ಕಾದಂಬರಿ: ಗಮ್ಯ
ಲೇಖಕ : ಡಾ. ಬಿ. ಜನಾರ್ದನ ಭಟ್
ಪ್ರಕಾಶಕರು : ಅಂಕಿತ ಪುಸ್ತಕ, ಬೆಂಗಳೂರು .
ಬೆಲೆ : ರೂ . 250/-
ಗಮ್ಯ ಎಂಬ ಹೆಸರೇ ಈ ಕಾದಂಬರಿಯ ಆಶಯವನ್ನು ಬಿಂಬಿಸುವಂಥದ್ದು. ಮನುಷ್ಯನ ಅಂತರಂಗದ ವಿಕಾಸವೆಂದರೆ ಮನದ ಭಾವಗಳ ಹರಳುಗಟ್ಟುವಿಕೆಯೇ ಸರಿ. ಅಡಿಗರು ಹೇಳುವ “ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತಿತೇನು ಪುರುಷೋತ್ತಮನ ಆ ಅಂಥ ರೂಪ-ರೇಖೆ?” ಎಂಬ ಕಾವ್ಯದ ಭಾಗ ನೆನಪಾಗುತ್ತದೆ. ಚಿತ್ತ ಹುತ್ತಗಟ್ಟುವುದೆಂದರೆ ಮನದ ಭಾವತೀವ್ರತೆಯ ಸೆಳೆತ ತಹಬದಿಗೆ ಬಂದು ಆತ್ಯಂತಿಕೆ ಉಪಶಾಂತಿಯ ಗಮ್ಯದೆಡೆಗೆ ಹೊರಳುವುದೆಂದರ್ಥವಷ್ಟೆ. ಆಗಲೇ “ಪುರುಷೋತ್ತಮನ” ರೂಪವನ್ನು ಸ್ಮರಿಸೀತು. “ಪುರುಷೋತ್ತಮ” ಎಂಬುದೊಂದು ಉಪಶಾಂತಿಗಿರುವ ರೂಪಕದಂತೆ ಇಲ್ಲಿ ತೋರುತ್ತದೆ. ಈ ಹೊರಳುವಿಕೆಯ ಪ್ರಕ್ರಿಯೆಗೆ ಅದೆಷ್ಟು ತಲ್ಲಣಗಳನ್ನು ಮನುಷ್ಯ ಜೀವ ಅನುಭವಿಸಬೇಕು;ಅದೆಷ್ಟು ಬಗೆಯ ಭಾವಗಳಿಗೆ ತನ್ನನ್ನು ತಾನು ಒಡ್ಡಿಕೊಳ್ಳಬೇಕು. ಭಾವವನ್ನು ತದೇಕ ದೃಷ್ಟಿಯಿಂದ ನೋಡಲು ಕಲಿತಾಗ ತನ್ನ ಗಮ್ಯದ ನೆಲೆಯ ಅರಿವಾಗುತ್ತದೆ. ಭಾವಕ್ಕೆ ಅಡಿಯಾಳಾಗದೆ (ಬಾಗದೆ) ಅದು ತನ್ನಾಚೆಗಿನ ರಹಸ್ಯವನ್ನು ಬಿಟ್ಟುಕೊಡದು. ಭಾವ ರಸದ ಮಟ್ಟವನ್ನು ಏರಲು ಬೇಕಾದ ಭಾವೋಪಜೀವಿಗಳಾದ ಕಾಮಕ್ರೋಧಾದಿಗಳ ಅಂಗೀಕಾರ ಅವಶ್ಯ; ಅಂದರೆ ಅವನ್ನು ಚೆನ್ನಾಗಿ ಅನುಭವಿಸಿಯೇ ಉಪಶಾಂತಿಯೆಂಬ ರಸದ ಮಟ್ಟ ತಲುಪಲು ಸಾಧ್ಯವಾಗುತ್ತದೆ. ಭಾವಗಳನ್ನು ಅದುಮಿಟ್ಟಷ್ಟೂ ಅದು ಧುಮ್ಮಿಕ್ಕುತ್ತಾ ಭಾವಪ್ರವಾಹವನ್ನು ಜೀವನ ಎಂಬ ನದಿಯ ಪಾತ್ರಕ್ಕೆ ಹರಿಸುತ್ತದೆ. ಮನದೊಳಗಿನ ಭಾವಪ್ರವಾಹದ ಹರಿವಿನ ಗತಿಗೆ ತನ್ನ ಮನಸ್ಸನ್ನು ಒಂದಾಗಿಸಿ ಸಂಯಮದಿಂದ ಈಕ್ಷಿಸಿದಾಗ ಅದರ ಇತಿಮಿತಿಯ ಅರಿವಾಗುತ್ತದೆ ಹಾಗು ಭಾವಾತೀತವಾದ ಉಪಶಾಂತಿ(ರಸ)ದ ಅನುಭವ ಆಗುತ್ತದೆ-ಗಮ್ಯದ ನೆಲೆ ಸಿಗುತ್ತದೆ. ಇಂಥ ಗಮ್ಯದ ಕಡೆಗೆ ತಮ್ಮನ್ನು ತಾವು ಕೊಂಡುಹೋಗುವಂತಹಾ ಮೌಲ್ಯವನ್ನು ಅರಸುತ್ತಾ ಅದನ್ನು ಸಾಧಿಸುವ ಬಗೆಯನ್ನು “ಗಮ್ಯ” ಕಾದಂಬರಿಯಲ್ಲಿ ಬರುವ ಪಾತ್ರಗಳಾದ ರಾಜೇಶ (ಆರ್. ಕೆ), ಕಲ್ಯಾಣಿ, ರಾಗಿಣಿ ಕಂಡುಕೊಳ್ಳುತ್ತವೆ. ಭಾವಾತೀತ ರಸವನ್ನು ಕುರಿತಾದ ಮೀಮಾಂಸೆಯೇ “ಗಮ್ಯ” ಕಾದಂಬರಿಯ ಕೇಂದ್ರ ಆಶಯ. ರಸದ ಸಿದ್ಧಿಯಲ್ಲಿ ಅರಿಷಡ್ವರ್ಗಗಳ ಹೊಯ್ದಾಟವಿರುವುದಿಲ್ಲ; ಭಾವಗಳ ಮೇಲಾಟವಿರದು. ಭಾವಗಳು ತಣಿದು ಅಲೆಯಿರದ ಸಮುದ್ರದಂತೆ ಪ್ರಶಾಂತವಾಗಿ ಪರಿಪಾಕಗೊಳ್ಳುತ್ತವೆ. “ಗಮ್ಯ” ಕಾದಂಬರಿಯ ಕೊನೆಗೆ ಇಂಥ ಹೊಯ್ದಾಟವಿರದ ರಾಜೇಶ, ರಾಗಿಣಿ, ಕಲ್ಯಾಣಿಯರು ಕಂಗೊಳಿಸುತ್ತಾರೆ.
ಎಳವೆಯಿಂದಲೇ ಅದುಮಿಟ್ಟ ಯುವಸಹಜ ಆಕರ್ಷಣೆ ರಾಗಿಣಿಯನ್ನು ಕಂಡಾಗ ಚಿಗುರೊಡೆದು ಅದಕ್ಕಾಗಿಯೇ ತವಕಿಸಿ ಸಿಗದಾಗ ಅಂತೆಯೇ ಬಾಳು ಸವೆಸುವ ರಾಜೇಶನ ಮನಸ್ಸು ತಹಬದಿಗೆ ಬರುವುದು ರಾಗಿಣಿ ಮತ್ತೆ ರಾಜೇಶನ ಊರಿಗೆ ಬಂದಾಗ. ಆದರೆ, ಆಕೆ ಮೊದಲಿನ ರಾಗಿಣಿಯಾಗಿರದೆ ಭಾವಾವೇಷಕ್ಕೆ ತನ್ನನ್ನು ತಾನು ಒಡ್ಡಿಕೊಂಡ ಪಕ್ವಮನಃಸ್ಥಿತಿಯವಳಾಗಿರುತ್ತಾಳೆ;ಅಥವಾ ಹಾಗೆ ಓದುಗರು ಊಹಿಸುವಂತೆ ರಾಗಿಣಿಯ ಪಾತ್ರದ ಧ್ವನಿತವಾಗಿದೆ. ರಾಜೇಶನ ಆಸೆ ರಾಗಿಣಿ ಮತ್ತೆ ಬಂದಾಗ ಚಿಗುರೊಡೆಯುತ್ತದಾದರೂ ಆಕೆ ತೋರುವ ಅಭಿವ್ಯಕ್ತಿ ರಾಜೇಶನ ಭಾವತೀವ್ರತೆ ಎಂಬ ಅಬ್ಬರದ ಅಲೆಗಳನ್ನು ನಿರ್ಧಿಷ್ಟ ಲಯದಲ್ಲಿ ಚಲಿಸುವಂತೆ ಮಾಡುತ್ತದೆ. ಕಲ್ಯಾಣಿಯ ಕೈ ಹಿಡಿಯುವಂತೆ ನಡೆಸುತ್ತದೆ. ಅರ್ಥ-ಕಾಮಗಳ ಆಟಾಟೋಪವೇ ರಾಜೇಶ,ರಾಗಿಣಿಯರಲ್ಲಿ ಕಂಡಿವೆಯಾದರೂ ಅರ್ಥ-ಕಾಮಗಳೇ ಅವರ ಜೀವನದ ಸ್ವಧರ್ಮಕೆ ಅಂದರೆ ಗಮ್ಯಕ್ಕೆ ಕಾರಣವಾಗಿಯೂ ಪರಿಣಮಿಸುವ ನಿರೂಪಣೆಯೂ ಕಾದಂಬರಿಯ ರೂಪರೇಖೆಯಾಗಿದೆ. ಇಂಥ ಮೌಲ್ಯ ಮೀಮಾಂಸೆ ಪಾತ್ರಗಳ ಶೀಲ ನರೀಕ್ಷಣದಲ್ಲಿ ವ್ಯಕ್ತವಾಗುತ್ತದೆ. ಕಲಾಕೃತಿಯೊಂದು ಧ್ವನಿಸಬೇಕಾದುದೂ ಇದೇ ಅಲ್ಲವೇ?
ರಾಜೇಶ ತಾನು ರಾಗಿಣಿಯ ಒಲವು ಗಳಿಸಲು ತಾನೇ ಕಕ್ಕುಲತೆಯಿಂದ ಬರೆದ ಭಾವಗೀತೆ ರಾಗಿಣಿಗೆ ಕೊಟ್ಟು ಪ್ರೀತಿ ಗಳಿಸಲಾಗದೆ ಅದು ಆಕಾಶವಾಣಿಯಲ್ಲಿ ಪ್ರಸಾರವಾಗುವಂತಾಗಿ ಜನಮೆಚ್ಚುಗೆ ಗಳಿಸಿದುದು ಒಂದು ಬಗೆಯಾದರೆ; ರಾಜೇಶನ ಸ್ನೇಹಿತ ಯರೋ ಬರೆದ ಭಾವಗೀತೆಯನ್ನು ಹಾಡಿ ತನ್ನ ಸಹೋದ್ಯೋಗಿಯ ಮೆಚ್ಚುಗೆ ಗಳಿಸುವುದರ ಮೂಲಕ ಪ್ರೀತಿಯನ್ನು ಸಂಪಾದಿಸುವ ವೈರುಧ್ಯವು ಏನನ್ನೂ ತೋರುತ್ತದೆ? ಓದುಗನಲ್ಲಿ ಭಾವವಿಸ್ತರವನ್ನು ಕೊಡುತ್ತದೆ-ಇದು ಓದುಗನಲ್ಲಿ ಉಂಟುಮಾಡುವ ರಸ ಮುಖ್ಯವಾಗುತ್ತದೆ.
ಬೇಂದ್ರೆಯವರ ಸಖೀಗೀತದ ಸೊಲ್ಲುಗಳನ್ನು ಕಾದಂಬರಿಯ ಪ್ರತಿ ಅಧ್ಯಾಯದ ಆದಿಯಲ್ಲಿ ಬಳಸಿದ ಔಚಿತ್ಯ ಕಾದಂಬರಿ ಓದಿ ಮನದಲ್ಲಿ ಅದರ ಸ್ವಾದ ಮನೆಮಾಡಿದಾಗ ಅನುಭವಕ್ಕೆ ದಕ್ಕುತ್ತದೆ. ಒಂದುರೀತಿಯಲ್ಲಿ ಬೇಂದ್ರೆಯವರ ಈ ಕವನದ ಸೊಲ್ಲುಗಳನ್ನೇ ಕಾದಂಬರಿಯ ರೂಪದಲ್ಲಿ ವ್ಯಾಖ್ಯಾನಿಸಿದಂತೆ ಇದೆ.
“ಎಂದಿನಿಂದಲೋ ಏನೋ ಒಳಗೊಂದು ಸಖಜೀವ ‘ಸಖಿ ಬಾರೆ ಬಾ! ಎಂದು ಕೂಗುತಿದೆ” ಇದು ಕಾದಂಬರಿಯ ಮೊದಲು ಬರುವ ಬೇಂದ್ರೆಯವರ ಕಾವ್ಯದ ಸೊಲ್ಲು. ಇದು ರಾಜೇಶನ ಮನದ ಆಳದಲ್ಲಿರುವ ಅರ್ಥ-ಕಾಮಗಳ ಬೀಜವನ್ನು ಇಣುಕಿ ನೋಡಿದಾಗ ಅಲ್ಲಿ ಕಂಡ ಮನೋವ್ಯಾಪಾರವೆಂಬತೆ ಕಾಣುತ್ತದೆ. ರಾಜೇಶ ತನ್ನ ಮನಸ್ಸಿನ ಭಾವನೆಗಳನ್ನು ಹಿಡಿದಿಟ್ಟುಕೊಂಡು ವ್ಯವಹರಿಸಿದುದರಿಂದ ದಕ್ಕಿದ ಗೌರವದ ಕಾರಣ ಮತ್ತು ಅದು ಕೃತಕವಾಗಿ ಸೃಷ್ಟಿಸಿದ ಗಾಂಭೀರ್ಯಕ್ಕೆ ಮರುಳಾಗಿ ಹಾಗೋ ಹೀಗೋ ಇದ್ದವ ರಾಗಿಣಿಯನ್ನು ಕಂಡಾಗ ಕರಗಿದ ಬಗ್ಗೆ ಆತನ ಒಳಗಿದ್ದ ಅರ್ಥ-ಕಾಮಗಳ ತಲ್ಲಣವನ್ನು ಚೆನ್ನಾಗಿ ಬಿಂಬಿಸಿದೆ. ಅದೇ ಅರ್ಥ-ಕಾಮಗಳ ತಲ್ಲಣ ಕಲ್ಯಾಣಿಯಲ್ಲೂ ಇತ್ತು. ಆಕೆಯ ಮನೆಯ ನಿರ್ಭಂಧವೇ ಆಕೆಯನ್ನೂ ನಿರುಮ್ಮಳವಾಗಿರಲು ಬಿಡದೆ ಕೊನೆಗೆ ರಾಗಿಣಿಯಿಂದ ದೂರವಾದ ರಾಜೇಶನನ್ನು ಕೈಹಿಡಿಯುವವರೆಗೂ ಕೊಂಡೊಯ್ಯುತ್ತದೆ. ರಾಜೇಶ-ರಾಗಿಣಿ-ಕಲ್ಯಾಣಿಯರ ಪಾಲಿಗೆ ಗಮನದ ದಾರಿ ಮತ್ತು ಗಮ್ಯ ಪರಸ್ಪರ ಪೂರಕವಾಗಿಯೇ ಇದ್ದದ್ದು ಎಂದು ಕಾದಂಬರಿಯನ್ನು ಕಂಡಾಗ ಅರಿವಿಗೆ ಸಿಗುವಂಥದ್ದು. ಅವರ ಕಾಮ(ಪ್ರೀತಿ, ಪ್ರೇಮ, ಸುಖ ಇತ್ಯಾದಿ)ವನ್ನಾಶ್ರಯಿಸಿ ಗಮಿಸುತ್ತಿದ್ದಾಗ ಜೀವನದ ಬೇಗೆಯಲ್ಲಿ ಬೆಂದು ಪರಿಪಾಕಹೊಂದಿ “ಗಮ್ಯ”ವನ್ನು ಕಾಣುವ ಕಾದಂಬರಿಯ ಚಿತ್ರಣದಲ್ಲಿ ಅನನ್ಯವಾದ ಕಾಂತಿ ಇದೆ. ಈ ಕಾದಂಬರಿ ಹೇಳುವುದಕ್ಕಿಂತ ಧ್ವನಿಸುವುದು ಹೆಚ್ಚು.
- ಕೃಷ್ಣಪ್ರಕಾಶ ಉಳಿತ್ತಾಯ