ಸ್ತ್ರೀ ಸಂವೇದನೆಗಳ ಕಥಾ ಸಂಕಲನ ‘ಅವನಿ’

ಮಾಲತಿ ಹೆಗಡೆಯವರು ಬರೆದ ಅತ್ಯಂತ ಆಪ್ತ ಭಾಷೆಯ ‌ಕಿರುಕಥೆಗಳ ಸಂಕಲನ “ಅವನಿ”. ನಮ್ಮ ನೆಲಕ್ಕೆ ಹತ್ತಿರದ, ಜೀವನದ ನಿಜ ಸಂಕಥನಗಳ ಬದುಕಿನಿಂದ ನೇರವಾಗಿ ಆಯ್ದ ವಿಶಿಷ್ಟ ಸ್ತ್ರೀ ಕೇಂದ್ರಿತ ಕಥೆಗಳು ಸಂಕಲನದಲ್ಲಿವೆ. ಸ್ವಾರಸ್ಯಕರ ಕಥೆಗಳು ಸರಳ ಸುಂದರ ನಿರೂಪಣೆಯಿಂದ ಲಕ್ಷ್ಯ ಸೆಳೆಯುತ್ತವೆ. ಪ್ರತಿ ಕಥೆಯಲ್ಲಿ ಜೀವನಾನುಭವದ ಘಟನೆಗಳಿವೆ. ಪಾತ್ರಗಳಂತೂ ಸಹಜ ಚಿತ್ರಣಗಳಿಂದ ಕೂಡಿವೆ. ಪ್ರತಿ ‌ಕಥೆಯೂ ಜೀವನ್ಮುಖಿ… ಕತೆಗಳಲ್ಲಿ ಜೀವನಾಸಕ್ತಿಯನ್ನು ಪ್ರೇರೇಪಿಸುವ ಕಥೆಗಾರ್ತಿಯ‌ ಧೋರಣೆಗಳಿವೆ‌. ಯಾವ ಕಥೆಯೂ ದುರಂತದಲ್ಲಿ ಕೊನೆಗೊಳ್ಳುವುದಿಲ್ಲ.‌ ಹಾಗಂತ‌ ಬದುಕಿನ ಕಟು ವಾಸ್ತವದ ನಂಟಿನಿಂದ ಕಳಚಿಕೊಂಡಿಲ್ಲ. ಸ್ತ್ರೀಕೇಂದ್ರಿತ ಕಥೆಗಳಾದ್ದರಿಂದ ಹೆಣ್ಣು ತನ್ನ ಸಂಸಾರವನ್ನು ನಿಭಾಯಿಸಿ, ಸ್ವತಂತ್ರವಾಗಿ ಬದುಕನ್ನು ಕಟ್ಟಿಕೊಂಡು ಗಂಡ ಮತ್ತು ಮಕ್ಕಳಿಗೆ ನೆಲೆ ಕಾಣಿಸುವ ಧೀಮಂತ ಮಹಿಳೆಯರ ಚಿತ್ರಣವು ಹೆಣ್ಣು ಮಕ್ಕಳ ಸ್ವಾಸ್ಥ್ಯ ಬದುಕಿಗೊಂದು ಪ್ರೇರಣೆಯಾಗಬಲ್ಲ ಕಥೆಗಳಿವೆ‌. ಇಲ್ಲಿನ ಎಲ್ಲ ಮಹಿಳೆಯರು ಜೀವನದಲ್ಲಿ ನೊಂದವರೆ; ಪುರುಷ ಸಮಾಜದಿಂದ ಶೋಷಿತರೆ‌. ಆದರೆ ಈ ಹೆಣ್ಣು ಪಾತ್ರಗಳು ಸ್ವಯಂಪ್ರೇರಣೆಯಿಂದ ಬದುಕು ತಂದೊಡ್ಡುವ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಬದುಕನ್ನು ಕಟ್ಟಿಕೊಂಡವರು. ಅತ್ಯಂತ ಮಹತ್ವದ ಸಂಗತಿಯೆಂದರೆ ಹೆಚ್ಚಿನ ಸ್ತ್ರೀ ಪಾತ್ರಗಳು ತಳಸಮುದಾಯದ ಅನಕ್ಷರಸ್ಥ ಮಹಿಳೆಯರು. ಗಂಡ ಕುಡುಕನೊ, ಬೇಜವಾಬ್ದಾರಿ ಮನುಷ್ಯನೋ ಆಗಿದ್ದರೂ ಸ್ತ್ರೀ ‌ಗೆ ಇರುವ. ವ್ಯವಹಾರ ಪ್ರಜ್ಞೆ ಬದುಕನ್ನು ಒಂದು ಹಳಿಯ ಮೇಲೆ ನೆಲಸುವಂತೆ ಮಾಡುವ ಹೆಣ್ಣಿನಲ್ಲಿ ಸಹಜವಾಗಿರುವ ಕಾಮನ್ ಸೆನ್ಸ್ ಅವರ ಬದುಕುಗಳನ್ನು ನೇರ್ಪುಗೊಳಿಸುತ್ತದೆ. ‘ಕಿರಿದರೊಳ್ ಪಿರಿ ಅರ್ಥವಂ’ ಎಂಬಂತೆ ಈ ಕಥೆಗಳು ಕಿರಿ ಕಥೆಗಳಾದರೂ ದೊಡ್ಡ ಕಥೆಗಳ ಎಲ್ಲ ವೈಶಿಷ್ಟ್ಯಗಳನ್ನು ಮತ್ತು ಲಕ್ಷಣಗಳನ್ನು ಹೊಂದಿವೆ.
ಆಶಾವಾದ ಜೀವನ್ಮುಖಿ ನಿಲುವು ಈ ಕಥೆಗಳ ಮುಖ್ಯ ಲಕ್ಷಣವಾಗಿದೆ‌


