ಧಾರವಾಡ: ಭೂಮಿ ಪ್ರತಿಷ್ಠಾನವು ಆರಂಭದಿಂದಲೂ ವೈವಿಧ್ಯಮಯ ಸದಭಿರುಚಿಯ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೂ ಪರಿಸರಕ್ಕೂ ಕೊಡುಗೆಯನ್ನು ನೀಡುತ್ತ ಬಂದಿದೆ. ಸಮಾಜಸೇವಕರಾದ ದಿ. ಯಲ್ಲಪ್ಪ ಅರವಳದ ಅವರ ಸ್ಮರಣಾರ್ಥ ಅವರ ಜನ್ಮದಿನದಂದು ಕಳೆದ ವರ್ಷ ಭೂಮಿ ಸಾಹಿತ್ಯ ಪುರಸ್ಕಾರವನ್ನು ನೀಡಲು ಯೋಜನೆ ರೂಪಿಸಿತ್ತು. ನಾಡು, ನುಡಿ, ಸಂಸ್ಕೃತಿಯ ಉಳಿವಿಗಾಗಿ ಹಮ್ಮಿಕೊಂಡ ಈ ಕಾರ್ಯಕ್ಕೆ ನಾಡಿನ ಹಿರಿಯ ಕಿರಿಯ ಸಾಹಿತಿಗಳಿಂದ ಸಾಕಷ್ಟು ಬೆಂಬಲ ದೊರೆತಿದೆ. ಮೊದಲ ಪ್ರಯತ್ನದಲ್ಲಿಯೇ ಸುಮಾರು ನಾಡಿನ ಹಾಗೂ ಹೊರನಾಡಿನ ಲೇಖಕರು ತಮ್ಮ ಕೃತಿಗಳನ್ನು ಕಳುಹಿಸಿದ್ದರು.
ಈ ವರ್ಷವೂ ಭೂಮಿ ಸಾಹಿತ್ಯ ಪುರಸ್ಕಾರಕ್ಕೆ ಅರ್ಹ ಸಾಹಿತಿಗಳು, ಕವಿಗಳು, ಬರಹಗಾರರು ಹಾಗೂ ಲೇಖಕರಿಂದ ಸೃಜನಶೀಲ ಕೃತಿಗಳನ್ನು ಆಹ್ವಾನಿಸಲಾಗಿದೆ. ಪುರಸ್ಕಾರವು ೫೦೦೦/- ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ೨೦೨೩ರ ಜುಲೈ ೧೫ಕ್ಕೆ ಅಂತಿಮ ಟಾಪ್-೧೧ ಅತ್ಯುತ್ತಮ ಕೃತಿಗಳ ಘೋಷಣೆ ಮಾಡಲಾಗುವುದು. ನಂತರ ೨೦೨೩ರ ಜುಲೈ ೨೫ಕ್ಕೆ ಬಹುಮಾನಿತ ಗ್ರಂಥದ ಘೋಷಣೆ ಮಾಡಲಾಗುತ್ತದೆ. ೨೦೨೩ರ ಆಗಸ್ಟ್ ತಿಂಗಳಲ್ಲಿ ಗ್ರಂಥ ಪುರಸ್ಕಾರ ಪ್ರದಾನ ಸಮಾರಂಭ ಏರ್ಪಡಿಸಲಾಗುತ್ತದೆ. ಈ ಬಾರಿಗೆ ವಿಶೇಷವಾಗಿ ಟಾಪ್-೧೦ ಅತ್ಯುತ್ತಮ ಕೃತಿಗಳಿಗೂ ’ಭೂಮಿ ಟಾಪ್-೧೦ ಸಾಹಿತ್ಯ ಕೃತಿ’ ಎಂಬ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಗುವುದು.
