ಹಿರಿಯ ಪತ್ರಕರ್ತ, ಮಿತ್ರ ಪಿ. ಶ್ರೀಧರ್ ನಾಯಕ್ ಅವರ ‘ಭಾವಲೋಕ’ ಎಂಬ ಪ್ರಬಂಧ ಮತ್ತು ಲೇಖನಗಳ ಸಂಕಲನ ಒಂದು ವೈಶಿಷ್ಟ್ಯಪೂರ್ಣ ಕೃತಿ. ಏಳು ಪ್ರಬಂಧ ಮತ್ತು ಏಳು ಲೇಖನಗಳ ಸಾಹಿತ್ಯಿಕ ಗುಚ್ಛದ ಓದು ನಮ್ಮನ್ನು ಲೇಖಕರ ಭಾವಲೋಕದಲ್ಲಿ ಜೊತೆಯಾಗಿ ವಿಹರಿಸುವಂತೆ ಮಾಡುತ್ತದೆ. ಪ್ರಬಂಧಗಳ ನಡುವೆ ಇಣುಕಿ ಹಾಕುವ ತಿಳಿಹಾಸ್ಯ, ಓದಿಸಿಕೊಂಡು ಹೋಗುವ ಸರಳ ನಿರೂಪಣೆ ಬರಹಗಳ ತೂಕವನ್ನು ಹೆಚ್ಚಿಸಿವೆ.
ಲೇಖಕರು ತಮ್ಮ ಬದುಕಿನುದ್ದಕ್ಕೂ ಹಾಸುಹೊಕ್ಕಾಗಿ ಬಂದ ಸುತ್ತಲಿನ ಪರಿಸರ, ಪ್ರಾಣಿ, ಪಕ್ಷಿ ಸಂಕುಲಗಳ ಜೀವಭಾವ, ಸುತ್ತಲಿನ ಜನರ ವಂಚನೆಯ ಮುಖಗಳನ್ನು ತಾವು ಕಂಡುಂಡ ರೀತಿಯಲ್ಲಿ ಅನಾವರಣಗೊಳಿಸುತ್ತಾರೆ. ವ್ಯಕ್ತಿಚಿತ್ರಣ, ವಿಷಯಗಳ ಪ್ರಸ್ತುತಿ, ನಮ್ಮ ಅರಿವಿಗೆ ಬಾರದ ಸಂಗತಿಗಳನ್ನು ತೆರೆದಿಡುವಲ್ಲಿ ಲೇಖನಗಳು ಗೆದ್ದಿವೆ. ಪ್ರೀತಿಯ ಸಾಕು ನಾಯಿ ರೂಬಿ, ಬೆಕ್ಕು, ಮನೆಸುತ್ತಲಿನ ಪರಿಸರದಲ್ಲಿ ಜೀವಿಸುವ ಗುಬ್ಬಿ, ಗಿಳಿಗಳ ಆಂತರ್ಯವನ್ನು ಅವುಗಳ ಹಾವಭಾವ, ನೋಟದಲ್ಲಿಯೇ ಅರಿಯುವ ಚಾಣಾಕ್ಷತನವನ್ನು ಮೈಗೂಡಿಸಿಕೊಂಡಿರುವ ಲೇಖಕರು ಡಾ. ಮಹಾಬಲೇಶ್ವರ ರಾವ್ ಅಭಿಪ್ರಾಯಪಟ್ಟಂತೆ ಪ್ರಾಣಿವಿಜ್ಞಾನಿಯೇ ಸರಿ. ಪ್ರಬಂಧಗಳ ಉದ್ದಕ್ಕೂ ಹರಿದ ಮಾನವೀಯತೆ ನಾಯಕರ ಮೂಲಭೂತ ಗುಣವೂ ಹೌದು.
‘ತುಂಟಿ ರೂಬಿಯ ದಶಾವತಾರ’ ಪ್ರಬಂಧ ಸಂಕಲನದಲ್ಲಿ ಹಿರಿದಾದ ಬರಹ. ಮೂರು ತಿಂಗಳಿರುವಾಗ ಮನೆಸೇರಿ ಮನೆಯ ಸದಸ್ಯಳಂತೆ ಎಲ್ಲರ ಪ್ರೀತಿಗೆ, ಮೆಚ್ಚುಗೆಗೆ ಪಾತ್ರಳಾದ ರೂಬಿಯ ಜೀವನಚಿತ್ರ ಮನ ತಟ್ಟುವಂತಿದೆ. ಮೂಕ ಪ್ರಾಣಿಯಾದರೂ ರೂಬಿಯ ಹಾವಭಾವ, ಕಣ್ಣೋಟಗಳಲ್ಲೇ ಅದರ ಇಂಗಿತವನ್ನು, ಪ್ರೀತಿಯನ್ನು, ಸಿಟ್ಟನ್ನು, ಅಸಮಾಧಾನವನ್ನು, ನೋವನ್ನು ಕೊನೆಗೆ ‘ಯಾಕೆ ಹೀಗೆ?’ ಎನ್ನುವ ಪ್ರಶ್ನೆಗಳನ್ನು ಅರ್ಥೈಸಿಕೊಂಡು ಅಂತರಂಗದ ಸಂಗಾತಿಯಂತೆ ಸಾಕಿದ ಲೇಖಕರ ಮನೋಭಾವ ಮೆಚ್ಚುಗೆಗೆ ಪಾತ್ರವಾದುದು. ಮನೆಯವರೆಲ್ಲರ ಮಟ್ಟಿನ ಮಗಳಾಗಿ ಒಡನಾಟದ ಸುಖ ಕಂಡ ರೂಬಿಯ ಕೊನೆಕ್ಷಣಗಳು ಕಣ್ಣೀರು ತರಿಸುತ್ತವೆ. ಅಲ್ಲಿ ಒಡಹುಟ್ಟಿದವರನ್ನು ಕಳಕೊಂಡ ನೋವಿನ ಅನಾಥಭಾವ.ಸಾಕುಪ್ರಾಣಿಗಳಾದ ಬೆಕ್ಕು, ನಾಯಿಗಳಲ್ಲಿ ಇರುವ ಸ್ನೇಹಪರತೆ, ನಿಷ್ಠೆ, ಕೃತಜ್ಞತೆ, ಅವುಗಳ ಆಟ, ಜಿಂಕೆ ಕೋತಿಯ ನಡುವೆ ಕಂಡ ಸಹಕಾರದ ಭಾವ ಎಲ್ಲವನ್ನೂ ‘ರೆಕ್ಕೆ, ಬಾಲಗಳ ಲೋಕ’ದಲ್ಲಿ ಭಾವನಾತ್ಮಕವಾಗಿ ಕಂಡರಿಸಿದ್ದಾರೆ. ‘ಪ್ರಾಣಿಗಳಿಗೂ ಅವುಗಳದ್ದೇ ಆದ ಲೋಕವಿದೆ’ ಎನ್ನುವ ಲೇಖಕರ ಮಾತು ಒಳಗಣ್ಣಿಗೆ ಮಾತ್ರ ಕಾಣುವ ಸತ್ಯ.
‘ಗುಬ್ಬಚ್ಚಿಗಳ ಶೋಕ ಪ್ರಸಂಗ’ ದಲ್ಲಿ ಅಳಿಲು ಗುಬ್ಬಚ್ಚಿಗಳು ಆಶ್ರಯ ಕೊಟ್ಟ ಮರವೊಂದರ ಮೇಲೆ ಪರಸ್ಪರ ಹೊಂದಾಣಿಕೆಯಿಂದ ಜೀವಿಸುತ್ತಿದ್ದು ಮುಂದೆ ಆ ಮರ ಧರಾಶಾಯಿಯಾದಾಗ ಕಂಡ ಗುಬ್ಬಚ್ಚಿಗಳ ತಳಮಳ, ಶೋಕ ಪದಗಳಿಗೆ ಮೀರಿದ ಸನ್ನಿವೇಶವನ್ನು ಸೃಷ್ಟಿಸಿದೆ.ಕೂಡಿಹಾಕಿದ ಗಿಳಿಗಳ ಸ್ವಾತಂತ್ರ್ಯಪ್ರಿಯತೆಯನ್ನು ವಿಶದವಾಗಿ ವಿವರಿಸುತ್ತ ಪಕ್ಷಿಗಳ ಸ್ವಚ್ಛಂದತೆ ಅರಿಯದ ಮಕ್ಕಳ ಕುತೂಹಲಕ್ಕೆ ಹಕ್ಕಿಯೊಂದು ಪಂಜರದಲ್ಲಿ ಸತ್ತುಹೋಗುವ ಸಂದರ್ಭದ ನೋವನ್ನು ಲೇಖಕರು ‘ಸ್ಮೃತಿಯ ಕ್ಯಾನ್ವಾಸಿನಲ್ಲಿ ಬಾಲ್ಯದ ರಂಗೋಲಿ’ ಪ್ರಬಂಧದಲ್ಲಿ ಜೀವಾಳವಾಗಿಸಿದ್ದಾರೆ.
‘ವಂಚನೆಗುಂಟು ನೂರೆಂಟು ಮುಖಗಳು’ ಮತ್ತು ‘ಬೆಂಗಳೂರು: ವರ್ಣ ನೂರು, ಸೂತ್ರ ಒಂದೇ’ ಪ್ರಬಂಧಗಳಲ್ಲಿ ಲೇಖಕರು ತಮ್ಮ ಸುತ್ತ ಕಂಡ ವಂಚನೆಯ ಹತ್ತಾರು ಮುಖಗಳನ್ನು, ಅವುಗಳ ವೈವಿಧ್ಯತೆಯನ್ನು ತೆರೆದಿಟ್ಟಿದ್ದಾರೆ. ನಿತ್ಯ ಬದುಕಿನ ಜಂಜಾಟದ ನಡುವೆ ನಮ್ಮ ಅರಿವಿಗೆ ಬಾರದ, ಬಂದರೂ ಅದರತ್ತ ಗಮನಹರಿಯದ ವಂಚನೆಗಳು ನಡೆಯುವ ಬಗೆಯನ್ನು ಇಲ್ಲಿ ವಿವರಿಸಲಾಗಿದೆ.
‘ದೆವ್ವ: ನೆನೆದವರ ಮನದಲ್ಲಿ’ ಪ್ರಬಂಧ ಬಾಲ್ಯದಲ್ಲಿ ಕೇಳಿದ ದೆವ್ವದ ಕತೆಗಳನ್ನು ಭಯಭೀತರಾಗುವಂತೆ ವರ್ಣಿಸುವಲ್ಲಿ ಗೆದ್ದಿದೆ.ಲೇಖನಗಳ ಸಾಲಿಗೆ ಬಂದರೆ ‘ವಕ್ರತೆಗಳಿಗೆ ಕನ್ನಡಿ ಹಿಡಿದ ಖುಷ್ವಂತ್ ಸಿಂಗ್’ ನಿರ್ಭೀತ ಪತ್ರಕರ್ತ / ಲೇಖಕರಾಗಿ ನಮ್ಮ ಮನ ಗೆಲ್ಲುತ್ತಾರೆ. ವ್ಯಕ್ತಿಚಿತ್ರಣ ಅವರ ಬದುಕನ್ನೇ ತೆರೆದಿಟ್ಟಂತಿದೆ. ತಮ್ಮ ವಿಶಿಷ್ಟ ಬರಹಗಳಿಂದ ಮನೆಮಾತಾದ ಅವರು ಕೊನೆಕ್ಷಣದವರೆಗೂ ಬರವಣಿಗೆ ನಿಲ್ಲಿಸದಿದ್ದುದು ಕ್ರಿಯಾಶೀಲ ಪತ್ರಕರ್ತತೆಗೆ ಸಂದ ಮಾದರಿಯೇ ಸರಿ.
ಮಾರಿಯೊ ಮಿರಾಂಡ ಮತ್ತು ಆರ್. ಕೆ. ಲಕ್ಷ್ಮಣ್ ಅವರ ವ್ಯಂಗರೇಖೆ ಜಗತ್ತಿನ ಪರಿಚಯದೊಂದಿಗೆ ಸಂಕ್ಷಿಪ್ತವಾದರೂ ಜೀವನ / ಸಾಧನೆಯನ್ನು ಪ್ರಸ್ತುತ ಪಡಿಸಿದ ಲೇಖನ ‘ಕಮನೀಯ ವ್ಯಂಗರೇಖೆಗಳ ಸರದಾರರು’ ಸೊಗಸಾಗಿದೆ. ದ್ವಂದ್ವದಲ್ಲಿ ಬದುಕು ಸಾಗಿಸುತ್ತಿರುವವರ ಜೀವನಸಂಕಷ್ಟ ‘ದೇಹವೊಂದು; ಮನಸ್ಸು ಇನ್ನೊಂದು’ ಇದರಲ್ಲಿ ವ್ಯಕ್ತವಾಗಿದೆ. ಬೇಹುಗಾರಿಕೆಗೂ ಹೆಣ್ಣು ಹೊರತಲ್ಲ ಎನ್ನುವ ಸತ್ಯವನ್ನು ತಿಳಿಸುತ್ತಾ ಅವಳ ಅಂದಚಂದಗಳ ಜೊತೆಗೆ ಮಿಳಿತವಾಗುವ ತಂತ್ರ, ಕುತಂತ್ರ, ಚಾಣಾಕ್ಷತನವನ್ನು ‘ಬೇಹುಗಾರಿಕೆಯಲ್ಲಿ ಚೆಲ್ಲುಗಾರ್ತಿಯರು’ ಲೇಖನ ಬಿಂಬಿಸಿದರೆ ಅಮರ ಚಿತ್ರಕಥೆಯ ಅನಂತ ಪೈ ಅವರ ಜೀವನ ಪಯಣ, ಸಾಧನೆಯನ್ನು ಬರೆಯುತ್ತಾ ಮಕ್ಕಳಿಗಾಗಿ ಮೀಸಲಾದ ಚಿತ್ರಕಥಾ ಮಾಲಿಕೆಯಿಂದ ಹೆಸರಾದರೂ ಯಾವ ಪುರಸ್ಕಾರಗಳೂ ಲಭಿಸದ ‘ಅಮರ’ ಅನಂತ ಪೈ ಬರಹ ನೋವುಣಿಸುತ್ತದೆ. ಜನಸಂಪರ್ಕಕ್ಕೆ ಅಷ್ಟಾಗಿ ತೆರೆದುಕೊಳ್ಳದ ಕುಡುಬಿ ಜನಾಂಗದವರ ಬದುಕಿನ ಒಳಹೊರಗನ್ನು ಅರಿಯದ ನಮಗೆ ಅವರ ಸಂಸ್ಕೃತಿ, ಜೀವನ ವಿಧಾನ, ಧಾರ್ಮಿಕ ರೀತಿರಿವಾಜುಗಳ ಚಿತ್ರಣಹೊತ್ತ ‘ಮುಗ್ಧತೆಯೇ ಮೂರ್ತಿವೆತ್ತ ಕುಡುಬಿಯರು’ ಲೇಖನ ಬೆರಗುಗೊಳಿಸುತ್ತದೆ. ಜಾನಪದ ಕ್ರೀಡೆ ಕಂಬಳ ಕುರಿತಾದ ‘ವಂಡಾರು ಕಂಬಳ: ವಿಭಿನ್ನ, ವೈಶಿಷ್ಟ್ಯಪೂರ್ಣ’ ಬರಹ ಅಲ್ಲಿನ ಸಾಂಪ್ರದಾಯಿಕ ವೈಶಿಷ್ಟ್ಯಗಳಿಂದ, ನಂಬಿಕೆ, ಪದ್ಧತಿಗಳಿಂದ ಹೊಸಲೋಕವೊಂದನ್ನು ತೆರೆದಿಡುತ್ತದೆ.
ಬರಹಗಳಿಗೆ ಒದಗಿಬಂದ ಚಿತ್ರಗಳು, ರೇಖಾಚಿತ್ರಗಳು, ಕ್ಯಾರಿಕೇಚರ್‌ಗಳು ಅವುಗಳ ಒಟ್ಟಂದಕ್ಕೆ ನ್ಯಾಯ ಒದಗಿಸಿವೆ. ನಮ್ಮೊಳಗಿನ ಭಾವದೊಂದಿಗೆ ಪಿಸುಗುಡುವ ಸಂಗಾತಿಯಾಗಿ ಸಾಗುವ ‘ಭಾವಲೋಕ’ ಎಲ್ಲರೂ ಒಮ್ಮೆ ಓದಬಹುದಾದ ಹೊತ್ತಿಗೆ. ಮಿತ್ರ ಪಿ. ಶ್ರೀಧರ್ ನಾಯಕ್ ಅವರಿಂದ ಇನ್ನಷ್ಟು ಭರವಸೆಯ ಸಾಹಿತ್ಯ ಕೃತಿಗಳು ಹೊರಬರಲಿ ಎಂದು ಹಾರೈಸುತ್ತೇನೆ.
4 thoughts on “‘ಭಾವಲೋಕ’ದೊಳಗೊಂದು ಸುತ್ತು”
ಪುಸ್ತಕದ ಬಗೆಗಿನ ವಿಮರ್ಶೆ ಚನ್ನಾಗಿದೆ.
ಧನ್ಯವಾದಗಳು
ಭಾವ ಲೋಕಕ್ಕೆ ಇಣುಕಿದ ಹಿತ ಅನುಭವ ನಿಮ್ಮ ಪುಸ್ತಕ ವಿಮರ್ಶೆ ನೀಡಿದ್ದು ಸುಳ್ಳಲ್ಲ.
ಧನ್ಯವಾದಗಳು