ಮೊದಲ ಕಥೆ “ಮಣ್ಣು” ನಲ್ಲಿ ಕಲ್ಲವ್ವ ಗಂಡ ಕೂಲಿ ಕೆಲಸ ಮಾಡಿ ತರುವ ಸಂಪಾದನೆ ಬದುಕಿಗೆ ಸಾಕಾಗದೆ ಅಸ್ಥಿರ ಸಂಪಾದನೆಯ ಕುರಿತು ಬೇಸತ್ತು ತಮ್ಮ ಹಿರಿಯರಿಂದ ತಮ್ಮ ಪಾಲಿಗೆ ಬಂದ, ಈಗ ಪಾಳುಬಿಟ್ಟ ಮೂರು‌ ಎಕರೆ ಜಮೀನಿನಲ್ಲಿ ‌ಬೆಳೆ ಬೆಳೆದು ಸ್ವತಂತ್ರ ‌ಬದುಕನ್ನು ಕಟ್ಟಿಕೊಳ್ಳಲು ಗದ್ದೆಯಲ್ಲಿ ಸ್ವತಃ ಅಗೆದು ಹಣ್ಣಿನ ಗಿಡಗಳನ್ನು ನೆಟ್ಟು ಮನೆತನವನ್ನು ನಡೆಸುವ , ಸುಖೀ ಬದುಕನ್ನು ಕಟ್ಟಿಕೊಳ್ಳುವ ಸ್ವಾವಲಂಬಿ ಮಹತ್ವಾಕಾಂಕ್ಷೆಯ ಹೆಣ್ಣಿನ ಚಿತ್ರಣವಿದೆ.

ಎರಡನೆಯ ಕಥೆ ಸಂಕ್ರಮಣದಲ್ಲಿ ಮಂಗಳಮುಖಿಯರ ಬದುಕಿನ ದಾರುಣ ಕಥೆಯಿದೆ‌, ಆದರೆ ಸ್ವಯಂ ಸ್ವತಂತ್ರ ‌ಬದುಕನ್ನು ಕಟ್ಟಿಕೊಳ್ಳುವ ಮಾದೇವಿ ಎಂಬ ಮಂಗಳಮುಖಿಯ ಹೋರಾಟದ ಬದುಕಿನ ಚಿತ್ರಣವಿದೆ. ಬೇಡಿ ಬದುಕು ಸಾಗಿಸುವುದು ಅವಮಾನಕರ ಎಂದು ಬಗೆದು ಮಾದೇವಿ ಹೊಟೆಲ್ ಮಾಡಿ ಜೀವನ ಸಾಗಿಸುತ್ತಿರುವಾಗ ಕೊರೊನಾ ಅಪ್ಪಳಿಸಿ ಹೊಟೆಲ್ ಮುಚ್ಚುತ್ತದೆ. ಆಗ ಮಾದೇವಿ ಊರಿನಲ್ಲಿ ತನ್ನ ಪಾಲಿನ ಗದ್ದೆಯಲ್ಲಿ ಕಷ್ಟಪಟ್ಟು ಕೆಲಸ ಮಾಡಿ ಜೋಳ ರಾಗಿ ಬೆಳೆಸಿ ನಳನಳಿಸುವಂತೆ ಮಾಡುತ್ತಾಳೆ ಮತ್ತು ಅವಳ ಜೊತೆ ಪಾರು ಎಂಬ ಮಂಗಳಮುಖಿಯೂ ಸೇರಿಕೊಂಡು ಗೌರವದ ಬದುಕಿನ ನೆಲೆಯನ್ನು ಕಂಡುಕೊಳ್ಳುತ್ತಾರೆ.

“ಚೌಕಟ್ಟಿನಾಚೆಯ ಚಿತ್ತಾರ” ಕಥೆಯಲ್ಲಿ ಹುಟ್ಟಾ ಕುರುಡಿಯಾದ ನಳಿನಿ ಬದುಕಿನಲ್ಲಿ ಹೆತ್ತವರ ತಾತ್ಸಾರಕ್ಕೂ ಬಲಿಯಾಗಿ ಬದುಕು ಮೂರಾಬಟ್ಟೆಯಾಗುವ ಸಂದರ್ಭದಲ್ಲಿ ತಾನು ಕಲಿತ ಸಂಗೀತದಿಂದ ಹೊಟ್ಟೆಪಾಡಿನ ಸಂಪಾದನೆ ಮಾಡಿಕೊಳ್ಳುತ್ತಾಳೆ.‌ ವಿವೇಕ ಎಂಬ ಯುವಕ ಅವಳನ್ನು ಪ್ರೀತಿಸಿ ಮದುವೆಯಾಗುತ್ತಾನೆ. ಅವಳಿಗೆ ಮುದ್ದಾದ ಆರೋಗ್ಯವಂತ ಗಂಡು ಮಗು ಹುಟ್ಟುತ್ತದೆ‌. ಹೀಗೆ ಅವಳ ಬದುಕು ಮಂಗಳಕರ ಬಾಹು ತ್ತದೆ.

“ಪಯಣ” ಕಥೆಯಲ್ಲಿ ಕುರಿಕಾಯುವವರ ಅಸ್ಥಿರ ಸದಾ ಊರಿಂದ ಊರಿಗೆ ನಡೆದು, ಹೋದಲ್ಲಿ ಟೆಂಟು ಕಟ್ಟಿ ಕುರಿ ಸಾಕಣೆ ಮಾಡಿ ಬದುಕುವ ದಂಪತಿಗಳ ಕಥೆ ಇದೆ‌. ಈ ಸಂಚಾರಿ ಬದುಕಿನಿಂದ ಬೇಸತ್ತ ಪಾರು ಊರಿನಲ್ಲಿದ್ದ ಹೊಲದಲ್ಲಿ ‌ಕೆಲಸ ಮಾಡಿ ಕುರಿ ಸಾಕಣಿಕೆ ಮಾಡಿ ಸ್ಥಿರ ಬದುಕಿಗೆ ಮರಳಲು ನಿರ್ಧರಿಸುತ್ತಾಳೆ.

” ಕಣ್ಣೇಮುಚ್ಚೇ ಕಾಡೇಗೂಡೆ” ಕಥೆಯಲ್ಲಿ ವೇಶ್ಯಾವಾಟಿಕೆಗೆ ಬಲವಂತವಾಗಿ ನೂಕಲ್ಪಟ್ಟ ಹೆಣ್ಣು ತನ್ನ ಬದುಕನ್ನು ಕಟ್ಟಿಕೊಂಡ ಕಥೆ ಇದೆ‌. ಇಷ್ಟ ಪಟ್ಟು ಮದುವೆ ಆದ ಗಂಡ ಸತ್ತ ನಂತರ ಹೆತ್ತ ಮಗಳ ಬದುಕನ್ನು ನೇರ್ಪುಗೊಳಿಸಲು ಚೈತನ್ಯ ಎಂಬ ಸಂಸ್ಥೆಯನ್ನು ಸೇರಿ ಎಚ್ ಐ ವಿ ಸಂತ್ರಸ್ತ ಮಹಿಳೆಯರ ಆರೋಗ್ಯ ಮತ್ತು ಆತ್ಮಸ್ಥೈರ್ಯ ಬೆಳೆಸುವ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾಳೆ‌‌. ಮಗಳು ರಶ್ಮಿಗೆ ತನ್ನ ಬದುಕು ಗೊತ್ತಾಗದಂತೆ ರೆಸಿಡೆನ್ಶಿಯಲ್ ಶಾಲೆಗೆ ಸೇರಿಸಿ ಬೆಳೆಸುತ್ತಾಳೆ.

” ಉತ್ತರ ಕನ್ನಡದ ಮಲೆನಾಡಿನ ಹವ್ಯಕ ಹುಡುಗಿ ಸಾವಿತ್ರಿ ಬ್ಯಾಂಕ್ ನೌಕರರೊಬ್ಬರ ಜೊತೆ ವಿವಾಹವಾಗುತ್ತದೆ. ಅವಳು ತರಕಾರಿ ಹೂಗಿಡಗಳನ್ನು ನೆಟ್ಟು ಆ ಗಿಡಗಳ ಸಸಿಗಳ ಜೊತೆ ಅನನ್ಯ ಸಂಬಂಧ ಮತ್ತು ಪ್ರೀತಿಯನ್ನು ಹೊಂದಿ ಜೀವನಾಸಕ್ತಿಯನ್ನು ರಕ್ಷಿಸಿಕೊಂಡಿರುತ್ತಾಳೆ‌‌. ಗಂಡ ನಿವೃತ್ತನಾದ ಒಂದೇ ವರ್ಷದಲ್ಲಿ ಆಕಸ್ಮಿಕವಾಗಿ ಮೃತನಾಗುತ್ತಾನೆ.‌ ಅಷ್ಟರಲ್ಲಿ ಮಗ ದೊಡ್ಡವನಾಗಿ ಉದ್ಯೋಗಸ್ಥನಾಗುತ್ತಾನೆ. ಮಗ ಕೈತೋಟದ ಕೆಲಸ ಬೇಡ ಆರಾಮಾಗಿರು ಎಂದು ತಾಯಿಗೆ ಹೇಳಿದರೂ ಕೇಳದೆ ಗಿಡಗಳನ್ನು ಮಗನಂತೆಯೇ ಸಾಕಿ ಪ್ರೀತಿಸುತ್ತಾಳೆ‌. ವಯಸ್ಸಾದ ಅವಳು ಒಂದು ದಿನ ತೋಟದಲ್ಲಿ ಜಾರಿ ಬೀಳುತ್ತಾಳೆ. ಮಗನಿಗೆ ಆ ಸಂಜೆ ಇನ್ನು ಗಿಡ ಬೆಳೆಸಬೇಡ ಎಂದು ಬೈದಾಗ ಹಿತ್ತಲ‌ ಗಿಡವೂ ನಿನ್ನ ಹಾಗೆ ಮಕ್ಕಳೇಯಾ ಯನಗೆ” ಎಂದು ಮಗನಿಗೆ ಹೇಳುತ್ತಾಳೆ‌. ಮಗನಿಗೆ ತನ್ನ ತಪ್ಪಿನರಿವಾಗುತ್ತದೆ.

“ಸಾವಿನಾಚೆಯ ಬದುಕು” ಸೇನೆಗೆ ಸೇರಿದ ಯುವಕನೊಬ್ಬನ ಹೆಂಡತಿಯ ದಾರುಣ ಕಥೆ ಇದೆ. ರಜೆಗೆ ಬಂದ ಸೈನಿಕನಿಗೆ ಯುದ್ಧಕ್ಕೆ ಕರೆ ಬರುತ್ತದೆ ಅವನು ಯುದ್ಧದಲ್ಲಿ ಹೋರಾಟ ಮಾಡಿ ವೀರಮರಣವನ್ನು ಪಡೆಯುತ್ತಾನೆ. ಅವನ ಪತ್ನಿ ಎಷ್ಟೆಲ್ಲ ಕಷ್ಟಗಳನ್ನು ಎದುರಿಸುತ್ತಾಳೆ ಎಂಬುದೇ ಕಥೆ. ಗಂಡನಿಗೆ ಬಂದ ಪರಿಹಾರದಲ್ಲಿ ಅತ್ತೆ ಮಾವ ಪಾಲು ಕೇಳುತ್ತಾರೆ. ಬಾವಮೈದುನಂದಿರು ಅವಳ ಯೌವನದ ಮೇಲೆ ಆಸೆ ತೋರಿಸುತ್ತಾರೆ‌. ತವರು ಮನೆಯಲ್ಲಿ ಮಲತಾಯಿ ಇವಳನ್ನು ತಾತ್ಸಾರವಾಗಿ ನೋಡುತ್ತಾಳೆ‌. ಅವಳು ಊರುಬಿಟ್ಟು ಬೇರೆಡೆ ಮನೆ ಮಾಡಿಕೊಡುವಂತೆ ಅಪ್ಪನಿಗೆ ಹೇಳುತ್ತಾಳೆ. ಮಗಳು ಓದಿ ಎಂ. ಬಿ.ಬಿ.ಎಸ್ ಕಲಿತು ಸೈನ್ಯದಲ್ಲಿ ವೈದ್ಯಾಧಿಕಾರಿಯಾಗಿ ಕೆಲಸಕ್ಕೆ ಸೇರುತ್ತಾಳೆ. ಮಗಳು ತಾನು ಕೆಲಸ ಮಾಡುವ ಊರಾದ ದೆಹಲಿಗೆ ಬರುವಂತೆ ಹೇಳುತ್ತಾಳೆ. ಆದರೆ ತಾಯಿಗೆ ಒಂಟಿ ಬದುಕು ಅಭ್ಯಾಸವಾಗಿದೆ. ಅವಳು ಹೇಳುತ್ತಾಳೆ” ದಾರವಾಡದ ಸುತ್ತಮುತ್ತ ಇರುವ “ವೀರ ವನಿತೆ” ಯರ ಸಂಘ ಕಟ್ತೇನೆ,ನನ್ನ ಹಾಂಗೆ ವೈಧವ್ಯದ ಕಷ್ಟಕ್ಕೆ ಸಿಲುಕಿದವರಿಗೆ ಸಮಾಧಾನ ಹೇಳ್ತೇನೆ‌. ನಮ್ಮಂಥಹ ಮಂದಿ ಬಂದು ಓದುವ ವಾಚನಾಲಯ ಮಾಡ್ತೇನೆ’ ಎಂದಾಗ ಮಗಳು ಹೇಳುತ್ತಾಳೆ”ಯು ಆರ್ ಸಿಂಪ್ಲಿ ಗ್ರೇಟ್ ಅಮ್ಮಾ” ಎನ್ನುತ್ತಾಳೆ.

“.ಮುಗುದೆ” ಕಥೆಯಲ್ಲಿ ದೀಪ್ತಿ ಬಾಲಕಿಯಾಗಿರುವಾಗ ದೊಡ್ಡಪ್ಪ ಅವಳಿಗೆ ಲೈಂಗಿಕವಾಗಿ ಕಿರುಕುಳ ಕೊಡುತ್ತಾನೆ. ಮದುವೆ ಆದ ಮೇಲೆ ಅವಳಿಗೆ ಗಂಡನೊಡನೆ ಲೈಂಗಿಕ ಸಂಪರ್ಕ ಸಾಧ್ಯಾವಾಗುವುದಿಲ್ಲ. ಅದು ಒಂದು ಅಸಹ್ಯ, ಗಲಿಜು ಎಂಬ ಭಾವನೆ‌. ಗಂಡ ಹೆಂಡತಿ ಸಂಬಂಧ ಹಳಿ ತಪ್ಪದಂತೆ ಗಂಡನ ಚಿಕ್ಕಮ್ಮ ಆಪ್ತಸಲಹೆ ನೀಡಿ ಸೊಸೆಯ ಮನಸ್ಥಿತಿಯನ್ನು ಸರಿ ಮಾಡುತ್ತಾಳೆ.

“ನಾನಾರೆಂಬುದು ನಾನಲ್ಲ” ಕಥೆಯಲ್ಲಿ ಶೇಷಿ ಎಂಬ ಹೆಣ್ಣು ಗಂಡ ಸತ್ತ ಮೇಲೆ ಶ್ಮಶಾನ ಕಾಯುವ ಕೆಲಸವನ್ನು ಶೇಷ ಎಂಬ ಗಂಡಿನ ಮಾರು ವೇಷದಲ್ಲಿ ಮುಂದುವರಿಸುತ್ತಾಳೆ‌. ಒಂದು ದಿನ ಮಗನನ್ನು ಶಾಲೆಗೆ ಸೇರಿಸಬೇಕಾದರೆ ‘ಬರ್ತ ಸರ್ಟಿಫಿಕೇಟ್’ ಬೇಕಾಗುತ್ತದೆ. ತಾಲೂಕು ಕಚೇರಿಗೆ ಹೋದಾಗ ಅಲ್ಲಿ ಅವಳನ್ನು ಯಾರೂ ಕ್ಯಾರೆ ಮಾಡುವುದಿಲ್ಲ. ಮೂತ್ರ ಬಾಧೆಯಿಂದ ಬಳಲಿದ ಶೇಷಿ ‌ ಹೆಣ್ಣು ಮಕ್ಕಳ ಶೌಚಾಲಯಕ್ಕೆ ಹೋಗುತ್ತಾಳೆ‌‌‌. ಗಂಡು ವೇಷದ ಇವಳನ್ನು ಗಂಡು ಎಂದು ತಿಳಿದು ಜನರು ಹೊಡೆಯುತ್ತಾರೆ. ಬಡಿದು ಮಾಡುವಾಗ ತಾನು ಉದ್ಯೋಗದ ನೆಪದಲ್ಲಿ ಗಂಡುವೇಷ ಧರಿಸಿದ್ದೆ.. ಎಂಬ ಸತ್ಯ ನುಡಿಯುವ ಶೇಷಿಯ ಬದುಕು ಮುಂದೇನಾಯ್ತು ಎನ್ನುವುದೇ ಕುತುಹಲಕರ..

‘ಅರ್ಥವಾಗದವಳು’ ಕಥೆಯಲ್ಲಿ ಹೆಣ್ಣೇ ಗಂಡನ್ನು ಶೋಷಣೆ ಮಾಡುವ ದುರಂತ ಕಥೆ ಇದೆ‌.

“ಅವರವರ ಭಾವಕ್ಕೆ” ಇಲ್ಲಿ ಬ್ಯಾಂಕ್ ಉದ್ಯೋಗಿ ಹೆಣ್ಣೊಬ್ಬಳು ಮನೆಗೆಲಸ, ಅಡುಗೆ, ಮುಸುರೆ ಪಾತ್ರೆ ತೊಳೆಯುವುದು ಮನೆ ನೆಲ ಒರೆಸುವುದು ಎಲ್ಲ ಕೆಲಸ ಮಾಡಿ ಬ್ಯಾಂಕ್ ನಲ್ಲೂ ಕೆಲಸ ಮಾಡಿ ಹೈರಾಣಾಗುತ್ತಾಳೆ. ಗಂಡ ಮತ್ತು ‌ಬೆಳೆದ ಮಕ್ಕಳಿಗೆ ಅಮ್ಮನಿಗೆ ಸಹಾಯ ಮಾಡಬೇಕೆಂಬ ಮನಸ್ಸೇ ಇರುವುದಿಲ್ಲ. ಅವಳ ಪ್ಲಾಸ್ಟಿಕ್ ಚಪ್ಪಲಿನ ಉಂಗುಷ್ಠ ಹರಿದು ಹೋದಾಗ ಮಗನಲ್ಲಿ ಮಗಳಲ್ಲಿ ಗಂಡನಲ್ಲಿ ಹೇಳಿದರೂ ಅವರು ಆ ಕೆಲಸವನ್ನು ತಾತ್ಸಾರದಿಂದ ನೋಡುತ್ತಾರೆ‌. ಕೊನೆಗೆ ಅವಳೇ ಸಮಗಾರನಲ್ಲಿಗೆ ಹೋಗಿ ರಿಪೇರಿ ಮಾಡಿಕೊಂಡು ಬರುತ್ತಾಳೆ‌. ..

ಕೊನೆಯ ಕಥೆ “ಪಲ್ಲಟ” ಕುಂಬಾರರ ಬದುಕಿನ ಕಥೆ ಇದಾಗಿದೆ‌‌ .ಮೊದಲು ಮಣ್ಣಿನ ಮಡಕೆ ದೀಪಗಳಿಗೆ,ಮನೆಯಲ್ಲಿ ಮಾಡಿದ ಹಂಚುಗಳಿಗೆ ಬೆಲೆ ಇತ್ತು‌ ಇತ್ತೀಚಿಗೆ ಸ್ಟೀಲ್ ಪಾತ್ರೆ ಬಂದು ಮಣ್ಣಿನ ಪಾತ್ರಗಳಿಗೆ ಬೆಲೆ ಇಲ್ಲವಾಗಿದೆ. ಅಂತಹ ಸಂದರ್ಭದಲ್ಲಿ ಹೆಂಡತಿ ಈ ಸಂದಿಗ್ಧ ಪರಿಸ್ಥಿತಿಯನ್ನು ಹೇಗೆ ಚಾಕಕ್ಯತೆಯಿಂದ ನಿಭಾಯಿಸುತ್ತಾಳೆ‌ ಎಂಬ ಸಂಕಥನವಿದೆ‌.

ಬಹುತೇಕ ಕಥೆಗಳಲ್ಲಿ ಸಂಭಾಷಣೆ ಹೆಚ್ಚಾಗಿ ಬಯಲುಸೀಮೆಯ ಪ್ರದೇಶದ ಭಾಷೆ ಬಳಕೆಯಾದರೆ,ಒಂದು ಕಥೆಯಲ್ಲಿ ಮಲೆನಾಡಿನ ಹವ್ಯಕ ಭಾಷೆಯ ಬಳಕೆ ಇದೆ‌. ಒಂದು ಕಥೆಯಲ್ಲಿ ಕುಮಟಾ ಕಡೆಯ ಗೌಡರ ಭಾಷೆ ಸಮರ್ಥವಾಗಿ ಬಳಕೆಯಾಗಿದೆ. ಕಥೆಗಳು ಸೊಗಸಾಗಿ ಜೀವಂತಿಕೆಯಿಂದ ಕೂಡಿದೆ‌.
ಮಾಲತಿ ಹೆಗಡೆಯವರ ಈ ಕೃತಿ ಮೊದಲ ಕಥಾಸಂಕಲನವಾದರೂ ಪ್ರಬುದ್ಧವಾಗಿದೆ. ಸ್ತ್ರೀ ವಾದದ ಆರೋಗ್ಯಕರ ಆಯಾಮವನ್ನು ನಾವು ಈ ಕಥೆಗಳಲ್ಲಿ ಕಾಣುತ್ತೇವೆ‌. ಸಾಹಿತ್ಯಾಸಕ್ತರು
ಓದಬಹುದಾದ ಕಥೆಗಳು‌ ಇವು.

-ಉದಯಕುಮಾರ ಹಬ್ಬು

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter