ಕೃತಿ: ಮಾನವ ಸಂಬಂಧಗಳನ್ನು ಭಾವಾವೇಶವಿಲ್ಲದೆ ಸ್ಪರ್ಷಿಸುವ ‘ಶ್ರೀನಿವಾಸ ಜೋಕಟ್ಟೆ ಸಮಗ್ರ ಕತೆಗಳು’
—-
ಶ್ರೀನಿವಾಸ ಜೋಕಟ್ಟೆ ಸಮಗ್ರ ಕತೆಗಳು
ಲೇ: ಶ್ರೀನಿವಾಸ ಜೋಕಟ್ಟೆ
ಪುಟ: 440
ಬೆಲೆ:380/-
ಪ್ರ: ಶ್ರೀರಾಮ ಪ್ರಕಾಶನ ,
893/ ಡಿ. 3 ನೇ ಕ್ರಾಸ್, ನೆಹರೂ ನಗರ, ಪೂರ್ವ ಬಡಾವಣೆ, ಮಂಡ್ಯ- 571401
( ಮೊ-9448930173)
—
ಶ್ರೀನಿವಾಸ ಜೋಕಟ್ಟೆ ಅವರು ನಾಲ್ಕು ದಶಕಗಳ ಕಾಲ ಬರೆದ ಕತೆಗಳ ಸಂಕಲನ “ಶ್ರೀನಿವಾಸ ಜೋಕಟ್ಟೆ ಸಮಗ್ರ ಕತೆಗಳು’ ಕೃತಿ ಐವತ್ತೆಂಟು ಕತೆಗಳನ್ನು ಒಳಗೊಂಡಿದೆ. ಮಂಗಳೂರಿನ ಜೋಕಟ್ಟೆಯಲ್ಲಿ ಹುಟ್ಟಿ ಬಾಲ್ಯವನ್ನೂ ಅದೇ ಪರಿಸರದಲ್ಲಿ ಕಳೆದು, ಮುಂದೆ ಉದ್ಯೋಗ ಅರಸಿ ಮುಂಬೈ ಸೇರಿದ ಶ್ರೀನಿವಾಸ ಜೋಕಟ್ಟೆ ಒಂದು ಹಂತದಲ್ಲಿ (ಎರಡು ದಶಕದ ನಂತರ) ಮುಂಬೈ ತೊರೆದು ಹುಟ್ಟೂರು ಮಂಗಳೂರಿಗೆ ಬಂದು ನೆಲೆಸಿದರೂ ಮತ್ತೆ ಮುಂಬೈ ಸೆಳೆತದಿಂದ ತಪ್ಪಿಸಿಕೊಳ್ಳಲಾಗದೆ ಐದು ವರ್ಷಗಳ ನಂತರ ಮುಂಬಯಿಗೇ ತೆರಳಿ ಅಲ್ಲೇ ಪತ್ರಕರ್ತರಾಗಿ ದುಡಿಯುತ್ತಿದ್ದು ಮತ್ತೆ ಎರಡು ದಶಕಗಳು ಕಳೆದು ಹೋಗಿವೆ. ಸ್ವಭಾವತಃ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರವಾಸದ ಹವ್ಯಾಸವನ್ನೂ ಬೆಳೆಸಿಕೊಂಡಿರುವ ಜೋಕಟ್ಟೆಯವರ ಅನುಭವ ಮಂಗಳೂರು, ಮುಂಬೈ ಮಾತ್ರವಾಗದೆ ಅದು ದೇಶದ ಎಂಟು ದಿಕ್ಕುಗಳನ್ನೂ ಆವರಿಸಿಕೊಂಡಿದೆ. ಹಾಗಾಗಿ ಅವರ ಬರಹಗಳು ಮಂಗಳೂರು- ಮುಂಬೈ ಎಕ್ಸ್ ಪ್ರೆಸ್ ಆಗಿ ಉಳಿಯದೆ ಮಾನವ ಸ್ವಭಾವದ ಬಹುಮುಖಗಳನ್ನು ಪರಿಚಯಿಸುತ್ತಲೇ, ಹೊರಟಲ್ಲಿಗೆ ಬಂದು ನಿಲ್ಲುತ್ತದೆ.
ವಲಸೆ ಎನ್ನುವುದು ಮನುಷ್ಯನ ಸಹಜ ಹಾಗೂ ಉದ್ದೇಶ ರಹಿತವಾಗಿರುವ ಶೋಧನಾ ಮನೋಭಾವದ ಫಲವಾಗಿದೆ. ಆರ್ಥಿಕ ಮತ್ತು ಮಾನಸಿಕ ಅನಿವಾರ್ಯತೆಯ ಹೊರತಾಗಿಯೂ ಮನುಷ್ಯ ವಲಸೆ ಹೋಗುತ್ತಾನೆ. ಕಳೆದ 50 ವರ್ಷಗಳಲ್ಲಿ ಸಾವಿರಾರು ಕರಾವಳಿಗರು ಆರ್ಥಿಕ ಕಾರಣಕ್ಕಾಗಿ ಮುಂಬೈಗೆ ಹೋಗಿದ್ದಾರೆ. ಒಂದು ವರ್ಗ ಭೂಮಿಯನ್ನು ಕಳೆದುಕೊಂಡು ಮುಂಬೈ ಸೇರಿ ಸಣ್ಣ ಪುಟ್ಟ ಉದ್ಯೋಗವನ್ನು ಮಾಡಿ ಶ್ರಮದಿಂದ ಉದ್ಯಮವನ್ನು ಕಟ್ಟಿ, ಬೆಳೆಸಿಕೊಂಡು ಅಲ್ಲಿಯೇ ನೆಲೆ ನಿಂತಿದೆ. ಇನ್ನೊಂದು ವರ್ಗ ಶಿಕ್ಷಣ ಪಡೆದು ಉದ್ಯೋಗಕ್ಕಾಗಿ ನೆಲೆ ನಿಂತಿದೆ. ಕೆಳ ಮಧ್ಯಮ ವರ್ಗವೊಂದು ಉದ್ಯೋಗ ಅರಸಿ, ಮುಂಬೈ ಬದುಕನ್ನು ಅರಗಿಸಿಕೊಳ್ಳಲಾಗದೆ ಯಾವುದೋ ಒಂದು ಸಂದರ್ಭದಲ್ಲಿ ಮತ್ತೆ ಸ್ವಂತ ಊರಿಗೆ ಹಿಂತಿರುಗುತ್ತದೆ. ಜೋಕಟ್ಟೆಯವರ ಬಹುತೇಕ ಕತೆಗಳು ಈ ಮೂರನೆಯ ವರ್ಗದ ಜನರ ಪ್ರಶ್ನೆಗಳಿಗೆ ಪರಿಹಾರ ರೂಪದ ಅಂತ್ಯವನ್ನು ಕಂಡುಕೊಂಡಿವೆ.
ಜೋಕಟ್ಟೆಯವರು ಕತೆ ಕಟ್ಟುವ ಬಗೆ ಕುತೂಹಲಕಾರಿ. ಅದು ಎಲ್ಲೇ ಆರಂಭವಾದರೂ ವಿಷಾದ , ವಿನೋದ, ತಪ್ತತೆ ಏನೇ ಇದ್ದರೂ ಅದೇ ಅಂತ್ಯವೆನಿಸದೆ ಹೊಸತನದ ಆರಂಭವಾಗಿ ಬಿಡುತ್ತದೆ. ಒಂದಲ್ಲ ಒಂದು ಬಗೆಯಲ್ಲಿ ಮುಂಬೈ-ಮಂಗಳೂರಿನ ತಂತುವಿನಿಂದಲೇ ಹೆಣೆದು ಪೋಣಿಸಲ್ಪಡುತ್ತದೆ. ಊರೆಂದರೆ ಅಲ್ಲಿಯ ಪ್ರಕೃತಿ, ಸಂಬಂಧಗಳು, ಆಚರಣೆ, ಕುಟುಂಬ ಸಂಸ್ಕೃತಿಯ ಸಂಭ್ರಮ. ಇನ್ನೊಂದೆಡೆ ಮುಂಬೈಯಲ್ಲಿ ಸದಾ ಓಡುತ್ತಲೇ ಇರಬೇಕಾದ ಕಾಲುಗಳು, ಪ್ರೀತಿಗಾಗಿ ತಹತಹಿಸುವ ಮನಸ್ಸುಗಳು, ನಿರಂತರ ಕಾಡುವ ಒಂಟಿತನ ಹೀಗೇ ಬದುಕಿನ ಬಹುಮುಖಗಳ ನಡುವಿನ ಸಂಘರ್ಷಗಳ ಕಥಾವಸ್ತುವಿನ ಹರಹಿದೆ. ಬಹುತೇಕ ಊರಿನ ನೆನಪುಗಳ ಕಾಡುವಿಕೆ ಮತ್ತು ನಗರೀಕರಣದಿಂದ ಕಳೆದುಹೋದ ಗ್ರಾಮೀಣ ಬದುಕು, ಸಂಬಂಧಗಳ ಮಧ್ಯೆ ಕಾಡುವ ಸಂದೇಹ, ಸಂಘರ್ಷಗಳು ಓದುಗನನ್ನು ತಟ್ಟುತ್ತದೆ. ಅರ್ಧ ಶತಮಾನದ ಹಿಂದೆ ಮಂಗಳೂರಿಗರಿಗೆ ಮುಂಬೈ ಎಂದರೆ ಉದ್ಯೋಗ ಅರಸಿಹೋಗುವ, ಕೈತುಂಬಾ ಸಂಪಾದಿಸಬಹುದು ಎಂಬ ಭ್ರಮೆ, ಕಲ್ಪನೆ ತುಂಬಿಕೊಂಡ ನಗರವಾಗಿತ್ತು. ಊರಿನಿಂದ ಹೋದವರು ಹೋಟೆಲ್ ಉದ್ಯಮ ಸ್ಥಾಪಿಸಿದರು, ಮಂಗಳೂರಿನಿಂದ ಉದ್ಯೋಗ ಅರಸಿ ಹೋದವರಿಗೆ ಹೋಟೆಲ್ ನಲ್ಲಿ ಕೆಲಸ ಸಿಗುತ್ತಿತ್ತು. ಒಂದಷ್ಟು ಶಿಕ್ಷಣ ಪಡೆದವರು ಖಾಸಗಿ ಕಂಪೆನಿಗಳಲ್ಲಿ ಕೆಲಸ ಅರಸುತ್ತಿದ್ದರು. ಏನೇ ಇದ್ದರೂ ಹೋದ ಮೇಲೆ ಅಲ್ಲಿಂದ ಬರಿಗೈಯಲ್ಲಿ ಬರುವುದೆಂದರೆ ಅಪಮಾನ ಎಂದುಕೊಳ್ಳುವ ಕಾಲವಿತ್ತು . ಅಲ್ಲಿಯ ಉದ್ಯೋಗ, ಆರ್ಥಿಕ ತಳಹದಿಯ ಮೇಲೆ ನಿಂತ ಮಾನವ ಸಂಬಂಧಗಳು, ಪ್ರೀತಿ, ಪ್ರೇಮ-ಕಾಮಗಳ ಆಳ ಅರ್ಥವಾಗುವ ಹೊತ್ತಿಗೆ ಕಳೆದುಕೊಂಡ ವಯಸ್ಸು ಇವೆಲ್ಲವುಗಳ ಬಗ್ಗೆ ಕತೆಯೊಳಗೆ ನಿರ್ಲಿಪ್ತವಾಗುವ ಪಾತ್ರಗಳು ಕೊನೆಗೆ ಹೊರಳುವುದು ಕರಾವಳಿಯ ವಿಸ್ತಾರವಾದ ಸಾಗರದ ಇನ್ನೊಂದು ದಡದೆಡೆಗೆ.
ಮುಂಬೈ ಬದುಕೆನ್ನುವುದು ಮನುಷ್ಯನ ಊಹೆ, ಕಲ್ಪನೆಗಳನ್ನು ಮೀರಿದ ವಾಸ್ತವವನ್ನು ತುಂಬಿಕೊಂಡ ಮಹಾ ನಗರಿ. ದೇಶದ ಯಾವುದೇ ಭಾಗದಲ್ಲಿ ನಡೆದ ಘಟನೆಗಳು ಇಲ್ಲಿಗೆ ವಲಸೆ ಹೋದ ಜನರ ಮೇಲೆ ಬೀರುವ ಪ್ರಭಾವ ಊಹಾತೀತ. 1970 ರ ದಶಕದಲ್ಲಿ ನಡೆದ ಭೂಮಸೂದೆಯ ಪರಿಣಾಮದಿಂದ ಕರಾವಳಿಗರ ವಲಸೆ, 1990ರ ದಶಕದಲ್ಲಿ ನಡೆದ ಮತೀಯ ಗಲಭೆ, ಶಿಕ್ಷಣ ದೊರೆತ ಭ್ರಾಹ್ಮಣ ಯುವಕರು ಉದ್ಯೋಗ ಅರಸಿ ಮುಂಬೈ ಸೇರಿ ಅಲ್ಲಿ ಮಾಡುವ ವೃತ್ತಿ….. ಹೀಗೆ ಕಳೆದ ಅರ್ಧ ಶತಮಾನದ ವಿದ್ಯಮಾನಗಳು ಕತೆಗಳಾಗಿ ರೂಪುಗೊಂಡು ಕತೆಗಳಲ್ಲಿ ಪ್ರತಿಫಲಿಸುತ್ತವೆ. ಕತೆಗಾರನೊಬ್ಬ ಸಮಕಾಲೀನ ಘಟನೆಗಳಿಗೆ ಯಾವುದೇ ಭಾವಾವೇಶವಿಲ್ಲದೆ ನಿರ್ಲಿಪ್ತವಾಗಿ ಸ್ಪಂದಿಸಬಹುದಾದ ಎಲ್ಲ ಸಾಧ್ಯತೆಗಳೂ ಜೋಕಟ್ಟೆಯವ ಕತೆಗಳಲ್ಲಿ ಹಂಚಿಹೋಗಿವೆ.
ಯಂತ್ರ ತಂತ್ರಗಳ ಆಧುನಿಕತೆಯು ಮನುಷ್ಯನ ಮನಸ್ಸನ್ನು ಉದಾರಗೊಳಿಸುವುದರೊಂದಿಗೆ ವಾಸ್ತವವನ್ನು ಅರಗಿಸಿಕೊಳ್ಳುವಂತೆ ಮಾಡಿದೆ. ಹಾಗಾಗಿ ಇಲ್ಲಿಯ ಪಾತ್ರಗಳು ಪ್ರೇಮದ ತಪ್ತತೆಯನ್ನೂ ಸ್ನೇಹದ ಮಾರ್ದವವಾಗಿ ಪರಿವರ್ತಿಸಿ ಕೊಳ್ಳಬಲ್ಲವುಗಳಾಗಿವೆ. ಸನ್ನಿವೇಶಗಳನ್ನು ಸುಖಾಂತವಾಗಿ ಹೊರಳಿಸುವ ಮೂಲಕ ಸಾಹಿತ್ಯ ರಚನೆಯ ಉದ್ದೇಶವನ್ನು ಕತೆಗಾರರು ಧನಾತ್ಮಕವಾಗಿ ಕಾಣುತ್ತಾರೆ. ಹಾಗಾಗಿಯೇ ತಪ್ತ ಮನಸ್ಸುಗಳನ್ನು ತೃಪ್ತ ಮನಸ್ಸುಗಳಾಗಿ ಸ್ಥಿತ್ಯಂತರಗೊಳಿಸಿ ಚಿತ್ರಿಸಿದ ಬಹುಮುಖ್ಯ ಕತೆಗಳು ಈ ಸಂಕಲನದ ಜೀವಾಳ.
“ದಂತಕಥೆ, ದುರಂತ ಕತೆ..” ಬಹುರಾಷ್ಟ್ರೀಯ ಮತ್ತು ಬೃಹತ್ ಉದ್ದಿಮೆಗಳಿಗೆ ಭೂಸ್ವಾಧೀನ ಮಾಡುವಾಗ ಅಲ್ಲಿಯ ಜನಸಮೂಹ ಮಾತ್ರವಲ್ಲ ಪ್ರಾಣಿ ಪಕ್ಷಿಗಳು ಎದುರಿಸಬೇಕಾದ ಸಮಸ್ಯೆಗಳನ್ನು ಹೇಳುತ್ತದೆ. ಉದ್ಯಮ ಬಂದಾಗ ಅಲ್ಲಿ ಆಗುವ ಸಮಜೋ-ಆರ್ಥಿಕ ಮತ್ತು ಸಾಂಸ್ಕೃತಿಕ ಪಲ್ಲಟಗಳು ಒಂದು ತಲೆಮಾರು ನೈತಿಕತೆ ಎಂದು ನಂಬಿದ ಮೌಲ್ಯಗಳನ್ನು ಹೇಗೆ ಅಲ್ಲಾಡಿಸುತ್ತದೆ ಎಂಬುದರ ಪಾರ್ಶ್ವ ಚಿತ್ರಣವೂ ಈ ಕಥೆಯಲ್ಲಿದೆ. ಬಹುತೇಕ ಕಥೆಗಳು ಸಾಂಪ್ರದಾಯಿಕತೆ ಮತ್ತು ಆಧುನಿಕತೆಯ ನಡುವಿನ ತಿಕ್ಕಾಟಕ್ಕೆ ಕನ್ನಡಿ ಹಿಡಿಯುತ್ತವೆ. ಆದರೆ ಅವುಗಳು ಯುದ್ದ ಘೋಷಿಸುವುದಿಲ್ಲ. “ದೈವ ಕಾಯುತ್ತಿದೆ” ಸಂಪ್ರದಾಯನಿಷ್ಠ ಕುಟುಂಬಗಳಲ್ಲಿ ಆಧುನಿಕ ವಿದ್ಯಾಭ್ಯಾಸ ಪಡೆದ ಹೊಸ ತಲೆಮಾರು ಹಳೆಯ ತಲೆಮಾರಿನ ಜೊತೆ “ನಂಬಿಕೆ”ಯ ತಿಕ್ಕಾಟ ನಡೆಸುತ್ತದೆ. ಹಿರಿಯ ತಲೆಮಾರಿಗೆ “ತೀರ್ಥ” (ದೇವೆರ್ ನೀರ್) ಮರ್ಯಾದೆಯ ಪ್ರಶ್ನೆಯಾದರೆ, ಹೊಸ ತಲೆಮಾರಿಗೆ ಆ ಮರ್ಯಾದೆಯೇ ಅಪ್ರಸ್ತುತ. ದೇವರು, ದೈವ ಇರುವ ಮನೆತನದ ಭೂಮಿಯನ್ನು ಮಾರಿ ಹೋಗಬೇಕಾದ ಅನಿವಾರ್ಯತೆಯಲ್ಲಿಯೂ ಯಾರಿಗಾದರೂ ಮಾರಿ ಹೋಗಲು ದೈವದ ಭಯ ಆ ಹಳೆಯ ತಲೆಮಾರಿನ ಯಜಮಾನರನ್ನು ಕಾಡುತ್ತದೆ. ಇಂತಹ ಬಿಕ್ಕಟ್ಟುಗಳನ್ನು ಬಹಳ ಸರಳ ಭಾಷೆಯಲ್ಲಿ ಯಾವುದೇ ಸಂಕೀರ್ಣತೆಗಳಿಲ್ಲದೆ ಜೋಕಟ್ಟೆ ತಮ್ಮ ಬರಹಗಳಲ್ಲಿ ನಿರ್ಲಿಪ್ತತೆಯಿಂದ ನಿರೂಪಿಸುತ್ತಾರೆ. ಸಂಕೀರ್ಣತೆ ಇದ್ದರೆ ಮಾತ್ರ ಅದು ಶ್ರೇಷ್ಠ ಕಥೆ ಎನ್ನುವ ಸಿದ್ಧಾಂತದವರಿಗೆ ಸಂಕಲನದ ಕಥೆಗಳು ಬೀಸು ಧಾಟಿಯ ಓದು ಅನಿಸಬಹುದು. ಆದರೆ ಅವುಗಳ ಒಡಲಿನಲ್ಲಿ ಸಮಾಜ ಶಾಸ್ತ್ರೀಯವಾದ ಆಯಾಮಗಳು, ಸಮಕಾಲೀನ ಬಿಕ್ಕಟ್ಟುಗಳು ಅಡಗಿವೆ. ಮಂತ್ರವಾದಿಯೊಬ್ಬ ಹಳ್ಳಿಯಲ್ಲಿ ಎಂತಹ ಭಯಭೀತಿಯನ್ನು ಸೃಷ್ಟಿಸಿರುತ್ತಾನೆ ಎಂಬುದಕ್ಕೆ ತ್ಯಾಂಪಣ್ಣನ ಬಗ್ಗೆ ಕಥೆಯ ಆರಂಭದಲ್ಲಿ ಬರುವ ಒಂದೇ ವಾಕ್ಯ ಸಾಕಷ್ಟನ್ನು ಹೇಳುತ್ತದೆ. (ಪುಟ 196). ನೀರಾವರಿಗೆಂದು ತೆಗೆದ ಬಾವಿ ಆತ್ಮಹತ್ಯೆಗೆ ಪ್ರೇರಣೆ ನೀಡುವಂತಾದುದು, ಊರಿನಲ್ಲಿ ಅದರಿಂದಾಗಿ ಮಾಲೀಕ ದೇವಪ್ಪಣ್ಣ ಮಾನಸಿಕ ಹಿಂಸೆಯನ್ನು ಅನುಭವಿಸುವುದು, ಬಾವಿಗೆ ಹಾರಿದ ಜೀವ ಮಹಿಳೆಯದ್ದಾದರೆ ಆಕೆಯ ಸುತ್ತ ಹರಡುವ ಊಹಾಪೋಹಗಳು ಒಂದು ಗ್ರಾಮಾಯಣದ ಗ್ಲಾನ್ಸ್ ಒದಗಿಸುತ್ತವೆ. “ಶ್ರೀ ರಾಮಚಂದ್ರ ನಿವಾಸ” ಕಥೆ (ಪುಟ 133) ಆ ಹೆಸರಿನ ಮನೆಯಲ್ಲಿ ವಾಸಿಸುತಿದ್ದ ಮನೆಯ ಯಜಮಾನ ಅಯೋಧ್ಯೆ ವಿವಾದದಿಂದಾಗಿ ಕೋಮುವಾದಿಯಾಗಿ ಕಂಗೊಳಿಸಬೇಕಾದಂತಹ ಅಪಾಯವನ್ನು ಹೇಳುತ್ತದೆ. ಕೊನೆಗೆ ತಾನು ಕೋಮುವಾದಿಯಲ್ಲ ಎಂಬುದನ್ನು ಸಾರಲು ಆತ ವಿಚಾರವಾದಿಯ ಪೋಸು ನೀಡುತ್ತ ತೊಳಲಾಡುವುದನ್ನು ಹೇಳುತ್ತದೆ. ಆದರೆ ಮನೆಗೆ ಹೆಸರಿಡುವ ನಿಟ್ಟಿನಲ್ಲಿ ಕೈಗೊಳ್ಳುವ ಕೊನೆಯ ತೀರ್ಮಾನ ಆತ ಈ ತೊಳಲಾಟದಿಂದ ಮುಕ್ತಿ ಪಡೆಯಲು ಕಂಡುಕೊಂಡ ಅಚ್ಚರಿಯ ಮಾರ್ಗವನ್ನು ಅನಾವರಣ ಮಾಡುತ್ತದೆ. ತಂತ್ರಜ್ಞಾನ ಒದಗಿಸಿದ ಸೌಕರ್ಯಗಳನ್ನು ಬಳಸಿಕೊಳ್ಳುವಾಗ ಒಂದಾನೊಂದು ಕಾಲದಲ್ಲಿ ಅವುಗಳನ್ನು ಐಷಾರಾಮಿ, ಭೂರ್ಜ್ವಾ ಸಂಸ್ಕೃತಿ ಎಂದು ಟೀಕಿಸಿದ್ದ ಸಂಗತಿಗಳ ನೆನಪು ಬಂದು ಅದಕ್ಕೆ ಕೊಡುವ ಸಮರ್ಥನೆ ಕಥೆಗಳಲ್ಲಿ ಪ್ರಸ್ತಾಪವಾಗಿ ಆಂತರ್ಯದಲ್ಲಿ ಬದಲಾವಣೆಗಳನ್ನು ಅಳವಡಿಸಿಕೊಳ್ಳುವಲ್ಲಿ ಸ್ವಾತಂತ್ರ್ಯೋತ್ತರ ಭಾರತದ ಎರಡನೇ ತಲೆಮಾರು ಹಿರಿಯ ತಲೆಮಾರಿನಷ್ಟು ಜಟಿಲವಲ್ಲ ಮತ್ತು ತತ್ವ ಸಿದ್ಧಾಂತಗಳು ಕೆಲವೊಮ್ಮೆ ರಾಜಿ ಮಾಡಿಕೊಳ್ಳಲು ಅರ್ಹವಾದಂತಹವು ಎಂಬುದನ್ನು ಸೂಚ್ಯವಾಗಿ ಹೇಳಲಾಗಿದೆ. ಜಾಗತಿಕ ಸಾಂಕ್ರಾಮಿಕ ಕೊರೊನಾ, ಸಾವುಗಳಿಗೂ ಕಥೆಗಳಲ್ಲಿ ಸ್ಥಾನ ದಕ್ಕಿದೆ. “ಶ್ರೀ ರಾಮಚಂದ್ರ ನಿವಾಸ” ಕಥೆಯಲ್ಲಿ ಬರುವ “ಶ್ರೀ ರಾಮ ಭಾರತದ ಬುದ್ಧಿಜೀವಿಗಳ ಎದುರು ವಿಲನ್ ಆಗಿರುವುದರಿಂದ..” ಎಂಬ ಸ್ಟೇಟ್ ಮೆಂಟ್ ಸಮಕಾಲೀನ ಇತಿಹಾಸದ ವ್ಯಂಗ್ಯವೂ ಹೌದು. ಕಥೆಗಳಲ್ಲಿ ಶಬ್ದಗಳ ಪೋಲು ಇಲ್ಲ. ಪತ್ರಿಕೆಯಲ್ಲಿ ಉದ್ಯೋಗ ಮಾಡಿಕೊಂಡಿರುವುದರಿಂದ ಕಥೆಗಾರರ ಶೈಲಿ ಕೆಲವು ಕತೆಗಳಲ್ಲಿ ಸಾದಾ ಸೀದಾ ರೀತಿಯಲ್ಲಿ ಕಥೆ ಹೇಳುತ್ತಾ ಸಾಗುವಂತಿದೆ. ವರದಿಗಾರಿಕೆಯ ಶೈಲಿಯ ಕಥೆಗಳೂ ಇವೆ. ಬಲ್ಲಾಳರು, ಚಿತ್ತಾಲರು, ಕಾಯ್ಕಿಣಿಯವರ ಬರಹಗಳಲ್ಲಿ ಕಾಣುವಂತಹ ಮುಂಬಯಿಯ ಸಂಕೀರ್ಣತೆ ಜೋಕಟ್ಟೆಯವರ ಕಥೆಗಳಲ್ಲಿ ಆ ರೀತಿಯಲ್ಲಿ ಕಾಣಲಾಗದೇನೋ. ಹಾಗಿದ್ದೂ ಜೋಕಟ್ಟೆಯವರ ಬರಹಗಳು ಜೀವಂತಿಕೆಯನ್ನು ಪಡೆಯುವುದು ಅವರು ಆರಿಸಿಕೊಂಡ ವಸ್ತು, ವ್ಯಕ್ತಿ ಮತ್ತು ಸ್ಥಳಗಳ ಏಕತೆಯಿಂದ. ಮುಂಬೈಯಿಂದ ಮಂಗಳೂರಿಗೆ ಬಂದ ವ್ಯಕ್ತಿಯೊಂದಿಗೆ ಕತೆಯೊಳಗೆ ತನ್ನ ಆಪ್ತ ಬಳಗವೊಂದನ್ನು ನೇರವಾಗಿ ತಂದು ನಿಲ್ಲಿಸಿಬಿಡುತ್ತಾರೆ. ಇಲ್ಲಿಯ ಭಾಷೆ, ಜೀವನ ಪದ್ದತಿ, ಓಡಾಡುವ ಬಸ್ಸುಗಳ ಹೆಸರು, ಸಾಹಿತ್ಯಪ್ರೇಮಿ ಸ್ನೇಹಿತರನ್ನು ನೇರವಾಗಿ ಹೇಳುತ್ತಲೇ ಕತೆಗಳನ್ನು ಆಪ್ತವಾಗಿಸುತ್ತಾರೆ. ಬ್ರಾಹ್ಮಣ ಸಮುದಾಯದ ಹಿರಿಯ ತಲೆಮಾರಿನ ಸಾಂಸ್ಕೃತಿಕ ತಲ್ಲಣಗಳು, ಶಿಕ್ಷಣಕ್ಕೆ ತೆರೆದುಕೊಂಡ ಹೊಸ ಜನಾಂಗ ಹೊಸತನಕ್ಕೆ ತೆರೆದುಕೊಳ್ಳುವಾಗ ಅನುಭವಿಸುವ ಮಾನಸಿಕ ಸಂಘರ್ಷವನ್ನು ದಾಖಲಿಸುತ್ತಲೇ ಒಂದು ತಲೆಮಾರಿನ ಅತಂತ್ರ ಸ್ಥಿತಿಗೆ ಕತೆಗಳು ಕನ್ನಡಿಯಾಗುತ್ತವೆ. ಶ್ರೀನಿವಾಸ ಜೋಕಟ್ಟೆ ತಮ್ಮ ಕಥೆಗಳಲ್ಲಿ ತಾತ್ವಿಕ ಸಂಘರ್ಷವನ್ನು, ಸಾತ್ವಿಕ ಸಂಘರ್ಷವನ್ನೂ ಚರ್ಚಿಸುತ್ತಾರೆ. ಈ ಮೊದಲೇ ಹೇಳಿದಂತೆ ಅವರೆಂದೂ ಯುದ್ಧ ಘೋಷಿಸುವ ಕಥೆಗಾರರಾಗುವುದಿಲ್ಲ, ಕಾಲವೇ ನಿನಗೆ ವಂದನೆ ಅನ್ನುವ ಜಾಯಮಾನ ಅವರದ್ದು. ಅವರ ಕಥೆಗಳದ್ದು!
—-
ನಾಗವೇಣಿ ಮಂಚಿ, ಮಂಗಳೂರು
——-