ಹಿಂದಿ ಮೂಲ: ಘನಶ್ಯಾಮ್ ಅಗ್ರವಾಲ
ಅನುವಾದ: ಡಾ. ಮಾಧವಿ ಎಸ್.ಭಂಡಾರಿ.
ಎರಡು ದಿನಗಳ ಹಿಂದೆ ಭಯಂಕರ ದುರ್ಘಟನೆಯೊಂದು ನಡೆದಿತ್ತು. ವಿಪರೀತ ಮಳೆಯಿಂದಾಗಿ ನದಿಯ ಮೇಲ್ಭಾಗದಲ್ಲಿ ಸೇತುವೆಯ ಒಂದು ಭಾಗ ಕುಸಿದುಹೋಗಿತ್ತು. ಬರುತ್ತಿರುವ ಪೆಸೆಂಜರ್ ಟ್ರೇನ್‍ನ ಮೂರು ಬೋಗಿಗಳು ನದಿಗೆ ಬಿದ್ದು ಮುಳುಗಿಹೋಗಿದ್ದವು. ಸುತ್ತೆಲ್ಲ ಹಾಹಾಕಾರ ಕೇಳಿಬರುತ್ತಿತ್ತು. ಹೆಣಗಳನ್ನು ತ್ವರಿತ ಗತಿಯಲ್ಲಿ ಮೇಲೆತ್ತಲಾಗುತ್ತಿತ್ತು. ಇಷ್ಟಾಗಿಯೂ ಕೆಲವು ಹೆಣಗಳಾದರೂ ನೀರಿನ ಸೆಳೆತದಿಂದಾಗಿ ಕೊಚ್ಚಿ ಹೋಗಿರಬಹುದು. ಪರಿಹಾರ ಕಾರ್ಯಗಳ ಮೇಲ್ವಿಚಾರಕ ಅಧಿಕಾರಿಗಳು ಅಲ್ಲಿಗೆ ಬಂದು ಧ್ವನಿವರ್ಧಕದಲ್ಲಿ ಹೇಳುತ್ತಿದ್ದರು, “ನದಿಯಲ್ಲಿ ಸಿಗುವ ಹೆಣಗಳನ್ನು ತಂದುಕೊಡುವವರಿಗೆ ಇನ್ನೂರು ರೂಪಾಯಿಗಳನ್ನು ಕೊಡಲಾಗುವುದು.”
ಪರಿಹಾರ ಶಿಬಿರದಿಂದ ಮೂರು-ನಾಲ್ಕು ಮೈಲು ದೂರದಲ್ಲಿರುವ ಒಂದು ಪುಟ್ಟ ಮನೆಯ ಮುಂಭಾಗದಲ್ಲಿ ಅಣ್ಣ-ತಮ್ಮಂದಿರಿಬ್ಬರು ಬೇಸರವನ್ನೇ ಮೈತುಂಬ ಹೊದ್ದುಕೊಂಡವರಂತೆ ಕುಳಿತಿದ್ದರು. ಮೂರು ದಿನಗಳಿಂದ ಅವರ ಹೊಟ್ಟೆಗೆ ಅನ್ನದ ಒಂದು ಅಗಳೂ ಹೋಗಿರಲಿಲ್ಲ. ಮೇಲಿಂದ ಇದೇ ಸಮಯದಲ್ಲಿ ಮನೆಯ ಹಿರಿಯರಾದ ಅವರ ತೀರ್ಥರೂಪರು ತೀರಿಕೊಳ್ಳಬೇಕೆ? ಮುದುಕ ಸಾಯುವ ಹೊತ್ತಿನಲ್ಲೂ ಬಡಬಡಿಸುತ್ತಿದ್ದ, “ನನಗೆ ಮದ್ದು-ಕಷಾಯವನ್ನಂತೂ ನೀವು ಮಾಡಲಿಲ್ಲ, ಆದರೆ ನನ್ನ ಸಂಸ್ಕಾರವನ್ನಾದರೂ ಸರಿಯಾಗಿ ಮಾಡಿ. ಹೊಂಡ ತೋಡಿ ನನ್ನನ್ನು ಹೂಳೋ ಕೆಲಸ ಮಾಡಬೇಡಿ, ನಾಲ್ಕು ಕಟ್ಟಿಗೆ ತಂದು ಸುಟ್ಟುಹಾಕಿ. ಇಲ್ಲದೆ ಹೋದರೆ ನನಗೆ ಮುಕ್ತಿ ಸಿಗಲಿಕ್ಕಿಲ್ಲ.”
ಅಣ್ಣ ಹೇಳಿದ, “ದಾಹ-ಸಂಸ್ಕಾರ ಮಾಡೋದಾದರೂ ಹೇಗೆ? ಮನೆಯೊಳಗೆ ಬೆಂಕಿ ಹೊತ್ತಿಸಲಿಕ್ಕೆ ದಮಡಿ ಕಾಸಿಲ್ಲ. ಇನ್ನು ಹೆಣ ಸುಡಲಿಕ್ಕೆ ಕಾಸು ಎಲ್ಲಿಂದ ಬಂದೀತು?”
ಮೂಲೆ ಸೇರಿ ಕುಳಿತಿದ್ದ ತಮ್ಮ ಹೇಳಿದ, “ಅಣ್ಣ, ನಾವೆಷ್ಟು ಬಡವರು ಮತ್ತು ದುರಾದೃಷ್ಟವಂತರು. ಅಪ್ಪನ ಕೊನೆಯ ಆಸೆಯನ್ನು ನೆರವೇರಿಸೋದು ನಮ್ಮಿಂದ ಸಾಧ್ಯವಾಗ್ತಾ ಇಲ್ಲ. ಹೆಣವನ್ನು ನಾಳೆ ಹೂಳಲೇಬೇಕು.” ಇಬ್ಬರೂ ತಲೆ ಕೆಳಗೆ ಹಾಕಿ ಕಣ್ಣೀರಿಡಲಾರಂಭಿಸಿದರು. ಮಳೆ ಇನ್ನೂ ನಿಂತಿರಲಿಲ್ಲ.
ಒಮ್ಮೆಲೆ ಅವರ ಕಣ್ಣುಗಳಲ್ಲಿ ಅದೇನೋ ಹೊಳಪು ಕಾಣಿಸಿಕೊಂಡಿತು. ಕೂಡಲೇ ಒಳಗಡೆ ಇದ್ದ ಹೆಣವನ್ನು ಎತ್ತಿಕೊಂಡು ಬಂದು ಹೊರಗಡೆ ಅಂಗಳದಲ್ಲಿಟ್ಟರು. ರಾತ್ರಿಯಿಡಿ ಹೆಣ ಮಳೆಯಲ್ಲಿ ನೆನೆಯುತ್ತಿತ್ತು. ಸೂರ್ಯೋದಯವಾಗುವಷ್ಟರಲ್ಲಿ ಇಬ್ಬರೂ ಹೆಣವನ್ನೆತ್ತಿಕೊಂಡು ನದಿ ದಡದ ಬಳಿಯ ಕಾಲುದಾರಿಯಲ್ಲಿ ಸಾಗಿ ಪರಿಹಾರ ಕೇಂದ್ರವನ್ನು ತಲುಪಿ, ಅಧಿಕಾರಿಗಳ ಮುಂದೆ ಒಬ್ಬ ಅರಿಕೆ ಮಾಡಿಕೊಂಡ, “ಸಾಹೇಬರೇ, ಈ ಹೆಣವನ್ನು ನದಿಯಿಂದ ಎತ್ತಿಕೊಂಡು ಬಂದಿದ್ದೇವೆ. ಟ್ರೇನ್‍ನಲ್ಲಿ ಪ್ರಯಾಣಿಸುತ್ತಿದ್ದ ಯಾರೋ ಪೆಸೆಂಜರ್ ಇರಬೇಕು. ಇದು ಹಿಂದುವಿನ ಶವ. ಯಾಕೆಂದರೆ ಕತ್ತಿನಲ್ಲಿ ಜನಿವಾರವಿದೆ.”
“ಹೌದು ಸಾಹೇಬರೇ, ಈ ಶವದ ತಲೆಯಲ್ಲಿ ಜುಟ್ಟವಿದೆ.” ಮತ್ತೊಬ್ಬ ಮಾತು ಮುಂದುವರಿಸಿದ.
ಅಧಿಕಾರಿ ಸಹಜವೆಂಬಂತೆ ಒಂದೆರಡು ಪ್ರಶ್ನೆ ಕೇಳಿದಂತೆ ಮಾಡಿ ತಮ್ಮ ಕೈಕೆಳಗಿನವರಿಗೆ ಹೇಳಿದರು, “ಇವರಿಗೆ ಇನ್ನೂರು ರೂಪಾಯಿ ಕೊಡಿ. ಹಾಗೆಯೇ ಆ ಹೆಣವನ್ನು ಎತ್ತಿ ಈಚೆ ಹಿಂದುಗಳ ಹೆಣ ಇರುವಲ್ಲಿ ಇಟ್ಟುಬಿಡಿ. ಗುರುತು ಹಿಡಿದು ಯಾರಾದರೂ ತೆಗೆದುಕೊಂಡು ಹೋಗುವುದಾದರೆ ನೋಡೋಣ. ಇಲ್ಲವಾದಲ್ಲಿ ನೀವಿದನ್ನು ಅನಾಥ ಶವವೆಂದು ಸಾಮೂಹಿಕವಾಗಿ ಸುಟ್ಟುಬಿಡಿ. ಆ ಕಡೆ ಇಟ್ಟಿರುವ ಶವಗಳನ್ನು ಹೂಳಿಬಿಡಿ.
ಎರಡು ದಿನಗಳ ಬಳಿಕ ಇಬ್ಬರೂ ಸಹೋದರರು ತಮ್ಮ ತಂದೆಯ ಶವವನ್ನು ಅಗ್ನಿದೇವ ತಬ್ಬಿಕೊಂಡಿರುವುದನ್ನು ಕಂಡು, ತಮ್ಮ ತಂದೆಯವರಿಗೆ ಮನಸಾ ವಂದಿಸಿ ಎರಡು ಹನಿ ಕಣ್ಣೀರು ಸುರಿಸಿದರು. ಅವರ ತಂದೆಯವರು ಅತ್ಯಂತ ಸಂಪ್ರದಾಯಸ್ಥ ವ್ಯಕ್ತಿಯಾಗಿದ್ದರು. ಒಳ್ಳೆಯ ಸಮಯದಲ್ಲೇ ಸತ್ತಿದ್ದಾರೆ. ಹಾಗಾಗಿ ಭಸ್ಮೀಭೂತರಾದರು. ತಾವು ಮುಕ್ತಿ ಹೊಂದಿದ್ದಲ್ಲದೆ ಮಕ್ಕಳ ಕೈಮೇಲೆ ದಕ್ಷಿಣೆ ಬೀಳುವಂತೆಯೂ ಮಾಡಿ ಹೋದರು.
***