ಲೇಖಕರು ೨೦೨೨ರಲ್ಲಿ ಪ್ರಕಟಿತ ಪ್ರಥಮ ಮುದ್ರಣವುಳ್ಳ ತಲಾ ಮೂರು ಪುಸ್ತಕಗಳನ್ನು ಈ ಕೆಳಗೆ ನೀಡಿದ ವಿಳಾಸಕ್ಕೆ ತಲುಪುವಂತೆ ಕಳುಹಿಸಬೇಕು. ತಡವಾಗಿ ಬಂದ ಪುಸ್ತಕಗಳನ್ನು ಸ್ವೀಕರಿಸಲಾಗುವುದಿಲ್ಲ. ಪರಿಶೀಲನೆಗೆ ಬಂದ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ. ಪುಸ್ತಕಗಳ ಸ್ವೀಕೃತಿಯನ್ನು ತಮಗೆ ಇಮೇಲ್ ಅಥವಾ ಮೇಸೇಜ್ ಮೂಲಕ ತಿಳಿಸಲಾಗುವುದು. ಬಹುಮಾನದ ಬಗ್ಗೆ ಪ್ರತಿಷ್ಠಾನ ಗೊತ್ತುಪಡಿಸಿದ ತೀರ್ಪುಗಾರರ ಶಿಫಾರಸ್ಸನ್ನು ಗಮನಿಸಿ ಅಂತಿಮ ನಿರ್ಧಾರವನ್ನು ಕೈಗೊಳ್ಳುತ್ತದೆ. ಒಂದಕ್ಕಿಂತ ಹೆಚ್ಚು ಗ್ರಂಥಗಳು ಅತ್ಯುತ್ತಮವೆಂದು ಪರಿಗಣಿತವಾದರೆ ಬಹುಮಾನವನ್ನು ಹಂಚುವ ಹಕ್ಕು ಪ್ರತಿಷ್ಠಾನಕ್ಕೆ ಇರುತ್ತದೆ. ಪಿಎಚ್.ಡಿ. ಹಾಗೂ ಸಂಪಾದಿತ ಗ್ರಂಥಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. ಸ್ಪರ್ಧೆಗೆ ಸೃಜನಶೀಲ ಬರವಣಿಗೆಗಳಾದ ಕಥೆ, ಕವನ, ಪ್ರಬಂಧ, ಕಾದಂಬರಿ ಹೀಗೆ ಮುಂತಾದ ಪುಸ್ತಕಗಳನ್ನು ಕಳುಹಿಸಬಹುದು. ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಹೆಸರು ವಿಳಾಸ, ಇಮೇಲ್ ಹಾಗೂ ದೂರವಾಣಿ/ಮೊಬೈಲ್ ಸಂಖ್ಯೆಗಳನ್ನುಳ್ಳ ಮಾಹಿತಿಯನ್ನು ಪ್ರತ್ಯೇಕ ಹಾಳೆಯಲ್ಲಿ ನಮೂದಿಸಿ ಕಳುಹಿಸಬೇಕು. ಪುಸ್ತಕಗಳನ್ನು ಕಳುಹಿಸಲು ಕೊನೆಯ ದಿನಾಂಕ ೦೬-೦೫-೨೦೨೩ ಆಗಿದೆ. ಲೇಖಕರು ತಮ್ಮ ಪುಸ್ತಕಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕೆಂದು ಭೂಮಿ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಶಿವಾನಂದ ಟವಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೇಖಕರು ತಮ್ಮ ಪುಸ್ತಕಗಳನ್ನು ಕಳುಹಿಸಬೇಕಾದ ವಿಳಾಸವು ಹೀಗಿದೆ..
ಶ್ರೀ ಬಸಲಿಂಗಪ್ಪ ಯಲ್ಲಪ್ಪ ಅರವಳದ,
ಅಧ್ಯಕ್ಷರು, ಅರವಳದ ಪ್ರತಿಷ್ಠಾನ,
೫೮, ಬಸವೇಶ್ವರ ನಗರ, ೧ನೇ ಅಡ್ಡ ರಸ್ತೆ,
ಪೋಸ್ಟ್ – ಸತ್ತೂರ, ತಾ.ಜಿ. ಧಾರವಾಡ-580009