‘ಬೆಟ್ಟದ ಜೀವ’ವಾಗಿದ್ದ ಕುಲ್ಯಾಡಿ ಮಾಧವ ಪೈ

ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಪ್ರಮುಖವಾದವು ಯಾವುವು ಮತ್ತು ನಿಮಗೆ ಹೆಚ್ಚು ಇಷ್ಟವಾದದ್ದು ಯಾವುದು ಎಂದು ಯಾರಾದರೂ ನನ್ನನ್ನು ಪ್ರಶ್ನಿಸಿದರೆ ನನಗೆ ‘ಆಹಾ’ ಎನ್ನುವಷ್ಟು ಖುಶಿಯಾಗುತ್ತದೆ. ಯಾಕೆಂದರೆ ಕಾರಂತರು ನನ್ನ ಮೆಚ್ಚಿನ ಕಾದಂಬರಿಕಾರರಲ್ಲಿ ಮೊದಲಿಗರು. ಎರಡನೇ ಆಯ್ಕೆ ಇರುವುದಾದರೆ ಅದು ಶ್ರೀ ಕುವೆಂಪು. ಅವರು (ಇದು ಯಾಕೆ ಎನ್ನುವುದನ್ನು ವಿವರಿಸಲಿಕ್ಕೆ ಇಲ್ಲಿ ಅವಕಾಶ ಇಲ್ಲ, ಹಾಗಾಗಿ ಮುಂದೆ ಹೋಗೋಣ).
ಆದರೂ ಕಾರಂತರ ಕಾದಂಬರಿಗಳಲ್ಲಿ ನಿಮ್ಮ ಮೆಚ್ಚಿನದ್ದು ಯಾವುದು ಅಂದರೆ ಸುಲಭದಲ್ಲಿ ಹೇಳುವುದು ಕಷ್ಟ. ಒಟ್ಟಾರೆಯಾಗಿ ನಾನು ಹೇಳುವುದಾದರೆ ‘ಬೆಟ್ಟದ ಜೀವ’, ‘ಮೈಮನಗಳ ಸುಳಿಯಲ್ಲಿ’, ‘ಮರಳಿ ಮಣ್ಣಿಗೆ’, ‘ಚಿಗುರಿದ ಕನಸು’, ‘ಆಳನಿರಾಳ’, ‘ಸಮೀಕ್ಷೆ’, ‘ಮೂಕಜ್ಜಿಯ ಕನಸು’, ‘ಇದ್ದರೂ ಚಿಂತೆ’, ಹೀಗೆ ಉದ್ದಕ್ಕೂ ಅವರ ಕಾದಂಬರಿಗಳ ಪಟ್ಟಿ ಬೆಳೆಸಿಯೇನು. ಹಾಗಿದ್ದರೂ ನನ್ನ ಮೊದಲ ಆಯ್ಕೆ ‘ಬೆಟ್ಟದ ಜೀವ’ವೇ. ಯಾಕೆಂದರೆ ಆ ಕಾದಂಬರಿಯು ಪ್ರಕೃತಿಯ ಜೊತೆ ಒಬ್ಬ ಮನುಷ್ಯ ಹೇಗೆ ಹೋರಾಟ ಮಾಡುತ್ತಾ ಬದುಕಿದ್ದ ಎನ್ನುವುದರ ಜೊತೆಜೊತೆಗೆ, ವೃದ್ಧಾಪ್ಯದಲ್ಲಿರುವ ಅದೇ ದಂಪತಿ ತಮ್ಮ ಒಬ್ಬನೇ ಒಬ್ಬ ಮಗನು ತಮ್ಮ ಕೈ ತಪ್ಪಿ ಹೋಗಿದ್ದಾನೆ ಎಂಬ ನೋವನ್ನು ಹೇಗೆ ಮರೆಯಲು ಪ್ರಯತ್ನಿಸುತ್ತಾರೆ ಎನ್ನುವ ಜೀವನ ಪ್ರೀತಿ ಅಲ್ಲಿ ಚಿತ್ರಿತವಾಗಿದೆ. ಕಾರಂತರ ಎಲ್ಲಾ ಕಾದಂಬರಿಗಳಲ್ಲೂ ಈ ರೀತಿಯ ಜೀವನ ಪ್ರೀತಿ ಎನ್ನುವುದು ಇದ್ದು ಅದು ಒಮ್ಮೊಮ್ಮೆ ಆಳವಾದ ನದಿಯಲ್ಲಿ ನೆಲದಿಂದ ಮೇಲೇಳುವ ನೀರಿನ ಬುಗ್ಗೆಗಳ ಹಾಗಿದ್ದರೆ ಇನ್ನೊಮ್ಮೊಮ್ಮೆ ಪ್ರಶಾಂತವಾಗಿ ಹರಿಯುವ ನದಿಯ ನೀರು ಬೀಸುವ ಗಾಳಿಗೆ ರೋಮಾಂಚನಗೊಂಡು ಸಣ್ಣಗೆ ಅಲೆಗಳನ್ನು ಎಬ್ಬಿಸುವ ಹಾಗೆ ಹಾಯಾಗಿರುತ್ತದೆ. ಇವÀನ್ನೆಲ್ಲ ಘನೀಕರಿಸಿದ ಹಾಗಿರುವ ‘ಬೆಟ್ಟದ ಜೀವ’ ಈ ಕಾರಣಕ್ಕೆ ನನಗೆ ಹೆಚ್ಚು ಇಷ್ಟ.
ಕುಲ್ಯಾಡಿ ಮಾಧವ ಪೈ ಅವರನ್ನು ಅವರು ನಿಧನರಾದ ದಿನದಿಂದ ಈ ತನಕ – ಅವರನ್ನು ನೆನಪಿಗೆ ತಂದುಕೊಂಡಾಗಲೆಲ್ಲ – ಅವರು ನನಗೆ ಕಾಣಿಸುವುದು ‘ಬೆಟ್ಟದ ಜೀವ’ದ ಗೋಪಾಲಯ್ಯನ ಹಾಗೆ. ಆ ಕಾದಂಬರಿಯಲ್ಲಿ ಗೋಪಾಲಯ್ಯನವರಿಗೆ ಅಪರಿಚಿತರಾದ ‘ಕಾರಂತರು’ (ಕತಾನಾಯಕ ಎಂದಿಟ್ಟುಕೊಳ್ಳಬಹುದು) ಗೋಪಾಲಯ್ಯನನ್ನು ಭೇಟಿಯಾಗುವುದು ಮತ್ತು ಗೋಪಾಲಯ್ಯ ಈತ ಕಣ್ಣೆದುರಿಲ್ಲದ ತನ್ನ ಮಗನೇ ಎಂಬಂತೆ ವರ್ತಿಸುವ ರೀತಿ. ಒಂದು ಬೆಟ್ಟವು ತನಗೆ ತಾನೇ ಜೀವ ತಳೆದಂತೆ ನಮಗೆ ಇದಿರಾಗುತ್ತದೆ.
ಕುಲ್ಯಾಡಿಯವರ ಮತ್ತು ನನ್ನ ಸಂಬಂಧ ಪ್ರಾಯಶಃ ಇದೇ ರೀತಿ ಆಗಿದೆ. ಯಾಕೆಂದರೆ ಅವರು ಬೆಟ್ಟದ ಜೀವದ ಗೋಪಾಲಯ್ಯನ ಹಾಗೆ ನನ್ನ ಬದುಕಿಗೆ ಆಕಸ್ಮಿಕವಾಗಿ ಬಂದವರು. ಆಮೇಲೆ ‘ಬೆಟ್ಟದ ಜೀವ’ದ ಗೋಪಾಲಯ್ಯ ಕಾರಂತರನ್ನು ಕಂಡ ಹಾಗೆ ನನ್ನನ್ನು ಅವರು ಒಪ್ಪಿದ್ದು ಆಶ್ಚರ್ಯದಲ್ಲಿ ಆಶ್ಚರ್ಯ.
ನಾನು ಕುಲ್ಯಾಡಿ ಅವರನ್ನು ಮೊದಲು ಭೇಟಿಯಾದದ್ದು ಕಾಂತಾವರ ಕನ್ನಡ ಸಂಘದ ಕಾರಣದಿಂದ. ಅದು 1976 ಮೇ 26ರಂದು ಕಾಂತಾವರದಲ್ಲಿ ನಾನು ಕನ್ನಡ ಸಂಘವನ್ನು ಕಟ್ಟಿದ ಮೇಲೆ. ಆಗ ಆ ಸಂಘವನ್ನು ಕಟ್ಟಲು ನನ್ನ ಜೊತೆ ಕೈ ಜೋಡಿಸಿದವರು ಸ್ಥಳಿಯರಾಗಿ ಅನೇಕರಿದ್ದರೆ, ದೂರದ ಮಂಗಳೂರಿನಲ್ಲಿದ್ದ ನಂದಳಿಕೆ ಬಾಲಚಂದ್ರ ರಾವ್ ಎಂಬ ತರುಣ ಮಿತ್ರ ನನ್ನಂತೆಯೇ ಹುಚ್ಚು ಕನಸುಗಳನ್ನು ಹೊತ್ತು- ಆ ಕನಸುಗಳನ್ನು ಮುಕ್ಕಿಳಿಸಲು ಯಾರನ್ನೋ ಕಾಯುವಂತಿದ್ದಾಗ ನಾನು ಅವರಿಗೆ ಸಿಕ್ಕಿದ್ದೆ. ಅವರು ವೃತ್ತಿಯಿಂದ ಆಗ ‘ಮೆಡಿಕಲ್ ರೆಪ್’ ಆಗಿದ್ದು ಆ ನೆಲೆಯಲ್ಲಿ ವೈದ್ಯನಾಗಿದ್ದ ನನ್ನ ಮನೆಗೆ (ಚಿಕಿತ್ಸಾಲಯಕ್ಕೆ) ಆಗಾಗ ಬರುತ್ತಿದ್ದುದರಿಂದ ನನ್ನ ಕನಸುಗಳು ಅವರದೂ ಆಗಿ ಹೋದುವು. ಒಂದಕ್ಕೆ ಒಂದು ಸೇರಿಸಿದರೆ ಎರಡು ಆಗುವ ಹಾಗೆ, ನಾನು ನನ್ನ ಕನಸುಗಳನ್ನು ಅವರ ಕಣ್ಣುಗಳಲ್ಲಿ ನೆಟ್ಟರೆ ಅವರು ತಮ್ಮ ಕನಸುಗಳನ್ನು ನನ್ನ ಕೈಯಲ್ಲಿ ಇಟ್ಟರು.
ಕಾಂತಾವರ ಕನ್ನಡ ಸಂಘವನ್ನೇನೋ ನಾವು ಉತ್ಸಾಹದಲ್ಲಿ ಸ್ಥಾಪಿಸಿದ್ದಾಯಿತು. ಆದರೆ ಅದನ್ನು ಮುನ್ನಡೆಸಬೇಕಾದರೆ ಸಂಪನ್ಮೂಲ ಬೇಕಲ್ಲ? ಎಂದು ಚಿಂತಿಸಿದಾಗ, ಹೊಳೆದದ್ದು ಒಂದು ‘ಅನಿಯತಕಾಲಿಕ’ವನ್ನು ಹೊರತಂದು ಅದರಲ್ಲಿ ಒಂದಷ್ಟು ಜಾಹೀರಾತುಗಳನ್ನು ಪ್ರಕಟಿಸಿ ಸಂಪನ್ಮೂಲವನ್ನು ಹೊಂದಿಸಿಕೊಳ್ಳಬಹುದು ಎನ್ನುವುದಾಗಿತ್ತು. ನನಗೆ ಪತ್ರಿಕೋದ್ಯಮದ ಅನುಭವ ಇಲ್ಲದಿದ್ದರೂ ಅನಿಯತಕಾಲಿಕವನ್ನು ಸಂಪಾದಿಸಬಹುದು ಎನ್ನುವ ಧೈರ್ಯ ಇತ್ತು. ಆದರೆ ಅದರ ಪ್ರಕಟಣೆಯ ವೆಚ್ಚಕ್ಕಾಗಿ ಜಾಹೀರಾತು ಸಂಗ್ರಹಿಸುವುದು ಹೇಗೆ ಎಂಬ ಅರಿವು ಇರಲಿಲ್ಲ. ಆಗ ನಂದಳಿಕೆಯವರು ‘ನಾನಿದ್ದೇನೆ ನೀವು ಮಂಗಳೂರಿಗೆ ಬನ್ನಿ’ ಎಂದು ನನ್ನನ್ನು ಆಹ್ವಾನಿಸಿದ್ದರು. ಅದಕ್ಕೆ ಕಾರಣ ಅವರು ಆಗಲೇ ಒಬ್ಬ ಸಮಾಜಮುಖಿ ವ್ಯಕ್ತಿಯಾಗಿದ್ದು ಎಂಥವರನ್ನೂ ತನ್ನ ಮಾತಿನ ಮೋಡಿಯಿಂದ ‘ಮರುಳು ಮಾಡುವ’ ಸಾಮಥ್ರ್ಯವಿದ್ದವರಾಗಿದ್ದರು. ಇದರಿಂದಾಗಿ ಅವರು ಮಂಗಳೂರಿನ ಅನೇಕ ಸಾಹಿತ್ಯಾಸಕ್ತರ ಮತ್ತು ವಿವಿಧ ಕ್ಷೇತ್ರಗಳ ಗಣ್ಯರ ಒಡನಾಟ, ಪ್ರೀತಿ ಮತ್ತು ವಿಶ್ವಾಸವನ್ನು ಗಳಿಸಿಕೊಂಡಿದ್ದರು.
ಅದೊಂದು ದಿನ ನಾವು ಅಂದರೆ ಕಾಂತಾವರದ ಸಾಹಿತ್ಯಾಸಕ್ತ ಗೆಳೆಯರು ಮಂಗಳೂರಿಗೆ ಹೋಗಿ ನಂದಳಿಕೆಯವರನ್ನು ಭೇಟಿ ಮಾಡಿದಾಗ ಅವರು ಪ್ರೀತಿಯಿಂದಲೇ ನಮ್ಮನ್ನು ಸ್ವಾಗತಿಸಿ ಒಂದು ವಾಹನವನ್ನು ಬಾಡಿಗೆಗೆ ತೆಗೆದುಕೊಂಡು (ಆಗ ಮಂಗಳೂರು ಪೇಟೆಯಲ್ಲಿ ಗಂಟೆಯ ಲೆಕ್ಕದಲ್ಲಿ ಇಪ್ಪತ್ತೈದೋ ಮೂವತ್ತೋ ರೂಪಾೈಗೆ ಬಾಡಿಗೆಗೆ ಕಾರುಗಳು ಸಿಗುತ್ತಿತ್ತು) ಜಾಹೀರಾತು ಸಂಗ್ರಹಕ್ಕೆ ಹೊರೆಟೆವು. ಕನಿಷ್ಠ ಒಂದು ಸಾವಿರ ರೂಪಾೈಗಳಾದರೂ ಆ ದಿನ ಸಂಗ್ರಹವಾಗಬೇಕು ಎನ್ನುವ ಗುರಿ ನಮ್ಮದಾಗಿತ್ತು. ಸಾಮಾನ್ಯವಾಗಿ ಇಂಥ ಕೆಲಸಗಳಿಗೆ ಎಲ್ಲೆಲ್ಲಿ ಜಾಹೀರಾತು ಸಿಗಬಹುದು ಎನ್ನುವ ಸ್ಪಷ್ಟ ಕಲ್ಪನೆ ನಂದಳಿಕೆಯವರಿಗೆ ಇದ್ದುದರಿಂದ ಅವರು, ‘ತೀರಾ ಪರಿಚಿತರಲ್ಲದವರನ್ನು ಕೂಡಾ ಮೊದಲು ನೋಡೋಣ’ ಎಂದದ್ದರಿಂದ ಬೇರೆ ಬೇರೆ ವ್ಯವಹಾರಗಳನ್ನು ನಡೆಸುವವರ ಮಳಿಗೆಗಳಿಗೆ ನಾವು “ಧಾಳಿ’ ಇಟ್ಟೆವು. (ಹೌದು ಜಾಹೀರಾತು ಸಂಗ್ರಹಕ್ಕೆ ಹೋಗುವಾಗ ಕನಿಷ್ಠ ನಾಲ್ಕೈದು ಜನ ಬೇಕು ಎಂಬ ಪರಿಕಲ್ಪನೆ ಆಗ ನಂದಳಿಕೆಯವರಲ್ಲಿ ಇತ್ತು ಮತ್ತು ಆ ಕಾರಣದಿಂದ ಅದು ಒಂದು ರೀತಿಯ ‘ಧಾಳಿ’ಯೇ ಆಗಿತ್ತು ಎಂಬಂತಿರುತ್ತಿತ್ತು.) ನಾವು ಹೀಗೆ ಪ್ರವೇಶಿಸಿದ ಅನೇಕ ಕಡೆಗಳಲ್ಲಿ ನಿರೀಕ್ಷಿತ ರೀತಿಯ ಪ್ರೋತ್ಸಾಹ ನಮಗೆ ಸಿಗಲಿಲ್ಲ. ಹಾಗೆಂದು ನಾವು ನಮ್ಮ ಜಾಹೀರಾತಿನ ದರವನ್ನು ದುಬಾರಿಯಾಗಿ ಇಟ್ಟಿರಲಿಲ್ಲ. ಹಿಂಬದಿ ರಕ್ಷಾಪುಟಕ್ಕೆ 250 ರೂಪಾೈಯಾದರೆ, ಒಳಬದಿಯ ರಕ್ಷಾ ಪುಟಕ್ಕೆ 150ರೂಪಾೈ, ಒಳಗಿನ ಪೂರ್ಣಪುಟಕ್ಕೆ 100ರೂಪಾೈ, ಅರ್ಧ ಪುಟಕ್ಕೆ 50ರೂಪಾೈ, ಕಾಲು ಪುಟಕ್ಕೆ 15 ರೂಪಾೈಗಳೆಂಬಂತೆ ನಾವು ದರಗಳನ್ನು ನಿಶ್ಚಯಿಸಿದ್ದೆವು ಎಂದು ನೆನಪು.
ಮಂಗಳೂರಿನಲ್ಲಿ ಸುಮಾರು ಹತ್ತು ಗಂಟೆಗೆ ಪ್ರಾರಂಭಿಸಿದ ಈ ಜಾಹೀರಾತಿನ ಬೇಟೆ ಸಂಜೆ ನಾಲ್ಕು ಆಗುವ ಹೊತ್ತಿಗೆ ರೂಪಾೈ ಐದು ನೂರಷ್ಟೂ ಸಂಗ್ರಹವಾದದ್ದನ್ನು ಗಮನಿಸಿದ ನಂದಳಿಕೆಯವರು ‘ಇನ್ನುಳಿದವರು ಇಬ್ಬರೇ ಇಬ್ಬರು! ಒಬ್ಬರು ಪುನರೂರು ಇನ್ನೊಬ್ಬರು ಕುಲ್ಯಾಡಿ ಮಾಧವ ಪೈ’ಗಳು ಎಂದವರೇ, ‘ಈ ಇಬ್ಬರೂ ನೂರು ನೂರು ರೂಪಾೈಯ ಜಾಹೀರಾತು ಕೊಡುವುದು ಗ್ಯಾರಂಟಿ’ ಎಂಬ ನಿರೀಕ್ಷೆ ಹುಟ್ಟಿಸಿದರು. ‘ಸರಿ, ಅಲ್ಲಿಗೆ ಹೋಗೋಣ’ ಎಂದುಕೊಂಡ ನಾವು ಹಂಪನಕಟ್ಟೆಯಲ್ಲಿ ಗಿಜಿಗುಟ್ಟುವ ಬಸ್ಸುಗಳ ನಡುವೆ- ಬಸ್‍ಸ್ಟೇಂಡಿನ ಹಿಂಬದಿಯಲ್ಲಿರುವ ‘ಕುಲ್ಯಾಡಿಕಾರ್ಸ್ ನೂತನ ಸಿಲ್ಕ್’ ಎಂಬ ಮಳಿಗೆಗೆ ಪ್ರವೇಶಿಸಿದೆವು. ಅದು ತುಂಬಾ ವ್ಯವಹಾರ ನಡೆಯುವ ಹೊತ್ತಾಗಿದ್ದುದರಿಂದ ಮಳಿಗೆಯಲ್ಲಿ ತುಂಬಾ ಗ್ರಾಹಕರು ಇರುವುದನ್ನು ಕಂಡು ನನಗೆ ಮುಜುಗರವಾಯಿತು. ಮಾಧವ ಪೈಗಳು ಕ್ಯಾಶ್ ಕೌಂಟರ್‍ನ ಇದಿರು ಎದ್ದು ನಿಂತು ತನ್ನ ಕೆಲಸಗಾರರು ಮಾಡುವ ಕೆಲಸದ ಕಡೆ ಗಮನ ಕೊಡುತ್ತಾ, ನಡುನಡುವೆ ಗ್ರಾಹಕರು ಖರೀದಿಸಿ ನೀಡಿದ ಹಣವನ್ನು ಸ್ವೀಕರಿಸಿ ಡ್ರಾವರಿಗೆ ಹಾಕುತ್ತಲಿದ್ದರು. ಅದನ್ನು ಗಮನಿಸಿದ ನಾನು ಈಗ ಒಳಗೆ ಪ್ರವೇಶಿಸುವುದು ಕಷ್ಟ ಎಂದೇ ಬಾಲಚಂದ್ರ ರಾಯರಿಗೆ ಹೇಳಿದೆ. ಆದರೆ ನಂದಳಿಕೆಯವರು ಬಿಡಬೇಕಲ್ಲ? ‘ಅದು ಹೌದಾದರೂ ಪೈಗಳು ನನಗೆ ಪರಿಚಿತರು ಎಂದವರೇ’ ‘ಅವರು ಇಲ್ಲ ಎನ್ನುವುವವರಲ್ಲ’, ಎನ್ನುತ್ತಾ ‘ನಾವು ಅವರನ್ನು ಮಳಿಗೆಯ ವರಾಂಡದಲ್ಲಿ ನಿಂತೇ ಮಾತನಾಡಿಸುವ’ ಎಂದರು. ನನಗೆ ಮುಜುಗರವೂ ಆತಂಕವೂ ಆಯಿತು. ಆದರೆ ‘ಬೇಡ’ ಎನ್ನುವ ಮನಸ್ಸಾಗದೆ ಮೌನವಾಗಿ ನಿಂತೆ. ಅಷ್ಟರಲ್ಲಿ ನಂದಳಿಕೆಯವರು ಕುಲ್ಯಾಡಿಯವರ ಮಳಿಗೆಯ ಜಗಲಿಯಲ್ಲಿ ಉದ್ದಕ್ಕೂ ಹೋಗಿ, ಕ್ಯಾಶ್ ಕೌಂಟರಿನ ಹತ್ತಿರಕ್ಕೆ ಬಂದು ಪೈಗಳಿಗೆ ನಮಸ್ಕರಿಸಿದ್ದೇ ತಡ, ಪೈಗಳು ಆ ವ್ಯವಹಾರದ ನಡುವೆಯೂ ‘ಓ ನಂದಳಿಕೆಯವರು?’ ಎಂದು ನಗುತ್ತಾ ‘ಏನು?’ ಎಂದು ಪ್ರಶ್ನಿಸಿದರು. ಆಗ ನಂದಳಿಕೆಯವರು ನನ್ನನ್ನು ಪರಿಚಯಿಸುತ್ತಾ ನಮ್ಮ ಉದ್ದೇಶವನ್ನು ವಿವರಿಸಿದಾಗ ಪೈಯವರು ‘ಹೌದಾ?’ ಎನ್ನುತ್ತಲೇ ಗಿರಾಕಿಗಳನ್ನು ಮಾತಾನಾಡಿಸುವುದರ ನಡುವೆ ನಮ್ಮ ಜಾಹೀರಾತಿನ ಮನವಿ ಸ್ವೀಕರಿಸಿ, ಅವಸರದಲ್ಲಿ ಅದನ್ನು ಓದಿ ಜಾಹೀರಾತಿನ ಟೇರಿಪ್‍ನಲ್ಲಿರುವ ಒಂದು ಇಡೀ ಪುಟಕ್ಕೆ ಜಾಹೀರಾತು ನೀಡುತ್ತೇನೆ ಎಂದು ಗುರುತು ಹಾಕಿ, ಡ್ರಾವರಿನಿಂದ ಒಂದು ನೂರರ ನೋಟನ್ನು ನೀಡಿ ಮುಗುಳ್ನಕ್ಕರು. ನಾನು ಬೆರಗಾಗಿ ಹೋದೆ. ಕಾರಣ ಪೈಗಳಿಂದ ಒಂದು ಸಿಡುಕಿನ ಮಾತಿಲ್ಲ ಒಂದು ಪ್ರಶ್ನೆಯೂ ಇಲ್ಲ. ಎಲ್ಲವೂ ಪಟಾಪಟ್ ಎಂಬಂತೆ ಆಗ ನಡೆದು ಹೋಗಿತ್ತು.
ಸಾಮಾನ್ಯವಾಗಿ ಜಾಹೀರಾತು ನೀಡುವವರು ಮುಂಗಡವಾಗಿ ಹಣ ನೀಡುವುದಿಲ್ಲ. ಜಾಹೀರಾತಿನ ಟೇರಿಫ್‍ನಲ್ಲಿ ತಮ್ಮ ಆಯ್ಕೆ ಯಾವುದು ಎಂದು ಗುರುತು ಹಾಕಿ ಸಹಿ ಹಾಕಿ ಒಪ್ಪಿಗೆ ನೀಡುತ್ತಾರೆ. ನಾವು ಯಾವುದಕ್ಕೆ ಜಾಹೀರಾತು ಕೇಳುತ್ತೇವೋ ಅದು ಮುದ್ರಣವಾಗಿ ಹೊರಬಂದು ಜಾಹೀರಾತು ನೀಡಿದವರ ಕೈಗೆ ತಲುಪಿದ ಮೇಲೆ, ಅವರು ತಾವು ಒಪ್ಪಿಗೆ ನೀಡಿದ ಕೌಂಟರ್ ಫೈಲನ್ನು ನೋಡಿ ಹಣ ನೀಡುವುದು ರೂಢಿ. ಯಾಕೆಂದರೆ ಅನೇಕರು ಜಾಹೀರಾತು ಪಡೆದುಕೊಂಡು ಅದರ ದುಡ್ಡು ಸ್ವೀಕರಿಸಿದ ಮೇಲೆ ಆ ಪ್ರಕಟಣೆಯನ್ನು ಹೊರತರದೇ ಇರುವ ಸಂಭವವುಂಟು ಎನ್ನುವ ಕಹಿ ಅನುಭವ ಅನೇಕ ಉದ್ಯಮಿಗಳಿಗೆ ಆದದ್ದಿರಬಹುದು.
ಹಾಗೆ ನೊಡಿದರೆ, ನಮ್ಮ ಕನ್ನಡ ಸಂಘದಂಥ ಸಣ್ಣಪುಟ್ಟ ಸಂಸ್ಥೆಗಳಿಗೆ ಜಾಹೀರಾತು ನೀಡುವುದರಿಂದ ಜಾಹೀರಾತು ನೀಡಿದವರಿಗೆ ತಮ್ಮ ವ್ಯಾಪಾರ ಅಭಿವೃದ್ಧಿಯಾಗುತ್ತದೆ ಎನ್ನುವ ಭ್ರಮೆ ಖಂಡಿತ ಇರುವುದಿಲ್ಲ. (ದೊಡ್ಡ ದೊಡ್ಡ ಪತ್ರಿಕೆಗಳಲ್ಲಿ ನೀಡುವ ಜಾಹೀರಾತುಗಳಿಂದ ಖಂಡಿತ ವ್ಯಾಪಾರೋದ್ಯಮ ಅಭಿವೃದ್ಧಿಯಾಗುವುದು ನಿಶ್ಚಿತ) ಅದರೂ ಕುಲ್ಯಾಡಿಯಂಥವರು ಜಾಹೀರಾತು ನೀಡಿದ್ದು ಯಾಕೆಂದರೆ ಅವರಿಗೆ ಈ ಪುಟ್ಟ ಸಂಸ್ಥೆಗಳ ಮೂಲಕ ಸಾಹಿತ್ಯಕ/ ಸಾಂಸ್ಕøತಿಕ ಕೆಲಸಗಳು ಅಭಿವೃದ್ಧಿಯಾಗುತ್ತವಲ್ಲ ಎನ್ನುವ ಉದಾರತೆ ಮತ್ತು ಕನ್ನಡ ಪ್ರೀತಿಯ ಮನೋಭಾವದಿಂದಲೇ ಎಂದು ನಾನು ಗ್ರಹಿಸಿದೆ. ಹಾಗಾಗಿಯೇ ಕುಲ್ಯಾಡಿಯವರು ನಮ್ಮ ಮನವಿಯನ್ನು ನೋಡಿದ ತಕ್ಷಣ, ಏನನ್ನೂ ಪ್ರಶ್ನಿಸದೆ, ನಮ್ಮ ಸಂಘ ಬೆಳೆಯುವುದಿದ್ದರೆ ಬೆಳೆಯಲಿ ಎಂಬಂತೆ ನೀಡಿದ ಆ ಮೊತ್ತ (ಇಂದಿನ ದಿನಗಳಲ್ಲಾದರೆ ಹತ್ತು ಸಾವಿರ ರೂಪಾೈಗಳಿಗೆ ಸಮ) ನಮಗೆ ವರವೇ ಎಂಬಂತಾಯಿತು.
ಈ ರೀತಿ ಕನ್ನಡ ಸಂಘದ ‘ಪ್ರಸ್ತುತ’ ಎನ್ನುವ ಅನಿಯತಕಾಲಿಕ, ಜಾಹೀರಾತುದಾರರ ಬೆಂಬಲದಿಂದ ನಡೆಸುತ್ತಾ ಬಂದು ನಮ್ಮ ಸಾಹಿತ್ಯಕ ಚಟುವಟಿಕೆಗಳನ್ನು ನಡೆಸಲು ಆ ಪತ್ರಿಕೆ ದೊಡ್ಡ ರೀತಿಯಲ್ಲಿ ನಮಗೆ ಸಹಕಾರಿಯಾಯಿತು. ಜೊತೆಗೆ ನಾವು ಆಗ ಎಷ್ಟೇ ಸಣ್ಣಪುಟ್ಟ ಅಥವಾ ದೊಡ್ಡ ಕಾರ್ಯಕ್ರಮಗಳನ್ನು ನಡೆಸಲಿ ಅದನ್ನು ನಮ್ಮ ಜಾಹೀರಾತುದಾರರ ಗಮನಕ್ಕೆ ತರಲು ಮುಂದಾದೆವು. ಅದರ ಉದ್ದೇಶ ಮುಂದಿನ ವರುಷ ನಾವು ಜಾಹೀರಾತಿಗಾಗಿ ಆ ಜಾಹೀರಾತುದಾರರನ್ನು ಸಂಪರ್ಕಿಸುವಾಗ ಅವರ ಮನಸ್ಸಿನ ಮೂಲೆಯಲ್ಲಿ ನಾವು ಕಳುಹಿಸಿದ ಆಮಂತ್ರಣ ಪತ್ರಿಕೆ ಧುತ್ತೆಂದು ಮೇಲೆ ಬಂದು ‘ಓ ನೀವು ಕಾಂತಾವರ ಕನ್ನಡ ಸಂಘದವರಾ?’ ಎಂಬ ನಗುಮೊಗದ ಪ್ರಶ್ನೆಗೆ ಕಾರಣವಾಗಬಹುದು ಎನ್ನುವ ದೂರ ದೃಷ್ಟಿಯಿಂದ. ಇದರಿಂದ ನಮ್ಮ ‘ಬೇಡಿಕೆ’ ಸುಲಭವಾಗಿ ಮಂಜೂರಾಗತೊಡಗಿದ್ದಲ್ಲದೆ ಮುಂದೆ ನಾವು ವರುಷ ವರುಷವೂ ಎನ್ನುವಂತೆ ಈ ಅನಿಯತಕಾಲಿಕವನ್ನು ನಡೆಸಿ ಸುಮಾರು ಹತ್ತು ಸಾವಿರದಷ್ಟು ಬಂಡವಾಳವನ್ನು ಸಂಘಕ್ಕೆ ಹೊಂದಿಸಿಕೊಂಡೆವು ಅಂದರೆ ಈಗ ಅದು ‘ಅದ್ಭುತ’ ಅಂತ ಅನಿಸುವಷ್ಟು ದೊಡ್ಡ ಸಾಧನೆಯೇ.
ನಾವು ಕನ್ನಡ ಸಂಘದಿಂದ ಏರ್ಪಡಿಸುತ್ತಿದ್ದ ಸಣ್ಣಪುಟ್ಟ ಸಮಾರಂಭಗಳು ಅದು ಸಣ್ಣದೇ ಆಗಿದ್ದರೂ ಆ ದಿನಗಳಲ್ಲಿ ಅದಕ್ಕೂ ಒಂದು ಅರ್ಥಪೂರ್ಣತೆ ಇತ್ತು ಮತ್ತು ಅದು ನಿಯಮಿತವಾಗಿ ಪ್ರತಿ ಎರಡು ತಿಂಗಳಿಗೊಮ್ಮೆ ನಡೆಯುತ್ತಿತ್ತು. ಇಂಥ ಆಮಂತ್ರಣ ಪತ್ರಿಕೆಗಳನ್ನು ನಾವು ಕುಲ್ಯಾಡಿಯವರಿಗೆ ಪ್ರತಿ ಬಾರಿಯೂ ಕಳುಹಿಸುತ್ತಿದ್ದಂತೆ ಅವರಿಂದ ಒಂದು ಬಾರಿ ನಮ್ಮ ಸಮಾರಂಭಕ್ಕೆ ಶುಭಾಶಯ ಪತ್ರವೂ ಬಂತು. ಆಗ ಅವರು ಮಂಗಳೂರು ಕನ್ನಡ ಸಂಘದ ಅಧ್ಯಕ್ಷರಾಗಿ ಅಪರೂಪದೆನ್ನಬಹುದಾದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು ಎಂಬ ನೆನಪು. ನಡುವೆ ಏರ್ಯ ಲಕ್ಷ್ಮೀನಾರಾಯಣ ಆಳ್ವರು ನಾಡಿಗೇ ಮೊದಲೆನ್ನುವಂತೆ ಪಂಜೆ ಮಂಗೇಶರಾಯರೇ ಮೊದಲಾದವರ ಜನ್ಮಶತಮಾನೋತ್ಸವನ್ನು ನಡೆಸಲು ಆ ದಶಕದಲ್ಲಿ ಮುಂದಾಗಿದ್ದು ಅಂಥ ಸಮಿತಿಗಳಲ್ಲಿ ಕುಲ್ಯಾಡಿಯವರ ಹೆಸರೂ ಕಾಣಿಸತೊಡಗಿತು. ಹೀಗೆ ನಿಧಾನವಾಗಿ ಕುಲ್ಯಾಡಿಯವರು ಸಾಹಿತ್ಯ ಕ್ಷೇತ್ರದಾಚೆ ಹೊರಳಿದ್ದರಿಂದ ಮಂಗಳೂರು ಮತ್ತು ಸುತ್ತಲು ಇರುವ ಸಾಹಿತ್ಯ ಸಾಂಸ್ಕøತಿಕ ಸಂಸ್ಥೆಗಳು ಅವರನ್ನು ಉದ್ಘಾಟಕರಾಗಿ ಇಲ್ಲವೇ ಅಧ್ಯಕ್ಷರಾಗಿ ಆಹ್ವಾನಿಸಲು ಪ್ರಾರಂಭಿಸಿದರು. ಅಂಥ ಕಡೆ ಹೋದಾಗಲೆಲ್ಲ ಕುಲ್ಯಾಡಿಯವರು ಬರೇ ಬೂಟಾಟಿಕೆಯ ಭಾಷಣ ಬಿಗಿಯದೆ, ಡಿ.ವಿ.ಜಿ. ಅವರ ‘ಮಂಕುತಿಮ್ಮ’ನ ಕಗ್ಗದ ಉದಾತ್ತ ತತ್ತ್ವಗಳನ್ನು ಸೊಗಸಾಗಿ ವಿವರಿಸಲು ಮುಂದಾದ್ದಲ್ಲದೆ ತನ್ನ ಉದ್ಯಮದ ಲಾಭಾಂಶದಲ್ಲಿ ಒಂದು ನಿಗದಿತ ಸಂಖ್ಯೆಯ ಮೊತ್ತವನ್ನು ಸಾರ್ವಜನಿಕ ಕೆಲಸಕ್ಕೆ (ಸಾಹಿತ್ಯ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳ ಪ್ರೋತ್ಸಾಹಕ್ಕೆ) ಮೀಸಲಿರಿಸಬೇಕೆಂಬಂತೆ ಮನಸ್ಸನ್ನು ಆದ್ರ್ರಗೊಳಿಸಿಕೊಂಡಿದ್ದರು.
ಎರಡನೇ ಬಾರಿ ನಾವು ‘ಪ್ರಸ್ತುತ’ಕ್ಕೆ ಜಾಹೀರಾತು ಬೇಡಲು ಅವರ ಮಳಿಗೆಗೆ ಹೋದಾಗ, ಅವರು ತಮ್ಮ ವ್ಯವಹಾರದ ನಡುವೆಯೂ ನಮ್ಮನ್ನು ಪ್ರೀತಿಯಿಂದ ಮಾತನಾಡಿಸಿ, ನಾವು ಕೇಳದೆಯೇ ನೂರೈವತ್ತು ರೂಪಾೈ ನೀಡಿ, ‘ನೀವು ಜಾಹೀರಾತು ಹಾಕಬೇಕೆಂದೇನೂ ಇಲ್ಲ. ನಾನು ಇದನ್ನು ಕೊಡುವುದು ನಿಮ್ಮ ಕನ್ನಡದ ಕೆಲಸಕ್ಕೆ, ಒಂದು ಕಿರುಕಾಣಿಕೆಯಾಗಿ’ ಎಂಬಂತೆ ಮಾತನಾಡಿದರು.
ಇಷ್ಟರಲ್ಲಿ ನಮ್ಮ ಕನ್ನಡ ಸಂಘದ ಚಟುವಟಿಕೆಗಳು ವಿಸ್ತರಣೆಗೊಂಡಿದ್ದುವು. ಕನ್ನಡ ಸಂಘವು, ಬೆಳುವಾಯಿ, ಕಾಂತಾವರ, ಬೋಳ, ಕೆದಿಂಜೆ, ನಂದಳಿಕೆ ಎಂಬ ಐದು ಗ್ರಾಮಗಳ ಆಶ್ರಯದಲ್ಲಿ ಹುಟ್ಟಿ ಬೇಲಾಡಿ ಶಾಲೆಯಲ್ಲಿ ಕೇಂದ್ರ ಕಛೇರಿಯನ್ನು ಹೊಂದಿ ಸಂಘದ ಚಟುವಟಿಕೆಗಳು ಈ ಐದೂ ಗ್ರಾಮಗಳಲ್ಲಿ ನಡೆಯುತ್ತಿದ್ದರೂ ವಿಶೇಷವಾಗಿ ಬೇಲಾಡಿ, ವಂಜಾರಕಟ್ಟೆ, ಕೆದಿಂಜೆ, ನಂದಳಿಕೆ, ನಿಟ್ಟೆ ಮೊದಲಾದ ಕಡೆ ಹೆಚ್ಚು ಹೆಚ್ಚು ನಡೆಯುತ್ತಿದ್ದುವು. ಇಂಥ ಕಡೆಗಳಲ್ಲಿ ವಿಶಿಷ್ಟದೆನ್ನಬಹುದಾದ ಪುಟ್ಟ ವಿಚಾರ ಸಂಕಿರಣ ಇಲ್ಲವೇ ಎರಡು ಮೂರು ಮಂದಿಯ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿತ್ತು. ಒಮ್ಮೆ ನಂದಳಿಕೆಯಲ್ಲಿ ಏರ್ಪಡಿಸಿದ ಕಾರ್ಯಕ್ರಮಕ್ಕೆ ಡಾ.ವಸಂತ ಕುಮಾರ್ ತಾಳ್ತಜೆ, ಅ. ಬಾಲಕೃಷ್ಣ ಶೆಟ್ಟಿ ಪೊಳಲಿ ಮತ್ತು ಕುಲ್ಯಾಡಿಯವರನ್ನೂ ನಾವು ಆಹ್ವಾನಿಸಿದ್ದೆವು. ಆ ದಿನ ತಾಳ್ತಜೆ ಅವರು ಮಾಡಿದ ಭಾಷಣ – ಪಂಪ ಭಾರತದ ಕುರಿತಂತೆ – ಅದ್ಭುತವಾಗಿತ್ತು. ಹಾಗೇ ಅ. ಬಾಲಕೃಷ್ಣ ಶೆಟ್ಟಿ ಪೊಳಲಿಯವರು ಸಂಘಟನೆಯ ಬಗ್ಗೆ ನೀಡಿದ ಮಾಹಿತಿಯ ಉಪನ್ಯಾಸವೂ ನಂದಳಿಕೆಯ ತರುಣರಲ್ಲಿ ಹೊಸ ಉತ್ಸಾಹವನ್ನು ಮೂಡಿಸಿತ್ತು. ಇದರಿಂದಾಗಿಯೇ, ಅದೇ ಕಾರಣವಾಗಿ ಮುಂದೆ ನಂದಳಿಕೆಯಲ್ಲಿ ಬಾಲಚಂದ್ರರಾಯರ ನೇತೃತ್ವದಲ್ಲಿ ‘ಮಿತ್ರಮಂಡಲಿ’ ಎಂಬ ಸಂಸ್ಥೆ ಹುಟ್ಟಿಕೊಂಡಿತು. ಆ ‘ಮಿತ್ರಮಂಡಲಿ’ಯು ಒಬ್ಬ ಕವಿಯ ಹೆಸರಿನಲ್ಲಿ ಒಂದು ಗ್ರಾಮಕ್ಕೆ ನವನಾಗರಿಕತೆಯ ಸೌಲಭ್ಯಗಳನ್ನು ಹೇಗೆ ತರಬಹುದು ಎಂಬುದನ್ನು ತೋರಿಸಿ ಕೊಟ್ಟದ್ದಲ್ಲದೆ ಜೊತೆಜೊತೆಗೆ ಮುದ್ದಣ ಕವಿಯ ಸಾಹಿತ್ಯದ ಪುನರ್ಮುದ್ರಣವೂ ಸೇರಿದಂತೆ ಮುದ್ದಣನ ಸಾಹಿತ್ಯದ ಶ್ರೇಷ್ಠತೆಯನ್ನು ಜನರ ನಡುವಿಗೆ ತಂದು ನಾಡಿನುದ್ದಕ್ಕೂ ಮುದ್ದಣನ ಮಹಾ ಪ್ರತಿಭೆಯನ್ನು ಪರಿಚಯಿಸುವಲ್ಲಿ ಯಶಸ್ವಿಯಾದದ್ದು ಈಗ ಇತಿಹಾಸ.
ಅಂದಿನ ಆ ಸಭೆಯಲ್ಲಿ ಕುಲ್ಯಾಡಿಯವರು ಭಾಗವಹಿಸಿ ಸಾಂದರ್ಭಿಕವಾಗಿ ಚೆನ್ನಾಗಿಯೇ ಮಾತನಾಡಿದರು. ಮಾತಿನ ನಡುವೆ ಅವರು ಗ್ರಾಮಾಂತರ ಪ್ರದೇಶದ ನಮ್ಮ ಸಂಸ್ಥೆ ಸಕ್ರಿಯವಾಗಿರುವುದನ್ನು ವಿಶೇಷವಾಗಿ ಶ್ಲಾಘಿಸಿದರು. ಅವರ ಮಾತುಗಳಿಂದ ನಾನು ಸಂತೋಷಗೊಂಡು ‘ನನ್ನ ಮನೆಗೂ ನೀವು ಬರಬೇಕು’ ಎಂದು ವಿನಂತಿಸಿದೆ. ಮಂಗಳೂರಿನಿಂದ ಕಾರಿನಲ್ಲಿ ಬಂದಿದ್ದ ಅವರು, (ನಾನು ಆಗ ಬೈಕ್ ಸವಾರ) ನನ್ನ ಬೈಕನ್ನು ಹಿಂಬಾಲಿಸಿ ನನ್ನ ಮನೆ ತನಕ ಬಂದು ಆತಿಥ್ಯ ಸ್ವೀಕರಿಸುವ ಪ್ರೀತಿ ಮೆರೆದರು.
ಈ ಭೇಟಿಯಿಂದ ನನ್ನ ಮತ್ತು ಅವರ ಒಡನಾಟ ಹೆಚ್ಚಾಗತೊಡಗಿತು. (ಇದು ಸುಮಾರು 1980 – 85ರ ದಶಕ ಇರಬಹುದು) ನಡುವೆ ದ.ಕ.ದ ಅನೇಕ ಕಡೆಗಳಲ್ಲಿ ನಡೆಯುತ್ತಿದ್ದ ಸಾಹಿತ್ಯ ಸಾಂಸ್ಕøತಿಕ ಉತ್ಸವಗಳಲ್ಲಿ ಅವರು ತಮ್ಮ ಉದ್ಯಮದ ಒತ್ತಡವನ್ನು ಬದಿಗಿಟ್ಟು ಪ್ರೇಕ್ಷಕನಾಗಿ ಭಾಗವಹಿಸಲು ಮುಂದಾಗತೊಡಗಿದರು. ಆದರೆ ಇದೇ ಸಂದರ್ಭದಲ್ಲಿ ನಾವು ಕನ್ನಡ ಸಂಘದ ‘ಪ್ರಸ್ತುತ’ ಅನಿಯಮಿತ ಕಾಲಿಕ ಪತ್ರಿಕೆಯ ಪ್ರಕಟಣೆಯನ್ನು ನಿಲ್ಲಿಸಿ ಜಾಹೀರಾತುಗಳಿಂದ ಧನ ಸಂಗ್ರಹಿಸುವ ಬದಲು ನೇರವಾಗಿ ಧನಸಂಗ್ರಹಿಸುವ ಪ್ರವೃತ್ತಿಗೆ ಮುಂದಾಗಿದ್ದೆವು. ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರೂ ಕೂಡಾ ಇದೇ ಸುಮಾರಿಗೆ ಸಾಹಿತ್ಯ ಸಂಘಟನೆಯ ಕ್ಷೇತ್ರಕ್ಕೆ ಕಾಲಿಟ್ಟು ಉದಾರವಾಗಿ ಧನಸಹಾಯ ನೀಡುವುದರ ಜೊತೆಗೆ ಸಕ್ರಿಯವಾಗಿ ಕನ್ನಡ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದುದು ನಮಗೆ ಆನೆ ಬಲ ಬಂದಂತಾಗಿತ್ತು. ಈ ರೀತಿ ಕುಲ್ಯಾಡಿ ಮಾಧವ ಪೈ ಮತ್ತು ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಆ ದಶಕದಲ್ಲೇ ಮೊದಲಾಗಿ ಎಂಬಂತೆ ಸಾಹಿತ್ಯ ಸಂಘಟನೆಯ ಕ್ಷೇತ್ರಕ್ಕೆ ಕಾಲಿಟ್ಟವರಾದರೂ ಇಬ್ಬರೂ ಉದಾರವಾಗಿ ಧನಸಹಾಯ ನೀಡುವುದರ ಜೊತೆಗೆ ಸಕ್ರಿಯವಾಗಿ ಕನ್ನಡ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಹೀಗೆ ಆ ಕಾಲಘಟ್ಟದಲ್ಲಿ ಕುಲ್ಯಾಡಿ ಮಾಧವ ಪೈ ಮತ್ತು ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಇಲ್ಲದ ಸಾಹಿತ್ಯ ಸಭೆಗಳೇ ಇಲ್ಲ ಎನ್ನುವಷ್ಟು ಈ ಇಬ್ಬರೂ ‘ಸಾಂಸ್ಕøತಿಕ ಕ್ರಾಂತಿ’ಗೆ ಕಾರಣಪುರುಷರಾದರು.
ಅದು ಯಾಕೋ ಏನೋ ಎಂಬಂತೆ ಈ ಇಬ್ಬರಿಗೂ – ಪುನರೂರು ಮತ್ತು ಕುಲ್ಯಾಡಿ ಅವರಿಗೆ – ನನ್ನ ಮೇಲೆ ಅಕಾರಣವಾದ ಪ್ರೀತಿ ಮತ್ತು ವಿಶ್ವಾಸ ದಿನದಿನಕ್ಕೆ ಹೆಚ್ಚಾಗುತ್ತಾ ಹೋಯಿತು. ಈ ಇಬ್ಬರೂ ನಾನು ಕರೆದ ಅಥವಾ ಸಂಘಟಿಸಿದ ಯಾವುದೇ ಕಾರ್ಯಕ್ರಮ ಇರಲಿ ಆ ಕಾರ್ಯಕ್ರಮಕ್ಕೆ ಬರತೊಡಗಿದರು. ನಾನು ಯಾಚಿಸದೇ ಇದ್ದರೂ ‘ಇರಲಿ’ ಎಂಬಂತೆ ಇಬ್ಬರೂ ನನಗೆ ಧನಸಹಾಯವನ್ನು ನೀಡುತ್ತಲೇ ಬಂದರು.
ಮುಂದೆ ನಾನು 1979ರಲ್ಲಿ ಮೂಡುಬಿದಿರೆಯಲ್ಲಿ ವರ್ಧಮಾನ ಪ್ರಶಸ್ತಿ ಪೀಠ ಎಂಬ ಸಾಹಿತ್ಯ ಲಲಿತ ಕಲಾ ಅಕಾಡಮಿಯನ್ನು ಪೂಜ್ಯ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಸ್ಥಾಪಿಸಿದೆ. ಆ ಅಕಾಡಮಿಯು ತಾನು ನೀಡುತ್ತಿರುವ ಪ್ರತಿಷ್ಠಿತ ಪ್ರಶಸ್ತಿಗಳಿಂದ ಸಾಹಿತ್ಯ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆ ಎಂದು ಮಾನ್ಯವಾಗುತ್ತಾ ಹೋಯಿತು. 1984ರ ಸುಮಾರಿಗೆ ‘ನೀವು ಈ ಪೀಠದ ಉಪಾಧ್ಯಕ್ಷರಾಗಿ ಇರಬೇಕು’ ಎಂದು ನಾನು ಪುನರೂರು ಮತ್ತು ಕುಲ್ಯಾಡಿಯವರನ್ನು ಕೇಳಿಕೊಂಡಾಗ ಇಬ್ಬರೂ ಸಮ್ಮತಿ ಸೂಚಿಸಿ, ಪೀಠದ ಬೆಳವಣಿಗೆಯಲ್ಲಿ ಆಸಕ್ತಿ ವಹಿಸಿದರು. ಪೀಠದ ದಶಮಾನೋತ್ಸವ ಸಮಾರಂಭವನ್ನು ಪುನರೂರು ಅವರು 1989ರ ಸುಮಾರಿಗೆ ಮುಲ್ಕಿಯ ಬಪ್ಪನಾಡು ಕ್ಷೇತ್ರದಲ್ಲಿ ತಾವೇ ಮುಂದೆ ನಿಂತು ಅದ್ಧೂರಿಯಾಗಿ ಆಚರಿಸಲು ಮುಂದಾದರು. ಆ ತನಕ ಪೀಠದ ಸ್ಥಾಪಕಾಧ್ಯಕ್ಷರೂ, ಕಾರ್ಯಾಧ್ಯಕ್ಷರೂ ಆಗಿದ್ದ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಕುರಿತು ‘ಪ್ರತಿ ವರುಷವೂ ಶ್ರೀ ವೀರೇಂದ್ರ ಹೆಗ್ಗಡೆಯವರೇ ಯಾಕೆ ವರ್ಧಮಾನ ಪ್ರಶಸ್ತಿ ನೀಡಬೇಕು? ಇನ್ನೊಬ್ಬ ಗಣ್ಯರು ಈ ಜಿಲ್ಲೆಯಲ್ಲಿ ಇಲ್ಲವೇ?’ ಎಂಬಂಥ ಟೀಕೆಗಳು ಒಂದು ಪತ್ರಿಕೆಯಲ್ಲಿ ಪ್ರಕಟವಾಯಿತು. ಇದರಿಂದ ಮನನೊಂದ ಹೆಗ್ಗಡೆಯವರು ‘ಸಾರ್ವಜನಿಕರಲ್ಲಿ ಇಂಥ ಅಭಿಪ್ರಾಯಗಳು ಇರುವುದಾದರೆ ತಾನು ಈ ಪೀಠದ ಕಾರ್ಯಾಧ್ಯಕ್ಷ ಸ್ಥಾನದಿಂದ ನಿವೃತ್ತನಾಗುತ್ತೇನೆ, ಎಂದರು. ಆದರೆ ‘ಪೀಠದಿಂದ ನಿವೃತ್ತನಲ್ಲ ಮತ್ತು ಪೀಠಕ್ಕೆ ಯಾವತ್ತೂ ನನ್ನ ಬೆಂಬಲವಿದೆ’ ಎಂದು ಘೋಷಿಸಿ, ಪೀಠದ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದರು. ಇದು ವರ್ಧಮಾನ ಪೀಠಕ್ಕೆ ದೊಡ್ಡ ಆಘಾತವಾದ ಹಾಗಾಗಿ ನಾವು ‘ಮುಂದಿನ ಪೀಠದ ಅಧ್ಯಕ್ಷರ ಹೆಸರನ್ನು ತಾವೇ ಸೂಚಿಸಬೇಕು’ ಎಂದು ಹೆಗ್ಗಡೆಯವರನ್ನು ವಿನಂತಿಸಿದಾಗ ಅವರು ಪೀಠದ ಸದಸ್ಯರೇ ಅದನ್ನು ನಿರ್ಧರಿಸಬೇಕೆಂಬ ಸಲಹೆ ನೀಡಿದರು. ನಾವು ಒಟ್ಟಾಗಿ ಕುಲ್ಯಾಡಿಯವರ ಹೆಸರನ್ನು ಸೂಚಿಸಿದಾಗ, ತಕ್ಷಣ ಪೂಜ್ಯ ಹೆಗ್ಗಡೆಯವರ ಮುಖದಲ್ಲಿ ಮುಗುಳ್ನಗು ಮೂಡಿತು. ಇದೇ ಕಾರಣವಾಗಿ ಕುಲ್ಯಾಡಿಯವರು ವರ್ಧಮಾನ ಪ್ರಶಸ್ತಿ ಪೀಠದ ಕಾರ್ಯಾಧ್ಯಕ್ಷರಾಗಿ ನಿಯುಕ್ತಿಗೊಂಡರು.
ವರ್ಧಮಾನ ಪ್ರಶಸ್ತಿ ಪೀಠವು ಆಗ ಹತ್ತು ವರುಷವನ್ನು ಕ್ರಮಿಸಿ ಅದು ನೀಡುವ ಪ್ರಶಸ್ತಿಗಳು – ಡಾ.ಕಂಬಾರ, ಪ್ರೊ| ಗೋಪಾಲ ಅಡಿಗ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಮಹಾಕವಿ ಕುವೆಂಪು, ಬಸವರಾಜ ಕಟ್ಟೀಮನಿ, ಡಾ.ಹಾ.ಮಾ.ನಾಯಕ ಮೊದಲಾದವರಿಗೆ ಆಗಲೇ ಪ್ರದಾನಿಸಲ್ಪಟ್ಟು – ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಗೆ ಸರಿಸಮಾನ ಎಂಬ ಅಭಿಪ್ರಾಯ ಸಾಹಿತ್ಯವಲಯದಲ್ಲಿತ್ತು. ಇದಕ್ಕೆ ಎರಡು ಕಾರಣಗಳಿದ್ದುವು. ಮೊದಲನೆಯದ್ದು ಧರ್ಮಸ್ಥಳದ ಧರ್ಮಾಧಿಕಾರಿಗಳು ಇದರ ಸ್ಥಾಪಕಾಧ್ಯಕ್ಷರೂ, ಕಾರ್ಯಾಧ್ಯಕ್ಷರೂ ಆಗಿದ್ದುದು ಒಂದಾದರೆ, ಎರಡನೆಯದ್ದು ಈ ಪ್ರಶಸ್ತಿಗಳ ನಿರ್ಣಯ ಯಾವ ಲಾಬಿಗೂ ಒಳಗಾಗದೆ, ಪಾರದರ್ಶಕ ಮತ್ತು ಪ್ರಾಮಾಣಿಕವಾಗಿ ನಡೆಯುತ್ತಿದ್ದುದೇ ಆಗಿತ್ತು. ಇಂಥ ಪೀಠದ ಅಧ್ಯಕ್ಷತೆಯನ್ನು ಕುಲ್ಯಾಡಿಯವರು ವಹಿಸಿದಾಗ, ‘ಇದು ಅವರಿಂದ ಸಾಧ್ಯವೇ?’ ಎಂಬ ಕೀಳಂದಾಜು ಸಾಹಿತ್ಯ ಕ್ಷೇತ್ರದ ಕೆಲವರಲ್ಲಿ ಸಹಜವಾಗಿ (?) ಮೂಡಿದ್ದು ನನ್ನ ಗಮನಕ್ಕೆ ಬಂದಿತ್ತು. ಆಗ ನಾನು, ‘ಸುಮ್ಮನಿದ್ದೆ’ ಆದರೆ ಕುಲ್ಯಾಡಿಯವರು ನಿಧನರಾಗುವ ತನಕ – ಸುಮಾರಾಗಿ ಹನ್ನೊಂದು ವರುಷಗಳ ಕಾಲ – ಪ್ರಶಸ್ತಿ ಪೀಠವನ್ನು – ಚೆನ್ನಾಗಿ ನಿರ್ವಹಿಸಿದ್ದು ಮಾತ್ರವಲ್ಲ ವರ್ಧಮಾನ ಪ್ರಶಸ್ತಿ ಪೀಠ ಅಂದರೆ, ಅವರಿಗೆ ಎಂಥ ಮಮಕಾರ ಇತ್ತೆಂದರೆ ಪ್ರಾಯಃ ಅವರ ‘ಕುಲ್ಯಾಡಿಕಾರ್ಸ್ ನೂತನ ಸಿಲ್ಕ್ಸ್’ ಎಂಬ ಸಂಸ್ಥೆಯಲ್ಲಿ ಅವರಿಗೆ ಇದ್ದಷ್ಟೇ ಪ್ರೀತಿ ಪೀಠದಲ್ಲೂ ಇತ್ತು ಅಥವಾ ವರುಷಗಳು ಕಳೆದಂತೆ ಅದಕ್ಕಿಂತಲೂ ಹೆಚ್ಚು ಇದ್ದಿರಬಹುದೇನೋ!
ವರ್ಧಮಾನ ಪ್ರಶಸ್ತಿ ಪೀಠ ಸ್ಥಾಪನೆಯಾಗುವಾಗ ಪೂಜ್ಯ ಹೆಗ್ಗಡೆಯವರು ‘ಈ ಸಂಸ್ಥೆಯು ಧರ್ಮಸ್ಥಳದಿಂದ ನಡೆಯುವ ಸಂಸ್ಥೆಯಲ್ಲ ಎಂಬ ಎಚ್ಚರ ನಿಮಗೆ ಇರಬೇಕು ಮತ್ತು ಇದು ಸಾರ್ವಜನಿಕ ಸಂಸ್ಥೆಯಾದ್ದರಿಂದ ಇದರ ಸಂಪನ್ಮೂಲವು ಸಾರ್ವಜನಿಕರಿಂದಲೇ ತುಂಬಿ ಬರಬೇಕು’ ಎಂಬ ‘ಕಠಿಣ’ ನಿಯಮವನ್ನು ನಮ್ಮ ಮುಂದೆ ಇರಿಸಿದ್ದರು. ಆದರೆ ಅವರ ಒಳಮನಸ್ಸಿನಲ್ಲಿ ಪೀಠದ ಬಗ್ಗೆ ಎಂಥ ಪ್ರೀತಿ ಇತ್ತು ಮತ್ತು ಈಗಲೂ ಇದೆ ಅಂದರೆ, ಪೀಠದ ಎಲ್ಲಾ ಆಗು ಹೋಗುಗಳ ಬಗ್ಗೆ ಅವರು ಧರ್ಮಸ್ಥಳದ ಸಂಸ್ಥೆಗಳ ಮೇಲೆ ಎಷ್ಟು ಪ್ರೀತಿ ಇರಿಸಿದ್ದಾರೋ ಅಷ್ಟೇ ಪ್ರೀತಿ ಇರಿಸಿರುವುದರಿಂದ ವರ್ಧಮಾನ ಪ್ರಶಸ್ತಿ ಪೀಠ ಈಗಲೂ ನಿರುಮ್ಮಳವಾಗಿ ನಡೆಯುತ್ತಿದೆ ಮತ್ತು ತನ್ನ ಘನತೆಯನ್ನು ಹಾಗೇ ಉಳಿಸಿಕೊಂಡಿದೆ.
ಕುಲ್ಯಾಡಿಯವರು ಪೀಠದ ಅಧ್ಯಕ್ಷರಾಗಿ ಬಂದ ಮೇಲೆ ಪೀಠವು ಸಂಪನ್ಮೂಲದ ಕೊರತೆ ಇದಿರಿಸಬಾರದು ಎಂದು ಸ್ವತಃ ಅವರು ನೆರವು ನೀಡುತ್ತಿದ್ದುದಲ್ಲದೆ ದಾನಿಗಳನ್ನು ಸಂಪರ್ಕಿಸುವ ಯೋಜನೆಗಳನ್ನು ಮುಂದಿಟ್ಟಾಗ, ಅವರು ನಮಗಿಂತ ಹೆಚ್ಚಿನ ಉತ್ಸಾಹ ತೋರಿಸುತ್ತಿದ್ದರು. ಒಂದು ಕಡೆ ನಾವು ದಾನಿಗಳ ‘ಮರ್ಜಿ’ಗಾಗಿ ಗಂಟೆಗೂ ಮಿಕ್ಕಿ ಕಾದುಕುಳಿತುಕೊಳ್ಳಬೇಕಾದ ಸಂದರ್ಭ ಬಂದಾಗ ಅವರು ‘ಇಂಥವರನ್ನು ಬೇಡುವುದಕ್ಕಿಂತ ನಾನು ನೀಡುವುದೇ ಒಳಿತು’ ಎಂಬಂಥ ಮಾತನ್ನೂ ಆಡಿದ್ದರು.
ಪೂಜ್ಯ ಹೆಗ್ಗಡೆಯವರು ಪೀಠದ ಕಾರ್ಯಾಧ್ಯಕ್ಷ ಸ್ಥಾನದಿಂದ 1990ರ ಸುಮಾರಿಗೆ ನಿವೃತ್ತರಾದರೂ ಈಗಾಗಲೇ ಹೇಳಿದಂತೆ ಪೀಠದ ಅಭಿವೃದ್ಧಿಗಾಗಿ ಒಂದು ರೂಪಾೈಯ ಧನಸಂಗ್ರಹದ ಯೋಜನೆಯನ್ನು ನಮ್ಮ ಮುಂದಿಟ್ಟಿದ್ದರು. ಈ ಯೋಜನೆಯು ಸ್ಥಳೀಯ ಶಾಲೆಗಳ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದ ಒಂದು ರೂಪಾೈಯಂತೆ ಧನಸಂಗ್ರಹಿಸುವುದಾಗಿದ್ದು ಅದರ ಉದ್ದೇಶ ಸರಳ ಅನಿಸಿದರೂ ಪ್ರತಿಯೊಬ್ಬ ವಿದ್ಯಾರ್ಥಿ/ ವಿದ್ಯಾರ್ಥಿನಿ ಒಂದು ರೂಪಾೈಯ ಕೂಪನನ್ನು ತೆಗೆದುಕೊಂಡರೆ, ಪ್ರತಿ ಮನೆಗೆ ವರ್ಧಮಾನ ಪ್ರಶಸ್ತಿ ಪೀಠದ ಮಾಹಿತಿ ಹೋದಂತಾಗುತ್ತದೆ ಮತ್ತು ಆ ಮನೆಯವರು ಪೀಠದ ಪ್ರಶಸ್ತಿ ಪ್ರದಾನದಲ್ಲಿ ಕೈ ಜೋಡಿಸಿದ ಹಾಗಾಗುತ್ತದೆ ಎನ್ನುವ ದೂರದೃಷ್ಟಿಯದ್ದಾಗಿತ್ತು. ಇದನ್ನು ಕುಲ್ಯಾಡಿಯವರು ಕಾರ್ಯಗತಗೊಳಿಸಲು ಉತ್ಸಾಹ ತೋರಿದ್ದಲ್ಲದೆ, ಈ ಯೋಜನೆಯು ಮೂಡುಬಿದಿರೆಯ ಆಸುಪಾಸಿನ ಶಿಕ್ಷಣ ಸಂಸ್ಥೆಗಳನ್ನು ಮೀರಿ, ಕಾರ್ಕಳ ಉಡುಪಿಗೂ ಪಸರಿಸುವಂತೆ ಪರಿಶ್ರಮಿಸಿದರು. ಸ್ವತಃ ಅವರೇ ತಮ್ಮ ಕಾರಿನಲ್ಲಿ ನನ್ನನ್ನು ಗೆಳೆಯರನ್ನೂ ಕೂರಿಸಿಕೊಂಡು ಓಡಾಡಿದ ದಿನಗಳು ಸಾಕಷ್ಟಿದ್ದುವು ಮತ್ತು ಆ ಕ್ಷಣಗಳು ನಿನ್ನೆ ಮೊನ್ನೆ ನಡೆದ ಹಾಗೆ ಈಗಲೂ ನನಗೆ ನೆನಪಿದೆ ಮತ್ತು ಆಗ ಅವರಲ್ಲಿದ್ದ ಮಂದಸ್ಮಿತದ ಮುಖದರ್ಶನ ಈಗಲೂ ನನ್ನ ಕಣ್ಣುಗಳನ್ನು ತುಂಬುತ್ತಿದೆ.
ಈ ಒಡನಾಟದಿಂದ ಕುಲ್ಯಾಡಿಯವರು ನನಗೆ ಎಷ್ಟು ಹತ್ತಿರದವರಾದರೆಂದರೆ ಮಂಗಳೂರಿನಲ್ಲಿ ಒಮ್ಮೆ ಯಾವುದೋ ಒಂದು ಸಾಹಿತ್ಯಕ ಸಮಾರಂಭ ನಡೆದಾಗ, ನಾನು ಮಂಗಳೂರಲ್ಲೇ ರಾತ್ರೆ ಉಳಿಯಬೇಕಾದ ಪ್ರಮೇಯ ಒದಗಿಬಂತು. ನನ್ನ ಸಂಚಾರಕ್ಕಾಗಿ ನಾನು ಬೈಕ್‍ನ್ನು ಮಾತ್ರ ಹೊಂದಿದ್ದು ಮಂಗಳೂರಿಗೆ ಯಾವತ್ತೂ ಆ ಬೈಕಿನಲ್ಲಿ ಹೋಗದೇ ಇದ್ದು ಬಸ್ಸಿನಲ್ಲೇ ಹೋಗಿ ಬರುತ್ತಿದ್ದು ಆ ದಿನದ ಸಮಾರಂಭ ಮುಗಿಯುವಾಗ (ಪ್ರಾಯಃ ರಾತ್ರೆ 8 ಗಂಟೆಯಾಗಿರಬೇಕು) ‘ನೀವು ಹೇಗೆ ಹೋಗುತ್ತೀರಿ?’ ಎಂದು ಪೈಗಳು ನನ್ನನ್ನು ಕೇಳಿದಾಗ ನಾನು ‘ಹೋಟೇಲಿನಲ್ಲಿ ಉಳಿಯುತ್ತೇನೆ’ ಎಂದೆ. ತಕ್ಷಣ ಅವರು ‘ಛೆ! ಅದು ಬೇಡ. ನನ್ನ ಮನೆಯೇ ಇದೆಯಲ್ಲ? ಅದು ನಿಮ್ಮದೇ ಮನೆ ಎಂದು ತಿಳಿದುಕೊಳ್ಳಿ’ ಎಂದು ನನ್ನನ್ನು (ಅವರ ಮನೆ ಮಠದ ಕಣಿ ರಸ್ತೆಯ ಫಕ್ಕದಲ್ಲಿರಬೇಕು ಎಂದು ನೆನಪು) ಅವರ ಮನೆಗೆ ಕರೆದೊಯ್ದಿದ್ದರು. ಅದು ಅವರ ಶ್ರೀಮತಿಗೂ ಇಷ್ಟವಾಯಿತು. ರಾತ್ರೆ ಭೋಜನದ ನಂತರ ನಾವು ಬಹಳಷ್ಟು ಹೊತ್ತು ಮಾತನಾಡಿಕೊಂಡಾಗ ಅವರು ನನ್ನ ಮನೆಯ ಸ್ಥಿತಿಗತಿಗಳನ್ನು ವಿಚಾರಿಸಿದ್ದರು. ಮಾತಿನ ನಡುವೆ ನನ್ನ ದೊಡ್ಡ ಮಗ ಆಗ ತಾನೇ ಇಂಜಿನಿಯರಿಂಗ್‍ನಲ್ಲಿ ಡಿಪ್ಲೊಮಾ ಮುಗಿಸಿ ಕಾಂತಾವರದ sಪಕ್ಕದ ಊರಾದ ಬೆಳುವಾಯಿಯಲ್ಲಿ ಸ್ವದ್ಯೋಗ ಪ್ರಾರಂಭಿಸಿದ ವಿಷಯ ತಿಳಿಸಿದೆ. ಆಗ ಅವರು ಆ ಉದ್ಯೋಗದ ಸಾಧ್ಯಾಸಾಧ್ಯತೆಗಳನ್ನು ವಿವೇಚಿಸಿ ಅವನಿಗೇನಾದರೂ ಒಳ್ಳೆಯ ಉದ್ಯೋಗ ಸಿಗುವ ಹಾಗೆ ಮಾಡಬೇಕು ಎಂದದ್ದಷ್ಟೇ ಅಲ್ಲದೆ ಆರ್ಥಿಕವಾಗಿ ಕೂಡಾ ತಾನು ಸಹಾಯ ಮಾಡಬಲ್ಲೆ ಎಂದಿದ್ದರು. ಆದರೆ ನನ್ನ ಮಗ ಅವರು ಸೂಚಿಸಿದ ಉದ್ಯೋಗದಲ್ಲಿ (ವಸ್ತ್ರೋದ್ಯಮದಲ್ಲಿ) ಆಸಕ್ತಿ ವಹಿಸಲಿಲ್ಲ. ಆದರೆ ಇದರಿಂದ ಅವರು ಕಿಂಚಿತ್ತೂ ನೊಂದುಕೊಳ್ಳದೆ ನಮ್ಮ ಪ್ರತಿ ಭೇಟಿಯಲ್ಲೂ ‘ಹೇಗಿದ್ದಾನೆ ನಮ್ಮ ನಿರಂಜನ?’ ಎಂದು ವಿಚಾರಿಸುವುದಿತ್ತು (ಈ ಮಾತಿನಲ್ಲಿ ‘ನಮ್ಮ’ ನಿರಂಜನ ಎಂಬ ಶಬ್ದದ ಹಿಂದೆ ಇದ್ದ ಪ್ರೀತಿ ಎಷ್ಟು ಅಗಾಧವಾದದ್ದು ಎಂದು ಊಹಿಸಿ) ಆಮೇಲೆ ನನ್ನ ಶ್ರೀಮತಿಯ ಆರೋಗ್ಯವನ್ನು ಕೂಡಾ ಅವರು ವಿಚಾರಿಸುತ್ತಿದ್ದರು.
ಅವರ ವಿವಾಹದ ಐವತ್ತಕ್ಕೆ (ಹಾಗೆಂದು ನೆನಪು) ನಾನು ಅವರನ್ನೂ ಅವರ ಪತ್ನಿಯನ್ನೂ ಕೂಡಾ ಕನ್ನಡ ಸಂಘಕ್ಕೆ ಕರೆಸಿ ಸನ್ಮಾನಿಸಿ ಗೌರವಿಸಿದ್ದೆ. ಸ್ಥಿತಪ್ರಜ್ಞರಾದ ಅವರ ಕಣ್ಣುಗಳು ಆಗ ಫಳ ಫಳ ಹೊಳೆಯುತ್ತಿದ್ದರೆ ಅವರ ಪತ್ನಿಯ ಕಣ್ಣಾಲಿಗಳು ತುಂಬಿ ಬಂದಿದ್ದುವು. ಇಂಥ ಅನುಭವ ಪ್ರಾಯಃ ಅವರಿಗೆ ಅದೇ ಹೊಸತಾಗಿತ್ತು ಎಂದು ಕಾಣುತ್ತದೆ.
ಮುಂದೆ ಕುಲ್ಯಾಡಿಯವರ ಉದ್ಯೋಗದಲ್ಲಿ (ವಸ್ತ್ರೋದ್ಯಮದಲ್ಲಿ)ಏರುಪೇರಾಯಿತು ಎಂದು ಕೇಳಿದೆ. ಹಂಪನಕಟ್ಟೆಯಲ್ಲಿದ್ದ ಅವರ ‘ಕುಲ್ಯಾಡಿಕಾರ್ಸ್ ನೂತನ ಸಿಲ್ಕ್ಸ್’ ಮಳಿಗೆಯು ತಾಂತ್ರಿಕ ಕಾರಣದಿಂದ ಮುಚ್ಚುವಂತಾಯಿತು ಎಂದೂ ತಿಳಿದು ಬಂತು. ಅವರು ಅದನ್ನು ಕೆ.ಎಸ್.ರಾವ್ ರಸ್ತೆಯ ಇನ್ಯಾವುದೋ ಕಟ್ಟಡಕ್ಕೆ ವರ್ಗಾಯಿಸಿದರೂ ಅವರ ನಿರೀಕ್ಷೆಯ ವ್ಯವಹಾರ ಅಲ್ಲಿ ನಡೆಯಲಿಲ್ಲ. ಈ ನಡುವೆ ಅವರು ಕಾರ್ಕಳ, ಪುತ್ತೂರು, (ಪ್ರಾಯಃ ತೀರ್ಥಹಳ್ಳಿಯಲ್ಲಿ ಕೂಡಾ) ಮೊದಲಾದ ಕಡೆಗಳಲ್ಲಿ ತಮ್ಮ ವ್ಯವಹಾರದ ಮಳಿಗೆಗಳನ್ನು ಪ್ರಾರಂಭಿಸಿದರು. ಅವುಗಳೂ ಫÀಲಪ್ರದವಾಗದೆ ಇದ್ದಾಗ, ಅವರೊಳಗೆ ಆಗಲೇ ಇದ್ದ ಡಿ.ವಿ.ಜಿ. ಅವರ ‘ಮಂಕುತಿಮ್ಮನ ಕಗ್ಗ’ದ ಪ್ರಭಾವ ಹೆಚ್ಚಾಗಿರಬೇಕು. ನಡುವೆ ಅವರ ಶ್ರೀಮತಿಯವರೂ ಅಸ್ವಸ್ಥರಾಗಿ ನಿಧನರಾದರೆಂದು ಕಾಣುತ್ತದೆ. ಇಂಥ ಝರ್ಝರಿತ ಸ್ಥಿತಿಯಲ್ಲೂ ಅವರು ಸ್ಥಿತಪ್ರಜ್ಞೆಯನ್ನು ಕಳೆದುಕೊಳ್ಳಲಿಲ್ಲ. ಡಿ.ವಿ.ಜಿ ಅವರ ‘ಕಲ್ಲಾಗು ಕಷ್ಟಗಳ ವಿಧಿಯು ಮಳೆ ಸುರಿಯೇ’ ಎಂಬುದನ್ನು ಒಪ್ಪಿಕೊಂಡರು..
ಅದೊಂದು ಬೆಳಿಗ್ಗೆ ಅವರು ನನಗೆ ಫೋನು ಮಾಡಿ ‘ನಾನು ಭಾರತ ಪ್ರವಾಸಕ್ಕೆ ಹೊರಡುವವನಿದ್ದೇನೆ. ನೀವು ನನಗೆ ಕಂಪೆನಿ ಕೊಡುವುದಾದರೆ ಬನ್ನಿ’ ಎಂದರು. ನಾನು ವೈದ್ಯವೃತ್ತಿಯವನಾದುದರಿಂದ ನನ್ನ ವೃತ್ತಿಯನ್ನು ಕಡೆಗಣಿಸಿ ಹೋಗುವ ಹಾಗಿರಲಿಲ್ಲವೆಂದು ವಿನಮ್ರವಾಗಿ ತಿರಸ್ಕರಿಸಿದೆ. ಆದರೆ ಅವರು ಒಬ್ಬರೇ ಭಾರತ ಸಂಚಾರ ಮಾಡಿ ಬಂದಾಗ ‘ತುಂಬಾ ಖರ್ಚಾಗಿರಬೇಕಲ್ಲ?’ ಎಂದು ಪ್ರಶ್ನಿಸಿದೆ. ಅವರು ನಗುತ್ತಾ ‘ಇಲ್ಲ ನಾನು ಕೇವಲ ಐದು ಸಾವಿರ ರೂಪಾೈಗಳಲ್ಲಿ ಇಡೀ ಭಾರತ ಸುತ್ತಿ ಬಂದೆ’ ಎಂದರು. ‘ಹೇಗೆ?’ ಎಂದು ನಾನು ಕೇಳಿದ್ದಕ್ಕೆ ‘ತಾನು ಬಹುತೇಕ ಕಡೆ ರೈಲಿನಲ್ಲೇ ಪ್ರಯಾಣಿಸಿದೆ. ವಿಶ್ರಾಂತಿಗೆ ರೈಲ್ವೆ ಸ್ಟೇಶನ್ನುಗಳನ್ನೇ ಆಶ್ರಯಿಸಿದೆ. ಯಾವುದೇ ಕಡೆಯಲ್ಲಿ ನಾನು ಹೋಟೇಲನ್ನು ಆಶ್ರಯಿಸಿಲ್ಲ’ ಎಂಬ ಸರಳ ಸತ್ಯವನ್ನು ಹೇಳಿದ್ದರು. ಅವರು ಹಾಗೆ ಹೇಳುವಾಗ ಕಿಂಚಿತ್ತೂ ಭಾವಾವೇಶಕ್ಕೆ (ಬೀಗಲೂ ಇಲ್ಲ, ಕೀಳರಿಮೆಯನ್ನು ಹೊಂದಲೂ ಇಲ್ಲ) ಒಳಗಾಗದೆ ಸಹಜವಾಗಿಯೇ ಇದ್ದರೆನ್ನುವುದು ಆಶ್ಚರ್ಯ. ಆಗ ನನಗೆ ಈ ಮನುಷ್ಯ ನಿಜವಾಗಿಯೂ ಒಬ್ಬ ಸಂತ ಎಂದು ಅನಿಸಿತ್ತು.
ಅವರ ಕೊನೆಯ ದಿನಗಳಲ್ಲಿ ಅವರು ತೀವ್ರತರವಾದ ಅಸ್ವಸ್ಥತೆಗೆ ಒಳಗಾಗಿದ್ದರು. ಆ ಸುದ್ದಿ ತಿಳಿದ ನಾನು ಸಪತ್ನೀಕನಾಗಿ ಅವರನ್ನು ನೋಡಿ ಬಂದೆ. ತುಂಬಾ ಕ್ಷೀಣವಾಗಿದ್ದ ಅವರ ದೇಹದಲ್ಲಿ ಹೊಳೆಯುತ್ತಿದ್ದ ಎರಡು ಕಣ್ಣುಗಳಲ್ಲಿ ಇಡೀ ಬ್ರಹ್ಮಾಂಡವನ್ನು ಪ್ರೀತಿಸುವ ಪ್ರೀತಿ ಆಗಲೂ ಇತ್ತು. ನಮ್ಮನ್ನು (ದಂಪತಿಯನ್ನು) ಕೊನೆಯ ಬಾರಿ ನೋಡುವಂತೆ ಅವರು ನಮ್ಮನ್ನು ನೋಡಿದರು ನಾವೂ ಅವರನ್ನು ಕೊನೆಯ ಬಾರಿ ನೋಡುವಂತೆ ನೋಡಿ ಕುಗ್ಗಿದೆವು ಆದರೆ ನಾವು ಅವರಿಂದ ಬಿಳ್ಕೊಂಡು ಬರುವಾಗ, ಅವರ ಕಣ್ಣಾಲಿಗಳು ಹನಿಗೂಡಲಿಲ್ಲ. ಅವರು ಸಹಜವಾಗಿ ಸಾವನ್ನು ನಿರೀಕ್ಷಿಸುವ ಮನೋಸ್ಥಿತಿಯಲ್ಲಿ ಇದ್ದ ಹಾಗೆ ಇದ್ದರು.
ನಮ್ಮ ಈ ಕೊನೆಯ ಭೇಟಿಯ ವಾರದ ಮೇಲೆ ಅವರು ವಿಧಿವಶರಾದ ಸುದ್ದಿ ಬಂತು. ಇದರ ನಡುವೆ ಪ್ರತಿದಿನ ಎಂಬಂತೆ ನಾನು ಅವರನ್ನೂ, ಅವರು ನನ್ನನ್ನೂ ದೂರವಾಣಿಯಲ್ಲಿ ವಿಚಾರಿಸುವುದಿತ್ತು. ನಮ್ಮ ವರ್ಧಮಾನ ಪ್ರಶಸ್ತಿ ಪೀಠದ ಉಪಾಧ್ಯಕ್ಷರಾದ ಶ್ರೀ ಯಶೋಧರ್ ಪಿ. ಕರ್ಕೇರ ಮತ್ತು ಆಕೃತಿ ಪ್ರಿಂಟ್ಸ್‍ನ ಕಲ್ಲೂರು ನಾಗೇಶ ಅವರೂ ಸಹ ಪ್ರತಿ ದಿನವೂ ಎಂಬಂತೆ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗುತ್ತಿದ್ದುದಿತ್ತು. ಆ ಭೇಟಿಯಲ್ಲಿ ಪೈಗಳು ನನ್ನನ್ನು ಅವರಲ್ಲಿ ದಿನಾ ವಿಚಾರಿಸುವುದಿತ್ತು ಎಂದು ಈ ಇಬ್ಬರು ಸ್ನೇಹಿತರು ಪ್ರತಿ ದಿನವೂ ನನಗೆ ಹೇಳುವಾಗ, ‘ಇದು ಯಾವ ಜನ್ಮದ ಬಂಧುತ್ವ?’ ಎಂಬ ಅನುಭಾವ ನನಗೆ ಆಗುತ್ತಿತ್ತು.
ಪ್ರಾಯಃ ಅವರ ಹೆಂಡತಿ ಮಕ್ಕಳನ್ನು ಬಿಟ್ಟರೆ ಅಥವಾ ಅವರ ತೀರಾ ಬಂಧುವರ್ಗವನ್ನು ಬಿಟ್ಟರೆ, ನಾನೇ ಅವರ ಅಂತರಂಗಕ್ಕೆ ಸೇರಿದವನು ಎಂಬ ಧನ್ಯತೆ ಈಗಲೂ ನನ್ನಲ್ಲಿದೆ. ಇಂಥ ಅಕಾರಣ ಪ್ರೀತಿ ಒಬ್ಬ ಮನುಷ್ಯನಲ್ಲಿ ಇರಲು ಸಾಧ್ಯವೇ ಅಂದರೆ ಸಾಧ್ಯ ಎಂಬುದಕ್ಕೆ ಉದಾಹರಣೆಯಾಗಿ ಮಾಧವ ಪೈಗಳು ಇದ್ದರು.
ಈ ಕಾರಣದಿಂದಲೇ ನಾನು ಕಾರಂತರ ‘ಬೆಟ್ಟದ ಜೀವ’ದ ಗೋಪಾಲಯ್ಯನನ್ನು ಮಾಧವ ಪೈಯವರಲ್ಲಿ ಕಂಡಿದ್ದೇನೆ ಎಂದದ್ದು. ಗೋಪಾಲಯ್ಯನಂಥ ಪಾತ್ರವು ಪ್ರಾಯಃ ಕಾರಂತರ ಕಲ್ಪನೆಯದ್ದಾಗಿರಬಹುದು ಆದರೆ ನನ್ನ ಪಾಲಿಗೆ ಮಾಧವ ಪೈ ಅವರು ಕಲ್ಪನೆಯಲ್ಲಿ ಇಲ್ಲ ವಾಸ್ತವದಲ್ಲಿ ಇದ್ದರು.
ಟಿಪ್ಪಣಿ : ಈಗ ನಾನು ಕುಲ್ಯಾಡಿಯವರನ್ನು ಅವರ ಮಗ ಸುಧೀರ್ ಪೈಯವರಲ್ಲಿ ಕಾಣುತ್ತಿದ್ದೇನೆ. ಕಾರಣ ಅವರು ಪ್ರತಿ ವರುಷವೂ ವರ್ಧಮಾನ ಪ್ರಶಸ್ತಿ ಪೀಠಕ್ಕೆ ಹತ್ತು ಸಾವಿರ ರೂಪಾೈಗಳ ದೇಣಿಗೆಯನ್ನು ನೀಡುತ್ತಾ ಬಂದಿದ್ದಾರೆ. ಅದನ್ನು ನಾನು ಅವರು ತಮ್ಮ ತಂದೆಯವರ ಸಾರ್ಥಕ ಬದುಕಿಗೆ ನೀಡುತ್ತಿರುವ ಅಪರೂಪದ ಆಘ್ರ್ಯವೇ ಎಂದುಕೊಂಡಿದ್ದೇನೆ.
ಡಾ.ನಾ.ಮೊಗಸಾಲೆ
ಹಿರಿಯ ಸಾಹಿತಿ ಮತ್ತು ಸಂಘಟಕರು

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter