ನನ್ನಂತೆಯೇ ಇವಳು ಉಕ್ಕುವುದು !

ಅನೇಕ  ದಿನಗಳ ನಂತರ 
ಒಬ್ಬಳೇ ನಿಂತಿದ್ದೆ 
ಬಹುತೇಕ  ಬೇಸರಗಳ  ಸುತ್ತ

ಈ ಕಡಲತಡಿಯಲ್ಲಿ
ಅಲೆ ಅಲೆಗಳು
ಹಾರಾಡುತ್ತಿವೆಯೋ 
ಕಿರುಚಾಡುತ್ತಿವೆಯೋ
ಅರಿಯದೇ ನಿರುಕಿಸುತ್ತಿದ್ದೆ!

ಅಡಿಗೆ ತಟ್ಟಿ ಮುಟ್ಟಿ
ಮನದ ಮಣಭಾರವಿಳಿಸಲು
ಮೊರೆಯುತ್ತಿತ್ತು  
ತೆರೆಯ ಪ್ರೀತಿಗೆ ಮಣಿದೆ 
ತೆರೆದುಕೊಂಡೆ !

ಕಡಲೊಡಲ ತೆಕ್ಕೆಯಲಿ
ನನ್ನೊಡಲ ಬೆಂಕಿ ಹನಿ ಹನಿಯಾಗಿ

ಬಸಿದು ಹಳೆಯ ಪ್ರವಾಹಕ್ಕೆ 
ನೋಟ ಮಂಜಾಯ್ತು 
ಅರೇ! ನನ್ನಂತೆ ಇವಳು ಉಕ್ಕುವದ 
ಕಂಡು ದಿಗಿಲಾದೆ ಕಣ್ಣರಳಿಸಿದೆ 
ಅದೇ ವೇದನೆ ಅಸಹನೆ !

ಕಾಲುಗಳ  ಕಸುವು ಕುಸಿದಂತೆ
ಮರಳ ಮಡಿಲಲ್ಲಿ ಕೂತೆ
ಶರಧಿ ಉಗ್ಗುತ್ತಿದ್ದಳು 
ನಾನೂ ಉಗ್ಗುತ್ತಲೇ ತೋಡಿಕೊಂಡೆ 
ಹಗೂರ... ಹಗೂರ... ಹಗುರಾದೆ

ಕಡಲಹನಿ ಕಣ್ಣಹನಿ 
ಒಂದಾಗಿದ್ದು ಅರಿವೇಯಿಲ್ಲ!
ಎರಡೂ ಉಪ್ಪುಪ್ಪು!

ಬದುಕು ಹೀಗೆ
ಆತ್ಮಸಿಂಚನಕೆ
ಬರಿ ಪನ್ನೀರೇ ಸಾಲದಂತೆ 
ಕಣ್ಣೀರೂ ಬೇಕಂತೆ!

* ವಿಭಾ ಪುರೋಹಿತ 
ಬೆಂಗಳೂರು

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter