ಡಾ. ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನ ಮುಂಬಯಿ :
ರಾಜೀವ ನಾಯಕ, ಶ್ರೀನಿವಾಸ ಜೋಕಟ್ಟೆ, ಕಲಾ ಭಾಗ್ವತ್ ಅವರ ಕೃತಿಗಳು “ವಿಕಾಸ ಪುಸ್ತಕ ಬಹುಮಾನ” ಕ್ಕೆ ಆಯ್ಕೆ
ಮುಂಬಯಿ–ಹಿರಿಯ ಸಾಹಿತಿ, ಲೇಖಕ, ಪ್ರಾಧ್ಯಾಪಕ ಡಾ. ವಿಶ್ವನಾಥ ಕಾರ್ನಾಡ್ ಅವರ ಹೆಸರಿನಲ್ಲಿ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವ ಡಾ.ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನವು ಮುಂಬೈಯಲ್ಲಿ ಕನ್ನಡ ಪುಸ್ತಕ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಪುಸ್ತಕ ಬಹುಮಾನ ಯೋಜನೆಯನ್ನು ರೂಪಿಸಿದ್ದು ಈ ಚೊಚ್ಚಲ ‘ವಿಕಾಸ’ ಪುಸ್ತಕ ಬಹುಮಾನಕ್ಕೆ ರಾಜೀವ ನಾರಾಯಣ ನಾಯಕ, ಶ್ರೀನಿವಾಸ ಜೋಕಟ್ಟೆ ಹಾಗೂ ಕಲಾ ಭಾಗ್ವತ್ ಅವರ ಕೃತಿಗಳು ಆಯ್ಕೆಯಾಗಿವೆ.
ರಾಜೀವ ನಾರಾಯಣ ನಾಯಕ ಅವರ ಪ್ರೀತ್ಸು (ಚೊಚ್ಚಲ ಕಾದಂಬರಿ), ಶ್ರೀನಿವಾಸ ಜೋಕಟ್ಟೆ ಅವರ ಮುಂಬೈ ಮಿಂಚು’ (ಮುಂಬಯಿಗೆ ಸಂಬಂಧಿಸಿದ ಲೇಖನಗಳ ಸಂಕಲನ), ಕಲಾ ಭಾಗ್ವತ್ ಅವರ ‘ಜೀವಸ್ವರ’ (ಜಯಂತ ಕಾಯ್ಕಿಣಿ ಪ್ರಬಂಧ ಲೋಕ ಶೋಧ ಸಂಪ್ರಬಂಧ) ಕೃತಿಗಳು ಈ ಬಾರಿಯ ಬಹುಮಾನಕ್ಕೆ ಆಯ್ಕೆಯಾಗಿವೆ ಎಂಬುದಾಗಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಪೂರ್ಣಿಮಾ. ಎಸ್.ಶೆಟ್ಟಿ ಅವರು ತಿಳಿಸಿದ್ದಾರೆ.
ನಗದು ಪುರಸ್ಕಾರ, ಪ್ರಶಸ್ತಿ ಪತ್ರ ಹಾಗೂ ಗ್ರಂಥ ಗೌರವವನ್ನು ಒಳಗೊಂಡಿದ್ದು ಫೆಬ್ರವರಿ 11 ರಂದು ಮುಂಬೈ ವಿಶ್ವವಿದ್ಯಾಲಯದಲ್ಲಿ ಈ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಬೆಂಗಳೂರಿನ ವಿಶ್ವವಾಣಿ ದೈನಿಕದ ಪುರವಣಿ ಸಂಪಾದಕ, ಕಾದಂಬರಿಕಾರ ಶಶಿಧರ ಹಾಲಾಡಿ ಅವರು ನಡೆಸಿಕೊಡಲಿದ್ದಾರೆ ಎಂಬುದಾಗಿ ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.
ರಾಜೀವ ನಾಯಕ :-
ಮೂಲತ: ಉತ್ತರ ಕನ್ನಡದ ಅಂಕೋಲೆ ಯವರಾದ ರಾಜೀವ ನಾಯಕ ಅವರು ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಉಪನ್ಯಾಸಕರಾಗಿ ವೃತ್ತಿಯನ್ನು ಆರಂಬಿಸಿದ್ದರು. ನಂತರ ಕೇಂದ್ರ ಸರ್ಕಾರದ ಸೇವೆಗೆ ಸೇರಿ ಮುಂಬೈವಾಸಿಯಾದರು. ಸಾಹಿತ್ಯಾಸಕ್ತರಾಗಿರುವ ರಾಜೀವ ನಾಯಕ ಅವರ ಕೆಲವು ಕವಿತೆಗಳು ಪ್ರಕಟವಾಗಿವೆ. ಕತೆಗಾರರಾಗಿ ಗುರುತಿಸಿಕೊಂಡಿರುವ ಅವರು ವಿಜಯ ಕರ್ನಾಟಕ , ವಿಜಯವಾಣಿ, ತುಷಾರ, ಪ್ರಜಾವಾಣಿ ಮೊದಲಾದ ಪತ್ರಿಕೆಗಳು ಆಯೋಜಿಸಿರುವ ದೀಪಾವಳಿ ವಿಶೇಷಾಂಕಗಳ ಕಥಾಸ್ಪರ್ಧೆಯಲ್ಲಿ ಅವರ ಕತೆಗಳು ಬಹುಮಾನವನ್ನು ಪಡೆದುಕೊಂಡಿವೆ. ಸುಧಾ ಯುಗಾದಿ ಪ್ರಬಂಧ ಸ್ಪರ್ಧೆ-2020ರಲ್ಲಿ ಅವರ ‘ಘರ್‌ಗುತಿ’ ಪ್ರಬಂಧಕ್ಕೆ ಬಹುಮಾನ ದೊರಕಿದೆ. ‘ಗುರ್ಬಾಣಕ್ಕಿ ಮತ್ತು ‘ಲಾಸ್ಟ್ ಲೋಕಲ್ ಲೊಸ್ಟ್ ಲವ್’ ಅವರ ಪ್ರಕಟಿತ ಕಥಾ ಸಂಕಲನಗಳು. ಪ್ರೀತ್ಸು’ ಅವರ ಇತ್ತೀಚೆಗೆ ಪ್ರಕಟಗೊಂಡ ಚೊಚ್ಚಲ ಕಾದಂಬರಿ ಬೆಳಕು ಕಂಡಿದೆ.
ಶ್ತೀನಿವಾಸ ಜೋಕಟ್ಟೆ:
ಕ್ರಿಯಾಶೀಲ ಪತ್ರಕರ್ತ, ಸಾಹಿತಿ ಶ್ರೀನಿವಾಸ ಜೋಕಟ್ಟೆ ಅವರು ಮುಂಬಯಿಯ ಕರ್ನಾಟಕ ಮಲ್ಲ ದಿನಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕವಿಯಾಗಿ, ಕತೆಗಾರರಾಗಿ, ಅಂಕಣಕಾರರಾಗಿ, ವಿವಿಧ ಪತ್ರಿಕೆಗಳ ಸಂಪಾದಕರಾಗಿ, ಪ್ರವಾಸ ಸಾಹಿತ್ಯಕಾರರಾಗಿ, ಸಂಘಟಕರಾಗಿ ಹೆಸರು ಮಾಡಿರುವ ಜೋಕಟ್ಟೆ ಅವರ 41ಕೃತಿಗಳು ಈವರೆಗೆ ಬೆಳಕು ಕಂಡಿವೆ. ಜೋಕಟ್ಟೆ ಅವರದು ಅಗ್ರ ಲೇಖನಗಳನ್ನು ಬರೆಯುವುದರಲ್ಲಿ ಎತ್ತಿದ ಕೈ. ಅವರ ನೇಪಾಳದ ಕುರಿತ ಪ್ರವಾಸ ಕಥನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನವೂ ದೊರಕಿದೆ. ಅವಿಶ್ರಾಂತವಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಶ್ರೀನಿವಾಸ ಜೋಕಟ್ಟೆ ಅವರ ಸಾಧನೆಯ ಕುರಿತು ಮುಂಬೈ ವಿಶ್ವ ವಿದ್ಯಾಲಯ ಕೃತಿಯೊಂದನ್ನು ಹೊರತಂದಿದೆ.
ಕಲಾ ಭಾಗ್ವತ್:
ಕಲಾ ಚಿದಾನಂದ ಭಾಗ್ವತ್ ಅವರು ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಧಾರೇಶ್ವರದವರು. ಮುಂಬಯಿಯ ಉದಯೋನ್ಮುಖ ಲೇಖಕರಾಗಿ ಗುರುತಿಸಿಕೊಂಡಿರುವ ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿ.ಎಸ್‌ಸಿ. ಪದವಿಯನ್ನು ಹಾಗೂ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಥಮ ರ‌್ಯಾಂಕ್ ಹಾಗೂ ಎಂ.ಬಿ.ಕುಕ್ಯಾನ್ ಬಂಗಾರದ ಪದಕದೊಂದಿಗೆ ಎಂ.ಎ. ಪದವಿಯನ್ನು ಪಡೆದಿರುತ್ತಾರೆ. ವೈದ್ಯಭೂಷಣ ಡಾ.ಬಿ.ಎಂ.ಹೆಗ್ಡೆ’ ಮತ್ತು ‘ಜೀವಸ್ವರ ಇವರ ಪ್ರಕಟಿತ ಕೃತಿಗಳು, ತಾಯಿಯಿಂದ ಸುಗಮಸಂಗೀತವನ್ನೂ, ಗಂಧರ್ವ ಮಹಾವಿದ್ಯಾಲಯದಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿರುತ್ತಾರೆ. ಪ್ರಸ್ತುತದಲ್ಲಿ ಇಪ್ಪತ್ತೊಂದನೆಯ ಶತಮಾನದಲ್ಲಿ ಕನ್ನಡ ಸಾಹಿತ್ಯ ವಿಮರ್ಶೆಯ ಸ್ವರೂಪ’ ಎಂಬ ವಿಷಯವನ್ನು ಕುರಿತು ಸಂಶೋಧನೆಯಲ್ಲಿ ನಿರತರಾಗಿದ್ದಾರೆ.
1 thought on “ಡಾ. ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನ ಮುಂಬಯಿ”
The main motto of any Pratishtan is to identify a hidden talent in a Society, made known to the general public. Generally media and Govt. are not able to do this work, because of several constraints, of many. So far, “Dr. Vishvanath karnad pratishtan” has made a right beginning with in its perview, and marching ahead with some ambition plans. This move is commendable, and need of the hour as well. We, the Mumbaikars, certainly encourage such moves, and wish the Pratishtan all success. Jai Bharath.