ಕುರಿಂಜಿ- ಅನಾಮಿಕ
ಬೆಟ್ಟದ ನಾಡಿನ ಅಧಿಪತಿ
ಬೆಟ್ಟದ ಅತಿಶಯದ ಇಳಿಜಾರಿನಲ್ಲಿ
ಚಂಡೆದನಿಯಲ್ಲಿ
ಸುರಿವ ನೀರಝರಿ
ಇಳಿದು ಬೆಟ್ಟದಿರುಕುಗಳಲ್ಲಿ ಬೆಳೆದ
ಹಲಸಿನ ಮರಗಳೆಡೆಯಲ್ಲಿ
ಮಧುರ ಸಂಗೀತದುಲಿಯಂತೆ
ಹರಿವ ಜಲಪಾತವಿರುವ
ಬೆಟ್ಟದ ನಾಡಿನ ಅಧಿಪತಿಯೆ
ಕೇಳು,
ನಿನ್ನ ಪ್ರಿಯತಮೆಯು
ನಮೆದು ಹೋಗುತ್ತಿದ್ದಾಳೆ.
ಸಮುದ್ರದ ಚಿಪ್ಪುಗಳಿಂದ ಮಾಡಿದ
ಅವಳ ಕೈಬಳೆಗಳು
ಕೃಶವಾಗುತ್ತಿರುವ
ಅವಳ ಕೈಗಳಿಂದ ಜಾರಿಬೀಳುತ್ತಿವೆ
ಅವನ್ನು ನೋಡುತ್ತಾ ಅವಳ ಕಣ್ಣುಗಳು
ತುಂಬಿಕೊಳ್ಳುತ್ತಿವೆ
ಅವಳು ನಿದ್ದೆಗೆಂದು ರೆಪ್ಪೆಗಳ ಮುಚ್ಚಿದ್ದೇ ಇಲ್ಲ.
[ಗೆಳತಿ ಪ್ರಿಯಕರನಿಗೆ ಹೇಳಿದ್ದು]
ಇದು ವಿಜಯರಾಘವನ್ ಅವರು ಅನುವಾದಿಸಿದ ಸಂಗಂ ಕಾವ್ಯದ ಒಂದು ಕುರಿಂಜಿ ಕವಿತೆ. ಈ ಕನ್ನಡಾನುವಾದ ಅನುವಾದವೆನಿಸದೇ ಕನ್ನಡದ ಸೊಗಸು ಮೇಳೈಸಿದ ರೀತಿಯಲ್ಲೂ, ಅದು ಮೂಡಿಸುವ ಪ್ರೇಮದ ಆರ್ತತೆಯಲ್ಲೂ ಸೊಗಸೇ ತುಂಬಿದೆ.
ಸಂಗಂ ಕಾವ್ಯದಿಂದ ಹಿಡಿದು ಈವರೆಗಿನ ಕೆಲವು ಭಾರತೀಯ ಕಾವ್ಯಗಳ ತಮ್ಮ ಕನ್ನಡಾನುವಾದಗಳನ್ನು ವಿಜಯರಾಘವನ್ ಸರ್ ಓದಲು ಕಳುಹಿಸಿದ್ದರು. ಕೆಲವು ಅನುವಾದ ಕವಿತೆಗಳನ್ನು ಓದುತ್ತಾ ಅದರಲ್ಲೂ ಮುಖ್ಯವಾಗಿ ಸಂಗಂ ಕವಿತೆಗಳ ಅನುವಾದ ಗಮನ ಸೆಳೆಯಿತು. ಪ್ರತಿ ಹನ್ನೆರಡು ವರ್ಷಗಳಿಗೆ ಒಮ್ಮೆ ಅರಳುವ ನೀಲ ಕುರಿಂಜಿ ಎಲ್ಲರ ಆಕರ್ಷಣೆಯ ಹೂ. ಈ ವರ್ಷ ನೀಲ ಕುರಿಂಜಿ ಅರಳಿ ಹಬ್ಬಿದ ಸುದ್ದಿಯಷ್ಟೇ ತಿಳಿದಿತ್ತು. ಅದನ್ನಷ್ಟೇ ಕೇಳಿದ್ದ ನನಗೆ ಮೊದಲ ಬಾರಿ ಓದಿದಾಗ ಕುರಿಂಜಿ ಕವಿತೆ ಎಂದರೇನು? ಪ್ರಶ್ನೆ ಕಾಡಿತ್ತು. ಈ ಬಗ್ಗೆ ವಿಜಯರಾಘವನ್ ಅವರಲ್ಲೆ ವಿಚಾರಿಸಿದಾಗ ಇದು ತಮಿಳು ಸಾಹಿತ್ಯದ ಸಂಗಂ ಕಾವ್ಯ ಪ್ರಕಾರದಲ್ಲಿ ಬರುವ ತಿಣೈ ಸಿದ್ದಾಂತ [ಭೂಪ್ರದೇಶ] ಕ್ಕೆ ಅನುಗುಣವಾಗಿ ಬಳಸಿದ ಕವಿತಾ ಪ್ರಕಾರ ಎಂದು ತಿಳಿಸಿದರು. ಆ ಬಗ್ಗೆ ಒಂದಿಷ್ಟು ತಿಳಿದುಕೊಳ್ಳುವ ಹಂಬಲ ಹುಟ್ಟಿ ಹುಡುಕಾಡಿದಾಗ ಸಿಕ್ಕ ಮಾಹಿತಿಯಲ್ಲಿ ಭಾರತೀಯ ಸಾಹಿತ್ಯದ ಭೂ ತತ್ವಕ್ಕೆ ಈ ಸಂಗಂ ಕಾವ್ಯಗಳೇ ಮೂಲವೆನೋ ಎನ್ನಿಸುವಷ್ಟು ನಿಸರ್ಗ ತಳಹದಿಯ ಜಾಯಮಾನ ಕಂಡೂ ಖುಷಿಯಾದೆ.
ಹಾಗೇ ತಮಿಳು ಸಂಸ್ಕøತಿಯಲ್ಲಿ ಕುರಿಂಜಿ ಎಂದರೆ ಬೆಟ್ಟ ಪ್ರದೇಶವೆಂದೂ, ಕುರಿಂಜಿ ಹೂವನ್ನು ಪ್ರೇಮದ ಹೂವೆಂದು ಪರಿಗಣಿಸುತ್ತಾರೆ. ಅಲ್ಲದೇ ಈ ಹೂವಿನ ಅರಳುವಿಕೆಯನ್ನೆ ಅಲ್ಲಿನ ಬುಡಕಟ್ಟು ಜನರು ತಮ್ಮ ವಯಸ್ಸನ್ನು ಅಳೆಯುವ ಮಾನದಂಡವನ್ನಾಗಿ ಬಳಸುತ್ತಿದ್ದರೆಂದು ಮದುಮಗ ಅಥವಾ ಮದುಮಗಳಿಗೆ ವಯಸ್ಸನ್ನು ಗುರುತಿಸುವಾಗ ಎರಡು ಕುರಿಂಜಿ ವಯಸ್ಸೆಂದು. ಇಲ್ಲವೇ ವ್ಯಕ್ತಿಯೊಬ್ಬ ತೀರಿಕೊಂಡರೆ ಆತನಿಗೆ ಐದು ಕುರಿಂಜಿ, ಅಥವಾ ಎಂಟು ಕುರಿಂಜಿ ವಯಸ್ಸಾಗಿತ್ತೆಂದೂ ಹೇಳುವ ರೂಢಿ ಇತ್ತಂತೆ.
ಈ ಮೇಲಿನ ಕವಿತೆಯನ್ನೆ ಸೋದಾಹರಣವಾಗಿ ಬಳಸುವುದಾರೆ ಇಲ್ಲಿ ಬೆಟ್ಟದ ನಾಡಿನ ಅಧಿಪತಿಯ ವರ್ಣನೆ ಅಮೋಘವಾಗಿದೆ. ಪ್ರಕೃತಿಯ ಭಾಗವಾದ ಬೆಟ್ಟ ಪ್ರದೇಶದ ನೈಸರ್ಗಿಕ ರೂಪಕಗಳನ್ನು ಭಾವತೀವ್ರತೆಯನ್ನು ಹೆಚ್ಚಿಸುವತ್ತ ಸಾಂದರ್ಭಿಕವಾಗಿ ಬಳಸಿದೆ. ನಮೆದು ಹೋಗುತ್ತಿರುವ ಅಧಿಪತಿಯ ಪ್ರಿಯತಮೆಯ ದೇಹ ಎಷ್ಟು ಕೃಶವಾಗಿದೆ ಎಂದರೆ ಅವಳ ಕೈಗಳಿಂದ ಬಳೆಗಳು ಜಾರಿ ಹೋಗುತ್ತಿವೆ. ಆ ಬಳೆಗಳನ್ನು ಸಮುದ್ರದ ಚಿಪ್ಪಿನಿಂದ ಮಾಡಿದ್ದಾಗಿದೆ. ಬೆಟ್ಟ, ಇಳಿಜಾರು, ನೀರಝರಿ, ಬೆಟ್ಟದ ಕೊರಕಲು, ಹಲಸಿನ ಮರ, ಜಲಪಾತ, ಸಮುದ್ರ, ಚಿಪ್ಪು, ಇಳಿಜಾರು ಇಲ್ಲೆಲ್ಲ ನೈಸರ್ಗಿಕ ಜಗತ್ತಿನ ಪರಿಕರಗಳೇ ಮಾತಾಡುತ್ತಿವೆ. ‘ ಅವಳು ನಿದ್ದೆಗೆಂದು ರೆಪ್ಪೆಗಳ ಮುಚ್ಚಿದ್ದೇ ಇಲ್ಲ’ ಎಂಬುದು ಪ್ರೇಮ ಎಂಬುದು ಎಷ್ಟು ಹೃದಯ ಹಿಂಡುವುದು ಎಂಬ ಭಾವವನ್ನು ಸ್ಪಷ್ಟಪಡಿಸುತ್ತದೆ. ಇದೊಂದು ‘ಅಕಂ’ ಕವಿತೆ. ಅಕಂ ಕವಿತೆಗಳು ಹೆಣ್ಣಿನ ಅನಿಸಿಕೆಗಳ ಪ್ರಕಟಿಸುವುದನ್ನು ಮುಖ್ಯವಾಗಿ ಪರಿಗಣಿಸುತ್ತವೆ. ಗಂಡಿನ ಮನೋಭಾವನೆಯನ್ನು ಹೆಚ್ಚಾಗಿ ವಿವರಿಸುವುದಿಲ್ಲ ಎಂಬ ವಿವರವಿದೆ.
ಆದರೆ ಪುರನಾನೂರು ಕವಿತೆಯ ಇನ್ನೊಂದು ಅನುವಾದ ನೋಡಿ. ಇದು ಕೂಡಾ ಹೃದ್ಯವೆನಿಸುವ ಸುಂದರವಾದ ಕುರಿಂಜಿ ಕವಿತೆ. ಇದು ಗಂಡಿನ ಅನುಭವವನ್ನು ತೆರೆದಿಟ್ಟಿದೆ.
ಪುರನಾನೂರು -202
“ಸುಂದರವಾದ ರೆಕ್ಕೆಗಳನ್ನು ಹೊಂದಿರುವ ಜೇನುನೊಣವೇ
ಜೇನು ಸಂಗ್ರಹಿಸುವುದು ನಿನ್ನ ಬದುಕು.
ನಾನು ಕೇಳಲು ಬಯಸುವುದನ್ನು ನನಗೆ ಹೇಳಬೇಡ,
ನೀನು ಕಂಡಿದ್ದನ್ನು ಹೇಳು,
ನನ್ನ ಪ್ರೇಮಿಯ ಕೇಶರಾಶಿಗಿಂತಲೂ
ಅತಿ ನವಿರು ಪರಿಮಳವನ್ನು ಹೊಂದಿರುವ
ಹೂವನ್ನು ನೀನು ಎಂದಾದರೂ ತಿಳಿದಿದ್ದಿಯಾ
ಅವಳ ಪರಿಪೂರ್ಣ ದಂತಪಂಕ್ತಿ
ನವಿಲ ನಡಿಗೆ
ಅವಳ ಹೃದಯ ತುಂಬಿದ ನಾನು
ಇವುಗಳನ್ನು.? …
ಈ ಆರ್ತ ಪ್ರೇಮದ ಅಭಿವ್ಯಕ್ತಿ ಅನುಪಮವಾಗಿದೆ. ಅನುವಾದವೂ ಅಷ್ಟೇ ಪರಿಪೂರ್ಣ ಭಾವವನ್ನು ತೆರೆದಿಟ್ಟಿದೆ.
ತಮಿಳು ಕವಿಗಳ ಕಾವ್ಯಗಳು ‘ಅಕಂ’ ಮತ್ತು ‘ಪುರಂ’ ಎಂಬ ಎರಡು ಪ್ರಬೇಧಗಳಲ್ಲಿ ರಚಿಸಲ್ಪಟ್ಟಿವೆ. ‘ಅಕಂ’ ಅಂದರೆ ಅಹಂ- ಒಳಗೆ- ಪ್ರಣಯ ಇತ್ಯಾದಿ ಅರ್ಥದಲ್ಲೂ ಮತ್ತು ‘ಪುರಂ’ ಅಂದರೆ ಪರ- ಹೊರಗೆ –ವೀರ ಈ ಅರ್ಥದಲ್ಲೂ ಬಳಸಿದೆ. ಹಾಗೇ ನೈಸರ್ಗಿಕ ವಸ್ತು ಮತ್ತು ಮನುಷ್ಯ ಇವರಿಬ್ಬರ ನಡುವಿನ ಹೋಲಿಕೆ ಮತ್ತು ಹೊಂದಾಣಿಕೆಯನ್ನು ಪರಸ್ಪರವಾಗಿಸುವ ಶ್ರೀಮಂತಿಕೆ ಇಲ್ಲಿ ಕಾಣಸಿಗುತ್ತದೆ. ಪ್ರಾಕೃತಿಕ ಮೂಲ ಸಾಮಗ್ರಿಗಳನ್ನು ಬಳಸಿಕೊಂಡು ಸೃಷ್ಟಿಯಲ್ಲಿಯ ಮಹಾನ್ ವಸ್ತುಗಳನ್ನು ವೈಭವೀಕರಿಸುವ ಜೊತೆಗೆ ಅದರಲ್ಲಿಯ ಸಣ್ಣ ಶ್ರೇಷ್ಟತೆಯನ್ನು ಗುರುತಿಸುವ ತಮಿಳರ ಭೂ ಸಿದ್ದ್ದಾಂತ [ ತಿಣೈ ಸಿದ್ದಾಂತ] ಹೆಚ್ಚು ವಿಶೇಷವಾದದ್ದು.
ಸಂಗಂ ಸಾಹಿತ್ಯದಲ್ಲಿ ಮನುಷ್ಯನ ಬದುಕಿನಲ್ಲಿ ಗಂಡು ಹೆಣ್ಣಿನ ಸಂಬಂಧಗಳ ಹಿನ್ನೆಲೆಯಲ್ಲಿ ಪ್ರೀತಿ ಪ್ರೇಮ ಪ್ರಣಯಗಳ ಕುರಿತಂತೆ ನಡೆಯುವ ಘಟನೆಗಳನ್ನು ಬೇರೆ ಬೇರೆ ವರ್ಗಗಳಲ್ಲಿ ಸಂಗ್ರಹಿಸಿ ಕೊಡುತ್ತಾರೆ. ಉದಾಹರಣೆಗೆ ಕುರಿಂಜಿ-[ ಬೆಟ್ಟ ಪ್ರದೇಶ- ಪ್ರೇಮಿಗಳ ಸಮಾಗಮ] ಪಾಳೈ – ಮರುಭೂಮಿ- ಬೇರ್ಪಡುವಿಕೆ, ಪಲಾಯನ] ಮುಲೈ- [ಅರಣ್ಯಪ್ರದೇಶ – ವಿರಹ] ಮರುದಂ- ಬಯಲು ಸೀಮೆ- ಪುನರ ಸಮಾಗಮದ ನಿರೀಕ್ಷೆ] ನೆಯ್ದಲ್- ಕಡಲು ತೀರ- ವಿರಹ ತಾಪ, ಕಳವು- ರಹಸ್ಯ ಪ್ರಣಯ ಕಾಲ, ಕರ್ಫುಕಾಲಂ- ವೈವಾಹಿಕ ಸಂಬಂಧದ ಪರಿಶುದ್ಧ ಜೀವನ ಇತ್ಯಾದಿಯಾಗಿ ಪರಿಗಣಿಸಲಾಗಿದೆ. ಇಲ್ಲೆಲ್ಲಾ ಹೆಚ್ಚಾಗಿ ಭೂಮಿಗೆ ಸಂಬಂಧ ಪಟ್ಟ ಪ್ರಾಕೃತಿಕ ಮೂಲ ಧಾತುಗಳನ್ನು ಬಳಸಿಕೊಂಡಿದ್ದು ತಿಣೈ ಸಿದ್ದಾಂತ ಪ್ರತಿಪಾದಿತವಾಗಿದೆ.
ಬಹು ಪ್ರಾಚೀನ ಇತಿಹಾಸ ಹೊಂದಿರುವ ಸಂಗಂ ಸಾಹಿತ್ಯ “ತೊಳ್ಕಾಪ್ಪಿಯಮ್” ಎಂಬ ಸಾಹಿತ್ಯ ಲಕ್ಷಣಗಳನ್ನು ಆಧರಿಸಿದೆ. ಇದೊಂದು ರೀತಿಯ ಭಾಷೆಯ ಆಟ ಎನ್ನುತ್ತಾರೆ. ಚೆಸ್ ಆಟದಲ್ಲಿ ಹೇಗೆ ಕಾಯಿಗಳು ಮನೆಯಿಂದ ಮನೆಗೆ ನೇರವಾಗಿ ಅಡ್ಡವಾಗಿ ಚಲಿಸುತ್ತಾ ಸಾಗುವವೋ ಹಾಗೆ ಹಲವು ರೀತಿಯಲ್ಲಿ ಭಾಷೆಯ ಆಟವನ್ನು ಪ್ರದರ್ಶಿಸುತ್ತವೆ ಎಂದು ಸಂಗಂ ಕಾವ್ಯ ಮೀಮಾಂಸೆಯ ಕುರಿತ ಬರಹವೊಂದರಲ್ಲಿ ಉಲ್ಲೇಖವಿದೆ. ಹಾಗೇ ಪ್ರಾಕೃತಿಕ ಸೌಂದರ್ಯವನ್ನೇ ಹೇತುವಾಗಿ ಸಂಗಂ ಕಾವ್ಯ ಪರಿಗಣಿಸುತ್ತದೆ.
ಕರುಂತೋಕ್ಕೈ 365
ಕಾಗೆಗೊಂದು ಆಸೆಯ ಆಹ್ವಾನ
ಒಂದೂ ಕಲೆಯಿರದ
ರೆಕ್ಕೆಗಳ ಪುಟ್ಟ ಕಾಗೆಯೆ
ನಿನಗೂ ನಿನ್ನ ಪ್ರಿಯ ಸಂಗಾತಿಗೂ
ತಾಜಾ ಮಾಂಸ ಮತ್ತು ಮಾಂಸದ
ಕೊಬ್ಬನ್ನು ತಿಂದುದಣಿವಷ್ಟು ನೀಡುತ್ತೇನೆ
ಬಂಗಾರದ ತಟ್ಟೆಯಲ್ಲಿಟ್ಟು,
ಬಾ, ಬಂದು ನಿನ್ನ
ಶುಭ ಶಕುನದ ಕೂಗು ಕೂಗು
ಆ ಭಲ್ಲೆ ಹಿಡಿದ ಯೋಧ – ಆ
ಬಿಸಿ ತಲೆಯ ಯುವಕನೊಂದಿಗೆ ಓಡಿಹೋದ
ಆ ನನ್ನ ಸುಂದರ ನೀಳಕೂದಲಿನ ಮಗಳು
ಮರಳಿ ಬರುವಂತೆ ಮನೆಗೆ.
[ತಾಯಿ ಕಾಗೆಗೆ ಹೇಳಿದ ಮಾತು]
ಐನಕುರುನೂರು ಎಂಬ ವಿಭಾಗದ ಕಿರುಗವಿತೆ. ಸಂಗಂ ಕಾವ್ಯದಲ್ಲಿ ಪದಿನೇಣ್ ಮೇಲ್ ಕಣಕ್ಕು [ಹದಿನೆಂಟು ಮೆಲ್ ಗಣಗಳು,] ಅದರಲ್ಲಿ ಎಟ್ಟುತೊಕೈ ಅಂದರೆ ಎಂಟು ಸಂಗ್ರಹಗಳು, ಪತ್ತುಪ್ಪಾಟ್ಟು ಅಂದರೆ ಹತ್ತು ಹಾಡುಗಳು ಇವೆ. ಸಂಗಂ ಕಾವ್ಯದಲ್ಲಿ ನಿರ್ದಿಷ್ಟವಾದ ತಿಣೈ[ ಭೂಪ್ರದೇಶ] ಮತ್ತು ತುರೈ [ ಸಂದರ್ಭ] ಗಳು ಒಂದ ಕವಿತೆ ಯಾವ ಪ್ರಕಾರಕ್ಕೆ ಸೇರುತ್ತದೆ ಎಂಬುದನ್ನು ಸೂಚಿಸುತ್ತದೆ.
ಈ ಮೇಲಿನ ಕವಿತೆ ಪಾಳೈ ಕವಿತೆ. ಪಾಲೈ ಎಂದರೆ ಬೇರ್ಪಡುವಿಕೆಯನ್ನು ಸೂಚಿಸುವುದು. ಇಲ್ಲಿಯೂ ಕೂಡಾ ಮನುಷ್ಯ ಜಗತ್ತು ಮತ್ತು ಪ್ರಾಕೃತಿಕ ಜಗತ್ತಿನ ಇತರ ಸಂಗತಿಗಳ ಜೊತೆಯೇ ಸಂವಾದ ಏರ್ಪಡುವಂತೆ ಕವಿತೆ ನುಡಿಯುತ್ತದೆ. ಅಪಶಕುನ ಎಂದು ಆಧುನಿಕರು ಕಾಣುವ ಕಾಗೇ ಇಲ್ಲಿ ಶುಭ ಶಕುನಕ್ಕೆ ರೂಪಕ. ಸರಳವಾದ ಆದರೆ ಅತೀ ಸೂಕ್ಷ್ಮವಾದ ಮಾತುಗಳು ಒಪ್ಪವಾಗಿ ಒಂದು ವಿಚಾರವನ್ನು ಚಿಕ್ಕದಾಗಿ ಚೊಕ್ಕದಾಗಿ ವಿವರಿಸಿವೆ.
ಸಂಗಂ ಸಾಹಿತ್ಯದಲ್ಲಿ ಆಡುಮಾತಿನ ಶೈಲಿಗೆ ಪ್ರಾಶಸ್ತ್ಯ ನೀಡಲಾಗಿದೆ. ಇದು ಜನಪದರ ಬದುಕಿನ ನೆಲೆಯಿಂದ ರೂಪುಗೊಂಡಿರುವದರಿಂದ ಅದರಲ್ಲೂ ಆದಿವಾಸಿ ಸಮುದಾಯದ ಮೂಲದಿಂದ ಹುಟ್ಟಿದ ಕಾರಣ ಆಡುಭಾಷೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಕೆಲವು ಕಟ್ಟಳೆಗಳನ್ನು ಕಾವ್ಯ ರಚನೆಯಲ್ಲಿ ಗಮನಾರ್ಹವಾಗಿ ಪಾಲಿಸಲಾಗುತ್ತದೆ. ಉದಾಹರಣೆಗೆ ಮಾತು ಎಂಬಲ್ಲಿ ನಾಯಕಿ ತನ್ನ ಪ್ರಣಯದ ಬಗ್ಗೆ ಸಖಿಯೊಂದಿಗೆ ಮಾತ್ರ ಮಾತನಾಡಬೇಕು. ಆ ಮಾತನ್ನು ಸಖಿ ತನ್ನ ತಾಯಿಯಾದ ಸಾಕುತಾಯಿಗೆ ತಿಳಿಸಬೇಕು. ಸಖಿಯ ಸಾಕುತಾಯಿ ನಾಯಕಿಯ ತಾಯಿಗೆ ಆ ಚಿಷಯ ತಿಳಿಸಬೇಕು. ನಾಯಕಿಯ ಸಖಿಯಾಗಲೀ, ಆಕೆಯ ಸಾಕುತಾಯಿಯಾಗಲೀ ಈ ವಿಷಯವನ್ನೂ ಬೇರೆ ಯಾರೊಂದಿಗೂ ಹೇಳುವಂತಿಲ್ಲ. ಇಲ್ಲ ನಿಸರ್ಗದ ಇತರ ಜೀವಿಗಳೊಂದಿಗೆ ಹಂಚಿಕೊಳ್ಳಬಹುದು. ಈ ಮೇಲಿನ ಕವಿತೆಯಲ್ಲಿ ತಾಯಿ ಮಾತನ್ನು ಕಾಗೆಯೊಂದಿಗೆ ಹಂಚಿಕೊಳ್ಳುತ್ತಾಳೆ.
ಸಂಗಂ ಕವಿತೆಗಳು ಮೌಖಿಕ ಪರಂಪರೆ ಹೊಂದಿದ್ದು, ಪಾಣಾರ್ ಎಂದರೆ ಹಾಡುಗಾರರು ಇವುಗಳನ್ನು ಹಾಡುತ್ತಿದ್ದರೆಂದು ತಿಳಿದು ಬಂದಿದೆ. ಇವರು ದೇವರು, ಅಗೋಚರ ಶಕ್ತಿ, ಧರ್ಮ,ಅರ್ಥ ಕಾಮ, ಇವ್ಯಾವುದರ ಕುರಿತೂ ಹಾಡುವುದಿಲ್ಲ. ಬದುಕನ್ನು ಪ್ರತಿಬಿಂಬಿಸುವ ಗಂಡು-ಹೆಣ್ಣುಗಳ ಸಂಬಂಧ, ನಿಸರ್ಗದ ಜೊತೆಗಿನ ಸಂಬಂಧ, ಸಮುದಾಯದ ಸಂಘರ್ಷ, ವಿಧಾನ ಇತ್ಯಾದಿಗಳ ಮೇಲೆ ಕೆಂದ್ರಿಕೃತವಾಗಿವೆ.
ಇಲ್ಲಿಯ ಕವಿತೆಗಳಲ್ಲಿ ಅನುವಾದದ ಬಗ್ಗೆ ಎರಡು ಮಾತಿಲ್ಲದಂತೆ ವಿಜಯರಾಘವನ್ ಸುಂದರವಾದ ಪದ ಸಮೂಹವನ್ನು ಕಟ್ಟಿಕೊಡುತಾರೆ . ಹೀಗೆ ಸದಾ ಒಂದಿಲ್ಲೊಂದು ಹೊಸತನವನ್ನು ತಮ್ಮ ಅನುವಾದಗಳಲ್ಲಿ ತಂದು ಕನ್ನಡದ ಜಾಯಮಾನಕ್ಕೆ ಯೋಗ್ಯವೆನಿಸುವ ರೀತಿಯಲ್ಲಿ ಆಗು ಮಾಡುವುದು ಅವರ ಅನುಭವದ ಫಲ. “ನನ್ನ ಸ್ಥಾನದ ಕುರಿತು ನನಗಾವ ಭ್ರಮೆಗಳೂ ಇಲ್ಲ. ಆದರೆ ನನ್ನ ಕಡೆಯಂಚು ಇನ್ನೊಬ್ಬರಿಗೆ ಕಾವ್ಯಯಾನದ ಆದಿಯ ಮೆಟ್ಟಿಲಾದರೆ ಸಾಕು” ಎನ್ನುತ್ತಾರೆ ಇವರು. ಅವರ ಈ ಅರಿವು ಹಿರಿಯ ತಲೆಗಳಿಗೆ ಇರಬೇಕಾದ ಘನತೆಗೆ ತಕ್ಕಂತಿದೆ. ಅನುವಾದ ಕ್ಷೇತ್ರದಲ್ಲಿ ಬಹಳಷ್ಟು ಕನ್ನಡಕ್ಕೆ ಕೊಟ್ಟಿರುವ ಅವರು ಯಾವ ನಿರ್ದಿಷ್ಟ ಕಟ್ಟುಪಾಡುಗಳನ್ನು ತಮ್ಮ ಕೃಷಿಯ ಯಾವ ಪ್ರಕಾರದಲ್ಲೂ ಹೇರಿಕೊಳ್ಳುವುದಿಲ್ಲ. ಕವಿಯಾಗಿ ಲೇಖಕನಾಗಿ ಸಾಹಿತ್ಯಲೋಕದ ಪಯಣದ ಕುರಿತು ವಿಜಯ ರಾಘವನ್ ಹೇಳಿಕೆ ಓದಿದ ಲೇಖಕರಿಗೆ ಆ ಮಾತು ಎಷ್ಟು ಪರಿಣಾಮಕಾರಿ ಎನಿಸಬಹುದು. ಬರೆವಣಿಗೆ ಒಂದು ವಿಸ್ಮಯ ಮಾತ್ರವಲ್ಲ, ಪ್ರಯತ್ನದ ಫಲಶ್ರುತಿಯೂ ಹೌದೆಂದು ಒಪ್ಪಿಕೊಳ್ಳುವಂತೆ ಇವರ ಪ್ರಯತ್ನಗಳಿವೆ. “ಅಪರಿಮಿತ ಕತ್ತಲೊಳಗೆ” ಎಂಬ ಸಮಗ್ರ ಕವನ ಸಂಕಲನ ಅನುಸಂಧಾನ – ಎಂಬ ಕವನ ಸಂಕಲನ, ಚಂದಿರನ ಕುವರಿಯರು- ಅನುವಾದಿತ ಕಥಾ ಸಂಕಲನ “ಪ್ರೀತಿ ಬೇಡುವ ಮಾತು” ಕಾದಂಬರಿ ಇತ್ಯಾದಿ ಕೃತಿಗಳು ಕನ್ನಡಕ್ಕೆ ಸಂದಿವೆ. ಅಲ್ಲದೇ ಅನುವಾದ ಕ್ಷೇತ್ರದಲ್ಲಿಯೂ ಅವರು ವಿಶಿಷ್ಟವಾಗಿ ಗುರುತಿಸಿಕೊಂಡವರು.. ನಿತ್ಯ ಒಂದೊಲ್ಲೊಂದು ಕವಿತೆ ಖಂಡಿತ ಅವರಿಂದ ಅನುವಾದ ಗೊಳ್ಳುತ್ತಲೇ ಇರಬೇಕು. ಕಾವ್ಯ ಕುರಿತು ಮಾತನಾಡತೊಡಗಿದರೆ ಅದೆಷ್ಟು ವಿಷಯಗಳು. ಆದರೆ ಯಾವುದನ್ನೂ ಅತಿ ರಂಜಕವಾಗಿ ಪ್ರದರ್ಶಿಸದ, ಆದರೆ ಕೃತಿಯಲ್ಲಿ ಮಾತ್ರ ವ್ಯಕ್ತವಾಗಬಲ್ಲ ವ್ಯಕ್ತಿತ್ವ ಅವರದು.
ಅಕ್ಟೋಬರ ತಿಂಗಳ 21, 22, 23 ರಂದು ಮೊತ್ತ ಮೊದಲ ಬಾರಿಗೆ ‘ಸಂಗಂ ವಿಶ್ವ ಕವಿ ಸಮ್ಮೇಳನ’ ವನ್ನು ಅರಿವು ಸಂಸ್ಥೆ ಬಳ್ಳಾರಿಯಲ್ಲಿ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಸಂಗಂ ಕಾವ್ಯ ಪರಂಪರೆ ಮತ್ತು ಸಂಗಂ ಕವಿತೆಗಳ ಅನುವಾದಿಸಿದ ವಿಜಯರಾಘವನ್ ನಿಜ್ಕಕೂ ಅಭಿನಂದನಾರ್ಹರು.
* ನಾಗರೇಖಾ ಗಾಂವಕರ
_______________________________________________
ಆರ್ ವಿಜಯರಾಘವನ್
ಕೋಲಾರ ಜಿಲ್ಲೆಯ ಮಾಲೂರಿನ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕಿನ ಚೀಫ್ ಮ್ಯಾನೇಜರ ಆಗಿ ನಿವೃತ್ತರಾಗಿರುವ ಆರ್. ವಿಜಯರಾಘವನ್ ಕವಿಗಳು, ಪ್ರಬಂಧಕಾರರು,ಕಾದಂಬರಿಕಾರರು,ನಾಟಕಕಾರರು,ವಿಮರ್ಶಕರು, ಆಗಿ ಗುರುತಿಸಕೊಂಡಿರುವರು. ಇನ್ನೂ ಅತಿ ಮುಖ್ಯವಾಗಿ ಅನುವಾದಕರಾಗಿ ಗುರುತರ ಕೆಲಸವನ್ನು ಇಂಗ್ಲಿಷನಿಂದ ಕನ್ನಡಕ್ಕೂ, ಕನ್ನಡದಿಂದ ಇಂಗ್ಲಿಷಗೂ ಮಾಡಿದ್ದಾರೆ.ಈಗಾಗಲೇ 30 ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಮುದ್ದಣ್ಣ, ಪುತಿನ, ಮತ್ತು ಮಾಸ್ತಿ ಇತ್ಯಾದಿ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
2 thoughts on “ಕುರಿಂಜಿ ಅರಳಿ ಹಬ್ಬಿದ ಸುದ್ದಿ- ಆರ್ ವಿಜಯರಾಘವನ್”
ಕುರಿಂಜಿ ಕವಿತೆ ಮನಸಿಗೆ ಮುದ ನೀಡಿತು. ಉತ್ತಮ ವಿಶೇಷ ಲೇಖನ. ಅಭಿನಂದನೆಗಳು ಲೇಖಕಿಗೆ
ಥಾಂಕ್ಯೂ ಸರ್. ಓದಿ ಅಭಿಪ್ರಾಯಿಸಿದ್ದಿರಿ.