ಗುರುಪ್ರಸಾದ ಕಾಗಿನೆಲೆ ವೃತ್ತಿಯಿಂದ ವೈದ್ಯರಾದರೂ ಪ್ರವೃತ್ತಿಯಿಂದ ಸಾಹಿತಿಗಳು. ಇದುವರೆಗೆ “ನಿರ್ಗುಣ”, “ಶಕುಂತಳಾ”, “ದೇವರ ರಜಾ” ಮತ್ತು “ಲೋಲ” ಎಂಬ ನಾಲ್ಕು ಕಥಾಸಂಕಲನಗಳು ಹಾಗೂ “ಬಿಳಿಯ ಚಾದರ”, “ಗುಣ” ಮತ್ತು “ಹಿಜಾಬ್” ಎಂಬ ಮೂರು ಕಾದಂಬರಿಗಳು ಪ್ರಕಟವಾಗಿವೆ. ಇತ್ತೀಚೆಗೆ ಪ್ರಕಟವಾದ “ಕಾಯಾ” ಗುರುಪ್ರಸಾದ ಕಾಗಿನೆಲೆಯವರ ನಾಲ್ಕನೆಯ ಕಾದಂಬರಿ.
ಗುರುಪ್ರಸಾದ ಕಾಗಿನೆಲೆಯವರು ಅನಿವಾಸಿ ಭಾರತೀಯರ ಬದುಕಿನ ವಿಭಿನ್ನ ಅನುಭವಗಳನ್ನು ಈಗಾಗಲೇ ತಮ್ಮ “ಬಿಳಿಯ ಚಾದರ” ಮತ್ತು “ಗುಣ” ಕಾದಂಬರಿಗಳಲ್ಲಿ ತುಂಬ ಚೆನ್ನಾಗಿ ತಂದಿದ್ದಾರೆ. ಓದುಗರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದ “ಹಿಜಾಬ್” ಕಾಗಿನೆಲೆಯವರ ಒಂದು ಯಶಸ್ವಿ ಕೃತಿ.
“ಕಾಯಾ” ಕಾಗಿನೆಲೆಯವರ ಮಹತ್ವಾಕಾಂಕ್ಷಿ ರಚನೆ. ಇದುವರೆಗೆ ಬಂದ ಅವರ ಯಾವ ಕಾದಂಬರಿಯೂ ಇಷ್ಟೊಂದು ಸಂಕೀರ್ಣ ಕಥಾವಸ್ತು ಹೊಂದಿರಲಿಲ್ಲ. “ಕಾಯಾ” ಕಾದಂಬರಿಯ ವಸ್ತುವೇ ಕನ್ನಡದ ಮಟ್ಟಿಗೆ ಹೊಸತು. ಎಚ್.ಐ.ವಿ. ಕಸ್ತೂರಿ, ಲಾರ್ಜ್ ಸೈಜ್ ಸಮಾಂತಾ, ಸೆಲಿಬ್ರಿಟಿ ಪ್ಲಾಸ್ಟಿಕ್ ಸರ್ಜನ್ ಮಲೀಕ್, ಸುಂದರಿ ಪರಿಮಳಾ, ಲೆಸ್ಬಿಯನ್ ಹನಿ, ಮತಲಬಿಗಳಾದ ಹ್ಯಾನಾ-ಎಡ್ವರ್ಡ್ ದಂಪತಿಗಳು, ಪಕ್ಕಾ ವೃತ್ತಿಪರರಾದ ಸಿದ್ಧಿಕಿ, ಬಾಲಚಾಕ್ ಮತ್ತು ಬ್ಲಾಕ್ಮೇಲರಳಂತೆ ಕಾಣುವ ಲೀಸಾ ಸಾಲಿಂಜರ್ ಎಂಬ ವಿಭಿನ್ನ ಮನೋಧರ್ಮದ ವ್ಯಕ್ತಿಗಳ ಕಥೆಯಾದ “ಕಾಯಾ” ಒಂದು ಕುತೂಹಲಭರಿತವಾದ ದೀರ್ಘ ಕಥನ.
ಭೀಮಸೇನರಾವ ಜಯತೀರ್ಥಾಚಾರ್ಯ ಮಲಖೇಡ ಅಲಿಯಾಸ್ ಡಾ. ಭೀಮ್ ಮಲೀಕ್ ಎಂಬ ನ್ಯೂಯಾರ್ಕಿನ ಪ್ರಖ್ಯಾತ ಪ್ಲಾಸ್ಟಿಕ್ ಸರ್ಜನನ ಮೇಲೆ ಲೀಸಾ ಸಾಲಿಂಜರ್ ಎಂಬ ಮಧ್ಯವಯಸ್ಕ ಮಹಿಳೆ ಮೀಟೂ ಆರೋಪ ಹೊರಿಸುವುದರೊಂದಿಗೆ ಆರಂಭವಾಗುವ ಕಾದಂಬರಿ ಹತ್ತು ಹಲವು ತಿರುವುಗಳನ್ನು ಪಡೆದುಕೊಳ್ಳುತ್ತ ಸಾಗುತ್ತದೆ.
ಮಲೀಕನ ಒಂದು ಸಣ್ಣ ಅಜಾಗರೂಕತೆ ಲೀಸಾ ಸಾಲಿಂಜರ್ ಎಂಬ ನಿಗೂಢ ಮಹಿಳೆ ಐದು ಮಿಲಿಯನ್ ಡಾಲರ್ ಪರಿಹಾರ ಧನ ಕೇಳುವ ಮಟ್ಟಕ್ಕೆ ಹೋಗುತ್ತದೆ. ಬರೀ ಮಲೀಕ ಮತ್ತು ಲೀಸಾ ಸಾಲಿಂಜರಳ ಸಮಸ್ಯೆಯಾಗಿದ್ದ ಈ ಮೀಟೂ ಪ್ರಕರಣ ಮಲೀಕನ ಅತ್ತೆ ಎಚ್.ಐ.ವಿ. ಕಸ್ತೂರಿ, ನ್ಯೂಯಾರ್ಕ್ ನಗರದ ಸೆನೆಟರುಗಳು, ಮಾಜಿ ಪತ್ನಿ ಪರಿ, ವಿಚ್ಛೇದನಕ್ಕೆ ತುದಿಗಾಲಲ್ಲಿ ನಿಂತಿರುವ ಹಾಲಿ ಪತ್ನಿ ಸಮಾಂತಾ ಮತ್ತು ಮಲೀಕನು ಪರಿಗೆ ಕೊಡುವ ಜೀವನಾಂಶದ ಮೇಲೆ ಕಣ್ಣಿಟ್ಟಿರುವ ಮತಲಬಿಗಳಾದ ಹ್ಯಾನಾ-ಎಡ್ವರ್ಡ್ ದಂಪತಿಗಳನ್ನು ಸಹ ಆವರಿಸಿಕೊಳ್ಳುತ್ತ ಸಾಗುವುದು ವಿಶೇಷ.
ಸೆಲಿಬ್ರಿಟಿ ಪ್ಲಾಸ್ಟಿಕ್ ಸರ್ಜನ್ ಎಂದು ಹೆಸರು ಪಡೆದ ಡಾ. ಭೀಮ್ ಮಲೀಕ್ ಮಹಾ ರಸಿಕ. ಸುಂದರವಾದ ಪತ್ನಿ ಪರಿ ಇದ್ದರೂ ಸಹ ಹನಿ ಮಠದಳ ಸಲಿಂಗಪ್ರೇಮಿಯೂ, ಸೆನೆಟರ್ ಎಚ್.ಐ.ವಿ. ಕಸ್ತೂರಿಯ ಮಗಳೂ ಆದ ಲಾರ್ಜ್ ಸೈಜ್ ಸಮಾಂತಾಳಿಗೆ ಮನಸೋಲುವುದು ಅವನ ಜೀವನದಲ್ಲಿ ಬಹುಮುಖ್ಯ ಬದಲಾವಣೆಗಳುಂಟಾಗುವಂತೆ ಮಾಡುತ್ತದೆ. ಸಮಾಂತಾಳ ಸಹವಾಸದಿಂದ ಮಲೀಕ್ ಪತ್ನಿ ಪರಿಯಿಂದ ವಿಚ್ಛೇದನ ಪಡೆಯಬೇಕಾಗುತ್ತದೆ. ಮುಂದೆ ಮಲೀಕ್ ಸಮಾಂತಾಳನ್ನೇ ಮದುವೆಯಾದರೂ ಸಹ ಆ ವಿವಾಹ ಸಹ ತುಂಬ ದಿನ ಬಾಳುವುದಿಲ್ಲ.
ಸಲಿಂಗಪ್ರೇಮಿಗಳಾದ ಸಮಾಂತಾ ಮತ್ತು ಹನಿ ಮಠದಳದು ತುಂಬ ಅನ್ಯೋನ್ಯ ಜೋಡಿ. ಅಸ್ತವ್ಯಸ್ತ ಜೀವನಶೈಲಿ ಮತ್ತು ಸ್ವೇಚ್ಛಾಚಾರದಿಂದ ಬದುಕನ್ನು ಕೊನೆಗೊಳಿಕೊಂಡ ಹನಿ ಮಠದಳದು ಒಂದು ರೀತಿಯಲ್ಲಿ ದುರಂತ ಜೀವನ. ಹನಿ ಮಠದಳ ಸಾವಿನಿಂದ ಒಂಟಿಯಾದ ಸಮಾಂತಾಳಿಗೆ ಜೊತೆಯಾಗುವ ಮಲೀಕ ತನ್ನ ವೃತ್ತಿ ಪರಿಣಿತಿಯನ್ನೆಲ್ಲಾ ಧಾರೆಯೆರೆದು ಅವಳಿಗೆ ಹೊಸ ರೂಪವನ್ನು ಕೊಡುತ್ತಾನೆ. ಪ್ರಖ್ಯಾತ ಪ್ಲಾಸ್ಟಿಕ್ ಸರ್ಜನನಾದ ಮಲೀಕನ ಚಾಕಚಕ್ಯತೆಯಿಂದ ಲಾರ್ಜ್ ಸೈಜ್ ಸಮಾಂತಾ ಮತ್ತೊಬ್ಬ ಪರಿಯಾಗಿ ರೂಪುಗೊಳ್ಳುತ್ತಾಳೆ.
ವಾಸ್ತವವಾಗಿ ನೋಡುವುದಾದರೆ ಮಲೀಕ ತಾನು ತುಂಬ ಇಷ್ಟಪಡುವ ತನ್ನ ಪತ್ನಿ ಪರಿಯ ರೂಪವನ್ನೇ ಸಮಾಂತಾಳಿಗೆ ನೀಡಿರುತ್ತಾನೆ. ತಡವಾಗಿಯಾದರೂ ಇದರ ಕುರಿತು ಅರಿತ ಸಮಾಂತಾಳಿಗೆ ಆಘಾತವಾಗುತ್ತದೆ. ಸಮಾಂತಾಳು ತಾನು ಮತ್ತೊಬ್ಬ ಪರಿಯಾಗಲು ಇಚ್ಛಿಸದೆ ಮಲೀಕನಿಗೆ ವಿಚ್ಛೇದನ ನೀಡಬಯಸುವುದು ಅರ್ಥಪೂರ್ಣವಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಯಾವೊಬ್ಬ ಸ್ವಾಭಿಮಾನಿ ಮತ್ತು ಸ್ವಾವಲಂಬಿ ಹೆಣ್ಣೂ ಮಾಡಬಹುದಾದ ಸಹಜ ಕೆಲಸವಿದು.
ಸಮಾಂತಾಳ ತಾಯಿ ಎಚ್.ಐ.ವಿ. ಕಸ್ತೂರಿಯ ಪಾತ್ರ ಎಷ್ಟು ಪರಿಣಾಮಕಾರಿಯಾಗಿದೆಯೆಂದರೆ ಎಚ್.ಐ.ವಿ. ಕಸ್ತೂರಿಯೇ ಈ ಕಾದಂಬರಿಯ ನಾಯಕಿಯೆನ್ನುವಷ್ಟು! ಮೈಸೂರಿನ ಸಾದಾ ಸೀದಾ ಹುಡುಗಿ ಅಂದಿನ ಕಾಲದಲ್ಲಿ ಅಮೇರಿಕೆಗೆ ಹೋಗಿ ತನೆಗೆದುರಾದ ಎಲ್ಲ ಪ್ರತಿಕೂಲ ಪರಿಸ್ಥಿತಿಗಳನ್ನೆದುರಿಸಿ ನ್ಯೂಯಾರ್ಕ್ ನಗರದಲ್ಲಿ ನಾಲ್ಕು ಬಾರಿ ಸೆನೆಟರ್ ಆಗಿ ಆಯ್ಕೆಯಾಗುವಷ್ಟು ಮಟ್ಟಕ್ಕೆ ಬೆಳೆದದ್ದು ಸಾಮಾನ್ಯ ಸಂಗತಿಯಲ್ಲ.
ಮೈಸೂರಿನ ಹುಡುಗಿ ಕಸ್ತೂರಿ, ಹರಿಹರ ರಂಗನ್ ಎಂಬ ಅನಿವಾಸಿ ಭಾರತೀಯನ ಪತ್ನಿಯಾಗಿ ಕಸ್ತೂರಿ ರಂಗನ್ ಆಗುತ್ತಾಳೆ. ಮುಂದೆ ಆ ದಾಂಪತ್ಯ ವಿಫಲಗೊಂಡ ನಂತರ ಅವಳು ಜಿಯೋವಾನಿ ಕಸ್ಟೆಲ್ಲೋ ಎಂಬುವವನ್ನು ಮದುವೆಯಾಗಿ ಸಮಾಂತಾಳನ್ನು ಪಡೆಯುತ್ತಾಳೆ. ಜಿಯೋವಾನಿ ಮುಂದೆ ಗಾಂಜಾ ಬೆಳೆದು ಶಿಕ್ಷೆಗೆ ಗುರಿಯಾಗಿ ಜೈಲು ಸೇರುತ್ತಾನೆ. ಜಿಯೋವಾನಿ ಜೈಲಿನಲ್ಲಿ ಸಲಿಂಗಕಾಮದ ಪರಿಣಾಮವಾಗಿ ಭೀಕರವಾದ ಏಡ್ಸ್ ರೋಗಕ್ಕೆ ಬಲಿಯಾಗುತ್ತಾನೆ. ಜಿಯೋವಾನಿ ಏಡ್ಸ್ ರೋಗದಿಂದ ಸತ್ತು ಮುಕ್ತಿ ಪಡೆದರೂ ಕಸ್ತೂರಿ ಮತ್ತು ಸಮಾಂತಾ ಇದರ ಪರಿಣಾಮವನ್ನು ಜೀವನಪರ್ಯಂತ ಎದುರಿಸಬೇಕಾಗುತ್ತದೆ.
ಜಿಯೋವಾನಿಯ ಸಂಪರ್ಕದಿಂದ ಎಚ್.ಐ.ವಿ. ಪಾಸಿಟಿವ್ ಆದರೂ ಎದೆಗುಂದದೆ, ಸಮಾಂತಾಳಿಗೆ ಯಾವ ರೀತಿಯಲ್ಲೂ ಅದರ ಬೇಗೆ ತಟ್ಟದ ಹಾಗೆ ಬೆಳೆಸಲು ಪಡುವ ಕಸ್ತೂರಿಯ ಹಾರ್ದಿಕ ಪ್ರಯತ್ನ ಮನಕಲುವಂತಿದೆ. ಈ ಎಚ್.ಐ.ವಿ. ಪಾಸಿಟಿವ್ ಎಂಬ ಅಂಶ ಕಸ್ತೂರಿ ಮತ್ತು ಸಮಾಂತಾಳ ಜೀವನವನ್ನೇ ದುರ್ಬರಗೊಳಿಸುತ್ತದೆ. ಶಾಲೆ, ಕಾಲೇಜು, ಸಮಾರಂಭಗಳು ಸೇರಿದಂತೆ ಎಲ್ಲೆಲ್ಲೂ ಸಮಾಂತಾಳಿಗೆ ಎಚ್.ಐ.ವಿ. ಕಸ್ತೂರಿಯ ಮಗಳೆಂಬ ಅಂಶ ಇನ್ನಿಲ್ಲದಂತೆ ಕಾಡುತ್ತದೆ. ಡೇಟಿಂಗ್ ಸಂದರ್ಭದಲ್ಲಿ ಸಹ ಈ ಎಚ್.ಐ.ವಿ. ಭೂತ ಸುಂದರಿಯಾದ ಸಮಾಂತಾ ಅಪಮಾನಿತಳಾಗುವಂತೆ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಸಮಾಂತಾಳ ಜೊತೆಗಾತಿಯಾಗುವವಳೇ ಹನಿ ಮಠದ.
ಅರ್ಧ ಭಾರತೀಯಳೂ, ಅರ್ಧ ಪಾಶ್ಚಾತ್ಯಳೂ ಆದ ಹನಿ ಮಠದಳದು ಅತ್ಯಾಧುನಿಕ ಮತ್ತು ಸ್ವೇಚ್ಛಾಚಾರದಿಂದ ಕೂಡಿದ ಜೀವನ. ಎಚ್.ಐ.ವಿ. ಕಸ್ತೂರಿಯ ಮಗಳೆಂಬ ಕಾರಣಕ್ಕೆ ತಿರಸ್ಕೃತಳಾದ ಸಮಾಂತಾಳಿಗೆ ಸಹಜವಾಗಿಯೇ ಹನಿ ಮಠದಳ ಸಹವಾಸ ಅಪ್ಯಾಯತೆಯುಂಟುಮಾಡಿ ಅವರಿಬ್ಬರೂ ಅನ್ಯೋನ್ಯತೆಯಿಂದ ಬಾಳುವಂತೆ ಮಾಡುವುದು ಅಸಹಜವೇನಲ್ಲ. ಸಂಗಾತಿ ಹನಿ ಮಠದಳ ಅತಿಕಾಮ ಮತ್ತು ಆತ್ಮಘಾತಕ ಪ್ರವೃತ್ತಿಗಳನ್ನು ತುಂಬ ಸಂಯಮದಿಂದ ಸಹಿಸಿಕೊಳ್ಳುವ ಸಮಾಂತಾ ಅವಳಿಗಾಗಿ ಚರ್ಮದಾನ ಸಹ ಮಾಡುತ್ತಾಳೆ. ಹನಿ ಮಠದಳ ಸಾವಿನ ನಂತರವೇ ಸಮಾಂತಾ ಮಲೀಕನ ಜೊತೆ ಮದುವೆಯಾಗುವುದು.
ಎಚ್.ಐ.ವಿ. ಪಾಸಿಟಿವ್ ಎಂಬ ಸಂಗತಿ ಸಮಾಂತಾಳಿಗೆ ಶಾಪವಾದರೆ ಅದೇ ಎಚ್.ಐ.ವಿ. ಪಾಸಿಟಿವ್ ಎಂಬ ಸಂಗತಿ ಕಸ್ತೂರಿಗೆ ವರವಾಗುತ್ತದೆ. ಯಾವುದೇ ಒಂದು ಸಂಗತಿ ಒಬ್ಬರಿಗೆ ಒಳ್ಳೆಯದನ್ನುಂಟುಮಾಡಿದರೆ ಮತ್ತೊಬ್ಬರಿಗೆ ಕೆಡುಕನ್ನುಂಟುಮಾಡುವುದು ಅಪರೂಪವೇನಲ್ಲ. ಮೈಸೂರಿನ ಹುಡುಗಿ ಕಸ್ತೂರಿ ಮುಂದೆ ಕಸ್ತೂರಿ ರಂಗನ್, ಕಸ್ತೂರಿ ರಂಗನ್ ಕಸ್ಟೆಲ್ಲೋ ಮತ್ತು ಎಚ್.ಐ.ವಿ. ಕಸ್ತೂರಿ ಎಂಬ ಹೆಸರಿನಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದು ಹೆಸರು ಮಾಡುವುದು ಆಕಸ್ಮಿಕವಲ್ಲ.
ಎಚ್.ಐ.ವಿ. ಪಾಸಿಟಿವ್ ಎಂಬ ಸಂಗತಿ ಕಸ್ತೂರಿಯ ಪಾಲಿಗೆ ವೀಕನೆಸ್ಸಿನ ಬದಲಾಗಿ ಐಡೆಂಟಿಟಿಯೇ ಆಗಿಬಿಡುವುದು ವಿಶೇಷ. ಎಚ್.ಐ.ವಿ. ಕಸ್ತೂರಿ ತನ್ನೆಲ್ಲ ಬಲಹೀನತೆಗಳನ್ನೆಲ್ಲಾ ಮೆಟ್ಟಿ ನಿಂತು ಎಚ್.ಐ.ವಿ. ಪಾಸಿಟಿವ್ ಎಂಬ ಅಂಶವನ್ನೇ ಶಕ್ತಿಯನ್ನಾಗಿ ಮಾಡಿಕೊಳ್ಳುತ್ತಾಳೆ. ಆ ಮೂಲಕ ಏಡ್ಸ್ ರೋಗ ಪೀಡಿತರಿಗೆ ನೆರವಾಗುತ್ತಾಳೆ. ಮುಂದೆ ಕಸ್ತೂರಿಯ ಕಾರ್ಯಕ್ಷೇತ್ರ ವಿಸ್ತಾರವಾಗುತ್ತ ಹೋಗುತ್ತದೆ. ಹತ್ತು ಹಲವು ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಕಸ್ತೂರಿ ನ್ಯೂಯಾರ್ಕ್ ನಗರದ ಸೆನೆಟರ್ ಆಗುವುದು ಅವಳ ಪ್ರಬಲ ಇಚ್ಛಾಶಕ್ತಿ ಮತ್ತು ಅವಿರತ ಪ್ರಯತ್ನದಿಂದ.
ಲೀಸಾ ಸಾಲಿಂಜರ್ ಈ ಕಾದಂಬರಿಗೆ ತಿರುವು ಕೊಡುವ ಒಂದು ವಿಶಿಷ್ಟ ಪಾತ್ರ. ಕಾಗಿನೆಲೆಯವರು ನೇರವಾಗಿ ಎಲ್ಲೂ ರಂಗದ ಮೇಲೆ ಕಾಣಿಸಿಕೊಳ್ಳದ ಈ ಪಾತ್ರ ಸಂಪೂರ್ಣ ಕಥಾನಕವನ್ನೇ ಆವರಿಸಿಕೊಳ್ಳುವಂತೆ ರೂಪಿಸಿದ್ದಾರೆ. ಕಾಗಿನೆಲೆಯವರು ಸದ್ಯ ಸಾಮಾಜಿಕ ಮತ್ತು ರಾಜಕೀಯ ವಲಯದಲ್ಲಿ ತುಂಬ ಪ್ರಚಲಿತದಲ್ಲಿರುವ ಮೀಟೂ, ಹನಿ ಟ್ರ್ಯಾಪ್, ಸೆಕ್ಸುವಲ್ ಹೆರಾಸ್ಮಂಟಿನಂತಹ ಪ್ರಸ್ತುತ ಸಮಸ್ಯೆಗಳ ಕುರಿತು ಈ ಕಾದಂಬರಿಯಲ್ಲಿ ಚರ್ಚಿಸಿರುವುದು ಗಮನಾರ್ಹ.
ಲೀಸಾ ಸಾಲಿಂಜರ್ ಮತ್ತು ಮಲೀಕನ ನಡುವಿನ ಸಣ್ಣ ಸಮಸ್ಯೆಯಾದ ಮೀಟೂ ಪ್ರಕರಣ ಮುಂದೆ ಗಂಭೀರ ಸ್ವರೂಪ ಪಡೆದುಕೊಂಡು ಎಚ್.ಐ.ವಿ. ಕಸ್ತೂರಿ ಮತ್ತು ಅವಳ ಪಕ್ಷದ ಇತರೆ ಸೆನೆಟರುಗಳ ಬುಡವೇ ಅಲ್ಲಾಡುವಂತೆ ಮಾಡುತ್ತದೆ. ಮೊದಲು ಐದು ಮಿಲಿಯನ್ ಡಾಲರ್ ಕೇಳಿದ್ದ ಲೀಸಾ ಸಾಲಿಂಜರ್ ಬಣ ಎಚ್.ಐ.ವಿ. ಕಸ್ತೂರಿಯ ಮಧ್ಯ ಪ್ರವೇಶದಿಂದ ಹತ್ತು ಮಿಲಿಯನ್ ಡಾಲರ್ ಮೊತ್ತಕ್ಕೆ ಬೇಡಿಕೆಯಿಡುತ್ತದೆ. ಆದ್ದರಿಂದ ಈ ಮೀಟೂ ಪ್ರಕರಣ ಬರೀ ಮಲೀಕ್ ಮತ್ತು ಲೀಸಾ ಸಾಲಿಂಜರಳ ಮಧ್ಯದ ಗೊಡವೆಗಿಂತಲೂ ದೊಡ್ಡದಾದ ರಾಜಕೀಯ ಷಡ್ಯಂತ್ರವೆಂಬುದು ವೇದ್ಯವಾಗುತ್ತದೆ.
ಕೊನೆಗೂ ಲೀಸಾ ಸಾಲಿಂಜರಳ ಬಣದವರದೇ ಮೇಲುಗೈಯಾಗಿ ಎಚ್.ಐ.ವಿ. ಕಸ್ತೂರಿ ಮತ್ತು ಅವಳ ಪಕ್ಷದ ಇತರೆ ಸೆನೆಟರುಗಳು ಸೇರಿ ಹತ್ತು ಮಿಲಿಯನ್ ಡಾಲರ್ ತೆತ್ತು ಆ ಪ್ರಕರಣದಿಂದ ಬಚಾವಾಗುತ್ತಾರೆ. ಅತಿ ಬುದ್ಧಿವಂತಿಕೆ ತೋರಿಸಲು ಹೋಗಿ ಶೇರು ಮಾರುಕಟ್ಟೆಯಲ್ಲಿ ತನ್ನೆಲ್ಲಾ ಬಂಡವಾಳ ಹೂಡುವ ಮಲೀಕ್ ಅಲ್ಲಿಯೂ ಸೋತು ಜೈಲು ಸೇರುತ್ತಾನೆ. ಅವನಿಗೆ ಸಹಾಯ ಮಾಡಿದ ತಪ್ಪಿಗೆ ಪರಿಯೂ ಜೈಲುವಾಸ ಅನುಭವಿಸುವಂತಾಗುತ್ತದೆ.
ಜೈಲಿನಿಂದ ಬಿಡುಗಡೆಯಾದ ನಂತರವೂ ಮಲೀಕ್ ಮತ್ತು ಪರಿಯ ಕಷ್ಟಗಳು ದೂರವಾಗುವುದಿಲ್ಲ. ಸೆನೆಟರುಗಳು ತಾವು ಲೀಸಾ ಸಾಲಿಂಜರಳಿಗೆ ತೆತ್ತ ಹಣವನ್ನು ಮಲೀಕನಿಂದಲೇ ವಸೂಲಿ ಮಾಡುತ್ತಾರೆ. ವೈದ್ಯಕೀಯ ವೃತ್ತಿ ನಡೆಸಲು ಬೇಕಾದ ಮಾನ್ಯತೆ ಸಹ ಕಳೆದುಕೊಂಡು ಪಾಪರಾಗುವ ಮಲೀಕ ತಡವಾಗಿಯಾದರೂ ಬುದ್ಧಿ ಕಲಿಯುತ್ತಾನೆ. ಮಲೀಕ್ ಕಾದಂಬರಿಯ ಕೊನೆಯಲ್ಲಿ ಮೊದಲ ಪತ್ನಿ ಪರಿಯೊಂದಿಗೇ ಸರಳವಾಗಿ ಸಹಜೀವನ ನಡೆಸುವಂತಾಗುವುದು ಅರ್ಥಪೂರ್ಣವಾಗಿದೆ.
ಕಾದಂಬರಿಯ ಕೊನೆಯ ಅಧ್ಯಾಯಗಳಂತೂ ತುಂಬ ರೋಚಕವಾಗಿವೆ. ಕಸ್ತೂರಿ ಎಚ್.ಐ.ವಿ. ಪಾಸಿಟಿವ್ ಅಲ್ಲ ಬದಲಾಗಿ ಎಚ್.ಐ.ವಿ. ನೆಗೆಟಿವ್ ಎಂಬ ಸಂಗತಿ ಕಸ್ತೂರಿಯ ಅಸ್ತಿತ್ವವನ್ನೇ ಅಲ್ಲಾಡಿಸಿಬಿಡುತ್ತದೆ. ಎಚ್.ಐ.ವಿ. ಪಾಸಿಟಿವ್ ಎಂಬುದನ್ನೇ ಐಡೆಂಟಿಟಿ ಮಾಡಿಕೊಂಡು ಬದುಕಿ ಬಾಳಿದ ಅವಳಿಗೆ ಅದರಿಂದಾಗುವ ಆಘಾತ ಊಹಿಸಲಸಾಧ್ಯವಾದುದು! ಯಾವುದನ್ನು ಇಷ್ಟು ವರ್ಷಗಳ ಕಾಲ ನಂಬಿ ಬದುಕು ಕಟ್ಟಿಕೊಂಡಿದ್ದಳೋ ಆ ನಂಬಿಕೆಯೇ ಸುಳ್ಳು ಎಂದಾಗ ಬದುಕುವುದಾದರೂ ಹೇಗೆ?
ಏನೇ ಆದರೂ ಕಸ್ತೂರಿ ಎಚ್.ಐ.ವಿ. ಎಂಬ ಐಡೆಂಟಿಟಿಯನ್ನು ಬಿಟ್ಟು ಕೊಡುವುದಿಲ್ಲ ಮತ್ತು ತನ್ನ ಸಾಮಾಜಿಕ ಕಾರ್ಯಗಳನ್ನು ನಿಲ್ಲಿಸುವುದೂ ಇಲ್ಲ. ಇದಾದ ನಂತರವೂ ಅವಳು ಎಚ್.ಐ.ವಿ. ಕಸ್ತೂರಿಯೇ, ಆಗ ಪಾಸಿಟಿವ್ ಈಗ ನೆಗೆಟಿವ್ ಅಷ್ಟೇ ವ್ಯತ್ಯಾಸ. ಕಸ್ತೂರಿಗೆ ತನ್ನ ಜೀವನದ ಈ ಬಹುದೊಡ್ಡ ರಹಸ್ಯವನ್ನು ಕಂಡುಕೊಳ್ಳಲು ಪ್ರೇರೇಪಿಸಿದ್ದು ಮಾತ್ರ ಲೀಸಾ ಸಾಲಿಂಜರ್ ಎಂಬುದು ಚೋದ್ಯದ ಸಂಗತಿ. ಕಸ್ತೂರಿ ಕೊನೆಗೆ ಮಗಳು ಸಮಾಂತಾಳೊಟ್ಟಿಗೆ ಟೆಕ್ಸಾಸಿನ ಡಬ್ಲಿನ ಎಂಬ ಪುಟ್ಟ ಪಟ್ಟಣದಲ್ಲಿ ಶಾಂತವಾಗಿ ಬದುಕಲು ನಿರ್ಧರಿಸುವುದು ಈ ಕಾದಂಬರಿಯನ್ನು ಸುಖಾಂತಗೊಳಿಸಿದೆ.
“ಕಾಯಾ” ಕಾದಂಬರಿ ನಮಗೆ ಮುಖ್ಯವಾಗಿ ಕಾಣುವುದು ಹೊಸತನದಿಂದ ಕೂಡಿದ ಅದರ ಕಥಾವಸ್ತುವಿನಿಂದಾಗಿ. ಪಾಶ್ಚಾತ್ಯ ಭಾಷೆಗಳಲ್ಲಿ ಈ ಬಗೆಯ ಸಾಕಷ್ಟು ಕಾದಂಬರಿಗಳು ಬಂದಿದ್ದರೂ ಸಹ ಕನ್ನಡದ ಮಟ್ಟಿಗೆ ಇದು ಹೊಸದು. ಕಾಗಿನೆಲೆಯವರು ಇಂತಹ ಕಥಾವಸ್ತುವನ್ನು ತುಂಬ ಸಂಯಮದಿಂದ, ಬಹಳ ಚೆನ್ನಾಗಿ ನಿರ್ವಹಿಸಿದ್ದಾರೆ. ಈ ಕಾದಂಬರಿಯಲ್ಲಿ ಬರುವ ವಸ್ತು, ಪಾತ್ರ, ಭಾಷೆ, ಶೈಲಿ ಮತ್ತು ನಿರೂಪಣೆ ತಾಜಾತನದಿಂದಾಗಿ ಓದುಗರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತದೆ.
ಎಚ್.ಐ.ವಿ. ಕಸ್ತೂರಿ ಮತ್ತು ಲಾರ್ಜ್ ಸೈಜ್ ಸಮಾಂತಾ ಪಾತ್ರಗಳು ಓದುಗರನ್ನು ಆವರಿಸಿಕೊಳ್ಳುವಂತೆ ಪರಿಣಾಮಕಾರಿಯಾಗಿ ಚಿತ್ರಿತವಾಗಿವೆ. ಎಚ್.ಐ.ವಿ. ಕಸ್ತೂರಿ ಮತ್ತು ಸಮಾಂತಾಳ ಪಾತ್ರಗಳು ಕನ್ನಡದ ಮಹತ್ವದ ಲೇಖಕರಾದ ಶಾಂತಿನಾಥ ದೇಸಾಯಿಯವರ ಹಲವು ಸ್ತ್ರೀ ಪಾತ್ರಗಳನ್ನು ನೆನಪಿಗೆ ತರುತ್ತವೆ. ಎಚ್.ಐ.ವಿ. ಕಸ್ತೂರಿ ಮತ್ತು ಸಮಾಂತಾಳ ಪಾತ್ರಗಳು ಜೀವನದಲ್ಲಿ ಹತ್ತು ಹಲವು ಸಮಸ್ಯೆಗಳು ಬಂದರೂ ಎದೆಗುಂದದೆ ಅದನ್ನೆದುರಿಸಿ ಮುನ್ನುಗ್ಗುವ ಅಪಾರ ಜೀವನಪ್ರೀತಿಯಿರುವ ಸ್ತ್ರೀ ಪಾತ್ರಗಳಾಗಿದ್ದು ಕಾದಂಬರಿ ಓದಿದ ನಂತರವೂ ಓದುಗರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಬಿಡುತ್ತವೆ.
ಆಧುನಿಕ ಸೌಂದರ್ಯ ಮೀಮಾಂಸೆ, ಪ್ಲಾಸ್ಟಿಕ್ ಸರ್ಜರಿ, ಸಲಿಂಗ ಕಾಮ, ತ್ರಿಕೋನ ಪ್ರೇಮ, ವಿಷಮ ದಾಂಪತ್ಯ, ಮೀಟೂ, ಏಡ್ಸ್, ಡ್ರಗ್ಸ್, ರಾಜಕೀಯ ಸೇರಿದಂತೆ ಹತ್ತಾರು ಪ್ರಚಲಿತ ಸಮಸ್ಯೆಗಳನ್ನು ಕಾದಂಬರಿಯ ಪರಿಧಿಯೊಳಗೆ ತರುವಲ್ಲಿ ಕಾಗಿನೆಲೆಯವರು ಯಶಸ್ವಿಯಾಗಿದ್ದಾರೆ. ಕಾಗಿನೆಲೆಯವರು ಬಳಸುವ ಕನ್ನಡ ಭಾಷೆ ಸಹ ಹೊಸತನದಿಂದ ಕೂಡಿದ್ದು ಕಾದಂಬರಿಯನ್ನು ಸರಾಗವಾಗಿ ಓದಿಸಿಕೊಂಡು ಹೋಗುವಂತೆ ಮಾಡುತ್ತದೆ. ಕನ್ನಡಕ್ಕೆ ಹೊಸತನದಿಂದ ಕೂಡಿದ ಇಂತಹ ಕಾದಂಬರಿಗಳ ಅವಶ್ಯಕತೆಯಿದೆ. ಯಾವುದೇ ದೃಷ್ಟಿಯಿಂದ ನೋಡಿದರೂ “ಕಾಯಾ” ಇತ್ತೀಚಿನ ವರ್ಷಗಳಲ್ಲಿ ಬಂದ ಗಮನಾರ್ಹ ಕಾದಂಬರಿಗಳಲ್ಲೊಂದು.
ಸದ್ಯ ಕನ್ನಡ ಕಾದಂಬರಿ ಪ್ರಕಾರದಲ್ಲಿ ಒಳ್ಳೆಯ ಕೃತಿಗಳನ್ನು ಕೊಡುತ್ತ ಮುಂದೆ ಬಹುದೂರ ಸಾಗಬಲ್ಲರೆಂಬ ಭರವಸೆ ಮೂಡಿಸಿರುವ ಕೆಲವೇ ಕೆಲವು ಲೇಖಕರಿದ್ದಾರೆ. ಅಂತಹ ಭರವಸೆಯ ಲೇಖಕರಲ್ಲಿ ಮುಂಚೂಣಿಯಲ್ಲಿರುವವರು ಗುರುಪ್ರಸಾದ ಕಾಗಿನೆಲೆ. “ಕಾಯಾ” ಕಾದಂಬರಿಯನ್ನು ಓದಿದ ನಂತರ ಕಾದಂಬರಿಕಾರ ಕಾಗಿನೆಲೆಯವರ ಕುರಿತಾಗಿರುವ ಇಂತಹ ಭರವಸೆ ಇನ್ನಷ್ಟು ಹೆಚ್ಚಾಗುತ್ತದೆ. ಕಾಗಿನೆಲೆಯವರಿಂದ ಇಂತಹ ಇನ್ನಷ್ಟು ಒಳ್ಳೆಯ ಕಾದಂಬರಿಗಳು ಹೊರಬರಲೆಂದು ನಾನಂತೂ ಅಪೇಕ್ಷಿಸುತ್ತೇನೆ.
- ವಿಕಾಸ ಹೊಸಮನಿ