ಸುವರ್ಣ ಯುಗ ಪ್ರವರ್ತಕ ‘ಜಯ ಸಿ. ಸುವರ್ಣ’

ಜಯ. ಸಿ. ಸುವರ್ಣರಂಥ  ವ್ಯಕ್ತಿ ಇನ್ನು ಬಿಲ್ಲವ ಸಮಾಜದಲ್ಲಿ ಹುಟ್ಟಲು ಸಾಧ್ಯವಿಲ್ಲ

  • ಜನಾರ್ದನ ಪೂಜಾರಿ (ಕೇಂದ್ರದ ಮಾಜಿ ಸಚಿವರು)

ಮುಂಬಯಿ ಬಿಲ್ಲವ ಸಮುದಾಯಕ್ಕೆ ಕೇಂದ್ರದ ಮಾಜಿ ಸಚಿವರಾದ ಜನಾರ್ದನ ಪೂಜಾರಿಯವರ ಕೊಡುಗೆ ಚಿರಸ್ಮರಣೀಯ. ಜಯಸುವರ್ಣರ ಮೇರು ಮಟ್ಟದ ಚಿಂತನೆಗೆ ಇಂಬು ನೀಡುತ್ತ ಅವುಗಳನ್ನು  ಮೂರ್ತರೂಪಕ್ಕೆ ತರುವಲ್ಲಿ  ಚೈತನ್ಯ ಶಕ್ತಿಯಂತೆ ನಿಂತವರು ಜನಾರ್ದನ ಪೂಜಾರಿಯವರು. ಅವರಿಬ್ಬರ ಆಪ್ತ ಸ್ನೇಹ ಸಂಬಂಧವನ್ನು ಕಂಡಿದ್ದ ಅನೇಕರು ‘ಕಲಿಯುಗದ ಕೋಟಿ ಚೆನ್ನಯರು! ಎಂದು ಮುಕ್ತವಾಗಿ ಪ್ರಶಂಸಿಸಿದ್ದುಂಟು. ಜಯ ಜನಾರ್ದನರು ಬಿಲ್ಲವ ಸಮುದಾಯದ ಏಳಿಗೆ ಕಲಶಪ್ರಾಯರಾದವರು ಎಂಬುದಕ್ಕೆ ಎರಡು ಮಾತಿಲ್ಲ. ಜಯ ಸುವರ್ಣರು ನಮ್ಮಿಂದ ದೂರವಾದರೂ ಜನಾರ್ದನ ಪೂಜಾರಿಯವರು ನಮ್ಮ ಜೊತೆಗಿದ್ದಾರೆ. ಅವರನ್ನು ಸಂದರ್ಶನ ಮಾಡಿದರೆ ನಮ್ಮ ಬಿಲ್ಲವ ಸಮಾಜದ ರೂವಾರಿ ಜಯ ಸುವರ್ಣರ ಕುರಿತು ಮಾಹಿತಿ ದೊರೆಯಬಹುದು, ಈ ಕೃತಿಯ ಮೌಲ್ಯ ದುಪ್ಪಟ್ಟಾಗುವುದೆಂದು ಹಲವರು ನೀಡಿದ ಆಪ್ತ ಸಲಹೆಯ ಮೇರೆಗೆ ಊರಿಗೆ ಹೋದ ಸಂದರ್ಭದಲ್ಲಿ ಶ್ರೀ ಪೂಜಾರಿಯವರನ್ನು ಭೇಟಿಯಾಗಲಿಚ್ಛಿಸಿದೆ.

 ಆದರೆ ಹೆಚ್ಚಿನವರು,‘ಪೂಜಾರಿಯವರೀಗ ಮಾತು ಕಡಿಮೆ ಮಾಡಿದ್ದಾರೆ.ನಿಮಗೆ ಬೇಕಾದ ಮಾಹಿತಿಗಳು ಸಿಗುವುದು ಕಷ್ಟ!’ಎಂದಿದ್ದರು. ಆದರೆ ಅವರನ್ನು ಭೇಟಿಯಾಗುವ ನಿರ್ಧಾರ ಮಾಡಿದ ಮೇಲೆ ಮಾಹಿತಿ ಸಿಗದಿದ್ದರೂ ಅವರ ಆಶೀರ್ವಾದವನ್ನಾದರೂ ಪಡೆಯೋಣವೆಂದುಕೊಂಡು ಹೊರಟು ಬಿ.ಸಿ.ರೋಡ್‍ನ ಅವರ ನಿವಾಸಕ್ಕೆ ಹೋದೆ. ಅಲ್ಲಿ ಎದುರುಗೊಂಡ ಸೌಮ್ಯಸ್ವಭಾವದ ಅವರ ಶ್ರೀಮತಿಯವರು ಕೂಡಾ,‘ಅವರೀಗ ಹೆಚ್ಚು ಮಾತನಾಡುವುದಿಲ್ಲ!’ ಅಂದುಬಿಟ್ಟರು. ಆಗಲೂ ತುಸು ನಿರಾಶೆಯಾಯಿತು.ಆದರೂ ಅವರ ಬರುವಿಕೆಗಾಗಿ ಕಾಯುತ್ತ ಕುಳಿತೆ.

ಜನಾರ್ದನ ಪೂಜಾರಿಯವರು ತಮ್ಮ ಬೆಳಗ್ಗಿನ ನಿತ್ಯಕರ್ಮ ಮತ್ತು ದೇವರಪೂಜೆಯನ್ನು ಮುಗಿಸಿ ಹೊರಗೆ ಬಂದವರು, ‘ಎಲ್ಲಿಂದ ಬಂದೆಯಮ್ಮಾ, ಏನು ವಿಷಯ?’ ಎಂದು ವಿಚಾರಿಸಿದರು. 

‘ಜಯಸುವರ್ಣರ ಬಗ್ಗೆ ಕೃತಿಯೊಂದನ್ನು ಬರೆಯುತ್ತಿದ್ದೇನೆ. ಅದಕ್ಕೆ ತಮ್ಮ ಆಶೀರ್ವಾದ ಬೇಕಿತ್ತು!’ ಅಂದೆ. ‘ಹಾಂ ಆರ್ಶೀವಾದ ಸದಾ ಇರುತ್ತದೆ!’ ಎಂದು ನಿಧಾನವಾಗಿ ಅಂದವರು ಕೆಲವುಕ್ಷಣಗಳ ಬಳಿಕ, ‘ಅವರ ಬಗ್ಗೆ ಏನಾದರೂ ಪ್ರಶ್ನೆಗಳಿದ್ದರೆ ಕೇಳಬಹುದು…?’ ಎಂದಾಗ ನನಗೆ ಆಶ್ಚರ್ಯ! ಅವರ ಕೆಲವು ನಿಕಟವರ್ತಿಗಳ ಮಾತುಗಳನ್ನು ಕೇಳಿದ್ದವಳು ಸಂದರ್ಶನಕ್ಕೆ ಪೂರ್ವತಯಾರಿ ಇಲ್ಲದೆಯೇ ಹೋಗಿದ್ದೆ. ಆದರೆ ತಕ್ಷಣ ಜಾಗ್ರತವಾದ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಮೂಡಲಾರಂಭಿಸಿದವು. ಹಾಗಾಗಿ ಅಂದು ಅವರೊಂದಿಗೆ ಕಳೆದ ಸುಮಾರು ಒಂದು ಗಂಟೆಯ ಅವಧಿಯಲ್ಲಿ ಪೂಜಾರಿಯವರು ಸುಮಾರು ಮೂವತ್ತ ಮೂರು ನಿಮಿಷಗಳ ಕಾಲ ಜಯ ಸಿ. ಸುವರ್ಣರ ಕುರಿತು ಮಾತನಾಡಿದರು. ಅವರು ತಮ್ಮ ಜೀವನದಲ್ಲಿ ಯಾವ ಯಾವ ವಿಷಯಗಳನ್ನೆಲ್ಲ ಮರೆತಿದ್ದರೋ,ಇಲ್ಲವೋ! ಆದರೆ ತಾವು ಜಯ ಸುವರ್ಣರೊಡನೆ ಒಡನಾಡಿದ ನೆನಪುಗಳು ಮಾತ್ರ ಅವರೊಳಗೆ ಹಚ್ಚಹಸಿರಾಗಿದ್ದುದನ್ನು ಕಂಡು ಸಂತೋಷಪಟ್ಟೆ. ಅಂದು ಸಂದರ್ಶನದ ಸಂದರ್ಭದಲ್ಲಿ ನಮ್ಮ ನಡುವೆ ನಡೆದ ಮಾತುಕತೆಯನ್ನು ಇದ್ದಂತೆಯೇ ದಾಖಲಿಸಿದ್ದೇನೆ.

ನಿಮ್ಮಿಬ್ಬರ ಪರಿಚಯ ಅತ್ಮೀಯತೆಯೆಡೆಗೆ ಹೇಗೆ ಹೊರಳಿತು?

ಅದ್ಯಾವ ಜನ್ಮದ ಋಣಾನುಬಂಧವೋ ಏನೋ..! ಜಯ ಸುವರ್ಣರನ್ನು ಮೊದಲ ಬಾರಿ ನೋಡಿದ ದಿನವೇ ನನ್ನ ಮನಸ್ಸನ್ನು ಸೆಳೆದಿದ್ದರು. ಅಂದು ನಾನು ವೇದಿಕೆಯಲ್ಲಿ ಕೂತಿದ್ದೆ. ಸುವರ್ಣರು ಪ್ರೇಕ್ಷಕರ ಸಾಲಿನಲ್ಲಿ ಕೂತಿದ್ದರು. ನನ್ನ ಗಮನ ಪದೇ ಪದೇ ಅವರತ್ತ ಹರಿಯುತ್ತಿತ್ತು. ಅವರ ಪ್ರಶಾಂತವಾದ ಮುಖ, ಮಂದಸ್ಮಿತವಾದ ನಗುವನ್ನು ಕಂಡೊಡನೆಯೇ ಅವರೋರ್ವ ವಿಶೇಷ ವ್ಯಕ್ತಿಯೆಂದು ಊಹಿಸಿದ್ದೆ. ಜಯ ಸುವರ್ಣರೂ ಅಂದು ನನ್ನನ್ನು ಎವೆಯಿಕ್ಕದೆ ನೋಡುತ್ತಲೇ ಇದ್ದರು. ಎಷ್ಟೋ ವರ್ಷಗಳ ನಂತರ ಸಂಧಿಸಿದವರಂತೆ, ಕಾರ್ಯಕ್ರಮ ಮುಗಿದ ಬಳಿಕ ಇಬ್ಬರೂ ಅತ್ಮೀಯವಾಗಿ ಮಾತನಾಡಿದೆವು. ಬಹಳ ಹಿಂದಿನಿಂದಲೂ ನಾವು ಆಪ್ತರಾಗಿದ್ದೇವೋ ಅನ್ನುವ ಅನುಭೂತಿ ಅಂದು ನನಗಾಗಿತ್ತು. ಅದೇ ಭಾವ ಜಯ ಸುವರ್ಣರ ಮುಖದಲ್ಲಿಯೂ ಗೋಚರಿಸುತ್ತಿತ್ತು.

ಹಿಂದೆ ನಾನು ಡೆಲ್ಲಿಗೆ ಹೋದರೆ ಮುಂಬಯಿ ಏರ್ಪೋರ್ಟಿಗೆ ಬಂದು ಅಲ್ಲಿಂದ ಊರಿಗೆ ಬರುತ್ತಿದ್ದೆ. ಆಗ ಮುಂಬೈಯ ಏರ್ಪೋರ್ಟಿಗೆ ಜಯ ಸುವರ್ಣರು ಬರುತ್ತಿದ್ದರು. ಆಗ ಅವರು ಬರಿಗೈಯಲ್ಲಿ ಬರುತ್ತಿರಲಿಲ್ಲ. ಅವರ ಹೊಟೇಲಿನಲ್ಲಿ ಮಾಡುತ್ತಿದ್ದಂಥ ತಿಂಡಿಗಳನ್ನು ತರುತ್ತಿದ್ದರು. ನಾನು ಯಾರೂ ಏನೂ ಕೊಟ್ಟರೂ ತೆಗೆದುಕೊಳ್ಳುವವನಲ್ಲ. ಆದರೆ ಪ್ರತಿಸಲವೂ ಅವರು ಬಾರೀ ಪ್ರೀತಿಯಿಂದ ತರುತ್ತಿದ್ದರು. ನಾನು ಮುಜುಗರದಿಂದ ‘ಯಾಕೆ ಇಷ್ಟೆಲ್ಲ ತೊಂದರೆ ತೆಗೆದುಕೊಳ್ಳುತ್ತೀರಿ. ಅದಕ್ಕಾಗಿಯೇ ನಾನು ಬರುವ ಸುದ್ದಿಯನ್ನು ನಿಮಗೆ ಕೊಡುವುದಿಲ್ಲ’ ಎಂದು ಹೇಳಿದರೂ ಕೇಳದೆ, ಅದನ್ನು ಕೊಟ್ಟು ಅಥವಾ ನನ್ನ ಪಕ್ಕದಲ್ಲಿ ಇಟ್ಟು ಹೋಗುತ್ತಿದ್ದರು. ಆ ಸಮಯದಲ್ಲಿ ನಾನು ಮಿನಿಸ್ಟರ್ ಆಗಿರುವುದರಿಂದ  ನಾನು ಎಲ್ಲಿ, ಯಾವಾಗ ಹೋಗುತ್ತೇನೆಂದು  ಬ್ಯಾಂಕಿನವರಿಗೆ ಕಸ್ಟಮ್ಸ್ ಎಕ್ಸೆಸ್‍ನವರಿಗೆ ತಿಳಿಯುತ್ತಿತ್ತು. ಆ ಡಿಪಾರ್ಟ್‍ಮೆಂಟನ್ನು ಕೆಲವು ಸಮಯ ನಾನೇ ನೋಡಿಕೊಳ್ಳುತ್ತಿದ್ದವನು. ಅವರು ಕೂಡ ಏರ್ಪೋರ್ಟಿಗೆ ಬರುತ್ತಿದ್ದರು. ಬಂದವರು ದೂರದಿಂದಲೇ ನನ್ನನ್ನು ನೋಡುತ್ತಿದ್ದರು. ಒಂದು ರೀತಿಯ ಗೌರವದ ಭಯದಿಂದ ಹತ್ತಿರ ಬರುತ್ತಿರಲಿಲ್ಲ. ಅವರೇ ನಾನು ಬರುವ ಮಾಹಿತಿಯನ್ನು ಜಯ ಸುವರ್ಣರಿಗೆ ಕೊಡುತ್ತಿದ್ದರು. (ಅವರೆಲ್ಲ ಜಯಣ್ಣನ ಹೊಟೇಲಿಗೆ ಹೋಗುತ್ತಿದ್ದವರು ಅವರನ್ನು ಸೇಟ್ ಸೇಟ್ ಅಂತ ಕರೆಯುತ್ತಿದ್ದವರು.) ಹೀಗೆ ಜಯ ಸುವರ್ಣರು ನನ್ನ ಮೇಲೆ ತೋರುತ್ತಿದ್ದ ಪ್ರೀತಿ, ಕಾಳಜಿ ಅತ್ಮೀಯತೆಯಿಂದ  ಹೆಚ್ಚು ಆಪ್ತರಾಗಲಾರಂಭಿಸಿದರು.

ಜಯ ಸುವರ್ಣರಲ್ಲಿ ನಾಯಕತ್ವದ ಗುಣವಿದೆ ಮತ್ತು ಅವರು ನಮ್ಮ ಸಮಾಜಕ್ಕೆ ಬೇಕಾದವರು. ಆದ್ದರಿಂದ ಅವರಿಂದ ಏನನ್ನಾದರೂ ಸಾಧಿಸಲು ಸಾಧ್ಯವಿದೆ ಎಂಬುದನ್ನು ತಾವು ಮೊದಲೇ ಮನಗಂಡಿರುವಿರಾ?

ಹೌದು. ನಿಜ, ಸುವರ್ಣರಲ್ಲಿ ನಾನು ಅಂಥ ಅನೇಕ ಗುಣಗಳನ್ನು ಕಂಡಿದ್ದೆ ಹಾಗೂ ಅದನ್ನು ಮೊದಲೇ ಅರ್ಥೈಸಿಕೊಂಡಿದ್ದೆ. ಹಾಗಾಗಿ ಮುಂದೆ ಹಿಂದುಮುಂದು ಯೋಚಿಸದೆಯೇ ಅವರಿಗೆ ಪ್ರೋತ್ಸಾಹ ಮತ್ತು ಸಹಕಾರವನ್ನು ನೀಡುತ್ತ ಬಂದೆ.

ತಾವು ಅವರಲ್ಲಿ ತುಂಬ ಇಷ್ಟ ಪಟ್ಟ ಸ್ವಭಾವಗಳು ಯಾವುವು?

ಮುಖ್ಯವಾಗಿ ಅವರು ಯಾರನ್ನೂ ದೂಷಣೆ ಮಾಡಿದ್ದನ್ನು ನಾನು ನೋಡಿಲ್ಲ. ಎಲ್ಲರನ್ನೂ ಆದರಿಸುತ್ತ ಪ್ರೀತಿಸುತ್ತಿದ್ದರು. ಹಾಗಾಗಿಯೇ ಅವರು ಮುಂಬೈಯಲ್ಲಿ ತುಂಬ ಪ್ರಸಿದ್ಧಿ ಪಡೆದರು. ಅವರಿಗೆ ಶತ್ರುಗಳೇ ಇರಲಿಲ್ಲ. ಇನ್ನೊಂದರ್ಥದಲ್ಲಿ ಹೇಳುವುದಾದರೆ ಅವರು ಅಜಾತಶತ್ರು. ಎಲ್ಲಿಯವರೆಗೆಂದರೆ ಯಾರು ಅವರನ್ನು ದೂಷಿಸುತ್ತಾರೋ ಅಂಥವರನ್ನು ಅವರು ಹೆಚ್ಚು ಪ್ರೀತಿಸುತ್ತಿದ್ದರು. ಅವರ ಆ ಗುಣವೇ ನನಗೆ ಮೆಚ್ಚುಗೆಯಾದುದು. ಹಾಗಾಗಿ ‘ಸೇಟ್… ಸೇಟ್…!’  ಎಂದು ಜನರು ಅವರ ಹಿಂದೆ ಬೀಳುತ್ತಿದ್ದರು. ಅಂಥ ವ್ಯಕ್ತಿಯು ಬಿಲ್ಲವ ಜಾತಿಯಲ್ಲಿ ಈವರೆಗೆ ಹುಟ್ಟಿದ್ದು ನನಗೆ ಗೊತ್ತಿಲ್ಲ. ಬಹುಶಃ ಇನ್ನು ಹುಟ್ಟಲೂ ಸಾಧ್ಯವಿಲ್ಲ. ಅವರು ಇಹಲೋಕ ತ್ಯಜಿಸಿದ್ದು ನನಗೆ ತುಂಬಲಾರದ ನಷ್ಟ! ಆ ಸುದ್ದಿಯನ್ನು ಕೇಳಿದ ಮೇಲೆ ಎರಡು ದಿನ ನಿದ್ರೆಯೇ ಬರಲಿಲ್ಲ. ನನ್ನಿಂದ ಅವರನ್ನು ಮರೆಯಲು ಸಾಧವೇ ಇಲ್ಲ. ಏಕೆಂದರೆ ಇನ್ನು ಬೇಕೆಂದರೂ ಅಂಥ ವ್ಯಕ್ತಿಯೊಬ್ಬ ನಮಗೆ ಸಿಗುವುದಿಲ್ಲ ಮತ್ತು ನಮ್ಮ ಸಮಾಜಕ್ಕೂ ಸಿಗುವುದಿಲ್ಲ. ನಾವೆಲ್ಲ ಜಯ ಸುವರ್ಣರನ್ನು ಕಳಕೊಂಡೆವು. ಎಲ್ಲರಿಗೂ ಸಹಾಯ ಮಾಡಿದ ವ್ಯಕ್ತಿ. ಅವರು ಹೋಗಿ ಆಯಿತು. ಬಿಲ್ಲವ ಸಮಾಜಕ್ಕೆ ಅಂಥ ವ್ಯಕ್ತಿ ಇನ್ನಿಲ್ಲ!” ಎಂದವರ ಕಣ್ಣಾಲಿಗಳು ತೇವಗೊಂಡವು. ಅದನ್ನು ಗಮನಿಸಿದವಳು ಕೆಳಗಿನ ಪ್ರಶ್ನೆಯನ್ನು ಕೇಳಿದೆ:

ಅಂದರೆ ತಾವು ಆ ನೋವಿನಿಂದ ಇನ್ನೂ ಹೊರಗೆ ಬಂದಿಲ್ಲವೇ…?

‘ಹೇಗೆ ಬರುವುದು ಹೇಳಿ,ಅವರು ದಿನಾಲು ಕನಸಿನಲ್ಲಿ ಬರುತ್ತಾರೆ!’ ಎಂದು ಸುಮ್ಮನಾದರು.

ಅವರನ್ನು ಮತ್ತೆ ಮಾತಿಗೆಳೆಯಲು… 

ಅವರು ತಮ್ಮೊಂದಿಗೆ ಒಡನಾಡಿದ ಕ್ಷಣಗಳೇ ಕನಸಿನಲ್ಲಿ ತೆರೆದುಕೊಳ್ಳುತ್ತವೆಯೇ, ಹೇಗೇ?

‘ಹೌದು…!’ ಎಂದು ತಲೆಯಲ್ಲಾಡಿಸಿದರು. ಆಗ ಅವರು ತಮ್ಮ ದುಃಖವನ್ನು ನುಂಗಿಕೊಳ್ಳಲು ಪ್ರಯತ್ನಿಸುತ್ತಿದ್ದರೂ ಕೆನ್ನೆಯ ಮೇಲೆ ನೀರಿಳಿಯುತ್ತಿತ್ತು. ಅದನ್ನು ಗಮನಿಸಿದ ನನ್ನ ಮನಸ್ಸು ಕೂಡಾ ಭಾರವಾಯಿತು. ಕೊನೆಗೆ ಅವರೇ ಮಾತಿಗಾರಂಭಿಸಿದರು, ‘ಈಗಲೂ ನನಗೆ ಕಣ್ಣೀರು ಬರುತ್ತಿದ್ದೆ. ಅವರು ಗತಿಸಿದಂದಿನಿಂದಲೂ ನನ್ನ ದುಃಖ ನಿಂತಿಲ್ಲ. ಅವರ ನೆನಪಲ್ಲಿ ದಿನಾ ಅಳುತ್ತೇನೆ. ಯಾಕೆಂದರೆ ಅವರ ಮತ್ತು ನನ್ನ ಬಾಂಧವ್ಯವು ಹಾಗಿತ್ತು. ಅದಕ್ಕೇ ಆಗ ಹೇಳಿದ್ದು, ಜಯ ಸಿ. ಸುವರ್ಣರಂಥ ವ್ಯಕ್ತಿತ್ವವು ಬಿಲ್ಲವ ಜಾತಿಯಲ್ಲಿ ಇನ್ನು ಹುಟ್ಟಲು ಸಾಧ್ಯವಿಲ್ಲ ಎಂದು!’

ಒಂದು ಬಿಲ್ಲವ ಯುಗವೇ ಕಳೆದು ಹೋದಂತಾಗಿದೆ. ಇನ್ನು ಮುಂದೆ ಹೇಗೋ ಏನೋ…? ಎನ್ನುವ ಆತಂಕ ಹಲವರಲ್ಲಿದೆ. ತಮಗೂ…?

ಹೌದು, ನಿಜ. ಭಾರತ್ ಬ್ಯಾಂಕಿಗೆ ಏನೂ ಆಗುವುದಿಲ್ಲ. ಅದರ ಶಾಖೆಗಳು ಊರಿನಲ್ಲಿಯೂ ಇವೆ.  ಹಾಗಾಗಿ ನಾನು ಹೋದರೂ ಆ ಬ್ಯಾಂಕ್‍ಗಳು ಉಳಿಯುತ್ತವೆ. ಆದರೆ… ಬೇರೇನೂ ಹೇಳಲಾರೆ…ನಾನಾಗಲೇ  ನಿಮಗೆ ಹೇಳಿದೆ, ಜಯ ಸಿ. ಸುವರ್ಣರು ಒಬ್ಬರೇ!

ಮುಂಬೈಯಲ್ಲಿ ಬಿಲ್ಲವ ಭವನದಿಂದ ಹಿಡಿದು ಭಾರತ್ ಬ್ಯಾಂಕಿನವರೆಗೆ ಅಷ್ಟೊಂದು ಶಾಖೆಗಳನ್ನು ವಿಸ್ತರಿಸುವಲ್ಲಿ ತಮ್ಮ ಕೊಡುಗೆಯೂ ಅಪಾರ. ಆ ಕುರಿತು ತಮ್ಮ ಅಭಿಪ್ರಾಯವೇನು?

ಮುಂಬೈಯಲ್ಲಿ ಬಲವಾದ ನಾಯಕತ್ವವನ್ನು ವಹಿಸಿಕೊಂಡು ನಮ್ಮ ಸಮಾಜವನ್ನು ಮುನ್ನಡೆಸುವಂಥ ವ್ಯಕ್ತಿಯೊಬ್ಬರು ನಮಗೆ ಬೇಕಿತ್ತು ಹಾಗೂ ಸುವರ್ಣರಿಂದ ಮಾತ್ರವೇ ಅಂಥ ನಾಯಕತ್ವವನ್ನು ಕೊಡಲಿಕ್ಕೆ ಸಾಧ್ಯ ಅನ್ನುವ ಅರಿವು ಕೂಡ ನನಗಿತ್ತು. ಅದೇ ದೃಷ್ಟಿಯಿಂದ ಅವರಿಗೆ ನಾನು ಆರಂಭದಿಂದಲೇ ಬೆಂಬಲ ನೀಡುತ್ತ ಬಂದೆ. ಅದಕ್ಕೆ ಪೂರಕವಾಗಿ ಅವರು ಕೂಡ ನಿರಂತರ ಶ್ರಮಿಸುತ್ತ ಹೋದರು. ಅದರಿಂದ ನಮ್ಮ ಸಮಾಜವು ಸದೃಢವಾಯಿತು. ಜೊತೆಗೆ ನಮ್ಮ ನಡುವಿನ ಬಾಂಧವ್ಯವೂ ಗಟ್ಟಿಯಾಯಿತು.

ಹಾಗಾಗಿಯೇ ಜಯಣ್ಣನ ಹೆಸರಿನೊಂದಿಗೆ ತಮ್ಮ ಹೆಸರು ಕೂಡ ಶಾಶ್ವತವಾಗಿ ಬೆಸೆದುಕೊಂಡಿದೆ ಅಲ್ಲವೇ? 

ಅವರು ಮತ್ತೆ ಮೌನವಾದರು. ಮರಳಿ ಕಣ್ಣಲ್ಲಿ ನೀರು ತುಂಬಿತು. ಆದರೆ ಕೆಲವುಕ್ಷಣಗಳ ನಂತರ,‘ನಾನು ಮೊದಲೇ ಹೇಳಿದೆ ನಿಮಗೆ’ ಎಂದು ಮಾತು ನಿಲ್ಲಿಸಿ, ‘ಇನ್ನೊಂದು ಜಯ ಸಿ. ಸುವರ್ಣ ಹುಟ್ಟಲಿಕ್ಕೆ ಸಾಧ್ಯವಿಲ್ಲ. ಅವರನ್ನು ಕಳೆದುಕೊಂದು ನಮಗೆ, ನಮ್ಮ ಸಮುದಾಯಕ್ಕೆ ಎಷ್ಟು ನಷ್ಟ ಆಗಿದೆಯೆಂದರೆ ಅದನ್ನು ತುಂಬಿಸಲು ಸಾಧ್ಯವಿಲ್ಲ.

ಜಯಣ್ಣ ಯಾವ ಕಾರ್ಯಕ್ರಮಕ್ಕೆ ಕರೆದರೂ ಮುಂಬೈಗೆ ಬರುತ್ತಿದ್ದಿರಿ. ತಾವು ರಾಜಕೀಯ ವ್ಯಕ್ತಿಯಾದುದರಿಂದ ಸಮಯವನ್ನು ಹೇಗೆ ಹೊಂದಿಸಿಕೊಳ್ಳುತ್ತಿದ್ದಿರಿ?

ಹೌದು, ನಾನು ಸದಾ ಬ್ಯುಸಿಯಾಗಿದ್ದವನು. ಆಗ ನಾನು ಮಂತ್ರಿಯಾಗಿದ್ದೆ. ಅದರ ನಡುವೆಯೂ ಅವರು ಕರೆದ ಕೂಡಲೇ ಧಾವಿಸುತ್ತಿದ್ದೆ. ಅವರ ಹೇಳಿಕೆ ಬಂದರೆ ಎಂಥ ತುರ್ತು ಕೆಲಸಕಾರ್ಯಗಳಿದ್ದರೂ ಬಿಡುವು ಮಾಡಿಕೊಳ್ಳುತ್ತಿದ್ದೆ. ಕಾರಣ ನನಗೆ ಅವರ ಒಡನಾಟ ಬಹಳ ಖುಷಿ ಕೊಡುತ್ತಿತ್ತು. ಜೊತೆಗೆ ಅವರಲ್ಲಿ ಅಪಾರ ಗೌರವವೂ ಇತ್ತು. 

ಅವರು  ಊರಿಗೆ ಬಂದಾಗ ತಮ್ಮನ್ನು ಭೇಟಿಯಾಗುತ್ತಿದ್ದರೇ?

ನಾನು ಯಾವತ್ತೂ ಅವರಿಗೆ ನನ್ನನ್ನು ಭೇಟಿಯಾಗಿ ಅಂತ ಹೇಳುತ್ತಿರಲಿಲ್ಲ. ಆದರೆ ಅವರು ಪ್ರತಿಸಲ ಊರಿಗೆ ಬಂದಾಗಲೂ ನನ್ನನ್ನು ಭೇಟಿಯಾಗಿಯೇ ಹಿಂದಿರುಗುತ್ತಿದ್ದರು. ನಮ್ಮ ಮನೆಗೆ ಬರುವಾಗ ಅವರ ಹೊಟೇಲಿನಲ್ಲಿ ನನಗೋಸ್ಕರ ಸ್ಪೆಷ್ಯಲ್ಲಾಗಿ ತಯಾರಿದಂಥ ತಿಂಡಿತಿನಿಸುಗಳನ್ನು ಹೊತ್ತು ತರುತ್ತಿದ್ದರು. ವಿಶೇಷವೆಂದರೆ ಅದರಲ್ಲಿ ನನಗಿಷ್ಟವಾದ ತಿಂಡಿಗಳೇ ಇರುತ್ತಿದ್ದವು. ಅವು ಬರೀ ತಿಂಡಿಗಳಾಗಿರಲಿಲ್ಲ. ಅವರ ಪ್ರೀತಿಯು ಅದರಲ್ಲಿ ತುಂಬಿರುತ್ತಿತ್ತು. 

ಸುವರ್ಣರು ತಮ್ಮಲ್ಲಿ ಕೊನೆಯ ಬಾರಿ ಯಾವಾಗ ಮಾತನಾಡಿದ್ದರು?

ಅದೆಲ್ಲ ಈಗ ನೆನಪಿಗೆ ಬರುತ್ತಿಲ್ಲ. ಆದರೆ ಅವರು ನಿರಂತರ ಸಂಪರ್ಕದಲ್ಲಿರುತ್ತ ನನ್ನ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರು. ಕೆಲವು ವಿಚಾರಗಳ ಕುರಿತು ಆಗಾಗ ನಾವು ಚರ್ಚೆಯನ್ನೂ ನಡೆಸುತ್ತಿದ್ದೆವು. ನೀವು ಶ್ರೀ ಗೋಕರ್ಣ ದೇವಸ್ಥಾನಕ್ಕೆ ಒಮ್ಮೆ ಹೋಗಿ. ಅಲ್ಲಿ ಅವರ ಹೆಸರಿನ ಸಭಾಂಗಣವಿದೆ. ಅಲ್ಲಿ ನಿಮಗೆ ಅವರ ಕುರಿತು ಬಹಳಷ್ಟು ಮಾಹಿತಿಗಳು ಸಿಗುತ್ತವೆ.

ಅವರ ಮಕ್ಕಳು ತಮ್ಮ ಒಡನಾಟದಲ್ಲಿದ್ದಾರೆಯೇ?

ಹೌದು. ಅವರ ಹಿರಿಯ ಮಗ ಸೂರ್ಯ ಊರಿಗೆ ಬಂದಾಗಲೆಲ್ಲ ನನ್ನನ್ನು ಭೇಟಿಯಾಗಿ ಹೋಗುತ್ತಾನೆ’ ಎಂದು ಪೂಜಾರಿಯವರೆಂದಾಗ ಅವರ ಪತ್ನಿ,‘ಇವರಿಗೆ ಅವರ ಮಕ್ಕಳೆಂದರೂ ಬಹಳ ಇಷ್ಟ!’ ಎಂದರು.

ಬಿಲ್ಲವ ಭವನ ನಿರ್ಮಾಣವಾದಾಗ ಜಯಣ್ಣನ ಶ್ರಮದ ಸಾರ್ಥಕತೆ ಮಾತ್ರವಲ್ಲ ತಮ್ಮ ಶ್ರಮಕ್ಕೂ ಸಿಕ್ಕ ಪ್ರತಿಫಲವೂ ಹೌದು. ಇದರ ಬಗ್ಗೆ ಏನು ಹೇಳುತ್ತೀರಿ?

ಹೌದು. ನಿಜ ಹೇಳಬೇಕೆಂದರೆ, ಆವತ್ತು ನಾನಲ್ಲದಿದ್ದರೆ ಬಿಲ್ಲವ ಭವನ ನಿರ್ಮಾಣದ ಕಾರ್ಯ ಅಷ್ಟು ಸಾರಾಗವಾಗಿ ನೆರವೇರುತ್ತಿರಲಿಲ್ಲ. ಆದರೆ ಅದರಲ್ಲಿ ನನ್ನದೆಷ್ಟು ಪ್ರಯತ್ನಗಳಿದ್ದವೋ ಅದಕ್ಕಿಂತ ದುಪ್ಪಟ್ಟು ಪರಿಶ್ರಮ ಸುವರ್ಣರದ್ದೂ ಇದೆ. ಆ ಭರವಸೆಯಿಂದಲೇ ನಾನು ಬಿಲ್ಲವ ಭವನ ಆಗಲೇಬೇಕು ಎಂದು ಸರ್ವ ಪ್ರಯತ್ನವನ್ನೂ ಮಾಡಿದ್ದೆ. ಆದ್ದರಿಂದ ಅದು ಮುಂಬಯಿ ಸಾಂತಕ್ರೂಜ್‍ನ ಪರಿಸರದಲ್ಲಿ ರೈಲು, ಬಸ್ಸು ಮತ್ತು ಕಾರಿನಲ್ಲಿ ಪ್ರಯಾಣಿಸುವಾಗಲೂ  ಎದ್ದು ಕಾಣಿಸುತ್ತದೆ. ಅದರ ಕಲಾಕೃತಿಯು ಶ್ರೀ ಕುದ್ರೋಳಿ ದೇವಸ್ಥಾನದಲ್ಲಿಯೂ ಇದೆ. ನೀವು ಹೋದಾಗ ನೋಡಿ.

ಸುವರ್ಣರ ಪ್ರತಿಯೊಂದು ಸಹಕಾರ ಕುದ್ರೋಳಿ ದೇವಸ್ಥಾನಕ್ಕೂ ಇತ್ತೇ?

‘ಹ್ಞೂಂ!’ ಎಂದು ತಲೆಯಲ್ಲಾಡಿಸಿದರು. ಬಳಿಕ ಸ್ವಲ್ಪ ತಡವರಿಸಿ, ‘ಗೋಕರ್ಣ ದೇವಸ್ಥಾನಕ್ಕೂ ಅವರ ಕೊಡುಗೆ ಅಪಾರ.  ಜಯ ಸಿ. ಸುವರ್ಣರ ಹೆಸರಿನ ಸಭಾಂಗಣವೂ ಇದೆ. ಒಮ್ಮೆ ಹೋಗಿ ಆ ಸಭಾಂಗಣವನ್ನೂ ನೋಡಿ ಬನ್ನಿ. ಅವರ ಬಗ್ಗೆ ಇನ್ನಷ್ಟು ಮಾಹಿತಿ ಬೇಕಿದ್ದರೆ ಮಂಗಳೂರಿನ ಅವರ ಸ್ನೇಹಿತ ಹರಿಶ್ಚಂದ್ರ ಪೂಜಾರಿ ಅವರನ್ನು ಭೇಟಿಯಾಗಿ…!’ ಎಂದರು.

ದಸರಾ ಸಂದರ್ಭದಲ್ಲಿ ವಿಶೇಷ ಸೇವೆ ಸಲ್ಲಿಸಿದವರಿಗೆ ನಡೆಯುವ ಸನ್ಮಾನ ಕಾರ್ಯಕ್ರಮದಲ್ಲಿ ತಾವು ಮೊದಲಿಗೆ ಜಯಣ್ಣನಿಗೇ ಸನ್ಮಾನ ಮಾಡಲು ಹೇಳುತ್ತಿದ್ದಿರಂತೆ. ಕಾರಣವೇನು?

ಹೌದು ಮೊದಲ ಗೌರವ ಅವರಿಗೇ ಸಲ್ಲಬೇಕು. ಏಕೆಂದರೆ, ಅವರೆಂದರೆ ನನ್ನ ಪ್ರಾಣ ಅಂತ ತಿಳಿದುಕೊಂಡವನು ನಾನು!ಅವರು ನನ್ನ ಪ್ರಾಣವೇ ಆಗಿದ್ದರು.

ತಾವಿಬ್ಬರೂ ಜಯ ಜನಾರ್ದನರೆಂದೇ ಎಲ್ಲೆಡೆ ಪ್ರಸಿದ್ಧರಾಗಿದ್ದೀರಿ. ತಮ್ಮ ಈ ಸಾಂಗತ್ಯವು ಬಿಲ್ಲವ ಸಮುದಾಯವನ್ನು ತಳಮಟ್ಟದಿಂದ ಮೇಲೆತ್ತಿದೆ. ಈ ಮೂಲಕ ಇತರ ಸಮುದಾಯಗಳಿಗೂ ಅದು ಸರಿಸಮಾನವಾಗಿ ನಿಲ್ಲುವಂತಾಗಿದೆ. ಈ ಮಾತು ಎಲ್ಲ ಕಾಲಕ್ಕೂ ಸತ್ಯವೇ! ಇಲ್ಲದಿದ್ದಲ್ಲಿ ಅದು ತನ್ನ ಹಿಂದಿನ ಹೀನಾಯ ಸ್ಥಿತಿಯಲ್ಲಿಯೇ ಉಳಿಯುತ್ತಿತ್ತೋ ಏನೋ…? 

ನಾನು ಯಾರಿಗೂ ಹೇಳದಂಥ ಮಾತೊಂದನ್ನು ಇಂದು ನಿಮ್ಮಲ್ಲಿ ಹಂಚಿಕೊಳ್ಳುತ್ತೇನೆ. ನಿನ್ನೆ ಧರ್ಮಸ್ಥಳದ ಹೆಗ್ಡೆಯವರು ಮೊಗವೀರರ ಕಾರ್ಯಕ್ರಮವೊಂದಕ್ಕೆ ಹೋದರು. ಅಲ್ಲಿಅವರಿಂದ ಪ್ರಸಾದ ಸ್ವೀಕರಿಸಿದರು. ಅವರು ಧರ್ಮಸ್ಥಳದ ಧರ್ಮಾಧಿಕಾರಿ. ಅಂಥವರೊಬ್ಬರು ಒಂದು ಹಿಂದುಳಿದ ವರ್ಗದ ಕಾರ್ಯಕ್ರಮಕ್ಕೆ ಹೋಗಿ ಪ್ರಸಾದ ಸ್ವೀಕರಿಸಿದರೆಂದರೆ ಅದೊಂದು ದಾಖಲೆ ಅಥವಾ ಮಾದರಿ. ನಿನ್ನೆ ನಾನು ಜೀವನದಲ್ಲಿ ತುಂಬ ಖುಷಿಯಾದ ದಿನ. ಧರ್ಮಸ್ಥಳದ ಹೆಗ್ಡೆಯವರೆಂದರೆ ನನಗೆ ತುಂಬ ಗೌರವ. ಇಂಥ ಒಬ್ಬ ವ್ಯಕ್ತಿ ಇಡೀ ಜಗತ್ತಿಗೆ ಪರಿಚಿತರಾದವರು. ಅವರಿಗೆ ಪ್ರಚಾರದ ಅಗತ್ಯವಿರಲಿಲ್ಲ. ಆದರೂ ಅವರು ನಿನ್ನೆ ಆ ಕಾರ್ಯಕ್ರಮಕ್ಕೆ ಹೋಗಿ ತುಂಬ ಚೆನ್ನಾಗಿ ನಡೆಸಿಕೊಟ್ಟರು. ನಾನು ಸಾಯುವ ಮೊದಲು ಈ ಒಂದು ಕೆಲಸವನ್ನು ಧರ್ಮಸ್ಥಳದ ಹೆಗ್ಡೆಯವರು ಮಾಡಿದ ದೃಶ್ಯವನ್ನು ಮಾಧ್ಯಮದಲ್ಲಿ ನೋಡಿ ಕಣ್ಣೀರು ಬಂತು!’ಎಂದು ಹೇಳುವಾಗ ಅವರ ಮುಖದಲ್ಲಿ ತೃಪ್ತಭಾವ ಕಾಣುತ್ತಿತ್ತು.

ತಮ್ಮ ಮನಸ್ಸಲ್ಲಿ ಮೇಲ್ವರ್ಗ,ಕೆಳವರ್ಗಗಳೆಂಬ ಬೇಧಭಾವವಿಲ್ಲದೆ ಎಲ್ಲರೂ ಸರಿಸಮಾನರಾಗಿ ಬಾಳಬೇಕೆಂಬ ಆಸೆಯಿತ್ತೇ?

ಒಂದು ಮಾತು ಹೇಳುತ್ತೇನೆ, ಹಿಂದುಳಿದ ವರ್ಗ ಎಂಬುದೇ ಇಲ್ಲ. ದೇವರು ಅಂಥ ಯಾವ ಅಸಂಬದ್ಧವನ್ನೂ ಸೃಷ್ಟಿಸಲಿಲ್ಲ. ಅವನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಎಲ್ಲರೂ ದೇವರ ಮಕ್ಕಳು! ಇವು ಬ್ರಹ್ಮ ಶ್ರೀ ನಾರಾಯಣ ಗುರುಗಳ ಮಾತುಗಳು. ನಿನ್ನೆಯ ದಿನ ಧರ್ಮಸ್ಥಳದ ಹೆಗ್ಡೆಯವರು ಅದನ್ನು ಜಗತ್ತಿಗೇ ತೋರಿಸಿಕೊಟ್ಟರು. ಇದನ್ನೇ ನಾನು ನಿನ್ನೆ ಪ್ರೆಸ್‍ಮೀಟ್‍ನಲ್ಲೂ ಮಾತನಾಡಿ ಹೆಗ್ಡೆಯವರ ಕಾರ್ಯವನ್ನು ಪ್ರಶಂಸಿದೆ.

ಜಯ ಸುವರ್ಣರು ಕೇವಲ ಬಿಲ್ಲವ ಸಮುದಾಯಕ್ಕೆ ಸೀಮಿತವಾಗಿಲ್ಲ. ಮುಂಬೈಯ ಇತರ ಸಮುದಾಯದವರು ಕೂಡ ಅವರನ್ನು ತುಂಬು ಗೌರವದಿಂದ ಕಾಣುತ್ತಾರೆ. ಆದರೆ, ‘ಜಯಣ್ಣ ಹೋದ ‹ಮೇಲೆ ನಮಗೆಲ್ಲ ಭಾರತ್ ಬ್ಯಾಂಕಿನ ಮೇಲೆ ಭರವಸೆ ಬರುತ್ತಿಲ್ಲ. ಬಿಲ್ಲವ ಅಸೋಸಿಯೇಶನ್ನಿಗೆ ಹೋಗಲು ಮನಸ್ಸಾಗುತ್ತಿಲ್ಲ!’ ಇಂಥ ಅನೇಕರ ಹೇಳಿಕೆಗಳು ನನ್ನ ಸಂದರ್ಶನ ಸಂದರ್ಭದಲ್ಲಿ ಲಭಿಸಿವೆ. ಇದರ ಕುರಿತು ತಮ್ಮ ಅಭಿಪ್ರಾಯವೇನು?

ಸತ್ಯದ ಮಾತುಗಳವು. ಅವರೆಂದರೆ ಎಲ್ಲರಿಗೂ ಭರವಸೆ. ಜಯ ಸಿ. ಸುವರ್ಣರ ಹೆಸರನ್ನು ಬ್ರಹನ್ಮುಂಬಯಿ ಮಹಾನಗರಪಾಲಿಕೆಯು ಗೋರೆಗಾಂವ್ ಸ್ಟೇಷನ್ನಿನ ಪಕ್ಕದ ಮುಖ್ಯ ರಸ್ತೆಗೆ ಇಟ್ಟಿದೆ. ಅವರ ಮಾರ್ಗಕ್ಕೆ ಹೆಸರಿಡುವಾಗ ಮುಂಡಾಸು ಹಾಕಿದ ಫೋಟೊ ಹಾಕಿದ್ದಾರೆ. ಅದು ಕೂಡ ನೋಡಲು ಚೆನ್ನಾಗಿದೆ. ಸ್ಟೇಷನ್ ಸಮೀಪದ ರಸ್ತೆಗೆ ಅವರ ಹೆಸರನ್ನಿಡಬೇಕಾದರೆ ಅವರ ವ್ಯಕ್ತಿತ್ವ ಎಂಥದ್ದು ಎಂಬುದನ್ನು ನಾವೇ ನೀವೇ ಊಹಿಸಬೇಕು. ಹಾಗಾಗಿ ಜನರಿಗೆ ಇಂಥ ಅತಂಕ ಮೂಡುವುದರಲ್ಲಿ ವಿಶೇಷವಿಲ್ಲ. 

ತಮ್ಮ ನಡುವೆ ಮರೆಯಲಾಗದಂಥ ನೆನಪುಗಳಿವೆಯೇ?

ಅವರ ಮೇರು ಮಟ್ಟದ ವ್ಯಕ್ತಿತ್ವ. ನಮ್ಮ ಜಾತಿಯಲ್ಲಿ ಇಂಥ ವ್ಯಕ್ತಿ ಹುಟ್ಟಿಲ್ಲ ನಾನು ಹೇಳಿದೆ ನಿಮಗೆ. ಅವರನ್ನು ಕಳೆದುಕೊಂಡೆವು ನಾವು. ಮತ್ತೊಮ್ಮೆ ಅವರು ಹುಟ್ಟಿ ಬರಲಿ.  ಪ್ರತಿ ದಿನವೂ ನೆನೆಯುತ್ತೇನೆ ಎಂದರು.

ಜಯ ಸುವರ್ಣರ ಕುರಿತು ಒಂದೊಂದು ಮಾತನಾಡುವಾಗಲೂ ಅವರ ಕಂಠ ಗದ್ಗದಿತವಾಗುತ್ತ ಮಾತು ಹೊರಡದಷ್ಟು ಭಾವುಕರಾಗುತ್ತಿದ್ದರು. ಸುವರ್ಣರಂಥ ಚೇತನವನ್ನು ಕಳೆದುಕೊಂಡ ನೋವು ಅವರಲ್ಲಿ ಇನ್ನೂ ಮಾಸಿಲ್ಲ. ಬಹುಶಃ ಆನಂತರ ಅವರು ಅದೇ ಕೊರಗಿನಿಂದ ಮೌನಿಯಾದರೇನೋ!

ಅಂದು ಜನಾರ್ದನ ಪೂಜಾರಿ ಅವರಿಗೆ ನನ್ನ ಕೆಲವು ಕೃತಿಗಳನ್ನು ನೀಡಿ, ಆಶೀರ್ವಾದವನ್ನು ಪಡೆದು ಹಿಂದಿರುಗಿದೆ. ನಾನು ಅವರ ಮನೆಯ ಗೇಟು ದಾಟಿ ರಸ್ತೆಗಿಳಿಯುವವರೆಗೂ ಅವರು ಹಸನ್ಮುಖರಾಗಿ ನನ್ನತ್ತ ನೋಡುತ್ತ ಕೈಬೀಸುತ್ತಿದ್ದರು. ಆ ಚಿತ್ರಣ ಇಂದಿಗೂ ಆಗಾಗ ನನ್ನ ಕಣ್ಮುಂದೆ ಸುಳಿಯುತ್ತದೆ.

ಅನಿತಾ ಪಿ. ಪೂಜಾರಿ ತಾಕೊಡೆ


ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ಸುವರ್ಣ ಯುಗ ಪ್ರವರ್ತಕ ‘ಜಯ ಸಿ. ಸುವರ್ಣ’”

  1. Vishwanath karnad

    Hridyawada soumya bhasheyalli obba apoorva samaja karyakartana kurita lekhana. .tumba chennagide.
    Janardhan poojary jotegina matu kate aatmiyavagide.
    Anita deserves compliments…

  2. ಸಮಾಜಕ್ಕೆ ಜಯಜನಾರ್ದನ ಜೋಡಿಯ ಕೊಡುಗೆ ಅಪಾರ. ಈ ಬಗ್ಗೆ ಎರಡು ಮಾತಿಲ್ಲ. ಜಯ ಸುವರ್ಣ ರವರ ಬಗ್ಗೆ ನೀವು ಬರೆಯುತ್ತಿರುವ ಪುಸ್ತಕದ ಬಿಡುಗಡೆಗಯನ್ನು ಕಾಯುತ್ತಿದ್ದೇನೆ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter