‘ಮೌನದೊಳಗೊಂದು ಅಂತರ್ಧಾನವು ಸುತ್ತಮುತ್ತಲಿನ ತಲ್ಲಣಗಳಿಂದ ಹೊಮ್ಮಿದ ಗಟ್ಟಿ ಧ್ವನಿ.
ಕನ್ನಡ ಸಾಹಿತ್ಯ ಲೋಕದ ಪ್ರಮುಖ ಬರಹಗಾರರಲ್ಲಿ ಒಬ್ಬರಾದ ನಾಗರೇಖಾ ಗಾಂವಕರ್ ಅವರು ಈಗಾಗಲೇ ನಾಡಿನಾದ್ಯಂತ ಕವಯತ್ರಿಯಾಗಿ ಅನುವಾದಕಿಯಾಗಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯವರಾದ ನಾಗರೇಖಾರವರು ಪ್ರಸ್ತುತ ದಾಂಡೇಲಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿರಂತರ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಅವರು
ಸಣ್ಣಕತೆಗಳ ಪ್ರಕಾರದಲ್ಲಿ ಬರೆಯುತ್ತಾ ಇದೀಗ ಕಥಾ ಸಂಕಲನವನ್ನೂ ಕೂಡ ಪ್ರಕಟಿಸಿ ಒಬ್ಬ ಸಶಕ್ತ ಕತೆಗಾರ್ತಿಯಾಗಿ ಹೆಜ್ಜೆಯಿಟ್ಟಿದ್ದಾರೆ.
ಅವರ ಮೊದಲ ಕಥಾ ಸಂಕಲನ “ಮೌನದೊಳಗೊಂದು ಅಂತರ್ಧಾನ” ಈ ಸಂಕಲನಕ್ಕೆ ಮುನ್ನುಡಿ ಬರೆದ ಕನ್ನಡದ ಖ್ಯಾತ ಕಥೆಗಾರರಾದ ಶ್ರೀಧರ ಬಳಗಾರರವರು ಮುನ್ನುಡಿಯಲ್ಲಿ “ನಾಗರೇಖಾ ಕಥಾ ಭಾಷೆಯನ್ನು ಒಲಿಸಿಕೊಂಡಿದ್ದಾರೆ. ಅವರಿಗೆ ಅವರದೇ ಆದ ಅನನ್ಯ ಕಥನ ಪ್ರಪಂಚವಿದೆ. ಸೈದ್ಧಾಂತಿಕ ಓದನ್ನು ಭಾರಗೊಳಿಸದೆ, ಜನಪ್ರಿಯ ವಿವಾದಗಳ ಪ್ರಲೋಭನೆಯ ಅಪಾಯಕ್ಕೆ ಗುರಿಯಾಗದೆ ತನ್ನೊಳಗೆ ಕಥೆಯಾಗಲು ಹವಣಿಸುತ್ತಿರುವ ಮುಗ್ಧ ಪ್ರಪಂಚದ ಅನುಭವ ಪಾವಿತ್ರ್ಯವನ್ನು ಜತನದಿಂದ ಕಾಪಾಡಿಕೊಂಡು ಅವರು ಇನ್ನಷ್ಟು ಒಳ್ಳೆಯ ಕಥೆಗಳನ್ನು ಕನ್ನಡಕ್ಕೆ ನೀಡಬಲ್ಲರು ಎಂಬ ನಂಬಿಕೆಯನ್ನು ಈ ಸಂಕಲನ ಗಟ್ಟಿಗೊಳಿಸುತ್ತದೆ….. “ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಈ ಸಂಕಲನದಲ್ಲಿ ವಿಭಿನ್ನ ಕಥಾವಸ್ತುಗಳನ್ನೊಳಗೊಂಡ ಒಟ್ಟು ಹನ್ನೆರಡು ಕಥೆಗಳಿವೆ. ಯಾವ ಕತೆಯೂ ಕೂಡ ಓದುಗರಿಗೆ ನೀರಸವಾಗಲಾರವು.
ಮೊದಲನೆಯ ಕಥೆ “‘ಜರಿ ಲಂಗ ಮತ್ತು ಸಣ್ಣು’ ಈ ಕತೆಯನ್ನು ಓದಿದಾಗ ಕಥೆ ಇನ್ನೂ ಸ್ವಲ್ಪ ದೀರ್ಘವಾಗಿ ಇರಬೇಕಿತ್ತು ಎಂದೆನಿಸುವಂತೆ ಅಷ್ಟೊಂದು ಪರಿಣಾಮಕಾರಿಯಾಗಿ ಹಿಡಿದಿಡುವ ಕಥೆ ಇದಾಗಿದೆ. ಈ ಕತೆಯಲ್ಲಿ ಹೆಣ್ಣು ಮಕ್ಕಳ ತೊಳಲಾಟ ನೋವು ಆಕೆಯ ಪರಿಸ್ಥಿತಿ ಕಂಡು ಮನ ಮಿಡಿಯಿತು. ಬಡತನವೆಂಬುದು ಹೇಗೆ ಕಾಡುತ್ತದೆ ಅನ್ನೋದನ್ನ ಕತೆಯಲ್ಲಿ ನಾವು ಕಾಣಬಹುದು. ಬಡತನ ,ಪ್ರೇಮ ,ಆಸೆ ,ತಪ್ಪು ಸರಿ ಈ ಅಂಶವನ್ನು ಬಹಳ ಸೂಕ್ಷ್ಮವಾಗಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ
‘ದೊಂಗ ‘
ದೊಂಗನ ಪಾತ್ರದ ಕತೆಯನ್ನು ಓದಿದಾಗ ಯಾಕೋ ಆತನ ಬಗ್ಗೆ ಮರುಕ ಹುಟ್ಟಿತು ಆತನ ಹೆಂಡತಿ ಮಾದೇವಿಯ ವರ್ತನೆ ಸ್ವಾರ್ಥ ಸಾಧನೆ ಕತೆಯಲ್ಲಿ ಹೆಚ್ಚು ಕಾಡುವುದು. ಬದುಕು ಎಂಬುದು ದೊಡ್ಡದು ಅದನ್ನು ಅರಿತು ಬೆರೆತು ನಡೆಯಬೇಕು ದುಡುಕಿ ತಪ್ಪು ಮಾಡಬಾರದೆಂಬುದನ್ನು ಈ ಕಥೆಯು ಒತ್ತಿಹೇಳುವಂತಿವೆ. ಗಂಡ ಹೆಂಡಿರಿಬ್ಬರ ಹೊಂದಾಣಿಕೆ ಹೇಗಿರಬೇಕು ಸಹಬಾಳ್ವೆ ಪ್ರೀತಿ ಹೀಗೆ ಹಲವಾರು ಬದುಕಿನ ಸಂಗತಿಗಳ ಕುರಿತು ಕಥೆಯು ಬೆಳಕನ್ನು ಚೆಲ್ಲುತ್ತದೆ. ಕೌಟುಂಬಿಕ ಮೌಲ್ಯಗಳನ್ನು ಜಾಗೃತಗೊಳಿಸುತ್ತದೆ.
‘ಮೌನದೊಳಗೊoದು ಅಂತರ್ಧಾನ’ ಈ ಕಥೆಯಲ್ಲಿ ಗಂಡಹೆಂಡಿರ ಹೊಂದಾಣಿಕೆ ಹೆಣ್ಣಿನ ತೊಳಲಾಟ ಮೌನ ಪ್ರೀತಿ ಮುಂತಾದ ಅಂಶಗಳ ಬಗ್ಗೆ ಸೂಕ್ಷ್ಮವಾಗಿ ಹೆಣೆಯಲಾಗಿದೆ. ” ನಾನೇನು ಬಿಕನಾಸಿಯಲ್ಲ, ನಮ್ಮಪ್ಪ ಬೇಕಾದಷ್ಟು ಕೊಟ್ಟೆ ನಿಮ್ಮ ಖರೀದಿ ಮಾಡಿದ್ದು ” ಎಂಬ ಮಾತುಗಳು ಹಿಂದಿನಿಂದಲೂ ಸಾಮಾಜಿಕ ಪಿಡುಗಾಗಿ ಕಾಡುತ್ತಿರುವ ವರದಕ್ಷಿಣೆಯ ಬಗ್ಗೆ ಜಾಗೃತಿಯೊಂದಿಗೆ ತೆಗೆದುಕೊಳ್ಳುವವರ ಮುಖಕ್ಕೆ ಹೊಡೆದಂತಿದೆ.
‘ಒಂದೇ ಗುಂಡಿನ ಸದ್ದು’
ಈ ಕಥೆಯಲ್ಲಿ ಲಿಂಗಭೇದ , ಹೆಣ್ಣಿನ ಸಂಕಟ ವ್ಯಥೆ ಕಥೆಯೇ ಇದೆ ಪ್ರಮುಖವಾಗುತ್ತದೆ . ಪರಿಮಳ ಎಂಬ ಹೆಣ್ಣು ಮಗಳ ಕುರಿತು ತುಂಬಾ ಕನಿಕರ ಮೂಡಿಸುವ ಮೂಲಕ ಸ್ಮೃತಿ ಪಟಲದಲ್ಲಿ ಹೆಚ್ಚುಕಾಲ ಉಳಿಯುತ್ತದೆ.
‘ಪ್ರೀತಿಯ ಹೊಸ ಬಾಷ್ಯ’
ಈ ಕಥೆಯಲ್ಲಿ ಗುಲಾಬಿ ಹೂ ನೀಡುವ ಹುಡುಗಿ ತೋರುವ ಪ್ರೀತಿಯ ಭಾವಿಸುವ ಪರಿಯಲಿ ವ್ಯತ್ಯಾಸ ಹಾಗೂ ಆ ಹುಡುಗಿಯ ಹೊಸ ರೀತಿಯ ಪ್ರೀತಿಯ ಭಾಷೆ ಬೆರಗು ಮೂಡಿಸುತ್ತಿದೆ.
“ಬಿಳಿಬಟ್ಟೆಯೂ..ಪಾದರಕ್ಷೆಯೂ..”
ಈ ಕಥೆಯಲ್ಲಿ ಒಬ್ಬ ತಂದೆಯ ತೊಳಲಾಟ, ಮಗನ ಮಮಕಾರ, ಜಾತೀಯತೆ, ಸಂಪ್ರದಾಯ ಮುಂತಾದ ಸಂಗತಿಗಳು ಕೇಂದ್ರವಾಗಿವೆ.
“ಕಾಳಿಯ ಬಗಲಲ್ಲಿ”
ಈ ಕಥೆಯು ಪರಿಸರ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ. ಮಾನವನ ಸ್ವಾರ್ಥ ಸಾಧನೆಗಾಗಿ ಇಂದು ಪರಿಸರ ಹೇಗೆ ನಾಶವಾಗುತ್ತಿದೆ ,ಜೀವಸಂಕುಲ ಹೇಗೆಲ್ಲ ನಲುಗುತ್ತಿವೆ ಎಂಬುದನ್ನು ಈ ಕಥೆಯು ಬಹಳಷ್ಟು ಸೂಕ್ಷ್ಮವಾಗಿ ಕಣ್ಣು ತೆರೆಸುತ್ತದೆ.
“ಸ್ಟಾಕ್ ಹೋಮ್ ಸಿಂಡ್ರೋಮ್”
ಇದೊಂದು ಬಹಳ ವಿಶಿಷ್ಟವಾದ ಕತೆ ದೌರ್ಜನ್ಯಕ್ಕೆ ಒಳಗಾದರೂ ಕೂಡ ಪ್ರೀತಿ ಪ್ರೇಮದಿಂದ ಸಂಸಾರ ತೂಗುವಂತಹ ಹೆಣ್ಣು ಮಕ್ಕಳ ಬದ್ದತೆ. ಶ್ರೇಷ್ಠತೆಯನ್ನು ಮೆರೆಸುತ್ತದೆ.
ಹೆಣ್ಣುಮಕ್ಕಳ ಸಹನೆ , ಪ್ರೀತಿ ಹೊಂದಾಣಿಕೆಯ ಗುಣಗಳನ್ನು ತಿಳಿಸಿಕೊಡುವ ಮೂಲಕ ಅವರ ಬಗೆಗಿನ ಗೌರವ ಹೆಚ್ಚಿಸುವಂತೆ ಮಾಡುವುದು.
ಈ ಮೇಲಿನ ಕಥೆಗಳಷ್ಟೆ ಅಲ್ಲದೆ ಈ ಸಂಕಲನದಲ್ಲಿರುವ ಇನ್ನುಳಿದ ಕಥೆಗಳಾದ
ಹೆದ್ದಾರಿಯ ಅಡ್ಡ ಹಾದಿ ಗುಂಟ ,
ಕುಸಿದ ಬದುಕಿನ ಸುತ್ತ ,
ನೊಣವೊಂದರ ಮೊರೆತ ,
ಜೀವನ್ಮರಣ ಸಂತೆಯಲೊಂದು ದಿನ ಇವೆಲ್ಲವೂ ಕೂಡ ವರ್ತಮಾನದ ತಲ್ಲಣಗಳಿಗೆ ಮಿಡಿಯುವ ಕಥೆಗಳಾಗಿದ್ದು ಬಹಳಷ್ಟು ಅರ್ಥಪೂರ್ಣವಾಗಿ ಮೂಡಿ ಬಂದಿರುತ್ತವೆ.
ನಾಗರೇಖಾ ಗಾಂವಕರವರ ಕಥೆಗಳಲ್ಲಿ ಕಂಡುಬಂದಿದ್ದು ಏನೆಂದರೆ ನಮ್ಮ ಸುತ್ತಲೂ ಸಾಮಾನ್ಯವಾಗಿ ಕಾಣುವಂತಹ ಮಹಿಳೆಯರ ನೋವಿನ ಧ್ವನಿ , ಪರಿಸರ ಜಾಗೃತಿ, ಮರೆಯಾಗುತ್ತಿರುವ ಮಾನವೀಯ ಮೌಲ್ಯಗಳು, ಮುರಿದು ಹೋಗುವ ಸಂಬಂಧಗಳ ಮತ್ತೆ ಕಟ್ಟಲು ಮಿಡಿಯುವ ಗಟ್ಟಿ ಧ್ವನಿ. ಇಲ್ಲಿನ ಕಥೆಗಳು ಓದುಗರ ಮನದ ತಿಳಿಯನು ಕಲಕದೆ ಇರಲಾರವು. ಪ್ರತಿಯೊಂದು ಕತೆಯಲ್ಲೂ ಪಾತ್ರಗಳ ಮೂಲಕ ಕಟ್ಟಿಕೊಡುವ ಅನುಭವ ಗಾಢವಾಗಿ ಪ್ರಭಾವಿಸುವುದು ಹಾಗೂ ಅದು ಅನನ್ಯ. ನೆಲಮೂಲದ ಭಾಷೆ ಆಡುನುಡಿಗಳ ಬಳಕೆ, ಅರಿವಿಲ್ಲದೆ ಪಡೆದುಕೊಳ್ಳುವ ಕಥಾ ತಿರುವು ಬಹಳ ಸೂಕ್ಷ್ಮತೆಯಿಂದ ಹರವಿದ ವಿವರಣೆ ಓದುಗರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತದೆ.
ಈ ಸಂಕಲನದಲ್ಲಿ ಸರಳ ಭಾಷೆ , ವಿಶಿಷ್ಟ ನಿರೂಪಣೆ ಶೈಲಿ , ಸಹಜ ಸಂಭಾಷಣೆ ಎಲ್ಲವೂ ಕೂಡ ಸಶಕ್ತವಾಗಿವಾಗಿ ಮೂಡಿಬಂದಿದೆ.
ನಾಗರೇಖಾ ಅವರು ಮತ್ತಷ್ಟು ವಿಭಿನ್ನ ವಸ್ತುವಿನ ಕಥೆಗಳೊಂದಿಗೆ ಓದುಗರಿಗೆ ಮುಖಾಮುಖಿಯಾಗಲಿ ಎಂಬ ಸದಾಶಯದೊಂದಿಗೆ ಹೃತ್ಪೂರ್ವಕವಾಗಿ ಅಭಿನಂದಿಸುವೆ.
–ಶಿವಾನಂದ ಉಳ್ಳಿಗೇರಿ
ಉಡಿಕೇರಿ
1 thought on “ಮೌನದೊಳಗೊಂದು ಅಂತರ್ಧಾನ”
ಒಳ್ಳೆಯ ವಿಶ್ಲೇಷಣೆ, ಅಭಿನಂದನೆಗಳು ನಾಗರೇಖಾ ಅವರಿಗೆ.