ಬಾಳಸಂಜೆಯ ಹಾದಿಯಲ್ಲಿ

ಹಿರಿಯ ನಾಗರಿಕರಾಗುವುದೆಂದರೆ ಸುಲಭದ ಮಾತಲ್ಲ. ಮೊದಲಿಗೆ ಅವರು ವಯಸ್ಸಿನಲ್ಲಿ ಅರವತ್ತರ ಗಡಿಯನ್ನು ದಾಟಿರಬೇಕು. ಅಲ್ಲಿಯ ತನಕದ ತಾಳ್ಮೆಯಂತು ಅನಿವಾರ್ಯ. ಆದರೆ ಕೆಲವರು ಈ ಗಡಿಯವರೆಗೆ ಬಂದು ನಿಂತೇಬಿಡುತ್ತಾರೆ. ತಲೆಗೂದಲು, ಮೀಸೆಗೆ (ಇದ್ದರೆ) ಹಚ್ಚಿದ ಕಪ್ಪು ಮುಖ, ಮೈಮೇಲಿನ ಸುಕ್ಕುಗಟ್ಟಿದ ನೆರಿಗೆಗಳ ಮಧ್ಯೆಯೂ ಯೌವನವನ್ನು ಸೂಸಬೇಕೆನ್ನುವುದು ಅವರ ಅಂತರಂಗದ ಆಸೆ. ವಯಸ್ಸಿನ ಈ ಗಡಿಭಾಗ ಅನೇಕರಲ್ಲಿ ಆತಂಕವನ್ನು ಹುಟ್ಟುಹಾಕುವುದಿದೆ. ‘ತಾನು ಮುದುಕ/ಮುದುಕಿಯಾದೆನಲ್ಲ… ಇನ್ನೇನು ನಾಡು ದೂರ ಕಾಡು ಹತ್ತಿರ…’ ಎನ್ನುವ ಹತಾಶೆಯ ಮಾತುಗಳು ಅಂತಹವರಿಂದ ಕೇಳಿಬರುತ್ತವೆ. ಆದರೆ ಕೆಲವರು ಇಳಿವಯಸ್ಸಿನಲ್ಲೂ ಬತ್ತದ ಉತ್ಸಾಹ, ಲವಲವಿಕೆ, ಚುರುಕುತನದಿಂದಾಗಿ ‘ವಯಸ್ಸು ದೇಹಕ್ಕೆ; ಮನಸ್ಸಿಗಲ್ಲ…’ ಎನ್ನುವ ಸಂದೇಶವನ್ನು ಸಾಬೀತುಪಡಿಸುತ್ತಾರೆ. ಸ್ನೇಹಕೂಟಗಳಲ್ಲಿ, ಸಮಾರಂಭಗಳಲ್ಲಿ ಅವಕಾಶ ಸಿಕ್ಕರೆ ಇವರು ಸಂಗೀತಕ್ಕೆ ತಕ್ಕಂತೆ ಕೈಕಾಲು ಆಡಿಸಿ ಕುಣಿಯುವುದೂ ಉಂಟು.

     ನೆರೆತ ತಲೆಗೂದಲು ಮುಪ್ಪಿನ ಸೂಚನೆಯಲ್ಲ ಎನ್ನುವುದು ಹೆಚ್ಚಿನವರ ಅನುಭವಕ್ಕೆ ಬಂದ ಸಂಗತಿಯಾಗಿರಬಹುದು. ಯಾಕೆಂದರೆ ಈಗೀಗ ವಯಸ್ಸಿನ ಲೆಕ್ಕದಲ್ಲಿ ತಲೆಗೂದಲು ಬೆಳ್ಳಗಾಗುವುದಿಲ್ಲ. ವಿಟಮಿನ್ ಕೊರತೆಯಿಂದ ಅಕಾಲಿಕವಾಗಿ ಬೆಳ್ಳಗಾಗುವ ಕೂದಲಿಗೆ ಬಣ್ಣ ಬಳಿದು ಮರೆಮಾಚುವ ಅವಕಾಶಗಳನ್ನು ಯಾರೂ ಬಿಟ್ಟುಕೊಡುವುದೂ ಇಲ್ಲ. ಒಟ್ಟಾರೆ ಮುದಿತನದ ಲಕ್ಷಣಗಳಿಂದ ದೂರವಿರುವ ಸತತ ಪ್ರಯತ್ನಗಳು ಎಲ್ಲರ ಮನೆಗಳಲ್ಲಿ ಹೆಚ್ಚುಕಡಿಮೆ ನಡೆದೇ ಇರುತ್ತವೆ. ಆದರೆ ಬಾಳಸಂಜೆಯ ಖದರೇ ಬೇರೆ. ವಯಸ್ಸಿನಿಂದ ಸಹಜವಾಗಿ ಬೆಳ್ಳಿರೇಖೆಗಳಾಗುವ ತಲೆಗೂದಲಿನಿಂದಾಗಿ ತುಂಬಿ ಹರಿಯುವ ಬಸ್ಸು, ಮೆಟ್ರೋಗಳಲ್ಲಿ ಸಂಚರಿಸುವ ನಿಮಗೆ ಅನಾಯಾಸವಾಗಿ ಉದಾರಿಗಳ ದೆಸೆಯಿಂದ ಸೀಟು ಸಿಗಬಹುದು. ಅದರಲ್ಲೂ ಅಲ್ಲಲ್ಲಿ ತಲೆ ಮೈದಾನವಾಗಿದ್ದರೆ ಮುಗಿದೇ ಹೋಯಿತು... ನಿಮಗೆ ನಡೆಯಲು ತಾಕತ್ತಿಲ್ಲ ಎನ್ನುವ ಧೋರಣೆಯಲ್ಲಿ ಪಕ್ಕದವರು ಕೈಹಿಡಿದು ಕೂರಿಸಲು ಸಹಾಯಹಸ್ತವನ್ನೂ ಚಾಚಬಹುದು. ಕೆಲವೊಮ್ಮೆ ಹಿರಿಯ ನಾಗರಿಕರಿಗೆ ಕಾದಿರಿಸಿದ ಆಸನಗಳಲ್ಲಿ ಹದಿಹರೆಯದವರು ಯಾವ ಸಂಕೋಚವಿಲ್ಲದೆ ಕೂತು ಮುಲಾಜಿಲ್ಲದೆ ಹರಟುತ್ತಿರಲೂಬಹುದು! 

      ಮನೆಯಲ್ಲಿ ಹಿರಿಯ ಜೀವಿಗಳಿದ್ದರೆ ಅದರ ವರ್ಚಸ್ಸೇ ಬೇರೆ. ಪೂರ್ವದಿಗಂತ ಕೆಂಪಗಾಗುವ ಮುನ್ನ ನಿದ್ದೆ ಬಾರದ ದೆಸೆಯಿಂದಾಗಿ ಎದ್ದ ಯಜಮಾನ ಬಾಗಿಲು ತೆರೆದು ಅದಾಗಲೇ ಬಂದ ಪೇಪರ್, ಹಾಲಿನ ಪ್ಯಾಕೆಟ್ ಒಳಗಿಟ್ಟು ಹೆಂಡತಿಯಿದ್ದರೆ ‘ಒಂದು ಲೋಟ ಕಾಫಿ ಮಾಡೇ...’ ಎಂದು ಆರ್ಡರಿಸಿ ಆರಾಮ ಕುರ್ಚಿಯಲ್ಲಿ ಕೂತು ಪೇಪರ್ ತೆರೆದು ಓದತೊಡಗಿದರೆ ಅದು ಮುಗಿಯುವುದು ಬೇರೆಯವರು ಬಂದು ಕಸಿದುಕೊಂಡಾಗಲೇ. ಮುಂದೆ ವಾಕಿಂಗ್ ನೆಪದಲ್ಲಿ ಉದ್ಯಾನದಲ್ಲಿ ಗೆಳೆಯರ ಜೊತೆ ಹರಟೆ, ಹಾಸ್ಯ... ಹೊಟ್ಟೆ ಚುರುಗುಟ್ಟಿದಾಗ ಹತ್ತಿರದ ಹೊಟೇಲಿನಲ್ಲಿ ಬೈಟು ಕಾಫಿಯ ಮೇಲೆ ಮತ್ತೆ ಚರ್ಚೆ... ಹೀಗೆ ಸುಪ್ರಭಾತದ ದಿನಚರಿಯಿಂದ ಅವರಲ್ಲಿ ಲವಲವಿಕೆಯ ಕಾರಂಜಿ.  ಇಂತಹವರ ಕೊನೆಯಿಲ್ಲದ ಮಾತಿಗೆ ಬೇಸತ್ತ ಕೆಲ ಹೊಟೇಲುಗಳು ಸ್ವಸಹಾಯ ಪದ್ಧತಿಯನ್ನು ಅಳವಡಿಸಿಕೊಂಡಿವೆ. ಅಲ್ಲಿ ಏನಿದ್ದರೂ ನೀವು ನಿಂತೇ ತಿನ್ನಬೇಕು; ಕುಡಿಯಬೇಕು. ಕೂತು ಹರಟಲು ಅವಕಾಶವಿಲ್ಲ. ವಾಕಿಂಗ್‍ನಿಂದ ಹಿಂತಿರುಗಿ ಬರುವಾಗ ಮನಸ್ಸಿದ್ದರೆ ಮನೆಗೆ ತರಕಾರಿ, ಹಣ್ಣಿನ ಭಾಗ್ಯವೂ ಬಂದೀತು.  

     ಅದೃಷ್ಟವಶಾತ್ ಮನೆಯಲ್ಲಿ ಇವರ ಮಾತುಗಳನ್ನು ಕೇಳುವವರು ಇದ್ದರೆ ಜ್ಞಾನಕ್ಕಿಂತ ಮಿಗಿಲಾದ ಅನುಭವದಿಂದ ಕೂಡಿದ  ಹಿತವಚನ, ಉಪದೇಶ, ಜಾಗೃತೆಗಳ ಸುರಿಮಳೆಯೂ ಆದೀತು. ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ ಅವರಿಗೆ ಜೊತೆಯಾಗುವವರು ಈ ಹಿರಿಯ ಜೀವಿಗಳೇ. ನಡೆದಾಡಲು ಶುರುವಿಟ್ಟ ಮಕ್ಕಳಿದ್ದರೆ ಅವರ ಕೈಹಿಡಿದು ಟೆರೆಸ್, ಬೀದಿಮೇಲೆ ಹೆಜ್ಜೆಹಾಕುವಲ್ಲಿಂದ ಹಿಡಿದು ಶಾಲೆಗೆ ಹೋಗುವ ಕಂದಮ್ಮಗಳಿದ್ದರೆ ಅವರನ್ನು ಬಸ್ಸಿನ ತನಕ ಬಿಟ್ಟು ಸಂಜೆ ವಾಪಾಸು ಕರೆತರುವ ಎಸ್ಕಾರ್ಟ್ ಕೆಲಸವೂ ಇವರ ಹೆಗಲೇರಿರುತ್ತದೆ. ಶಾಲೆಯಿಂದ ಮನೆಗೆ ಮರಳಿದ ಮಕ್ಕಳು ಅಜ್ಜ ಅಜ್ಜಿ ಕಥೆ ಹೇಳುವ, ನಗಿಸುವ ಮಗುತನದ ಪ್ರವೃತ್ತಿಯವರಾಗಿದ್ದರೆ ಅವರನ್ನು ಅಂಟಿಕೊಂಡಿರುವುದೇ ಹೆಚ್ಚು. ಧಾವಂತದಲ್ಲಿ ಬದುಕುವ ತಂದೆ ತಾಯಿಗಿಂತ ನೆಮ್ಮದಿಯಾಗಿ ನೆಲೆನಿಂತ ಅಜ್ಜ ಅಜ್ಜಿಯರನ್ನು ಪ್ರೀತಿಸುವ ಮಕ್ಕಳನ್ನು ಇಂತಲ್ಲಿ ನಾವು ಕಾಣಬಹುದು. ಗಂಡ ನಿವೃತ್ತಿಯ ನಂತರ ತನ್ನನ್ನು ಇಷ್ಟು ತೊಡಗಿಸಿಕೊಂಡಿರುವಾಗ ತಾನು ಸುಮ್ಮನೆ ಕೂರಲಾದೀತೇ ಎನ್ನುವ ಮಡದಿ ಅಡುಗೆಮನೆಯಲ್ಲಿ ಶುಚಿರುಚಿಯಾದ ಅಡುಗೆಮಾಡುವಲ್ಲಿಯೋ, ಮನೆಯನ್ನು ಶುಚಿಗೊಳಿಸುವಲ್ಲಿಯೋ ನಿರತಳಾಗಿದ್ದರೆ ಅಚ್ಚರಿಪಡಬೇಕಿಲ್ಲ. ಆದರೆ ಆರೋಗ್ಯಭಾಗ್ಯ ಇಬ್ಬರಿಗೂ ಕೃಪೆದೋರಬೇಕು. ಹಿರಿಯ ನಾಗರಿಕರ ಬದುಕಿನ ಈ ಒಂದು ಪರ್ವ ಎಷ್ಟೊಂದು ಸುಂದರವಲ್ಲವೇ?

     ವಯಸ್ಸಾದಂತೆ ಹೆಚ್ಚಿನವರಿಗೆ ಕಿವಿ, ಕಣ್ಣು, ಕತ್ತು, ಸೊಂಟ, ಕೈಗೆ ಹೊಸರೀತಿಯ  ಆಭರಣಗಳು ಬರುವುದುಂಟು. ದೇಹದ ಅವಯವಗಳು ತಮ್ಮ ಕಾರ್ಯಕ್ಷಮತೆಗೆ ಸೆಡ್ಡುಹೊಡೆಯುವಾಗ ಕಿವಿ ಕೇಳಿಸುವಂತೆ ಇಡುವ ಹಿಯರಿಂಗ್ ಏಡ್, ಕತ್ತು ನೋವಿಗೆ ಬಿಗಿಯುವ ಕೊರಳಪಟ್ಟಿ, ಸೊಂಟನೋವಿಗೆ ಸುತ್ತುವ ಬೆಲ್ಟ್, ಕಣ್ಣಿಗೆ ಸೋಡಾಗ್ಲಾಸ್, ಕೈಗೆ ಊರುಗೋಲು ಎಲ್ಲ ಮಾಮೂಲು. ಅವರು ಧರಿಸುವ ಈ ಆಭರಣಗಳಿಂದ ಅವರಿಗಿರುವ ತೊಂದರೆಯನ್ನು ಹೇಳದೆ ಅರ್ಥಮಾಡಿಕೊಳ್ಳಬಹುದು.     

