ಛೇ… ಇದೆಂತಹ ಜೀವನ. ಹೇಗೆ ಬೆಳಗಾಗುತ್ತದೆಯೋ. ಹೇಗೆ ರಾತ್ರಿಯಾಗುತ್ತದೆಯೋ ಒಂದೂ ಗೊತ್ತಾಗುವುದಿಲ್ಲ. ನೋವಿರುವ ಕಾಲನ್ನು ಎಳೆದೆಳೆಯುತ್ತಾ ಪುಟ್ಟ ಅಡುಗೆಮನೆಯಲ್ಲಿ ಇಬ್ಬರಿಗಾಗುವಷ್ಟು ಅಡುಗೆ ಮಾಡುವವರೆಗೆ ‘ಸಾಕಪ್ಪಾ ಸಾಕು’… ಎಂದು ಉಸಿರರ್ಗ ರೆಯುವಂತಾಗುತ್ತದೆ. ನೀವೋ ಸದಾ ಪೇಪರಿನಲ್ಲೋ,ಮೊಬೈಲ್ ನಲ್ಲೋ ಮುಖವಿಟ್ಟು ಕುಳಿತುಕೊಳ್ಳುತ್ತೀರಿ. ಮಾತಿಲ್ಲ, ಕಥೆಯಿಲ್ಲ. ಎಲ್ಲಿಗೂ ಹೋಗುವುದಿಲ್ಲ ಬರುವುದಿಲ್ಲ…. ಎಂದು ಅಂಬುಜಾ ತಟವಟನೇ ಮಾತಾಡಿದಳು.
ಮೊಬೈಲ ನ ಸ್ಕ್ರೀನ್ ಆಪ್ ಮಾಡಿದ ಭಾಸ್ಕರ
‘ನಿನಗೆ ಎಲ್ಲಿಗೂ ಹೋಗಬೇಡ ಎಂದು ನಾನೇನಾದರೂ ಹೇಳಿದ್ದೇನಾ?’
‘ಇಲ್ಲ, ನೀವು ಹೇಳಿಲ್ಲ, ಆದರೆ ನನಗೆ ಮನೆಗೆಲಸ ಮುಗಿಯುವುದಿಲ್ಲ’
‘ಕೆಲಸ ಮುಗಿಸದಿದ್ದರೂ ನಾನಂತೂ ಬೈಯುವುದಿಲ್ಲವಲ್ಲಾ’
ಬೈಯದಿದ್ದರೇನಾಯ್ತು, ಸಮಯಕ್ಕೆ ಸರಿಯಾಗಿ ಅಡುಗೆ ಮುಗಿಸಿ ಊಟಕ್ಕೆ ಹಾಕದಿದ್ದರೆ ಹೊಟ್ಟೆ ಉಬ್ಬರಿಸಿ ಚಟಪಡಿಸುತ್ತೀರಿ. ನನಗೆ ಅಪರಾಧೀ ಪ್ರಜ್ಞೆ ಕಾಡುತ್ತದೆ’
‘ ನಿನ್ನಂಥಹ ಹೆಂಡತಿ ಇರುವುದರಿಂದಾಗಿಯೇ ನನಗೆ ಬದುಕು ಸಲೀಸು! ಎರಡೂ ಹೊತ್ತಿಗಾಗುವಷ್ಟು ಮಧ್ಯಾಹ್ನ ವೇ ಅಡುಗೆ ಮಾಡಿಬಿಡು, ಸಂಜೆ ದಿನಾ ವಾಕಿಂಗಿಗೆ ಹೋಗಿ ಬಾ, ಬೇಜಾರು ಕಳೆಯುತ್ತದೆ’
‘ಸಂಜೆ ವಾಕಿಂಗಿಗೆ ಹೋಗೋದು ಹ್ಯಾಗೆ? ನಿಮಗೆ ಆರೂವರೆಗೊಮ್ಮೆ ಚಹಾ ಮಾಡಿಕೊಡಲು ನಾನಿರಲೇಬೇಕಲ್ಲ’
‘ಹೌದೌದು. ಅದನ್ನು ಕೊಟ್ಟು ನಂತರವೇ ಹೋಗು’
‘ಅಷ್ಟಾಗುವಷ್ಟರಲ್ಲಿ ಕತ್ತಲಾಗಿಬಿಡುತ್ತದೆ , ಸರಗಳ್ಳರ ಭಯ! ಮೊನ್ನೆ ಮೊನ್ನೆ ಎದಿರಿಗಿನ ಮನೆ ಗಿರಿಜಾ ವಾಕಿಂಗಿಗೆ ಹಾಕಿಕೊಂಡು ಹೋಗಿದ್ದ ಐದು ತೊಲೆ ಕರಿಮಣಿ ಸರವನ್ನು ಕಳ್ಳರು ಕತ್ತರಿಸಿಕೊಂಡು ಹೋಗಿದ್ದಾರಂತೆ. ಇನ್ನೂ ಸಿಕ್ಕಿಲ್ವಂತೆ’..
‘ಹೌದಂತೆ ಅವರ ಗಂಡ ರಾಮಮೂರ್ತಿ ಸಿಕ್ಕಿದಾಗ ಹೇಳಿದ. ಬಂಗಾರದ ರೇಟು ಎಷ್ಟೊಂದಾಗಿದೆ ಏನ ಕಥೆ. ಕಾಳಜಿ ಮಾಡಬೇಕು. ನೀನು ವಾಕಿಂಗಿಗೆ ಹೋಗುವಾಗ ಕರಿಮಣಿ ಸರ ತೆಗೆದಿಟ್ಟು ಹೋಗಬಹುದಲ್ಲ’
‘ಹೋಗ ಹೋಗ್ರಿ ಮೂರೂ ಸಂಜೆ ಮನೆಯಿಂದ ಬರಿಗೊರಳಲ್ಲಿ ಹೋದರೆ ನಿಮಗೆ ಶ್ರೇಯಸ್ಸಲ್ಲ’
‘ಏನು ಶ್ರೇಯಸ್ಸೋ ಏನೋ! ಒನ್ ಗ್ರಾಮ್ ಗೋಲ್ಡಿನದೊಂದು ಕರಿಮಣಿ ಸರ ತೆಗೆದುಕೊಂಡು ವಾಕಿಂಗ್ ಹೋಗುವಾಗ ಹಾಕಿಕೊಂಡು ಹೋಗಬಹುದಲ್ಲ’…
‘ಅದು ಒನ್ ಗ್ರಾಂ ಗೋಲ್ಡೆಂಬುದು ನಮಗೆ ಗೊತ್ತಿರುತ್ತದೆ ಅಷ್ಟೇ. ಕಳ್ಳರಿಗೆ ಗೊತ್ತಿರುವುದಿಲ್ಲವಲ್ಲಾ. ಸರ ಕತ್ತರಿಸುವ ಭರದಲ್ಲಿ ನೂಕಿ ನಾನು ಬಿದ್ದು ಬಿಟ್ಟರೆ?!’
‘ಸರಿ ಸರಿ… ಮನೆಯ ಟೆರೆಸ್ ಮೇಲೆ ವಾಕಿಂಗ್ ಮಾಡಿಬಿಡಬಹುದಲ್ಲ’
‘ಮೆಟ್ಟಿಲು ಹತ್ತಿಳಿಯುವುದೇ ದೊಡ್ಡ ಕಷ್ಟ, ಆಲೆಗಾಣಕ್ಕೆ ಕಟ್ಟಿದ ಕೋಣದಂತೆ ಅಲ್ಲೇ ತಿರುಗುವುದೆಂತ ಸೊಗಸು!’ ಹೋಗಲಿ ವಾಕಿಂಗ್ ಬೇಡ ಬಿಡು. ದಿನಕ್ಕೊಂದು ತಾಸು ಕಸೂತಿ ಮಾಡಬಹುದಲ್ಲ’
‘ನೀವೋ ನಿಮ್ಮ ಸಲಹೆಯೋ! ಸೂಜಿ ಪೋಣಿಸಲಿಕ್ಕೆ ಕಷ್ಟಾರೀ. ಮಕ್ಕಳೋ ಮೊಮ್ಮಕ್ಕಳೋ ಜೊತೆಗಿದ್ರೆ ಅವರು ಸೂಜಿ ಪೋಣಿಸಿಕೊಡುತ್ತಿದ್ರು. ಎಲ್ಲಾರೂ ಬೆಂಗಳೂರು ಪಾಲಾದ್ರು..’
‘ಧ್ಯಾನಾ ಮಾಡು, ಪ್ರಾಣಾಯಾಮ ಮಾಡು’
‘ಕೆಲಸಾ ಮಾಡಿ ಸುಸ್ತಾಗಿರ್ತದೆ. ಧ್ಯಾನ ಮಾಡಲಿಕ್ಕೆ ಕೂತ್ರೆ ತೂಕಡಿಕೆ ಬಂದ ಹಾಗಾಗ್ತದೆ’ ‘ನಿಮ್ಮಮ್ಮನ ಹತ್ರ ಕಲಿತ ಹಾಡು ಹೇಳಬಹುದಲ್ಲಾ’
‘ಎಲ್ಲಾ ಹಾಡೂ ಅರ್ಧ ಮರ್ಧ ಮರೆತಂಗೆ ಆಗಿದೆ, ದ್ವನಿ ನಡುಗ್ತದೆ’
‘ನಾಲ್ಕಾರು ಜನ ಗೆಳತಿಯರ ಜೊತೆ ಸ್ನೇಹ ಬೆಳೆಸಿಕೊಂಡು ಮಾತಾಡು’…
‘ನಾ ಏನು ಸ್ಕೂಲ್ ಹುಡುಗಿನಾ ಗೆಳತಿಯರನ್ನು ಹುಡುಕಿಕೊಳ್ಳಲಿಕ್ಕೆ ಊರು ಹೋಗು ಕಾಡು ಬಾ ಎನ್ನೋ ವಯಸ್ಸಾಯ್ತು!’
‘ ಯಾಕೋ ಹಸಿವಾದ ಹಾಗಿದೆ ಮೆಣಸಿನಕಾಯಿ ಬೋಂಡಾ ಮಾಡತೀಯೇನು?’ ‘ಬೇಡಾರಿ. ಖಾರದ ಬೊಂಡಾ ತಿಂದ್ರೆ ನಿಮಗೆ ಹೊಟ್ಟೆಗೆ ತಡಿಯೋದಿಲ್ಲ.’
‘ಹೋಗಲಿ ಬೋಂಡಾ ಬೇಡ ಗಿರಮಿಟ್ಟು, ಚಾ:… ನಿನ್ನೆ ಬೇಕರಿಯಿಂದ ತಂದ
ಚಿಪ್ಸ ಕೊಡತೀನಿ, ತಿನ್ತಾ ತಿನ್ತಾ ಪೇಪರ ಓದ್ರೀ... ಮುಂದಿನ ಇಲೆಕ್ಷನ್ನಿನಲ್ಲಿ ಯಾವ ಪಾರ್ಟಿ ಬರುತ್ತದೆ ಎಂದು ದೋಸ್ತರ ಬಳಿ ಚರ್ಚೆ ಮಾಡಲಿಕ್ಕೆ ವಿಷಯಾ ತಿಳಕೊಂಡಿರಬೇಕಾಗ್ತದೆ!
- ಮಾಲತಿ ಹೆಗಡೆ
2 thoughts on “ಸಂವಾದ”
ಹೆಂಡತಿಯರ ಕಷ್ಟ ಚೆನ್ನಾಗಿದೆ. ನಗು ಬರತ್ತೆ. ಬಹುತೇಕ ಎಲ್ಲರ ಮನೆಯಲ್ಲೂ ಇಂತಹುದೊಂದು ಮಾತುಕತೆ ನಡೆಯಬಹುದು. ಮಾಲತಿಯವರ ಸರಳ, ಸುಲಲಿತ ಬರೆಹಗಾರಿಕೆ ಖುಷಿ ಕೊಡುವಂತಹುದು
ಧನ್ಯವಾದಗಳು ಜಯಂತಿ ಮೇಡಂ