ವಿವಶ (ಧಾರಾವಾಹಿ ಭಾಗ-18)

ತಾಮಸನಿಗೂ ಹೆಣ್ಣು ಹೆಂಗಸರೆಂದರೆ ತನ್ನಣ್ಣನಂತೆಯೇ ಭೋಗದ ವಸ್ತುವಿನಷ್ಟೇ ಸಲೀಸು! ಆದರೆ ಅವನು ಗಣಿಕೆಯರಲ್ಲಿ ಸುಖ ಕಾಣುವ ಸ್ವಭಾವದವನಲ್ಲ. ಅವನೇನಿದ್ದರೂ ಸಣ್ಣ ಪ್ರಾಯದ ಹುಡುಗಿಯರ ಆಕಾಂಕ್ಷೆಗಳನ್ನುಅವರ ಚಂಚಲ ಕಣ್ಣುಗಳಿಂದಲೂ ಅವರ ತುಡಿತ ತುಂಬಿದ ಹಾವಭಾವಗಳಿಂದ ಸೂಕ್ಷ್ಮವಾಗಿ ಗ್ರಹಿಸಿ ಬಲೆಗೆ ಬೀಳಿಸಿಕೊಂಡು ಸುಖಿಸುವ ಮನಸ್ಸಿನವನು. ಅವನಿಗಿದ್ದ ಸ್ಫುರದ್ರೂಪ, ಸ್ತ್ರೀಯರನ್ನು ಗಾಳಕ್ಕೆ ಸಿಲುಕಿಸುವ ಸಂದರ್ಭದಲ್ಲಿ ಅವನು ಪ್ರದರ್ಶಿಸುತ್ತಿದ್ದ ಕೆಚ್ಚೆದೆ ಹಾಗೂ ಅವನ ಕೈಯಲ್ಲಿ ಓಡಾಡುವ ಹಣಕಾಸಿಗೆ ಅವನ ನೆರೆಕೆರೆಯ ಹಲವಾರು ಹುಡುಗಿಯರು ಮಾತ್ರವಲ್ಲದೇ ಅಕ್ಕಪಕ್ಕದ ಗ್ರಾಮಗಳ  ಹೆಣ್ಣುಮಕ್ಕಳು ಕೂಡಾ ಅವನ ಮೇಲೆ ಮೋಹಗೊಂಡದ್ದಿದೆ ಮತ್ತು ಅಂಥವರು ಅವನೊಂದಿಗೆ ಅವನ ಇನ್ನಿಬ್ಬರು ಖಾಸಾ ದೋಸ್ತಿಗಳ ಪಾಲಾಗುತ್ತಿದ್ದುದೂ ಅವರ ಗೆಳೆತನದ ಬಾಂಧವ್ಯಕ್ಕೊಂದು ಸಣ್ಣ ಉದಾಹರಣೆಯಾಗುತ್ತದಷ್ಟೆ.

ತಮ್ಮ ಹದಿಹರೆಯದ ಒತ್ತಡದಿಂದ ಅಥವಾ ಹೆಣ್ಣೊಬ್ಬಳಿಗಿರಬೇಕಾದ ಪಾವಿತ್ರ್ಯತೆಯ ಸಂಸ್ಕಾರವು ದೊರೆಯದಿದ್ದ ಕುಟುಂಬ ಮತ್ತು ಪರಿಸರದಲ್ಲಿ ಬೆಳೆದ ತರುಣಿಯರಿಗೆ ತಾಮಸನಂಥವನ ಸಂಗವನ್ನು ಮಾಡಿ ತಮ್ಮ ಹೆಣ್ಣುತನವನ್ನು ಕಳೆದುಕೊಳ್ಳುವುದು ಅಷ್ಟೊಂದು ದೊಡ್ಡ ವಿಚಾರವಾಗಿ ತೋರುತ್ತಿರಲಿಲ್ಲ. ಆದ್ದರಿಂದ ಅಂಥವರು ಅವನ ಪಟ್ಟಿಯಲ್ಲಿ ಹತ್ತರೊಳಗೆ ಹನ್ನೊಂದಾಗಿ ಅವನು ನೀಡುತ್ತಿದ್ದ ಸುಖವನ್ನನುಭವಿಸಿ ತೆಪ್ಪಗೆ ದೂರವಾಗುತ್ತಿದ್ದರೆ, ಅವನ ಕುತಂತ್ರವನ್ನರಿಯದೆ ಮನಸಾರೆ ಪ್ರೀತಿಸುವ ಭ್ರಮೆಯಿಂದ ಅವನ ವಶವಾಗಿ ತಮ್ಮನ್ನು ಕೆಡಿಸಿಕೊಳ್ಳುತ್ತಿದ್ದ ಇನ್ನು ಕೆಲವು ಸಭ್ಯ ತರುಣಿಯರಿಗೆ ಅವನು ತಮ್ಮನ್ನು ಬರೇ ದೇಹ ಸುಖಕ್ಕಾಗಿಯೇ ಬಳಸಿಕೊಂಡ ಎಂಬುದು ಅರಿವಿಗೆ ಬರುವಾಗ ಕಾಲ ಮಿಂಚಿರುತ್ತಿತ್ತು. ಹಾಗಾಗಿ ಅವರು ತಮ್ಮ ಮೇಲೆ ನಡೆದ ದೌರ್ಜನ್ಯವನ್ನು ಎಲ್ಲೂ ಹೇಳಿಕೊಳ್ಳಲಾಗದೆ ತಾಮಸನಿಗೆ ಹಿಡಿಶಾಪ ಹಾಕುತ್ತ ಅವನಿಂದ ಕಣ್ಣು ತಪ್ಪಿಸಿ ಓಡಾಡುತ್ತ ತಮಗಾದ ಅನ್ಯಾಯವನ್ನು ಮರೆಯಲೆತ್ನಿಸುತ್ತಿದ್ದರು.

ತಾಮಸನು ತನ್ನ ಇಂಥ ಮೋಜು ಮಸ್ತಿಯಾಟಗಳನ್ನು ಹುಡುಗು ಪ್ರಾಯದಿಂದಲೇ ಆಡುತ್ತ ಬೆಳೆದವನು.ಆದರೆ ಅವನಿಗೆ ಈಚೆಗೆ ಐದಾರು ತಿಂಗಳಿನಿಂದ ಹೊಸ ಹೆಣ್ಣಿನ ಸಹವಾಸವು ದೊರಕಿರಲಿಲ್ಲ.ಅದಕ್ಕಾಗಿಯೇ ಅವನು ಕೆಲವು ದಿನಗಳಿಂದ ಅಂಥದ್ದೊಂದು ಹೆಣ್ಣಿನ ಬೇಟೆಗೆ ಹೊರಟಿದ್ದ. ಇದೇ ಸಮಯಕ್ಕೆ ಶಿವಕಂಡಿಕೆಯ ಅಮಿತಾಂಜಲಿ ಟಾಕೀಸಿಗೆ ‘ಪ್ರೇಮಪರ್ವ’ಸಿನೇಮಾ ಬಂದಿತ್ತು. ಅಂದು ಭಾನುವಾರ. ತಾಮಸ, ತನ್ನಿಬ್ಬರು ಗೆಳೆಯರಾದ ಸೂರ್ಯ ಮತ್ತು ವಾಲ್ಟರರೊಡನೆ ಮುರಳಿ, ಭವ್ಯರ ಪ್ರೇಮಪರ್ವವನ್ನು ನೋಡಲು ಆತುರದಿಂದ ಹೋದ. ಮಧ್ಯಾಹ್ನದ ದೇಖಾವೆಗೆ ಸಿಕ್ಕಪಟ್ಟೆ ನೂಕು ನುಗ್ಗಲಿತ್ತು. ಸೂರ್ಯ, ವಾಲ್ಟರರು ಸರದಿಯಲ್ಲಿ ನಿಂತು ಟಿಕೇಟು ಪಡೆಯುವ ಅಭ್ಯಾಸದವರಾಗಿರಲಿಲ್ಲ. ಅವರು ಅಕ್ರಮವಾಗಿ ನುಸುಳಲು ಮುಂದಾದರು. ಹಾಗಾಗಿ ಸಿನೇಮಾದ ಚಪಲದಿಂದ ಸಾಲಿನಲ್ಲಿ ನಿಂತು ಸುಡುಬಿಸಿಲಲ್ಲಿ ಸುಡಿಸಿಕೊಂಡು ಬೆವರೊರೆಸಿಕೊಳ್ಳುತ್ತ ಕಾಯುತ್ತಿದ್ದ ಯುವಕ, ಯುವತಿಯರನ್ನೆಲ್ಲ ತಳ್ಳಿ ತುಳಿದುಕೊಂಡು ಸಾಲಿನಲ್ಲಿ ನುಸುಳಲೆತ್ನಿಸಿದರು. ಆದರೆ ಅಂದಿನ ಸರದಿಯಲ್ಲಿ ಕರಾವಳಿಯ ಒಂದಷ್ಟು ಕಟ್ಟುಮಸ್ತಾದ ತರುಣರೇ ತುಂಬಿದ್ದರು.ಅವರು ಸುಂಡಿಲಿಗಳಂಥ ಇವರನ್ನು ಅಷ್ಟು ಸುಲಭದಲ್ಲಿ ತೂರಲು ಬಿಡಲಿಲ್ಲ.ಬದಲಿಗೆ ಇವರ ಉಪಾಯವನ್ನು ಗ್ರಹಿಸಿದವರು ಒಬ್ಬರಿಗೊಬ್ಬರು ಒತ್ತೊತ್ತಿ ನಿಂತುಕೊಂಡು ಸಾಲನ್ನು ಬಿಗುಗೊಳಿಸುತ್ತ ಇವರೊಡನೆ ಉರುಡಾಡಿ ಒದ್ದು ಹಿಂದಕ್ಕೆ ತಳ್ಳುತ್ತ ಸಾಗಿದರು. ಅದನ್ನೆಲ್ಲ ದೂರದಲ್ಲಿ ನಿಂತು ಗಮನಿಸುತ್ತಿದ್ದ ತಾಮಸನಿಗೆ ರಪ್ಪನೆ ರೋಷವೆದ್ದಿತು. ಅವನು ಕೂಡಲೇ ಅತ್ತ ಧಾವಿಸಿದವನು,‘ಏನಾ… ರಂ…ಮಕ್ಕಳಾ! ಕೊಬ್ಬಾ ನಿಮಗೆ…!’ ಎನ್ನುತ್ತ ಕೆಲವು ಯುವಕರನ್ನು ಕೆಕ್ಕರಿಸಿ ತನ್ನ ಸೊಂಟಕ್ಕೆ ಸಿಲುಕಿಸಿದ್ದ ಒಂದಡಿ ಉದ್ದದ ಬಟನ್ ಚಾಕುವನ್ನು ರಪ್ಪನೆ ತೆಗೆದು ಝಳಪಿಸುತ್ತ,‘ಧಮ್ಮಿದ್ದರೆ ಈಗ ತಡೆಯಿರನಾ ನೋಡುವ…?’ ಎಂದವನು,ಸರದಿಯಲ್ಲಿದ್ದ ಇಬ್ಬರು ಸಣಕಲು ಯುವಕರ ರಟ್ಟೆ ಹಿಡಿದು ಹೊರಗೆಳೆದು ಅವರ ಜಾಗಕ್ಕೆ ತನ್ನ ಗೆಳೆಯರನ್ನು ಒತ್ತಿ ತೂರಿಸಿ ನಿಲ್ಲಿಸಿಬಿಟ್ಟ. ಬಳಿಕ ಅಕ್ಕಪಕ್ಕದವರನ್ನೆಲ್ಲ ದುರುಗುಟ್ಟುತ್ತ ನಿಂತುಕೊಂಡ.ಇತ್ತ ಫಳಫಳ ಹೊಳೆಯುವ ಚಾಕುವನ್ನು ಅದಕ್ಕೆ ತಕ್ಕಂಥ ತಾಮಸನ ರೌದ್ರಾವತಾರವನ್ನು ಕಂಡ ಇಡೀ ಸರದಿ ಸಾಲು ಒಮ್ಮೆಲೆ ಕೆಟ್ಟು ನಿಂತ ರೈಲಿನಂತೆ ತುಸು ಹೊತ್ತು ಸ್ಥಬ್ಧವಾಗಿ ಒಳಗೊಳಗೆ ಧುಮುಗುಟ್ಟ ತೊಡಗಿತು.

ತಾಮಸನಿಂದ ಸರದಿ ತಪ್ಪಿದ ಯುವಕರಿಬ್ಬರೂ ಕುದಿಯುತ್ತ ಬಂದು ಮತ್ತೆ ಸಾಲಿನಲ್ಲಿ ಸೇರಿಕೊಂಡರು.ಆಗ ತಾಮಸ  ತುಸು ಹೊತ್ತು ಅವರನ್ನು ದುರುಗುಟ್ಟಿದವನು, ಬಕ್ರ್ಲಿ ಸಿಗರೇಟೊಂದನ್ನು ಹೊತ್ತಿಸಿ ತುಟಿಗಿಟ್ಟುಕೊಂಡು ದೀರ್ಘವಾಗಿ ಧಮ್ಮೆಳೆಯುತ್ತ, ಕ್ಯೂನಲ್ಲಿ ನಿಂತಿದ್ದ ಅಂದ ಚೆಂದದ ಹುಡುಗಿಯರತ್ತ ದೃಷ್ಟಿಯನ್ನು ಹೊರಳಿಸಿದ. ಅವರಲ್ಲಿ ಕೆಲವರನ್ನು ಅಡಿಯಿಂದ ಮುಡಿಯವರೆಗೆ ಕೆಟ್ಟ ಆಸೆಯಿಂದ ದಿಟ್ಟಿಸುತ್ತ,ಹುಬ್ಬು ಹಾರಿಸಿ ಕಣ್ಣು ಮಿಟುಕಿಸುತ್ತ,ಇವತ್ತು ಇವರಲ್ಲಿ ಒಬ್ಬಳನ್ನಾದರೂ ಪಟಾಯಿಸಲೇ ಬೇಕು!ಎಂದು ನಿರ್ಧರಿಸಿದ.ಬಳಿಕ ಸ್ವಲ್ಪ ದೂರದ ಪೆಂಡೂಲ ಮರಗಳಸಾಲಿನತ್ತ ನಡೆದು ಎತ್ತರದ ಆವರಣಕ್ಕೊರಗಿ ನಿಂತುಕೊಂಡು ತಲಾಶೆಗಿಳಿದ.ಅವನ ಆ ಬಗೆಯ ಹಾಳು ದೃಷ್ಟಿಯನ್ನು ಕಂಡ ಕೆಲವು ಹುಡುಗಿಯರಿಗೆ ಅಸಹ್ಯವೆನಿಸಿತು.ಅವರು ತಟ್ಟನೆ ಮುಖವನ್ನು ಬೇರೆಡೆಗೆ ತಿರುಗಿಸಿ ನಿಂತುಕೊಂಡರು.ಇನ್ನು ಕೆಲವರು, ‘ಥೂ, ನಾಚಿಕೆಗೆಟ್ಟವನೇ…!’ಎಂಬ ಭಾವದಿಂದ ಅವನು ನೋಡಲೆಂದೇ ಕ್ಯಾಕರಿಸಿ ಉಗಿದು ಮುಖ ತಿರುಗಿಸಿದರು.ಹಾಗೆ ಉಗಿದವರಲ್ಲಿ ಹದಿನೆಂಟರ ಹುಡುಗಿಯೊಬ್ಬಳ ಮೇಲೆ ತಾಮಸನಿಗೆ ಅಸಾಧ್ಯ ಸಿಟ್ಟು ಬಂತು. ಕೂಡಲೇ ಅವಳತ್ತ ನುಗ್ಗಿದ.

‘ಏನಾ, ಅಹಂಕಾರವಾ ನಿಂಗೇ…? ಹೆಚ್ಚು ನಾಟಕವಾಡಬೇಡ ಗೊತ್ತಾಯ್ತಾ!ಈಗಲೇ ಹೊತ್ತುಕೊಂಡು ಹೋಗಲಿಕ್ಕುಂಟು…!’ ಎಂದು ಗುಡುಗಿದ.ಅವಳು ಅಷ್ಟೇ ಪೊಗರಿನವಳು.‘ಹೇ, ಹೋಗನಾ ನಾಯಿ! ತಾಕತ್ತಿದ್ದರೆ ಮೈ ಮುಟ್ಟು ನೋಡುವ…? ಮತ್ತ್ಯಾಕೆ ಕಣ್ಣು ಹೊಡೆದದ್ದು? ಅಕ್ಕ, ತಂಗಿಯರಿಲ್ಲವಾ ನಿಂಗೆ? ಚಪ್ಪಲಿಯಲ್ಲಿ ಹೊಡಿಯಲಿಕ್ಕುಂಟು ಥೂ! ನಿನ್ನ ಜನ್ಮಕ್ಕಿಷ್ಟು!’ಎಂದು ಕೋಪದಿಂದ ಮತ್ತೊಮ್ಮೆ ಉಗಿದಳು.ಅದರಿಂದ ತಾಮಸ ಕೆಂಡಾಮಂಡಲನಾದವನು ಅವಳನ್ನು ಹಿಡಿದು ಎಳೆಯಲು ಮುಂದಾದ. ಅದನ್ನು ಕಂಡ ಸರದಿ ಸಾಲಿನಲ್ಲಿದ್ದ ಯುವಕರ ರಕ್ತವು ಕೊತಕೊತನೆ ಕುದಿಯಿತು. ಆದರೆ ಮಾಡುವುದೇನು? ತಾಮಸನ ದಿಟ್ಟತನ ಆಗಷ್ಟೆ ಅವರ ತಲೆಯೊಳಗೆ ಹೊಕ್ಕು ಹೆದರಿಸುತ್ತಿದ್ದ ಹರಿತವಾದ ಚಾಕು ಎಲ್ಲರ ಬಾಯಿ ಮುಚ್ಚಿಸಿತ್ತು. ಆದರೆ ಅಷ್ಟರಲ್ಲಿ ಹೊರಗಡೆ ಗಸ್ತು ತಿರುಗುತ್ತಿದ್ದ ಟಾಕೀಸಿನ ಮ್ಯಾನೇಜರ್ ಮಹಾದೇವರಿಗೆ ತಾಮಸನ ಉದ್ಧಟತನವು ಎದ್ದುಕಾಣಿಸಿತು. ಅವರಿಗೆ ಅವನ ದುರಹಂಕಾರ ಸ್ವಭಾವವು ಹಿಂದಿನಿಂದಲೂ ಪರಿಚಯವಿತ್ತು. ಹಾಗಾಗಿ ಅವರು ಅತ್ತ ಧಾವಿಸಿದವರು,‘ಅರೆರೇ…, ಏನಿದು ತಾಮಸರೇ…!ನೀವು ಹೀಗೆ ಮಾಡುವುದಾ? ಛೇ!ಛೇ! ಹೆಣ್ಣು ಮಕ್ಕಳಿಗೆ ತೊಂದರೆ ಮಾಡಬಾರದು. ಬನ್ನಿ ಬನ್ನಿ ಸ್ವಲ್ಪ ಈಚೆಗೆ ಬನ್ನಿ. ಮಾತಾಡುವ!’ ಎಂದೆನ್ನುತ್ತ ಅವನ ರಟ್ಟೆಹಿಡಿದು ದೂರಕ್ಕೆ ಕರೆದೊಯ್ದು ಒಂದಿಷ್ಟು ಬುದ್ಧಿವಾದ ಹೇಳಿದರು.ಅದರಿಂದ ತಾಮಸ ಸ್ವಲ್ಪತಣ್ಣಗಾದ. ಬಳಿಕ ಮತ್ತೊಂದು ಸಿಗರೇಟು ಹೊತ್ತಿಸಿಕೊಂಡು ಬಗಬಗನೆ ಹೊಗೆ ಬಿಡುತ್ತ ಹೋದವನು ಟಾಕೀಸಿನ ಆವರಣಕ್ಕೆ ಬೆನ್ನು ಹಾಕಿ ಎಡಗಾಲನ್ನು ಮಡಚಿ ಗೋಡೆಗೊತ್ತಿ ನಿಂತುಕೊಂಡು ತನ್ನನ್ನು ಕೆಣಕಿದ ತರುಣಿಯನ್ನೇ ಮಲೆಯತೊಡಗಿದ.

ಟಿಕೇಟು ಕೊಡಲು ಇನ್ನೇನು ಕೆಲವೇ ನಿಮಿಷಗಳಿವೆ ಎಂಬಷ್ಟರಲ್ಲಿ ಮತ್ತಿಬ್ಬರು ಲಲನೆಯರು ಓಡೋಡುತ್ತ ಬಂದರು. ಹದಿನೆಂಟು, ಹತ್ತೊಂಬತ್ತರ ಹರೆಯದ, ಮೈಕೈ ತುಂಬಿಕೊಂಡು ಕುಳ್ಳಗೆ ಬೆಳ್ಳಗಿದ್ದ ಆ ತರುಣಿಯರು ಅರ್ಧ ಲಂಗ ತೊಟ್ಟು,ಮನಿಶಾ ಕೊಹಿರಾಲ ಧರಿಸುವಂಥ ಟೀಶರ್ಟ್ ಧರಿಸಿದ್ದವರು ತವಕದಿಂದ ಟಿಕೇಟು ಸಾಲಿನತ್ತ ನುಗ್ಗಿದರು. ಆದರೆ ಸುಮಾರು ಐನೂರು ಸೀಟುಗಳಿಗೆ ಸಾವಿರದಷ್ಟು ಜನರು ಕ್ಯೂನಲ್ಲಿದ್ದುದನ್ನು ಕಂಡವರು ದಂಗಾಗಿ ನಿಂತುಬಿಟ್ಟರು. ಇಂಥ ನೂಕು ನುಗ್ಗಲಲ್ಲಿ ತಮಗೆ ಟಿಕೇಟು ಸಿಗುವುದು ಕನಸಿನ ಮಾತೇ ಸರಿ ಎಂದೆನಿಸಿತವರಿಗೆ. ಆದ್ದರಿಂದ,‘ಛೇ…! ಎಂಥದನಾ ಇದು…!’ ಎನ್ನುತ್ತ ಒಬ್ಬರನೊಬ್ಬರು ನಿರಾಶೆಯಿಂದ ನೋಡಿಕೊಂಡರು. ಬಳಿಕ,‘ಇಂಥ ರಶ್ಶ್‍ನಲ್ಲಿ ಟಿಕೇಟು ಸಿಗುವುದು ಹೌದನಾ…?’ಎಂದಳು ದೊಡ್ಡವಳು. ‘ಅದೇ ಮಾರಾಯ್ತೀ…! ಎಂಥ ಮಾಡುವುದನಾ ಈಗ…?’ ಎಂದಳು ಸಣ್ಣವಳು. ಇಬ್ಬರೂ ಬೇಸರದಿಂದ ತಾಮಸ ನಿಂತಿದ್ದ ಪಕ್ಕದ ಮರದಡಿಗೆ ಬಂದು ನಿಂತು,ತಮ್ಮ ಪರಿಚಯದವರು ಯಾರಾದರೂ ಕಾಣಿಸುತ್ತಾರೋ ಎಂದುಕೊಂಡು ಸರದಿಯುದ್ದಕ್ಕೂ ಕಣ್ಣು ಹಾಯಿಸ ತೊಡಗಿದರು. ಅದೇ ಹೊತ್ತಿಗೆ ತಾಮಸ ಅವರನ್ನು ಗಮನಿಸಿದ. ಮರುಕ್ಷಣ,‘ವಾವ್! ಇದು ಆಗುತ್ತದೆ. ಟ್ರೈ ಮಾಡುವ!’ ಎಂದಿತು ಅವನ ಮನಸ್ಸು. ಮೆಲ್ಲನೇ ಅವರ ಹತ್ತಿರ ಹೋದವನು, ‘ಏನು, ಟಿಕೇಟು ಬೇಕಿತ್ತಾ…?’ಎಂದು ನಯವಾಗಿ ಪ್ರಶ್ನಿಸಿದ. ಇವನ ಮಾತಿನಿಂದ ಆ ಹುಡುಗಿಯರ ಆಸೆಯ ಕಣ್ಣುಗಳು ಫಳ್ಳನೆ ಮಿಂಚಿದವು.

‘ಹ್ಞಾಂ ಹೌದುರೀ…! ಬಸ್ಸು ಬರುವಾಗ ಲೇಟಾಯಿತು. ಎರಡು ಟಿಕೇಟು ಬೇಕಿತ್ತು. ತೆಗೆದು ಕೊಡುತ್ತೀರಾ…?’ಎಂದು ಹಿರಿಯವಳು ಅಂಗಲಾಚಿಯೇ ಕೇಳಿದಳು.

ಈ ಹುಡುಗಿಯರು ತಮ್ಮೂರು ಗಣೇಶನಗರದಿಂದ ಶಿವಕಂಡಿಕೆಯ ವಾರದ ಸಂತೆಗೂ, ಪೇಟೆಗೂ ಆಗಾಗ ಬಂದು ಹೋಗುತ್ತಿದ್ದಾಗ ಸುತ್ತಮುತ್ತಲಿನ ಗೋಡೆ, ಕಟ್ಟಡ ಮತ್ತು ಮರಮಟ್ಟುಗಳ ಮೇಲೆಲ್ಲ ರಾರಾಜಿಸುತ್ತಿದ್ದ ಮುರಳಿ, ಭವ್ಯರ ಅಪ್ಪುಗೆಯ ಪೋಸ್ಟರುಗಳು ಅವರ ಹದಿಹರೆಯದ ಮನಸ್ಸನ್ನು ಅದಾಗಲೇ ಕಲಕಿ ಸೂರೆಗೊಂಡಿದ್ದವು. ಆದ್ದರಿಂದ ಹೇಗಾದರೂ ಮಾಡಿ ಈ ಸಿನೇಮಾವನ್ನು ನೋಡಲೇ ಬೇಕೆಂಬ ಹೆಬ್ಬಯಕೆಯಿಂದ ಮನೆಯವರಲ್ಲಿ ಏನೋ ಸುಳ್ಳು ಹೇಳಿ ಬಂದಿದ್ದರು. ಆದರೆ ಇಲ್ಲಿ ಟಿಕೇಟು ಸಿಗುವುದಿಲ್ಲವೆಂಬ ನಿರಾಶೆಯ ನಡುವೆಯೇ ಆಪದ್ಭಾಂದವನಂತೆ ತಾಮಸನ ಆಗಮನವಾದುದು ಅವರಿಗೆ ಕತ್ತಲಲ್ಲಿ ಮಾಣಿಕ್ಯ ಹೊಳೆದಷ್ಟು ಖುಷಿಯಾಯಿತು. ಆ ಕ್ಷಣ ತರುಣಿಯರ ಅರಳಿದ ಮುದ್ದು ಮುಖಗಳು ತಾಮಸನ ಪಂಚೆಂದ್ರೀಯಗಳನ್ನೂ ಉದ್ರೇಕಿಸಿ ಬಿಟ್ಟವು. ‘ಆಯ್ತು. ಅದಕ್ಕೇನಂತೆ!’ಎಂದು ಗತ್ತಿನಿಂದ ಅಂದವನು ಅವರು ಹಣ ನೀಡಲು ಬಂದರೂ, ‘ಆಮೇಲೆ ನೋಡುವ!’ ಎನ್ನುತ್ತ ಸಿಂಹ ನಡಿಗೆಯಿಂದ ಗೆಳೆಯರತ್ತ ನಡೆದ. ‘ಹೇ, ಇನ್ನೆರಡು ಟಿಕೇಟು ಹೆಚ್ಚಿಗೆ ತೆಗೆಯಿರನಾ!’ ಎಂದು ವಾಲ್ಟರನ ಕಿವಿಯಲ್ಲೇನೋ ಪಿಸುಗುಟ್ಟಿದವನು ಅದೇ ಗಾಂಭೀರ್ಯದಿಂದ ಮರಳಿ ಬಂದು,‘ಟಿಕೇಟು ಆಯ್ತು. ಇನ್ನು ಮಂಡೆಬಿಸಿ ಬಿಡಿ!’ ಎಂದ ಸಭ್ಯನಂತೆ. ಆ ಲಲನೆಯರಿಗೆ ತಾವು ಸಮಯ ತಪ್ಪಿ ಬಂದರೂ ಶ್ರಮವಿಲ್ಲದೆ ಟಿಕೇಟು ಸಿಕ್ಕಿದ್ದು ಅತೀವ ಆನಂದವಾಗಿ ತಾಮಸನ ಮೇಲೆ ಸಾತ್ವಿಕ ಭಾವನೆಮೂಡಿತು.

ಸೂರ್ಯ, ವಾಲ್ಟರರು ಸ್ವಲ್ಪಹೊತ್ತಿನಲ್ಲಿ ಟಿಕೇಟು ಪಡೆದು ಹೊರಗೆ ಬಂದವರು ತಾಮಸನೊಟ್ಟಿಗೆ ನಿಂತಿದ್ದ ಹುಡುಗಿಯರನ್ನು ಕಂಡು ರೋಮಾಂಚಿತರಾಗಿ ಗೆಳೆಯನತ್ತ ಮೆಚ್ಚುಗೆಯ ಮಿಂಚು ಹಾರಿಸಿದರು. ತಾಮಸ ಅವರತ್ತ ಗೆಲುವಿನ ನಗೆ ಬೀರಿದವನು ಒಳಗೆ ಹೋಗಿ ಸೀಟು ಕಾಯ್ದಿರಿಸಲು ಸೂಚಿಸಿದ.ಆಗ ಅವರಿಬ್ಬರೂ ಶಿಳ್ಳೆ ಹೊಡೆಯುತ್ತ ಒಳಗೆ ನಡೆದರು. ತಾಮಸನು ಹುಡುಗಿಯರನ್ನು ಒತ್ತಾಯಿಸಿ ಟಾಕೀಸಿನೊಳಗಿದ್ದ ಅಂಗಡಿಗೆ ಕರೆದೊಯ್ದು ತಂಪು‘ಬಾಜಲ್’ಕೊಡಿಸಿದ. ಅದನ್ನವರು ನಾಚುತ್ತ ಕುಡಿಯುವುದನ್ನು ಕಂಡು ಹಲ್ಲು ಗಿಂಜುತ್ತ ಮನದಲ್ಲಿ ಮಂಡಿಗೆ ಮೆಲ್ಲುತ್ತ ನಿಂತ. ಪಾನೀಯ ಕುಡಿದ ನಂತರ ತಾಮಸನು ತಮ್ಮ ಮೈಗೆ ಮೈಸೋಕಿಸುತ್ತ ಟಾಕೀಸಿನೊಳಗೆ ಬಂದುದನ್ನು ಗಮನಿಸಿದ ಹುಡುಗಿಯರಿಗೆ ಪುಕುಪುಕು ಶುರುವಾಯಿತು.ಆದರೆ ತಾಮಸನ ಸೌಜನ್ಯಪೂರಿತ ನಡತೆಯು ದೊಡ್ಡವಳಲ್ಲಿ ತುಸು ಧೈರ್ಯ ಮೂಡಿಸಿತು.

ಸೂರ್ಯ, ವಾಲ್ಟರರು ಎರಡನೆಯ ದರ್ಜೆಯ ಕೊನೆಯ ಸಾಲಿನ ಗೋಡೆಯ ಮೂಲೆಯೊಂದರಲ್ಲಿ ಮೂರು ಸೀಟು ಹಿಡಿದು ಕುಳಿತಿದ್ದರು. ತಾಮಸನು ಹುಡುಗಿಯರನ್ನು ತನ್ನ ಮತ್ತು ಗೆಳೆಯರ ನಡುವೆ ಕುಳ್ಳಿರಿಸಿಕೊಂಡ. ಟಾಕೀಸಿನ ಬೆಳಕು ಆರಿ,‘ವಾಶಿಂಗ್ ಪೌಡರ್ ನಿರ್ಮಾ… ವಾಶಿಂಗ್ ಪೌಡರ್ ನಿರ್ಮಾ…ಹಾಲಿನಂಥ ಬಿಳುಪು ನಿರ್ಮಾದಿಂದ ಬಂತು…!’ ಎಂಬ ಮೊದಲ ಜಾಹಿರಾತು ಆರಂಭವಾಗುತ್ತಲೇ ತಾಮಸನ ಸಭ್ಯತೆಯ ಬಣ್ಣ ಕಳಚಿಕೊಂಡಿತು.

‘ನಿಮ್ಮ ಹೆಸರೇನು?’ಎಂದು ಅವನು ತನ್ನ ಪಕ್ಕ ಕುಳಿತ ಮತ್ತು ಸಣ್ಣವಳಿಗಿಂತ ಹೆಚ್ಚು ಚೆಲುವೆಯಾದ ದೊಡ್ಡವಳೊಡನೆ ಹೆಗಲು ಬಾಗಿಸಿ ಕಿವಿಯ ಸಮೀಪ ಹೋಗಿ ಪ್ರಶ್ನಿಸಿದ.

ಆಕೆ,‘ನಾಗರತ್ನ’ ಎಂದಳು ನಾಚುತ್ತ.

‘ಮನೆ ಎಲ್ಲಿ?’

‘ಇಲ್ಲೇ ಗಣೇಶ ನಗರದಲ್ಲಿ…’

‘ಕಾಲೇಜಿಗೆ ಹೋಗ್ತಿದ್ದೀರಾ…?’

ಅಷ್ಟು ಕೇಳಿದ ಅವಳು ಕೆಲವು ಕ್ಷಣ ತಡಕಾಡಿ,‘ಅಯ್ಯೋ ಇಲ್ಲಾರೀ…! ಮನೆಯಲ್ಲಿ ಬೀಡಿ ಕಟ್ಟುವುದು…!’ಎಂದು ತಾನು ಕುಳಿತ ಭಂಗಿಯನ್ನೊಮ್ಮೆ ಸೂಕ್ಷ್ಮವಾಗಿ ಬದಲಿಸುತ್ತ ಅಂದಳು.

‘ಓಹೋ, ಹೌದಾ…! ಆದರೆ ನೋಡಲು ನೀವಿಬ್ಬರೂ ಕಾಲೇಜು ಹುಡುಗಿಯರ ತರಾನೇ ಕಾಣಿಸ್ತೀರಲ್ಲ ಮತ್ತೇ…!’ ಎಂದು ತಾಮಸ ಹುಸಿ ವಿಸ್ಮಯ ಪ್ರಕಟಿಸುತ್ತ ಹೊಗಳಿದ.ಅಷ್ಟು ಕೇಳಿದ ನಾಗರತ್ನ ಒಳಗೊಳಗೆ ಉಬ್ಬಿದಳು.

‘ಅಪ್ಪ ಏನು ಕೆಲ್ಸ ಮಾಡ್ತಾರೆ…?’

‘ಅವರಿಗೆ ಸ್ವಂತ ರಿಕ್ಷಾ ಉಂಟು. ದೊಡ್ಡ ಬಸ್ಟ್ಯಾಂಡಿನಲ್ಲಿ ಸುಂದರಣ್ಣ ಅಂತ ಕೇಳಿದ್ದೀರಾ? ಅವರ ಮಗಳು ನಾನು. ನಾವು ಸಿನ್ಮಾಕ್ಕೆ ಬಂದಿರುವುದು ಅಪ್ಪನಿಗೆ ಗೊತ್ತಿಲ್ಲರೀ. ಗೊತ್ತಾದರೆ ನಮ್ಮ ಕಥೆ ಅಷ್ಟೆ ಮತ್ತೆ! ಅವರು ಮನೆಗೆ ಬರುವಾಗ ರಾತ್ರಿ ಒಂಭತ್ತು, ಹತ್ತಾಗುತ್ತದೆ. ಅಷ್ಟರೊಳಗೆ ನಾವು ಮನೆಯಲ್ಲಿರಬೇಕು!’ ಎಂದ ನಾಗರತ್ನ ಬಳಿಕ, ‘ಹೌದೂ… ನಿಮ್ಮ ಹೆಸರೇನು?’ಎಂದಳು ನಾಚುತ್ತ.ಆಗ ತಾಮಸ ಎಂಥದ್ದೋ ಯೋಚನೆಯಲ್ಲಿ ಉಗುರು ಕಚ್ಚುತ್ತಿದ್ದವನು,‘ಹ್ಞಾಂ, ನನ್ನ ಹೆಸರಾ…? ಅದೂ…!’ ಎಂದು ತುಸು ತಡವರಿಸಿದವನು ಬಳಿಕ ರಪ್ಪನೆ,‘ಶೇಖರಾ ಅಂತ…’ಎಂದುಬಿಟ್ಟ.

ಇತ್ತ ನಾಗರತ್ನಾಳ ಗೆಳತಿ ವಿಮಲ ಸೂರ್ಯನ ಪಕ್ಕ ಕುಳಿತವಳು ಒಮ್ಮೆಲೇ ಸಿಡಿಮಿಡಿಗೊಂಡು,‘ಏ…ನೋಡನಾ ನಾಗಿ ಇಲ್ಲೀ…! ಇವರಿಬ್ಬರು ಎಲ್ಲೆಲ್ಲೋ ಕೈಹಾಕಿ ತೊಂದರೆ ಮಾಡ್ತಿದ್ದಾರೆ. ನಾನಿಲ್ಲಿ ಕುಳಿತು ಕೊಳ್ಳುವುದಿಲ್ಲ. ನಂಗೆ ಹೇಸಿಗೆಯಾಗ್ತದೆ!’ಎಂದು ಅಳಲೇ ಮುಂದಾದಳು.

‘ಛೀ! ಛೀ! ಎಂಥದನಾ ನೀನು…? ಎಲ್ಲೋ ಅಪ್ಪಿತಪ್ಪಿ ಕೈ ತಾಗಿರಬೇಕು. ಅದಕ್ಕೆ ಅಳುವುದಾ…! ಈಗ ಪಿಕ್ಚರ್ ಶುರುವಾಗುತ್ತದೆ. ಸುಮ್ಮನಿರು!’ಎಂದು ನಾಗರತ್ನ ಗೆಳತಿಯನ್ನು ಗದರಿಸಿ ಮತ್ತೆ ತಾಮಸನತ್ತ ಆಸಕ್ತಿ ತೋರಿದಳು.ಆಗ ವಿಮಲ ಪೆಚ್ಚಾದವಳು ಸೂರ್ಯನಿಂದ ದೂರವಾಗಿ ನಾಗರತ್ನಳಿಗೆ ಒತ್ತಿ ಕುಳಿತಳು.ಅಷ್ಟರಲ್ಲಿ ಸಿನೇಮ ಶುರುವಾಯಿತು. ಪರದೆಯ ಮೇಲೆ ನಾಯಕ, ನಾಯಕಿಯ ನಡುವೆ ಪ್ರೇಮಾಂಕುರವಾಗತೊಡಗಿತು. ಅದನ್ನು ರೋಮಾಂಚಿತರಾಗಿ ವೀಕ್ಷಿಸುತ್ತಿದ್ದ ಪ್ರೇಕ್ಷಕವರ್ಗದಲ್ಲೂ ಹತ್ತಾರು ಜೋಡಿಗಳ ನಡುವಿನ ಕೋಮಲ ಸ್ಪರ್ಶವು ಅದೇ ಮಾದರಿಯಲ್ಲಿ ಮಧುರಾನುಭವ ನೀಡುತ್ತ ಸಾಗುತ್ತಿತ್ತು. ಅಂಥವರಲ್ಲಿ ತಾಮಸ ಮತ್ತು ನಾಗರತ್ನಾಳ ಜೋಡಿಯೂ ಒಂದಾಗಿತ್ತು.

ಆದರೆ ನಾಗರತ್ನಾಳಿಗೆ ತಾಮಸನಿಂದ ಪೂರ್ಣ ಮಧುರಾನುಭವ ಪಡೆಯಲು ತನ್ನ ಗೆಳತಿಯ ಪಕ್ಕ ಕುಳಿತ ತಾಮಸನ ಗೆಳೆಯರ ತಿಕ್ಕಾಟಗಳು ಬಿಡಲಿಲ್ಲ. ಹಾಗಾಗಿ ವಿಮಲ ಪದೇಪದೇ ನಾಗರತ್ನಾಳನ್ನು ತಿವಿತಿವಿದು ಸಿಡುಕುತ್ತ ಅವರ ಬಗ್ಗೆ ದೂರು ಹೇಳುತ್ತಿದ್ದಳು. ಒಂದೆರಡು ಬಾರಿ ಗರುಡಗಂಬದಂತೆ ಬಿಮ್ಮನೆ ಎದ್ದು ನಿಂತುಕೊಂಡು ನಾಗರತ್ನಾಳ ಸುಖಕ್ಕೆ ಕಲ್ಲು ಹಾಕಿಬಿಟ್ಟಳು. ಆದ್ದರಿಂದ ನಾಗರತ್ನಾ ವಿಧಿಯಿಲ್ಲದೆ ತಾಮಸನಿಂದ ಅವನ ಗೆಳೆಯರಿಗೆ ಉಗಿಸಿ ಸುಮ್ಮನಾಗಿಸ ಬೇಕಾಯಿತು. ಅದರಿಂದ ತಾಮಸನು ತನ್ನ ಗೆಳೆಯರ ಮೇಲೆ ಮುನಿಸಿಕೊಂಡ.‘ಈ ದರ್ವೇಶಿಗಳಿಗೆ ಇಷ್ಟು ಬೇಗನೇ ಏನು ಜೀವ ಎಳೆಯುವುದು? ಸ್ವಲ್ಪಹೊತ್ತು ತಡೆದುಕೊಂಡರೆ ಸಾಯ್ತಾರಾ…!’ ಎಂದುಕೊಂಡವನು,ಇದೊಂದು ಸಿನೇಮಾ ಯಾವಾಗ ಬಿಡುತ್ತಪ್ಪಾ…?ಎಂದು ಚಡಪಡಿಸತೊಡಗಿದ. ಅಂತೂ ಇಂತೂ ಪ್ರೇಮವೆಂಬ ಮಾಯಕದ ಬಲೆಗೆ ಕೆಡವಲ್ಪಟ್ಟ ನಾಯಕ ತನ್ನ ನಾಯಕಿಗಾಗಿ ಹಸಿ ಇಟ್ಟಿಗೆ ಗೂಡಿನೊಳಗೆ ಅವಿತುಕೊಳ್ಳುವುದು,ಆಗ ವಿಲನ್ ಬಂದು ಆ ಗೂಡಿಗೆ ಬೆಂಕಿ ಹಚ್ಚಿ ನಾಯಕನನ್ನು ಸುಡಲೆತ್ನಿಸುವುದು, ಮರುಕ್ಷಣನಾಯಕಿಯ ಕೂಗಿಗೆ ನಾಯಕನು ಉಗ್ರ ನರಸಿಂಹನಂತೆ ಗೂಡು ಒಡೆದು ಹೊರಗೆ ಧುಮುಕಿ ಕಳನಾಯಕನ್ನು ಹಿಗ್ಗಾಮುಗ್ಗ ಥಳಿಸುವುದು.ಕೊನೆಯಲ್ಲಿ ಪ್ರೇಮಿಗಳು ಒಂದಾಗಿ ಪರದೆಯ ಮೇಲೆ ಶುಭಂ ಬೀಳುವಲ್ಲಿಗೆ ತಾಮಸನ ನರಳಾಟವೂ ಕೊನೆಗೊಂಡಿತು.

***

ಒಂದು ಚೂರೂ ಶ್ರಮವಿಲ್ಲದೆ ಸಲೀಸಾಗಿ ಬಲೆಗೆ ಬಿದ್ದ ಚಂದದ ಬೆಳ್ಳಕ್ಕಿಗಳೆಲ್ಲಿ ಕೈಜಾರಿ ಹಾರುತ್ತವೋ?ಎಂಬ ಆತಂಕದಿಂದಇಡೀ ಸಿನೇಮಾವನ್ನುನೋಡಿ ಮುಗಿಸಿದ ತಾಮಸನು ಟಾಕೀಸಿನ ಬಾಗಿಲು ತೆರೆಯುತ್ತಲೇ  ದಢಕ್ಕನೆದ್ದು ಅಕ್ಕಪಕ್ಕದವರನ್ನು ತಳ್ಳಿಕೊಂಡೇ ಹುಡುಗಿಯರ ಹಿಂದೆ ಹೊರಗೆ ಧಾವಿಸಿದ. ಅವರಿಗಂಟಿಕೊಂಡೇ ವರಾಂಡಕ್ಕೆ ಬಂದು, ‘ಈಗ ಮನೆಗೆ ಹೇಗೆ ಹೋಗುತ್ತೀರಿ…? ಬಸ್ಸು ಸಿಗುತ್ತದಾ…?’ ಎಂದು ಇಲ್ಲದ ಮುತುವರ್ಜಿ ತೋರಿದವನು,‘ಬನ್ನಿ ರಿಕ್ಷಾದಲ್ಲಿ ಹೋಗುವ. ನಾವೂ ಗಣೇಶ ನಗರದತ್ತಲೇ ಹೋಗುವವರು. ನಿಮ್ಮನ್ನು ಮನೆಯ ಹತ್ರ ಬಿಟ್ಟು ನಾವು ಮುಂದೆ ಹೋಗುತ್ತೇವೆ!’ಎಂದ ಆತ್ಮೀಯವಾಗಿ.ನಾಗರತ್ನ ತಟ್ಟನೆ ಒಪ್ಪಿಕೊಂಡಳು. ಆದರೆ ವಿಮಲಾಳಿಗೆ ತಾಮಸರ ಗುಂಪು ಆಗಲೇ ಭಯ ಮತ್ತು ಅಸಹ್ಯವನ್ನು ಹುಟ್ಟಿಸಿತ್ತು.ಅವಳು ಮೆಲ್ಲನೆ ಸೂರ್ಯನ ಮುಖ ಕಂಡವಳು, ‘ಊಂಹ್ಞೂಂ! ಬೇಡ ಮಾರಾಯ್ತಿ. ನಾವು ಬಸ್ಸಿನಲ್ಲೇ ಹೋಗುವ. ಅವರು ಸರಿಯಿಲ್ಲವನಾ!’ ಎಂದು ಗೆಳತಿಯ ಕಿವಿಯಲ್ಲಿ ಪಿಸುಗುಟ್ಟಿದವಳು ಮುಂದೆ ನಡೆದು ಹೋದಾಗ ನಾಗರತ್ನ ತುಸುಹೊತ್ತು ನಿರಾಶಳಾಗಿ ನಿಂತುಬಿಟ್ಟಳು. ಬಳಿಕ ಎಚ್ಚೆತ್ತು, ಬಸ್ಸು ನಿಲ್ದಾಣದ ರಸ್ತೆಯಲ್ಲಿ ಸುಮಾರು ದೂರ ನಡೆದು ಹೋಗಿದ್ದ ಗೆಳತಿಯತ್ತ ಓಡಿ ಹೋಗಿ ಅಸಹನೆಯಿಂದ ಅವಳನ್ನು ನಿಲ್ಲಿಸಿದವಳು,‘ಯಾಕೆ ಮಾರಾಯ್ತಿ ಅಷ್ಟೊಂದು ಹೆದರುತ್ತೀ…? ಅವರು ಒಳ್ಳೆಯವರು!’ ಎಂದಳು ದುಗುಡದಿಂದ. ಆದರು ವಿಮಲ ಮುದುವರೆದಾಗ, ‘ಅಲ್ಲವನಾ…ನಾವು ಇಲ್ಲಿಂದ ಬಸ್ಟ್ಯಾಂಡಿನ ತನಕ ಈ ನರಕದ ಬಿಸಿಲಲ್ಲಿ ನಡೆದುಕೊಂಡು ಹೋಗಿಅಲ್ಲಿ ಇನ್ನೊಂದು ಗಂಟೆ ಬಸ್ಸಿಗೆ ಕಾದು, ಆ ಜಕ್ರೀಸ್ ಬಸ್ಸಿನಲ್ಲಿ ನೇತಾಡಿಕೊಂಡು ಸುಸ್ತಾಗಿ ಮನೆ ಸೇರುವುದಕ್ಕಿಂತ ಆರಾಮವಾಗಿ ರಿಕ್ಷಾದಲ್ಲಿ ಹೋಗುವುದು ಒಳ್ಳೆಯದಲ್ಲವನಾ…? ನಾವು ಶೇಖರ ಅವರ ಜೊತೆಯಲ್ಲಿಯೇ ಹೋಗುವ ಆಗದಾ…?’ ಎಂದು ತನ್ನ ಕೋಪವನ್ನು ಹತ್ತಿಕ್ಕಿ ಗೆಳತಿಯನ್ನು ಪುಸಲಾಯಿಸಿದಳು.

ಆದರೂ ವಿಮಲ ಒಪ್ಪಲಿಲ್ಲ. ಅವಳು ಮತ್ತೂ ಗೊಂದಲಕ್ಕೆ ಬಿದ್ದುದನ್ನು ಗ್ರಹಿಸಿದ ನಾಗರತ್ನ, ‘ಛೇ! ಬೇಗ ಹೇಳನಾ…!ಇಲ್ಲಿ ಸುತ್ತ ಮುತ್ತಲಿನವರೆಲ್ಲ ನಮ್ಮನ್ನೇ ನೋಡುತ್ತಿದ್ದಾರೆ…, ನಂಗೆ ನಾಚಿಕೆಯಾಗುತ್ತದೆ…!’ ಎಂದು ಇವರತ್ತ ಕೆಟ್ಟ ಚಪಲದಿಂದ ಗುರಾಯಿಸುತ್ತಿದ್ದ ಒಂದಷ್ಟು ಯುವಕರನ್ನು ಕಂಡು ಮುಜುಗರದಿಂದ ಅಂದಳು. ಆಗ ವಿಮಲಳೂ ಅತ್ತ ಗಮನಿಸಿದವಳಿಗೆ ಮುಜುಗರವಾಗಿ,‘ಹ್ಞೂಂ, ಆಯ್ತು ಮಾರಾಯ್ತಿ ಹೋಗುವ!’ ಎಂದಳು ಸಿಡುಕಿನಿಂದ. ಅದೇ ಹೊತ್ತಿಗೆ ತಾಮಸ ಅವರ ಹತ್ತಿರ ಬಂದ. ನಾಗರತ್ನ ತನ್ನ ಗೆಳತಿಯ ಅಳಲನ್ನು ವಿವರಿಸುತ್ತ, ‘ನಾವು ನಿಮ್ಮ ಸ್ನೇಹಿತರೊಂದಿಗೆ ಬರುವುದಿಲ್ಲರೀ. ವಿಮಲಾಳಿಗೆ ಇಷ್ಟವಿಲ್ಲವಂತೆ!’ ಎಂದಳು. ಅದಕ್ಕವನು,‘ಓಹೋ, ಅಷ್ಟೇನಾ ಅದಕ್ಕೇನಂತೆ! ಆಯ್ತು. ನಾವು ಮೂವರು ಒಂದು ರಿಕ್ಷಾದಲ್ಲಿ ಹೋಗುವ.ಅವರು ಬೇರೊಂದರಲ್ಲಿ ಬರಲಿ. ನಾನಿರುವಾಗ ನಿಮಗೆಂಥದು ಹೆದರಿಕೆ? ನನ್ನ ದೋಸ್ತಿಗಳು ಅಂಥವರಲ್ಲ ಗೊತ್ತಾಯ್ತಾ!’ ಎಂದು ವಿಮಲಾಳ ಮುಖ ನೋಡುತ್ತ ಒಂಥರಾ ನಕ್ಕ.ಅವಳು ತಟ್ಟನೆ ಮುಖ ತಿರುಗಿಸಿ ನಿಂತುದನ್ನು ಕಂಡವನಿಗೆ ರೇಗಿತು. ಆದರೂ ಸಹಿಸಿಕೊಂಡು,‘ಸ್ವಲ್ಪ ಇಲ್ಲೇ ಇರಿ. ಅವರನ್ನು ಮುಂದೆ ಕಳುಹಿಸಿ ಬರುತ್ತೇನೆ…!’ ಎಂದು ಕೃತಕ ಸೌಜನ್ಯದಿಂದ ಹೇಳಿ ಗೆಳೆಯರೆಡೆಗೆ ಹೋದ. ಅಲ್ಲಿ ಅವರಿಗೇನೋ ವಿವರಿಸಿ ಮುಂದೆ ಕಳುಹಿಸಿಕೊಟ್ಟ. ಟಾಕೀಸಿನ ಹೊರಗೆ ಕೆಲವು ಆಟೋಗಳು ಬಾಡಿಗೆ ಕಾಯುತ್ತ ನಿಂತಿದ್ದುವು. ಅದರಲ್ಲೊಂದು ರಿಕ್ಷಾವನ್ನುಕರೆದು ಹುಡುಗಿಯರನ್ನು ಹತ್ತಿಸಿ ತಾನೂ ಕುಳಿತವನು, ‘ಹ್ಞೂಂ,ಹೋಗುವ ಮಾರಾಯಾ!’ ಎಂದು ಚಾಲಕನಿಗೆ ರುಬಾಬಿನಿಂದ ಆಜ್ಞಾಪಿಸಿದ.

ಆಟೋ ಚಾಲಕ ವಿಠಲ ಶೇಣವ, ತಟ್ಟನೆತಿರುಗಿ ತಾಮಸನನ್ನುಅಸಡ್ಡೆಯಿಂದ ದಿಟ್ಟಿಸಿದವನು ತಾನೂ ಅದೇ ದಾಟಿಯಲ್ಲಿ‘ಹೋಗುವ ಅಂದರೆ ಎಲ್ಲಿಗೆ ಮಾರಾಯಾ…?’ ಎಂದ ಒರಟಾಗಿ.

   ಅಷ್ಟು ಕೇಳಿದ ತಾಮಸ ಒಮ್ಮೆಲೆ ಪೆಚ್ಚಾದ.ಮರುಕ್ಷಣ ಶೇಣವನ ಉಢಾಪೆಯು ಅವನಲ್ಲಿ ಕೋಪವನ್ನು ತರಿಸಿತು. ಆದರೆ ಈಗ ಮಾತಾಡಿದರೆ ಕೆಲಸ ಕೆಡುತ್ತದೆ. ಮುಂದೆ ಹೋಗುತ್ತ ನೋಡಿಕೊಳ್ಳುವ ಎಂದು ಯೋಚಿಸಿದವನು, ‘ಓಹೋ, ಹಾಗಾ…? ಸರಿ ಸರಿ.ಒಮ್ಮೆ ಹೊರಡು ಮಾರಾಯ. ಹೋಗುತ್ತ ಎಲ್ಲಿಗೆಂದು ಹೇಳುತ್ತೇನೆ…!’ಎಂದು ನಗುತ್ತ ಹೇಳಿದ. ತಾಮಸನ ಆ ಹೊತ್ತಿನ ಪೆಚ್ಚುನಗುವು ಶೇಣವನಲ್ಲಿ ತನ್ನ ಪುರುಷತ್ವವೇ ಗೆದ್ದಂಥ ಭಾವವನ್ನು ಮೂಡಿಸಿತು.‘ಹಾಗೆ ಹೇಳಿಯಲ್ಲವಾ ಮತ್ತೆ…!’ಎಂದು  ನಕ್ಕವನು,ತನ್ನ 1985ರ ಮಾಡೆಲಿನ ಲ್ಯಾಂಬೆಟ್ಟಾ ರಿಕ್ಷಾದ ಕಿಕ್ಕರನ್ನುಎಡಗಾಲಿನಿಂದ ಜೋರಾಗಿ ಒದ್ದ.ಅದು, ಟರ್ರ್‍ರ್ರ್‍ರ್ರ್…! ಎಂದು ಕರ್ಕಶ ಶಬ್ದವೆಬ್ಬಿಸುತ್ತ ಚಾಲಾಯಿತು. ಬಳಿಕ ಸಾವಕಾಶವಾಗಿ ಬೀಡಿಯೊಂದನ್ನು ಹೊತ್ತಿಸಿ ಬಾಯಿಗಿಟ್ಟವನು ಪುಸುಕ್, ಪುಸುಕ್,ಪುಸಕ್! ಎಂದು ಹೊಗೆಯುಗುಳುತ್ತ ರಿಕ್ಷಾ ಓಡಿಸತೊಡಗಿದ. ಬೀಡಿಯ ಹೊಗೆಯು ಕೆಲವೇ ಕ್ಷಣದಲ್ಲಿ ಆಟೋದೊಳಗೆಲ್ಲ ತುಂಬಿ ಹುಡುಗಿಯರು ಮೂಗು ಮುಚ್ಚಿಕೊಂಡರು.ಆಗ ತಾಮಸ ಅವನ ಮೇಲೆ ಇನ್ನಷ್ಟು ಸಿಟ್ಟಾದ. ಆದರೆ ತಕ್ಷಣ ಏನೋ ಯೋಚಿಸಿದವನು ಸಹನೆ ತಂದುಕೊಂಡು ತಾನು ಹೋಗಬೇಕಾದ ಕಡೆಗೆ ದಾರಿ ತೋರಿಸುತ್ತ ಸಾಗಿದ.

(ಮುಂದುವರೆಯುವುದು)

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ವಿವಶ (ಧಾರಾವಾಹಿ ಭಾಗ-18)”

  1. ಧಾರಾವಾಹಿ ಪ್ರತಿವಾರವೂ ಆಸಕ್ತಿದಾಯಕವಾಗಿ ಮೂಡಿ ಬರುತಿದೆ. ಕುತೂಹಲದಿಂದ ಓದಿಸಿಕೊಂಡು ಹೋಗುವ ಕಥಾನಕದ ಭಾಷಾಶೈಲಿಯೂ ಭಿನ್ನ.
    ಅಭಿನಂದನೆ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter