ಮಿಂಚಂಚೆ

ದೇವರಿಗೊಂದು ಮಿಂಚಂಚೆ ಬರೆದೆ 
ವೈಯಕ್ತಿಕ ಭೇಟಿಗಾಗಿ ವಿನಂತಿಸಿದೆ
ಮಾಡಿದ ತಪ್ಪನು ತಿಳಿಸಲು ಬೇಡಿದೆ
ಶಿಕ್ಷೆಗೆ ಮುಂಚೆ ವಿವರಣೆ ಕೇಳಿದೆ

ಉತ್ತರ ಬರಲಿಲ್ಲ ಅದಕೆ ಅದಕೆಂದೆ
ದೂರವಾಣಿ ತುರ್ತು ಕರೆಮಾಡಿದೆ
ವ್ಯಸ್ತ, ವ್ಯಸ್ತವಾಗಿದೆ ಎಂದಿತು ಧ್ವನಿ
ಪತ್ರಬರೆದೆ,ಕೇಳುವವರಿಲ್ಲ ನನ್ನ ದನಿ

ಅವನೂ ಕೆಲಸದೊತ್ತಡದಲ್ಲಿರಬೇಕು
ನೆರವು ನೀಡಲು ಯಾರೂ ಇಲ್ಲದಿರಬೇಕು 
ತಾನೊಬ್ಬನೇ ಇಡೀ ಕೆಲಸ ಮಾಡಬೇಕು
ಎಲ್ಲರ ಅಹವಾಲುಗಳ ಪರಿಶೀಲಿಸಬೇಕು

ಆದರೂ ಅವನನ್ನು ಬಿಡುವೆನೆ ನಾನು?
ಮತ್ತೆ ಉಸುರಿದ್ದೇನೆ ಅಹವಾಲನ್ನು
ವಿವರಣೆಗಳ ದೀರ್ಘವಾಗಿ ಇತ್ತಿದ್ದೇನೆ
ಇನ್ನೂ ಉತ್ತರಕೆ ಕಾಯುತ್ತಲಿದ್ದೇನೆ 

ಭೂಮಿಯಲ್ಲಿಹುದು ನ್ಯಾಯಕೋರ್ಟು
ಅಧಿಪತಿಯದಕೊಬ್ಬ ಕರಿಕೋಟು!
ಹೋರಾಡುವರು ಲಾಯರುಗಳು
ನಿಜವ ಬಿಡಿಸಿ ಮನಕೆ ಮುಟ್ಟಿಸಲು

ನಿನ್ನದೆಂತಹ ಕೋರ್ಟಿದಯ್ಯ?
ಸಿಕ್ಕಿದಂತೆ ಶಿಕ್ಷೆಗೊಡ್ಡುವೆಯಲ್ಲಯ್ಯ?
ವಿಚಾರಣೆಯ ಗೋಜೇ ಇಲ್ಲ
ಸಮಜಾಯಿಷಿಗೆ ಸ್ಥಳವೇ ಇಲ್ಲ

ನೀನೆ ಕೋರ್ಟು, ನೀನೇ ಲಾಯರು
ನೀನೇ ಜಡ್ಜು, ನೀನೇ ಸಾಕ್ಷಿಜನ
ಕೇಸುಹಾಕುವವನು ನೀನೇ
ಕೇಸುವಾದಿಸುವವನೂ ನೀನೆ

ತೀರ್ಮಾನ ನೀಡುವವನು ನೀನೆ
ಶಿಕ್ಷೆ ಘೋಷಿಸುವವನು ನೀನೆ
ಶಿಕ್ಷೆಕೊಡುವವನೂ ನೀನೇ  
ಸಿಂಗಲ್ ಟೀಚರ್ ಸ್ಕೂಲ್ ಹೆಡ್ಮಾಸ್ಟರ್?

ಅಪರಾಧಿಗೊಂದು ಅವಕಾಶವುಂಟು
ಸಾಧಿಸಿಕೊಳ್ಳಲು ಇಲ್ಲಿ  ತನ್ನ ಪಟ್ಟು
ಇಲ್ಲವೇ ಇಲ್ಲ ಹಿಯರಿಂಗ್ ಅಲ್ಲಿ!
ದೇವನೇ ನಿನ್ನ ನ್ಯಾಯಲಯದಲ್ಲಿ 

ಒಂದೇ ದೂರು ನಿನ್ನಕೆಲಸದ ಬಗೆಗೆ 
ತಪ್ಪಿಗೆ ಶಿಕ್ಷೆಯಿರಲೇ ಬೇಕು, ವ್ಯಕ್ತಿಗೆ
ತಪ್ಪು ಸರಿ ನಿರ್ಣಯವೆ ತಪ್ಪಾದರೆ?
ನಿನ್ನ ಮೂಗೇ ನೇರವಾಗಿಲ್ಲದಿರೆ?

ನೀನೊಮ್ಮೆ ಬುವಿಗೆ ಬರಲೇಬೇಕು
ಸರಿತಪ್ಪು ಕಡತಗಳ ತರಲೇಬೇಕು 
ಕೆಟ್ಟ- ಒಳ್ಳೆ ಕೆಲಸಗಳ, ಪಟ್ಟಿ ಬೇಕು
ದಸ್ತಾವೇಜು ನೀನು ಬಿಚ್ಚಿಡಲೇಬೇಕು 

ದೇವಕಿಗೆ ಮಗನಾಗಿ ಉದ್ಧರಿಸಿದೆ ನೀ 
ಯಶೋದೆಯ ಕಂದನೆನಿಸಿ ನಲಿದೆ ನೀ
ಶಬರಿ ಇತ್ತ ಎಂಜಲನು ತಿಂದು ನಲಿದೆ 
ಅಹಲ್ಯೆಯ ಶಾಪ ಕ್ಷಣದೊಳೆ ತೊಳೆದೆ

ಅವರಾರೂ ಪಾಪವನು ಮಾಡದವರೇನು
ನಿನ್ನಲ್ಲಿ ನನ್ನ ಬಹುಕೃತ ಅಪರಾಧವೇನು
ಅಜ್ಞಾನದಲಿ ನಾನು ಬಳಲಿದರೇನು?
ತಿದ್ದಿ ಕಾಯ್ವುದು ನಿನ್ನ ಧರ್ಮವಲ್ಲವೇನು?

ನೀನು ಕಂಡ ಅಳತೆಗೋಲ ಬಿಸುಡು
ಕರುಣೆ ಸಮುದ್ರವನು ಹರಿಯಬಿಡು
ಅಪರಾಧಿ ನಿರಪರಾಧಿಗಳ ಗುರುತಿಸು
ನಿನ್ನ ಕ್ಷಮಾಗುಣವನೆಲ್ಲರಲಿ ಸುರಿಸು

ಮಂದಮತಿಯೆನ್ನಇಷ್ಟೊಂದು ಕಾಡದಿರು
ಮನಕನುದಿನದ  ಶಾಂತಿಯ ನೀಡು
ಸಂಸಾರದೀ ಜಂಜಾಟ ಬಗೆಹರಿಸು
ಮತ್ತೊಮ್ಮೆ ಬುವಿಗೆ ಬಾರದಂತೆ ಹರಸು  

* ಡಾ.ಸತ್ಯವತಿ ಮೂರ್ತಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

7 thoughts on “ಮಿಂಚಂಚೆ”

  1. ಪ್ರತಿಮಾ ಶೆಟ್ಟಿ

    ತುಂಬಾ ಸೊಗಸಾಗಿದೆ.
    ಮತ್ತೆ ಮತ್ತೆ ಓದಿಸುತಿದೆ ಈ ನಿಮ್ಮ ಕವಿತೆ,

  2. ಭಕ್ತ-ಕವಿ ಸಂಗೀತಕಾರರ ಇದೇ ಧಾಟಿಯಲ್ಲಿ ಎಷ್ಟೋ ಬೇಡಿಕೆ-ತಕರಾರುಗಳನ್ನೂ ಕೇಳಿದ್ದೇನೆ, ಬರಹ- ಕವಿತೆಗಳನ್ನು ಓದಿದ್ದೇನೆ. ಇದು ಬಹಳ ಹಿಡಿಸಿತು. ಸುಲಲಿತವಾಗಿ ಹರಿದು ಕವಯಿತ್ರಿಯ ಪಾಪಗಳನ್ನು (ಇದ್ದರೆ) ತೊಳೆದುಕೊಂಡು ಹೋಗುವ ಝರಿಯಂತೆ ಇದು! ಭಲೇ!

    1. ಶ್ರೀವತ್ಸ ಅವರು ಸ್ಪಂದಿಸಿದ್ದು ನನಗೆ ಬಹಳ ಖುಶಿ ಕೊಟ್ಟಿದೆ. ಕವಯಿತ್ರಿಯ ಪಾಪಗಳು ಇಲ್ಲವೇ ಇಲ್ಲ ಎಂದರೆ ಅದೇ ಒಂದು ಪಾಪವಾದೀತು. ಕವನ ನಿಮಗೆ ಇಷ್ಟವಾಯಿತು ಎಂದು ತಿಳಿದು ಬಹಳ ಸಂತೋಷವಾಯಿತು. ಅನಂತ ಧನ್ಯವಾದಗಳು .

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai