೨೦೧೨ ನೇ ಸಾಲಿನ ವರ್ಧಮಾನ ಶ್ರೇಷ್ಠ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕಾದಂಬರಿ ‘ಉತ್ತರಾಧಿಕಾರ’ ಡಾ/ ಬಿ ಜನಾರ್ಧನ ಭಟ್ ರವರ ಒಂದು ಅನನ್ಯ ಹಾಗು ಅಪರೂಪದ ಕಾದಂಬರಿ. ವಿಮರ್ಶೆ ಮಾತ್ರವಲ್ಲದೆ ಕತೆ, ಅನುವಾದ, ಕಾದಂಬರಿ, ಮಕ್ಕಳ ಸಾಹಿತ್ಯ, ಸಂಪಾದನೆ ಯಲ್ಲೂ ಸೈ ಅನಿಸಿಕೊಂಡ ಜನಾರ್ಧನ ಭಟ್ ಇಲ್ಲಿ ಓದುಗರಿಗೆ ವಿಭಿನ್ನ ಅನುಭವ ನೀಡುತ್ತಾರೆ. ಇವರ ಕತೆ ಹೇಳುವಿಕೆಯಲ್ಲಿ ನಮ್ಮನ್ನು ಹಿಡಿದು ಇಡುವ ಶಕ್ತಿ ಇದೆ. ಕೆಲೆವೆಡೆ ಹಾಸ್ಯ ಮತ್ತು ವಿಡಂಬನೆಯ ಪ್ರಸಂಗಗಳು ನಮಗೆ ಮುದ ನೀಡುತ್ತವೆ.
ಕತಾ ವಸ್ತು ಎರಡು ಗ್ರಾಮಗಳ ಬ್ರಾಹ್ಮಣ ಕುಟುಂಬದ ಸುತ್ತ ಮುತ್ತ ಹರಿಯುತ್ತದೆ. ಪಾಳುಬಿದ್ದ ಮಹಾಲಿಂಗೇಶ್ವರ ದೇವಸ್ಥಾನದ ನವೀಕರಣಕ್ಕೆ ಸಂಬಂಧಿಸಿ ಕತೆಗಳು ಉಪಕಥೆಗಳು ಘಟನೆಗಳು ಸ್ವಾರಸ್ಯಕರವಾಗಿ ಒಂದರ ನಂತರ ಒಂದು ಅನಾವರಣ ಗೊಳ್ಳುತ್ತ ಓದುಗರನ್ನು ಸೆರೆ ಹಿಡಿಯುತ್ತದೆ. ಕಾದಂಬರಿಯಲ್ಲಿ ನಮ್ಮನ್ನು ಗಾಢವಾಗಿ ತಟ್ಟುವ ಪಾತ್ರಗಳು ಪಟೇಲ ವೆಂಕಟರಮಣ, ರಾಮಕೃಷ್ಣ ಆಚಾರ್ಯ , ಸುಬ್ರಾಯ ಭಟ್ಟರು, ಗೋದಾವರಿ, ವಾಗ್ದೇವಿ , ಸುಬ್ಬಮ್ಮ ಪೌಣ್ಡ್ರಕ ವಾಸುದೇವ ಮತ್ತು ವಾಸುದೇವ. ಈ ಎಲ್ಲಾಪಾತ್ರಗಳು ಮನೋಜ್ಞವಾಗಿ ಮೂಡಿ ಬಂದಿದೆ. ಕಾದಂಬರಿಯ ಯಶಸ್ವಿ ಖಳ ನಾಯಕ ಪೌಣ್ಡ್ರಕ ವಾಸುದೇವ. ಕಾದಂಬರಿಯ ಉದ್ದಕ್ಕೂ, ಈತ ತನ್ನ ಕಾರ್ಯವನ್ನು ನಿಪುಣತೆಯಿಂದ ನಿಭಾಯಿಸುತ್ತಾನೆ. ಯಶಸ್ವಿಯಾಗುತ್ತಾನೆ. ಕೊನೆಯಲ್ಲಿ ಗೌಣನಾಗುತ್ತಾನೆ. ಇವನ ಸ್ವಭಾವ ಚಿತ್ರಣ ಬಹಳ ಮಾರ್ಮಿಕವಾಗಿ ಮೂಡಿ ಬಂದಿದೆ. ಇದಕ್ಕೆ ವಿರುದ್ಧವಾದ ಸರಳ ಸಜ್ಜನಿಕೆಯ ಸಾತ್ವಿಕ ಸ್ವಭಾವದ ವ್ಯಕ್ತಿತ್ವ ಸುಬ್ರಾಯ ಭಟ್ಟರ ಮಗ ವಾಸುದೇವನದ್ದು. ಶಿಕ್ಷಣ, ಪರಿಶ್ರಮ ಮತ್ತು ಒಳ್ಳೆಯ ಸಂಸ್ಕಾರ ವನ್ನು ಮೈಗೂಡಿಸಿ ಕೊಂಡ ಇವನ ಪಾತ್ರ ಓದುಗರನ್ನು ತಟ್ಟುವಲ್ಲಿ ಯಶಸ್ವಿಯಾಗುತ್ತದೆ.
ಕಾದಂಬರಿಯಲ್ಲಿ ಮೆಚ್ಚಲೇ ಬೇಕಾದ, ಮನಸ್ಸಿಗೆ ಮುದ ನೀಡುವ ಘಟನೆಗಳು ಗೋದಕ್ಕ ಮತ್ತು ವಾಗ್ದೇವಿಯಾ ಜಗಳ, ಸೈತಾನನ ಜಾತ್ರೆ, ಕುಲೆಗಳ ಕಷ್ಟ-ಸುಖ, ದೇವಸ್ಯ ದುಲಸೀನ ಬಾಯಿಯ ಕತೆ ಮತ್ತು ಪೌಣ್ಡ್ರಕ ವಾಸುದೇವ ಸುಬ್ಬಮ್ಮನ ಕದ್ದು ಮುಚ್ಚಿ ನಡೆಯುವ ಪ್ರಣಯ ಪ್ರಸಂಗಗಳು.
ಒಟ್ಟಿನಲ್ಲಿ ಹೇಳಬೇಕೆಂದರೆ ಕಾದಂಬರಿಕಾರ ಭಟ್ ರವರು ಸ್ವಾತಂತ್ರ ಪೂರ್ವದಿಂದ ಸ್ವಾತಂತ್ರತೋತ್ತರ ಕಾಲಘಟ್ಟದ ಅವಧಿಯಲ್ಲಿ ಒಂದು ಪ್ರದೇಶದ, ಒಂದು ಪೀಳಿಗೆಯ ಬದುಕಿನ ಮೌಲ್ಯಗಳನ್ನು ಮತ್ತು ಮೌಲ್ಯಗಳ ಪರಿವರ್ತನೆಯನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಎಲ್ಲಿಯೂ ಅತಿ ಎನಿಸುವ ವರ್ಣನೆಇಲ್ಲ. ಇವರು ಕಾಮವನ್ನು ವೈಭವಿಸುದಿಲ್ಲ, ಬದುಕಿನ ಅನಿವಾರ್ಯ ಅಂಗವಾಗಿ ಚಿತ್ರಿಸಿದ್ದಾರೆ. ಇಲ್ಲಿ ಬರುವ ಕತೆಗಳು ನಾವೇ ಕಂಡಷ್ಟು ಸಹಜವಾಗಿ, ನೈಜವಾಗಿ ಮಣ್ಣಿನ ಸೊಗಡಿನಿಂದ ನಮ್ಮನ್ನು ಆವರಿಸುತ್ತದೆ.