ಕಥಾ ಲೋಕದ ಸರಸ್ವತಿ

‘ಬರೆಯುತ್ತಾ ಬರೆಯುತ್ತಾ ಬೆಳೆದವಳು ನಾನು. ಬರಹ ನನಗರಿವಿಲ್ಲದೇ ಪ್ರೀತಿಯ, ನೋವಿನ, ಸೃಜನಶೀಲ ಕೆಲಸವಾಯ್ತು. ಜಾನಕಿಯಾದ ನನ್ನನ್ನು ವೈದೇಹಿಯಾಗಿಸಿದ್ದು ಒಂದು ಪತ್ರಿಕೆ. ನಾನೊಬ್ಬ ಗೃಹಿಣಿ, ಮನೆಯೊಳಗಿದ್ದೇನೆ. ವಿಸ್ತಾರವಾದ ಜಗದೊಳಿಲ್ಲ ಎನ್ನುವ ಭಾವಕರಗಿದ್ದು ಹೆಗ್ಗೋಡಿನ ನಿನಾಸಮ್‍ನ ಸಹವಾಸದಲ್ಲಿ…ಎಂದು ಕನ್ನಡದ ಕತೆಗಾರ್ತಿ ವೈದೇಹಿಯವರು ತಮ್ಮ ಬಗ್ಗೆ ತಾವೇ ಒಂದೆಡೆ ಹೇಳಿಕೊಂಡ ಮುನ್ನುಡಿ ಓದುತ್ತಲೇ ಅವರ ಸಮಗ್ರಕಥಾ ಸಂಕಲನ ‘ಅಲೆಗಳಲ್ಲಿ ಅಂತರಂಗ’ ವನ್ನು ಇತ್ತೀಚೆಗೆ ಓದಿದೆ.
ವೈದೇಹಿಯವರು ತಮಗಿರುವ ಭಾವ ಸಮೃದ್ಧಿ, ಭಾಷಾ ಸಮೃದ್ಧಿಯ ಜೊತೆಗೆ ಸಮಾಜವನ್ನು ಬಲು ಸೂಕ್ಷವಾಗಿ ಅವಲೋಕಿಸಿ ಕಥೆಗಳನ್ನು ಬರೆದಿದ್ದಾರೆ. ಅವರು ಗ್ರಹಿಸಿದ ಸಂಗತಿಯನ್ನು ಕಥೆಯಾಗಿಸಲು ಹೊರಟಾಗ ಘಟನೆಗೆ ಸೊಗಸಾದ ಕಥನ ಶೈಲಿಯನ್ನು ತಂತ್ರಗಾರಿಕೆಯನ್ನೂ ಬಳಸಿದ್ದಾರೆ. ಅಗತ್ಯವಿದ್ದಲ್ಲಿ ರೂಪಕಗಳು ಉಪಮೆಗಳನ್ನು ಬಳಸಿಕೊಂಡಿದ್ದಾರೆ. ಅವರ ಕಥೆಗಳಲ್ಲಿ ಕಾವ್ಯದ ಪ್ರಭಾವವೂ ದಟ್ಟವಾಗಿದೆ. ಕ್ಲಿಷ್ಟ ಪದಗಳ ಬಳಕೆ ಕಡಿಮೆ. ಅಷ್ಟೇ ಅಲ್ಲದೆ ಅವರ ಕಥೆಗಳಿಗೆ ಸಲೀಸಾಗಿ ಓದಿಸಿಕೊಂಡು ಹೋಗುವ ಗುಣವಿದೆ. ಪ್ರಾದೇಶಿಕ ಭಾಷೆಯಾದ ಕುಂದಾಪುರ ಕನ್ನಡವನ್ನು ಅತ್ಯಂತ ಪ್ರಭಾವಿಯಾಗಿ ಕನ್ನಡದ ಕಥಾಲೋಕಕ್ಕೆ ಪರಿಚಯಿಸಿದವರು ವೈದೇಹಿಯವರು. ಬಹು ಮುಖ್ಯವಾಗಿ ವೈದೇಹಿಯವರ ಕಥೆಗಳು ಓದುವಾಗ ಮನಸ್ಸನ್ನು ಮುಟ್ಟುತ್ತವೆ, ತಟ್ಟುತ್ತವೆ. ಓದಿ ಮುಗಿಸಿದ ನಂತರ ಓದುಗರ ಬುದ್ದಿಯಲ್ಲಿ,್ಲಮನಸ್ಸಿನಲ್ಲಿ ಸ್ಥಾನ ಪಡೆದುಕಾಡುತ್ತವೆ. ಓದುಗರ ಅನುಭವದ ಪರಿಧಿಯನ್ನು ವಿಸ್ತರಿಸುತ್ತವೆ. ಈ ಕಾರಣಗಳಿಂದಾಗಿಯೇ ವೈದೇಹಿಯವರ ಕಥೆಗಳೆಂದರೆ ನನಗೆ ಬಲು ಇಷ್ಟವಾಗುತ್ತವೆ.
ಬಾಲ್ಯದಿಂದಲೇ ಕಥೆಗಳನ್ನು ಬರೆಯುತ್ತ ಬೆಳೆದಿದ್ದರೂ ಇವರು ಕಥಾ ಪ್ರಕಾರಕ್ಕೆ ಹೆಚ್ಚಿನ ಸಮಯ ನೀಡಿದ್ದು ವಿವಾಹದ ನಂತರ. ಕೌಟುಂಬಿಕ ಸಂಬಂಧವನ್ನು ಪುರುಷ ಪ್ರಧಾನವಾದ ಸಾಮಾಜಿಕ ಚೌಕಟ್ಟಿನೊಳಗೆ ನಿಭಾಯಿಸುವಾಗ ಸೂಕ್ಷ್ಮ ಸಂವೇದನೆಯ ಹೆಂಗಸರು ಅಂತರ್ಮುಖಿಗಳಾಗುವುದೇ ಹೆಚ್ಚು. ವೈದೇಹಿಯವರು ಅಂತಹ ಸಂದರ್ಭಗಳನ್ನೆದುರಿಸುತ್ತ ಕಥೆಗಳನ್ನು ಬರೆದಿದ್ದಾರೆ ಎಂಬ ಮಾತಿದೆ. ಮಹಿಳಾ ಸಂವೇದನೆಗಳಿಗೆ ವಿಶೇಷ ಆದ್ಯತೆ ನೀಡುವ ವೈದೇಹಿಯವರ ಕಥೆಗಳಲ್ಲಿ ಯಾವುದೋ ಸಿದ್ಧಾಂತಗಳ, ಪಂಥಗಳ ಹೇರುವಿಕೆಯ ಕಷ್ಟ ಕಾಣುವುದಿಲ್ಲ. ಶಾಂತವಾಗಿ ಹರಿಯುವ,ಆಳವರಿಯದ ನದಿಯಂತೆ ಆ ಕಥೆಗಳು ನಮಗೆ ಕಾಣಿಸುತ್ತವೆ. ಸಿದ್ಧ ಮಾದರಿಗಳ ಬಗ್ಗೆ ಹುಟ್ಟಿಕೊಳ್ಳುವ ಗಟ್ಟಿಯಾದ ಪ್ರಶ್ನೆಗಳನ್ನು ಕಥೆಯ ಪಾತ್ರಗಳ ಸ್ವಗತ ರೂಪದಲ್ಲಿಡುವ ಅವರ ಕ್ರಮ ಸೊಗಸು. ಸಾಮಾಜಿಕ ವ್ಯವಸ್ಥೆಯನ್ನು ಅವರ ಕಥಾಪಾತ್ರಗಳೂ ಧಿಕ್ಕರಿಸುವುದಿಲ್ಲ. ಹೊಂದಿ ಬಾಳುವ ಅಗತ್ಯವನ್ನು, ಅನಿವಾರ್ಯತೆಯನ್ನು ಹೇಳುತ್ತಲೇ ವ್ಯವಸ್ಥೆಯ ನ್ಯೂನ್ಯತೆಯನ್ನು ಸ್ಪಷ್ಟವಾಗಿ ಎತ್ತಿ ತೋರುತ್ತವೆ. ಸ್ತ್ರೀಯರ ಅಂತರಂಗ ಬಹಿರಂಗಗಳ ತಾಕಲಾಟವನ್ನು ಓದುಗರಿಗೆ ಗೋಜಲಾಗದಂತೆ ಕಟ್ಟಿಕೊಡುವ ವೈದೇಹಿಯವರು ಕನ್ನಡದ ಪ್ರಮುಖ ಕಥೆಗಾರ್ತಿ. ಸಂಕೀರ್ಣವಾಗಿ ಬರೆಯುವುದೇ ಕಥೆಯ ಹೆಚ್ಚುಗಾರಿಕೆ ಎನ್ನುವ ಸಮಕಾಲೀನ ಸಂದರ್ಭದಲ್ಲಿಯೂ ತಮ್ಮ ಬರಹದ ಜಾಡು ತಪ್ಪಿಸಿಕೊಳ್ಳದ ವೈದೇಹಿ ಸರಳವಾಗಿ ಬರೆದು ಸಂಕೀರ್ಣವಾದ ವಿಷಯಗಳನ್ನು ಓದುಗರಿಗೆ ತಲುಪಿಸುತ್ತಿದ್ದಾರೆ. ಕಥಾ ಪಾತ್ರಗಳು ನಿಲ್ಲುವ ನಡೆಯುವ, ಉಡುವ ಉಣ್ಣುವ, ಮಲಗುವ….. ಹೀಗೆ ಪ್ರತಿ ಸಂಗತಿಯನ್ನು ಸೂಕ್ಮವಾಗಿ ಅವಲೋಕಿಸಿ ಜೀವತುಂಬಿ ಬರೆಯುವ ಅವರ ಕಥನದ ರೀತಿಯೇ ಅನನ್ಯವಾದದ್ದು. ಅವರ ಕಥೆಗಳಲ್ಲಿ ಸ್ವಾರಸ್ಯದ ಮಾತುಗಾರಿಕೆ, ಉಲ್ಲಾಸದ ಉಬ್ಬರ, ಹಿಂಸೆಯ ನೆರಳು, ಗಾಢವಾದ ವಿಷಾದ.. ಹೀಗೆ ಹಲವೆಡೆ ಪೂರಕವಾದ ಭಾವಗಳನ್ನು, ಕೆಲವೊಮ್ಮೆ ವಿರುದ್ಧವಾದ ಭಾವಗಳನ್ನು ಮೇಳೈಸಿ ಬರೆಯುವ ಕಲೆಗಾರಿಕೆಯಲ್ಲಿ ಇವರು ಸಿದ್ಧಹಸ್ತರು. ವೈದೇಹಿಯವರ ಕಥೆ ಓದುವುದೆಂದರೆ ಹದವರಿತು ಮಾಡಿದ ಅಡುಗೆಯ ಊಟ ಉಂಡಂತೆ. ಎಲ್ಲಿಯೂ ವಾಕರಿಕೆ ಹುಟ್ಟಿಸುವುದಿಲ್ಲ. ರೇಜಿಗೆಎಬ್ಬಿಸುವುದಿಲ್ಲ. ಬಂಡಾಯವೇಳಬೇಕೆನಿಸುವುದಿಲ್ಲ. ಅವರ ಕಥೆ ಓದಿದಾಗ ವ್ಯಗ್ರ ಮನಸ್ಸಿಗೂ ಬೆಳ್ಳನೆಯ ಬೆಳದಿಂಗಳಲ್ಲಿ ಓಡಾಡಿದ ನಂತರ ಸಿಗುವ ಶಾಂತತೆ ದಕ್ಕುತ್ತದೆ. ಒಳ್ಳೆಯ ಸಾಹಿತ್ಯದ ನಿಜವಾದ ಉದ್ದೇಶ ಮನೋವಿಕಾಸವೇ ಅಲ್ಲವೇ‘ಮರಗಿಡಬಳಿ’್ಳ, ‘ಅಂತರಂಗದ ಪುಟಗಳು’, ‘ಗೋಲ’, ‘ಸಮಾಜ ಶಾಸ್ತ್ರಜ್ಞೆಯ ಟಿಪ್ಪಣಿಗೆ’‘ಅಮ್ಮಚ್ಚಿಯೆಂಬ ನೆನಪು’, ‘ಕ್ರೌಂಚ ಪಕ್ಷಿಗಳು’ಇವು 1979ರಿಂದ ನಂತರ ಬಂದ ಕಥಾ ಸಂಕಲನಗಳು..ಇವೆಲ್ಲ ಕಥಾ ಸಂಕಲನದ ಕಥೆಗಳನ್ನು ಸೇರಿಸಿ ‘ಅಲೆಗಳಲ್ಲಿ ಅಂತರಂಗ’ ಎಂಬ ಸಮಗ್ರ ಕಥಾ ಸಂಕಲನವನ್ನು ಕೂಡಾಅಕ್ಷರ ಪ್ರಕಾಶನ ಹೆಗ್ಗೋಡು ಹೊರಗೆ ತಂದಿದೆ.
ವೈದೇಹಿಯವರ ಕಥನ ತಂತ್ರದ ಎರಡು ಮಾದರಿಗಳು..
ಮದುವೆ ಹೆಣ್ಣು ಮತ್ತು ಸೀರೆ.
ಕಥಾ ನಾಯಕಿ ಸುಮಾ ಕೆಳ ಮದ್ಯಮ ವರ್ಗದ ಹೆಣ್ಣು .ದೊಡ್ಡಪ್ಪನ ಮಗ ರಾಮಣ್ಣ ತನ್ನ ಮದುವೆಗೆ ಅವಳನ್ನು ಆಹ್ವಾನಿಸುತ್ತಾನೆ. ಉತ್ಸಾಹದಲ್ಲಿ ನಿನ್ನ ಮದುವೆಗೆ ಬಂದೇ ಬರುತ್ತೇನೆ ಎಂದ ಸುಮಾ ನಂತರ ತನ್ನ ನಾಲಿಗೆ ಮಾಡಿದ ಅಚಾತುರ್ಯಕ್ಕೆ ಮರುಗುತ್ತಾಳೆ. ‘ತನ್ನ ಬಳಿ ಇರುವ ಬಣ್ಣ ಮಾಸಿದ ಸೀರೆ, ಹಳೆಯೋಲೆ, ಹರಳುದುರಿದ ನತ್ತುಗಳನ್ನು ಧರಿಸಿ ಹೋಗಬೇಕು. ತಾನು ಹೋದರೆ ತನ್ನ ಮೈಕೈ ಮೇಲೆ ಕಣ್ಣಾಡಿಸಿ ‘ಇವಳು ಹೀಗೆ’ಎಂದು ಶ್ರೀಮಂತಿಕೆಯ ಮದದಿಂದ ಮೆರೆವ ದೊಡ್ಡಮ್ಮ ಅಳೆಯುತ್ತಾರೆ. ಮದುವೆಗೆ ಹೋಗುವುದೇ ಬೇಡವೇ ಎನ್ನುವ ತಾಕಲಾಟದಲ್ಲಿರುವ ಸುಮಾ ತನ್ನ ಪತಿ ಅರವಿಂದನ ಬಳಿ ತನ್ನ ಕಷ್ಟವನ್ನು ಹೇಳಿಕೊಳ್ಳುತ್ತಾಳೆ.
ಅವಳ ಪತಿ ಅರವಿಂದ ಕಷ್ಟವೇನು? ಎನ್ನುತ್ತ ಕಷ್ಟವನ್ನು ಅನುಭವಿಸುವವನು. ಹೆಂಡತಿಯನ್ನು ನಗಿಸಲು ತಾನೂ ನಗುವವನು. ಅವನು ಹೇಳುತ್ತಾನೆ ..ಜಗತ್ತಿನಲ್ಲಿ ಮೂರು ಪಂಗಡಗಳಿವೆ ಗುಣದಿಂದ ವ್ಯಕ್ತಿತ್ವ ಅಳೆಯುವವರು, ವಿದ್ಯೆಯಿಂದ ಅಳೆಯುವವರು, ಹಣದಿಂದ ಅಳೆದು ಮಣೆ ಹಾಕುವವರು..ಈ ಮೂರನೆಯ ವಿಷಕಾರಿ ಪಂಗಡದಿಂದ ನೀನು ದೂರವಿದ್ದಷ್ಟೂ ಕ್ಷೇಮ ..ಗಂಡನ ಎಚ್ಚರಿಕೆಯ ಸೂಕ್ಷ್ಮಗಳನ್ನು ಅರಿತೂ ಬಾಂಧವ್ಯದ ಸೆಳೆತದಿಂದ ತಪ್ಪಿಸಿಕೊಳ್ಳಲಾಗದ ಸುಮಾ ಮದುವೆಗೆ ಹೋಗಲು ನಿರ್ಧರಿಸುತ್ತಾಳೆ. ಗಂಡನ ಪರೀಕ್ಷಾ ವೆಚ್ಚಕ್ಕಾಗಿ ಮುಡಿಪಾಗಿಟ್ಟ ಹಣದಲ್ಲಿ ಹೊಸದೊಂದು ರೇಷ್ಮೆಸೀರೆಯನ್ನುಖರೀದಿಸುತ್ತಾಳೆ. ಇದನ್ನುಉಟ್ಟಾಗ ಸಹಜ ಸುಂದರಿಯಾದ ತನ್ನನ್ನು ಎಲ್ಲರೂ ಮೆಚ್ಚಿಕೊಳ್ಳಬಹುದೆಂಬ ಕನಸು ಕಾಣುತ್ತಾಳೆ. ಅವಳೆಣಿಕೆಯಲ್ಲ ಸುಳ್ಳಾಗಿ ರಾಮಣ್ಣನ ಮದುವೆಯಲ್ಲಿ ಯಾರೂ ತನ್ನನ್ನು ಗಮನಿಸುತ್ತಿಲ್ಲ ಎಂಬ ಕೀಳರಿಮೆಯಿಂದ ಬಳಲುತ್ತಾಳೆ..ಮದುವೆ ಸಂತೋಷದ ಸಮಾರಂಭ ನಿಜ ಆದರೆ ತನ್ನಂಥಹವರಿಗೆ ಅತೃಪ್ತಿಯನ್ನು ಬಡಿದೆಬ್ಬಿಸಿ ತಾನು ಕೇವಲ ಎಂಬ ಭಾವನೆಯನ್ನು ತುಂಬುವ ಸಮಾರಂಭ. ತಾನು ಬಾರದಿದ್ದರೂ ನಡೆಯುತ್ತಿತ್ತು..ಎಂದು ನೊಂದುಕೊಳ್ಳುತ್ತಾ ಮನೆಗೆ ಹೊರಟು ನಿಲ್ಲುತ್ತಾಳೆ. ಸುಮಾಳ ಬಳಿ ಯಾರೂ ‘ಇರು ಇನ್ನೊಂದು ದಿನ’ ಎಂದು ಒತ್ತಾಯ ಪೂರ್ವಕವಾಗಿ ಹೇಳುವುದೇ ಇಲ್ಲ. ಮನದೊಳಗೆ ಅಳುವಿದ್ದರೂ ಅಳಲಾರದೇ, ನಗುವಿಲ್ಲದಿದ್ದರೂ ಹುಸಿ ನಗೆ ಬೀರಿ ಮದುವೆಮನೆಯಿಂದ ಸುಮಾ ಹೊರಗೆ ಬರುತ್ತಾಳೆ.
ಸಮಾಜದಲ್ಲಿರುವ ತರ ತಮಗಳ ನಡುವೆ ಹೆಚ್ಚಾಗಿ ಬಳಲುವವರು ಹೆಂಗಸರು. ಮದುವೆಯಂತಹ ಸಮಾರಂಭದಲ್ಲಿ ಒಡವೆ ವಸ್ತ್ರಗಳಿದ್ದ ಶ್ರೀಮಂತರಿಗೆ ಸಂಭ್ರಮಿಸುವ ಅವಕಾಶವಾದರೆ ಮಧ್ಯಮವರ್ಗದವರಿಗೆ, ಬಡವರಿಗೆ ಖರ್ಚುವೆಚ್ಚಗಳನ್ನು ಹೊಂದಿಸುವ ಪರೀಕ್ಷಾ ಕಾಲ. ಸಂಬಂಧಗಳನ್ನು ಬಿಡಲಾಗದ ತೊಡಲಾಗದ ಹೆಣ್ಣೊಬ್ಬಳ ಮನಸ್ಸಿನ ತಾಕಲಾಟವನ್ನು, ಉಳ್ಳವರು ಬಡವರೆಡೆ ತೋರುವತಣ್ಣನೆಯ ಕ್ರೌರ್ಯವನ್ನು, ಅದನ್ನೆದುರಿಸುವ ಕಷ್ಟವನ್ನು ವೈದೇಹಿ ಈ ಕಥೆಯಲ್ಲಿ ಮನೋಜ್ಞವಾಗಿ ಹೇಳಿದ್ದಾರೆ.
