ಯಕ್ಷನೃತ್ಯದ ನಿರ್ಮಲಾಂಗಿ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಶೇಷ ಲೇಖನ

ಕೆಲಕಾಲದ ಹಿಂದೆ ಮೈಸೂರಿನ ರಾಮ ಮಂದಿರದ ತುಂಬಿದ ಸಭಾಭವನದಲ್ಲಿ ರಸರಾಮಾಯಣ ಯಕ್ಷರೂಪಕಕ್ಕೆ ಭಾವಪೂರ್ಣವಾಗಿ ಅಭಿನಯಿಸುತ್ತ ಲಯ¨ಬದ್ಧವಾಗಿ ನರ್ತಿಸುತ್ತಿದ್ದ ಸುಕೋಮಲ, ಸುಂದರಿ ನಿರ್ಮಲಾ ಗೋಳಿಕೊಪ್ಪ ಅವರ ಕಲಾ ಕೌಶಲಕ್ಕೆ ಅಕ್ಷರಶಃ ಮನಸೋತಿದ್ದೆ. ಮಲೆನಾಡಿನ ಹಳ್ಳಿಗಳಲ್ಲಿರುವ ಹೆಂಗಸರಿಗೆ ಪ್ರತಿಭೆ ಇದ್ದರೂ ಸಾಧನೆ ಮಾಡುವುದಕ್ಕೆ ಇರುವ ಅವಕಾಶಗಳು ಕಡಿಮೆಯೇ. ಪ್ರಬುದ್ಧ ಕಲಾವಿದೆಯಾಗಿ, ಯಕ್ಷಗಾನ ಗುರುವಾಗಿ, ಸಂಘಟಕಿಯಾಗಿ, ತಾಳಮದ್ದಲೆಯ ಅರ್ಥಧಾರಿಯಾಗಿ, ಬರಹಗಾರ್ತಿಯಾಗಿ, ಕವಯತ್ರಿಯಾಗಿ ಬೆಳೆಯುತ್ತಿರುವ, ಗುರುತಿಸಿಕೊಂಡಿರುವ ನಿರ್ಮಲಾ ಗ್ರಾಮೀಣ ಪರಿಸರದಲ್ಲಿ ಬಾಳುವೆ ಮಾಡುತ್ತಿರುವವರು. ಅವರ ಸಾಧನೆಯ ಹಾದಿ ಎಂಥದ್ದು ಎನ್ನುವ ಕುತೂಹಲದ ನನ್ನ ಹತ್ತಾರು ಪ್ರಶ್ನೆಗಳಿಗೆ ಅವರು ಉತ್ತರವಾದರು. ಅವರ ದನಿಗೆ ನಾನು ಕಿವಿಯಾದೆ.


‘ಆನು ಪಿಯೂಸಿವರಿಗಷ್ಟೇ ಓದಿದ್ದು, ಲಗೂನೆ ಮದ್ವೆ ಆತು. ಮಗಳು ಪೂಜಾ ಹುಟ್ಟಿತು. ಮೂವತ್ತೆರಡು ವರ್ಷದವರಿಗೆ ಹಳ್ಳಿಮನೆ ಕೆಲಸ ಬಿಟ್ಟರೆ ಮತ್ತೆಂತದೂ ಮಾಡಲ್ಲೆ ಆಜಿಲ್ಲೆ.’. ಎನ್ನುವ ನಿರ್ಮಲಾ ನಂತರ ದಿನಗಳಲ್ಲಿ ಕಾಶ್ಯಪ ಪ್ರತಿಷ್ಠಾನ ಗಡಿಗೆಹೊಳೆಯಲ್ಲಿ ಯಕ್ಷಗಾನ ಕಲಿಕೆಗೆ ವಿದ್ಯಾರ್ಥಿಯಾಗಿ ಸೇರಿಕೊಂಡರು. ಗುರುಗಳಾದ ಗಣಪತಿ ಭಾಗ್ವತ ಕವ್ವಾಳೆಯವರಲ್ಲಿ ಕಲಿತ ಹೆಜ್ಜೆಗಳು, ಮಾತುಗಳು ಮನೆಗೆಲಸದ ತಾಪತ್ರಯದಲ್ಲಿ ನೆನಪಿಡುವುದು ಆರಂಭದಲ್ಲಿ ಕೊಂಚ ಕಷ್ಟವೆನಿಸಿತ್ತು. ಆದರೆ ಕಲಿತ ವಿದ್ಯೆಯಲ್ಲಿ ಯಶಸ್ಸು ಕಾಣಬೇಕೆಂಬ ಹಟ ಕಲಾವಿದೆಯಾಗಿ ರೂಪುಗೊಳ್ಳಲು ನೆರವಾಯ್ತು. ಸಂಸ್ಥೆಯ ಸಂಘಟಕರಾದ ಸುಬ್ರಾಯ ಭಟ್ಟ ಗಡಿಗೆಹೊಳೆಯವರ ಪ್ರೋತ್ಸಾಹ, ಆಗಾಗ ಆಗುತ್ತಿದ್ದ ಯಕ್ಷಗಾನಗಳು ನಿರಂತರವಾಗಿ ಯಕ್ಷಗಾನದಲ್ಲಿ ತೊಡಗಿಕೊಳ್ಳುವಂತೆ ನಿರ್ಮಲಾ ಅವರನ್ನು ಪ್ರೇರೇಪಿಸಿದವು.
ಚೆಂದದ ರೂಪಿನ ನಿರ್ಮಲಾ ಮೊದಲು ರಂಗಕ್ಕೆ ಬಣ್ಣ ಬಳಿದು ವೇಷ ಕಟ್ಟಿ ಕುಣಿದಿದ್ದು ಭಸ್ಮಾಸುರ ಮೋಹಿನಿಯ ಕರಟಕಾಸುರನ ಪಾತ್ರದಲ್ಲಿ! ಕ್ರಮೇಣ ಭಸ್ಮಾಸುರ, ಪಾರ್ವತಿ, ಮೋಹಿನಿ, ಪ್ರಭಾವತಿ, ಮೀನಾಕ್ಷಿ, ಕೃಷ್ಣ, ದಕ್ಷ, ಅಂಬೆ, ಭೀಷ್ಮ, ಪರಶುರಾಮ ಹೀಗೆ ಎಲ್ಲ ಬಗೆಯ ಪಾತ್ರಗಳಲ್ಲಿಯೂ ಅಭಿನಯಿಸಿ ಸೈ ಎನಿಸಿಕೊಂಡರು. ಮೊದಲಿಂದಲೂ ಸಾಹಿತ್ಯಾಸಕ್ತಿ ಇದ್ದು ಹಲವು ಪತ್ರಿಕೆಗಳಿಗೆ ಲೇಖನ, ಕವನಗಳನ್ನು, ಮುಕ್ತಕಗಳನ್ನೂ ಬರೆಯುತ್ತಿದ್ದವರು ಯಕ್ಷಗಾನ ಪ್ರಸಂಗ ರಚನೆಯನ್ನೂ ಮಾಡಿದರು. ಅವುಗಳು ರಂಗರೂಪಕ್ಕಿಳಿದು ಯಶಸ್ವಿಯೂ ಆಗಿವೆ.


ಎರಡು ದಶಕಗಳ ಹಿಂದೆ ಶಿರಸಿಯಲ್ಲಿ ಮಹಿಳೆಯರು ಯಕ್ಷಗಾನ ಕಲಿಯಬೇಕೆಂದರೆ ಪುರುಷರಿಂದಲೇ ಕಲಿಯಬೇಕಾಗಿತ್ತು. ‘ಯಂಗಕ್ಕಿಗೂ ಯಕ್ಷನೃತ್ಯ ಕಲಿಯವು ಅನ್ನಿಸ್ತು. ನೀ ಒಂದು ಕ್ಲಾಸ್ ತೆಗಿಯೇ ನಿರ್ಮಲಕ್ಕಾ’ ಎಂದು ಇವರ ಅಭಿನಯವನ್ನು ಮೆಚ್ಚಿದ ಪ್ರೇಕ್ಷಕಿಯರು ಒತ್ತಾಯ ಮಾಡಲಾರಂಭಿಸಿದರು. ಮಕ್ಕಳು ಹಾಗೂ ಮಹಿಳೆಯರ ತರಬೇತಿಗಾಗಿ ಯಕ್ಷಗೆಜ್ಜೆ ಹೆಸರಿನಲ್ಲಿ ಕೇಂದ್ರವೊಂದನ್ನು ನಿರ್ಮಲಾ ಆರಂಭಿಸಿದರು. ತರಬೇತಿ ಆರಂಭಿಸಿದ ನಾಲ್ಕೇ ವರ್ಷದಲ್ಲಿ ವಿದ್ಯಾರ್ಥಿಗಳೊಂದಿಗೆ ವಿವಿಧೆಡೆಗೆ ನೂರಿಪ್ಪತ್ತೈದಕ್ಕೂ ಹೆಚ್ಚು ಪ್ರದರ್ಶನವನ್ನು ನೀಡಿದರು. ಕಳೆದ ಎಂಟು ವರ್ಷಗಳಿಂದ ಯಕ್ಷಗಾನ ಕಲಿಕಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈಗ ವರ್ಷಕ್ಕೆ ಸರಾಸರಿ ಐವತ್ತು ಯಕ್ಷಗಾನವನ್ನು ಮಾಡುತ್ತೇವೆ ಎಂದು ಹೆಮ್ಮೆಯಿಂದ ನಗುತ್ತಾರೆ ನಿರ್ಮಲಾ.


ಇವರ ಸಾಧನೆಯನ್ನು ಗುರುತಿಸಿದ ಪುರಸ್ಕಾರಗಳನೇಕ. 2018 ಹವ್ಯಕ ಸಾಧಕಿ ಪ್ರಶಸ್ತಿ, 2019ರಲ್ಲಿ ಕಲಾಶಾರದೆ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಇವರು ಭಾಜನರಾಗಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡಮಿಯ ಸದಸ್ಯರಾಗಿ ಅನೇಕ ಉತ್ತಮ ಕಾರ್ಯಕ್ರಮಗಳ ಆಯೋಜನೆ ಮಾಡಿದ್ದಾರೆ. ಉತ್ತಮ ಸಂಘಟಕಿಯಾಗಿ, ವಾಗ್ಮಿಯಾಗಿ, ನಿರೂಪಕಿಯಾಗಿಯೂ ಮಿಂಚುತ್ತಿದ್ದಾರೆ.


ಯಕ್ಷಗೆಜ್ಜೆಯಿಂದ ಅನೇಕ ತಾಳಮದ್ದಳೆ, ಹಿರಿಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿರ್ಮಲಾ ಉತ್ತರಕನ್ನಡದ ಯಕ್ಷಗಾನಾಸಕ್ತ ಮಹಿಳೆಯರ ಆಶಾಕಿರಣವಾಗಿದ್ದಾರೆ. ಹತ್ತು ಸಮಾನ ಮನಸ್ಕ ಗೆಳತಿಯರೊಡಗೂಡಿ ಕಳೆದೆರಡು ವರ್ಷಗಳಿಂದ ಅನೇಕ ತಾಳಮದ್ದಳೆಗಳನ್ನೂ ನಡೆಸಿದ್ದಾರೆ.. ‘ಯಕ್ಷಗಾನ ಕಲಿಕೆಯಿಂದ ಪ್ರದರ್ಶನದವರೆಗೆ, ತರಬೇತಿಯಿಂದ ಸಂಘಟನೆಯವರೆಗೆ.. ಎಲ್ಲ ರೀತಿಯ ಸಾಧನೆಗೆ ನನ್ನ ಪತಿ ಮಂಜುನಾಥ ಅವರ ನಿರಂತರ ಪ್ರೋತ್ಸಾಹ, ಬೆಂಬಲ ಇದೆ’ ಎಂದು ಅಭಿಮಾನದಿಂದ ಹೇಳುತ್ತಾರೆ ನಿರ್ಮಲಾ. ‘ನನಗೆ ಸಹೋದರನಂತಿದ್ದು ಎಲ್ಲ ಕಾರ್ಯಕ್ರಮದಲ್ಲಿ ಮಾರ್ಗದರ್ಶನ ನೀಡುವ ಭಾಗವತರಾದ ತುಳಗೇರಿ ಗಜಾನನ ಹೆಗಡೆಯವರನ್ನು, ಅನೇಕ ಗೆಳತಿಯರನ್ನು ಸದಾ ಸ್ಮರಿಸುವೆ’ ಎನ್ನುವ ಸಹೃದಯಿ ಈ ಕಲಾವಿದೆ. ಕಳೆದೆರಡು ದಶಕಗಳ ಹಿಂದಿನವರೆಗೂ ಗಂಡಸರ ಕಲೆ ಎಂದೇ ಕರೆಸಿಕೊಳ್ಳುತ್ತಿದ್ದ ಯಕ್ಷಗಾನದಲ್ಲಿ ಮಹಿಳೆಯರೂ ತಮ್ಮ ಛಾಪು ಮೂಡಿಸಬೇಕು ಎಂಬ ಮಹದಾಸೆ ಇವರಿಗಿದೆ. ಜೊತೆಗಿರುವ ಕಲಾವಿದರನ್ನು ಪ್ರೋತ್ಸಾಹಿಸುವ ಸಹೃದಯತೆಯಿಂದ, ಹುರಿದುಂಬಿಸುª ಚಾಕಚಕ್ಯತೆಯಿಂದ, ಹಗಲಲ್ಲೂ ಇರುಳಲ್ಲೂ ನಡೆಸುವ ಯಕ್ಷಗಾನ ಪ್ರದರ್ಶನಕ್ಕೆ ರಾಜ್ಯದೆಲ್ಲೆಡೆ ತಮ್ಮ ತಂಡವನ್ನು ಸುರಕ್ಷಿತವಾಗಿ ಕರೆದೊಯ್ಯುವ ಜವಾಬ್ದಾರಿಯಿಂದ, ಎಲ್ಲರ ಪ್ರೀತಿಯ, ಭರವಸೆಯ ನಿರ್ಮಲಕ್ಕನೆಂದೇ ಜನ ಇವರನ್ನು ಕರೆಯುತ್ತಾರೆ.


ಕೃಷಿ ಕುಟುಂಬದ ಜವಾಬ್ದಾರಿಯನ್ನು, ಗೃಹಕೃತ್ಯಗಳನ್ನು ನಿಭಾಯಿಸುತ್ತ, ಶಿರಸಿಯಲ್ಲಿ ತರಬೇತಿ ನಡೆಸುತ್ತ, ರಾಜ್ಯದಾದ್ಯಂತ ಕಾರ್ಯಕ್ರಮ ಕೊಡುತ್ತ, ಪ್ರತಿಭೆಗೆ ತಕ್ಕ ಪ್ರರಿಶ್ರಮ ಬೆರೆಸಿದ ಭರವಸೆಯ ಕಲಾವಿದೆಯಾಗಿ ಮಿಂಚುತ್ತಿರುವ ನಿರ್ಮಲಾ ಯಕ್ಷಗಾನ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗೈಯಲಿ ಎಂದು ಶುಭ ಹಾರೈಸೋಣ ಅಲ್ಲವೇ?…

**********

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter