್ದ ಬೇರೆ ಬೇರೆ ಹೆಸರುಗಳ ಉಲ್ಲೇಖ ಮಾಡಿದ್ದಾರೆ. ಮಾವಿನ ಕುರಿತು ಪಂಪ, ಪೊನ್ನ, ನಾಗವರ್ಮ, ಕುಮಾರ ವ್ಯಾಸರಂತಹ ಕವಿಗಳ ವಿವರಣೆಗಳನ್ನು ಉಲ್ಲೇಖಿಸುತ್ತಾರೆ, ರಂ .ಶ್ರೀ. ಮುಗಳಿಯವರ ಪದ್ಯದ ಉಲ್ಲೇಖವೂ ಇದೆ. ಸುರಹೊನ್ನೆಯ ಕುರಿತು ಪಂಪನ ಪದ್ಯದ ಉಲ್ಲೇಖವೂ ಇದೆ. ಪಂಪ ಭಾರತ, ಶಾಂತಿಪುರಾಣ, ಕಾವ್ಯಾವಲೋಕನ, ಸೂಕ್ತಿ ಸುಧಾರ್ಣವ, ಗದುಗಿನ ಭಾರತಗಳ ಕೆಲವು ಪದ್ಯಗಳು, ಜೊತೆಗೆ ಶಿಲಪ್ಪದಿಕಾರಂ, ಕುರುಂತೊಗೈ, ಪದಿರ್ರುಪತ್ತು ಮುಂತಾದ ತಮಿಳು ಗ್ರಂಥಗಳ ಉಲ್ಲೇಖ,ಜಾನಪದ,ದಾಸರ ಪದಗಳನ್ನೆಲ್ಲ ಅರ್ಥಪೂರ್ಣವಾಗಿ ಸೇರಿಸಿಕೊಂಡು ಸ್ವಾಮಿಯವರು ತಮ್ಮ ಅನನ್ಯತೆಯನ್ನು ಮೆರೆದಿದ್ದಾರೆ.
ಒಟ್ಟಿನಲ್ಲಿ ವಿರಳವಾದ, ಉತ್ತಮವಾದ ಅನುಭವ ಕಥನ, ಪ್ರವಾಸ ಕಥನಗಳೊಂದಿಗೆ ಸಸ್ಯಶಾಸ್ತ್ರದ ಅತ್ಯುತ್ತಮ ಮಾಹಿತಿ ಹೊಂದಿರುವ ಕೃತಿಯಾದ ‘ಹಸುರು ಹೊನ್ನು‘ ಕನ್ನಡ ಸಾಹಿತ್ಯದಲ್ಲಿ ಸದಾ ಹಸಿರಾಗಿ (fresh), ಸಾರ್ವಕಾಲಿಕವಾಗಿ, ವಿಭಿನ್ನವಾಗಿ ಎದ್ದು ನಿಲ್ಲುವ ವಿಶಿಷ್ಟವಾದ ಕೃತಿ.
- ವಿದ್ಯಾ ರಾಮಕೃಷ್ಣ