ಖಾಲಿ ಗೋಡೆ…
ಈ ಕಥೆ ಗೋಡೆಯ ಸುತ್ತ ಸುತ್ತುತ್ತದೆ.
ಒಂದು ಮನೆಯಲ್ಲಿ ನಾಲ್ವರಿರುತ್ತಾರೆ.ತಂದೆ ತಾಯಿ ಮಗ ಮಗಳು.ಮೂಗು ಇದೆಎಂದು ಮೂಗುತಿ ಸುರಿದಂತೆ, ಕಿವಿ ಇದೆಎಂದು ಬೆಂಡೋಲೆ ಇಟ್ಟಂತೆ,ಕೈಗೆ ಬಳೆ, ಕಾಲಿಗೆ ಚೈನು ತೊಟ್ಟಂತೆ ಗೋಡೆ ಇದೆ ಎಂದು ಅದೂ ಇದು ನೇತು ಹಾಕುವ ಅಭ್ಯಾಸ ಬಿಟ್ಟು ಬಿಡುವ ಎಂದು ಒಂದು ದಿನ ಅವರೆಲ್ಲರೂ ನಿರ್ಧರಿಸುತ್ತಾರೆ.
ಹೊರ ಪ್ರಪಂಚವನ್ನು ಬೇರೆ ಮಾಡಿ ಒಳಗೊಂದು ಸ್ವತಂತ್ರ ಪ್ರಪಂಚ ಸೃಷ್ಟಿಸಿಕೊಡಬಲ್ಲ ಗೋಡೆಯೆಂಬುದೇ ಎಂಥ ನಿಗೂಢ! ಆದರೆ ಇದೇ ಗೋಡೆ ಹೊರ ಪ್ರಪಂಚವನ್ನು ಬೇರೆ ಮಾಡಿ ನಮ್ಮನ್ನು ಕೂಪ ಮಂಡೂಕರನ್ನಾಗಿ ಮಾಡುತ್ತದೆ..ಹೀಗೆ ಗೋಡೆಯ ಕುರಿತು ಚೆಂದವಾಗಿ ವಿವರಿಸುತ್ತಾರೆ.
ಅಪ್ಪ ಯಾರು ಏನಾದರೂ ಗೋಡೆಗೆ ತೂಗು ಹಾಕಲು ಬರುವ ಉಡುಗೊರೆ ಕೊಟ್ಟರೆತೂಗಿಬಿಡುತ್ತಾನೆ. ಹಾಗೆ ಹಾಕದಿದ್ದರೆ ಅದು ಕೊಟ್ಟವರಿಗೆ ಮಾಡುವ ಅವಮಾನ ಎಂದುಕೊಳ್ಳುತ್ತಾನೆ. ಮಗಳು ‘ಥಿಂಕ್ ಪಾಸಿಟಿವ್’ಎಂದೆಲ್ಲ ಬರೆದು ಹಾಕುತ್ತಾಳೆ. ಮಗ ತಾನು ವಿವಿಧ ಪ್ರವಾಸಿ ಸ್ಥಳದಿಂದ ತಂದ ಅಲಂಕಾರಿಕ ವಸ್ತುಗಳನ್ನು ತೂಗಿಬಿಡುತ್ತಾನೆ.ಎಲ್ಲರೂ ಮನೆಯಿಂದ ಹೋದ ಮೇಲೆ ತಾಯಿ ಅವುಗಳನ್ನೆಲ್ಲ ತೆಗೆದು ದೇವರ ಚಿತ್ರಗಳನ್ನು ಹಾಕುತ್ತಾಳೆ. ಬೀಗದಕೈ, ಕ್ಯಾಲೆಂಡರ್ ಫೋಟೋ ಎಲ್ಲವನ್ನುತೂಗಿ ಬಿಡುವಾಗ ಅಪ್ಪ ಹೇಳುತ್ತಾನೆ .. ಹಾ… ಕಡೆಗೆ ಗೋಡೆಗೆ ಜನಿವಾರವನ್ನೂ ತೊಡಿಸುವವರು ನಾವು.. ಆಗ ಗೋಡೆ ಬ್ರಾಹ್ಮಣಗೋಡೆಯಾಯಿತು..ಹೀಗೆ ತಮಾಷೆ ಮಾಡಿಕೊಳ್ಳುತ್ತಾರೆ. ಆದರೆ ಮೇಲೆ ಹೇಳಿದಂತೆ ಗೋಡೆ ಖಾಲಿ ಇಡಬೇಕು ಎಂದು ನಿರ್ಧರಿಸಿದ ಮೇಲೆ ಗೋಡೆಯ ಮೇಲಿರುವುದನ್ನೆಲ್ಲ ತೆಗೆಯುತ್ತಾರೆ.ಆಗ ಗೋಡೆ ‘ಮೊಳೆಯನ್ನೂ ಕಿತ್ತಿಟ್ಟು, ಗಾಯ ಮುಚ್ಚಿಸಿಕೊಂಡು, ಹೊಸಬಣ್ಣತೊಟ್ಟುಕೊಂಡು ಅದೀಗ ಅವಾಕ್ಕಾದಂತಿತ್ತು..ಬೆಪ್ಪಣ್ಣನಂತೆ’..
ಕೆಲದಿನಗಳ ನಂತರ‘ಗೋಡೆ ಖಾಲಿಯಾಗಿ ನಿಂತಿತೆಂದರೆ ಜನರ ನಡುವೆ ಅಡ್ಡವಾಗುವುದಕ್ಕೆ ಮಾತ್ರ. ಗೋಡೆ ಗೋಡೆತನವನ್ನು ಮೀರಬೇಕೆಂದರೆ ಏನನ್ನಾದರೂ ಧರಿಸಲೇ ಬೇಕು’ಎಂದು ಮಗ ಹೇಳುತ್ತಾನೆ.
‘ಧರಿಸುಎಂದರೆ ಗರ್ಭಧರಿಸು ನೆನಪಾಗುತ್ತದೆ. ಗರ್ಭಕೋಶದ ಭಿತ್ತಿಯ ನೆನಪಾಗುತ್ತದೆ’ ‘ಗೋಡೆ ಇದ್ದರೆ ಚಿತ್ತಾರ ಬರೆಯಬಹುದು’ ಉದ್ಗಾರ ನೆನಪಾಗುತ್ತದೆ ಎಂದು ಮಗಳೆನ್ನುತ್ತಾಳೆ.
ಗೋಡೆ ಹಾಗಾದರೆ ಸ್ತ್ರೀ ಲಿಂಗವೇ ಎಂದು ಮಗ ಕೇಳುತ್ತಾನೆ. ಗೋಡೆಯ ಮೇಲೆಯಾವ ಲಿಂಗವೂ ಕಾಣುವುದಿಲ್ಲ ಎಂದು ಅಪ್ಪ ಹೇಳುತ್ತಾನೆ.
ಆಗ ತಾಯಿ‘ಭಂಡ ಮಾತಾಡುತ್ತೀರಿ’ಎಂದು ಗಂಡನಿಗೆ ಗದರುತ್ತಾಳೆ. ಇದನ್ನೆಲ್ಲ ಕೇಳುವ ಗೋಡೆ ಮೊನಾಲಿಸಾಳಂತೆ ಮುಗುಳ್ನಗುತ್ತಿದೆಯೇನೋ ಎನ್ನುತ್ತಾಳೆ ಮಗಳು..ಹೀಗೆ ದಿನಗಳೆದಂತೆ ಎಲ್ಲರಲ್ಲಿಯೂ ಖಾಲಿ ಗೋಡೆಯ ಬಗೆಗೊಂದು ಅಸಹನೆ ಮೂಡುತ್ತದೆ.
‘ಖಾಲಿ ಗೋಡೆಯೆಂದರೆ ಪುರಾತನ ಅವಶೇಷವೊಂದು ಚಿಮ್ಮಿಸುವ ನಿಶ್ಯಬ್ದದಂನ ಎಂದೊಬ್ಬರು ಹೇಳಿದರೆ ಇನ್ನೊಬ್ಬರು‘ಈ ಗೋಡೆಯನ್ನು ನೋಡಿದರೆ ಚೈತ್ಯ್ಯಾಲಯದ ಶಾಂತಿಯ ನೆನಪು ಬರುತ್ತದೆ’ಎಂದುಇನ್ನೊಬ್ಬರು ಹೇಳುತ್ತಾರೆ.
‘ಹಿಟ್ಲರನ ಕಾನ್ಸಂಟ್ರೇಶನ್‍ ಕ್ಯಾಂಪಿನ ಪಾಯಖಾನೆಯ ಗೋಡೆಗಳು ಹೀಗೆಯೇಇದ್ದವು ಬೋಳಾಗಿ… ಗೋಡೆಯನ್ನೆಂದಾದರೂ ಕೇಳೀದ್ದೀರಾ ಅದಕ್ಕೆ ಹೀಗಿರಲು ಇಷ್ಟವೇ?ಎಂದು ಮಗ ಬೊಬ್ಬೆ ಹಾಕುತ್ತಾನೆ..
ಯಾವುದಾದರೂ ಮಗು ಬಂದು ಚಿತ್ರವನ್ನಾದರೂ ಬಿಡಿಸಿದರೆ ಎಂದು ಹಲುಬುತ್ತಾರೆ..ಯಾರೇನು ಮಾಡದಿದ್ದರೂ ಕಾಲ ಗತಿಸಿದಂತೆ ಗೋಡೆ ಮಾಸಲಾಗತೊಡಗಿತ್ತು..ಏನೂ ಅಪರಾಧ ಮಾಡದೆಯೂ ಅಪವಾದಕ್ಕೀಡಾದ ಬಡಪಾಯಿಯಂತೆ ಗೋಡೆ ತುಟಿಒಡೆಯದೇ ನಿಂತಿತ್ತು.
ಒಂದು ದಿನ ಮಗಳು ನೋಟ್ಬುಕ್ಕಿನಲ್ಲಿ ಬರೆಯುತ್ತಾಳೆ ‘ಅಪ್ಪಾ ಉಸಿರುಗಟ್ಟುತ್ತಿದೆ ನಾನೊಂದು ಚಲಿಸುವ ಗೋಡೆಯೇ ಆಗಿದ್ದೇನೆ’ ಮಗ ಬರೆಯುತ್ತಾನೆ..ನಾವೆಲ್ಲ ಚಲಿಸುವ ಪ್ರೇತಗಳಂತೆ….. ಅಪ್ಪ ಕೇಳುತ್ತಾನೆ ಛೆ ಹಾಗೇಕೆ ತಿಳಿಯುತ್ತೀರಿ? ಗೋಡೆ ಮೌನ ತಪಸ್ವಿ ಎಂದೇಕೆ ತಿಳಿಯಬಾರದು?ಆಗ ಎಲ್ಲರಿಗೂ ಗೋಡೆ ನಿಟ್ಟುಸಿರಿಟ್ಟಂತೆ ಭಾಸವಾಗುತ್ತದೆ.
ಮರು ದಿನ ಬೆಳಿಗ್ಗೆ ಗೋಡೆಯ ಮೇಲೆ ಬರಹವಿತ್ತು..ಹಗುರಾಗಿ ನಿಲ್ಲಲಾರೆ. ಕಾಲುಗಳಲ್ಲಿ ಬಲವಿಲ್ಲ. ಹಾರಲಾರೆ ರೆಕ್ಕೆಇಲ್ಲ. ನಿಮ್ಮ ಭಾವನೆಗಳನ್ನ ನನ್ನಲ್ಲಿಡಿ.ಭಾರಕೊಡಿ.ಎಲ್ಲರೂ ಮೊಳೆ ಸುತ್ತಿಗೆಯನ್ನು ಹಿಡಿದು ಬರುತ್ತಾರೆ ತಮ್ಮತಮ್ಮಇಷ್ಟದ ವಸ್ತುಗಳನ್ನು ತೂಗಿಬಿಡುತ್ತಾರೆ. ಸಂಜೆಯೊಳಗೆ ಖಾಲಿ ಗೋಡೆಕಾಣೆಯಾಗುತ್ತದೆ.ಮನೆಯಲ್ಲಿ ಕಲರವ ತುಂಬುತ್ತದೆ.
ಈ ಕಥೆಯಲ್ಲಿ ಗೋಡೆಯೆಂಬುದು ಪ್ರತಿಮೆ. ಗೋಡೆಯ ಬಗ್ಗೆ ಚರ್ಚಿಸುವ ಪಾತ್ರಗಳ ಮಾತಿನಿಂದಲೇ ಅವರ ವ್ಯಕ್ತಿತ್ವದ ಭಿನ್ನ ಮಾದರಿಗಳನ್ನು ಲೇಖಕಿ ನಮ್ಮೆದುರು ತೆರೆದಿಡುತ್ತಾರೆ. ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿವೆ.ಆಗೆಲ್ಲ ಹೇಳುವುದು ಒಂದು ಮನೆಯ ನಡುವೆಗೋಡೆಎದ್ದುಎರಡು ಮನೆಗಳಾದವು ಎಂದು. ವಿಭಕ್ತ ಕುಟುಂಬಗಳಲ್ಲಿಯೂ ವ್ಯಕ್ತಿಗಳ ನಡುವೆಯೂ ಗೋಡೆಗಳೇಳುತ್ತವೆ. ಅದು ಕಣ್ಣಿಗೆ ಕಾಣುವ ಗೋಡೆಯಲ್ಲ… ಅದು ಮನೆಯಲ್ಲಿ ವಾಸವಾಗಿರುವ ಜನರ ಆಸಕ್ತಿ ವಿಭಿನ್ನವಾಗಿದ್ದರಿಂದ ಗೋಡೆ ಏಳಬಹುದು.ತಲೆಮಾರಿನ ಅಂತರದ ಕಾರಣದಿಂದಿರಬಹುದು. ಒಳಗೆ _ ಹೊರಗೆ, ಹೆಣ್ಣು – ಗಂಡು, ಬಡವ ಶ್ರೀಮಂತ, ಕಪ್ಪು- ಬಿಳುಪು, ಸುಂದರ- ಕುರೂಪಿ, ವಿದ್ಯಾವಂತ- ಅವಿದ್ಯಾವಂತ, ಅತ್ತೆ ಸೊಸೆ.. ಹೀಗೆ ಎಷ್ಟೊಂದು ಬಗೆಯ ಗೋಡೆಗಳನ್ನು ಕಟ್ಟಿಕೊಂಡು ನಾವು ಕಷ್ಟಪಡುತ್ತೇವೆ. ಗೋಡೆ ಕಟ್ಟಿಕೊಂಡಿದ್ದಕ್ಕೆ ಕಾರಣ ಕೊಡುತ್ತೇವೆ. ಸರಿ ತಪ್ಪುಗಳ ನಿಕಷಕ್ಕೊಡ್ಡುತ್ತೇವೆ! ಅದಕ್ಕಾಗಿಯೇ ವೈದೇಹಿಯವರು ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಬರೆದ ಈ ಕಥೆ ಇಂದಿನ ಸಂದರ್ಭದಲ್ಲಿಯೂ ಅತ್ಯಂತ ಪ್ರಸ್ತುತ ಎನಿಸಿತು.ಕೆಲವು ಗೋಡೆಯನ್ನುಕಟ್ಟಿಕೊಂಡು ಮತ್ತೆ ಮತ್ತೆಅದನ್ನು ಗಟ್ಟಿಗೊಳಿಸುತ್ತೇವೆ. ಕೆಲವನ್ನು ಸಾಂಧರ್ಭಿರ್ಕವಾಗಿ ಕಟ್ಟಿಕೊಳ್ಳುತ್ತೇವೆ. ಇಂತಹ ಗೋಡೆಗಳನ್ನು ಕಟ್ಟಿದವರೇಕೆಡವಿದರೆ ಮಾತ್ರಸಂಬಧಗಳು ಅರ್ಥಪೂರ್ಣವಾಗಿ ಉಳಿದುಕೊಳ್ಳುತ್ತವೆ. ಮನೆಗಳಲ್ಲಿ ಕಲರವ ಕೇಳಿ ಬರುತ್ತದೆ.
ಮಾನಸಿಕ ಅಸ್ವಸ್ಥೆಯಅಂತರಂಗ ಬಿಚ್ಚಿಡುವ ಅಕ್ಕು ವೈದೇಹಿಯವರ ಶ್ರೇಷ್ಠ ಕಥೆಗಳಲ್ಲೊಂದು.ಕಿರುಚಿತ್ರವಾಗಿಯೂ ಅದು ಜನಮನವನ್ನು ಗೆದ್ದಿದೆ.ಅವರ ಕಥೆಗಳು ನಾಟಕಗಳಾಗಿ ಪ್ರದರ್ಶನಗೊಂಡಿವೆ. ಅವರ ಹಲವಾರು ಕಥೆಗಳು ಭಾಷಾಂತರಗೊಂಡು ಕನ್ನಡೇತರರಿಗೂ ತಲುಪಿವೆ. ಅವರಿಗೆ ಪ್ರತಿಷ್ಠಿತ ಪ್ರಶಸ್ತಿಯ ಮನ್ನಣೆಯನ್ನು ತಂದುಕೊಟ್ಟಿವೆ.‘ಮಹಿಳಾ ಸಾಹಿತ್ಯ ಎಂದರೆ ಅಡುಗೆ ಮನೆಯ ಸಾಹಿತ್ಯ’ಎಂದು ಮೂಗು ಮುರಿಯುವ ಕಾಲದಲ್ಲಿಯೂ ವೈದೇಹಿಯವರ ಬರಹಗಳನ್ನು ವಿಮರ್ಶಕರು ಗುರುತಿಸಿದ್ದಾರೆ.ಕತೆ ಬೆರೆಯುವ ಹೊಸ ಪೀಳಿಗೆಯ ಕತೆಗಾರರು ಅಧ್ಯಯನ ಮಾಡಿ ಬರೆಯ ಬೇಕಾದಷ್ಟು ಚೆಂದದ ಕತೆಗಳನ್ನು ವೈದೇಹಿಯವರು ಬರೆದಿದ್ದಾರೆ.ಸರಳತೆಗೆ ಮತ್ತೊಂದು ಹೆಸರೆಂಬಂತಿರುವ ವೈದೇಹಿಯವರಿಂದ ಕನ್ನಡ ಸಾರಸ್ವತ ಲೋಕ ಇನ್ನಷ್ಟು ಶ್ರೀಮಂತವಾಗಲಿ.

****


ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಕಥಾ ಲೋಕದ ಸರಸ್ವತಿ”

  1. ಧರ್ಮಾನಂದ ಶಿರ್ವ

    ವೈದೇಹಿಯವರ ಕಥಾಲೋಕದ ಚಂದದ ವಿಮರ್ಶೆ. ಕೌಟುಂಬಿಕ ಸಮಸ್ಯೆಗಳು, ಸಂಪ್ರದಾಯಗಳು, ನೀತಿನಿಯಮಗಳನ್ನು, ಕಟ್ಟುಪಾಡುಗಳನ್ನು ವಸ್ತುವಾಗಿಸಿ ತಾನು ಹೇಳಬೇಕಾದುದನ್ನು ನಾಜೂಕಾದ ಶೈಲಿಯಲ್ಲಿ ಅಕ್ಷರರೂಪಕ್ಕಿಳಿಸಿದ ಖ್ಯಾತ ಕಥೆಗಾರ್ತಿ ವೈದೇಹಿ.
    ಅಭಿನಂದನೆಗಳು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter