ನನಗೇ ಆಗ ೫೫ ವರ್ಷ
ರಂಗಪ್ಪನವರಿಗೆ ೯೦
ರಂಗಪ್ಪನವರ ತಂದೆ ಮಾದಪ್ಪನವರಿಗೆ ೧೨೫-೧೩೦
ರಂಗಪ್ಪ ಮಾದಪ್ಪನವರ ಬಗ್ಗೆ ಪುಸ್ತಕ ಬರೆದದ್ದು ೪೯ ವರ್ಷಗಳ ಹಿಂದೆ
ನನಗೆ ಬೇಕಾಗಿದ್ದುದು ೧೯೧೩-೧೫ರ ಕಾಲಾವಧಿಯ ಅಂದರೆ
೧೦೦-೧೦೬ ವರ್ಷಗಳ ಹಿಂದಿನ ವಿದ್ಯಮಾನದ ಬಗ್ಗೆಯ ನೋಟಗಳು
ಇಷ್ಟೆಲ್ಲ ಆಗಿ ನನ್ನ ಬರಹ ಪ್ರಕಟವಾಗಲಿಲ್ಲ
ರಂಗಪ್ಪ ತೀರಿಕೊಂಡದ್ದು ೯೨ನೇ ವಯಸ್ಸಿನಲ್ಲಿ
ಮಾದಪ್ಪನವರು ಆ ಕಾಲಕ್ಕೇ ಆಧುನಿಕ ತಂತ್ರಜ್ಞಾನದ ಬಗ್ಗೆ ಒಲವಿದ್ದವರು. ಮುದ್ರಣ, ರೇಷ್ಮೆ, ಕಬ್ಬಿಣ, ಉಕ್ಕು ಬಳಸುವ ಕರಕುಶಲ ವಸ್ತುಗಳಿಗೆ ತಂತ್ರಜ್ಞಾನದ ಅಳವಡಿಕೆ, ಇದರಲ್ಲೆಲ್ಲ ಮುನ್ನೋಟ ತೋರಿದವರು. ಸಂಬಂಧಪಟ್ಟ ಸಂಘ ಸಂಸ್ಥೆಗಳನ್ನು ಸ್ಥಾಪಿಸಿದವರು. ರಾಮಕೃಷ್ಣ-ವಿವೇಕಾನಂದರ ಮಠದವರಾಗಿದ್ದರೂ ಮಕ್ಕಳನ್ನು ದಂಡಿನ ಪ್ರದೇಶದ ಕಾನ್ವೆಂಟ್ಗೆ ಹಾಕಿದವರು. ನಗರದ ಎಲ್ಲಾ ಸಂಘ ಸಂಸ್ಥೆಗಳಲ್ಲೂ ಪದಾಧಿಕಾರಿ, ಕಾರ್ಯಕಾರಿಸಮಿತಿ ಸದಸ್ಯ. ಒಕ್ಕಲುತನದ ಹಿನ್ನೆಲೆಯಿಂದ ಬಂದಿದ್ದರು. ವಿದ್ಯಾವಂತರಲ್ಲದ, ಆಧುನಿಕರಲ್ಲದ ಒಕ್ಕಲು ಮಂದಿಯ ಬಗ್ಗೆ ತಾತ್ಸಾರ, ನಿವೃತ್ತರಾದ ಮೇಲೂ ಆ ಕಾಲಕ್ಕೇ ನಾನೂರು ರೂಪಾಯಿ ಪಿಂಚಣಿ ಪಡೆಯುತ್ತಿದ್ದವರು.
ಇನ್ನು ಮುಂದೆ ಮೈಸೂರಿನ ದಿವಾನರಾಗಬೇಕಾದವರಿಗೆ ಕೇವಲ ರೆವಿನ್ಯೂ ಇಲಾಖೆ, ಜಮಾಬಂದಿ, ಭೂಕಂದಾಯ, ಮುಜರಾಯಿ ಇಂತಹ ಅನುಭವವಿದ್ದರೆ ಮಾತ್ರ ಸಾಕಾಗದು, ಒಳ್ಳೆಯ ತಂತ್ರಜ್ಞರಾಗಿರಬೇಕು, ವಿದೇಶ ಪ್ರವಾಸದ ಅನುಭವವಿರಬೇಕು ಎಂದು ನಾಲ್ವಡಿಯವರಿಗೇ ಪತ್ರ ಬರೆದು, ಎಂವಿಯಂತವರು ದಿವಾನರಾಗಲು ಬೇಕಾದ ವಾತಾವರಣ-ಮನೋಧರ್ಮವನ್ನು ರೂಪಿಸಿದವರು. ನಾಲ್ವಡಿಯವರ ಜೊತೆ ಖಾಸಾ ಒಡನಾಟವಿದ್ದವರು.
ನಾನು ಬರೆದಯಬೇಕೆಂದಿದ್ದ ಇತಿಹಾಸದ ಪುಸ್ತಕಕ್ಕೆ ಬೇಕಾಗಿದ್ದ ವಿವರಗಳು, ನೋಟಗಳು ಆ ಕಾಲಕ್ಕೆ, ಆ ವಿದ್ಯಮಾನಕ್ಕೆ ಸಂಬಂಧಿಸಿದ್ದು. ಮಾದಪ್ಪನವರನ್ನು ಕುರಿತದ್ದು. ರಂಗಪ್ಪನವರು ಬರೆದ ಪುಸ್ತಕದಲ್ಲಿ ಇದನ್ನೆಲ್ಲ ಕುರಿತು ಒಂದೆರಡು ಎಳೆಗಳಿದ್ದವು. ಹಾಗಾಗಿ ಅವರನ್ನು ಭೇಟಿ ಮಾಡಬೇಕು, ಚರ್ಚಿಸಬೇಕು ಎಂದು ಮಾಲೂರು ಮೂರ್ತಿಯವರನ್ನು ಕೇಳಿಕೊಂಡೆ.
ಸ್ವತಃ ರಂಗಪ್ಪನವರೇ ಭೂಗೋಳಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾಗಿದ್ದವರು. ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಪುಸ್ತಕಗಳನ್ನು ಪ್ರಕಟಿಸುವುದರ ಜೊತೆಗೆ ಹೊಸ ದೃಷ್ಟಿಕೋನವೊಂದನ್ನು ಕೂಡ ಕೊಟ್ಟವರು. ತಂದೆ ಮಾದಪ್ಪನವರ ಹಾಗೆ ಅವರು ಕೂಡ ಹತ್ತಾರು ಸಂಸ್ಥೆಗಳಲ್ಲಿ ಒಡನಾಟವಿಟ್ಟುಕೊಂಡಿದ್ದರೂ, ಕ್ರೀಡೆ ಮತ್ತು ನಾಟಕಗಳ ಬಗ್ಗೆ ಹೆಚ್ಚು ಒಲವು. ಶೇಕ್ಸ್ಪಿಯರ್ ಮತ್ತು ಟೆನಿಸ್ ಪ್ರೇಮಿ. ಪಾಶ್ಚಾತ್ಯ ಸಂಗೀತದ ಬಗ್ಗೆ ತೀವ್ರವಾದ ಒಲವು.
ಮಾಲೂರು ಮೂರ್ತಿಯವರ ಮೂಲಕ ನಾನು ರಂಗಪ್ಪನವರನ್ನು ಭೇಟಿ ಮಾಡುವ ಹೊತ್ತಿಗೆ ರಂಗಪ್ಪನವರು ಪಿತ್ರಾರ್ಜಿತವಾಗಿ ಬಂದಿದ್ದ ತಮ್ಮ ದೊಡ್ಡ ಸೈಟನ್ನು ಮಕ್ಕಳಿಗೆಲ್ಲ ಹಂಚಿ, ಸೈಟಿನ ಮಧ್ಯೆಯ ಹಳೆಯ ಮನೆಯ ಭಾಗವನ್ನು ಅದು ಇದ್ದ ಹಾಗೇ ಉಳಿಸಿಕೊಂಡು ಮೂಲ ಮೂರ್ತಿಯಂತೆ ವಾಸವಾಗಿದ್ದರು. ಅವರ ಹಳೆಯ ಮನೆ ಸುತ್ತ ಮಕ್ಕಳು ಹೊಸ ಕಾಲದ ಅಗತ್ಯಗಳಿಗೆ, ಅನುಕೂಲಗಳಿಗೆ ತಕ್ಕಂತೆ ಮನೆ ಕಟ್ಟಿಕೊಂಡರೂ, ತಂದೆಯವರೊಡನೆ ಯಾವ ಒಡನಾಟವನ್ನೂ ಇಟ್ಟುಕೊಂಡಿರಲಿಲ್ಲ. ಕನಿಷ್ಠ ಪಕ್ಷ ಹೋಗಿ ಬಂದೂ ಕೂಡ ಮಾಡುತ್ತಿರಲಿಲ್ಲ. ವಯೋಸಹಜ ಕಾಯಿಲೆ, ದೌರ್ಬಲ್ಯಗಳಿಂದ ಪೀಡಿತರಾಗಿದ್ದ ರಂಗಪ್ಪ, ಆಳು-ಕಾಳು, ಅಡುಗೆಯವರ, ದಾದಿಗಳ ಮೂಲಕ ತಮ್ಮನ್ನು ತಾವೇ ನೋಡಿಕೊಳ್ಳುತ್ತಿದ್ದರು. ಇವರಿಗೆಲ್ಲ ಕೈ ತುಂಬಾ ಸಂಬಳ ಕೊಡುತ್ತಿದ್ದರೂ ಯಾರೊಬ್ಬರೂ ಹೆಚ್ಚು ದಿನ ರಂಗಪ್ಪನವರ ಜೊತೆ ಏಗಲು ಸಾಧ್ಯವಾಗುತ್ತಿರಲಿಲ್ಲ. ಇದಕ್ಕೆ ರಂಗಪ್ಪನವರ ಹರಕು ಬಾಯಿ, ಗ್ರಾಮ್ಯ ಭಾಷೆಯಲ್ಲಿ ಬೈಯ್ಯುವುದು, ಒರಟಾಗಿ ವರ್ತಿಸುವುದು ಕೂಡ ಕಾರಣವಾಗಿತ್ತು. ರಂಗಪ್ಪನವರು ಬರೆದಿರುವ ಪುಸ್ತಕಗಳು ಪ್ರವಾಸೋದ್ಯಮಕ್ಕೆ ಮಾತ್ರ ಸಂಬಂಧಿಸದೆ ಕನ್ನಡದ ಬೈಗುಳ ಮತ್ತು ಗಾದೆ ಮಾತುಗಳ ಬಗ್ಗೆ ಕೂಡ ಇತ್ತು. ಮೊದಮೊದಲು ಇಂತಹ ಪುಸ್ತಕಗಳು ಪ್ರಕಟವಾದಾಗ ಭಾಷಾಶಾಸ್ತ್ರಜ್ಞರು, ಸಂಸ್ಕೃತಿ ಚಿಂತಕರು ಸ್ವಾಗತಿಸಿದ್ದರು. ಆದರೆ ಒಂದೇ ರೀತಿಯ ಮಾಹಿತಿಯನ್ನು ಮತ್ತೆ ಮತ್ತೆ ಹೊಸ ಪುಸ್ತಕಗಳಾಗಿ ಪ್ರಕಟಿಸುವುದಕ್ಕೆ ಹೊರಟಾಗ, ಪುನರ್ ಮುದ್ರಿಸುವುದಕ್ಕೆ ಹೊರಟಾಗ, ಇವರಿಂದ ದೂರ ಸರಿದಿದ್ದರು. ಇದನ್ನು ಕೂಡ ನನಗೆ ಮಾಲೂರು ಮೂರ್ತಿಯವರೇ ತಿಳಿಸಿದ್ದರು. ರಂಗಪ್ಪನವರ ಜೊತೆ ಮಾತನಾಡುವಾಗ ಇದೆಲ್ಲ ಅಷ್ಟು ಮುಖ್ಯವಾದ ಸಂಗತಿಯಾಗಬಾರದು ಎಂದು ಕೂಡ ಎಚ್ಚರಿಸಿದ್ದರು.
ರಂಗಪ್ಪ ತಮ್ಮ ತಂದೆ ಮಾದಪ್ಪನವರ ಬಗ್ಗೆ ಬರೆದ ಪುಸ್ತಕ, ಮಗ ತಂದೆಯ ಬಗ್ಗೆ ಬರೆದ ಪುಸ್ತಕ ಮಾತ್ರವಾಗಿರದೆ, ವಸ್ತುನಿಷ್ಠವಾಗಿತ್ತು ಮತ್ತು ವ್ಯಾಪ್ತಿ ಕೂಡ ವಿಸ್ತಾರವಾಗಿತ್ತು. ಆ ಕಾಲದ ಸಾಮಾಜಿಕ ಕೌಟುಂಬಿಕ ವಿದ್ಯಮಾನಗಳ ಬಗ್ಗೆ ಕೂಡ ಒಳನೋಟಗಳನ್ನು ನೀಡಿದ್ದರು. ಸದರಿ ಪುಸ್ತಕದ ಬಗ್ಗೆ ನಾನು ವಿಮರ್ಶೆ ಬರೆದು ಹೆಸರು ಪಡೆದಿದ್ದರೂ, ರಂಗಪ್ಪನವರು ತಮ್ಮ ತಂದೆಯ ಬಗ್ಗೆ ಹೇಳಬೇಕಾದ ಸಂಗತಿಗಳು ಇನ್ನೂ ಬಹಳಷ್ಟಿವೆ ಎಂಬ ಭಾವನೆ ಬರುತ್ತಿತ್ತು. ಈಗ ಪುಸ್ತಕದ ಪ್ರತಿಗಳು ಕೂಡ ಸಿಗುತ್ತಿಲ್ಲ. ಹಾಗಾಗಿ ಆ ಪುಸ್ತಕವನ್ನು ಪುನರ್ ಮುದ್ರಿಸಬಹುದೆ? ಮುದ್ರಿಸುವಾಗ ಬಿಟ್ಟುಹೋಗಿರುವ ಸಂಗತಿಗಳನ್ನು ಕುರಿತು ಬರೆಯಬಹುದೆ? ಎಂಬ ಸೂಚನೆಯನ್ನು ಕೊಡಬೇಕು. ಅಂತಹ ಸೂಚನೆ ಕೊಡಲು ಸಾಧ್ಯವಾಗದೇ ಹೋದರೆ, ನಾಲ್ವಡಿಯವರ ವಿವೇಚನೆ ಕುರಿತು ನಾನು ಬರೆಯಬೇಕೆಂದಿರುವ ಪುಸ್ತಕಕ್ಕೆ ಕೆಲವು ಪೂರಕ ಮಾಹಿತಿಗಳನ್ನಾದರೂ ಸಂಗ್ರಹಿಸಬೇಕು ಎಂದೇ ನಾನು ಮಾಲೂರು ಮೂರ್ತಿಯವರಿಗೆ ಮತ್ತೆ ಮತ್ತೆ ಹೇಳಿದ್ದುದು.
ನಾವು ಮೊದಲು ಭೇಟಿ ಮಾಡಿದ ದಿನ ರಂಗಪ್ಪ ಹಳೆಯ ಮನೆಯ ಮಧ್ಯಭಾಗದಲ್ಲಿ ತೊಟ್ಟಿ ಎದುರಿಗೆ ಕುಳಿತಿದ್ದರು. ತೊಟ್ಟಿ, ಕಂಭ, ಮಂಗಳೂರು ಹೆಂಚು, ಕೆಂಪುಗಾರೆ ಎಲ್ಲವನ್ನೂ ಇನ್ನೂ ಹಾಗೇ ಉಳಿಸಿಕೊಂಡಿದ್ದರು. ತೊಟ್ಟಿ ಎದುರಿಗೆ ರಂಗಪ್ಪ ಕುಳಿತಿದ್ದರೂ ಅವರು ಕುಳಿತಿದ್ದ ಆರಾಮ ಕುರ್ಚಿ ಗೋಡೆಗೆ ಹತ್ತಿರದಲ್ಲಿ ಇದ್ದುದರಿಂದ ಆ ಭಾಗದಲ್ಲಿ ಸ್ವಲ್ಪ ಮಸುಕಾಗೇ ಇತ್ತು. ದಟ್ಟಿ ಪಂಚೆ ಮತ್ತು ಖಾದಿ ಬನಿಯನ್ ಧರಿಸಿದ್ದ ರಂಗಪ್ಪ ಆರಾಮ ಕುರ್ಚಿಯಲ್ಲಿ ಕುಳಿತೇ ಒದ್ದಾಡುತ್ತಿರುವಂತೆ ಕಾಣುತ್ತಿತ್ತು. ಎದೆ ಭಾಗದಲ್ಲಿ ಬೆಳೆದಿದ್ದ ಬಿಳಿ ಕೂದಲುಗಳು ಬನಿಯನ್ನಿಂದ ಹೊರಗೆ ಚೆನ್ನಾಗಿಯೇ ಕಾಣಿಸುತ್ತಿತ್ತು. ಆರಾಮ ಕುರ್ಚಿಯ ಎದುರಿಗೊಂದು ಕರಿಮರದ ಪುಟ್ಟ ಸ್ಟೂಲು. ಅದರ ಮೇಲೊಂದು ಜಾಮಿಟ್ರಿ ಬಾಕ್ಸ್, ನೀರಿನ ಚೊಂಬಿತ್ತು, ಲೋಟವಿರಲಿಲ್ಲ. ಜಾಮಿಟ್ರಿ ಬಾಕ್ಸ್ ತುಂಬಾ ಮ್ಯಾಗ್ನೆಟ್ ತುಂಡುಗಳಿದ್ದವು ಎಂದು ನಂತರ ಗೊತ್ತಾಯಿತು. ರಂಗಪ್ಪನವರ ಸಹಾಯಕರೊಬ್ಬರು ದೊಡ್ಡ ಧ್ವನಿಯಲ್ಲಿ ದಿನಪತ್ರಿಕೆಯ ಭಾಗಗಳನ್ನು ಓದುತ್ತಿದ್ದರು. ಎರಡು-ಮೂರು ವಾಕ್ಯ ಓದಿದ ನಂತರ ರಂಗಪ್ಪ ಮುಖ ಕಿವುಚಿದರು. ಓದುವವರು ಮುಂದಿನ ಪುಟಕ್ಕೆ ಹೋಗುತ್ತಿದ್ದರು. ಇದೆಲ್ಲ ಒಂದು ಹುಡುಗಾಟ ಎಂಬಂತೆ ಹಾಗೆ ಪತ್ರಿಕೆಗಳಿಂದ ಓದುತ್ತಿದ್ದವರು ನಮ್ಮನ್ನು ನೋಡಿ ಮುಗುಳ್ನಕ್ಕರು. ಮೂರ್ತಿಯವರಿಗೆ ಆತನ ಪರಿಚಯವಿತ್ತೆಂದು ಕಾಣುತ್ತದೆ. ಓದುವವರು ಅವರೆಡೆಗೆ ನೋಡಿದಾಗ ನಗೆ ಸ್ವಲ್ಪ ಧಾರಾಳವಾಗಿಯೇ ಇತ್ತು. ಹತ್ತಿರ ಹೋದಾಗ ಗೊತ್ತಾಯಿತು, ರಂಗಪ್ಪ ಎರಡು ಕೈಯಲ್ಲೂ ಬೇರೆ ಬೇರೆ ಆಕಾರದ ಮ್ಯಾಗ್ನೆಟ್ ತುಂಡುಗಳನ್ನು ಇಟ್ಟುಕೊಂಡು ಅವುಗಳನ್ನು ಹತ್ತಿರಕ್ಕೆ ತರುವುದು ಮತ್ತು ದೂರಕ್ಕೆ ತೆಗೆದುಕೊಂಡು ಹೋಗುವುದನ್ನೇ ಮತ್ತೆ ಮತ್ತೆ ಮಾಡುತ್ತಾ ಆಟವಾಡುತ್ತಿದ್ದರೆಂಬುದು. ರಂಗಪ್ಪನವರ ಎದುರಿಗೆ ಯಾರೂ ಕೂರುವ ಹಾಗಿರಲಿಲ್ಲ ಎಂದು ಕಾಣುತ್ತದೆ. ಒಂದೇ ಒಂದು ಕುರ್ಚಿಯೂ ಇರಲಿಲ್ಲ. ತೊಟ್ಟಿಯ ಆ ಭಾಗದಲ್ಲಿ ಒಂದು ಬೆಂಚಿತ್ತು. ಬೇಕಿದ್ದರೆ, ಅಲ್ಲಿ ನಾನು ಕುಳಿತುಕೊಳ್ಳಬಹುದೆಂದು ದಿನಪತ್ರಿಕೆಯಿಂದ ಓದುತ್ತಿದ್ದವರು ಸೂಚಿಸಿದರು. ನಾನು ಒಲ್ಲದ ಮನಸ್ಸಿನಿಂದ ಆ ಕಡೆ ಹೋದೆ.
ಮೂರ್ತಿ ಅವರ ಹತ್ತಿರ ಹೋಗಿ ನನ್ನ ಬಗ್ಗೆ, ನಾನು ಬರೆಯಬೇಕೆಂದಿರುವ ಪುಸ್ತಕದ ಬಗ್ಗೆ ಅವರ ಕಿವಿಯ ಹತ್ತಿರ ಬಗ್ಗಿ ಹೇಳುತ್ತಿದ್ದರು. ಸರಿಯಾಗಿ ಹೇಳಬೇಕೆಂದರೆ, ಸೂರು ಕಿತ್ತು ಹೋಗುವ ಹಾಗೆ ಕಿರುಚಿಕೊಳ್ಳುತ್ತಿದ್ದರು. ಹಾಗೆ ಕಿರುಚುತ್ತಲೇ ರಂಗಪ್ಪನವರ ಕೈಲಿದ್ದ ಮ್ಯಾಗ್ನೆಟ್ ತುಂಡುಗಳನ್ನು ಕೈಯಿಂದ ಬಿಡಿಸಿ ಜಾಮಿಟ್ರಿ ಬಾಕ್ಸ್ನೊಳಗೆ ಇಟ್ಟು ನಂತರ ಅವರ ಕೈಗಳನ್ನು ಮೃದುವಾಗಿ ಒತ್ತುತ್ತಲೇ ಇದ್ದರು.
ಒಂದೆರಡು ನಿಮಿಷದಲ್ಲೇ ರಂಗಪ್ಪ ಬವಳಿ ಬಂದವರಂತೆ ಮೈಯೆಲ್ಲಾ ನಡುಗಿಸಿಕೊಂಡು ಗೊಗ್ಗರು ಧ್ವನಿಯಲ್ಲಿ ಕರ್ಕಶವಾಗಿ ಚೀರಲಾರಂಭಿಸಿದರು.
“ಅವನೊಬ್ಬ ಅಯೋಗ್ಯ, ಮನೆಹಾಳ. ಆವಾಗ ಅವನ ಬಗ್ಗೆ ಪುಸ್ತಕ ಬರೆದಿದ್ದೇ ದೊಡ್ಡ ತಪ್ಪು. ಈಗ ಮತ್ತೆ ಅದನ್ನೆಲ್ಲ ಪ್ರಿಂಟ್ ಮಾಡೋಕೆ ಆಗೋಲ್ಲ. ಹೌದು, ಪುಸ್ತಕದ ಪ್ರತಿಗಳು ಯಾರಿಗೂ ಸಿಗುತ್ತಿಲ್ಲ. ಒಳ್ಳೆಯದೇ ಆಯ್ತಲ್ಲ. ನಾನಂತೂ ಮರು ಮುದ್ರಣಕ್ಕೆ Permission ಕೊಡೋಲ್ಲ. ಪೋಲೀಸನೋರಿಗೆ ಹೇಳ್ತೀನಿ. ನಮ್ಮಪ್ಪನ ಬಗ್ಗೆ ಇರುವ ಸತ್ಯವೆಲ್ಲ ಪುಸ್ತಕದಿಂದ ಹೊರಗಡೆಯೇ ಇದೆ. ಮೊದಲು ಯಾರು ಯಾರು ಪುಸ್ತಕ ಕೊಂಡುಕೊಂಡಿದ್ದರೋ ಅವರ ವಿಳಾಸ ಕೊಡಿ. ಡಬಲ್ ದುಡ್ಡು ಕೊಟ್ಟು ಎಲ್ಲವನ್ನೂ ಕೊಂಡುಕೋತೀನಿ.” ಕೈ ಮುಗಿದು ಕೇಳಿಕೊಳ್ಳಲು ಆಸೆಯಿತ್ತು ಎಂದು ಕಾಣುತ್ತದೆ, ಕೈ ಎತ್ತಲು ಪ್ರಯತ್ನಿಸಿದರು, ಆಗಲಿಲ್ಲ. ಮತ್ತೊಬ್ಬರು ಸಹಾಯಕರು ಬಂದು ಮಾತ್ರೆ ನುಂಗಿಸಿ ಔಷಧಿ ಕುಡಿಸಿದರು. ಔಷಧಿಯನ್ನು ಆತುರದಿಂದ ಕುಡಿಯಲು ಹೋಗಿ ನೆತ್ತಿ ಹತ್ತಿ ಆರಾಮ ಕುರ್ಚಿಯಲ್ಲೇ ಮೊದಲಿಗಿಂತ ಹೆಚ್ಚು ಚಡಪಡಿಸಿದರು. ರಂಗಪ್ಪ ಸಮಾಧಾನವಾದ ಮೇಲೆ ಮೂರ್ತಿ ನನ್ನನ್ನು ಹತ್ತಿರ ಕರೆದರು. ಮತ್ತೆ ಅವರ ಕಿವಿಯಲ್ಲಿ ನನ್ನ ಪರಿಚಯ ಉಸುರಿದರು. ಮುಖದಲ್ಲಿ ಯಾವ ಪ್ರತಿಕ್ರಿಯೆಯೂ ಕಾಣಲಿಲ್ಲ. ನಾಲ್ಕಾರು ನಿಮಿಷಗಳ ನಂತರ ಮತ್ತೆ ಮೊದಲು ಹೇಳಿದ್ದನ್ನೇ ಬಡಬಡಿಸಿದರು. ಈಗ ಮಾತುಗಳು ರೇಗುವ ಧಾಟಿಯಲ್ಲಿರಲಿಲ್ಲ. ಮೂರ್ತಿ ಅವರನ್ನು ಪುಸಲಾಯಿಸುವಂತೆ, ನಿಮಗೆ ನಮಸ್ಕಾರ ಮಾಡ್ತಾರೆ ಅಂದರು. ನಾನು ಅವರ ಎರಡು ಕೈಗಳನ್ನೂ ಅದುಮಿ ನಂತರ ತೊಡೆಗಳನ್ನು ಮುಟ್ಟಿದೆ. ಅವರಿಂದ ಏನೂ ಪ್ರತಿಕ್ರಿಯೆ ಬರಲಿಲ್ಲವಾಗಿ ಮತ್ತೆ ಅವರ ಎರಡು ಕೈಗಳನ್ನು ಜೋಡಿಸಿ ಹಿಡಿದೆ. ಸುಕ್ಕು ಸುಕ್ಕಾದ ಚರ್ಮ. ತಣ್ಣನೆಯ ಕೈ. ಅಂಗೈ ದಪ್ಪವಾಗಿದೆ, ಒರಟಾಗಿದೆ ಅನಿಸಿತು. ಹಾಗೇ ಸ್ವಲ್ಪ ಹೊತ್ತು ಮೃದುವಾಗಿ ಅವರ ಎರಡೂ ಕೈಗಳನ್ನೂ ಹಿಡಿದೇ ಇದ್ದೆ. ಮತ್ತೆ ರಂಗಪ್ಪ ಮಾತನಾಡಿದಾಗ ಧ್ವನಿ ಸಮಾಧಾನದಿಂದ ಇತ್ತು. ಮಾತುಗಳು ಕೂಡ ಸ್ಪಷ್ಟವಾಗಿದ್ದವು.
ನಿಮ್ಮ ಪುಸ್ತಕದ್ದು ಒಳ್ಳೆ ಯೋಚನೆ. ಮಾಡಿಕೊಳ್ಳಿ. ನನ್ನ ಪುಸ್ತಕದ ಬಗ್ಗೆ ಏನೂ ಹೇಳಬೇಡಿ, ಕೇಳಬೇಡಿ.
ಇಲ್ಲ ಸಾರ್, ನಿಮ್ಮ ತಂದೆಯ ಪತ್ರಗಳು, ನಿಮ್ಮ ಟಿಪ್ಪಣಿ, ಎಲ್ಲ ಒಳನೋಟಗಳಿಂದ ಕೂಡಿವೆ. ಅದನ್ನೆಲ್ಲ ಬಳಸಿಕೊಂಡರೆ ನನ್ನ ಪುಸ್ತಕದ ಬೆಲೆ ಹೆಚ್ಚುತ್ತದೆ. ಅನುಮತಿ ಕೊಡಿ. ಅದಕ್ಕಿಂತ ಮುಖ್ಯವಾಗಿ ನಿಮ್ಮ ತಂದೆಯವರನ್ನು ಕುರಿತ ಪುಸ್ತಕವನ್ನು ಮರು ಮುದ್ರಿಸಿ; ಇನ್ನೂ ನೀವು ಸೇರಿಸುವಂತದ್ದು ಇದೆ.
ಇಷ್ಟನ್ನು ವಿಜ್ಞಾಪಿಸಿಕೊಳ್ಳಲು ನನಗೆ ನಾಲ್ಕಾರು ನಿಮಿಷ ಬೇಕಾಯಿತು. ಅವರಿಗೆ ದಣಿವಾಗಿರಬಹುದೆಂದು ಸಹಾಯಕರು ಸೂಚಿಸಿದರು. ನಮಗೂ ಹಾಗೆನಿಸಿತು. ನಾನು ನನ್ನ ಕೈಗಳನ್ನು ಅವರ ಕೈಗಳಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ, ರಂಗಪ್ಪನವರೇ ಹಿಡಿತವನ್ನು ಬಿಗಿಗೊಳಿಸಿ, ತಿಳಿಹೇಳುವ ಧಾಟಿಯಲ್ಲಿ ಆಳದಿಂದೆಂಬಂತೆ ಮಾತನಾಡಿದರು.
ನಿಮ್ಮ ಪುಸ್ತಕದ ಬೆಲೆ ಅಲ್ಲಪ್ಪಾ, ಪ್ರಶ್ನೆ ಇರೋದು ನನ್ನ ಪ್ರಾಮಾಣಿಕತೇದು. ನಾನು ಏನು ಬರೆದಿದ್ದೀನಿ ಅದರ ಪ್ರಕಾರ ಅವರ ಚಿತ್ರ ಇದೆ. ಆದರೆ ಅವರು ನಮ್ಮ ತಂದೆಯಷ್ಟೇ ಅಲ್ಲ, ಇನ್ನೂ ಏನೇನೋ ಆಗಿದ್ದರು. ಅದನ್ನೆಲ್ಲ ಬರೀಬೇಕಾಗಿತ್ತು. ಆವಾಗ ಬೇಡ ಅನಿಸಿತು. ಅಥವಾ ಮುಖ್ಯ ಎನಿಸಲಿಲ್ಲ. ಈಗ ಹಾಗಲ್ಲ, ಇನ್ನೇನು ನಾನೇ ಸತ್ತು ಹೋಗ್ತೀನಿ. ಮತ್ತೆ ಪುಸ್ತಕವನ್ನು ಪುನರ್ಮುದ್ರಿಸುವುದು ಅಂದರೆ ಸುಳ್ಳನ್ನು ಇನ್ನೆಷ್ಟು ಕಾಲ, ಇನ್ನೆಷ್ಟು ಜನಕ್ಕೆ ಹರಡುವುದು. ಸಾಯುವ ಮುಂಚೆ ಗೊತ್ತಿದ್ದೂ ಗೊತ್ತಿದ್ದೂ ಇಂತಹ ಕೆಲಸ ಮಾಡುವುದು ಸರಿಯಲ್ಲ. ಒಂದು ಮಾತು ತಿಳ್ಕೋಳಿ. ಯಾವತ್ತೂ ಯಾರಿಗೂ ಅವರವರ ತಾಯಿ-ತಂದೆ ಬಗ್ಗೆ ಎಲ್ಲ ನಿಜಾನೂ ಹೇಳೋಕ್ಕಾಗೋಲ್ಲ.” ಮಾತು ನಿಲ್ಲಿಸಿದರು. ನಾನು ಮೂರ್ತಿಯವರ ಮತ್ತು ಸಹಾಯಕರ ಮುಖ ನೋಡಿದೆ. ಏನೆಂದು ಉತ್ತರಿಸಬಹುದು ಎಂದು ಯೋಚಿಸಿ ಹೇಳಿದೆ.
ಸಾರ್ ನಿಮ್ಮ ಪುಸ್ತಕದಲ್ಲಿ ಇರುವ facts ಮತ್ತು details ಈಗಲೂ ಪ್ರಸ್ತುತವಾಗಿದೆ.
ನನ್ನ ಮಾತನ್ನು ಮಧ್ಯದಲ್ಲೇ ತಡೆದರು. ಆರಾಮ ಕುರ್ಚಿಯಿಂದ ಏಳುವಂತೆ ಕಂಡರು. ಎಡಗೈಯನ್ನು ಉದ್ದವಾಗಿ ನೀಡಿದರು. ಸಹಾಯಕ ವಾಕಿಂಗ್ ಸ್ಟಿಕ್ ನೀಡಲು ಮುಂದಾದ. ಮೂರ್ತಿ ಬೇಡವೆಂದು ಸೂಚಿಸಿದರು.
“ಏನು ತರುಣರಪ್ಪಾ ನೀವು ಈಗಿನ ಕಾಲದವರು. Facts, Facts ಅಂತೀರಿ. Facts ಅಲ್ಲಪ್ಪ, ಮುಖ್ಯವಾದದ್ದು Truth. Facts ಹೇಳಿ ಕೂಡ ಸತ್ಯವನ್ನು ಮುಚ್ಚಿಡಬಹುದು, ಮುಚ್ಚಿಡ್ತೀವೆ, ಗೊತ್ತಾ.”
ನಾನು, ಮೂರ್ತಿ, ಸಹಾಯಕ ಮೂವರೂ ಮಾತಿಲ್ಲದೆ ತೆಪ್ಪಗೆ ಕುಳಿತೆವು.
ಒಂದೆರಡು ನಿಮಿಷಗಳ ನಂತರ ರಂಗಪ್ಪನವರ ಬಿಕ್ಕಳಿಸಿದರು … ಗಂಟಲು ಕರ ಕರ ಎಂದು ಶಬ್ದ ಮಾಡಿತು.
“ನಿಮಗೇನು ಬೇಕು? ಶರಬತ್, ಫಿಲ್ಟರ್ ಕಾಫಿ? ಅಡುಗೆಯವನಿಗೆ ಹೇಳಿ, ಮಾಡಿಕೊಡುತ್ತಾನೆ. ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಿ. ಮತ್ತಷ್ಟು ಸತ್ಯಕ್ಕೆ ವಂಚನೆ ಮಾಡದೆ ಸಾವಿನ ಹತ್ತಿರ ಹೋಗಬೇಕು ನಾನು!
ರಂಗಪ್ಪನವರು ಆಡಿದ ಮಾತುಗಳಿಂದ ನನಗೆ ನನ್ನ ಬಗ್ಗೆಯೇ ಕೀಳರಿಮೆ ಮೂಡಿತು. ಹಾಗಾಗಿ ಅವರ ಬಗ್ಗೆ ಆಕರ್ಷಣೆಯೂ ಮೂಡಿತು. ಮಾಲೂರು ಮೂರ್ತಿಯವರಿಗೆ ತಿಳಿಸದೆ ನಾನೇ ಮತ್ತೆ ಮತ್ತೆ ಅವರನ್ನು ಭೇಟಿ ಮಾಡಲು ಶುರು ಮಾಡಿದೆ. ಒಂದೊಂದು ಸಲ ರೇಗಿಬಿಡುತ್ತಿದ್ದರು. ಇನ್ನು ಕೆಲವು ಸಲ ಮಾತೇ ಆಡುತ್ತಿರಲಿಲ್ಲ. ಕಣ್ಣು ಮುಚ್ಚಿಕೊಂಡು ಮ್ಯಾಗ್ನೆಟ್ ತುಂಡುಗಳೊಡನೆ ಸದಾ ಆಡುತ್ತಾ ಕುಳಿತಿರುವರು. ಪಾಶ್ಚಿಮಾತ್ಯ ಸಂಗೀತ ತೊಟ್ಟಿಯ ಸುತ್ತಮುತ್ತ ತುಂಬಾ ಕ್ಷೀಣವಾದ ಧ್ವನಿಯಲ್ಲಿ ತರಂಗಗಳನ್ನು ಹೊಮ್ಮಿಸುವಂತೆ ಸಹಾಯಕ ಕ್ಯಾಸೆಟ್ಗಳನ್ನು ಬದಲಿಸುತ್ತಿದ್ದ. ಆಗಾಗ್ಗೆ ಅವರಾಡುತ್ತಿದ್ದ ಮಾತುಗಳನ್ನು ಬಿಟ್ಟರೆ, ಮಾಲಿ, ದಾದಿ, ಅಡುಗೆಯವರು, ಕೈಯಾಳುಗಳ ಓಡಾಟ, ಮಾತುಕತೆ, ನಗು ಅಷ್ಟೇ. ಪೋಸ್ಟ್ಮ್ಯಾನ್, ಕೊರಿಯರ್ನವರು ದಿನಕ್ಕೆರಡು ಸಲ ಪುಸ್ತಕಗಳು, ಪತ್ರಿಕೆಗಳನ್ನು ತರುತ್ತಲೇ ಇದ್ದರು. ಹಾಗೆ ಬಂದ ಪುಸ್ತಕಗಳ, ಪತ್ರಿಕೆಗಳ ಹೆಸರನ್ನು ಹೇಳಿ ಸಹಾಯಕರು ರಂಗಪ್ಪನವರ ತೊಡೆಯ ಮೇಲೆ ಇಡುವರು. ಕೆಲವು ಪುಸ್ತಕಗಳನ್ನು ಪ್ರೀತಿಯಿಂದ ನೇವರಿಸುತ್ತಿದ್ದರು. ಕೆಲವು ಪುಸ್ತಕಗಳನ್ನು ಮುಟ್ಟುತ್ತಲೂ ಇರಲಿಲ್ಲ. ಇನ್ನೂ ಕೆಲವು ಪುಸ್ತಕಗಳು ಆರಾಮ ಕುರ್ಚಿಯಿಂದ, ಅವರ ತೊಡೆಯಿಂದ ಜಾರಿ ಬೀಳುತ್ತಿದ್ದವು.
೯೦ ವರ್ಷ ದಾಟಿದ್ದು, ಯಾವುದೇ ಕ್ಷಣದಲ್ಲಾದರೂ ಸಾಯಬಹುದಾದ ಮನುಷ್ಯನ ಸತ್ಯ ಪ್ರಿಯತೆ, ಋಜುತ್ವದ ಬಗ್ಗೆ ನನ್ನ ಗೌರವ ಹೆಚ್ಚುತ್ತಲೇ ಹೋಯಿತು. ಅದರೆ ನನ್ನ ಅವರ ಆದ್ಯತೆಗಳು ಬೇರೆ ಬೇರೆಯಾಗಿದ್ದವು. ಬದ್ಧತೆ ಕೂಡ. ಅವರು ಹೇಳುತ್ತಿದ್ದುದೆಲ್ಲ ತೀರಾ ಸಾಂಸಾರಿಕ, ಖಾಸಗಿ ವಿಷಯಗಳು. ನನ್ನದು ಚಾರಿತ್ರಿಕ ವ್ಯಕ್ತಿತ್ವದ ಸಂದರ್ಭದ ಬಗ್ಗೆ ಮಾಹಿತಿ ತಿಳಿಯುವ ಕುತೂಹಲ.
“ನಿನ್ನ ಕುತೂಹಲವೇ ಸರಿಯಿಲ್ಲಪ್ಪಾ. You are not motivated by truthಚಿಡಿe ಟಿoಣ moಣivಚಿಣeಜ bಥಿ ಣಡಿuಣh. ದೊಡ್ಡ ದೊಡ್ಡ ಮಾತುಗಳನ್ನಾಡಿ, ಬರೆದು ನೀನಿರುವುದಕ್ಕಿಂತ ದೊಡ್ಡವನಾಗಿ ಕಾಣಿಸಿಕೊಳ್ಳಬೇಕೆಂದ ಆಸೆ ನಿನ್ನದು.”
ನನ್ನನ್ನು ಕಿಚಾಯಿಸುತ್ತಲೇ ಅವರು ಹೇಳಿದ ಮಾತುಗಳು ಇಷ್ಟು.
-೨-
ತಂದೆಗೂ, ತಾಯಿಗೂ ವಯಸ್ಸಿನ, ವಿದ್ಯೆಯ ಅಂತರ ತುಂಬಾ ಇತ್ತು. ಯಾವಾಗಲೂ ಹೆರಿಗೆ, ಬಾಣಂತನ, ಅಡಿಗೆ ಮನೆ, ಅತಿಥಿ ಸತ್ಕಾರದಲ್ಲೇ ನಮ್ಮ ತಾಯಿಯ ಜೀವನವೆಲ್ಲ ಕಳೆದುಹೋಯಿತು. ಬಂಗಾಳಿಗಳು, ಮರಾಠಿಗಳು ಯಾವಾಗಲೂ ನಮ್ಮ ಮನೆ ತುಂಬಾ. ಮನೆ ಡಾಕ್ಟರ್ ವೆಂಕಟೇಶ್ ಅಯ್ಯಂಗಾರ್ ಬೇಡ ಬೇಡ ಎಂದು ಬುದ್ಧಿ ಹೇಳುತ್ತಿದ್ದರೂ ಅಮ್ಮ ಬಸುರಾಗುತ್ತಿದ್ದರು. ಡಾಕ್ಟರ್ಗೆ ಏಳೇ ಮಕ್ಕಳು. ನಮ್ಮ ತಂದೆಗೆ ಹದಿಮೂರು. ಆಗಿನ ಕಾಲದ ಸಂಸಾರಕ್ಕೂ ಸಮಾಜಕ್ಕೂ ಕೂಡ ಇದು ಜಾಸ್ತೀನೇ!
ತಂದೆಗೆ ತಾಯಿಯ ಬಗ್ಗೆ ಮಾತ್ರವಲ್ಲ, ಅವರ ಮನೆತನದ ಬಗ್ಗೆಯೇ ತಾತ್ಸಾರವಿತ್ತು. ಓದು ಬರೆಯಲು ಬಾರದವರು ಎಂಬ ಧೋರಣೆ. ತಾಯಿಯ ಒಬ್ಬ ಅಣ್ಣ ಮಾತ್ರ ಎಲ್.ಎಸ್. ಪಾಸ್ ಮಾಡಿದ್ದ. ಅದನ್ನೇ ಹಿಡ್ಕೊಂಡು ತುಂಬಾ ಹಂಗಿಸೋರು. ತಾಯಿಗೆ ಯಾವಾಗಲೂ ಹೊಡೆದು ಬಡೆದು ಮಾಡೋರು. ನಮ್ಮ ಚಿಕ್ಕಪ್ಪಂದಿರೂ ಕೂಡ ಹೀಗೇ ಹೋಡೀತಿದ್ರು. ಹತ್ತನೇ ಹೆರಿಗೇಲಿ ನಮ್ಮ ತಾಯಿಯನ್ನು ಹಿಡಿದುಕೊಂಡ ಸನ್ನಿ ರೋಗ ಸಾಯುವ ತನಕ ಬಿಡಲೇ ಇಲ್ಲ.
Merchant Co-Operative ಒಳಗಡೆ ಹುಳ ಹಿಡಿದೆದೆ ಅನ್ನೋದು ಚೆನ್ನಾಗಿ ಗೊತ್ತಿತ್ತು. ಆದರೂ ಸ್ನೇಹಿತರ ಬ್ಯಾಂಕ್ ಅಂತ ಏನೂ ಮಾತನಾಡದೆ ಹೋದರು. ಮಾತಾಡುವವರ ಬಾಯಿ ಕೂಡ ಬಗ್ಗು ಬಡಿದರು. ದಿವಾಳಿಯಾಗುವ ಆರು ತಿಂಗಳ ಮುಂಚೆ ಕೂಡ ನೆಂಟರಿಷ್ಟರೆಲ್ಲ ಆ ದರಿದ್ರ ಬ್ಯಾಂಕಿನಲ್ಲಿ ಹಣ ಡಿಪಾಜಿಟ್ ಇಡುವಂತೆ ಮಾಡಿ ನೂರಾರು ಕುಟುಂಬಗಳು ನೆಲ ಕಚ್ಚುವಂತೆ ಮಾಡಿದರು.
ವಾವೇಲಿ ಚಿಕ್ಕಪ್ಪ ಆಗಬೇಕಾದ ಚಿಕ್ಕಚನ್ನಯ್ಯ ವಿದ್ಯಾವಂತ, ಬುದ್ಧಿವಂತ. ಆದರೆ ವಿಪರೀತ ದುರಹಂಕಾರಿ. ಜೊತೆಗೆ ರೆವಿನ್ಯೂ ಇಲಾಖೆಯ ಗರ್ವ ಬೇರೆ. ವಿಪರೀತ ದುಡ್ಡಿನ ಆಸೆ. ಎಲ್ಲ ಕಾಮಗಾರೀಲು ದುಡ್ಡು ತಿನ್ನುತ್ತಿದ್ದ. ಮದ್ರಾಸಿನ ಕಂಟ್ರಾಕ್ಟರ್ ಒಬ್ಬರ ಜೊತೆ ಮನಸ್ತಾಪ ಬಂದು ಒಂದು ಲಂಚದ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡು ಕೆಲಸವೇ ಹೋಯಿತು. ಚಿಕ್ಕಚನ್ನಯ್ಯ ಇಂಥ ದರಿದ್ರ ಮನುಷ್ಯ ಅಂತ ಗೊತ್ತಿದ್ದರೂ ಜಾತಿ ಸಂಘಕ್ಕೆ ಅವನ ಕೈಲಿ ದುಡ್ಡು ಕೊಡಿಸಿ ಅವನನ್ನು ದೊಡ್ಡ ಮನುಷ್ಯನನ್ನಾಗಿ ಮಾಡಿದ್ದು ನಮ್ಮಪ್ಪನೇ!
ಆಶ್ರಮಕ್ಕೆ ಹೋಗುತ್ತಿದ್ದರೂ, ಮನೆಯಲ್ಲಿ ಪ್ರತಿದಿನ “ಯಾ ದೇವಿ ಸರ್ವ ಭೂತೇಷು” ಹೇಳಿಸುತ್ತಿದ್ದರೂ ತುಳಸಿ ತೋಟದ ಮಾಟ ಮಂತ್ರದವರ ಜೊತೆ ಕೂಡ ಸಂಪರ್ಕ ಇತ್ತು. ಸೂಪರಿಂಟೆಂಡೆಂಟ್ ಎಂಜಿನಿಯರ್ ಜಾರ್ಜ್ ಸಾಹೇಬರ ಮಗಳಿಗೆ ಯಾರೋ ಮಾಟ ಮಾಡಿಸಿ ದೆವ್ವ ಹಿಡಿದಿತ್ತು. ಇದಕ್ಕೆ ಪ್ರತಿಮಾಟ ಮಾಡಿಸಲು ನಮ್ಮಪ್ಪ ಅವರ ಕುಟುಂಬದವರನ್ನು ಕೊಳ್ಳೇಗಾಲಕ್ಕೆ ಕರಕೊಂಡು ಹೋದ. ಸಾಹೇಬರ ಮಗಳಿಗೆ ದೆವ್ವ ಬಿಟ್ಟಿತು. ಆದರೆ ಆ ದೆವ್ವ ನಮ್ಮ ತಾಯಿಯನ್ನು ಹಿಡಿದುಕೊಂಡಿತು. ಸನ್ನಿ ರೋಗದ ಜೊತೆಗೆ ದೆವ್ವದ ಕಾಟವೂ ಸೇರಿ ಅಮ್ಮ ಸತ್ತಳು. ಆವಾಗಿನಿಂದ ಅಪ್ಪನಿಗೆ ಎಲ್ಲಿಲ್ಲದ ಭಯ. ಮನೆ ಹಜಾರದಲ್ಲಿ ಸುತ್ತಮುತ್ತ ಆಳುಗಳನ್ನು ಮಲಗಿಸಿಕೊಂಡು ಮಲಗಲು ಶುರು ಮಾಡಿದ್ದು ಅವಾಗಲೇ.
ನಗರದ ಎಲ್ಲ ಸಂಘ ಸಂಸ್ಥೆಗಳಿಗೂ ಸದಸ್ಯ, ಪೋಷಕ, ಪದಾಧಿಕಾರಿ ಅಂತ ಸಂಬಂಧ ಇಟ್ಟುಕೊಂಡಿದ್ದರಿಂದ ಮನೆ ಕಡೆ ನಿಗಾನೆ ಇರಲಿಲ್ಲ. ಮಕ್ಕಳಾದ ನಮಗೆಲ್ಲ ಅಪ್ಪನ ಹತ್ತಿರ ಮಾತಾಡಲೂ ಭಯ. ಅಪ್ಪನ ಬಗ್ಗೆ ಮಾತಾಡಲೂ ಭಯ. ಮಕ್ಕಳಾದ ನಮ್ಮನ್ನು ಕೂಡ ಪರಸ್ಪರ ಬೆರೆಯಲು ಬಿಡುತ್ತಿರಲಿಲ್ಲ. ಒಬ್ಬೊಬ್ಬರು ಮನೆಯ ಒಂದೊಂದು ಮೂಲೆಯಲ್ಲಿ ಕುಳಿತುಕೊಂಡು ಜಗತ್ತಿನಲ್ಲಿರುವ, ಇಲ್ಲದಿರುವ ಎಲ್ಲ ಪುಸ್ತಕಗಳನ್ನು ಓದುತ್ತಾ ಕಾಲ ಕಳೆದು ಒಂಟಿಯಾದೆವು. ಕೊನೆಗೂ ಸೋದರ-ಸೋದರಿಯರ ನಡುವೆ ಪ್ರೀತಿ, ಅನುರಾಗ ಬೆಳೆಯಲೇ ಇಲ್ಲ. ಒಂದೇ ತಾಯಿಯ ಮಕ್ಕಳಾದರೂ ನಾವೇ ದಾಯಾದಿಗಳ ತರಹ ದೂರವಾಗಿದ್ದೆವು. ಅಪ್ಪನಿಗೆ ಇವೆಲ್ಲ ಗೊತ್ತಾಗಲಿಲ್ಲವೋ ಬೇಕಾಗಿರಲಿಲ್ಲವೋ? ಆಶ್ರಮದಲ್ಲಿ ಯಾವುದಾದರೂ ದಿನಾಚರಣೆ, ವರ್ಧಂತಿ ಇದ್ದ ದಿನ ಮಾತ್ರ ಬೆಳಿಗ್ಗೆ ಬೆಳಿಗ್ಗೇನೇ ಸ್ನಾನ ಮಾಡಿಸಿ ಓಡಿಸಿಕೊಂಡು ಹೋಗಿ ಭಜನೆಗೆ ಮುಂದಿನ ಸಾಲಿನಲ್ಲೇ ಕೂರಿಸುತ್ತಿದ್ದ. ನಮ್ಮನ್ನೆಲ್ಲ ಒಳ್ಳೆ ಮಿಷನ್ ಸ್ಕೂಲಿನಲ್ಲಿ ಓದಿಸಿದರೂ, ಮನೇನಲ್ಲಿ ಸಂಸ್ಕೃತದ ಪಾಠ ಹೇಳಿಸಿದರೂ, ನೆಂಟರ ಪೈಕಿ ಯಾರಾದರೂ ಮಕ್ಕಳ ಸ್ಕೂಲ್ ಪ್ರವೇಶ, ಸ್ಕಾಲರ್ಶಿಪ್ ಅಂತ ಕೇಳಿಕೊಂಡು ಬಂದರೆ, ನಿಮ್ಮ ಮುಖಕ್ಕೆ ಅದೊಂದು ಬೇರೆ ಕೇಡು ಎಂದು ಹೀಯಾಳಿಸಿ ಕಳಿಸಿಬಿಡುತ್ತಿದ್ದ.
ನಿವೃತ್ತಿಯಾದ ಮೇಲೂ ಏನಾದರೂ ಒಳ್ಳೆ ಪೋಸ್ಟ್ ಹೊಡೀಬೇಕು ಅಂತ ಗುಟ್ಟಾಗಿ ಪ್ರಯತ್ನಿಸುತ್ತಿದ್ದ. ಮಹಾರಾಜರು ಜಮಖಂಡಿ ಕ್ಯಾಂಪಿಗೆ ಹೊರಟಾಗ ಇವನೂ ಅವರನ್ನು ಗುಟ್ಟಾಗಿ ಹಿಂಬಾಲಿಸಿದ. ಜಮಖಂಡಿ ಮಾಂಡಲೀಕರ ತಮ್ಮ ನಮ್ಮಪ್ಪ ಪೂನಾದಲ್ಲಿ ಪ್ರಿಂಟಿಂಗ್ ಡಿಪ್ಲೊಮಾ ಮಾಡುತ್ತಿದ್ದಾಗ ವಕೀಲಿ ಪರೀಕ್ಷೆಗೆ ಬಂದಿದ್ದು ಚೆನ್ನಾಗಿ ಪರಿಚಯವಾಗಿತ್ತು. ಅವರ ಕೈಲಿ ಮಹಾರಾಜರಿಗೆ ಶಿಫಾರಸ್ ಮಾಡಿಸಬೇಕು ಅಂತ ಪ್ಲಾನು. ಮಾಂಡಲೀಕರು ಮಹಾರಾಜರಿಗೆ ಶಿಫಾರಸ್ ಮಾಡಿದರೋ ಇಲ್ಲವೋ ಜಮಖಂಡಿಗಂತೂ ಅಪ್ಪ ಮತ್ತೆ ಮತ್ತೆ ಹೋಗಿ ಬರುತ್ತಿದ್ದ. ಕೊನೆ ಸಲ ಹೋಗಿದ್ದಾಗ ಆಮಶಂಕೆಯಿಂದ ಶುರುವಾಗಿ ಹೃದಯಾಘಾತವಾಗಿ ಸತ್ತೇ ಹೋದ. ಅಪ್ಪ ಅಷ್ಟೆಲ್ಲ ಸಂಘ ಸಂಸ್ಥೆಗಳಲ್ಲಿ ಓಡಾಡಿದ್ದರೂ ಪೇಪರ್ಗಳಲ್ಲಿ ಅಷ್ಟಾಗಿ ಸುದ್ದಿಯಾಗಲಿಲ್ಲ.
-೩-
ಇಂತದೇ ವಿವರಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು, ಒಂದೊಂದು ವಿವರವನ್ನೂ ಬೇರೆ ಬೇರೆ ತೀವ್ರತೆಯಿಂದ ರಂಗಪ್ಪ ಹೇಳುತ್ತಲೇ ಹೋದರು. ಅವರ ಬದ್ಧತೆ, ನಿಜದ ಬಗ್ಗೆ ಪ್ರೀತಿ, ನೀಡುತ್ತಿದ್ದ ಬದುಕಿನ ವಿವರಗಳು ಇದೆಲ್ಲದರ ಮುಂದೆ ನಾನು ಅವರಿಂದ ಬಯಸುತ್ತಿದ್ದದ್ದು ತೀರಾ ಸಾಧಾರಣವಾದ ಸಂಗತಿ ಎನಿಸಿತು. ಆಯ್ತು, ನನ್ನ ಪುಸ್ತಕಕ್ಕೆ ಮಾಹಿತಿ ನೀಡದೆ ಹೋದರೂ ಚಿಂತೆಯಿಲ್ಲ, ತಂದೆಯ ಬಗ್ಗೆ ಬರೆದಿರುವ ಪುಸ್ತಕವನ್ನು ವಿಸ್ತರಿಸಿ ಮರು ಮುದ್ರಿಸಲಿ ಎಂಬ ಆಸೆಯಾದರೂ ಅದನ್ನೇ ಮತ್ತೆ ಮತ್ತೆ ಪ್ರಸ್ತಾಪಿಸಲು ನನಗೇ ಮನಸ್ಸು ಬರಲಿಲ್ಲ.
ಕೊನೆಯ ಸಲ ಅವರ ಮನೆಗೆ ಹೋಗಿದ್ದು ಇನ್ನೂ ನೆನಪಿದೆ. ಸ್ವಲ್ಪ ಕೈ ಹಿಡಿದುಕೊಂಡು ಇಲ್ಲೇ ತೊಟ್ಟಿ ಸುತ್ತ ಓಡಾಡ್ಸಪ್ಪ ಎಂದು ವಿನೀತರಾಗಿ ಕೇಳಿಕೊಂಡರು. ತೊಟ್ಟಿಯ ಎದುರುಗಡೆ ಕಣಜ ಇತ್ತು. ಒಂದು ಕಾಲದಲ್ಲಿ ಯಾವಾಗಲೂ ತುಂಬಿರೋದು. ಈಗ ಎಲ್ಲಿ? ಜಮೀನೆಲ್ಲ ಭೂಸುಧಾರಣೇಲಿ ಹೊರಟು ಹೋಯಿತಲ್ಲ. ಇರಲಿ, ನಮಗೆ ಮಾತ್ರವಲ್ಲ, ಎಲ್ಲರಿಗೂ ಹೋಯಿತು. ಕಚ್ಚು ಗಾರೆ, ಚಪ್ಪಡಿ ಹಾಸಿನ ಮೇಲೆ ನಿಧಾನವಾಗಿ ಹೆಜ್ಜೆಯಿಡಿಸುತ್ತಾ ಹೋಗುತ್ತಿದ್ದಾಗ, ಇಲ್ಲೇ ನಿಂತ್ಕೋ ಎಂದರು. ಇಲ್ಲಿ ಗಾರೆ-ಚಪ್ಪಡಿ ಕಲ್ಲಿನ ಮೇಲೆ ಏನು ಬರೆದಿದೆ ಓದು ಅಂದರು. ಅಲ್ಲಿ ಏನೂ ಬರೆದಿರಲಿಲ್ಲ. ಹಾಗೆಂದು ಹೇಳಿದೆ. ಒಪ್ಪಲಿಲ್ಲ. ಇಲ್ಲ, ಇಲ್ಲ, ಸರಿಯಾಗಿ ನೋಡಿ ಓದು ಎಂದರು. ಇಲ್ಲ ಸಾರ್, ಇಲ್ಲಿ ಏನೂ ಬರೆದಿಲ್ಲ. ಹಳೆ ಕಾಲದ ಚಪ್ಪಡಿ ಹಾಸು, ಪಕ್ಕದಲ್ಲಿ ಕಚ್ಚು ಗಾರೆ ಅಷ್ಟೇ ಎಂದೆ. ಓದು ಓದು ಎಂದು ಹಟ ಮಾಡುತ್ತಾ ಅಲ್ಲೇ ನಿಂತಿದ್ದ ಅವರು ಆಯ್ತು ಬಿಡು ನಿನಗೆ ಓದಲು ಬರೋಲ್ಲ ಎಂದು ರೇಗಿದರು.
ಒಂದು ಮಧ್ಯಾಹ್ನ ಸಹಾಯಕರ Shift ಬದಲಾಯಿಸುವಾಗ ಮುಂದಿನ ಪಾಳಿಗೆ ಬರಬೇಕಾದವನು ಸ್ವಲ್ಪ ತಡವಾಗಿ ಬಂದ. ಹಿಂದಿನ ಪಾಳಿಯವನೂ, ಮುಂದಿನ ಪಾಳಿಯವನು ಸರಿಯಾದ ಸಮಯಕ್ಕೆ ಬಂದೇ ಬರುತ್ತಾನೆಂದು ನಂಬಿ ಸ್ವಲ್ಪ ಬೇಗ ಹೊರಟುಹೋದ. ಮುಂದಿನವನು ಸ್ವಲ್ಪ ತಡವಾಗಿ ಬಂದು ಮಾತ್ರೆ, ಔಷಧಿಯಲ್ಲಿ ಹೆಚ್ಚು ಕಡಿಮೆಯಾಯಿತೆಂದರೆ ಆತ ಬರುವ ಹೊತ್ತಿಗೆ ರಂಗಪ್ಪನವರ ಉಸಿರಾಟವೇ ನಿಂತು ಹೋಗಿ ಕಟಬಾಯಿಯಿಂದ ಜೊಲ್ಲು ಸುರಿಯುತ್ತಿತ್ತೆಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು.
ಹಾಲು ತುಪ್ಪ, ಉತ್ತರ ಕ್ರಿಯಾದಿಗಳೆಲ್ಲ ಮುಗಿದು ಹನ್ನೊಂದನೇ ದಿನದ ಹೊತ್ತಿಗೆ, ರಂಗಪ್ಪನವರು ಹಿಂದೆ ಪ್ರಕಟಿಸಿದ್ದ ಗಾದೆಗಳ ಸಂಗ್ರಹ, ಬೈಗುಳಗಳ ಸಂಗ್ರಹ, ಅವರ ತಂದೆ ಮಾದಪ್ಪನವರ ಜೀವನ ಚರಿತ್ರೆ, ರಂಗಪ್ಪನವರಿಗೆ ಪ್ರಿಯವಾದ ಎಡ್ಮಂಡ್ ಬರ್ಕ್ನ ಪಾರ್ಲಿಮೆಂಟ್ ಭಾಷಣಗಳ ಅನುವಾದ ಎಲ್ಲವನ್ನೂ ಮರು ಮುದ್ರಿಸುವುದೆಂದು ಕುಟುಂಬದ ಸದಸ್ಯರು ನಿರ್ಧರಿಸಿ, ಉತ್ತರ ಕ್ರಿಯಾದಿ ಆಹ್ವಾನ ಪತ್ರಿಕೆಯಲ್ಲಿ ಅದನ್ನೆಲ್ಲ ನಮೂದಿಸಿದ್ದರು. ನನಗೆ ನಿಜಕ್ಕೂ ಗೊಂದಲವಾಯಿತು. ರಂಗಪ್ಪನವರ ಕೊನೆಯ ದಿನಗಳ ತಾಕಲಾಟವನ್ನು ಕುಟುಂಬದ ಸದಸ್ಯರಿಗೆ ತಿಳಿಸಬೇಕೆ ಬೇಡವೇ? ಕುಟುಂಬದವರು ನನಗೆ ಪರಿಚಯವಿರಲಿಲ್ಲ. ಇಲ್ಲ, ಇಲ್ಲ, ರಂಗಪ್ಪನವರ ಮನೋಗತವನ್ನು ತಿಳಿಸಿಬಿಡುವುದು ನನ್ನ ಕರ್ತವ್ಯ ಎಂಬ ಭಾವನೆಯಿಂದ ಇಬ್ಬರು ಸಹೋದರರನ್ನು ಭೇಟಿ ಮಾಡಿ ಎಲ್ಲವನ್ನೂ ನಿಧಾನವಾಗಿ ಬಿಡಿಸಿ ಬಿಡಿಸಿ ಹೇಳಿದೆ. ನನ್ನ ಮಾತಿಗೆ ಅವರು ಬೆಲೆ ಕೊಡಲಿಲ್ಲ ಮಾತ್ರವಲ್ಲ ಬಿರುಸಿನ ಮಾತುಗಳ ಉತ್ತರವನ್ನು ಕೊಟ್ಟರು.
“ನೋಡಿ ಇದು ನಮ್ಮ ಕುಟುಂಬದ ಖಾಸಗಿ ವಿಷಯ. ಇಂತಹದ್ದನ್ನೆಲ್ಲ ನಮ್ಮಪ್ಪ ಯಾವತ್ತೂ ನಮ್ಮ ಹತ್ತಿರ ಹೇಳಿಲ್ಲ. ಹೇಳುವಂತ ವಾತಾವರಣವೂ ನಮ್ಮ ಮನೆಯಲ್ಲಿ ಮೊದಲ ದಿನದಿಂದಲೂ ಇರಲಿಲ್ಲ. ನಮ್ಮಪ್ಪ ನಮಗೆ ಅಪ್ಪನಿಗಿಂತ ಹೆಚ್ಚಾಗಿ ಒಬ್ಬ tutor ತರ ಇದ್ದ. ಅದೂ ಇಂಗ್ಲಿಷ್ grammar and composition ಮೇಷ್ಟರ ತರಹ. ಪ್ರತಿದಿನವೂ ನಿಬಂಧ ರಚನೆ, ಪ್ರತಿದಿನವೂ ವಾಕ್ಯ ಪರೀಕ್ಷೆ, ಪದ ಸಂಚಯ. ಎಲ್ಲ ಮಕ್ಕಳಿಗೂ ಇಂಗ್ಲಿಷಿನಲ್ಲಿ ಎಂಎ ಮಾಡಿಸಿದ. ಈಗ ಎಲ್ಲ ಮಕ್ಕಳೂ ಸಾಲು ಸಾಲಾಗಿ ನಿವೃತ್ತ ಇಂಗ್ಲಿಷ್ ಟೀಚರ್ಗಳು, ಪ್ರಾಧ್ಯಾಪಕರು. ಮದುವೆ ವಿಷಯದಲ್ಲೂ ಹೀಗೇ ಮಾಡಿದ. ನಮ್ಮ ಜನಾಂಗದ ನ್ಯಾಯಾಧೀಶರು, ಎಂಜಿನಿಯರ್ಗಳು, ರಿಜಿಸ್ಟ್ರಾರ್ ಇಂತಹವರ ಹೆಣ್ಣು ಮಕ್ಕಳನ್ನೆಲ್ಲ ಹಿಡಿದುಕೊಂಡು ಬಂದು ಎಲ್ಲರಿಗೂ ಕಟ್ಟಿದ. ಎಲ್ಲವೂ ಬಲವಂತದ ಮದುವೆಗಳು. ನಾವೆಲ್ಲ ಕರ್ತವ್ಯನಿಷ್ಠರಾಗಿ ಸಂಸಾರ ನಡೆಸಿದ್ದೇವೆಯೇ ಹೊರತು, ಮತ್ತೇನೂ ವಿಶೇಷವಿಲ್ಲ. ಹೀಗೇ ಹೇಳ್ತಾ ಹೋಗಬಹುದು. ಏನು ಪ್ರಯೋಜನ. ನಾವು ಯಾರಿಗೂ ಏನೂ ಹೇಳೋಲ್ಲ. ಅಪ್ಪ, ತಾತನ ಬಗ್ಗೆ ಹಿಂದೆ ಬರೆದಿರುವ ಪುಸ್ತಕವೇ ಇರಲಿ ಬಿಡಿ, ತೊಂದರೆ ಏನೂ ಇಲ್ಲ.
ಮಾದಪ್ಪನವರನ್ನು ಕುರಿತ ರಂಗಪ್ಪನವರ ಪುಸ್ತಕ ಸಾಹಿತ್ಯ ಜಗತ್ತಿನ ಲೆಕ್ಕಾಚಾರದ ದೃಷ್ಟಿಯಿಂದ ಪುನರ್ಮುದ್ರಣವಾಗೇ ಹೋಯಿತು. ನಾನು ನಾಲ್ವಡಿಯವರ ಬಗ್ಗೆ ರಂಗಪ್ಪನವರಿಂದ ಒಳನೋಟ ಪಡೆದು ಬರೆಯಬೇಕಾಗಿದ ಪುಸ್ತಕ ಕೂಡ ಹಾಗೇ ಉಳಿದುಕೊಂಡಿತು. ಆದರೆ ರಂಗಪ್ಪನವರ ಒಡನಾಟ, ಅವರ ವ್ಯಕ್ತಿತ್ವ, ಮನೋಧರ್ಮ ಮತ್ತೆ ಮತ್ತೆ ನೆನಪಿಗೆ ಬರುತ್ತಲೇ ಇತ್ತು.
ಕೊನೆಯ ಸಲ ಅವರನ್ನು ಭೇಟಿಯಾಗಿದ್ದಾಗ ತೊಟ್ಟಿಯ ಬಳಿಯ ಚಪ್ಪಡಿ ಹಾಸಿನ ಮೇಲೆ ಏನೋ ಬರೆದಿದೆ ಓದು, ಓದು ಅಂತ ಹಟ ಮಾಡಿದ್ದರು ಅಂತ ಹೇಳಿದ್ದೆನಲ್ಲ. ಅವತ್ತು ಇನ್ನೂ ಒಂದು ಬೇಡಿಕೆ ಮಂಡಿಸಿದ್ದರು, “ನೋಡಪ್ಪಾ ಯಾರಾದರೂ ಹಳೆಯ ಕಾಲದ ಇಂಗ್ಲಿಷ್ ಮೇಷ್ಟರ ಪರಿಚಯ ಮಾಡಿಕೊಡು. ನನ್ನಿಂದಂತೂ ಈಗ ಏನೂ ಓದಲು ಸಾಧ್ಯವಿಲ್ಲ. ಯಾರಾದರೂ ಚೆನ್ನಾಗಿ ಓದಬಲ್ಲವರು ಸಿಕ್ಕಿದರೆ ಮೊದಲಿಂದ ಕಡೆಯ ತನಕ ಸರ್ವಾಂಟಿಸ್ ಮತ್ತು ಹ್ಯಾಮ್ಲೆಟ್ ನಾಟಕವನ್ನು ಮತ್ತೆ ಮತ್ತೆ ಓದಿಸಿಕೊಂಡು, ಓದಿಸಿಕೊಂಡು ಕೇಳಿಸಿಕೊಳ್ಳುತ್ತಲೇ ಇದ್ದುಬಿಡೋಣ ಎನಿಸುತ್ತದೆ.”
3 thoughts on “ಪುನರ್ ಮುದ್ರಣ”
ಕಥಾ ಹಂದರ ಹಿಡಿಸಿತು. ಉತ್ತಮ ಕಥೆ
Nice story sir
Nice story sir