ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಎಲ್ಲ ವಯೋಮಾನದ ಸ್ತ್ರೀಯರಿಗೂ ಪ್ರವೇಶ ನೀಡಬೇಕು ಎಂದು ಇತ್ತೀಚೆಗೆ ಮಹಿಳಾ ಹೋರಾಟಗಳು ನಡೆದಿರುವುದನ್ನು ಗಮನಿಸಿದಾಗ ನಿಜಕ್ಕೂ ಅಲ್ಲಿ ಯ ನೀತಿ ನಿಯಮಗಳೇನಿರಬಹುದು ಎನ್ನುವ ಕುತೂಹಲ ಇದ್ದರೂ ನಾನೊಂದುದಿನ ಅಲ್ಲಿಗೆ ಹೋಗಲೇಬೇಕೆಂದುಕೊಂಡಿರಲಿಲ್ಲ. ತುಂಬಾ ಆಕಸ್ಮಿಕವಾಗಿ ಕೇರಳ ಪ್ರವಾಸಿ ಸ್ಥಳಗಳನ್ನು ನೋಡುವ ಪ್ಲಾನ್ ಸಿದ್ಧವಾಯ್ತು. ಮಗ, ನನ್ನ ಯಜಮಾನರು ಆ ತಿರುಗಾಟದ ಯಾದಿಯಲ್ಲಿ ಶಬರಿಮಲೆಯನ್ನು ಸೇರಿಸಿದ್ದು ನನಗೆ ಮೊದಲು ಗೊತ್ತಾಗಲಿಲ್ಲ. ಪ್ಲಾನ್ ಮಾಡುವಾಗ ಮೈಸೂರಿನ ಆಹಾರ ಮೇಳದ ಕೆಲಸದಲ್ಲಿ ಮುಳುಗಿಹೋಗಿದ್ದೆ. ನೀವೆಲ್ಲಿಗೆ ಹೇಳಿದ್ರೂ ನಾನು ಹೋಗಲು ಸಿದ್ದ ಎಂದು ಅವರಿಬ್ಬರ ಬಳಿ ಹೇಳಿಬಿಟ್ಟಿದ್ದೆ. ಒಮ್ಮೆ ಅಲ್ಲಿಗೆ ಹೋಗುವ ಸಂಕಲ್ಪವನ್ನು ಯಜಮಾನರು ಮಾಡಿದ ಮೇಲೆ ಬೇಡ ಎನ್ನುವುದೇಕೆಂದು ಜೈ ಎಂದೆ.
ಡಿಸೆಂಬರ್ ಮೊದಲವಾರದಲ್ಲಿ ಕನ್ಯಾಕುಮಾರಿಯ ವಿವೇಕಾನಂದ ಸ್ಮಾರಕವನ್ನು ನೋಡಿಕೊಂಡು ತಿರುವನಂತಪುರ ಮಾರ್ಗ ವಾಗಿ ಚೆಂಗನೂರಿಗೆ ಹೋದೆವು.. .. ಅಲ್ಲಲ್ಲಿ ಕೆರೆಗಳು, ನದಿಗಳು, ದಟ್ಟ ಹಸಿರಿನ ಪರಿಸರ ವೀಕ್ಷಿಸುತ್ತಾ ಸಾಗಿದ್ದೇ ಸುಂದರ ಅನುಭವ.
ಬೆಳಗಿನ ಝಾವ ಎರಡು ಗಂಟೆಗೆ ಎದ್ದು ಪಂಬಾ ಬಸ್ಸ್ ಏರಿದೆವು. ‘ಶಬರಿ ಮಲೆಕೋ ಇಸ್ತ್ರೀಯೋಂಕಾ ಪ್ರವೇಸ ನಾಹಿ’ ಎಂದೊಬ್ಬ ಭಕ್ತರು ನನ್ನ ಬಳಿ ಬಂದು ಕರುಣೆಯಿಂದ ಹೇಳಿದರು. ನಾನು ನಗುತ್ತಾ ‘ನನಗೆ ಐವತ್ತೈದು ವರ್ಷ ವಾಗಿದೆ’ ಎಂದೆ. ಅವರಿಗೆ ಸಮಾಧಾನವಾದಂತಿತ್ತು!. ಭಕ್ತರೇ ತುಂಬಿದ್ದ ಬಸ್ಸಿನಲ್ಲಿ ನಾವು ಮೂವರು ಮಾತ್ರ ಹೆಂಗಸರಿದ್ದೆವು. ಬೆಳಕು ಹರಿಯುವ ಮುನ್ನವೇ ಪಂಬಾ ತಲುಪಿದೆವು. ನದಿಯಲ್ಲಿ ಸ್ನಾನ ಮಾಡಿದೆವು. ಬೆಟ್ಟದ ಪಾದದಲ್ಲಿರುವ ಗಣಪತಿಯ ದರ್ಶನ ಮಾಡಿದೆವು. ನಂತರ ಅಯ್ಯಪ್ಪನ ದರ್ಶನ ಮಾಡಲು ಬೆಟ್ಟವನ್ನೇರಲಾರಂಭಿಸಿದೆವು. ಸ್ವಾಮಿಯೇ ಅಯ್ಯಪ್ಪಾ, ಶರಣಂ ಅಯ್ಯಪ್ಪಾ… ಮುಂತಾದ ಘೋಷಣೆಗಳೊಂದಿಗೆ ನಾವೂ ದನಿಗೂಡಿಸಿದೆವು. ಕಪ್ಪು ಬಟ್ಟೆ ಧರಿಸಿದ ಸ್ತ್ರೀಯರು, ಪುರುಷರು, ಹತ್ತು ವರ್ಷ ದೊಳಗಿನ ಬಾಲಕಿಯರು, ಬಾಲರನೇಕರು… ದೇಶದೆಲ್ಲೆಡೆ ಯಿಂದ ನಲವತ್ತೈದು ದಿನಗಳ ವ್ರತಾಚರಣೆ ಮಾಡಿ ಇರುಮುಡಿ ಹೊತ್ತು ಬೆಟ್ಟವೇರುತ್ತಿದ್ದರು.ಅವರ ಮಾರ್ಗದರ್ಶಕರಾದ ಗುರುಸ್ವಾಮಿಗಳೊಂದಿಗೆ ಬಂದ ಭಕ್ತರ ಪರಿಸ್ಥಿತಿ ನೋಡಿ ಅಕ್ಷರಶಃ ದಂಗುಬಡಿದುಹೋದೆ. ಬಯಲು ಆಲಯದೊಳಗೋ ಆಲಯವು ಬಯಲೊಳಗೋ… ಸಾಲು ನೆನಪಾಯ್ತು. ಲಕ್ಷಾಂತರ ಶಬರಿಮಲೆಗೆ ಬರುತ್ತಾರೆ. ಅನೇಕ ಪುಟ್ಟ ಮಕ್ಕಳು ಅಪ್ಪಂದಿರೊಂದಿಗೆ ಬರುತ್ತಾರೆ. ಕೆಲವು ವೃದ್ದ ತಾಯಿ ತಂದೆಗಳನ್ನು ಯುವ ಮಕ್ಕಳು ಸಂಭಾಳಿಸುತ್ತಾ ಹತ್ತುತ್ತಿದ್ದರು. ಎರಡೂ ಕಾಲಿಲ್ಲದವರು ತೆವಳಿಕೊಂಡೇ ಬೆಟ್ಟ ಹತ್ತುವುದನ್ನು, ಸರಿಯಾಗಿ ಕೈ ಇಲ್ಲದವರು ಮೊಂಡುಗೈ ಮುಗಿಯುತ್ತಾ ಶರಣಂ ಅಯ್ಯಪ್ಪಾ ಎನ್ನುವುದನ್ನು, ಊರುಗೋಲು ಸಹಾಯದಿಂದಲೇ ಬೆಟ್ಟವೇರುವವರನ್ನು ನೋಡಿ ಕಣ್ತುಂಬಿ ಬಂತು. ತಲೆಯ ಮೇಲೆ ಇರುಮುಡಿಯ ಭಾರ, ಕೊರಳಲ್ಲಿ ಹಲವು ಮಾಲೆಗಳನ್ನು ಧರಿಸಿದ ಭಕ್ತರು ಬರಿಗಾಲಿನಲ್ಲಿಯೇ ನಡೆಯುತ್ತಿದ್ದರು. ಹಲವರ ಕಾಲು ಸುಲಿದು ರಕ್ತ ಜಿನುಗುತ್ತಿದ್ದರೂ ಅವರದನ್ನು ಲೆಕ್ಕಿಸುವಂತೆ ಕಂಡುಬರಲಿಲ್ಲ. ಬೆಟ್ಟದಲ್ಲಿ ಅಲ್ಲಲ್ಲಿ ಕಲ್ಲಂಗಡಿ, ಸೌತೇಕಾಯಿ, ತಂಪುಪಾನೀಯಗಳು, ತಿಂಡಿ ತಿನಿಸುಗಳು, ಅನಾರೋಗ್ಯ ದಿಂದ ಬಳಲುವವರಿಗೆ ತುರ್ತು ಚಿಕಿತ್ಸೆಗಳೂ ಲಭ್ಯವಿದ್ದವು. ನಡೆಯಲು ಕಷ್ಟ ಎನಿಸುವವರಿಗಾಗಿ ಪಲ್ಲಕ್ಕಿಯ ವ್ಯವಸ್ಥೆ ಕೂಡಾ ಇದೆ. ಜೀವ ಇರುವಾಗಲೇ ನಾಲ್ಕು ಜನರ ಹೆಗಲೇರುವುದು ಸರಿಯೇ? ಎಂಬ ತಾಕಲಾಟ ನಡೆದಿರುವಾಗಲೇ ನಮ್ಮ ಬಳಿಯೂ ಒಬ್ಬ ಬಂದು ಪಲ್ಲಕ್ಕಿ ಏರಲು ಅಂಗಲಾಚಿದ. ಒಬ್ಬರು ಪಲ್ಲಕ್ಕಿ ಏರಿದರೂ ನಾಲ್ಕು ಕುಟುಂಬದ ಒಂದು ದಿನದ ಜೀವನ ಸುಗಮವಾಗಿ ನಡೆಯುತ್ತದೆ ಎಂದ! . . ಆದರೂ ಮನಸ್ಸೊಪ್ಪದ ಕಾರಣ ನಾವು ನಡೆದುಕೊಂಡೇ ಬೆಟ್ಟ ಏರಿದೆವು.
ಬೃಹದಾಕಾರದ ಗಗನಚುಂಬಿ ವೃಕ್ಷಗಳು, ಅತ್ತಿ, ಆಲ, ನಂದಿ, ಬೂರಲು, ಚಂದಕಲು, ಮತ್ತಿ,… ಸೇರಿದಂತೆ ಸಾವಿರಾರು ಸಸ್ಯಪ್ರಬೇಧದ ಲಕ್ಷ ಲಕ್ಷ ಗಿಡಮರಗಳು ಮಾನವರ ಹಸ್ತ ಕ್ಷೇಪವಿಲ್ಲದೇ ಅಲ್ಲಿ ಸೊಂಪಾಗಿ ಬೆಳೆದಿವೆ. ಅದು ಹುಲಿ ಸಂರಕ್ಷಿತ ಪ್ರದೇಶ ವಂತೆ. ಬೆಟ್ಟ ಏರುವಾಗ ಆಯಾಸದಿಂದ ‘ಮಂದಿರ ಕಿತನಾ ದೂರ್ ಹೈ’ ಎಂದು ಪೋಲೀಸಪ್ಪಂದಿರನ್ನು ಆಗಾಗ ಕೇಳುತ್ತಿದ್ದೆವು. ಕೇಳಿದ ಎಲ್ಲರಿಂದಲೂ ದೋ ಕಿಲೋಮೀಟರ್ ಎಂದು ಉತ್ತ ಬರುತ್ತಿತ್ತು. ಮತ್ತೆರಡು ಕಿಲೋ ಮೀಟರ್ ನಡೆದು ಮತ್ತೆ ಕೇಳಿದಾಗಲೂ ಅದೇ ಉತ್ತರ!.. ಹಾಗಾಗಿ ನಾವು ಎರಡೆರಡೇ ಕಿಲೋಮೀಟರ್ ನಂತೆ ಎರಡೂವರೆ ತಾಸು ಬೆಟ್ಟ ಏರಿ, ಊದ್ದಾನುದ್ದದ ಸರದಿಸಾಲಿನಲ್ಲಿ ನಿಂತು ಕೋಟ್ಯಂತರ ಭಕ್ತರ ಆರಾಧ್ಯದೈವ ಅಯ್ಯಪ್ಪನ ದರ್ಶನ ಮಾಡಿದೆವು. ಆಮೇಲೆ ಗೊತ್ತಾಯ್ತು ನಾವು ಏರಿದೆತ್ತರ ಸಮುದ್ರ ಮಟ್ಟಕ್ಕಿಂತ ನಾಲ್ಕುನೂರಾ ಅರವತ್ತೆಂಟು ಮೀಟರ್( 1535ft) ಇದೆ ಎಂಬ ಸತ್ಯ…
ಕಠಿಣ ವ್ರತ ಕೈಗೊಂಡು ಅಯ್ಯಪ್ಪನ ಪೂಜೆಗೈದು, ಇರುಮುಡಿ ಹೊತ್ತವರು ಹದಿನೆಂಟು ಮೆಟ್ಟಿಲುಗಳನ್ನೇರಿ ಅಯ್ಯಪ್ಪನ ದರ್ಶನ ಮಾಡುತ್ತಿದ್ದರು. ನಮ್ಮಂತಹ ಭಕ್ತರು, ಪ್ರವಾಸಿಗರು ಹಿಂಭಾಗದಲ್ಲಿರುವ ಮತ್ತೊಂದು ಮಾರ್ಗದಿಂದ ದೇಗುಲ ಪ್ರವೇಶ ಮಾಡಿ ನಮಸಿ ದರ್ಶನ ಪಡೆದುಕೊಂಡೆವು. ಕೇರಳ ಶೈಲಿಯಲ್ಲಿ ಕಟ್ಟಿದ ದಿವ್ಯವೂ ಭವ್ಯವೂ ಆದ ಮಂದಿರದಲ್ಲಿ ಅಯ್ಯಪ್ಪ ನಸು ನಗುತ್ತ ಕುಳಿತಿದ್ದಾನೆ. ಭಕ್ತರು ಇರು ಮುಡಿಯಲ್ಲಿ ಹೊತ್ತು ತಂದ ತುಪ್ಪದ ತೆಂಗಿನ ಕಾಯನ್ನು ಅಗ್ನಿಕುಂಡಕ್ಕೆ ಸಮರ್ಪಿಸುತ್ತಿದ್ದರು. ಇಡೀ ವಾತಾವರಣದಲ್ಲಿ ಸಕಾರಾತ್ಮಕತೆ ತುಂಬಿದ್ದು ಅನುಭವಕ್ಕೆ ದಕ್ಕುತ್ತದೆ.
ಶ್ರದ್ಧಾಭಕ್ತಿಯಿಂದ ಭಕ್ತರು ಅಭಿಷೇಕ ಮಾಡಿದ ತುಪ್ಪವನ್ನು, ಅಪ್ಪಂ, ವಿಭೂತಿ ಪ್ರಸಾದವಾಗಿ ಪಡೆದು ಬೆಟ್ಟ ಇಳಿಯಲಾರಂಭಿಸಿದೆವು. ಇಳಿಯುವ ಮಾರ್ಗ ಬೇರೆಯೇ ಇರುವುದರಿಂದ ಲಕ್ಷಾಂತರ ಭಕ್ತರು ಹೋದರೂ ಜನಜಂಗುಳಿ ಎನಿಸುವುದಿಲ್ಲ.
ರೈಲ್ವೆ ನಿಲ್ದಾಣದಲ್ಲಿ ಹಲವು ಬಯಲುಗಳಲ್ಲಿ, ದೇವಸ್ಥಾನ ಗಳಲ್ಲಿ ತಂಗುತ್ತಾ, ನೀರು ಕಂಡಲ್ಲಿ ಸ್ನಾನ ಮಾಡುವ ಅಯ್ಯಪ್ಪನ ಭಕ್ತರ ಕಷ್ಟ ಸಹಿಷ್ಣು ಸ್ವಭಾವಕ್ಕೆ ಶರಣು ಎನ್ನಬೇಕು.
ಐವತ್ತು ದಾಟಿದ ಹೆಂಗಸರು, ಹತ್ತುವರ್ಷದೊಳಗಿನ ಬಾಲೆಯರು ಅಲ್ಪ ಸಂಖ್ಯೆ ಯಲ್ಲಿ ಶಬರಿಮಲೆಗೆ ಹೋಗುತ್ತಾರೆ. ಅವರಿಗಾಗಿ ಯಾವುದೇ ಬಗೆಯ ಮೂಲಭೂತ ಸೌಕರ್ಯಗಳಿಲ್ಲದಿರುವುದು ದೌರ್ಭಾಗ್ಯವೇ ಸರಿ. ಕೇರಳ ಸರಕಾರ ಬರುವ ವರ್ಷ ದಿಂದಾದರೂ ಈ ವಿಷಯದಲ್ಲಿ ಲಕ್ಷ್ಯ ಹರಿಸಲಿ ಎಂದಾಶಿಸುವೆ. ಬೆಟ್ಟದ ಪರಿಸರದಲ್ಲಿ ಒಗೆಯುವ ಆಹಾರ ತ್ಯಾಜ್ಯಗಳು, ಪ್ಲಾಸ್ಟಿಕ್, ಸ್ನಾನಘಟ್ಟದ ಅಶುಚಿತ್ವ, ನದಿಯಲ್ಲೇ ಮುಳುಗಿಸುವ ಕಪ್ಪು ಬಟ್ಟೆಗಳು.. ಭಾರತೀಯರಿಗೆ ನಾಗರೀಕ ಪ್ರಜ್ಞೆ ಇನ್ನೂ ಬಲಗೊಳ್ಳಬೇಕಾದ ಅಗತ್ಯದ ಕಥೆಯನ್ನೇ ಹೇಳುತ್ತವೆ. .
ಶಬರಿಮಲೆಗೆ ಹೋದ ಸ್ತ್ರೀಯರನ್ನು ಎಲ್ಲ ಭಕ್ತರೂ ಗೌರವ ಆದರದಿಂದಲೇ ಕಾಣುತ್ತಾರೆ. ಅವರ ನಿಯಮಗಳನ್ನು ಪಾಲಿಸಬೇಕು ಅಷ್ಟೇ… ಅಲ್ಲಿಂದ ತಿರುವನಂತಪುರಕ್ಕೆ ಬಂದೆವು. ಅಲ್ಲಿ ಸುಪ್ರಸಿದ್ಧ ಮಾತಾ ಭಗವತಿ ದೇವಸ್ಥಾನ ಇದೆ. ಲೇಡಿ ಐಯಪ್ಪ ಎಂದೇ ಪ್ರಸಿದ್ಧವಾದ ದೇವಸ್ಥಾನ ಅದು. ಮಾರ್ಚ ತಿಂಗಳಿನಲ್ಲಿ ನಡೆಯುವ ಉತ್ಸವದಲ್ಲಿ ಭಕ್ತೆಯರು ತಾವೇ ನೈವೇದ್ಯ ಸಿದ್ಧಪಡಿಸಿ ದೇವಿಯ ಪೂಜೆ ಮಾಡುವ ಅವಕಾಶವೂ ಅಲ್ಲಿದೆಯಂತೆ. ದೇಶದೆಲ್ಲೆಡೆಯಿಂದ ಲಕ್ಷಾಂತರ ಭಕ್ತೆಯರು ಬರುತ್ತಾರೆ ವಿಜ್ರಂಭಣೆಯಿಂದ ಉತ್ಸವ ನಡೆಯುತ್ತದೆ ಎಂದು ಅಲ್ಲಿನ ಅರ್ಚಕರು ವಿವರಿಸಿದರು. ಶಬರಿಮಲೆಗೆ ಹೋಗಲು ತೊಡಕೆನಿಸಿದವರು ಈ ದೇವಸ್ಥಾನಕ್ಕೆ ಭೇಟಿ ನೀಡಬಹುದು.
ಎಲ್ಲೆಲ್ಲಿಯೂ ದೇವನಿದ್ದಾನೆ ಎಂದರೂ ಎಲ್ಲೆಲ್ಲಿಗೂ ಹೋಗುವುದೇಕೆ? ಎಂಬ ಪ್ರಶ್ನೆ ಯನ್ನು ಒಬ್ಬರು ನನಗೆ ಕೇಳಿದ್ದು ನೆನಪಾಯಿತು. ಕ್ಷೇತ್ರ ಮಹಿಮೆ… ಎನ್ನಬಹುದಾದ ಅಲ್ಪ ಜ್ಞಾನವಷ್ಟೇ ನನಗಿರುವುದು. ‘ನನ್ನೊಳಗಿನ ನನ್ನನ್ನು ಶೋಧನೆ ಮಾಡಲು ಈ ಕಾಲದಲ್ಲಿ ನಡೆಸುವ ವ್ರತ, ಅಯ್ಯಪ್ಪನ ದರ್ಶನ ಸಹಾಯ ಮಾಡುತ್ತದೆ’ ಎಂದು ಅಯ್ಯಪ್ಪ ಮಾಲಾಧಾರಿ ಐ,ಟಿ ಉದ್ಯೋಗಿ ಭಕ್ತರು ಹೇಳಿದ್ದನ್ನು ಮೆಲುಕು ಹಾಕಿದೆ. ಬದುಕಿಗೆ ಅಗತ್ಯವಾದ ಸಂಯಮವನ್ನೂ, ತ್ಯಾಗವನ್ನೂ, ಕಷ್ಟ ಸಹಿಷ್ಣುತೆಯನ್ನೂ, ಶಬರಿಮಲೆ ಯಾತ್ರೆ ಭಕ್ತರಿಗೆ ಕಲಿಸುತ್ತಿದೆ. ಸಾಮಾನ್ಯರಿಗೂ ಅಸಾಮಾನ್ಯ ವ್ರತ ಮಾಡಿದ ಸಮಾಧಾನ, ತೃಪ್ತಿಯನ್ನೂ ಈ ಯಾತ್ರೆ ನೀಡುತ್ತದೆ ಎನ್ನುವುದನ್ನು ಕಣ್ಣಾರೆ ಕಂಡುಕೊಂಡು ಬಂದೆ. ಭಕ್ತಿ ಎನ್ನುವ ಭಾವ, ಶ್ರದ್ಧೆ ಅದೆಷ್ಟೊಂದು ಭಾರತೀಯರ ಬದುಕನ್ನು ಪೊರೆಯುತ್ತಿದೆ! ಸಂಕ್ರಮಣದಲ್ಲಿ ಕಾಣುವ ಮಕರ ಜ್ಯೋತಿ ಎಲ್ಲರ ಬಾಳನ್ನೂ ಬೆಳಗಲಿ.
- ಮಾಲತಿ ಹೆಗಡೆ