      ಹಿರಿಯ ನಾಗರಿಕರಿಗೆ ಇರುವ ಕೆಲವೊಂದು ಸವಲತ್ತುಗಳು ಅವರ ಬಾಳಸಂಜೆಗೆ ದಕ್ಕಿದ ಉಪಹಾರಗಳು. ರೈಲು ಪ್ರಯಾಣದಲ್ಲಿ ಮೊದಲೊಮ್ಮೆ ಇದ್ದ ರಿಯಾಯಿತಿ ದರ ಈಗಿಲ್ಲ ಅನ್ನಿ. ಆದರೆ ಬ್ಯಾಂಕಿನಲ್ಲಿ ಹಿರಿಯ ನಾಗರಿಕರಿಗೆ ಸಿಗುವ ಅತ್ಯಲ್ಪ ಹೆಚ್ಚುವರಿ ಬಡ್ಡಿದರಕ್ಕೆ ಕತ್ತರಿ ಬಿದ್ದಿಲ್ಲ. ಸರತಿಸಾಲು ಅನಿವಾರ್ಯವಿರುವ ಕೆಲವೆಡೆ ಹಿರಿಯರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಇರುವುದುಂಟು. ಇತ್ತೀಚೆಗೆ ಮುಖಪುಟದಲ್ಲೊಂದು ಸುದ್ದಿ ಭಾರೀ ಸದ್ದು ಮಾಡಿದೆ. ಬೆಂಗಳೂರಿನ ಹೊಟೇಲೊಂದು ವಾರದ ಒಂದು ನಿರ್ದಿಷ್ಟ ದಿನ ಹಿರಿಯ ನಾಗರಿಕರಿಗೆ ಉಚಿತ ಉಪಾಹಾರದ ವ್ಯವಸ್ಥೆ ಮಾಡಿದೆ. ಅಲ್ಲಿಗೆ ವಯಸ್ಸಾದ ಜೋಡಿಗಳು ಕೈ ಕೈಹಿಡಿದು ಹೋಗಿ ಉಪಾಹಾರ  ಸವಿಯಬಹುದು. 

     ಮುಪ್ಪಿನಕಾಲದ ಇನ್ನೊಂದು ಮುಖವನ್ನು ಚಿತ್ರಿಸದಿದ್ದರೆ ಬರಹ ಅಪೂರ್ಣವಾದೀತು. ಬಾಳಸಂಜೆಯ ಹೊತ್ತಿನಲ್ಲಿ ದೇಹಕ್ಕೆ ಆವರಿಸುವ ಮುಪ್ಪು ಅನೇಕ ಸಂಕಷ್ಟಗಳನ್ನು ಜೊತೆಯಾಗಿಸುತ್ತದೆ. ಕೈಕಾಲು, ಗಂಟು ನೋವು, ನಿಶ್ಚಕ್ತಿ, ಅತಿಮಾತು, ತಮ್ಮ ಕೆಲಸಗಳನ್ನು ತಾವು ಮಾಡಲು ಸಾಧ್ಯವಾಗದೆ  ಹಾಸಿಗೆ ಹಿಡಿಯುವುದು, ಪ್ರಾಣಾಂತಿಕ ಕಾಯಿಲೆಗಳಿಂದ ನರಳಾಟ, ಮರೆವು.... ಹೀಗೆ ಸಾಕಷ್ಟು ತೊಂದರೆಗಳು ಕೊನೆಗಾಲದಲ್ಲಿ ವಕ್ಕರಿಸುವುದುಂಟು. ಅವೆಲ್ಲದರ ಜೊತೆಗೆ ಏಗುತ್ತಾ ಬದುಕುವ ಕಷ್ಟ ಹೇಳತೀರದ್ದು. ಅಂತಹ ಸಂದರ್ಭಗಳಲ್ಲಿ ನರಳುವವರಿಗೂ ಯಮಯಾತನೆ; ನೋಡಿಕೊಳ್ಳುವವರಿಗೂ ಕೈಬಿಡಲಾಗದ ಸಂದಿಗ್ಧತೆ. ಇವುಗಳ ಜೊತೆಗೆ ಇತ್ತೀಚೆಗೆ ಹೆತ್ತವರಿಂದ ದೂರವಾಗಿ ಸುಂದರ ಬದುಕು ಕಟ್ಟಿಕೊಳ್ಳಲು ವಿದೇಶಕ್ಕೆ ಹಾರಿ ಅಲ್ಲಿ ನೆಲೆನಿಂತ ಮಕ್ಕಳ ಕುರಿತಾದ ಚಿಂತನೆ ಹೆಚ್ಚಿನ ಪಾಲಕರನ್ನು ಮಾನಸಿಕವಾಗಿ ಇನ್ನಷ್ಟು ಹೈರಾಣಾಗಿಸಿದೆ. ತಮ್ಮ ಕೊನೆಗಾಲದಲ್ಲಿ ಮಕ್ಕಳು ಹತ್ತಿರ ಇಲ್ಲವೆನ್ನುವ ನೋವು ಅವರನ್ನು ಸದಾ ಕಾಡುತ್ತಿರುತ್ತದೆ. ತೆರೆದ ಮನಸ್ಸಿನಿಂದ ಇದನ್ನು ಹೇಳಲಾಗದಿದ್ದರೂ ಒಳಗೊಳಗೆ ಈ ನೋವು ಅಂತಹವರನ್ನು ಕೊರೆಯುತ್ತಿರುತ್ತದೆ. ಕಡೆಗಾಲದಲ್ಲಿ ಹೆತ್ತಮಕ್ಕಳು ಹತ್ತಿರವಿರದೆ ಹೆತ್ತವರ ಅಂತ್ಯಸಂಸ್ಕಾರವನ್ನು ಬಂಧುಗಳೋ, ನೆರೆಕರೆಯವರೋ ಮಾಡಿ ಮುಗಿಸಿದ ಸಾಕಷ್ಟು ಉದಾಹರಣೆಗಳಿವೆ. ಅದಕ್ಕೆ ತಗಲುವ ವೆಚ್ಚವನ್ನು ತಕ್ಷಣ ಮಕ್ಕಳು ಕಳುಹಿಸಿಕೊಡುತ್ತಾರೆ. ಇಲ್ಲೆಲ್ಲಾ ಹೆಚ್ಚಿನ ಮಕ್ಕಳಿಗೆ ಭಾವನಾತ್ಮಕ ಸಂಬಂಧವೆನ್ನುವುದು ಹಳೆಯ ಸಂಪ್ರದಾಯಕ್ಕೆ ಸಂದವರ ಸರಕಾಗಿ ಕಾಣುತ್ತದೆ. ಕೇವಲ ಹಣ, ಅಂತಸ್ತು, ಶ್ರೀಮಂತಿಕೆಯ ಹೊಂಗನಸನ್ನು ಕಾಣುವವರಿಗೆ ಜೀವನದ ಅತ್ಯಮೂಲ್ಯ ಮಾನವೀಯ ಮೌಲ್ಯಗಳು ತಮಾಷೆಯ ವಿಷಯವಾಗಿ ಕಂಡರೆ ಅಚ್ಚರಿಯಿಲ್ಲ. ಅದಕ್ಕೆ ತಕ್ಕಂತೆ ಹೆತ್ತವರೂ ಮಕ್ಕಳ ಭವಿಷ್ಯವೇ ತಮಗೆ ಮುಖ್ಯ ಅನ್ನುವ ಪರಿಭಾಷೆಯಲ್ಲಿ ಅವರ ನಿಲುವನ್ನು ಸಮರ್ಥಿಸುತ್ತಾರೆ. ಇದಕ್ಕೆ ಒಂದು ರೀತಿಯಲ್ಲಿ ಪರಿಹಾರವೆನ್ನುವುದು ಇಲ್ಲವೇ ಇಲ್ಲ. ಸಂಬಂಧ, ಆತ್ಮೀಯತೆ, ಒಡನಾಟ, ಮಮತೆ, ವಾತ್ಸಲ್ಯ.... ಎಲ್ಲವೂ ಇಂದು ಮೈಕ್ರೋ ಸಂಸಾರದ  ಚೌಕಟ್ಟಿಗೆ ಮಾತ್ರ ಸೀಮಿತವಾಗತೊಡಗಿವೆ. ಹೀಗಾಗಿ ಹೆತ್ತವರ ಅಂತ್ಯಸಂಸ್ಕಾರವೂ ಇಂದು ಇವೆಂಟ್ ಮ್ಯಾನೇಜ್‍ಮೆಂಟ್‍ನ ಪಟ್ಟಿಯಲ್ಲಿ ಕಾಣಿಸಿಕೊಂಡು ಮುಂಗಡವಾಗಿ ಯಾವರೀತಿಯಲ್ಲಿ ನಡೆಯಬೇಕು ಎನ್ನುವುದನ್ನು ತಾವೇ ನಿರ್ಧರಿಸಿ ಕಾಯ್ದಿರಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. 

       ಮಕ್ಕಳು ಹತ್ತಿರವಿಲ್ಲದಿದ್ದರೆ ಹೆತ್ತವರಿಗೆ ನಿರ್ವಾಹವಿಲ್ಲದೆ ಅನಾಥಾಶ್ರಮ ಪರಿಹಾರರೂಪದಲ್ಲಿ ಕಾಣಬರುವುದುಂಟು. ಇದೊಂದು ರೀತಿಯಲ್ಲಿ ಒಳ್ಳೆಯ ಉಪಾಯವೇ. ತಮ್ಮಂತಿರುವ ಇತರರ ಒಡನಾಟದಲ್ಲಿ ಕೊನೆಯ ದಿನಗಳನ್ನು ಸಂತಸದಿಂದ ಕಳೆಯಲು ಈ ತಾಣ ನೆರವಾಗಲೂಬಹುದು.         

      ಮುಪ್ಪು ಎನ್ನುವುದು ಎಲ್ಲರ ಬದುಕಿನಲ್ಲಿ ಕರೆಯದೆ ಬರುವ ನಿರೀಕ್ಷಿತ ಆಗಂತುಕ. ಅವನನ್ನು ಬರಮಾಡಿಕೊಳ್ಳದೆ ಬೇರೆ ದಾರಿಯಿಲ್ಲ. ಆದುದರಿಂದ ಎದೆಗುಂದದೆ ತಾನು ಇದರಿಂದ ಹೊರತಲ್ಲ ಎನ್ನುವ ಮನೋಭಾವವನ್ನು ಗಟ್ಟಿಗೊಳಿಸಿ ಇದ್ದಷ್ಟು ದಿನ ಸಂತೃಪ್ತಿಯಿಂದ ಇರುವುದು ಲೇಸಲ್ಲವೇ? ದುಡಿಯುವ ಕಾಲದಲ್ಲಿ ಮುಪ್ಪಿನಕಾಲಕ್ಕೆ ಅಂತ ಒಂದಿಷ್ಟು ಜತನದಿಂದ ಉಳಿಸಿದರೆ ಬಾಳಸಂಜೆಯ ಬದುಕು ಖಂಡಿತಾ ಭಾರವಾಗಲಾರದು. ಈ ಕಾಲದಲ್ಲಿ ಆರೋಗ್ಯ ಎನ್ನುವುದು ಸಂಪತ್ತಿದ್ದಂತೆ. ಮುಂಜಾನೆ ನಡಿಗೆ, ಲಘು ವ್ಯಾಯಾಮ, ಯೋಗ, ಧ್ಯಾನ, ಓದು, ಗೆಳೆತನ, ಹರಟೆ, ನಗು ಎಲ್ಲವೂ ಮುಪ್ಪಿನ ಮೈಮನಸ್ಸನ್ನು ಯೌವನಗೊಳಿಸುವ ಟಾನಿಕ್‍ಗಳು ಎಂಬುದು ಮಾತ್ರ ನೆನಪಿರಲಿ. 


ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಬಾಳಸಂಜೆಯ ಹಾದಿಯಲ್ಲಿ”

  1. Raghavendra Mangalore

    ಬಾಳ ಸಂಜೆಯ ಹಾದಿಯನ್ನು ಸರಿಯಾಗಿ ತೋರಿಸಿರುವಿರಿ..ಇದು ಅರವತ್ತು ದಾಟಿದ ನಮ್ಮಂತಹ ಹಿರಿಯ ಜೀವಿಗಳ ನೋವು ನಲಿವುಗಳ ಸದ್ಯದ ಪರಿಸ್ಥಿತಿಯ ವಾಸ್ತವ ಚಿತ್ರಣವೂ ಹೌದು.ಲೇಖನ ಅರ್ಥಪೂರ್ಣವಾಗಿದೆ. ಅಭಿನಂದನೆಗಳು ಸಾರ್.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter