ಹೆಸರು ವ್ಯಕ್ತಿತ್ವದ ಕೈಗನ್ನಡಿಯಿದ್ದಂತೆ ಎಂದು ಹೇಳುವ ಕಾಲವೊಂದಿತ್ತು. ಹಿಂದೆಲ್ಲ ಹೆಸರುಗಳು ತುಂಬ ಅರ್ಥಪೂರ್ಣವಾಗಿರುತ್ತಿದ್ದವು. ಈಗ ಮಂದಿ ಬದಲಾಗಿದ್ದಾರೆ ಮತ್ತು ಅವರ ಅಭಿರುಚಿಗಳು ಸಹ ಬದಲಾಗಿವೆ. ಹೆಸರುಗಳು ವಿಶಿಷ್ಟವಾಗಿಯೂ, ವಿಚಿತ್ರವಾಗಿಯೂ ಇರಬೇಕೆಂದು ಈಗಿನ ಮಂದಿ ಬಯಸುತ್ತಾರೆ. ಮೊದಲೆಲ್ಲ ಹೆಸರಿನ ಆಧಾರದ ಮೇಲೆಯೇ ಇಂತಿಂತಹವರು ಗಂಡು-ಹೆಣ್ಣು ಎಂದು ತಿಳಿಯಬಹುದಿತ್ತು. ಹೆಸರಿನ ಆಧಾರದ ಮೇಲೆಯೇ ಇಂತಿಂತಹವರು ವಾಯವ್ಯ ಕರ್ನಾಟಕ, ಈಶಾನ್ಯ ಕರ್ನಾಟಕ, ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದ ಮಂದಿ ಎಂಬುದು ಸುಲಭವಾಗಿ ತಿಳಿದು ಹೋಗುತ್ತಿತ್ತು.
ನಮ್ಮ ಉತ್ತರ ಕರ್ನಾಟಕದ ಹೆಸರುಗಳಿಗಿರುವ ವೈವಿಧ್ಯ ಮತ್ತು ವೈಶಿಷ್ಟ್ಯವೇ ಬೇರೆ. ಭಾರತದ ಬೇರಾವುದೇ ರಾಜ್ಯದಲ್ಲೂ ಇಷ್ಟೊಂದು ವೈವಿಧ್ಯಮಯ ಹೆಸರುಗಳು ಕಂಡುಬರುವುದಿಲ್ಲ. ದಕ್ಷಿಣ ಕರ್ನಾಟಕದ ಮಂದಿಗೆ ಮನೆಯ ಹೆಸರೇ ಇರುವುದಿಲ್ಲ! ಹೆಸರಿನ ಮುಂದೆ ಅಥವಾ ಹಿಂದೆ ಬರೀ ಇನಿಷಿಯಲ್ಲುಗಳಿರುತ್ತವೆ. ಕರಾವಳಿ ಕರ್ನಾಟಕದ ಮಂದಿಗೆ ಮನೆಯ ಹೆಸರಿದ್ದರೂ ಸಹ ಸಪ್ಪೆಯಾಗಿರುತ್ತವೆ. ಸುಮ್ಮನೆ ನಮ್ಮ ಉತ್ತರ ಕರ್ನಾಟಕದ ಮಂದಿಯ ಮನೆಯ ಹೆಸರುಗಳನ್ನು ನೋಡುತ್ತ ಹೋದರೆ ಸಾಕು, ಮುಖದಲ್ಲಿ ಮುಗುಳ್ನಗೆ ಮೂಡುತ್ತದೆ.
ಹೊಸಮನಿ, ಹಳೆಮನಿ, ದೊಡ್ಡಮನಿ, ಸಣ್ಣಮನಿ, ಮೇಲಿನಮನಿ, ಕೆಳಗಿನಮನಿ, ಮುಂದಲಮನಿ, ಹಿತ್ತಲಮನಿ, ಕಟ್ಟೀಮನಿ, ಕಡೇಮನಿ, ಸಾಲಮನಿ, ಬಂಕದಮನಿ, ಮಾಳಗಿಮನಿ, ಹಂಚಿನಮನಿ, ಸುಣ್ಣದಮನಿ, ರಾಮಣ್ಣನವರ, ಭೀಮಣ್ಣನವರ, ಕೆಂಚಣ್ಣನವರ, ಬಿಳಿಯಣ್ಣನವರ, ಕರಿಯಣ್ಣನವರ, ಗಿರಿಯಣ್ಣನವರ, ಸಂಗಣ್ಣನವರ, ಯಂಕಣ್ಣನವರ, ಬಾಲಣ್ಣನವರ, ಕಾಮಣ್ಣನವರ, ತಿರುಕಪ್ಪನವರ, ಹೊಟ್ಟೆಪ್ಪನವರ, ಹುಚ್ಚಪ್ಪನವರ, ಕಟ್ಟೆಪ್ಪನವರ, ಹಳ್ಳೆಪ್ಪನವರ, ಯಲ್ಲಪ್ಪನವರ, ಯಂಕಪ್ಪನವರ, ಹೊಸಮಠ, ಹಿರೇಮಠ, ಚಿಕ್ಕಮಠ, ಕಲ್ಮಠ, ವಿಭೂತಿಮಠ, ಬಣ್ಣದಮಠ, ಶಾಬಾದಿಮಠ, ಕಬ್ಬಿಣಕಂತಿಮಠ, ಉಳ್ಳಾಗಡ್ಡಿಮಠ, ಗದ್ದಗಿಮಠ, ಭೂಸನೂರಮಠ, ಕಲ್ಲೂರಮಠ, ಹುಕ್ಕೇರಿಮಠ, ಸಿಂದಗಿಮಠ ಎಂಬ ಹೆಸರುಗಳು ಉತ್ತರ ಕರ್ನಾಟಕದಲ್ಲಿ ಮಾತ್ರ ಕಂಡುಬರುತ್ತವೆ.
ಉತ್ತರ ಕರ್ನಾಟಕದ ವಿಚಿತ್ರ ಮತ್ತು ವಿಶಿಷ್ಟ ಹೆಸರುಗಳು ಕೆಲವೊಮ್ಮೆ ತುಂಬ ಮುಜುಗರ ಉಂಟು ಮಾಡುತ್ತವೆ. ಬಾಗಲಕೋಟೆಯ ಡಾ.ರವೀಂದ್ರ ಮಂಗಸೂಳಿ ಎಂಬ ಹೆಸರಿನ ವ್ಯಕ್ತಿ ಅಮೇರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದರಲ್ಲಿ ಇಪ್ಪತ್ತೆಂಟು ವರ್ಷಗಳ ಕಾಲ ರಸಾಯನಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ತುಂಬ ಸೊಗಸಾಗಿ ಹಾಡುತ್ತಿದ್ದ ಬೆಳಗಾವಿಯ ಹಿಂದೂಸ್ತಾನಿ ಗಾಯಕಿಯೊಬ್ಬರ ಹೆಸರು ರೇವತಿ ಗೊಡ್ಡೆಮ್ಮಿ. ರಾಣೆಬೆನ್ನೂರಿನ ಅಂಜಲಿ ಉಳ್ಳಾಗಡ್ಡಿ ಎಂಬ ಹುಡುಗಿ ತುಂಬ ಒಳ್ಳೆಯ ಭರತನಾಟ್ಯ ಕಲಾವಿದೆ.
ಪ್ರಿಯಾ ಕೋತಂಬರಿ, ತೇಜಸ್ವಿನಿ ಕತ್ತಿ, ಪ್ರೀತಿ ಕರಡಿ, ಶ್ರೀದೇವಿ ಕೋಣನತಂಬಿಗಿ, ದೀಪ್ತಿ ಕೋಣನತಲೆ, ಚೈತ್ರ ರೊಟ್ಟಿ, ಅಂಜನಾ ಹುಚ್ಚಪ್ಪನವರ, ಮಲ್ಲಿಕಾ ಹೊಟ್ಟೆಪ್ಪನವರ, ಶ್ರುತಿ ಸೊಟ್ಟಪ್ಪನವರ, ಸುಶೀಲ ತಿರಕಪ್ಪನವರ ಮತ್ತು ಅನುಪಮಾ ಸೂಳಿಬಾವಿ ಎಂಬ ವಿಶಿಷ್ಟ ಹೆಸರುಗಳನ್ನು ಉತ್ತರ ಕರ್ನಾಟಕದಲ್ಲಿ ಮಾತ್ರ ಕಾಣಲು ಸಾಧ್ಯ.
ಅಕ್ಕಮ್ಮ, ಅಣ್ಣಪ್ಪ ಎಂಬ ಹೆಸರುಗಳು ಉತ್ತರ ಕರ್ನಾಟಕದಲ್ಲಿ ಹೆಚ್ಚು ಬಳಕೆಯಲ್ಲಿವೆ. ಈ ವಿಶಿಷ್ಟ ಹೆಸರುಗಳಿರುವ ವ್ಯಕ್ತಿಗಳು ವಿವಾಹಪೂರ್ವ ಮತ್ತು ವಿವಾಹಾನಂತರ ಹೆಸರಿನ ಕಾರಣದಿಂದಾಗಿಯೇ ತುಂಬ ಸಮಸ್ಯೆಗಳನ್ನೆದುರಿಸಬೇಕಾಗುತ್ತದೆ. ನರೇಗಲ್ಲಿನ ಅಕ್ಕಮ್ಮ ಎಂಬ ಸುಂದರ ಹುಡುಗಿಯನ್ನು ಮದುವೆಯಾಗಿದ್ದ ಮುಳಗುಂದದ ಯಲ್ಲಪ್ಪನಿಗೆ ಸುಂದರಿಯಾದ ಹೆಂಡತಿ ಮನೆ-ಮನ ತುಂಬಿದ್ದರೂ ಮನಸ್ಸಿಗೆ ನೆಮ್ಮದಿಯಿರಲಿಲ್ಲ. ಅಕ್ಕಮ್ಮ ಎಂಬ ಹೆಸರಿನ ಹೆಂಡತಿಯನ್ನು ಹೇಗೆ ಕರೆಯಬೇಕೆಂದು ತಿಳಿಯದೆ ಚಡಪಡಿಸುತ್ತಿದ್ದ. ಏಕಾಂತದಲ್ಲೇನೋ ಹೆಂಡತಿಯನ್ನು “ಬಂಗಾರ”, “ಚಿನ್ನ” ಎಂದು ಕರೆಯುತ್ತಿದ್ದ ನಿಜ, ಆದರೆ ಉಳಿದ ಸಮಯದಲ್ಲಿ ಎಲ್ಲರೆದುರು ಅವಳೊಂದಿಗೆ ಮಾತನಾಡುವಾಗ ಅವನಿಗೆ ತುಂಬ ಸಂಕಟವಾಗುತ್ತಿತ್ತು. ಕೊನೆಗೂ ಶತಾಯಗತಾಯ ಪ್ರಯತ್ನಿಸಿ, ಹೆಂಡತಿಯನ್ನೂ ಒಪ್ಪಿಸಿ ಲಾವಣ್ಯ ಎಂದು ಮರುನಾಮಕರಣ ಮಾಡಿದ ನಂತರವಷ್ಟೇ ಯಲ್ಲಪ್ಪನಿಗೆ ಜೀವನದಲ್ಲಿ ಸ್ವಲ್ಪ ನೆಮ್ಮದಿ ಸಿಕ್ಕಿತು!
ಅಣ್ಣಪ್ಪ ಎಂಬ ಅವಿವಾಹಿತ ತರುಣನ ಪ್ರಸಂಗ ಇನ್ನೂ ಹೃದಯಂಗಮವಾಗಿದೆ. ಒಳ್ಳೆಯ ರೂಪ, ವಿದ್ಯೆ, ಉದ್ಯೋಗ, ಗಳಿಕೆ, ಆಸ್ತಿ ಮತ್ತು ಮನೆತನದ ಹಿನ್ನಲೆಯಿದ್ದರೂ ಅವನಿಗೆ ನೆಮ್ಮದಿಯಿರಲಿಲ್ಲ. ಅಣ್ಣಪ್ಪ ಎಂಬ ಅವನ ಹೆಸರೇ ಅಶಾಂತಿಗೆ ಕಾರಣವಾಗಿತ್ತು! ಅಣ್ಣಪ್ಪ ಗದುಗಿನಲ್ಲಿ ಡಿಗ್ರಿ ಓದುವಾಗ ಅವನ ಕ್ಲಾಸುಮೇಟುಗಳು, ಜೂನಿಯರುಗಳು ಸೇರಿದಂತೆ ಎಲ್ಲ ಹುಡುಗಿಯರೂ ಅವನನ್ನು “ಅಣ್ಣ”, “ಅಣ್ಣ” ಎಂದು ಕರೆಯುತ್ತಿದ್ದರು. ಅದು ಅಣ್ಣಪ್ಪನಿಗೆ ತುಂಬ ದುಃಖ ಉಂಟು ಮಾಡುತ್ತಿತ್ತು.
ಅಣ್ಣಪ್ಪ ತುಂಬ ಇಷ್ಟಪಟ್ಟಿದ್ದ ಅಣ್ಣಿಗೇರಿಯ ಮೇಘಾ ಎಂಬ ಸುಂದರ ಹುಡುಗಿ ಸಹ ಅವನನ್ನು “ಅಣ್ಣ” ಎಂದು ಕರೆದಾಗ ಮಾತ್ರ ಅವನಿಗೆ ಸಹಿಸಲಾಗದ ವೇದನೆಯಾಗುತ್ತಿತ್ತು. ಅಣ್ಣಪ್ಪ ಕೊನೆಗೊಮ್ಮೆ ಮೇಘಾಳಿಗೆ ತುಂಬ ಖಡಕ್ಕಾಗಿ ಇನ್ನು ಮುಂದೆ ತನ್ನನ್ನು “ಅಣ್ಣ” ಎಂದು ಕರೆಯಬಾರದೆಂದೂ, ಹಾಗೇನಾದರೂ “ಅಣ್ಣ” ಎಂದು ಕರೆದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದೂ ಸರಿಯಾಗಿ ಹೆದರಿಸಿದ. ಇದಾದ ನಂತರ ಅಣ್ಣಿಗೇರಿಯ ಮೇಘಾ ಅವನನ್ನು “ಅಣ್ಣ” ಎಂದು ಕರೆಯುವುದನ್ನು ಬಿಟ್ಟಳು.
ಕಳೆದ ವರ್ಷ ನನಗೆ ಒಂದು ಮದುವೆಯ ಆಮಂತ್ರಣ ಪತ್ರಿಕೆ ಅಂಚೆಯ ಮೂಲಕ ತಲುಪಿತು. ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ “ಕುಮಾರ್ ವೆಡ್ಸ್ ಮೇಘಾ” ಎಂದಿತ್ತು. ಅಣ್ಣಪ್ಪ ಅಲಿಯಾಸ್ ಕುಮಾರ್ ತಾನು ತುಂಬ ಇಷ್ಟಪಟ್ಟಿದ್ದ ಮೇಘಾಳೊಂದಿಗೇ ಮದುವೆಯಾಗುವ ವಿಷಯ ತಿಳಿದು ನನಗೆ ತುಂಬ ಖುಷಿಯಾಯಿತು.
ಅಣ್ಣಪ್ಪನ ಮದುವೆಗೆ ನಾನು ಮತ್ತು ಡಾ.ನಾಗರಾಜ ಒಂದು ದಿನ ಮುಂಚಿತವಾಗಿಯೇ ಹೋಗಿದ್ದೆವು. ಅಣ್ಣಪ್ಪ ಅಲಿಯಾಸ್ ಕುಮಾರ್, “ದೋಸ್ತಾs ನಾನು ಲಕ್ಕಿಮ್ಯಾನ್ ಅದೀನಿs. ಮೇಘಾ ಬಂಗಾರದಂಥs ಹುಡುಗಿ!” ಎಂದು ತುಂಬ ಖುಷಿಯಿಂದ ಹೇಳಿದ. “ನಾನು ಅಕೀಗೆ ನನ್ನ ಲಗ್ನಾ ಆಗ್ತಿಯೇನು ಬಂಗಾರs? ಅಂತ ಕೇಳಿದಾಗ ಅಕೀ, ಮದಲs ನಿಮ್ಮ ಹೆಸರು ಬದಲು ಮಾಡ್ಕೋರಿ ಅಂದ್ರ ನಾನು ನಿಮ್ಮನ್ನs ಲಗ್ನಾ ಆಗತೇನಿ ಅಂದಳು…” ಎಂದು ಹೇಳಿ ಭಾವುಕನಾದ. ಡಾ.ನಾಗರಾಜ ಮಾತ್ರ, “ಏ ಸಾಲಾs ಅಣ್ಣಪ್ಪಾ ಅಲಿಯಾಸ್ ಕುಮಾರ್ ಪ್ಯಾರ್ ಮೇ ಪಾಗಲ್ ಹೋಗಯಾ ಹೈ!” ಎಂದು ಹೇಳಿ ಕೇಕೆ ಹಾಕಿ ನಕ್ಕ. ನಂತರ ಕುಮಾರ್-ಮೇಘಾರ ಮದುವೆಯಲ್ಲಿ ನಾನು ಮತ್ತು ಡಾ.ನಾಗರಾಜ ತುಂಬ ಸಂಭ್ರಮದಿಂದ ಪಾಲ್ಗೊಂಡೆವು. ಮೇಘಾಳಂತಹ ಹುಡುಗಿಯರು ಕರ್ನಾಟಕದಲ್ಲಿ ಈಗಲೂ ಇದ್ದಾರೆಂದು ತಿಳಿದು ನನಗೆ ತುಂಬ ಸಮಾಧಾನವಾಯಿತು!
ಹುಬ್ಬಳ್ಳಿಯ ಸಮಾಜಶಾಸ್ತ್ರ ಪ್ರಾಧ್ಯಾಪಕರೊಬ್ಬರು ನನಗೆ ತುಂಬ ಪರಿಚಿತರು. ಯಾವುದೋ ಕೆಲಸದ ನಿಮಿತ್ತ ನಾನೊಮ್ಮೆ ಅವರ ಮನೆಗೆ ಹೋಗಿದ್ದೆ. ಹಿರಿಯರೂ, ಸಜ್ಜನರೂ ಆದ ಅವರು ತಮ್ಮ ಹೆಂಡತಿಯನ್ನು ಕರೆಯುವ ರೀತಿ ಮಾತ್ರ ನನಗೆ ಹಿಡಿಸಲಿಲ್ಲ. ಸ್ತ್ರೀಯರ ಕುರಿತು ತುಂಬ ಗೌರವ ಹೊಂದಿರುವ ನಾನು, “ಇದೇಕೆ ಹೀಗೆ ಸರ್?” ಎಂದು ಕೇಳಿದೆ. ಪ್ರಾಧ್ಯಾಪಕರ ಮುಖದಲ್ಲಿ ಮುಗುಳ್ನಗು ಮಾಯವಾಗಿ ನೋವು ಕಾಣಿಸಿಕೊಂಡಿತು. ಆ ಹಿರಿಯರು, “ಹೆಂಡತಿ ಹೆಸರು ಹಿಡಿದು ಹ್ಯಾಂಗs ಕರೀಯೂದ್ರಿs? ಅದು ಅಂತಿಂತಹ ಹೆಸರಲ್ಲs?” ಎಂದು ಚಡಪಡಿಸಿದರು. ಕೊನೆಗೂ ತುಂಬ ಒತ್ತಾಯಿಸಿದ ನಂತರ “ನನ್ನ ಹೆಂಡತಿಯ ಹೆಸರು ಅಕ್ಕಮ್ಮ!” ಎಂದು ಹೇಳಿದರು. ಹೆಂಡತಿಯ ಹೆಸರಿನ ದೆಸೆಯಿಂದ ತಾವು ಪಟ್ಟ ಬವಣೆಯನ್ನು ಮನಸ್ಸು ಕರಗುವಂತೆ ವಿವರಿಸಿದರು.
ಅಷ್ಟರಲ್ಲಿ ಅವರ ಇಬ್ಬರು ಮುದ್ದಾದ ಹೆಣ್ಣುಮಕ್ಕಳು ಅವಲಕ್ಕಿ ಮತ್ತು ಚಹ ತೆಗೆದುಕೊಂಡು ಬಂದರು. ಮಕ್ಕಳ ಹೆಸರೇನು? ಏನು ಮಾಡುತ್ತಿದ್ದಾರೆ? ಎಂದು ಕೇಳಿದಾಗ ಪ್ರಾಧ್ಯಾಪಕ ಮತ್ತು ಅವರ ಪತ್ನಿ ತುಂಬ ಖುಷಿಯಿಂದ, “ದೊಡ್ಡವಳು ಕಾವ್ಯ ಎಂ.ಎಸ್ಸಿ .ಓದುತ್ತಿದ್ದಾಳೆ, ಚಿಕ್ಕವಳು ನವ್ಯಾ ಬಿ.ಕಾಂ. ಓದುತ್ತಿದ್ದಾಳೆ. ಕಾವ್ಯಳಿಗೆ ಸಾಹಿತ್ಯದಲ್ಲೂ ಆಸಕ್ತಿಯಿದೆ. ಕಥೆ-ಕವಿತೆ ಬರೆಯುತ್ತಾಳೆ…” ಎಂದು ತಮ್ಮ ಮಕ್ಕಳ ಸಾಹಸಗಳ ಕುರಿತು ಒಂದೂವರೆ ಗಂಟೆ ಕೊರೆದರು. ಹರೆಯದ ಮತ್ತು ಮುದ್ದಾದ ಹೆಣ್ಣು ಮಕ್ಕಳ ತಂದೆ-ತಾಯಿಗಳ ಬಳಿ ಅವರ ಮಕ್ಕಳ ಕುರಿತು ಕೇಳಿದರೆ ಏನಾಗುತ್ತದೆ ಎಂಬುದನ್ನು ಕೇಳಿದ್ದೆ, ಆದರೆ ಅಂದು ಸ್ವತಃ ಅನುಭವಿಸುವಂತಾಯಿತು! ಇದಾದ ನಂತರ ನಾನು ಕಾವ್ಯ-ನವ್ಯರ ಮನೆಯಿರುವ ಏರಿಯಾಕ್ಕೇ ಕಾಲಿಟ್ಟಿಲ್ಲ!
ಇರಲಿ, ಇತ್ತೀಚೆಗೆ ಹೆಸರುಗಳು ಎಷ್ಟು ವಿಚಿತ್ರವಾಗಿರುತ್ತವೆಂದರೆ ಗಂಡು-ಹೆಣ್ಣು ಒತ್ತಟ್ಟಿಗಿರಲಿ ಮನುಷ್ಯ-ಪ್ರಾಣಿಗೂ ವ್ಯತ್ಯಾಸ ಗೊತ್ತಾವುದಿಲ್ಲ! ಮಹಾನಗರಗಳಲ್ಲಿರುವ ಎಷ್ಟೋ ಆಧುನಿಕ ಕುಟುಂಬಗಳಲ್ಲಿ ಮಕ್ಕಳಿಗೂ, ನಾಯಿಗಳಿಗೂ ಒಂದೇ ರೀತಿಯ ಹೆಸರುಗಳಿರುತ್ತವೆ! ಎಷ್ಟೋ ವೇಳೆ ಮಕ್ಕಳಿಗೆ ಇಡಬೇಕಾದ ಹೆಸರುಗಳನ್ನು ನಾಯಿಗಳಿಗೂ, ನಾಯಿಗಳಿಗೆ ಇಡಬೇಕಾದ ಹೆಸರನ್ನು ಮಕ್ಕಳಿಗೂ ಇಟ್ಟಿರುತ್ತಾರೆ!
ಮನುಷ್ಯ ಮತ್ತು ನಾಯಿಯ ಹೆಸರಿನ ವ್ಯತ್ಯಾಸ ಗೊತ್ತಾಗದೇ ಪೇಚಿಗೀಡಾದ ನನ್ನ ಮಿತ್ರನೊಬ್ಬನ ಅನುಭವ ತುಂಬ ಸ್ವಾರಸ್ಯಕರವಾಗಿದೆ. ಇತ್ತೀಚೆಗೆ ಗಂಡ-ಹೆಂಡತಿ ಇಬ್ಬರೇ ಇರುವ ಆಧುನಿಕ ನವಭಾರತೀಯ ಕುಟುಂಬವೊಂದರ ಮನೆಗೆ ನನ್ನ ಮಿತ್ರ ಹೋಗಿದ್ದ. ಗಂಡ-ಹೆಂಡತಿ ಇಬ್ಬರೂ ತುಂಬ ಅನ್ಯೋನ್ಯವಾಗಿದ್ದರು. ಹೆಂಡತಿ ಪದೇ ಪದೇ ರಾಮು, ರೂಬಿ ಎಂದು ಕರೆಯುತ್ತಿದ್ದರು. ನನ್ನ ಮಿತ್ರ ತುಂಬ ಸರಳವಾಗಿ ರಾಮು ಎಂದರೆ ಗಂಡ, ರೂಬಿ ಎಂದರೆ ನಾಯಿ ಎಂದು ತಿಳಿದಿದ್ದ. ನಂತರ ಮಿತ್ರನಿಗೆ ತಿಳಿದದ್ದೇನೆಂದರೆ ರೂಬಿ ಎಂದರೆ ಗಂಡ ಮತ್ತು ರಾಮು ಎಂದರೆ ನಾಯಿ ಎಂದು! ಈ ಆಧುನಿಕ ನಾರಿ ಗಂಡನನ್ನು ನಾಯಿಯಂತೆಯೂ, ನಾಯಿಯನ್ನು ಗಂಡನಂತೆಯೂ ಕಾಣುತ್ತಿದ್ದ ನಯನ ಮನೋಹರ ದೃಶ್ಯ ನೋಡಿ ಸ್ತಂಭೀಭೂತನಾದ ನನ್ನ ಮಿತ್ರ ಅಲ್ಲಿಂದ ಜಾಗ ಖಾಲಿ ಮಾಡಿದ! ನನ್ನ ಮಿತ್ರನ ದೃಷ್ಟಿಯಲ್ಲಿ ಸದ್ಯ ನಾಯಿಗಳಿಗೆ ಅಚ್ಛೇ ದಿನ ಶುರುವಾಗಿವೆ!
ಕರಾವಳಿ ಭಾಗದ ಹುಡುಗಿಯರ ಹೆಸರುಗಳು ಮನಸೆಳೆಯುವಂತಿರುತ್ತವೆ. ಬಹಳ ಮಂದಿ ಕರಾವಳಿ ಹುಡುಗಿಯರ ಹೆಸರುಗಳು ಶ್ರೀಕಾರದಿಂದ ಆರಂಭವಾಗುತ್ತವೆ ಇಲ್ಲವೇ ಶ್ರೀಕಾರದಿಂದ ಅಂತ್ಯವಾಗುತ್ತವೆ. ಶ್ರೀವಲ್ಲಿ, ಶ್ರೀವಿದ್ಯಾ, ಶ್ರೀವಾಣಿ, ಶ್ರೀದೇವಿ, ಶ್ರೀಗೌರಿ, ಶ್ರೀಲಕ್ಷ್ಮಿ, ಶ್ರೀಲತಾ, ಶ್ರೀಮುಖಿ, ಶ್ರೀಕೃತಿ, ಅನುಶ್ರೀ, ರೂಪಶ್ರೀ, ಶಿಲ್ಪಶ್ರೀ, ವಾಣಿಶ್ರೀ, ಲಕ್ಷ್ಮಿಶ್ರೀ, ಜಯಶ್ರೀ, ಭವ್ಯಶ್ರೀ, ಭಾಗ್ಯಶ್ರೀ, ಹೇಮಶ್ರೀ ಹೀಗೆಯೇ ಹೆಸರಿನ ಪಟ್ಟಿ ಬೆಳೆಯುತ್ತದೆ. ನಮ್ಮ ಸಾಹಿತ್ಯ ಗಂಗಾ ಧಾರವಾಡ ಸಂಸ್ಥೆಯಿಂದ ಇತ್ತೀಚೆಗೆ ವಿದ್ಯಾರ್ಥಿಗಳಿಗಾಗಿ ನಡೆಸಿದ ಸ್ಪರ್ಧೆಯೊಂದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ಶ್ರೀದೇವಿ ಹೆಸರಿನ ಏಳು ಜನ ವಿದ್ಯಾರ್ಥಿನಿಯರು ಸ್ಪರ್ಧಿಸಿದ್ದರು. ಈ ಶ್ರೀದೇವಿ ಎಂಬ ಹೆಸರಿನ ಗೊಂದಲದಲ್ಲಿ ಈ ವಿದ್ಯಾರ್ಥಿನಿಯರಿಗೆ ತಲುಪಬೇಕಿದ್ದ ಪ್ರಶಸ್ತಿ ಪತ್ರ ಮತ್ತು ಪುಸ್ತಕಗಳು ಸಹ ಅದಲು-ಬದಲಾಗಿ ಸ್ವಲ್ಪ ತೊಂದರೆಯಾಯಿತು.
ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿನಿಯೊಬ್ಬಳ ಪೂರ್ಣ ಹೆಸರು ಶ್ರೀಮಂಗಳಗೌರಿ ಇ/ಮ ಶಂಕರನಾರಾಯಣ ಭಟ್, ಬದಿಯಡ್ಕ, ಕಾಸರಗೋಡು, ಕೇರಳ ರಾಜ್ಯ ಎಂದಿತ್ತು. ಶ್ರೀಮಂಗಳಗೌರಿ ನಾವು ಸಾಹಿತ್ಯ ಗಂಗಾ ಧಾರವಾಡ ವತಿಯಿಂದ ನಡೆಸಿದ ಸ್ಪರ್ಧೆಯೊಂದರಲ್ಲಿ ಬಹುಮಾನ ಪಡೆದಿದ್ದಳು. ಈ ಹುಡುಗಿಯ ಪೂರ್ಣ ಹೆಸರನ್ನು ನಾವು ಕೊಡಬೇಕೆಂದಿದ್ದ ಪ್ರಶಸ್ತಿ ಪತ್ರದಲ್ಲಿ ಬರೆಯುವುದು ತುಂಬ ಕಷ್ಟವಿತ್ತು. ಅವಳ ಹೆಸರಿನೊಂದಿಗೆ ಇನಿಷಿಯಲ್ ಹಾಕಿಕೊಡುತ್ತೇವೆಂದರೆ ಅದಕ್ಕೂ ಆ ಹುಡುಗಿ ಒಪ್ಪುತ್ತಿರಲಿಲ್ಲ. ಅವಳ ಹೆಸರು, ಅವಳ ತಂದೆಯ ಹೆಸರು ಮತ್ತು ಊರಿನ ಹೆಸರು ಎಲ್ಲವೂ ಕಡ್ಡಾಯವಾಗಿ ಪ್ರಶಸ್ತಿ ಪತ್ರದಲ್ಲಿ ಇರಲೇಬೇಕು ಎಂಬುದು ಅವಳ ಅಪೇಕ್ಷೆ. ಮೂಲ ಕರ್ನಾಟಕದ ಪ್ರದೇಶವಾದರೂ ಸದ್ಯ ಕೇರಳ ರಾಜ್ಯಕ್ಕೆ ಸೇರಿದ ಕಾಸರಗೋಡು ಜಿಲ್ಲೆಯ ಬದಿಯಡ್ಕ ಗ್ರಾಮದ ಶ್ರೀಯುತ ಶಂಕರನಾರಾಯಣ ಭಟ್ಟರ ಮಗಳಾದ ಶ್ರೀಮಂಗಳಗೌರಿಗೋಸ್ಕರ ನಾವು ಬೇರೆಯೇ ಪ್ರಶಸ್ತಿ ಪತ್ರ ಕೊಡಬೇಕಾಯಿತು.
ಎಂಬತ್ತು-ತೊಂಬತ್ತರ ದಶಕದ ಕನ್ನಡ ಚಲನಚಿತ್ರಗಳ ಹೆಸರುಗಳು ಮನಸ್ಸಿಗೆ ತುಂಬ ಮುದ ನೀಡುತ್ತಿದ್ದವು. ‘ಹೊಸಬೆಳಕು’, ‘ಹಾಲುಜೇನು’, ‘ಚಲಿಸುವ ಮೋಡಗಳು’, ‘ಕಾಮನಬಿಲ್ಲು’, ‘ಜೀವನ ಚೈತ್ರ’, ‘ಚಂದನದ ಗೊಂಬೆ’, ‘ಬೆಂಕಿಯ ಬಲೆ’, ‘ಬಾಡದ ಹೂ’, ‘ಹೊಸ ನೀರು’, ‘ಬೆಳದಿಂಗಳ ಬಾಲೆ’, ‘ಚಕ್ರವ್ಯೂಹ’, ‘ಏಳು ಸುತ್ತಿನ ಕೋಟೆ’, ‘ಒಲವಿನ ಉಡುಗೊರೆ’, ”ಹೃದಯ ಹಾಡಿತು’, ‘ಮಿಂಚಿನ ಓಟ’, ‘ಗೀತಾ’, ‘ಮೂಗನ ಸೇಡು’, ‘ಜನ್ಮ ಜನ್ಮದ ಅನುಬಂಧ’, ‘ಬಂಧನ’, ‘ಮುತ್ತಿನಹಾರ’, ‘ಸೂರ್ಯವಂಶ’, ‘ಯಜಮಾನ’, ‘ಪ್ರೇಮಲೋಕ’, ‘ಹಳ್ಳಿಮೆಷ್ಟ್ರು’, ‘ಮನೆದೇವ್ರು’, ‘ಅಣ್ಣಯ್ಯ’, ‘ಸಿಪಾಯಿ’, ‘ರಥಸಪ್ತಮಿ’, ‘ಮನಮೆಚ್ಚಿದ ಹುಡುಗಿ’, ‘ಜನುಮದ ಜೋಡಿ’, ‘ನಮ್ಮೂರ ಮಂದಾರ ಹೂವೆ’, ‘ಸಿಂಹದ ಮರಿ’, ‘ಅಮೃತವರ್ಷಿಣಿ’ ಮತ್ತು ‘ಚಂದ್ರಮುಖಿ ಪ್ರಾಣಸಖಿ’ ಸೇರಿದಂತೆ ಎಷ್ಟೊಂದು ಆಕರ್ಷಕ ಮತ್ತು ಅರ್ಥಪೂರ್ಣ ಹೆಸರುಗಳು.
ಕನ್ನಡದಲ್ಲಿ ಇತ್ತೀಚೆಗೆ ಬರುತ್ತಿರುವ ಚಲನಚಿತ್ರಗಳ ಹೆಸರುಗಳು ತುಂಬ ವಿಚಿತ್ರವಾಗಿರುತ್ತವೆ. ಕೆಲವು ಚಲನಚಿತ್ರಗಳ ಹೆಸರುಗಳ ಅರ್ಥ ಶಬ್ದಕೋಶದಲ್ಲೂ ಸಿಗುವುದಿಲ್ಲ! ‘ಹೊಡಿ ಮಗಾ’, ‘ಕಡ್ಡಿಪುಡಿ’, ‘ಮೆಂಟಲ್ ಮಂಜ’, ‘ಮೂರನೇ ಕ್ಲಾಸ್ ಮಂಜ ಬಿ.ಕಾಂ. ಭಾಗ್ಯ’, ‘ಪಟ್ರೆ ಲವ್ಸ್ ಪದ್ಮ’, ‘ರಸಗುಲ್ಲ’, ‘ನೀರದೋಸೆ’, ‘ಪೆಟ್ರೋಮ್ಯಾಕ್ಸ್’, ‘ಕಳ್ ಮಂಜಾ’, ‘ಚಮಕ್’, ‘ಜಮಾನಾ’, ‘ಮಟಾಶ್’, ‘ಚಂಡ’, ‘ಸೀನ’, ‘ಉಡ’, ‘ಮಸ್ತಿ’ ಮತ್ತು ‘ಪ್ಯಾರ್ಗೆ ಆಗಬುಟ್ಟೈತೆ’ ತರಹದ ವಿಚಿತ್ರ ಹೆಸರಿನ ಚಲನಚಿತ್ರಗಳು ಬರುತ್ತಿವೆ. ಕರ್ನಾಟಕದ ಬಹುತೇಕ ಮಂದಿಗೆ ಇಂತಹ ಚಿತ್ರಗಳು ಕನ್ನಡದಲ್ಲಿವೆ ಎಂಬ ವಿಚಾರವೇ ಗೊತ್ತಿರುವುದಿಲ್ಲ.
ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಕರ್ನಾಟಕ ಸೇರಿದಂತೆ ಯಾವುದೇ ಪ್ರದೇಶವಾದರೂ ಸರಿ ಹುಡುಗಿಯರ ಹೆಸರುಗಳು ಆಕರ್ಷಕವಾಗಿರುತ್ತವೆ. ಹುಡುಗಿಯರಿಗೆ ತಕ್ಕಂತೆ ಅವರ ಹೆಸರುಗಳಿರುವುದು ತುಂಬ ಕಡಿಮೆ. ಎಲ್ಲೋ ಅಪರೂಪಕ್ಕೆ ಕೆಲವು ಸಲ, ಕೆಲವು ಹುಡುಗಿಯರು ಅವರ ಹೆಸರುಗಳಿಗೆ ತಕ್ಕಂತಿರುತ್ತಾರೆ. ಎಷ್ಟೋ ವೇಳೆ ಹುಡುಗಿಯರ ಹೆಸರುಗಳಿಗೂ, ಅವರ ವ್ಯಕ್ತಿತ್ವಕ್ಕೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ!
ತುಂಬ ದಡ್ಡಿಯಾದ ಹುಡುಗಿಯರಿಗೆ ವಾಣಿ, ವಿದ್ಯಾ, ಶಾರದಾ, ಸರಸ್ವತಿ ಎಂಬ ಹೆಸರಿರುತ್ತದೆ. ಗಜಗಾಮಿನಿಯಂತಿರುವ ಹುಡುಗಿಯರ ಹೆಸರು ಲತಾ, ಲಾವಣ್ಯ, ಭವ್ಯ, ದಿವ್ಯ, ಐಶ್ವರ್ಯ, ಸೌಂದರ್ಯ ಎಂದಿರುತ್ತದೆ. ನೋಡಿದರೆ ಬೆಚ್ಚಿಬೀಳುವಂತಿರುವ ಕೆಲವು ಹುಡುಗಿಯರಿಗೆ ರಂಭಾ, ಊರ್ವಶಿ, ಮೇನಕಾ, ಮೋಹಿನಿ ಎಂಬ ಹೆಸರಿಟ್ಟಿರುತ್ತಾರೆ. ಮೈತ್ರಿ, ಸ್ನೇಹ, ಪ್ರೀತಿ, ಪ್ರೇಮ ಎಂಬ ಹೆಸರಿರುವ ಎಷ್ಟೋ ಹುಡುಗಿಯರು ತುಂಬ ಜಗಳಗಂಟಿಯರಾಗಿರುತ್ತಾರೆ. ಕವಿತಾ, ಕಾವ್ಯ, ಗೀತಾ, ಸಂಗೀತಾ, ಲಲಿತಾ ಎಂಬ ಹೆಸರು ಹೊಂದಿರುವ ಹುಡುಗಿಯರು ಕಾವ್ಯ ಮತ್ತು ಸಂಗೀತದಂತಹ ಲಲಿತ ಕಲೆಗಳ ದ್ವೇಷಿಗಳಾಗಿರುತ್ತಾರೆ. ಸೌಮ್ಯ, ಸುಶೀಲ, ಸುಮತಿ, ಸುಪ್ರಿಯ, ಸುನಂದಾ, ಸುನೀತಾ ಎಂಬ ಹೆಸರಿನ ಹುಡುಗಿಯರು ತಮ್ಮ ಹೆಸರಿಗೆ ತಕ್ಕಂತಿರದೆ ತದ್ವಿರುದ್ಧವಾದ ಗುಣಗಳನ್ನು ಹೊಂದಿರುತ್ತಾರೆ.
ನನಗೆ ವಾಣಿ, ವಿದ್ಯಾ, ದೀಪಾ, ಕಾವ್ಯ, ಕೀರ್ತಿ, ಪ್ರೀತಿ, ಶ್ರುತಿ, ಲತಾ, ಪ್ರಿಯಾ, ಚೈತ್ರ, ಸೀಮಾ, ಸುಧಾ, ಮೇಘಾ, ಗೌರಿ, ಸಿತಾರ, ಸುಸ್ಮಿತ, ಸುಪ್ರಿಯಾ, ಚಂದನಾ, ವಂದನಾ, ಲತಿಕಾ, ಅಂಜಲಿ, ನಿಮಿಷಾ, ಕಾಜಲ್ ಸೇರಿದಂತೆ ಹಲವು ಹೆಸರುಗಳ ಕುರಿತು ವಿಶೇಷ ಒಲವಿತ್ತು ಮತ್ತು ಈಗಲೂ ಆ ಒಲವಿದೆ. ಹುಡುಗಿಯರು ಸುಂದರವಾಗಿದ್ದರೆ ಅಂತಹ ಹುಡುಗಿಯರ ಹೆಸರುಗಳು ಇನ್ನೂ ಆಕರ್ಷಕವಾಗಿ ಕಾಣುತ್ತವೆ ಎಂಬುದು ಕೆಲವರ ಅಂಬೋಣ! ಅದು ಬಹುಮಟ್ಟಿಗೆ ನಿಜವೂ ಹೌದು ಎಂಬುದು ನನ್ನ ಪ್ರಾಮಾಣಿಕ ಅಭಿಪ್ರಾಯ! ಇರಲಿ, ಸದ್ಯಕ್ಕೆ ಹುಡುಗಿಯರ ಹೆಸರಿನ ಬಗೆಗಿನ ಚರ್ಚೆ ಇಲ್ಲಿಗೇ ನಿಲ್ಲಿಸೋಣ ಏಕೆಂದರೆ ಹುಡುಗಿಯರ ಹೆಸರಿನ ಕುರಿತು ಬರೆಯ ಹೊರಟರೆ ಅದೊಂದು ಹೆಬ್ಬೊತ್ತಿಗೆಯೇ ಆದೀತು!