ಬಂದರೆ – ಕೊಡುತ್ತೇನೆ


‘ ಗುಂಡೂರಾವ್ ‘ ಗುಂಡಣ್ಣನಾಗಿ ಬದಲಾಗಲು ಬಹಳ ವರ್ಷಗಳು ಬೇಕಾದವು. ಅದೇ ರೀತಿ ‘ ರಂಗನಾಥ ‘ ರಂಗಣ್ಣ ಎಂದಾಗಲು ಅಷ್ಟೇ ವರ್ಷಗಳು ಗತಿಸಿದವು. ಗುಂಡೂರಾವ್ ಗುಂಡಣ್ಣನಾಗಿ ಘನ ಕರ್ನಾಟಕ ಸರಕಾರದ ಸೇವೆಯಿಂದ ವಯೋಮಿತಿಯ ಕಾರಣ ನಿರ್ವತ್ತಿ ಹೊಂದಿದನು. ಅದೇ ತರಹ ರಂಗನಾಥ ರಂಗಣ್ಣನಾಗಿ ಸೇಮ್ ಘನ ಸರಕಾರದಲ್ಲಿ ಮಹಾನ್ ಸೇವೆ ಸಲ್ಲಿಸಿ ವಯೋಮಿತಿಯ ಕಾರಣದಿಂದ ಪಿಂಚಣಿದಾರನಾದ ಪಾಪ ! ಅವರಿಬ್ಬರೂ ರಿಟೈರ್ ಆಗದೆ ಇರಲು ಅವರೇನು ‘ 24X7 ಜನ ಸೇವೆ ‘ಯಲ್ಲಿ ತೊಡಗಿದ, ತಲೆ ತಲಾಂತರದಿಂದ ಅಥವಾ ವಂಶ ಪಾರ್ಯಂಪರವಾಗಿ ‘ ರಾಜಕಾರಣ ‘ ಮಾಡಿಕೊಂಡು ಬಂದ ರಾಜಕಾರಣಿಗಳೇ! ಅಥವಾ ರಿಟೈರ್ಮೇಂಟೀ ಇಲ್ಲದ ಪದವಿಗಳ ನಿರ್ವಹಣೆ ಮಾಡಿದ ಮಹಾನುಭಾವರೆ?. ಇಲ್ಲ… ಇಲ್ಲ…ಎಲ್ಲಾ ಶ್ರೀ ಸಾಮಾನ್ಯರಂತೆ ಅರವತ್ತು ದಾಟಿದ ಕೂಡಲೇ ರಿಟೈರ್ ಆಗಿ ಮನೆ ದಾರಿ ಹಿಡಿದರು ಬೇರೆ ದಾರಿ ಇಲ್ಲದೆ…

ರಿಟೈರ್ ಆದ ಮೇಲೆ ಸುಮ್ಮನಿರದೆ ‘ ಕನ್ನಡ ತಾಯಿ ‘ ಯ ಸೇವೆಯಲ್ಲಿ ಕಾಲ ಕಳೆಯಬೇಕೆಂಬ ತೀರ್ವ ಹಂಬಲ ಧುತ್ತೆಂದು ಬಂದು ಬಿಡ್ತು ಗುಂಡಣ್ಣನಿಗೆ. ಏನೂ ಮಾಡಲಾರದೆ ಸುಮ್ಮನೆ ಇದ್ದು ಅವರಿವರಿಗೆ ‘ ಉಚಿತ ಸಲಹೆ ‘ ನೀಡುತ್ತಾ ಕಾಲ ಕಳೆಯುವ ಗುರಿ ರಂಗಣ್ಣನದು. ಒಂದು ದಿನ ಸಂಜೆ ‘ ಪಬ್ಲಿಕ್ ಪಾರ್ಕ್ – ಪ್ರೈವೇಟ್ ಪಾರ್ಕ್ ‘ ಆಗಿ ಬದಲಾಗುವ ಹೊತ್ತಿನಲ್ಲಿ ‘ ಬೋಳು ತಲೆಯ ಒಡೆಯ ‘ ಗುಂಡಣ್ಣ ತನ್ನ ಮನದಲ್ಲಿನ ಇಂಗಿತವನ್ನು ಹೊರ ಹಾಕಿದ ಗೆಳೆಯನ ಬಳಿ. ತಾನು ಕಾಲೇಜಿನ ದಿನಗಳಲ್ಲಿ ಮತ್ತು ಉದ್ಯೋಗಕ್ಕೆ ಸೇರಿದ ಹೊಸತರಲ್ಲಿ ಬರೆದು ( ಎಲ್ಲೂ ಪ್ರಕಟವಾಗದ ಕಾವ್ಯ ಭಂಡಾರ! ) ‘ ಭೂಗತವಾದ ‘ ಕವನಗಳನ್ನು ಮತ್ತೆ ಮೇಲಕ್ಕೆತ್ತಿ ತಾನು ಮತ್ತೊಮ್ಮೆ ಕವಿಯಾಗುವದು ತನ್ನ ಇಚ್ಛೆ ಎಂದಾಗ ಪಾರ್ಕಿನ ಒಳಗೆ ಬರುತ್ತಿರುವ ಪ್ರೇಮಿಗಳನ್ನು ತದೇಕವಾಗಿ ನೋಡುತ್ತಿದ್ದ ರಂಗಣ್ಣ ಮಿತ್ರನ ಮಾತು ಕೇಳಿ ಅರೆ ಕ್ಷಣ ಬೆಚ್ಚಿ ಬಿದ್ದ! ಎದೆಗೆ ಬಿದ್ದ ನಾಲ್ಕು ಅಕ್ಷರಗಳನ್ನೆಲ್ಲ ಜೋಡಿಸಿ ಓದುವ – ಬರೆಯುವ ಹವ್ಯಾಸವನಿಟ್ಟುಕೊಂಡು ರಿಟೈರ್ ಆದವರೆಲ್ಲ ಈಗ ‘ ಜನಪ್ರಿಯ ‘ ಕವಿಗಳಾಗುವ ಭ್ರಾಂತಿಗೆ ಒಳಗಾಗುತ್ತಿರುವುದು ಇವೊತ್ತಿನ ಹೊಸಾ ಟ್ರೆಂಡ್…

” ಈಗ ಮನೆಗೊಬ್ಬ ಕವಿ, ಓಣಿಗೆ ನಾಲ್ಕು, ಊರಿಗೆ ಐವತ್ತು ಕವಿಗಳು ಭಸ್ಮಾಸುರರಂತೆ ಈ ಕಲಿಗಾಲದಲ್ಲಿ ಹುಟ್ಟಿಕೊಳ್ಳುತ್ತಿದ್ದಾರೆ. ಕೇಳುವ ಕೇಳುಗರಿಲ್ಲ – ಓದುವ ಓದುಗರಿಲ್ಲ. ಯಾವುದಾದರೂ ಸರಕಾರಿ ಅನುದಾನಿತ ಸಾಹಿತ್ಯ ಸಭೆಗಳಲ್ಲಿ ಅಥವಾ ತಮ್ಮ ಕುಲ ಜಾತಿಯ ಸಮ್ಮೇಳನಗಳಲ್ಲಿ ಕವನ ವಾಚನ ಮಾಡಿದರೆ ಒಂದು ಶಾಲು ಜೊತೆಗೊಂದು ಸರ್ಟಿಫಿಕೇಟ್ ಇಲ್ಲಾ ಮೋಮೆಂಟೋ ಸಿಗಬಹುದೇನೋ ಅಷ್ಟೇ ಈಗಿನ ಕವಿಗಳಿರುವ ‘ ಮಾರ್ಕೆಟ್ ವ್ಯಾಲ್ಯೂ ‘…ಈ ಸಾಹಿತ್ಯ ರಂಗದಲ್ಲಿ ಬರುವುದಕ್ಕಿಂತ ಹೋಗುವುದೇ ಜಾಸ್ತಿ!… ತಾಯಿ ಭುವನೇಶ್ವರಿಯು ನೆಲೆಸಿದ ಈ ನೆಲದಲ್ಲಿ ಕೇವಲ ಕೆಲವು ಕವಿ ಪುಂಗವರು ಮಾತ್ರ ‘ ಹಸನಾದ ಬೆಳೆ ‘ ತೆಗೆಯುವರು. ಉಳಿದವರೆಲ್ಲ ‘ ಕಾಂಗ್ರೆಸ್ ಹುಲ್ಲಿನಂತೆ ‘ ಯದ್ವಾ – ತದ್ವಾ ಬೆಳೆದು ದಾರಿಗೆ ಅಡ್ಡ ಬರುವರು…ನೀನು ಯಾವ ವರ್ಗದ ಪಂಗಡದಲ್ಲಿ ಬರುತ್ತಿಯೋ ರಾತ್ರಿಯೆಲ್ಲಾ ನಿಧಾನವಾಗಿ ಯೋಚಿಸು…” ಎಂದು ಗೆಳೆಯನಿಗೆ ಗುಡ್ ನೈಟ್ ಹೇಳಿ ಮನೆಗೆ ನಡೆದ ರಂಗಣ್ಣ. ಆ ರಾತ್ರಿ ಇಬ್ಬರಿಗೂ ‘ ಬ್ಯಾಡ್ ನೈಟ್ ‘. ಕಾರಣ ರಂಗಣ್ಣ ರಾತ್ರಿಯೆಲ್ಲ ಅಸ್ತಮಾದಿಂದ ಕೆಮ್ಮುತ್ತಾ ಕಾಲ ಕಳೆದರೆ, ಮಿತ್ರ ಗುಂಡಣ್ಣ ತಾನು ಮತ್ತೊಮ್ಮೆ ಕವಿಯಾಗುವ ಆಸೆ – ಅವಸರದಿಂದ ಪಾಪ ರಾತ್ರಿ ನಿದ್ದೇನೆ ಮಾಡಲಿಲ್ಲ!

ಅಪ ರಾತ್ರಿಯಲ್ಲಿ ಪೆನ್ನು ಹಿಡಿದು ಬಿಳಿ ಹಾಳೆಯ ಮೇಲೆ ಅಕ್ಷರ ಬೀಜಗಳನ್ನು ಬಿತ್ತಲು ಯತ್ನಿಸಿದ. ಆದರೆ ಆಗಲಿಲ್ಲ ಪಾಪ ಗುಂಡಣ್ಣನಿಗೆ! ಬರೆಯಲು ‘ ಮೂಡ್ ‘ ಬರಲು ಕವಿಯ ಎದೆಯೊಳಗೆ ಅಡಗಿದ ‘ ಸುನಾಮಿಯನ್ನು ‘ ಹೊರ ಸೆಳೆಯಲು ತನ್ನ ಅಪ್ರಕಟಿತ ನೂರೆಂಟು ಕವಿತೆಗಳ ಗುಚ್ಛವನ್ನು ‘ ಅಟ್ಟದ ‘ ಮೇಲಿಂದ ಕೆಳಗಿಳಿಸಿ ಕಣ್ಣಾಡಿಸಿದ ನಿಧಾನವಾಗಿ ಒಂದೊಂದಾಗಿ… ಒಂದು ತನ್ನ ಸ್ವ – ರಚಿತ ದಿ ಬೆಸ್ಟ್ ಕಾವ್ಯ ( ಗುಂಡಣ್ಣನ ದೃಷ್ಟಿಯಲ್ಲಿ ! ) ‘ ನಾನು ಬರೆಯುತ್ತೇನೆ ಕವನ…’ ಎನ್ನುವದನ್ನು ಟೇಬಲ್ ಮೇಲೆ ಹರಡಿ ಮತ್ತೊಮ್ಮೆ ಮಗದೊಮ್ಮೆ ಓದಿ ಸಂತೃಪ್ತನಾದ ಗುಂಡಣ್ಣ. ಕವನದ ಸಾಲುಗಳು ಈ ಕೆಳಗಿನಂತೆ ಇವೆ. ನೀವೂ ಓದಿ ಬೇಕಾದರೆ…

ಕವನದ ಶೀರ್ಷಿಕೆ:

‘ ನಾನು ಬರೆಯುತ್ತೇನೆ ಕವನ..’

” ನಾನು ಬರೆಯುತ್ತೇನೆ ಕವನ
ಬಾನಾಡಿ ಹಕ್ಕಿಗಳ ಮೇಲೆ
ಹಾರುವ ಪಕ್ಷಿಗಳ ಮೇಲೆ.

ನಾನು ಬರೆಯುತ್ತೇನೆ ಕವನ
ಹಸು ಎತ್ತುಗಳ ಮೇಲೆ
ಬೆಕ್ಕು ನಾಯಿಗಳ ಮೇಲೆ.

ನಾನು ಬರೆಯುತ್ತೇನೆ ಕವನ
ಹೀರೋ ಹೊಂಡಾ ಮೇಲೆ
ಬಜಾಜ್, ಲೂನಾ ಮೇಲೆ.

ನಾನು ಬರೆಯುತ್ತೇನೆ ಕವನ
ಡಬಲ್ ಡೆಕ್ಕರ್ ಬಸ್ಸಿನ ಮೇಲೆ
ಫಿಯಟ್ ಕಾರಿನ ಮೇಲೆ.

ನಾನು ಬರೆಯುತ್ತೇನೆ ಕವನ
ಸಿನಿಮಾ ತಾರೆಗಳಾದ ಕಲ್ಪನ
‘ ಆರತಿ – ಭಾರತಿ ‘ ಮೇಲೆ “

ಹೀಗೆ ಸಾಗುತ್ತದೆ ಗುಂಡಣ್ಣನ ಕಾವ್ಯ ಲಹರಿ ಆದಿ ಅಂತ್ಯವಿಲ್ಲದೆ…
ತನ್ನ ಅಮೋಘ ಕವಿತೆಗಳನ್ನು ಕತ್ತಲಿನಿಂದ ಬೆಳಕಿಗೆ ತಂದು ಓದುಗರ ಮುಂದೆ ಇಡಬೇಕೆಂಬ ಧೃಢ ಸಂಕಲ್ಪ ಕೈಗೊಂಡ ಕಾವ್ಯ ಗೊಂಚಲಿಗೆ ( ಕವಿತೆಗಳ ಸಂಕಲನಕ್ಕೆ ) ‘ ನಾನು ಬರೆಯುತ್ತೇನೆ ಕವನ…’ ಎನ್ನುವ ಶಿರೋನಾಮೆ ಇಡಲು ನಿರ್ಧರಿಸಿದ ಗುಂಡಣ್ಣ.

ಆ ಕವಿತೆಗಳ ಸಂಕಲನದ ‘ ಅರ್ಪಣೆ ‘ ಯನ್ನು ಸ್ವೀಕರಿಸಲು ಯಾರೂ ಸಿಗಲಿಲ್ಲ ಪಾಪ! ಇನ್ನು ಅದನ್ನು ಪ್ರಕಟಿಸಿ – ಮುದ್ರಿಸುವ ಸಾಹಸಕ್ಕೆ ಯಾರೊಬ್ಬರು ಮುಂದೆ ಬರಲಿಲ್ಲ. ಹೀಗಾಗಿ ಯುವಕನಾಗಿದ್ದಾಗ ಬರೆದ ಕವನಗಳನ್ನು ಈಗ ವಿಶ್ರಾಂತ ವಯಸಿನಲ್ಲಿ ಮಧ್ಯಮ ವರ್ಗಕ್ಕೆ ಸೇರಿದ ಪಿಂಚಣಿದಾರ ಗುಂಡಣ್ಣ ‘ ಜನಪ್ರಿಯ ಕವಿ ‘ ಎಂದು ಕರೆಸಿಕೊಳ್ಳಬೇಕೆಂಬ ಅತ್ಯಾಸೆಯ ಧೃಡ ನಿರ್ಧಾರದಿಂದ ತನ್ನ ಸ್ವಂತ ಖರ್ಚಿನಲ್ಲೇ ಅಚ್ಚು ಹಾಕಿಸಲು ಮುಂದಾದ ಕುಟುಂಬ ಸದಸ್ಯರೆಲ್ಲ ಒಕ್ಕೊರಲಿನಿಂದ ಬೇಡ ಬೇಡ ಎಂದು ಪರಿಪರಿಯಾಗಿ ಬೇಡಿಕೊಂಡರೂ ಕೂಡ!

ತನ್ನ ಒಂದು ತಿಂಗಳ ಪಿಂಚಣಿಯನ್ನು ಸಾಹಿತ್ಯ ಸೇವೆಗೆ ಮುಡುಪಿಟ್ಟರೆ ತಾನು ಈ ಅರವತ್ತರಲ್ಲೂ ಹೆಸರಾಂತ ಕವಿ ಎಂದು ಸಮಾಜದಲ್ಲಿ ಗೌರವ ಪಡೆಯುವುದರ ಜೊತೆ ತನ್ನ ಕವಿತೆಗಳ ಸಂಕಲನ ಮಾರ್ಕೇಟಿನಲ್ಲಿ ‘ ಬಿಸಿ ಬಿಸಿ ‘ ದೋಸೆಯಂತೆ ಖರ್ಚಾಗಿ ತನ್ನ ಇಡು ಗಂಟು ವಾಪಾಸು ಬರುವದು ಗ್ಯಾರಂಟಿ ಎಂದು ಐದನೆಯ ಕ್ಲಾಸ್ ಪಾಸಾದ ‘ ವಿದ್ಯಾವಂತ ‘ ಹೆಂಡತಿಯನ್ನು ನಂಬಿಸಿ ವಿಶ್ವಾಸವನ್ನು ಗಳಿಸಿಕೊಂಡ ಗುಂಡಣ್ಣ. ಮತ್ತೆ ತನ್ನ ಕವಿತೆಗಳ ಸಂಕಲನಕ್ಕೆ ಏನಾದರೂ ಹಣದ ರೂಪದಲ್ಲಿ ಪ್ರಶಸ್ತಿ ಸಿಕ್ಕರೆ ಅದನ್ನು ಪ್ರತಿಶತ ನೂರರಷ್ಟು ಹೆಂಡತಿಗೆ ಕೊಡುಗೆಯನ್ನಾಗಿ ನೀಡುವ ಭರವಸೆ ಬೇರೆ ನೀಡಿದ. ಅಲ್ಲದೇ ಬರುವ ದೀಪಾವಳಿ ಹಬ್ಬಕ್ಕೆ ಒಂದು ಹೊಸ ರೇಷ್ಮೆ ಸೀರೆ ಕೊಡಿಸುವ ಅಭಿಲಾಷೆ ವ್ಯಕ್ತಪಡಿಸಿದ. ಹೆಂಡತಿ ‘ ರೇಷ್ಮೆ ಸೀರೆಯ ‘ ಅಸ್ತ್ರಕ್ಕೆ ಬಲಿಯಾಗಿ ಕೊನೆಗೆ ಸಮ್ಮತಿ ಕೊಟ್ಟಬಳಿಕ ರಂಗಣ್ಣನ ಅಮೂಲ್ಯ ಮತ್ತು ಸಮಯೋಚಿತ ‘ ಉಚಿತ ‘ ಸಲಹೆಯ ಮೇರೆಗೆ ಸ್ವಂತ ಪ್ರಕಾಶನದ ಸಾಹಸಕ್ಕೆ ಕೈ ಹಾಕಿಯೇ ಬಿಟ್ಟ ಗುಂಡಣ್ಣ…

ಯಾರ ಪುಸ್ತಕಗಳನ್ನು ಅವರೇ ಮಾರ್ಕೆಟಿಂಗ್ ಮಾಡುವದು ಎಲ್ಲಾ ಸಾಹಿತಿಗಳ ಇವೊತ್ತಿನ ಆದ್ಯ ಕರ್ತವ್ಯ. ಪುಸ್ತಕ ಬಿಡುಗಡೆಯ ಸಮಾರಂಭ ಅದ್ದೂರಿಯಾಗಿ ನಡೆಯಬೇಕು ಮತ್ತು ಅದರ ಸುದ್ದಿ ಲೋಕಲ್ ಚಾನೆಲ್ ಹಾಗೂ ಪತ್ರಿಕೆಗಳಲ್ಲಿ ( ಮುಖ್ಯವಾಗಿ ಸ್ಥಳೀಯ …) ಬರಬೇಕು ಆಗಲೇ ತಾನೊಬ್ಬ ಪ್ರಖ್ಯಾತ ಕವಿಯೆಂದು ನಗರದ ಜನತೆಗೆ ಗೊತ್ತಾಗಬೇಕು. ಇದು ಆಪ್ತ ಮಿತ್ರ ರಂಗಣ್ಣನಿಂದ ಗುಂಡಣ್ಣನಿಗೆ ಹರಿದು ಬಂದ ಉಪದೇಶದ ಸಾರಾಂಶ.

ಪುಸ್ತಕ ಬಿಡುಗಡೆಗಾಗಿ ಒಂದು ಭಾನುವಾರ ಜನಪ್ರಿಯ ಹೋಟೆಲಿನ ಸಭಾಂಗಣವನ್ನು ಮೊದಲೇ ಬುಕ್ ಮಾಡಬೇಕು. ಹಲವು ಹತ್ತು ಸಂಘ – ಸಂಸ್ಥೆಗಳ ಪದಾಧಿಕಾರಿಗಳನ್ನು ಆಹ್ವಾನಿಸಬೇಕು. ಸಮಾರಂಭಕ್ಕೆ ( ನ ) ಗಣ್ಯ ಸಾಹಿತಿಗಳನ್ನು ಮತ್ತು ಜನ ಹೆಚ್ಚು ಸೇರಲು ‘ ರಾಜಕೀಯ ಪುಢಾರಿ ‘ ಗಳ ನೆರವು
ಅವಶ್ಯವಾಗಿ ಕೋರಬೇಕು. ಏಕೆಂದರೆ ಅವರ ಜೊತೆ ಹಿಂಬಾಲಕರ ದಂಡು ಬರುತ್ತದೆ. ಬರೀ ಸಾಹಿತಿಗಳಿಂದ – ಸಾಹಿತ್ಯ ಪ್ರೇಮಿಗಳಿಂದ ಎಂದೂ ಸಭಾಂಗಣ ತುಂಬುವುದಿಲ್ಲ ಎಂಬ ನಗ್ನ ಸತ್ಯ ರಂಗಣ್ಣನಿಗೆ ಗೊತ್ತು. ಇಂತಹ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಅನುಭವವಿರುವ ಪ್ರಖ್ಯಾತ ಸಾಹಿತಿಯನ್ನು (ಮಧ್ಯವರ್ತಕನನ್ನು!..) ಗೊತ್ತು ಮಾಡಿದರು ಗೆಳೆಯರಿಬ್ಬರು ಸೇರಿ. ಅವರೇ ಸಭೆಯನ್ನು ಸಂಪೂರ್ಣವಾಗಿ ನಡೆಸಿಕೊಡುತ್ತಾರೆ… ಹೂವು – ಶಾಲುಗಳ ಏರ್ಪಾಡು ಮಾಡುತ್ತಾರೆ…ಮೀಡಿಯಾ ಮಾಧ್ಯಮದವರಿಗೆ ‘ ಸಮಾರಂಭದ ಸವಿ ನೆನಪಿನ ಕಾಣಿಕೆ ‘ ಕೊಡುತ್ತಾರೆ… ಹಾಡಿ ಹೊಗಳುವ ಭಟ್ಟಂಗಿ ಸಾಹಿತಿಗಳ ಎರವಲು ಸೇವೆಯನ್ನು ಒದಗಿಸುತ್ತಾರೆ… ನೆರೆದ ಸಾಹಿತ್ಯ ಆಸಕ್ತರಿಗೆ ಒಳ್ಳೆಯ ಆಸನದ ಜೊತೆ ಭರ್ಜರಿ ಭೋಜನ ಕೂಟವನ್ನು ಕೂಡ ಏರ್ಪಡಿಸುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಪುಸ್ತಕ ಬಿಡುಗಡೆಯ ಸಮಯದಲ್ಲಿ ಜನರನ್ನು ( ಬಾಡಿಗೆ ಸಾಹಿತ್ಯ ಪ್ರೇಮಿಗಳನ್ನು! ) ಕರೆ ತಂದು ಸಭೆಗೆ ಶೋಭೆ ತರುತ್ತಾರೆ. ಹೀಗಾಗಿ ಇಂತಹ ಹಲವು ಸೇವೆಗಳನ್ನು ಒಳಗೊಂಡ ನಿರ್ದಿಷ್ಟ ‘ ಪ್ಯಾಕೇಜಿಗೆ ‘ ಒಪ್ಪಿಗೆ ನೀಡಿದರು ಮಿತ್ರರು. ಎಲ್ಲವನ್ನೂ ಆಯೋಜಕರು ಸ್ವತಃ ನೋಡಿಕೊಳ್ಳುತ್ತಾರೆ, ಸುಮ್ಮನೆ ಅಂದು ಸಮಾರಂಭಕ್ಕೆ ‘ ಕುಚು ಕುಚು ‘ ಗೆಳೆಯರು ತಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಸಮಯಕ್ಕೆ ಹಾಜರಾದರೆ ಸಾಕು!

ಪ್ರಸಿದ್ಧಿ ಪಡೆಯದ ಕನ್ನಡ ಕವಿಗಳೇ ಉಳಿದಿಲ್ಲ ಈಗ ‘ ನಮ್ಮ ಕರುನಾಡಿ ‘ ನಲ್ಲಿ ( ಕರ್ನಾಟಕದಲ್ಲಿ!). ಎಲ್ಲರೂ ಒಂದಲ್ಲಾ ಒಂದು ರೀತಿಯ ಹೆಸರಾಂತ ಕವಿಗಳೇ…ಕೆಲವರು ತಮ್ಮ ಕವನಗಳನ್ನು ರಾಜ್ಯ, ಜಿಲ್ಲಾ ಮಟ್ಟದ ಅಥವಾ ಕೊನೆಗೆ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಿಸಲು ಯಶಸ್ವಿಯಾದರೆ, ಹೆಚ್ಚಿನವರು ಡಿಜಿಟಲ್ ಮೀಡಿಯಾ ಅಂದರೆ ಬ್ಲಾಗ್, ಟೆಲಿಗ್ರಾಂ, ಟ್ವಿಟರ್, ಫೇಸ್ ಬುಕ್ ಅಥವಾ ವಾಟ್ಸ್ ಅಪ್ ಮುಖಾಂತರ ತಮ್ಮ ಕವಿತೆಗಳನ್ನು ಹಂಚಿ ಓದುಗರ ಸಂತಸವನ್ನು ಹೆಚ್ಚಿಸುವರು ( ಕಸಿಯುವರು! ). ಸುತ್ತಮುತ್ತಲಿನ ಎಲ್ಲ ಹಿರಿ – ಕಿರಿ ಕವಿಗಳ ಫೋನ್ ನಂಬರುಗಳನ್ನು ತೆಗೆದುಕೊಂಡು ಫೋನ್ ಮಾಡಿ ಸಭೆಗೆ ಆಹ್ವಾನಿಸಿದ ಗುಂಡಣ್ಣ. ನೂರಾರು ವಾಟ್ಸ್ ಅಪ್ ಗ್ರೂಪಿನಲ್ಲಿ ಆಹ್ವಾನ ಪತ್ರಿಕೆ ಹಾಕಿ ತಪ್ಪದೇ ಬರಬೇಕೆಂದು ವಿನಂತಿಸಿದ. ಸಾಮಾನ್ಯರು ಆಗಲಿ ಬರುತ್ತೇವೆ ಎಂದು ಹೇಳಿದರೆ ಕವಿ ಪುಂಗವರಿಗೆ ಮಾತ್ರ ‘ ಬಂದರೆ – ಕೊಡುತ್ತೇನೆ ‘ ಪುಸ್ತಕವನ್ನು ಉಚಿತವಾಗಿ ಎನ್ನುವ ‘ ಸ್ಪೆಷಲ್ ಪ್ಯಾಕೇಜ್ ‘ ಅಡಿಯಲ್ಲಿ ಭರವಸೆ ನೀಡಿದ ಗುಂಡಣ್ಣ. ಎಷ್ಟಾದರೂ ಕವಿಗಳು ಕವಿಗಳೇ ಆಗುತ್ತಾರೆ ಹೊರತು ಸಾಮಾನ್ಯ ಓದುಗರಂತೂ ಆಗುವದಿಲ್ಲ… ಬರುತ್ತೇವೆ ಎಂದು ‘ ಪ್ರಾಮಿಸ್ ‘ ಮಾಡಿದ ಆತ್ಮೀಯ ಕವಿಗಳು ಕೈ ಕೊಟ್ಟರು. ಇನ್ನು ಬಂಧುಗಳು, ಸ್ನೇಹಿತರು ಗತ್ಯಂತರವಿಲ್ಲದೆ ಬಂದು ನಿರ್ಭಾವ ಮುಖ ಹೊತ್ತು
ವೇದಿಕೆಯತ್ತ ಕಣ್ಣು ಹಾಯಿಸದೆ ತಮ್ಮ ತಮ್ಮ ಮೊಬೈಲ್ ಪ್ರಪಂಚದಲ್ಲಿ ಮುಳುಗಿದರು.

ಗುಂಡಣ್ಣ ಕನ್ನಡಾಂಬೆಯ ಮಾನಸ ಪುತ್ರ…ಅವರ ‘ ನಾನು ಬರೆಯುತ್ತೇನೆ ಕವನ.. ‘ ಶಿರೋನಾಮೆಯ ಕಾವ್ಯ ಸಂಕಲನ ಓದುವದೇ ಒಂದು ಸಂಭ್ರಮ … ಈ ಸಂಕಲನ ಪುಸ್ತಕ ಲೋಕದಲ್ಲಿ ಹೊಸ ಸಂಚಲನೆ ಮೂಡಿಸುವಲ್ಲಿ ಯಾವುದೇ ಸಂದೇಹವಿಲ್ಲ…
ಕಾವ್ಯ ಲೋಕಕ್ಕೆ ಅವರ ‘ ರೀ ಅರಂಗೆಟ್ರಂ ‘ ( ಅರವತ್ತರ ಅರಳು ಮರಳು ವಯಸ್ಸಿನಲ್ಲಿ!)
‘ ತಾಯಿ ಭುವನೇಶ್ವರಿ ‘ ಮಾಡಿದ ಪುಣ್ಯ…ಎಂದು ಗುಂಡಣ್ಣನನ್ನು ವೇದಿಕೆಯ ಮೇಲೆ ಹಾಜರಿದ್ದ ( ತಮಗೆ ಗುಂಡಣ್ಣ ವೈಯುಕ್ತಿಕವಾಗಿ ಮಾಡಿದ ಸನ್ಮಾನ ಹಾಗೂ ನೆನಪಿನ ಕಾಣಿಕೆಯ ಕವರನ್ನು ಸ್ವೀಕರಿಸಿದ … ) ಡಜನ್ ಗಟ್ಟಲೆ ‘ ಪೇಯ್ಡ್ ‘ ಅತಿಥಿಗಳು ಒಬ್ಬೊಬ್ಬರಾಗಿ ಹಾಡಿ ಹೊಗಳಿ ಗುಂಡಣ್ಣನನ್ನು ಆಕಾಶದ ಎತ್ತರಕ್ಕೆ ಏರಿಸಿಬಿಟ್ಟರು…ಗುಂಡಣ್ಣನ ಮುಖ ಈಗ ಬಿದಿಗೆ ಚಂದ್ರನಂತೆ ಫಳ ಫಳ ಹೊಳೆಯುತ್ತಿತ್ತು. ವೇದಿಕೆಯ ಮೇಲೆಯೇ ಗುಂಡಣ್ಣನ ‘ ಹಲ್ಕಿರಿಯುವ ‘ ಫೋಟೋ ಶೂಟ್ ಕೂಡ ಆಗಿ ಹೋಯಿತು. ಗುಂಡಣ್ಣ ಸಂತೋಷ ತಡೆಯಲಾರದೆ ಜೀವದ ಗೆಳೆಯ ರಂಗಣ್ಣನನ್ನು ಅಪ್ಪಿ ಮುದ್ದಾಡಿದ ಸ್ಟೇಜಿನ ಮೇಲೆಯೇ…

ಸಮಾರಂಭ ಮುಗಿದ ಕೂಡಲೇ ಗುಂಡಣ್ಣ – ರಂಗಣ್ಣನ ಕುಟುಂಬ ಸದಸ್ಯರು, ಬಂಧುಬಾಂಧವರು, ನೆರೆದ ಬಾಡಿಗೆ ಸಭಿಕರು, ಅತಿಥಿಗಳು … ಬರೀ ಸಾಹಿತ್ಯ ಎಂದೂ ಹೊಟ್ಟೆ ತುಂಬಿಸುವದಿಲ್ಲ ಎನ್ನುವ ‘ ಕಟು ಸತ್ಯ ‘ ಅರಿತ ಎಲ್ಲರೂ ಭಾರೀ ಭೋಜನಕ್ಕೆ ಮುಗಿಬಿದ್ದರು. ಬಳಿಕ ಸ್ವಲ್ಪ ಹೊತ್ತಿನ ಬಳಿಕ ನೋಡಿದರೆ ಇಡೀ ಸಭಾಂಗಣ ಗುಂಡಣ್ಣನ ತಲೆಯಂತೆ ಖಾಲಿ…ಖಾಲಿ…

ಮರುದಿನದಿಂದ ‘ ನಾನು ಬರೆಯುತ್ತೇನೆ ಕವನ..’ ( ಪ್ರಕಟಿತ ಕವಿತೆಗಳ ಸಂಕಲನ ) ಮಾರ್ಕೆಟಿಂಗ್ ಮಾಡಲು ತುಂಬಾ ಉತ್ಸಾಹದಿಂದ ಗೆಳೆಯರಿಬ್ಬರು ಸಿದ್ಧರಾದರು. ಇಂತಹ ಕವನ ಸಂಕಲನಗಳು ಮಾರಾಟವಾಗುವದಿಲ್ಲ ಎಂದು ಪುಸ್ತಕದ ಅಂಗಡಿಯವರು ಒಂದು ಪ್ರತಿಯನ್ನೂ ಖರೀದಿಸಲಿಲ್ಲ. ಬದಲಾಗಿ ಯಾರ ಶಿಫಾರಸನ್ನಾದರು ಹಿಡಿದು ಸರ್ಕಾರದ ಸಾರ್ವಜನಿಕ ಗ್ರಂಥಾಲಯಗಳಿಗೆ ಆಯ್ಕೆ ಆಗುವಂತಹ ಕೆಲಸ ಮೊದಲು ಮಾಡಿ ಎಂದು ಕೆಲ ಪುಸ್ತಕ ವ್ಯಾಪಾರಿಗಳು ‘ ಅಮೂಲ್ಯ’ ಸಲಹೆ ನೀಡಿದರು. ಬಂಧುಗಳು – ಮಿತ್ರರು ಗುಂಡಣ್ಣನ ಅದ್ಭುತ ಕವಿತೆಗಳನ್ನು ಅರ್ಥಮಾಡಿಕೊಳ್ಳುವಷ್ಟು ‘ ಸುಜ್ಞಾನ ‘ ತಮಗೆ ಇಲ್ಲ ಎಂದು ಉಚಿತವಾಗಿ ಕೊಡಲು ‘ ಮಹಾನ್ ಕವಿ ‘ ಗುಂಡಣ್ಣ ಸಿದ್ಧನಿದ್ದರೂ ತೆಗೆದುಕೊಳ್ಳಲು ಯಾರೂ ಮುಂದೆ ಬರಲಿಲ್ಲ!.

ಕೊನೆಗೆ ಮನೆಯ ಎಲ್ಲಾ ಅಲಮಾರಗಳನ್ನು – ಗೂಡುಗಳನ್ನು ಖಾಲಿ ಮಾಡಿ ತನ್ನ ಹೊಸ ಕವನ ಸಂಕಲನಕ್ಕೆ ಗುಂಡಣ್ಣ ‘ ಒಂದು ಗತಿ ‘ ಕಾಣಿಸಿದ! ಇಷ್ಟೆಲ್ಲಾ ಆದರೂ ಮುಂದಿನ ದಿನಮಾನಗಳಲ್ಲಿ ವಯಸ್ಸಾದ ಮತ್ತು ಹೆಸರಾಂತ ಸಾಹಿತಿ ಗುಂಡಣ್ಣ ಮತ್ತೆ ಕವಿತೆಗಳನ್ನು ಬರೆಯದೆ ಮತ್ತೊಮ್ಮೆ ಅವುಗಳ ಸಂಕಲನವನ್ನು ಸ್ವಂತ ಖರ್ಚಿನಿಂದ ಪ್ರಕಟಿಸದೆ ಸುಮ್ಮನಿರುವ ನಂಬಿಕೆ ಇಲ್ಲ… ಇಷ್ಟಕ್ಕೂ ಮುಂದೆ ಬರೆಯಲ್ಪಡುವ ಅಪರೂಪ ಕವಿತೆಗಳಿಗೆ ಮತ್ತು ಅವುಗಳನ್ನು ಸೃಷ್ಟಿಸಿದ ಸೃಷ್ಟಿಕರ್ತ ಕವಿ ಪುಂಗವರಿಗೆ ಇನ್ನಾದರೂ ಒಳ್ಳೆಯ ಕಾಲ ಬರುತ್ತದೆಯೇ ಎಂಬುದು ಸದ್ಯದ ಯಕ್ಷ ಪ್ರಶ್ನೆ….


ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter