ಕೃತಿ – ‘ಒಟ್ರಾಸಿ ಪ್ರಸಂಗಗಳು’

ಕೃತಿ ‘ಒಟ್ರಾಸಿ ಪ್ರಸಂಗಗಳು’ ( ಹರಟೆ, ವಿನೋದ ಪ್ರಬಂಧಗಳು)
ಲೇಖಕರು – ಗೋಪಾಲ್ ತ್ರಾಸಿ

ಕನ್ನಡ ಸಾಹಿತ್ಯ ಪ್ರಪಂಚವನ್ನು ಗಮನಿಸಿದಾಗ ಕಾವ್ಯ, ಕತೆ, ಕಾದಂಬರಿ, ವಿಮರ್ಶೆ ಮೊದಲಾದ ಗಂಭೀರ ಸಾಹಿತ್ಯದ ಜೊತೆಗೆ ಪ್ರಬಂಧ, ವ್ಯಕ್ತಿ ಚಿತ್ರ, ಪ್ರವಾಸ ಸಾಹಿತ್ಯ, ಆತ್ಮ ಚರಿತ್ರೆ, ಅಂಕಣ ಬರಹ ಮುಂತಾದ ಸಾಹಿತ್ಯ ಪ್ರಕಾರಗಳು ಹರಿದುಬಂದಿರುವುದನ್ನು ಕಾಣಬಹುದಾಗಿದೆ. ಪ್ರಬಂಧ ಸಾಹಿತ್ಯವನ್ನು , ಅದು ಬೆಳೆದು ಬಂದ ಹಾದಿಯನ್ನು ಗಮನಿಸಿದರೆ ಅದರ ಸ್ವರೂಪ ಹೀಗೇ ಎಂದು ನಿರ್ದಿಷ್ಟವಾಗಿ ಹೇಳಲಾಗದು. ಹಲವು ಬಾರಿ ನಿರ್ದಿಷ್ಟ ವಿಷಯ ಕುರಿತು ಆರಂಭವಾಗುವ ಇದು ನೇರವಾಗಿ ವಿಷಯವನ್ನು ಮಾತ್ರ ಕುರಿತದ್ದಾಗಿರಬಹುದು ಮತ್ತೆ ಕೆಲವು ಬಾರಿ ಅವರಿವರ ಸುದ್ದಿಗೆ ಇಣುಕುವ ಪಕ್ಕದ ಮನೆಯ ಕಿಟಕಿ ಕಾಮಾಕ್ಷಿಯಂತೆ ಹತ್ತು ಹಲವು ವಿಷಯಗಳತ್ತ ಮೂಗು ತೂರಿಸಬಹುದು. ವ್ಯಕ್ತಿ ಚಿತ್ರ, ಹರಟೆ ಹಾಗೂ ಕತೆಯ ಸೋಗನ್ನೂ ಅದು ಹಾಕಬಹುದು… ಅಥವಾ…
ನಮ್ಮ ಗೋಪಾಲ ತ್ರಾಸಿಯವರ ಈ ಕೃತಿಯಲ್ಲಿ
‘ತಕ ಥೈ ದಿಥೈ……..
‘ ತಕ ಥೋಂ ದಿಕ ಥೋಂ’
ಎಂದು ಬದುಕಿನ ಬಣ್ಣ ಕಟ್ಟಿಕೊಂಡು ಕುಣಿವ, ಕುಣಿಸುವ ಪ್ರಸಂಗಗಳೂ ಆಗಿರಬಹುದು


ಮುಂಬಯಿಯ ಕವಿ, ಲೇಖಕ, ಸಂಘಟಕ, ರಂಗಕರ್ಮಿ ಗೆಳೆಯ ಶ್ರೀ ಗೋಪಾಲ ತ್ರಾಸಿ ಅವರ ಇತ್ತೀಚೆಗಷ್ಟೆ ಬೆಳಕು ಕಂಡ ಒಟ್ರಾಸಿ ಪ್ರಸಂಗಗಳು ಕೃತಿಗಾಗಿ ಅವರಿಗೆ ಅಭಿನಂದನೆಗಳು. 90 ರ ಮೇಲೊಂದು ೧೨ ಪುಟಗಳಲ್ಲಿ ಈ ಪ್ರಸಂಗಗಳು ಹರಡಿಕೊಂಡಿದ್ದು ಹರಟೆ, ವಿನೋದ ಪ್ರಬಂಧಗಳನ್ನೊಳಗೊಂಡ ಈ ಹೊತ್ತಿಗೆಯನ್ನು ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಮುಂಬಯಿಯ ಚುಕ್ಕಿ ಸಂಕುಲ (ಲೇಖಕ- ಕಲಾವಿದರ ಬಳಗ) ಪ್ರಕಟಿಸಿದೆ. ಕಲಾವಿದ ಗಣೇಶ್ ಕುಮಾರ್ ಅವರಿಂದ ವಿನ್ಯಾಸಗೊಂಡಿರುವ ಸುಂದರ ಮುಖಪುಟ ಪ್ರಸಂಗೋಚಿತವಾಗಿದೆ. ಲೇಖಕರು ಈ ಕೃತಿಯನ್ನು ತಮಗೆ ಬಾಲ್ಯದಿಂದ ಇತ್ತೀಚಿನವರೆಗೂ ಜೊತೆ ನೀಡಿ ಇನ್ನಿಲ್ಲವಾದ ಆತ್ಮೀಯ ಸ್ನೇಹಿತ ಭಾಸ್ಕರನಿಗೆ ಅರ್ಪಿಸಿದ್ದಾರೆ.


ಇಲ್ಲಿನ ಹಲವು ಪ್ರಸಂಗಗಳು ಹುಟ್ಟಿದ್ದು, ಎರಡಕ್ಕೂ ಹೆಚ್ಚು ದಶಕಗಳಲ್ಲಿ. ಒಟ್ಟಾಗಿದ್ದು ಕನ್ನಡ ಹಾಸ್ಯಲೋಕದ ದಿಗ್ಗಜರಾದ ಬೀಚಿಯವರಿಂದ ಆರಂಭವಾಗಿ ಇಂದಿನ ಡುಂಡಿರಾಜರ ಹಾಸ್ಯ ವಿನೋದ ಬರಹಗಳ ಓದಿನ ಪ್ರೇರಣೆ ಎನ್ನುತ್ತಾರೆ ಲೇಖಕರು. ಇಲ್ಲಿರುವುದು ಪ್ರಬಂಧವೋ ಹಾಸ್ಯವೋ ಎಂದು ವಿಂಗಡಿಸುವ ತ್ರಾಸು ತೆಗೆದುಕೊಳ್ಳಬೇಡಿ, ಆದರೊಮ್ಮೆ ಓದಿ, ನಗು ಬಂದರೆ ನಕ್ಕುಬಿಡಿ ಎಂದು ಹೇಳುತ್ತಾ ಹಗುರಾಗುತ್ತಾರೆ.
ವೃತ್ತಿಯಿಂದ ವಿಶ್ರಾಂತ ಪ್ರಾಧ್ಯಾಪಕರೂ, ಪ್ರವೃತ್ತಿಯಿಂದ ಅವಿಶ್ರಾಂತ ಹರಟೆಮಲ್ಲರೂ, ಹಾಸ್ಯ ವಿನೋದಗಾರರೂ ಆದ ಪ್ರೊ. ಕೃಷ್ಣೇಗೌಡರು ಮುನ್ನುಡಿಯುತ್ತಾ ಈ ಒಟ್ರಾಸಿಯಲ್ಲಿ ಅಡಗಿರುವ ಲೇಖಕರ ವೈವಿಧ್ಯಮಯ ಅನುಭವಗಳನ್ನೂ, ಪಾತ್ರಗಳನ್ನೂ, ವಿಚಾರವಂತಿಕೆಯನ್ನೂ, ಭಾಷೆಯನ್ನೂ, ಲಯವನ್ನೂ ಓರಣವಾಗಿ ಹೆಕ್ಕಿ ಕೊಡುತ್ತಾರೆ. ಓದುಗರಿಗೆ’ ನೀವಿದನ್ನು ಓದುತ್ತಾ ಹೋಗಿ’ ಎಂದು ದಾರಿಗೆ ದೀಪ ಹಿಡಿಯುತ್ತಾರೆ.


ಈ ಕೃತಿಯಲ್ಲಿ ಒಟ್ಟಾರೆ ೧೪ ಪ್ರಸಂಗಗಳು ಪಟ್ಟಾಂಗ ಹೊಡೆಯಲು ಜಗುಲಿಯೇರಿವೆ.‌ ಶೀರ್ಷಿಕೆಯೇ ಹೇಳುವಂತೆ ಬದುಕಿನ ವೈಶಿಷ್ಟ್ಯಕ್ಕೆ, ಅನುಭವದ ವಿವಿಧತೆಗೆ ಪ್ರಾತಿನಿಧಿಕವಾದ ಹರಟೆ ಪ್ರಬಂಧಗಳನ್ನು ಇಲ್ಲಿ ಒಟ್ಟುಹಾಕಲಾಗಿದೆ. ಮೇನಕೆಯಲ್ಲ ….!!!!. ಪ್ರಬಂಧದಲ್ಲಿ ದಾಸರ ಪದವೇ ಹೇಳುವಂತೆ ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ಎಂಬುದರ ನಿಜ ರೂಪದ ಸನ್ನಿವೇಶದಲ್ಲಿ ಅದು ‘ಅವಳಲ್ಲ…ಅವನು’ ಎಂದು ಕಂಡು ಹಿಡಿವ ಲೇಖಕರ ಗೆಳೆಯ ಹಾಗೂ ಅವರು ಸಿಲುಕಿಕೊಳ್ಳುವ ಪೇಚಿನ ಪ್ರಸಂಗವನ್ನು ಲಘುದಾಟಿಯಲ್ಲಿ ಚಿತ್ರಿಸಲಾಗಿದೆ. ‘ ಮುಂಬಯಿಯಲ್ಲಿ ಹಲವರಲ್ಲಿ ಹಲವಾರು ಸೊತ್ತುಗಳಿರಬಹುದು ಆದರೆ ಪುರುಸೊತ್ತು ಮಾತ್ರ ಯಾರಲ್ಲೂ ಇರುವುದಿಲ್ಲ ರೀ..ಅಂತ ಸುತ್ತು ಸುತ್ತು ತಿರುಗಿಸುತ್ತಾ ಕಾಲಾತೀತ ಹಾಗೂ ಸ್ಥಳಾತೀತ ಕೊರೆತದ ಬಗ್ಗೆ ಕುರ್ಚಿ ಹಾಕಿ ಕೂರಿಸಿ ‘ಹೀಗೊಂದು ಕೊರೆತ’ ಎಂದು ಗಂಟಾಘೋಷವಾಗಿ ಹೇಳುತ್ತಲೇ ತಲೆಕೆರೆದುಕೊಳ್ಳುವಂತೆ ಮಾಡುತ್ತಾರೆ ಲೇಖಕರು.

ಇನ್ನು ಲೈಟ್‌ ಕಾಫಿಯ ಸ್ಟ್ರಾಂಗ್ ಎಫೆಕ್ಟ್ ಎಂದರೆ ಅದರ ಪ್ರೇಮದ ಪರಿಮಳ ಎನ್ನುತ್ತಾ ಕೈಯಲ್ಲಿ ಕಾಫಿ ಲೋಟ ಹಿಡಿದು ಅದರ ಪರಿಮಳದ ಜಾಡನ್ನು ಹಿಡಿದು ವಿಶ್ವವನ್ನೆಲ್ಲಾ ಸುತ್ತಿಹಾಕಿ ಅದರ ಜಾತಕವನ್ನು ಜಾಡಿಸುತ್ತಾ ಸುತ್ತಿ ಹಾಕಿ ಬರುವ ತ್ರಾಸಿ ಕೊನೆಯಲ್ಲಿ ಊರಿನ ಕಮಲಮ್ಮನ ಹೋಟ್ಲಿಗೆ ಹೋಗಿ ಸೆಟ್ಲ್ ಆಗುತ್ತಾರೆ ! ಬಜೆಟ್ ಚರ್ಚೆ ಗಿಟ್ಟಿಸಿಕೊಳ್ಳುವ ವಿರಾಟ್ ರೂಪವನ್ನು ಕೃತಿಕಾರ ಬಹಳ ಅಚ್ಚುಕಟ್ಟಾಗಿ ನಾಗಮ್ಮನ ಮಾವಿನ ಮಿಡಿಯೊಡನೆ ಲವಾಜಮೆ ಮಾಡಿದ್ದಾರೆ. ಗಾದೆ- ತಗಾದೆಗಳ ಇರಾದೆ, ಮರ್ಯಾದೆಯ ಬಾಳುವೆಗಾಗಿ ಎಂದು ಸೂಚ್ಯವಾಗಿ ಹೇಳುತ್ತಾ ಗಾದೆಗಳ ಲೋಕದ ವಿಹಂಗಮ ನೋಟವನ್ನು ಎದಿರು ನಿಲ್ಲಿಸುತ್ತಾರೆ. ನಮ್ಮ ವಿಶ್ವ ವಿಖ್ಯಾತ ಜೋಗದ ಗುಂಡಿ ಎದುರಿಗೆ ಕರೆದೊಯ್ದು ನಿಲ್ಲಿಸಿ ‘ನದಿಗೆ ನದಿಯೇ ಮುಗುಚಿಕೊಂಡಂತೆ ‘ ಎಂಬ ಮಾತಿನ ರಸಘಟ್ಟದಿಂದ ಭಾವದಾಳಕ್ಕೆ ಸಲೀಸಾಗಿ ಇಳಿಸಿಬಿಡುವ ಪರಿ ಬಹಳ ಆಹ್ಲಾದವೆನಿಸುತ್ತದೆ. ಒಂದು ಬ್ಯಾಟು,ಒಂದು ಚೆಂಡು, ಆರು ಗೂಟಗಳಾಟವಾದ ಕ್ರಿಕೆಟ್ ಎಂಬ ಉತ್ಕಟ ಭಾವಸ್ಥಿತಿ , ಅದರ ಏಳು – ಬೀಳುಗಳನ್ನು ವಾಸ್ತವದ ಮೈದಾನದಲ್ಲಿ ನಿಲ್ಲಿಸಿ ಪ್ರೇಕ್ಷಕರನ್ನು ತಮ್ಮ ಬರವಣಿಗೆಯ ಬೀಸಿನಿಂದ ಆಲ್ ಔಟ್ ಮಾಡಿಬಿಡುತ್ತಾರೆ ! ‘ಅರ್ಧ ತೋಳಿನ ಚೌಕುಳಿ ಅಂಗಿ’ ಹರಟೆಯನ್ನು ನಿಮಗೆದುರಾಗುವ ಕಟ್ಟ ಕಡೆಯ ಪ್ರಶ್ನೆ “ಮಂಗ ಆಗುವುದಾ??!!! ಮಾಡುವುದಾ???!!! ಈ ಎರಡೂ ಪ್ರಬಂಧಗಳೂ ವ್ಯವಸ್ಥೆ, ಅದರ ದುರುಪಯೋಗ, ಅಸಹಾಯಕತೆಗೆ ಹಿಡಿದ ಕನ್ನಡಿಯಂತಿವೆ.


ಹೇ..ಹೇ… ಮರೆತಿದ್ದೆ! ಅಭಾಕುಸಂ ಅಂದ್ರೆ… ಅಂದ್ರೆ.. ಅಂದ್ರೆ !!!! ಅದೊಂದು ‘ಗಮ್ ಮತ್ತಿ’ನ ವಿಷಯ ಮಾರ್ರೆ.. ನೀವೇ ಓದಿ ರುಚಿ ಸವಿಯಿರಿ. ಪತ್ರಿಕೋದ್ಯಮ ಕುರಿತಾದ ‘ಒಂದು ಶಿಬಿರದ ಸುತ್ತ ಮುತ್ತ’ ಲೇಖನದಲ್ಲಿ ಪತ್ರಿಕೋದ್ಯಮ ಹೇಗಿತ್ತು, ಹೇಗಾಯ್ತು ಗೊತ್ತಾ ಅಂತ ವಾಸ್ತವದ ಸ್ಥಿತಿ ಗತಿಯ ಬಗೆಗೆ ಲೇಖಕರ ಕಳವಳ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಸುಮ, ಗಗನ ಕುಸುಮವಾಗಿಯೇ ಉಳಿದು ಬಿಡುವ ಸುಮ-ಸಂದರ್ಶನದಲ್ಲಿನ ಮುಗ್ಧತೆ ಲಘುಹಾಸ್ಯ ಮನಸ್ಸಿಗೆ ಲವಲವಿಕೆ ಮೂಡಿಸುತ್ತದೆ. ಕೊನೆಯಲ್ಲಿ , ‘ಅಧಿಕ ಪ್ರಸಂಗ’ ಇದು ರಾಜಕೀಯ, ಸಾಮಾಜಿಕ ಪರದೆಯ ಮೇಲೆ ಆಷಾಢಭೂತಿತನದ ದೊಂಬರಾಟವನ್ನು ಪ್ರತಿನಿಧಿಸುವ ಪ್ರಸಂಗವಾಗಿದ್ದು ಇಲ್ಲಿನ ನಾಟಕೀಯ ಗುಣ, ಪಾತ್ರ ಸೃಷ್ಟಿ, ಸನ್ನಿವೇಶ ಚಿತ್ರಣ ಸಶಕ್ತವಾಗಿ ಮೂಡಿಬಂದಿದೆ.
ಸೃಜನಶೀಲ ಬರವಣಿಗೆಯಲ್ಲಿ ತಮ್ಮ ಪ್ರಯೋಗ ಪ್ರಿಯತೆ, ಸಹಜ ತುಂಟತನ ಹಾಗೂ ಕುಂದಾಪುರದಿಂದ ಮುಂಬಯಿವರೆಗಿನ ಭಾಷೆಯ ಜೊತೆ ಕುಂಟೆ ಬಿಲ್ಲೆ ಆಡುವ ತ್ರಾಸಿಯವರ ಬರಹದ ಶೈಲಿ ಹಿತಕರವಾಗಿದೆ. ಅವರೇ ಹೇಳುವಂತೆ ಒಟ್ರಾಸಿ ಪ್ರಸಂಗಗಳು ಇವು ಬರೆದ ಲೇಖನಗಳಲ್ಲ..ಆಡಿದ ಮಾತುಗಳು ಎಂಬಂತಾ ಭಾವಪೂರ್ಣ ಸಂಭಾಷಣಾ ಧ್ವನಿ ಆಪ್ತತೆಯನ್ನುಂಟುಮಾಡುತ್ತದೆ.
ತ್ರಾಸಿಯವರೇ.. !!!! ಹೋಯ್, ಇಲ್ಕೇಣಿ… ನೀವೇ ಅಂದುಕೊಂಡಂತೆ, ಆಗಾಗ ನಿಮ್ಮ ಮಂಡೆ ಬಿಸಿಯಾಗ್ತಿರಲಿ, ಮಂಡೆಯೊಳಗೆ ಹುಳ ಹೊಕ್ಕು ಬರೆಸುತಿರಲಿ, ನಿಮ್ಮ ಬರವಣಿಗೆಯ ತುರಿಕೆಯ ಕಿರಿಕಿರಿ ಮಾಡುವ ಈ ಚಟ ನಿಮ್ಮನ್ನು ಕುಣಿಸುತಿರಲಿ, ನಮ್ಮನ್ನು ತಣಿಸುತಿರಲಿ.. ‘ಅಧಿಕ ಪ್ರಸಂಗ’ ಗಳಂತಹ ಪ್ರಸಂಗ-ಪ್ರಹಸನಗಳು ಅಧಿಕವಾಗಿ ಒಟ್ರಾಸಿ ಅಂದರೆ ಒಟ್ಟು ರಾಸಿಯಾಗುತಿರಲಿ… ಅಭಿನಂದನೆಗಳು !!!

-ಸೋ ನಳಿನಾ ಪ್ರಸಾದ್, ಮುಂಬಯಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter