ಮತ್ತೆ ಬಂದಿದೆ ಬೆಳಕಿನ ಹಬ್ಬ ದೀಪಾವಳಿ. ಪ್ರತಿ ಊರಿನಲ್ಲಿಯೂ ವಿಭಿನ್ನ ಸ್ವರೂಪಗಳಲ್ಲಿ ಆಚರಿಸುವ ದೀಪಾವಳಿಗೆ ಸಾಟಿಯಾದ ಹಬ್ಬ ಇನ್ಯಾವುದೂ ಇಲ್ಲ. ಮಲೆನಾಡಿನಲ್ಲಿ ಕಳೆದ ಬಾಲ್ಯದಲ್ಲಿ ಅತ್ಯಂತ ಪರಿಸರದಸ್ನೇಹಿಯಾದ ಹಬ್ಬಗಳನ್ನು ಕಂಡವರು ನಾವು. ಅಲ್ಲಿ ದೀಪಾವಳಿ ಎಂದರೆ ದೊಡ್ಡಹಬ್ಬ ಎಂದು ಕರೆಯುವ ವಾಡಿಕೆ. ಮಳೆಗಾಲದ ಆರಂಭದಲ್ಲಿ ಗೊಂಡೆರು ಹೂವಿನ(ಚೆಂಡು ಹೂವಿನ)ಬೀಜ ಹಾಕಿದರೆ ದೀಪಾವಳಿಯಲ್ಲಿ ಹೂವು ಸಿಗುತ್ತದೆ ಎಂಬ ಕರಾರುವಾಕ್ಕಾದ ಲೆಕ್ಕಾಚಾರದಲ್ಲಿ ದೊಡ್ಡ ಹಬ್ಬದ ತಯಾರಿ ಶುರುವಾಗುತ್ತದೆ. ಹಬ್ಬಕ್ಕಿಂತ ಕೆಲವು ದಿನಗಳ ಮೊದಲು ಮನೆಯ ಹೆಣ್ಣುಮಕ್ಕಳನ್ನೂ ಅಳಿಯಂದಿರನ್ನೂ ‘ನಮ್ಮನೆ ಹಬ್ಬಕ್ಕೆ ಬನ್ನಿ’ ಎಂದು ಕರೆಯುವ ವಾಡಿಕೆ ಇತ್ತು. ಹಬ್ಬಕ್ಕೆ ಮುನ್ನ ಮನೆಯ ಹೊರ ಗೋಡೆಗೆ ಹಳದಿ ಮಣ್ಣು, ಅಡುಗೆ ಮನೆಗೆ ಕೆಮ್ಮಣ್ಣು, ಕಟ್ಟಿಗೆ ಒಲೆ ಉರಿಸುವ ಕಡೆಗೆ ಕಪ್ಪು ಮಸಿಯನ್ನೆ ಸಾರಣೆ ಮಾಡುತ್ತಿದ್ದರು. ಅಣಲೆಕಾಯಿ ಮಸಿ, ಕೆಮ್ಮಣ್ಣು, ಹಳದಿ ಮಣ ಎಲ್ಲವನ್ನು ನೀರಿನಲ್ಲಿ ಕದಡಿ ಹತ್ತಿಯ ಬಟ್ಟೆ ಮುಳುಗಿಸಿ ಮಣ್ಣಿನ ಗೋಡೆಗೆ ಒರೆಸುತ್ತಾ ಹೋಗುವ ಸಂಭ್ರಮದಲ್ಲಿ ಹಿರಿಯರೊಂದಿಗೆ ನಾವೂ ಭಾಗಿಗಳಾಗುತ್ತಿದ್ದೆವು. ಕೊಟ್ಟಿಗೆಯೆದುರಿಗೆ, ಬಾವಿಕಟ್ಟೆಗೆ ಶೇಡಿಯಲ್ಲಿ(ಬಿಳಿಯ ಬಣ್ಣ) ಹಸೆ ಚಿತ್ರ ಬರೆಯುವ ಅಮ್ಮಂದಿರ ಕೌಶಲ ಮೆಚ್ಚುವಂತಿರುತ್ತಿತ್ತು. ಹಬ್ಬದ ಹಿಂದಿನ ದಿನದೊಳಗೆ ಸ್ವಚ್ಛತಾ ಕಾರ್ಯಕ್ರಮಕ್ಕೆ ತೆರೆ ಬೀಳುತ್ತಿತ್ತು.
ಭತ್ತದ ಕದಿರು, ಮಾವಿನೆಲೆಗಳನ್ನು ನಾರಿನಲ್ಲಿ ಕಟ್ಟಿ ಹೊಸ್ತಿಲಿಗೆ ತೋರಣ ಕಟ್ಟಿ ಹಬ್ಬ ಆಚರಿಸಲು ಆರಂಭಿಸುತ್ತಿದ್ದರು. “ಬಲಿವೇಂದ್ರನ ರಾಜ್ಯದಲಿ ಮಗೆಯ ಹಣ್ಣಿನ ತ್ವಾರಣವೇ ಮಗೆಯ ಹಣ್ಣನು ಮೆಟ್ಟಿ ಇಳಿದು ಬಂದನೆ ಬಲಿವೇಂದ್ರ ” ಎಂದು ಹಾಡು ಹೇಳುತ್ತಾ ಬಾವಿಯ ನೀರು ಸೇದಿ ಕಲಶ ತುಂಬಿಸುತ್ತಿದ್ದರು. ಕಲಶದ ಮೇಲೆ ಉದ್ದದ ಮುಳ್ಳುಸೌತೆಕಾಯಿಗೆ ಚಿತ್ತಾರ ಬರೆದಿಟ್ಟು ಬಲಿವೇಂದ್ರ ಎನ್ನುತ್ತಿದ್ದರು. ಅದರ ಮೇಲೆ ಅಡಿಕೆ ಸಿಂಗಾರ ಮುಡಿಸುತ್ತಿದ್ದರು. ]
ಗಂಡ, ಮಕ್ಕಳ ತಲೆಗೆ ಎಣ್ಣೆ ಹಾಕಿ ಆರತಿ ಎತ್ತಿ ಅಭ್ಯಂಜನ ಸ್ನಾನ ಮಾಡಲು ಅಮ್ಮ ಕಳಿಸಿದಳೆಂದರೆ ಬರೋಬ್ಬರಿ ಒಂದು ಹಂಡೆ ಬಿಸಿ ನೀರು ಸ್ನಾನÀ ಮಾಡಬಹುದಾಗಿತ್ತು. ಅಂದು ಗೋವೆಕಾಯಿ ಹಾಕಿ ಮಾಡಿದ ಹಬೆಯಲ್ಲಿ ಬೇಯಿಸಿದ ಕಡುಬಿನೂಟ. ಸಂಜೆಯೊಳಗೆ ಚೆಂಡುಹೂವು, ಪಚ್ಚೆತೆನೆ, ಹಣ್ಣಡಿಕೆ, ಗುಡ್ಡೇಹೂವು, ವೀಳ್ಯದೆಲೆಗಳನ್ನು ಸಂಗ್ರಹಿಸಬೇಕಾಗಿತ್ತು. ಬಚ್ಚಲು ಬಳ್ಳಿಗೆ ದಬ್ಬಣ ಸುರಿದು ಹೂವಿನ ಮಾಲೆಯನ್ನು, ಹಣ್ಣಡಿಕೆ ಮಾಲೆಯನ್ನೂ ಬೇರೆಬೇರೆಯಾಗಿ ಕಟ್ಟುತ್ತಿದೆವು. ನಮ್ಮ ತಲೆಗೆ ಮುಡಿಯಲು ಕನಕಾಂಬರದ ಮಾಲೆಯೂ ಸಿದ್ಧವಾಗುತ್ತಿತ್ತು. ರಾತ್ರಿ ಬೂರ್ಗಳವಿನ ಹೆಸರಿನಲ್ಲಿ ಅಕ್ಕ ಪಕ್ಕದ ಮನೆಯ ಹಿತ್ತಿಲಿನಲ್ಲಿರುವ ಎಳೆ ಸವತೇ ಕಾಯಿ, ಪೇರಲೆಕಾಯಿ, ತರಕಾರಿ, ಹೂವು ಹಣ್ಣುಗಳನ್ನು ಕದಿಯುತ್ತಿದ್ದೆವು. ಅವತ್ತು ಕದಿಯುವಾಗ ಸಿಕ್ಕಿಬಿದ್ದರೂ ಮಾಫ್ ಮಾಡುತ್ತಿದ್ದರು. ಇದೊಂದು ಮೋಜಿಗಾಗಿ ಮಾಡುವ ಸಾಹಸದ ಕಾರ್ಯವಾಗಿತ್ತು.
ಮರುದಿನ ಅಂದರೆ ಅಮಾವಾಸ್ಯೆಯ ದಿನ ಮುಸ್ಸಂಜೆಗೆ ಲಕ್ಷ್ಮಿಪೂಜೆ…. ಹಣ, ಆಭರಣ ತುಂಬಿಡುವ ತಿಜೋರಿಯ ಮುಂದೆ ರಂಗೋಲಿ ಹಾಕಿ ಜೋಡಿ ದೀಪ ಇಟ್ಟು ಕೊಬ್ಬರಿ ಮಿಠಾಯಿ, ಕೋಸಂಬರಿ ,ಹಣ್ಣು ಕಾಯಿಗಳ ನೈವೇದ್ಯ ಮಾಡುತ್ತಿದ್ದರು. ಬಿದಿರಕಡ್ಡಿಗಳನ್ನು ಜೋಡಿಸಿ ಬಣ್ಣದ ಹಾಳೆUಳನ್ನು ಅಂಟಿಸಿ ತರಾವರಿ ಆಕಾಶದೀಪಗಳನ್ನು ತಯಾರಿಸಿ ಅದರೊಳಗೆ ಹಣತೆಯನ್ನಿಟ್ಟು ಮನೆ ಎದುರು ತೂಗಿಬಿಡುತ್ತಿದ್ದರು.
ದೊಡ್ಡ ಹಬ್ಬಕ್ಕೆ ಅನುಕೂಲ ಇದ್ದವರು ಮಕ್ಕಳಿಗೆ ಹೊಸ ಬಟ್ಟೆ ಕೊಡಿಸುತ್ತಿದ್ದರು. ಅದಿಲ್ಲವಾದರೆ ಇರುವುದರಲ್ಲೇ ಹೊಸದೆನಿಸುವ ಅಂಗಿ ಧರಿಸಿ ಮಾಲೆ ತಲೆಗೇರಿಸಿದರೆ ಅಲಂಕಾರ ಸಂಪೂರ್ಣವಾಗುತ್ತಿತ್ತು. ಆಗ ನಮ್ಮೂರಿನ ಅಮ್ಮಂದಿರಿಗೆ ಮದುವೆಯಲ್ಲಿ ಗಂಡನ ಮನೆಯವರು ಕೊಡಿಸುತ್ತಿದ್ದ ಒಂದೇ ರೇಷ್ಮೆಸೀರೆಯಲ್ಲಿ ಇಡೀ ಜೀವಮಾನ ಕಳೆಯುವ ರೂಢಿ ಇತ್ತು. ಪ್ರತಿ ವರ್ಷ ದೀಪಾವಳಿಯಲ್ಲಿ ಅದನ್ನೇ ಉಟ್ಟು ಸಂಭ್ರಮಿಸುತ್ತಿದ್ದರು. ಕೊಟ್ಟಿಗೆಯಲ್ಲಿರುವ ಗಂಗೆ, ಸೀತೆ, ಸಾವಿತ್ರಿ ಮುಂತಾದ ದನ ಕರುಗಳಿಗೆಲ್ಲವುಗಳಿಗೂ ಬಿಸಿನೀರು ಮಾಡಿ ಗಂಡಸರು ಸ್ನಾನ ಮಾಡಿಸುತ್ತಿದ್ದರು. ಅರಿಶಿನ ಹಾಕಿ ತಯಾರಿಸಿದ ಚರುವು ಅಂದರೆ ಅನ್ನ, ಎರೆದೆರೆದು ರಾಶಿ ಹಾಕುವ ಅರಿಶಿನ ಬಾಳೆಕಾಯಿ ಹಾಕಿ ಮಾಡಿದ ದೋಸೆ, ಘಮಘಮಿಸುವ ಕಡ್ಲೇ ಬೇಳೆ ಹೋಳಿಗೆಗಳನ್ನೆಲ್ಲ ನೈವೇದ್ಯವಾಗುವವರೆಗೆ ತಿನ್ನದೇ ಇರುವುದೇ ಕಷ್ಟವಾಗುತ್ತಿತ್ತು. ‘ಈ ಹಬ್ಬದಲ್ಲಿ ಮಾಡುವ ಅಡುಗೆ ನಿಮಗಾಗಿ ಮಾಡಿದ್ದಲ್ಲ ಮಕ್ಕಳೇ. ಅವೆಲ್ಲ ದನಕರುಗಳಿಗೆ’ ಎಂದು ಹಿರಿಯರು ಹೇಳುತ್ತಿದ್ದರು. ನಮಗೆ ದೊಡ್ಡ ಹಬ್ಬದಲ್ಲಿ ದನಕರುಗಳಾಗುವುದೇ ಒಳ್ಳೆಯದು ಎಂದೆನಿಸುವುದೂ ಕೂಡಾ ಇತ್ತು. ನಿಮ್ಮದೇ ಯೋಗಾ ಇವತ್ತು! ಎಂದು ದನಗಳ ಮೈ ಸವರಿ ಹೇಳಿದರೆ ಕೊರಳಿಗೆ ಕಟ್ಟಿದ ಚೆಂಡುಹೂವಿನ ಮಾಲೆ ಅಡಿಕೆಮಾಲೆಯನ್ನು ತಿನ್ನಲೆತ್ನಿಸುತ್ತಿದ್ದ ದನಗಳಿಗೆ ನಮ್ಮ ಕಷ್ಟ ಎಷ್ಟು ಅರ್ಥವಾಗುತ್ತಿತ್ತೋ ದೇವನೇ ಬಲ್ಲ.
ಬೆಟ್ಟದಲ್ಲಿರುವ ಹುಲಿದೇವರಿಗೆ ಊರಿನವರೆಲ್ಲ ಸೇರಿ ತೆಂಗಿನಕಾಯಿ ಒಡೆದು ಪೂಜೆ ಮಾಡಿ ಬರುತ್ತಿದ್ದರು. ಮೇಯಲು ಬಿಟ್ಟ ಹಸುಗಳನ್ನು ಹುಲಿ ಬೇಟೆಯಾಡದಿರಲಿ ಎನ್ನುವ ಆಶಯ ಈ ಪೂಜೆಗಿರುತ್ತಿತ್ತು. ನಂತರ ಕೊಟ್ಟಿಗೆಯಲ್ಲಿ ಗೋಪೂಜೆ. ಶೇಡಿ ಕೆಮ್ಮಣ್ಣನ್ನು ಕದಡಿ ಶಿದ್ದೆಯನ್ನು ಅದರಲ್ಲಿ ಅದ್ದಿ ದನಕರುಗಳ ಮೈಮೇಲೆಲ್ಲ ಅಚ್ಚು ಹೊಡೆದು ಚಿತ್ತಾರ ಮಾಡುತ್ತಿದ್ದರು. ಗೋವಿನ ಮುಖಕ್ಕೂ ಅರಿಶಿನ ಕುಮಕುಮ ಹಚ್ಚಿ ಹಚ್ಚಿ ನೆತ್ತಿಗೆ ಎಣ್ಣೆ ಹಾಕುತ್ತಿದ್ದರು. ಅಪ್ಪನ ಮಂತ್ರಕ್ಕೆ ಸರಿಸಾಟಿಯಾಗಿ ಅಮ್ಮನ ಸಂಪ್ರದಾಯದ ಹಾಡು ಇರುತ್ತಿತ್ತು. ಗಂಟೆ ಜಾಗಟೆಯ ಸಪ್ಪಳಕ್ಕೆ ಕೆಲವು ದನ ಕರುಗಳು ಸಿಟ್ಟಿಗೆದ್ದು ಜಿಗಿದಾಡುತ್ತಿದ್ದವ. ತಂದಳೆ ಗೋಗ್ರಾಸವಾ ದ್ರೌಪತದೇವಿ ಚಂದದ್ಹೆಜ್ಜೆಯನಿಡುತಾ.. ಎಂದು ಹಾಡು ಹೇಳುತ್ತ ಪೂಜೆಯ ಅಂತ್ಯದಲ್ಲಿ ಹೋಳಿಗೆ, ದೋಸೆ, ಚರುವುಗಳನ್ನು ಒಂದೊಂದು ಬುಟ್ಟಿಯಲ್ಲಿ ತುಂಬಿ ಪ್ರತಿ ಹಸುವಿನ ಮುಂದಿಟ್ಟಾಗ ಎಲ್ಲÀ ಹಸುಗಳೂ ಶಾಂತವಾಗುತ್ತಿದ್ದವು. ಗೋಪೂಜೆ ಮುಗಿದ ಮೇಲೆ ಸುತ್ತು ಪೂಜೆ ಅಥವಾ ಆಯುಧ ಪೂಜೆ ಮಾಡುತ್ತಿದ್ದರು. ನೆಮ್ಮದಿಯ ಬದುಕಿಗೆ ಪೂರಕವಾದ ಬಾವಿ, ಹೊಸ್ತಿಲು, ಕೃಷಿ ಪರಿಕರಗಳು, ಪಣತ, ತುಳಸಿಕಟ್ಟೆ, ವಾಹನಗಳು, ಒಲೆ ಹೀಗೆ ಎಲ್ಲವುಗಳನ್ನೂ ಪೂಜಿಸುತ್ತಿದ್ದರು. ಗದ್ದೆಯಿಂದ ತಂದ ಭತ್ತದ ತೆನೆಗಳನ್ನು ಮನೆ ದೇವರ ಮಂದಿಟ್ಟು ಪೂಜೆ ಮಾಡಿ ಆರತಿ ಮಾಡುತ್ತಿದ್ದರು. ನಂತರ ಮನೆಮಂದಿಗೆಲ್ಲ ಹೋಳಿಗೆ ಊಟದ ಸಡಗರ.
ದೀಪಾವಳಿಯಲ್ಲಿ ಭರ್ಜರಿ ಊಟದ ನಂತರ ವಿಶ್ರಮಿಸುವ ಭಾಗ್ಯವಿರುತ್ತಿರಲಿಲ್ಲ. ಸಂಜೆ ಊರ ಹೊರಗಿರುವ ದೇವಸ್ಥಾನದಲ್ಲಿ ಸಾಮೂಹಿಕವಾಗಿ ಊರಿನವರೆಲ್ಲ ಪೂಜೆ ಸಲ್ಲಿಸುತ್ತಿದ್ದವು. ಎದುರಿನ ಬಯಲಿನಲ್ಲಿ ಊರಿನಲ್ಲಿರುವ ಎಲ್ಲರ ಮನೆಯ ಹೋರಿಗಳನ್ನು ಬಿಟ್ಟು ರೊಚ್ಚೆಗೆಬ್ಬಿಸುತ್ತಿದ್ದರು. ಸಡಿಲವಾಗಿ ಹಿಡಿದ ಹಗ್ಗವನ್ನು ಲೆಕ್ಕಿಸದೇ ಅವು ಚಂಗು ಚಂಗೆಂದು ಜಿಗಿದಾಡುತ್ತಿದ್ದರೆ. ಸಾಹಸಿ ಯುವಕರು ಅವುಗಳ ಕೊರಳಿನಲ್ಲಿರುವ ಹಣ್ಣಡಿಕೆ ಮಾಲೆಗಳನ್ನು ಹರಿಯುತ್ತಿದ್ದರು. ಹೆಚ್ಚು ಮಾಲೆಗಳನ್ನು ಹರಿದವ ಎಲ್ಲರ ಕಣ್ಣಿನಲ್ಲಿ ಪರಾಕ್ರಮಿ ಎನಿಸಿಕೊಳ್ಳುತ್ತಿದ್ದ. ಸಂಜೆ ಹೊತ್ತಿಗೆ ಮನೆಯ ಯಜಮಾನ ಹೊಸ ಭತ್ತದ ತೆನೆಗಳನ್ನು ತಂದಾಗ ‘ಕದಿರ ತಂದ ಸುಗುಣ ಬಾಲ ಮುದದಿ ನೋಡಿರೆ ಎಂದು ನೋಡಿರೆ ಪೂಜಿಸುವ ಕ್ರಮ ಇತ್ತು. ರಾತ್ರಿ ಮನೆಯ ಮುಂದೆ ತುಳಸಿಕಟ್ಟೆಯೆದುರು, ದೇವರ ಮುಂದೆ ಸಾಲು ಹಣತೆಗಳನ್ನು ಬೆಳಗುತ್ತಿದ್ದರು. ಬಲಿವೇಂದ್ರನನ್ನು ( ಪೂಜೆಗೆ ಬಳಸಿದ ಅಡಿಕೆ ಸಿಂಗಾರ) ಮುಂದಿನ ವರ್ಷ ಬಾರೋ ಎಂದು ಮನೆ ಮಾಡಿಗೆ ಒಗೆದರೆ ಹಬ್ಬ ಮುಗಿದ ಹಾಗೇ. ಆದರೆ ದೀಪಾವಳಿಯಿಂದ ಆರಂಭವಾದ ದೀಪ ಬೆಳಗುವ ಸಂಭ್ರಮ ಕಾರ್ತೀಕ ಮಾಸ ಮುಗಿಯುವವರೆಗೂ ಮುಂದುವರಿಯುತ್ತದೆ. ಕೆಲವೆಡೆಗೆ ಹಸಲರು ಬಿಂಗಿ ಪದಗಳನ್ನು ಹಾಡುತ್ತಾ ಮನೆಯಿಂದ ಮನೆಗೆ ಸಂಚರಿಸುತ್ತಾರೆ. ಮರಾಠಿಗರು ಕೋಲಾಟ ಆಡುತ್ತಾ ಸಂಚರಿಸಿದರೆ ನಾಯಕರು ಪೂಜಾದೋಳಿಗೆ ಎನ್ನುತ್ತ ಎಲ್ಲ ಮನೆಗಳಿಂದ ದೋಸೆಯನ್ನು ಸಂಗ್ರಹಿಸುತ್ತಾರೆ.
ಇಂದಿಗೂ ಇದೇ ಬಗೆಯಲ್ಲಿ ದೊಡ್ಡಹಬ್ಬವನ್ನು ಉತ್ತರಕನ್ನಡದ ಅನೇಕ ಹಳ್ಳಿಗಳಲ್ಲಿ ಆಚರಿಸುತ್ತಾರೆ. ತೋಟ ಗದ್ದೆಗಳಿಗೆ ಅತ್ಯಗತ್ಯವಾದ ಗೊಬ್ಬರ ತಯಾರಿಸುವುದಕ್ಕೆ ಅತ್ಯಗತ್ಯವಾದದ್ದು ಹಸು ಸಾಕಣಿಕೆ ಎಂಬ ಉಪಕಸುಬು. ಹಾಲು ಹಯನಿದ್ದರೆ ಮನೆಯಲ್ಲಿ ಆಹಾರ ಸಮೃದ್ಧಿ ಇದ್ದಂತೆ. ತಾಯಿಯ ಹಾಲನ್ನು ಹಸುಗೂಸುಗಳಿದ್ದಾಗ ಕುಡಿದರೆ, ವೃದ್ಧಾಪ್ಯದವರೆಗೂ ಹಸುವಿನ ಹಾಲನ್ನೇ ಕುಡಿದು ಜೀವಿಸುತ್ತೇವೆ. ಅಂತಹ ಹಸುಗಳನ್ನು ಪೂಜಿಸಿ ಕೃತಜ್ಞತೆ ತೋರಿಸುವುದಕ್ಕಾಗಿಯೇ ದೊಡ್ಡ ಹಬ್ಬದ ಆಚರಣೆಯಲ್ಲಿ ಗೋಪೂಜೆಗೇ ಹೆಚ್ಚು ಮಹತ್ವ ನೀಡುವ ಸಂಪ್ರದಾಯ ಕೃಷಿಕರ ಮನೆಯಲ್ಲಿ ನಡೆದುಕೊಂಡು ಬಂದಿದೆ.
ಕಳೆದ ಒಂದು ದಶಕದಿಂದ ಈಚೆಗೆ ಯುವ ಜನರ ನಗರ ವಲಸೆಯಿಂದ ಹತಾಶರಾದ ಅನೇಕ ಹೆತ್ತವರು ನಮ್ಮ ಕೈಲಾಗುವುದಿಲ್ಲ ಎನ್ನುತ್ತಾ ಹಸು ಸಾಕಾಣಿಕೆಯಿಂದ ವಿಮುಖರಾಗುತ್ತಿದ್ದಾರೆ. ಯಮ್ಮನೆಲಿ ಈಗ ಕೊಟ್ಟಿಗೆ ಇಲ್ಲೆ ಎನ್ನುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾದಂತೆ ದೊಡ್ಡಹಬ್ಬದ ಗೋಪೂಜೆಯ ಸಂಭ್ರಮವೂ ಸೊರಗುತ್ತಿದೆಯೇನೋ ಎನಿಸುತ್ತಿದೆ. ತೋಟ ಗದ್ದೆಗಳ ಫಲವತ್ತತೆ ಗೋವುಗಳಿಲ್ಲದಿದ್ದರೂ ಉಳೀದೀತೆ? ಯುವಕರು ಹಳ್ಳಿಗೆ ಮರಳಿ ಕೃಷಿಕರ ಮನದಲ್ಲಿ ಕವಿದ ಗೋಸಾಕಣಿಕೆಯ ನಿರಾಸಕ್ತಿ ಕಳೆದು ಪರಸರಸ್ನೇಹಿ ದೊಡ್ಡ ಹಬ್ಬ ವೈಭವದಿಂದ ಆಚರಣೆಯಲ್ಲಿ ಇರಲಿ ಎನ್ನುವುದೇ ಬೆಳಕಿನ ಹಬ್ಬದ ಆಶಯ.
************************
2 thoughts on “ಮಲೆನಾಡಿನ ಪರಿಸರಸ್ನೇಹಿ ದೊಡ್ಡಹಬ್ಬ”
ತುಂಬಾ ಉತ್ತಮ ಲೇಖನ ಅಕ್ಕಾ.ಈಗ ಕಥೆ ತರಾ ಅನಿಸ್ತು.ಆದರೂ ಸತ್ಯ . ತುಂಬಾ ಚೆನ್ನಾಗಿದೆ.ಅಭಿನಂದನೆಗಳು🌷🌷🪴🌺🙏🙏
ದೀಪಾವಳಿಗೆ ಚಂದದ ಲೇಖನ…ಮನೆಯ ತುಂಬ ಜನ ಇದ್ದರೆ ಹಬ್ಬ ಚಂದ….ಪರಿಸರ ಸ್ನೇಹಿ ನಮ್ಮ ಹಬ್ಬದ ಬಗ್ಗೆ ಹೆಮ್ಮೆ ಎನಿಸಿವ ಬರಹ…ಮೆಚ್ಚುಗೆ ಆಯ್ತು..