ಅದೊಂದು ದಿನ ನಮ್ಮ ‘ಸಿಲಿಕಾನ್ ವ್ಯಾಲಿ’ ನಗರದಲ್ಲಿ ವಾಸಿಸುವ ‘ಹೆಮ್ಮೆಯ ಕನ್ನಡಿಗ’ (ನವೆಂಬರ್ ಮಾಸದಲ್ಲಿ ಪ್ರತ್ಯಕ್ಷವಾಗಿ ನಂತರ ಧ್ರುವತಾರೆಯಂತೆ ಮರೆಯಾಗುವ ಕನ್ನಡತನದ ಪ್ರೀತಿಯ ಕುರುಹು) ಗುಂಡಣ್ಣ ಮಹಾದೇವಪುರದ ಭರ್ಜರಿ ಮಳೆಯಲ್ಲಿ ಸಿಲುಕಿ ಆಶ್ರಯಕ್ಕಾಗಿ ಹತ್ತಿರದ ಒಂದು ಪ್ರತಿಷ್ಠಿತ ‘ಅಪ್ಪಿರೋ’ (ವಿಪ್ರೋ) ಐ ಟಿ ಕಂಪನಿಯ ಕಾರಿಡಾರ್ ಹೊಕ್ಕ. ದೂರದಿಂದ ತನ್ನ ಟೂ ವೀಲರ್ ತಳ್ಳಿಕೊಂಡು ಬಂದುದ್ದಕ್ಕೆ ಎನೋ ತಲೆ ಸುತ್ತಿದಂತಾಗಿ ಮುಂದೆ ಇದ್ದ ಪಾರ್ಕ್ ಹೊಕ್ಕು ಸ್ವಲ್ಪ ಹೊತ್ತು ವಿಶ್ರಮಿಸಿದ ಗುಂಡಣ್ಣ.
ಅರ್ಧ ಘಂಟೆಯ ನಂತರ ಯಾರೋ ಕೋಲಿನಿಂದ ತನ್ನ ಬೆನ್ನನ್ನು ತಟ್ಟಿದಂತಾದ (ಸವರಿದಂತಾದ) ಹೊಸ ಅನುಭವದಿಂದ ಕಣ್ಣು ತೆಗೆದು ನೋಡುತ್ತಾನೆ… ಎದುರಿಗೆ ತಾನು ಎಂದೂ ನೋಡದ ಚಿತ್ರ ವಿಚಿತ್ರ ವೇಷಭೂಷಣ ಧರಿಸಿದ ಭಾರಿ ಗಾತ್ರದ ಮನುಷ್ಯ ನಿಂತಿದ್ದಾನೆ. ಹತ್ತಿರದಲ್ಲೆಲ್ಲೋ ಎಮ್ಮೆಯೋ ಅಥವಾ ಕೋಣವೋ ಒದರುವ ಸದ್ದು ಬೇರೆ!
ಬೆಂಗಳೂರು ನಾಗರಿಕನ ಅಭ್ಯಾಸದಂತೆ ‘ಯಾರು ನೀನು..ನಿಷ್ಚಿಂತೆಯಾಗಿ ಮಲಗಿರುವ ಸಂತೃಪ್ತ ಕನ್ನಡಿಗನಾದ ನನ್ನನ್ನೇಕೆ ಎಬ್ಬಿಸುತ್ತಿರುವೆ …’ ಎಂದು ತಮಿಳು ಮಿಶ್ರಿತ ಕನ್ನಡದಲ್ಲಿ ಪ್ರಶ್ನಿಸಿದ ಗುಂಡಣ್ಣಎದುರಿಗೆ ನಿಂತ ಆಜಾನುಬಾಹು ವ್ಯಕ್ತಿಯನ್ನುದ್ದೇಶಿಸಿ.
“ನನ್ನ ವೇಷ ಭೂಷಣವನ್ನು ನೋಡಿಯಾದರೂ ತಿಳಿಯುತ್ತಿಲ್ಲವೇ ಮೂರ್ಖ ನಾನು ಯಾರೆಂದು?…” ಗುಡುಗಿದ ಆಜಾನುಭಾವಿ…
“ಯಾವುದೋ ಡ್ರಾಮಾ ಕಂಪನಿಯಲ್ಲಿ ಸಿಗುವ ಅತಿರಂಜಿತ ವೇಷ ಭೂಷಣಗಳನ್ನು ಧರಿಸಿ ಬಂದರೆ ನನಗೇನು ಗೊತ್ತಾಗುತ್ತದೆ?… ನಿನ್ನ ಆಧಾರ್ ಕಾರ್ಡ್ ಇದ್ದರೆ ತೋರಿಸು ಯಾರು ಅಂತ ತಿಳಿಯುತ್ತದೆ…” ಎಂದು ಗದರಿದ ಗುಂಡಣ್ಣ.
ಇದನ್ನು ಕೇಳಿ ಇದ್ದಕ್ಕಿದ್ದಂತೆ ಬಿ.ಪಿ ಹೆಚ್ಚಾಗಿ… ಆ ಆಜಾನುಭಾವಿ ಜೋರಾಗಿ ಅಬ್ಬರಿಸಿದ “ನೀನು ಬೆಂಗಳೂರಿನವನು ಎಂದು ಹೆಚ್ಚು ಸ್ಮಾರ್ಟ್ ಮಾಡಬೇಡ! ನಿನ್ನ ಜೀವದ ‘ಏಕ್ಸ್ ಪೈರಿ’ ಡೇಟ್ ನಿನ್ನೆಗೆ ಮುಗಿದಿದೆ… ನಿನ್ನ ಪ್ರಾಣವನ್ನು ಒಯ್ಯಲೆಂದು ಆಕಾಶದ ಮೇಲಿಂದ ಧರೆಗಿಳಿದು ಬಂದ ಯಮರಾಜ ನಾನು…ನಿನಗೆ ಅನುಮಾನವಿದ್ದರೆ ಅಲ್ಲಿ ಕಟ್ಟಿ ಹಾಕಿದ ಕೋಣವನ್ನು ನೋಡು…”
“ಸುಮಾರು ಮೂವತ್ತು ವರ್ಷಗಳ ಹಿಂದೆ ಬಂದ ‘ಭೂಲೋಕದಲ್ಲಿ ಯಮರಾಜ’ ಸಿನಿಮಾವನ್ನು ಇತ್ತೀಚಿಗೆ ಟಿ ವಿ ಯಲ್ಲಿ ನೋಡಿದ್ದೇನೆ… ಅದರಲ್ಲಿನ ಯಮರಾಜನ ಪಾತ್ರಧಾರಿಯ ಹಾಗೂ ನಿನ್ನ ಡ್ರೆಸ್ ಹೆಚ್ಚು ಕಡಿಮೆ ಒಂದೇ ಇದೆ… ಇಷ್ಟು ವರ್ಷಗಳಾದರೂ ನೀನು ಇನ್ನೂ ‘ಅಪ್ಡೇಟ್’ ಆಗಿಲ್ಲವೇನು?…” ಎಂದು ವ್ಯಂಗ್ಯ ಮಿಶ್ರಿತ ಸ್ವರದಲ್ಲಿ ಪ್ರಶ್ನಿಸಿದ ಗುಂಡಣ್ಣ.
“ಯಾಕಾಗಿಲ್ಲ… ಸಂಪ್ರದಾಯ ವೇಷ ಹಾಕಿಕೊಂಡ ಮಾತ್ರಕ್ಕೆ ನಾನಿನ್ನು ‘ಅಂದ ಕಾಲತ್ತಿಲ್’ (ಹಳೇ ಕಾಲದವನು…) ಎಂದುಕೊಂಡೆಯಾ ಹೇಗೆ? ರಾಜಕಾರಣಿಗಳ ಭಾಷಣದಂತೆ ಹೆಚ್ಚು ‘ತೌಡು’ ಕುಟ್ಟುವದು ಬೇಡ.. ನೇರ ವಿಷಯಕ್ಕೆ ಬರುತ್ತಿರುವೆ. ಮುಗಿಯಿತು ನಿನ್ನ ಆಯುಷ್ಯ… ಇನ್ನು ನಡೆ ನನ್ನ ಹಿಂದೆ…”ಎಂದು ಕೈಯಲ್ಲಿ ಹಿಡಿದ ಚಿಕ್ಕ ಡಿವೈಸ್ ನೊಂದಿಗೆ ಗುಂಡಣ್ಣನ ಹತ್ತಿರ ಬಂದು ಸಿಡುಕುವ ಧ್ವನಿಯಲ್ಲಿ ನುಡಿದ ಯಮರಾಜ.
” ಒಂದು ವಾರದಿಂದ ಹಗಲೂ ರಾತ್ರಿ ಬರುತ್ತಿರುವ ಭೋರ್ಗರೆವ ಮಳೆಗೆ ಗುಂಡುಕಲ್ಲಿನಂತೆ ಹೆದರದೆ ಬೆದರದೆ ನಿಂತಿರುವ ನನಗೆ ಜೀವ ಭಯವೆ?…ನಾನು ಹುಟ್ಟಿ ಬೆಳೆದ ‘ಬೆಂದ ಕಾಳೂರು’ (ಬೆಂಗಳೂರು) ಊರು ಇದು…ರಾಜ ಕಾಲುವೆಗಳನ್ನು, ಕೆರೆ ಕಟ್ಟೆಗಳನ್ನು ನುಂಗಿ ‘ಕಟ್ಟಿದ’ ಮಹಾ ನಗರವಿದು…ನೆನಪಿರಲಿ…ಅದು ಸರಿ…ನನ್ನ ಜೀವವನ್ನು ಒಯ್ಯಲಿಕ್ಕೆ ನಿನ್ನೊಂದಿಗೆ ನಿನ್ನ ಪರ್ಸನಲ್ ಸೆಕ್ರೆಟರಿ ಅದೇ ‘ಚಿತ್ರಗುಪ್ತ’ ಬರಲಿಲ್ಲವೆ?… ಆತ ನಿನ್ನ ಜೊತೆ ಇದ್ದರೆ ನೀನು ಯಮರಾಜ ಎಂದು ಸ್ವಲ್ಪವಾದರು ನಾನು ನಂಬಬಹುದಿತ್ತು…ಮಳೆಯಲ್ಲಿ ಸಾಕಷ್ಟು ಸಿಲುಕಿ ಸುಸ್ತಾಗಿದ್ದೇನೆ…ನಿನ್ನ ಕೆಲಸ ನೀನು ನೋಡಿಕೊ… ನನಗೆ ಡಿಸ್ಟರ್ಬ್ ಮಾಡಬೇಡ…ಪ್ಲೀಸ್” ಎಂದು ಗುಂಡಣ್ಣ ಕಸರಿಕೊಂಡ.
“ನನ್ನ ಬಲಗೈ ‘ಚಿತ್ರಗುಪ್ತ’ ನಿಮ್ಮ ‘ಮುಳುಗಿ ತೇಲುವ ಮಹಾ ನಗರ’ ದ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಎರಡು ದಿನ ಆಯಿತು…ಇನ್ನೊಂದಿನ ಬೇಕಂತೆ ಅಲ್ಲಿಂದ ಹೊರಬರಲು…ಹೆಚ್ಚು ಮತನಾಡಬೇಡ ನಿನ್ನ ಆಯುಷ್ಯ ಮುಗಿದಿದೆ…ಬೇಗ ಉಸಿರು ನಿಲ್ಲಿಸು.. ಬೇಗ ಬೇಗ…ನಿನ್ನ ಜೀವವನ್ನು ಈ ‘ಪೆನ್ ಡ್ರೈವ್’ ನಲ್ಲಿ ಸೇವ್ ಮಾಡಿ ಕೂಡಲೇ ಮೇಲಿನ ‘ನೆಟ್ ವರ್ಕ್’ ಗೆ ಎಕ್ಸ್ ಪೋರ್ಟ್ ಮಾಡಬೇಕಿದೆ ಅರ್ಜೆಂಟ್ ಆಗಿ…’ ಎಂದು ಅವಸರಿಸತೊಡಗಿದ ಯಮರಾಜ.
ಯಮರಾಜನ ವೇಷ ಮತ್ತು ಹೊಸ ವರಸೆಗಳನ್ನು ನೋಡಿ ನಗುತ್ತಾ ನಿಂತ ಗುಂಡಣ್ಣ…ಗುಂಡಣ್ಣನ ಕಣ್ಣುಗಳಲ್ಲಿ ಲವಲೇಶದಷ್ಟು ‘ಸಾವಿನ’ ಭಯವಿರದೆ ‘ಸ.ಗೌ'(ಸದಾನಂದ ಗೌಡ) ರ ನಗು ಮುಖದ ಮೇಲಿತ್ತು.
“ಮೃತ್ಯುವಿಗೆ ಅಂಜಲಾರದ ಮನುಷ್ಯ ಯಾರೂ ಇಲ್ಲ..ಒಮ್ಮೆ ಮೃತ್ಯುವನ್ನು ಪ್ರತ್ಯಕ್ಷ ನೋಡಿದಮೇಲೆ ಅದರ ಭಯವೇ ಬಾರದು… ಅಗೋ ಅಲ್ಲಿ ನೋಡು…ನನ್ನ ಹೆಂಡತಿ ಸಾವಿತ್ರಿ ನೀರಿನ ಬೋಟಿನಲ್ಲಿ ಬರುತ್ತಿದ್ದಾಳೆ… ಅಡ್ಡಡ್ಡ ನಿಲ್ಲಬೇಡ…ಆಕೆಗೆ ಹೆಚ್ಚು ಸಮಯವಿಲ್ಲ… ನಿಜ ಹೇಳಬೇಕೆಂದರೆ ಜೀವ ಬಿಡಲು ನಾನು ತಯಾರು… ಅದನ್ನು ಒಯ್ಯಲು ನೀನು ತಯಾರು…ಓಕೆ… ಆದರೆ ನಿನ್ನ ಪೆನ್ ಡ್ರೈವ್ ನಲ್ಲಿ ಹಾಕಿ ನನ್ನ ಜೀವ ಒಯ್ಯಲು ನನ್ನ ಹೆಂಡತಿ ಬಿಡಬೇಕಲ್ಲ!” ಎಂದು ಮತ್ತೊಮ್ಮೆ ನಸು ನಗುತ್ತ ನುಡಿದ ಗುಂಡಣ್ಣ.
“ಟಿ.ವಿಯಲ್ಲಿ ಸೀರಿಯಲ್ ನೋಡಿ ಬರುವದರೊಳಗೆ ಹೊತ್ತಾಯ್ತು…ಮತ್ತೆ ಇನ್ನೊಂದು ಶುರುವಾಗುವದರೊಳಗೆ ನಾನು ಮನೆ ಸೇರಬೇಕು…ಈಗೇನು ನಾನು ತಂದಿದ್ದೇನೆ ಮೊದಲು ಅದನ್ನು ತಿಂದು ಬೇಗ ರೆಡಿ ಆಗಿರಿ…” ಎಂದು ಗಂಡನನ್ನು ಉದ್ದೇಶಿಸಿ ನುಡಿದಳು.
ಎಷ್ಟು ಧೈರ್ಯ ಈ ಹೆಂಗಸಿಗೆ…ದೈತ್ಯ ಗಾತ್ರದ ತಾನು ಆಕೆಯ ಗಂಡನ ಪ್ರಾಣವನ್ನು ಸೆಳೆದೊಯ್ಯಲು ಪಕ್ಕದಲ್ಲೇ ರೆಡಿಯಾಗಿ ನಿಂತ ‘ಬಾಹುಬಲಿ’ ಕಾಣುತ್ತಿಲ್ಲವೇನು… ಅಥವಾ ‘ಜಾಣ ಕುರುಡು’ ಆಕೆಯ ಕಣ್ಣು ರೆಪ್ಪೆಗಳನ್ನು ಮುಚ್ಚಿದೆಯಾ ಎನ್ನುವ ಗೊಂದಲಕ್ಕೆ ಬಿದ್ದ ಅರೆಕ್ಷಣ ಯಮರಾಜ…
‘ಡ್ಯೂಟಿ ಫರ್ಸ್ಟ್’ ಎಂಬುದನ್ನು ನೆನಪಿಸಿಕೊಂಡು, ಉಳಿದದ್ದು ನಂತರ ಎಂದು ಮೊದಲು ಗುಂಡಣ್ಣನ ಜೀವವನ್ನು ತನ್ನ ಪುಟ್ಟ ಡಿವೈಸ್ ಪೆನ್ ಡ್ರೈವ್ ನಲ್ಲಿ ದಾಖಲಿಸಿ ಅಡಗಿಸಿದ ಯಮರಾಜ.
ಕೂಡಲೇ ಧಪ್ ಎಂದು ಬಿದ್ದ ಗಂಡನ ತಲೆಯನ್ನು ತನ್ನ ತೊಡೆಯ ಮೇಲಿರಿಸಿಕೊಂಡು ತಕ್ಷಣವೇ ‘ಬೈಗಳ ಸಹಸ್ರ ನಾಮಾಂಜಲಿ’ ಪಠಿಸಲು ಆರಂಭಿಸಿಯೇ ಬಿಟ್ಟಳು ಸಾವಿತ್ರಿ.
“ಈಗ ಬಾಯಿಗೆ ಬಂದಂತೆ ನಿಂದಿಸಿದರೆ ಪ್ರಯೋಜನವಿಲ್ಲ. ನಿನ್ನ ಗಂಡನ ಆಯುಷ್ಯ ಮುಗಿದಿದೆ…ಈಗ ಆತನ ಜೀವ ನನ್ನ ಪೆನ್ ಡ್ರೈವ್ ನಲ್ಲಿ ಭದ್ರವಾಗಿ ಅಡಗಿದೆ…ನೀನಿನ್ನು ಮನೆಗೆ ಹೋಗಿ ಆರಾಮಾಗಿ ವಿಶ್ರಾಂತಿ ತೆಗೆದುಕೊಳ್ಳಬಹುದಮ್ಮ…”ಎಂದು ಸಲಹೆ ನೀಡಿದ ಯಮರಾಜ.
ಅಲ್ಲಿಯವರೆಗೆ ಸ್ಪಷ್ಟವಾಗಿ ಕಾಣದ ಯಮರಾಜ ಈಗ ಸಾವಿತ್ರಿಯ ಕಣ್ಣಿಗೆ ಬಿದ್ದ..ಆದರೂ ಆಕೆ ಅಂಜಲಿಲ್ಲ…ಭಯಗೊಳ್ಳಲಿಲ್ಲ… ಧೃತಿಗೆಡಲಿಲ್ಲ…ಏಕೆಂದರೆ ಆಕೆ ‘ಅಂಜದ ಹೆಣ್ಣು!’
“ನಾನು ಯಾರೋ ನಿನಗೆ ಸರಿಯಾಗಿ ಗೊತ್ತಿದ್ದಂತಿಲ್ಲ…ಎಲ್ಲರೂ ನನ್ನನ್ನು ‘ಸೀರಿಯಲ್ ಸಾವಿತ್ರಿ’ ಎಂದು ಪ್ರೀತಿಯಿಂದ ಕರೆಯುತ್ತಾರೆ. ಅಲ್ಲಿ ಮನೆಯಲ್ಲಿ ಸೀರಿಯಲ್ ನೋಡದೆ ಇರೋದಿಲ್ಲ…ಇಲ್ಲಿ ನನ್ನ ‘ಪತಿದೇವ’ ಗುಂಡಣ್ಣನ ಆರೈಕೆಯನ್ನೂ ಬಿಡೋದಿಲ್ಲ…ಸುಮ್ಮನೆ ರಗಳೆ ಮಾಡಬೇಡ… ರೊಚ್ಚಿಗೆದ್ದರೆ ನಾನು ಕನ್ನಡ ನಾಡಿನ ‘ಮಮತಾ…'(ಬ್ಯಾನರ್ಜಿ)
ರೂಪ ತಾಳಿ ಜೋರಾಗಿ ಕಿರುಚಿಬಿಡುತ್ತೇನೆ…ಹುಷಾರ್” ಎಂದು ಖಡಕ್ಕಾಗಿ ಯಮರಾಜಗೆ ವಾರ್ನಿಂಗ್ ಕೊಟ್ಟಳು ಗುಂಡಣ್ಣನ ಒಬ್ಬಳೇ ಒಬ್ಬ ಹೆಂಡತಿ ‘ಸತಿ ಸಾವಿತ್ರಿ’.
ಇಂತಹ ಮೂರ್ಖ ಹೆಂಗಸಿನೊಂದಿಗೆ ಎಷ್ಟು ಆರ್ಗುಮೆಂಟ್ ಮಾಡಿದರೂ ಪ್ರಯೋಜನವಿಲ್ಲ ಎಂದು ಅರಿತು ಪೆನ್ ಡ್ರೈವ್ ಕೈಯಲ್ಲಿ ಹಿಡಿದು ಬಿರಿಸು ಹೆಜ್ಜೆ ಹಾಕತೊಡಗಿದ ಯಮರಾಜ.
‘ಸೀರಿಯಲ್ ಸಾವಿತ್ರಿ’ ಏನು ಸಾಮಾನ್ಯ ಹೆಂಗಸೇ… ಬೆನ್ನು ಬಿಡದ ಭೇತಾಳದಂತೆ ಹಿಂಬಾಲಿಸಿದಳು ಯಮರಾಜನ ಹಿಂದೆ ಅಷ್ಟೇ ಬಿರುಸಾಗಿ ಹೆಜ್ಜೆ ಹಾಕುತ್ತಾ… ಸಿನಿಮಾಗಳಲ್ಲಿನ ವಿಲನ್ ಕಾರ್ ಚೇಸ್ ಮಾಡುವ ಹೀರೊನಂತೆ ಯಮರಾಜನ ಹಿಂದೆ ಸರ ಸರ ಓಡಿದಳು…
ಈಕೆಯ ‘ಧಾಡಸಿಗೆ’ ಬೆದರಿದ ಯಮರಾಜ ಈಗ ತನ್ನ ಸ್ಪೀಡ್ ಮತ್ತಷ್ಟು ಹೆಚ್ಚಿಸಿದ… ದಿನಾಲು ಸಿಟಿ ಬಸ್ ಗಳನ್ನು ಓಡೋಡುತ್ತಾ ಬಂದು ಹತ್ತುವ ಕರವಿದ್ಯೆ ಕಲಿತಿದ್ದ ‘ಸೀರಿಯಲ್ ಸಾವಿತ್ರಿ’ಗೆ ಅದೇನು ಅಂತಹ ಸ್ಪೀಡ್ ಅನಿಸಲಿಲ್ಲ…ಆದರೆ ಹೆಂಗಸಿನ ಜೊತೆಯೊಂದಿಗೆ ಓಡುವ ಹೊಸ ಅನುಭವದಿಂದಾಗಿ ನಾಚಿ
ನೀರಾದ ಯಮರಾಜ!
ತನ್ನ ನೆರಳಂತೆ ಹಿಂಬಾಲಿಸುವ ಈ
‘ಶಕ್ತಿ ಶಾಲಿ’ ಹೆಂಗಸಿನಿಂದ ತಪ್ಪಿಸಿಕೊಳ್ಳುವುದೇ ಸದ್ಯದ ಉತ್ತಮ ಮಾರ್ಗ ಎಂದು ಭಾವಿಸಿ ‘ಸೀರಿಯಲ್ ಸಾವಿತ್ರಿ’ ಗೆ ಧೀಡಿರೆಂದು ಒಂದೆರಡು ‘ವರಗಳ ಭಾಗ್ಯ’ ಕರುಣಿಸಿಬಿಟ್ಟ… ಮೊದಲನೆಯ ವರವೇನೆಂದರೆ…ಎಷ್ಟೋ ವರ್ಷಗಳಿಂದ
ಹಗಲೂ ರಾತ್ರಿ ಸೀರಿಯಲ್ ಗಳನ್ನು ನೋಡುತ್ತಾ ನೋಡುತ್ತಾ ಬತ್ತಿ ಹೋದ ಸಾವಿತ್ರಿಯ ‘ಅತ್ತೆ-ಮಾವ’ನ ಕಣ್ಣುಗಳ ಪೊರೆ ತೆಗೆದು ಹಾಕಿ ಅವುಗಳನ್ನು ರೀ – ಚಾರ್ಜ್ ಮಾಡಿ ಮರು ಜೀವ ಕೊಟ್ಟು ಬಿಟ್ಟ … ಇನ್ನು ಎರಡನೆಯದು… ದಿನನಿತ್ಯ ಸೀರಿಯಲ್ ಗಳನ್ನು ನೋಡುವಾಗ ಆಗೊಮ್ಮೆ ಈಗೊಮ್ಮೆ ಕೆಡುವ ಟಿ ವಿ. ಬದಲಾಗಿ ಎಂದೆಂದೂ ಕೆಡದಂತಹ ಟಿ.ವಿ ಸೆಟ್ಟನ್ನು ಆಕೆಯ ‘ಜನನಿ-ಜನಕ’ ರಿಗೆ ದಾಯಪಾಲಿಸಿ ಆಶೀರ್ವದಿಸಿಬಿಟ್ಟ.
ಆದರೂ ತೃಪ್ತಿಯಾಗದ ‘ಸೀರಿಯಲ್ ಸಾವಿತ್ರಿ’ ಪೂರ್ತಿಗೊಳ್ಳದ ಅಪೂರ್ಣ ಸೀರಿಯಲ್ ನಂತೆ ಅಸಮಾಧಾನದಿಂದ ಪುನಃ ಬೆನ್ನು ಹತ್ತಿದಳು ಯಮರಾಜನನ್ನು.
“ಗಂಡಂದಿರ ಮೇಲೆ ಸೇಡು ತೀರಿಸಿಕೊಳ್ಳುವ ಹೆಂಡತಿಯರು, ಸೊಸೆಯಂದಿರ ಮೇಲೆ ದಬ್ಬಾಳಿಕೆ ತೋರಿಸುವ ಅತ್ತೆಯರು, ಅಕ್ಕಂದಿರ ಮೇಲೆ ಮುಗಿ ಬೀಳುವ ತಂಗಿಯರು,
ಮನೆಯಲ್ಲಿ ಹೆಂಡತಿ ಇದ್ದರೂ ರಾಜಾರೋಷವಾಗಿ ಮನೆಗೆ ನುಗ್ಗುವ ಗಂಡನ ಪ್ರೇಯಸಿಯರು, ರೌಡಿಗಳನ್ನು ಬೆಳೆಸಿ ಪೋಷಿಸುವ ಸ್ತ್ರೀ ವಿಲನ್ ಗಳು, ವೈಭವೀಕರಿಸುವ ಆಕ್ರಮ ವಿವಾಹೇತರ ಸಂಬಂಧಗಳು, ಮನ – ಮನೆ ಬೆಸೆಯುವ ಬದಲು ಮನ – ಮನೆಗಳನ್ನು ಒಡೆಯುವ ಸೀರಿಯಲ್ ಗಳ ವೀಕ್ಷಣೆಯಿಂದ ತಪ್ಪಿಸಿಕೊಳ್ಳುವ ಅವಕಾಶ ಕೊನೆಗೂ ಸಿಗಲಿಲ್ಲ ಪಾಪ ಪೆನ್ ಡ್ರೈವ್ ನಲ್ಲಿ ಅವಿತಿದ್ದ ಗುಂಡಣ್ಣನ ಜೀವಕ್ಕೆ!”
ಕಾರಣ ‘ಸೀರಿಯಲ್ ಸಾವಿತ್ರಿ’ ಗೆ ವರಗಳನ್ನು ದಾಯಪಾಲಿಸುವ ‘ಜೆಟ್ ಸ್ಪೀಡ್’ ನಲ್ಲಿ ಸದ್ಯ ಪ್ರಸಾರವಾಗುತ್ತಿರುವ ಸಾಮಾಜಿಕ ಮತ್ತು ಕೌಟುಂಬಿಕ ಸೀರಿಯಲ್ ಗಳನ್ನು ತನ್ನ ಗಂಡನೊಂದಿಗೆ ಅವುಗಳು ಮುಕ್ತಾಯವಾಗುವವರೆಗೆ ನೋಡುವ ಅವಕಾಶ ಸಿಗಲಿ ಎನ್ನುವ ವರವನ್ನು ಬಾಯ್ತಪ್ಪಿನಿಂದ ಆಡಿ ನಾಲಿಗೆ ಕಚ್ಚಿಕೊಂಡ ಪಾಪ ಧರ್ಮರಾಜ…
ಹೀಗೆ ಗುಂಡಣ್ಣನ ಪ್ರಾಣವಿದ್ದ ಪೆನ್ ಡ್ರೈವ್ ವಾಪಸು ಪಡೆದು ಗಂಡನ ಜೀವ ಉಳಿಸಿ ಯಶಸ್ವಿಯಾದಳು ‘ಸತಿ ಸಾಧ್ವಿ’ ಸಾವಿತ್ರಿ. ಮರು ಜೀವ ಪಡೆದ ತನ್ನ ಗಂಡ ಗುಂಡಣ್ಣನಿಗೆ ಮೊದಲು ಬಿಸಿ ಬಿಸಿ ಕಾಫಿ ಮಾಡಿ ತಾನು ಹಾಲ್ ನಲ್ಲಿ ಕೂತು ಟಿ ವಿ ನೋಡುವ ಜಾಗಕ್ಕೆ ತಂದು ಕೊಡುವಂತೆ ಆರ್ಡರ್ ಮಾಡಿದಳು…
ತಾನು ಮೆಚ್ಚಿ ನೋಡುತ್ತಿರುವ ‘ನಂಬರ್ 1 ಸೊಸೆ’ – ‘ಗಟ್ಟಿ ಮೇಳ’ – ‘ಮನ್ವಂತರ’ – ‘ಮಗಳು ಜಾನಕಿ’ – ‘ಪಾರು’ – ‘ಕನ್ಯಾದಾನ’ – ಮುಕ್ತಾ ಮುಕ್ತ’ ಅಲ್ಲದೇ ಇತ್ತೀಚೆಗಷ್ಟೇ 700 ಎಪಿಸೋಡ್ ಮುಗಿಸಿ ಸಾವಿರದತ್ತ ಮುನ್ನುಗ್ಗುತ್ತಿರುವ ‘ಜೊತೆ ಜೊತೆಯಲಿ’ ಮತ್ತು ಇಡೀ ಕುಟುಂಬ ಒಟ್ಟಿಗೆ ಕೂತು ನೋಡುವಂತಹ ಈಗ ಶುರುವಾಗಿರುವ ಅಲ್ಲದೆ ಮುಂದೆ ಆರಂಭವಾಗುವ ನೂರಾರು ಸೀರಿಯಲ್ ಗಳನ್ನು ಪ್ರತಿ ದಿನ ಕಣ್ತುಂಬಿ ನೋಡಲು ಕನಿಷ್ಠ ಇನ್ನೂ ಇಪ್ಪತ್ತೈದು ವರ್ಷಗಳ ಕಾಲಾವಧಿಯಂತೂ ಬೇಕೇ ಬೇಕು. ಅಲ್ಲಿಯವರೆಗೆ ತನ್ನ ‘ಮುತ್ತೈದೆ ಪಟ್ಟಕ್ಕೆ’ ಭಂಗವಿಲ್ಲ ಎಂದು ಮನಸ್ಸಿನಲ್ಲೇ ಅನಂದಿಸುತ್ತಾ ಟಿ ವಿ ಆನ್ ಮಾಡಿದಳು ಸೀರಿಯಲ್ ಇನ್ ನೋಡುವ ಉತ್ಸಾಹದಿಂದ ಹೆಸರಿಗೆ ತಕ್ಕ ‘ಸೀರಿಯಲ್ ಸಾವಿತ್ರಿ’.
( ದಿನ ನಿತ್ಯ ಹೆಚ್ಚೆಚ್ಚು ಧಾರಾವಾಹಿಗಳನ್ನು ನೋಡುವ ಸೋದರಿಯರ ಮತ್ತು ತಾಯಂದಿರ ಕ್ಷಮೆ ಕೋರುತ್ತಾ…)
*
13 thoughts on “ಸೀರಿಯಲ್ (ಆಧುನಿಕ) ಸಾವಿತ್ರಿ!”
ಸೀರಿಯಲ್ (ಆಧುನಿಕ) ಸಾವಿತ್ರಿ ಲಘುಬರಹ ಚೆನ್ನಾಗಿದೆ. ಮುಗಿಯದ ಧಾರಾವಾಹಿಗಳ ಬಗ್ಗೆ ಮೂಡಿದ ವಿಡಂಬನೆ ಲಘು ಹಾಸ್ಯದ ಶೈಲಿಯಲ್ಲಿ ಮಿಂಚಿದೆ.
ಅಭಿನಂದನೆಗಳು
ಎಂದೂ ಮುಗಿಯದ ಸಿರಿಯಲ್ಗಳನ್ನು ಗಂಡನೊಂದಿಗೆ ಕೂತು ನೋಡುವ ಮುತೈದೆಭಾಗ್ಯ ಪಡೆದ ಸೀರಿಯಲ್ (ಆಧುನಿಕ) ಸವಿತ್ರಿಗೆ ಭಲೇ ಎನ್ನಬೇಕು. ಬದುಕಿದೆಯಾ ಬಡಜೀವವೇ ಎಂದು ಮರಳಿ ಗೂಡಿಗೆ ಬಂದ ಗುಂಡಣ್ಣನಿಗೆ ಸಮಾಧಾನ ಹೇಳಲೇಬೇಕು. ಲಘುಹಾಸ್ಯ ಭರಿತ ಪ್ರಹಸನ ಚನ್ನಾಗಿ ಮೂಡಿದೆ.
ಧನ್ಯವಾದಗಳು ಸಾರ್
ಧನ್ಯವಾದಗಳು ಸಾರ್
ವಿಡಂಬನೆ ಆದರೂ ವಾತ್ಸವ. ಸೀರಿಯಲ್ ಪ್ರಭಾವ. ಅಭಿನಂದನೆಗಳು ರಾಘವೇಂದ್ರ ಮಂಗಳೂರು.
ಧನ್ಯವಾದಗಳು ಸಾರ್
ಒಳ್ಳೆಯ ಹಾಸ್ಯ ಬರಹ
ಧನ್ಯವಾದಗಳು ಸಾರ್
Super writing
ನಿಮ್ಮ ಲಘು ಹಾಸ್ಯ ಬರಹ ಚೆನ್ನಾಗಿದೆ.
ಧನ್ಯವಾದಗಳು ಸಾರ್
ಹಾಸ್ಯ ಭರಿತ ಪ್ರಸಂಗ ಮಜವಾಗಿತ್ತು. ಆಧುನಿಕ ಸಾವಿತ್ರಿ/ಸೀರಿಯಲ್ ಸಾವಿತ್ರಿ ತನ್ನ ಪತಿಯ ಜೀವವನ್ನು ಎಂದೂ ಮುಗಿಯದ ಸೀರಿಯಲ್ ಗಳಿಗೆ ಲಿಂಕ್ ಮಾಡಿ ಪತಿಯ ಜೀವ ಉಳಿಸಿದ ಪರಿ ಖುಷಿಯ ನೀಡಿತು.
ಧನ್ಯವಾದಗಳು ಸಾರ್