ಯಾರು ಹಾಸಿಟ್ಟವರು...! ದಂಡೆ ದುಂಡುಮಲ್ಲಿಗೆಯ ಸಿರಿಯಲಿ ನಡೆದಂತೆ ಹನಿಹನಿ ಮೊಗ್ಗು ತನಿಯಾಗಿ ಸ್ಪರ್ಶಿಸಿದಂತೆ ಲಜ್ಜೆಯ ಮುಸುಕಲಿ ಮೆದುಭಾವಗಳು ತಲ್ಲೀನವಾದಂತೆ ತೋಟದಾಚೆಗೂ ನೆರಳು ಯಾರು ಚಿತ್ರಿಸಿದವರು...! ತೇವಗೊಂಡ ನೆಲದ ಮೈಯಲಿ ಮೆರುಗು ಮೂಡುವಂತೆ ಇಳೆಯ ಚೆಲುವು ಇಮ್ಮಡಿ ನೂರ್ಮಡಿಯಾಗುವಂತೆ ಬಟ್ಟ ಬಯಲಿನ ಬೆಳಕನೇ ನಾಚಿಸುವಂತೆ ನೀಲಿಮದ ಮೋರೆಯಲಿ ಮೂಡಿತೊಂದು ಕಾಮನಬಿಲ್ಲು ಯಾರ ಹೆಜ್ಜೆಯ ಸದ್ದು...! ಹೃದಯೋನ್ಮಾದಕೆ ಹಸಿ ಬೆರೆತಂತೆ ಸ್ಥಾಯೀಭಾವಗಳು ವಿಹಾರಕೆ ಅಣಿಯಾದಂತೆ ಒಲುಮೆಯ ಕಸುವು ಕವಲೊಡೆದಂತೆ ತೋಟದೊಳಗಿನ ತಂಪನು ದಾಟಿ ಬರುವಂತೆ ಬಂದು ಹೋದವರಾರಿರಬಹುದು...! ವನಸುಮಗಳು ತೊನೆ ತೊನೆದು ಕುಸುಮಿಸುತಿವೆ ತಂಗಾಳಿ ನೆರಿಗೆಯಲಿ ಪಕಳೆಗಳು ನಲಿಯುತಿವೆ ಮೈಸವರಿ ಘಮ್ಮೆಂದು ರಮಿಸುತಿವೆ ಜಗದೊಡಲ ರಸಿಕತೆಗೆ ಕಚಗುಳಿಯಿಡುತಿವೆ ನಿತ್ಯ ನೆರಳಿನಾಸರೆಯಿರದ ಬಯಲು ಹೀಗೆ ಸುಖದ ಸೋಗಿನಲಿರುವಾಗಲೇ ಅನುವಾಗಿ ಮುದಗೊಂಡು ಹದಗೊಂಡು ರಾಡಿಯಾದ ಮನಸುಗಳು ಮಡಿಗೊಂಡು ಆ ನೆನಪುಗಳಲೇ ನೆನೆದು ಧ್ಯಾನಸ್ಥರಾಗಬೇಕು ಮತ್ತೆಂದು ಬರುವರೋ ಏನೋ...! ತೋಟದೊಳಗಿನ ನೆರಳಿನ ತಂಪು ಬಯಲಲಿ ಒಡಮೂಡಲು ಸಪ್ತ ರಂಗಿನ ರಾಗವನು ನುಡಿಸಲು ಹೃದಯದ ಬಣ್ಣ ಸಂಪ್ರೀತಿಯಲಿ ಗಾಢವಾಗಲು ಕಾಯಬೇಕು ತೋಟದಾಚೆಯ ನೆರಳಿಗೆ * ಅನಿತಾ ಪಿ. ತಾಕೊಡೆ
ತೋಟದಾಚೆಯ ನೆರಳು
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ಅನಿತಾ ಪಿ. ತಾಕೊಡೆ
ಅನಿತಾ ಪಿ. ತಾಕೊಡೆ
ಶಿಕ್ಷಣ ; ಮುಂಬೈ ವಿಶ್ವವಿದ್ಯಾಲಯದಲ್ಲಿ ಎಂ.ಎ ಪದವಿಯನ್ನು ಪ್ರಥಮ rank ಪಡೆಯುವುದರ ಮೂಲಕ ಎಂ.ಬಿ.ಕುಕ್ಯಾನ್ ಬಂಗಾರದ ಪದಕ ಗಳಿಸಿದ್ದಾರೆ (2017-19)
ಐದು ಕೃತಿಗಳು ಲೋಕಾರ್ಪಣೆಗೊಂಡಿವೆ;
ಕಾಯುತ್ತಾ ಕವಿತೆ ಅಂತರಂಗದ ಮೃದಂಗ (ಕನ್ನಡ ಕವನ ಸಂಕಲನ) ಮರಿಯಲದ ಮದಿಮಾಲ್ (ತುಳು ಕವನ ಸಂಕಲನ).
ಗದ್ಯ ಬರಹ: ‘ಸವ್ಯಸಾಚಿ ಸಾಹಿತಿ’ ‘ಮೋಹನ ತರಂಗ’(ಜೀವನ ಚರಿತ್ರೆ)
ಎರಡನೇ ಕವನಸಂಕಲನ “ಅಂತರಂಗದ ಮೃದಂಗ” ದ ಹಸ್ತಪ್ರತಿಗೆ, ಜಗಜ್ಯೋತಿ ಕಲಾವೃಂದ ಮುಂಬೈ ವತಿಯಿಂದ “ಶ್ರೀಮತಿ ಸುಶೀಲಾ ಎಸ್ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ”(2016) ಲಭಿಸಿದೆ. ಇತ್ತೀಚೆಗೆ “ಜನಸ್ಪಂದನ ಟ್ರಸ್ಟ್(ರಿ) ಸುವ್ವಿ ಪಬ್ಲಿಕೇಷನ್ಸ್, ಶಿಕಾರಿಪುರ” ಕೊಡಮಾಡುವ “ಅಲ್ಲಮ ಸಾಹಿತ್ಯ ಪ್ರಶಸ್ತಿ”(2018) ಕೂಡ ಈ ಕೃತಿಗೆ ಲಭಿಸಿದೆ.
ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಮೈಸೂರು ಇವರು ಎರ್ಪಡಿಸಿದ ಕೆ ಎಸ್ ನ, ನೆನಪಿನ ಪ್ರೇಮ ಕಾವ್ಯಸ್ಪರ್ಧೆಯಲ್ಲಿ ಎರಡು ಬಾರಿ ಪ್ರೇಮಕಾವ್ಯ ಪುರಸ್ಕಾರ,(2011, 2015) ಹಾಗೂ 2017ರಲ್ಲಿ “ವಿಶ್ವ ಕವಿ ಕುವೆಂಪು ಕಾವ್ಯ ಪುರಸ್ಕಾರ” ಲಭಿಸಿದೆ.
ಮಹಾರಾಷ್ಟ್ರ ನವಚಿಂತನ ಸಂಸ್ಥೆಯಿಂದ ಕವಿರತ್ನ ಪುರಸ್ಕಾರ(2012-13), ಮುಂಬಯಿ ಕಲಾಜಗತ್ತು ಸಂಸ್ಥೆಯ ವತಿಯಿಂದ “ದಿ ಗೋಪಾಲಕೃಷ್ಣ ಸ್ಮಾರಕ ಪ್ರಶಸ್ತಿ(2013), ಡೊಂಬಿವಲಿ ತುಳುಕೂಟ ವತಿಯಿಂದ ‘ತುಳುಸಿರಿ’ಪ್ರಶಸ್ತಿ(2013), ಕಾವ್ಯಸಿರಿ ಪ್ರಶಸ್ತಿ (2019) ಲಭಿಸಿದೆ.
2019ರಲ್ಲಿ ಮೈಸೂರು ಅರಮನೆಯ ವಿಶ್ವ ವಿಖ್ಯಾತ ದಸರಾ ಕವಿಗೋಷ್ಠಿಯಲ್ಲೂ ಭಾಗವಹಿಸಿದ್ದಾರೆ. ಸಂಕ್ರಮಣ ಸಾಹಿತ್ಯ ಸ್ಪರ್ಧೆಯಲ್ಲಿ “ಅಪ್ಪ ನೆಟ್ಟ ಸೀತಾಫಲದ ಮರ” ಕಥೆಗೆ ಸಂಕ್ರಮಣ ಸಾಹಿತ್ಯ ಬಹುಮಾನ ಲಭಿಸಿದೆ (2017).
ಪ್ರಜಾವಾಣಿ ಪತ್ರಿಕೆಯ ಪ್ರೇಮಪತ್ರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಲಭಿಸಿದೆ (2018).ಹೀಗೆ ಇವರ ಹಲವಾರು ಕತೆ ಕವಿತೆಗಳಿಗೆ ಬಹುಮಾನಗಳು ಲಭಿಸಿವೆ.
ಕತೆ, ಕವನ, ಲೇಖನ, ಪ್ರವಾಸ ಕಥನ, ಸಂದರ್ಶನ ಲೇಖನಗಳು, ಅಂಕಣ ಬರಹಗಳು ಒಳನಾಡಿನ ಮತ್ತು ಹೊರನಾಡಿನ ಪತ್ರಿಕೆಯಲ್ಲಿ ನಿರಂತರವಾಗಿ ಪ್ರಕಟವಾಗುತ್ತಲಿವೆ. ಮುಂಬಯಿ ಮತ್ತು ಮಂಗಳೂರು ಆಕಾಶವಾಣಿಯಲ್ಲಿ ಕತೆ ಮತ್ತು ಕವನಗಳು ಪ್ರಸಾರಗೊಂಡಿವೆ.
ಸೃಜನಾ ಲೇಖಕಿಯರ ಬಳಗ ಮುಂಬೈ ಇದರ ಜೊತೆ ಕೋಶಾಧಿಕಾರಿಯಾಗಿ ಹಾಗೂ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರಘಟಕದ ಕಾರ್ಯಕಾರಿ ಸಮಿತಿಯ ಸದಸ್ಯತ್ವವನ್ನು ಪಡೆದಿದ್ದಾರೆ.
All Posts
8 thoughts on “ತೋಟದಾಚೆಯ ನೆರಳು”
ಸುಂದರ ಪ್ರಕೃತಿ ಗೀತ
ಧನ್ಯವಾದ ಸವಿತಾ
ತೋಟದಚೆಯ ನೆರಳು – ಕವಿತೆ. ತುಂಬಾ ಚೆನ್ನಾಗಿ ಮೂಡಿಬಂದಿದೆ. ಅಭಿನಂದನೆಗಳು ಅನಿತರವರೆ 😊👍
ಧನ್ಯವಾದ ಸರ್
Very meaningful thoughts expressed……when you read yourself get in the emotions….
ಧನ್ಯವಾದ ಸರ್
ಮನ ಮುಟ್ಟುವ ಪ್ರಕೃತಿ ಕವನ
ಧನ್ಯವಾದ ಸರ್