ಗುಂಡಣ್ಣನ ತಂದೆ ರಂಗಣ್ಣ ಶಿವನ ಪಾದ ಸೇರಿ ಆಗಲೇ ಎರಡು ವರ್ಷಗಳಾಗಿತ್ತು. ಸಾಯುವಾಗ ಅವರ ವಯಸ್ಸು 80 ದಾಟಿತ್ತು. 70 ರ ಅಂಚಿನ ತಾಯಿ ರೇಣುಕಮ್ಮ ತನಗೆ ಬರುವ ಫ್ಯಾಮಿಲಿ ಪಿಂಚಿಣಿ, ಐದು ಎಕರೆ ಒಣ ಭೂಮಿಯ ಕೂರಿಗಿ ಹಾಗೂ ಸಾಕಿದ ಎರಡು ಹಸುಗಳೊಂದಿಗೆ ಗಂಡ ಕಟ್ಟಿದ ಹಳೆಯ ಮನೆ ಇರುವ ಹಳ್ಳಿಯಲ್ಲೇ ವಾಸಿಸುತ್ತಿದ್ದಳು. ಮಗ ಅದೆಷ್ಟೋ ಬಾರಿ ಹಳ್ಳಿ ಬಿಟ್ಟು ತಾವಿರುವ ಬೆಂಗಳೂರಿಗೆ ಬಾ ಎಂದು ಕರೆದರೂ ಆಕೆ ಆ ಮನೆ, ಅಲ್ಲಿಯ ಪರಿಸರ ಬಿಟ್ಟು ಹೋಗಲು ತಯಾರಿರಲಿಲ್ಲ… ಜೊತೆಗೆ ತನ್ನ ಕೈಕಾಲು ಗಟ್ಟಿ ಇರುವವರೆಗೆ ಏನೋ ಒಂದು ಮಾಡಿ ತನ್ನ ಹಳ್ಳಿಯಲ್ಲೇ ಇದ್ದು ಜೀವನ ಸಾಗಿಸಬೇಕು, ಮಗನ ಮನೆಗೆ ಹೋಗಿ ಭಾರವಾಗಬಾರದೆಂದು ರೇಣುಕಮ್ಮನ ಇಚ್ಛೆ… ಇನ್ನು ತಾನು ಪೂರ್ತಿ ಮೆತ್ತಗಾದಾಗ… ಆಗ ಬೇರೆ ದಾರಿ ಇಲ್ಲ.. ಮಗನ ಮನೆಯೇ ದಿಕ್ಕು!
ಮಗ, ಸೊಸೆ ಹಾಗೂ ಮೊಮ್ಮಕ್ಕಳು ಪ್ರತೀ ಎರಡನೇ ಮತ್ತು ನಾಲ್ಕನೇ ಶನಿವಾರ – ಭಾನುವಾರ ಹಳ್ಳಿಗೆ ಬರುತ್ತಿದ್ದರು. ಒಂದೆರಡು ದಿನ ಸಿಟಿಯಿಂದ ದೂರ ಇದ್ದು ಹಳ್ಳಿಯ ಪ್ರಶಾಂತ ವಾತಾವರಣದ ಸ್ವಂತ ಮನೆಯಲ್ಲಿ ಇದ್ದು ಸಮಯ ಸಿಕ್ಕಾಗ ಹೊಲ ನೋಡಿಕೊಂಡು ಕಾಲ ಕಳೆದು ಮತ್ತೆ ಸಿಟಿಗೆ ಹಿಂದಿರುಗೋದು ಗುಂಡಣ್ಣ ಕುಟುಂಬದ ಪಾಕ್ಷಿಕ ದಿನಚರಿ ಆಗಿತ್ತು…
ಹಾಗೆ ನೋಡಿದರೆ ಅತ್ತೆ ರೇಣುಕಮ್ಮ ಮತ್ತು ಸೊಸೆ ಗೀತಾಂಜಲಿ ಇಬ್ಬರೂ ಉತ್ತಮ ಹೆಂಗಸರೇ… ಟಿ ವಿ ದೈನಿಕ ಧಾರಾವಾಹಿಗಳಲ್ಲಿ ತೋರಿಸುವ ಪ್ರೀತಿ-ವಾತ್ಸಲ್ಯ ಅತ್ತೆ ಸೊಸೆಯರಲ್ಲೂ ಇತ್ತು. ಅತ್ತೆಯ ಭಾಷೆ ತುಸು ಒರಟು, ಆದರೆ ಮನಸು ಮಾತ್ರ ಬೆಣ್ಣೆ… ಗೀತಾಂಜಲಿ ಅತ್ತೆಗೆ ತಕ್ಕ ಸೊಸೆ… ಅತ್ತೆಗೆದುರಾಗಿ ಏನೂ ಅಡುತ್ತಿರಲಿಲ್ಲ.
ಅಂತಹ ಅತ್ತೆ – ಸೊಸೆಯ ನಡುವೆ ಮೌನದ ಯುದ್ಧದ ಅಂಕುರಾರ್ಪಣೆಗೆ ಕಾರಣವಾದದ್ದು ಹಳ್ಳಿಯಲ್ಲಿದ್ದ ರೇಣುಕಮ್ಮನ ವಾಸದ ಮನೆ. ಊರ ಮಧ್ಯದ ಗುಡಸಲಿನಂತಹ ಹಳೆ ಮನೆಯನ್ನು ಕೆಡವಿ ಆರ್ ಸಿ ಸಿ ಬಿಲ್ಡಿಂಗ್ ಗಂಡ ಕಟ್ಟಿಸಬೇಕೆಂದು ಗೀತಾಂಜಲಿಯ ಆಸೆ… ಅದಕ್ಕೆ ಪೂರಕವಾದ ಕಾರಣಗಳು ಆಕೆ ಹೇಳುವದೆಂದರೆ – ತಿಂಗಳಿಗೆ ತಾವು ಮಕ್ಕಳೊಂದಿಗೆ ಎರಡೆರಡು ಬಾರಿ ಬಂದಾಗ ಏನೊಂದು ಸೌಲಭ್ಯವಿರದ ಮನೆಯಲ್ಲಿ ಇರಬೇಕು. ಈ ವಯಸ್ಸಿಗೆ ಅಟ್ಯಾಚಡ್ ಬಾತ್ ರೂಮ್, ಟಿ.ವಿ, ಏ. ಸಿ ಇತ್ಯಾದಿಗಳು ವಯಸ್ಸಾದ ಅತ್ತೆಗೆ ಕೂಡ ಬೇಕಲ್ಲವೇ?…ಅದಕ್ಕಾಗಿ ಹಳೆ ಮನೆ ಕೆಡವಿ ಎಲ್ಲಾ ಸೌಲಭ್ಯಗಳು ಇರುವ ಸುಸಜ್ಜಿತ ಮನೆಯನ್ನು ಕಟ್ಟೋಣ…ಬೇಕಿದ್ದರೆ ಇಬ್ಬರೂ ಲೋನ್ ತೆಗೆದುಕೊಳ್ಳೋಣ… ಇನ್ನು ಮಕ್ಕಳು ದೊಡ್ಡವರಾದರೆ ಅವರ ಓದಿಗೆ ಬಹಳ ಖರ್ಚು ಮಾಡಬೇಕಾಗುತ್ತದೆ ಅಂತ ಆಕೆಯ ವಾದ.
ಹೆಂಡತಿಯ ತಣ್ಣನೆಯ ‘ಮಾಸ್ಟರ್ ಪ್ಲಾನ್’ ನ್ನು ಒಂದು ಒಳ್ಳೆಯ ಮಹೂರ್ತ ನೋಡಿ ಅಮ್ಮನ ಮುಂದೆ ತೆರೆದಿಟ್ಟ ಗುಂಡಣ್ಣ. “ಗುಂಡೂ…ನಿನಗೆ, ನಿನ್ನ ಹೆಂಡತಿಗೆ ಈ ಮನೆ ಹಾಳು ಕುಟೀರ ಅಂತ ಅನಿಸಬಹುದು…ಆದರೆ ನನಗೆ ಈ ಮನೆ ನಿಮ್ಮ ತಂದೆಯ ಜ್ಞಾಪಕ… ನಿಮ್ಮ ತಂದೆ ನಾನು ಕಲ್ಲು ಮಣ್ಣು ಹೊತ್ತು ಕಟ್ಟಿಸಿದ ಮನೆಯಿದು… ಇದಕ್ಕಾಗಿ ನಾನು ನಿಮ್ಮ ತಂದೆ ಕಟ್ಟಿದ ಮಾಂಗಲ್ಯ ಸರವನ್ನು ಕೂಡ ಮಾರಿ ಅದರಿಂದ ಬಂದ ಹಣವನ್ನು ಈ ಮನೆಗೆ ಹಾಕಿದ್ದೇವೆ ತಿಳಿಯಿತಾ… ನನ್ನ ಪಾಲಿಗೆ ಇದು ಒಂದು ದೇವಾಲಯದಂತೆ!..ಕನಿಷ್ಠ ಪಕ್ಷ ನಾನು ಇರೋವರೆಗೆ ಹೀಗಿಯೇ ಇರಲಿ… ನನ್ನ ತದನಂತರ ಹೇಗೂ ಈ ಮನೆ ನಿನಗೆ ಬರೋದು ತಾನೇ… ಆಗ ಏನು ಬೇಕಾದರೂ ಮಾಡು… ನನಗೆ ವರಾಂಡದಲ್ಲಿರುವ ಬೇವಿನ ಮರದ ಗಾಳಿಯೇ ಸಾಕು… ಯಾವ ಎ. ಸಿ ಬೇಕಾಗಿಲ್ಲ” ಎಂದು ಕಡ್ಡಿ ಮುರಿದಂಗೆ ಹೇಳಿದಳು ರೇಣುಕಮ್ಮ.
ಒಂದು ರೀತಿಯಿಂದ ಇದು ಕೂಡ ಒಳ್ಳೆಯ ಆಲೋಚನೆ ಅಂತ ಹೆಂಡತಿಯನ್ನು ಒಬ್ಬಳೇ ಇದ್ದಾಗ ರಮಿಸಲೆತ್ನಿಸಿದ ಗುಂಡಣ್ಣ… ಗೀತಾಂಜಲಿ ರೌದ್ರವತಾರ ತಾಳಿ ಕೆರಳಿ ನುಡಿದಳು.
“ನಾನೇನು ನಿಮ್ಮ ತಾಯಿಯನ್ನು ಮನೆ ನನ್ನ ಹೆಸರಲ್ಲಿ ಬರೆದುಕೊಡು ಎಂದು ಕೇಳಿದನೆ ಅಥವಾ ಮನೆ ಖಾಲಿ ಮಾಡು ಎಂದು ಹೇಳಿದನೆ? ನನ್ನ ಆಲೋಚನೆ ಕೂಡ ಅವರ ಬಗ್ಗೆಯೇ.. ನಾವು ಬೆಂಗಳೂರಿನಲ್ಲಿ ಹೇಗೆ ಕಂಫರ್ಟ್ ಆಗಿ ಇರುತ್ತಿರುವೆವೋ ಅವರೂ ಹಾಗೆ ಇರಲಿ ಎಂದಷ್ಟೇ ನನ್ನ ಆಸೆ… ಅಲ್ಲದೆ ಹಳ್ಳಿಗೆ ಹೋದಾಗ ಅಲ್ಲಿ ಇರಲು ನಮಗೂ ಕೆಲ ಸವಲತ್ತುಗಳು ಬೇಕಲ್ಲ… ಕಾಲದ ಜೊತೆ ನಾವೂ ಬದಲಾಗಬೇಕಲ್ಲ…” ತಕ್ಷಣ ಏನು ಉತ್ತರಿಸಬೇಕೋ ಗೊತ್ತಾಗದೆ ಗುಂಡಣ್ಣ ಅರೆಕ್ಷಣ ಶೂನ್ಯದತ್ತ ದೃಷ್ಟಿ ಹಾಯಿಸಿ ‘ಯೋಗಿ’ ಯನ್ನು ನೆನೆಯುತ್ತ ಸುಮ್ಮನೆ ನಿಂತ ಪಾಪು ಪಾಂಡುವಿನಂತೆ!
ಆ ನಂತರ ಅತ್ತೆ – ಸೊಸೆ ಮೇಲ್ನೋಟಕ್ಕೆ ಸುಮ್ಮನಿದ್ದರೂ ಇಬ್ಬರ ಮನಸಿನ ಮಧ್ಯೆ ಹೊತ್ತಿಕೊಂಡ ‘ಹಳೇ ಮನೆಯ’ ಕಿಡಿ ಮಾತ್ರ ಆರಲಿಲ್ಲ. ಆದರೂ ರೇಣುಕಮ್ಮ ಆಗಾಗ್ಗೆ ಮಗನ ಮನೆಗೆ ಹೋಗಿಬರುತ್ತಿದ್ದಳು. ಹೀಗೇ ಮುಸುಕಿನ ಗುದ್ದಾಟ ಮೂರು – ನಾಲ್ಕು ತಿಂಗಳು ಮುಂದುವರೆಯಿತು. ಯಾವತ್ತಾದರೂ ಕತ್ತಲೆ ಕರಗಿ ಬೆಳಕು ಹರಿಯಬೇಕಲ್ವೇ? ಒಂದು ದಿನ ಚಂದ್ರಣ್ಣ ಮನೆಗೆ ಬಂದ..ಆತ ಬೇರೆ ಯಾರು ಅಲ್ಲ, ಗುಂಡಣ್ಣನ ಖಾಸಾ ಸೋದರ ಮಾವನ ಮಗ. ತಾಯಿಯ ಊರಿನ ಕಾಗೆಯೊಂದು ಬಂದರೂ ರಾಜಾತಿಥ್ಯ ನೀಡುವ ಗುಂಡಣ್ಣ ಇನ್ನು ಚಂದ್ರಣ್ಣ ಬಂದರೆ ಸುಮ್ಮನಿರುವನೆ?
ಮಧ್ಯಾಹ್ನದ ಭಾರೀ ಭೋಜನದ ಬಳಿಕ ಇಬ್ಬರೂ ಹತ್ತಿರದ ಪಾರ್ಕಿಗೆ ಬಂದರು. ಅಲ್ಲೇ ಬೆಂಚಿನ ಮೇಲೆ ಕುಳಿತು ಮಾತನಾಡುತ್ತ ದೂರದಲ್ಲಿ ಇಬ್ಬರು ಪುಟ್ಟ ಮಕ್ಕಳು ಒಂದೇ ಚೆಂಡಿನ ಸಲುವಾಗಿ ಹೊಡೆದಾಡುತ್ತಿದ್ದರು. ಬಹುಶಃ ಅವರ ತಂದೆಯೋ ಏನೋ ಮಕ್ಕಳನ್ನು ದೂರದಿಂದ ಗಮನಿಸುತ್ತಿದ್ದರು.
ಅಳಿಯನ ಸಂಕಷ್ಟದ ಕಥೆಯನ್ನು ಸಾವಕಾಶವಾಗಿ ಕೇಳಿಸಿಕೊಂಡ ಚಂದ್ರಣ್ಣ ಹೇಳಿದ. “ಗುಂಡೂ… ಬೇರೆ ಬೇರೆ ವಯಸ್ಸಿನವರು, ವಿಭಿನ್ನ ಕುಟುಂಬದ ಹಿನ್ನೆಲೆಯಿಂದ ಬಂದವರು ಒಬ್ಬ ವ್ಯಕ್ತಿಯ (ಪ್ರಾಣಿಯ!) ಮೇಲೆ ಸಮಾನ ಹಕ್ಕು ಹೊಂದಿರುವಂತಹ ಅತ್ತೆ – ಸೊಸೆಯಂದಿರು ಸಾಮರಸ್ಯದಿಂದ ಇರಬೇಕೆಂದು ಬಯಸುವದು ದುರಾಸೆಯಾಗುತ್ತದೆ… ಯಾರೋ ಒಬ್ಬರ ನಡೆಯನ್ನು ತಪ್ಪು ಎಂದು ಹೇಳೋಕೆ ಹೇಗೆ ಸಾಧ್ಯ?…ದೇವರು ಮದುವೆಯಾದ ಗಂಡಿಗೆ ಎರಡು ಕಿವಿ ಕೊಟ್ಟಿರುವದಾದರು ಯಾತಕ್ಕೆ ಹೇಳು?…ಒಂದು ಕಿವಿಯಿಂದ ತಾಯಿ ಹೇಳಿದ್ದು ಕೇಳಿದಂತೆ ನಟಿಸಿ ಇನ್ನೊಂದು ಕಿವಿಯಿಂದ ಹೊರಗೆ ಹಾಕಲು ತಾನೇ!…ಅದೇ ರೀತಿ ಮುದ್ದಿನ ಹೆಂಡತಿಯ ಮಾತುಗಳೂ ಅಷ್ಟೇ… ಎದುರಿಗೆ ಮಕ್ಕಳು ಆಡ್ತಾ ಇದ್ದಾರಲ್ಲ… ಆ ತರಹ ಅತ್ತೆ – ಸೊಸೆ ನಿನ್ನ ಮೇಲೆ ಚಿನ್ನಾಟ ಆಡುತ್ತಿದ್ದಾರೆ… ನೀನು ಅವರಿಬ್ಬರ ಮಧ್ಯೆ ಸಿಕ್ಕು ಒದ್ದಾಡುವ ಚೆಂಡಿನಂತೆ… ಹೌದಲ್ವೆ?..
ನನಗಾಗ ಹತ್ತು – ಹನ್ನೆರಡು ವರ್ಷ… ನಿನ್ನ ಅಜ್ಜಿ ಮತ್ತು ನಿನ್ನ ತಾಯಿ (ನನ್ನ ಸೋದರತ್ತೆ) ಹೀಗೆ ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಇಬ್ಬರೂ ಮಾತಿನ ‘ಯುದ್ಧ’ ಮಾಡುತ್ತಿದ್ದಾಗ ನಿನ್ನ ಅಪ್ಪ (ನನ್ನ ಮಾವ) ನನ್ನನ್ನು ಗಾಂಧಿ ಸರ್ಕಲ್ ಕಡೆ ಕರೆದುಕೊಂಡು ಹೋಗಿ ಅಲ್ಲೊಂದಿಷ್ಟು ಮೈಸೂರು ಮಂಡಕ್ಕಿ ಬಿಸಿ ಬಿಸಿ ಮಿರ್ಚಿ ತಾನೂ ತಿಂದು ನನಗೂ ತಿನ್ನಿಸಿ ಚಹಾ ಕುಡಿಯುತ್ತ ಮೆಲ್ಲನೆ ” ಸದ್ಯದ ನನ್ನ ಮನೆಯ ಪರಿಸ್ಥಿತಿ ಬೆಂಕಿಯ ಮೇಲಿಟ್ಟ ಬಾಣಲೆಯೋ ಅಥವಾ ಬಾಣಲೆಯಿಂದ ನೇರ ಬೆಂಕಿಗೊ ಒಂದೂ ಗೊತ್ತಾಗುತ್ತಿಲ್ಲ…” ಎಂದು ಆಗಾಗ್ಗೆ ಗೊಣಗುತ್ತಿದ್ದರು ಪಾಪ!…ಪುಟ್ಟ ಹುಡುಗನಾದ ನನಗೆ ಆಗ ಏನೂ ಅರ್ಥವಾಗುತ್ತಿರಲಿಲ್ಲ… ಈಗ ಅವರಾಡಿದ ಮಾತುಗಳು ಮತ್ತೆ ಮತ್ತೆ ನೆನಪಾಗುತ್ತಿವೆ..” ಎಂದು ದೀರ್ಘವಾಗಿ ನಿಟ್ಟಿಸುರಿಟ್ಟು ಮಾತು ಮುಗಿಸಿದ ಚಂದ್ರಣ್ಣ.
ಅಷ್ಟರಲ್ಲಿ ಏನನ್ನೋ ಜ್ಞಾಪಿಸಿಕೊಂಡಂತೆ ಗುಂಡಣ್ಣ ಸರಕ್ಕನೆ ನುಡಿದ “ಹೌದೌದು… ಅಡಕತ್ತರಿಯಲ್ಲಿ ಸಿಕ್ಕ ಅಡಿಕೆಯಂತಾಗಿದೆ ನನ್ನ ಜೀವನ”. ಚಂದ್ರಣ್ಣ ಮತ್ತೆ ಮಾತು ಮುಂದುವರಿಸಿದ “ನಿನ್ನ ಸಮಸ್ಯೆ ಏನಾದರೂ ಇರಲಿ ..ನಾನೊಂದು ಸಲಹೆ ಹೇಳುತ್ತೇನೆ ಕೇಳು. ಮಳೆ ಬರುತ್ತಿದೆ ಎಂದು ಹೊರಗೆ ಹೋಗದೆ ಅಸಹನೆಯಿಂದ ಮನೆಯಲ್ಲಿ ಕಾಲ ಕಳೆಯದೆ ಮಳೆಯಲ್ಲಿ ನೆನೆಯದ ಹಾಗೆ ಇರಲು ಕೊಡೆ (ಛತ್ರಿ) ಹುಡುಕಬೇಕು.
ನಿನ್ನ ತಾಯಿ ಅಥವಾ ನಿನ್ನ ಹೆಂಡತಿ ಯಾರೋ ಒಬ್ಬರ ಮಾತು ಖಂಡಿತ ಕೇಳುತ್ತಾರೆ… ಅದೂ ತಾವು ನಂಬುವ ಹೆಂಗರಸರೊಬ್ಬರ (ಗಂಡಸರದ್ದು ಅಲ್ಲವೇ ಅಲ್ಲ!) ಮಾತನ್ನು ಮಾತ್ರ..ಅವರಿಗೆ ನಿನ್ನ ಜ್ವಲಂತ ಸಮಸ್ಯೆಯನ್ನು ವಿವರವಾಗಿ ತಿಳಿಸು. ಹಾಗೆಯೇ ಅವರಿಗೆ ನಿನ್ನ ತಾಯಿ ಇಲ್ಲ ಹೆಂಡತಿಗೆ ಏನೋ ಒಂದು ಅನುನಯ ರೀತಿಯಲ್ಲಿ ಸಮಾಧಾನದಿಂದ ಸಮಸ್ಯೆ ಬಗೆಹರಿಸೋ ದಾರಿ ತಿಳಿಸಿ ಎಂದು ಮನವಿ ಮಾಡು… ಹಾಗಾದರೆ ಮಾತ್ರ ನಿನ್ನ ಬೆಟ್ಟದಂತಹ ಸಮಸ್ಯೆ ಕರಗಿ ಆಗ ತಾನೆ ಸ್ವಚ್ಛ ಮಾಡಿದ ಮುನಿಸಿಪಾಲಿಟಿ ಡ್ರೈನೇಜಿನಲ್ಲಿ ಸರಾಗವಾಗಿ ಹರಿದು ಹೋಗುವ ನೀರಿನಂತೆ ಮುಂದೆ ಸಾಗುತ್ತದೆ” ಎಂದು ಮಾತು ಮುಗಿಸಿದ.
ಅದನ್ನು ಕೇಳಿದ ಗುಂಡಣ್ಣನ ಮುಖ ಅರಳಿತು. “ಹೌದು ಮಾವ… ನೀನು ಹೇಳಿದ್ದು ನೂರಕ್ಕೆ ನೂರು ಸತ್ಯ… ನನ್ನ ಹೆಂಡತಿಗೆ ಅವಳ ಅಕ್ಕನ ಮಾತಂದರೆ ವೇದ ವಾಕ್ಯ.. ಆಕೆ ಏನು ಹೇಳಿದರೂ ಥಟ್ಟಂತ ತಲೆ ಅಡಿಸುತ್ತಾಳೆ…ಇನ್ನು ನಮ್ಮ ತಾಯಿಗೆ ಆಕೆಯ ತಂಗಿ ಅದೇ ಚಿಕ್ಕಮ್ಮ ಹೇಳಿದರೆ ಮುಗಿದೇ ಹೋಯಿತು. ಆ ಶ್ರೀರಾಮಚಂದ್ರ ‘ಪಿತೃ ವಾಕ್ಯ’ ಪರಿಪಾಲನೆ ಮಾಡುತ್ತಿದ್ದನೋ ಇಲ್ಲವೋ ಗೊತ್ತಿಲ್ಲ… ಆದರೆ ‘ಸೋದರಿ ವಾಕ್ಯ’ವನ್ನು ನನ್ನ ತಾಯಿ ಎಂದೂ ಮೀರುವದಿಲ್ಲ! ಮೊದಲು ನನ್ನ ಹೆಂಡತಿಯ ಅಕ್ಕನೊಂದಿಗೆ ಶುರು ಮಾಡುತ್ತೇನೆ. ಅರ್ಜುನನಿಗೆ ಶ್ರೀಕೃಷ್ಣ ಯುದ್ಧ ಭೂಮಿಯಲ್ಲಿ ‘ಬಂಧುತ್ವದ’ ಬಗ್ಗೆ ಭೋದಿಸಿದಂತೆ ನೀನು ನನಗೆ ಹೇಳಿ ನನ್ನ ಮುಚ್ಚಿದ ಕಣ್ಣನ್ನು ತೆರೆಸಿದೆ… ಏನೇ ಅಗಲಿ ನೀನು ನನ್ನ ಹಿಂದೆ ಇದ್ದೀಯಾ ಅಂದರೇನೆ ಎಷ್ಟೋ ಧೈರ್ಯ ನನಗೆ…”ಎಂದು ಅಭಿಮಾನದಿಂದ ನುಡಿದ ಗುಂಡಣ್ಣ ಮಾವನನ್ನು ನೋಡುತ್ತಾ…
ಸ್ವಲ್ಪ ಹೊತ್ತು ಸುಮ್ಮನೆ ಕೂತು ನಂತರ ಪಾರ್ಕಿನಿಂದ ಮನೆಯತ್ತ ಹೊರಟರು ‘ಕೃಷ್ಣಾರ್ಜುನರು’ (ಮಾವ-ಅಳಿಯರು) ಮರುದಿನ ಮಾವನ ಸಲಹೆಯಂತೆ ಗುಂಡಣ್ಣ ಮೊದಲು ಹೆಂಡತಿಯ ಅಕ್ಕನಿಗೆ ಫೋನ್ ಮಾಡಿ ವಿಷಯ ತಿಳಿಸಿದ. ಎಲ್ಲವನ್ನೂ ಕೇಳಿಸಿಕೊಂಡ ಆಕೆ “ನಾನು ಒಂದು ಮಾತು ಹೇಳು ನೋಡ್ತೀನಿ ಗುಂಡೂ… ಆದರೆ ಆಕೆ ಎಷ್ಟರಮಟ್ಟಿಗೆ ಕಿವಿಗೆ ಹಾಕಿಕೊಳ್ತಾಳೋ ಗೊತ್ತಿಲ್ಲ…ಆದರೂ ಪ್ರಯತ್ನ ಮಾಡ್ತೇನೆ..” ಎಂದು ಉತ್ತರಿಸಿದಳು. ಆಕೆ ಏನೊಂದು ಭರವಸೆ ನೀಡದಿದ್ದರಿಂದ ಚಿಕ್ಕಮ್ಮನಿಗೆ ಫೋನಾಯಿಸಿದ. ಎಲ್ಲವನ್ನೂ ಸಹನೆಯಿಂದ ಕೇಳಿಸಿಕೊಂಡ ಚಿಕ್ಕಮ್ಮ “ನಿನ್ನ ಅಮ್ಮನೊಂದಿಗೆ ನಾನು ಮಾತನಾಡುತ್ತೇನೆ.. ಆಕೆ ನನ್ನ ಮಾತನ್ನು ಖಂಡಿತ ಕೇಳುತ್ತಾಳೆ… ಸಂಶಯವೇ ಇಲ್ಲ..” ಎಂದು ನುಡಿದ ಬಳಿಕ ಗುಂಡಣ್ಣ ಕೊಂಚ ನಿರಾಳನಾದ.
ಇದಾಗಿ ಎಂಟು – ಹತ್ತು ದಿನಗಳ ಬಳಿಕ ಗುಂಡಣ್ಣ ಒಂದು ಸಂಜೆ ಬ್ಯಾಂಕಿನಿಂದ ಸುಸ್ತಾಗಿ ಮನೆಗೆ ಬಂದಾಗ ಡೈನಿಂಗ್ ಟೇಬಲ್ ಬಳಿ ಕೂತ ಅವನ ಅಮ್ಮ ಪೂರಿಯನ್ನು ಲಟ್ಟಿಸಿ ಕೊಡುತ್ತಿದ್ದರೆ ಹೆಂಡತಿ ಗೀತಾಂಜಲಿ ಕಿಚನ್ ನಲ್ಲಿ ಅವುಗಳನ್ನು ಕರಿಯುತ್ತಿದ್ದಳು. ಮಗನನ್ನು ನೋಡಿ ಅವನ ಅಮ್ಮ “ಗೀತಾ… ಗುಂಡಣ್ಣ ಆಫೀಸಿನಿಂದ ಬಳಲಿ ಬಂದಿದ್ದಾನೆ…ಒಂದಾಲ್ಕು ಬಿಸಿ ಪೂರಿ ಹಾಕಿಕೊಡು ಪಾಪ…ತಿಂತಾನೆ” ಎಂದಳು ಅಕ್ಕರೆಯಿಂದ. ಗುಂಡಣ್ಣ ಕೈಕಾಲು ಮುಖ ತೊಳೆದುಕೊಂಡು ಬಾಲ್ಕನಿಯಲ್ಲಿದ್ದ ಚೇರಿನ ಮೇಲೆ ಅಸೀನನಾದ. ಗೀತಾಂಜಲಿ ಒಂದು ಪ್ಲೇಟಿನಲ್ಲಿ ಬಿಸಿ ಬಿಸಿ ಪೂರಿಗಳನ್ನು ಈರುಳ್ಳಿ ಆಲೂಗಡ್ಡೆ ಕೂರ್ಮವನ್ನು ಒಂದು ಬಟ್ಟಲಲ್ಲಿ ಮತ್ತೊಂದು ಬಟ್ಟಲಿನಲ್ಲಿ ಚಟ್ನಿ ಹಾಕಿ ಗಂಡನಿಗೆ ಕೊಡುತ್ತಾ ಮೆತ್ತನೆ ಸ್ವರದಲ್ಲಿ ನುಡಿದಳು.
“ರೀ… ನಿನ್ನೆ ನಮ್ಮಕ್ಕ ಫೋನ್ ಮಾಡಿದ್ದಳು… ನಮ್ಮ ಭಾವನ ಅಣ್ಣ ರಿಯಲ್ ಎಸ್ಟೇಟ್ ಜೊತೆ ಬಿಲ್ದರ್ ಅಂತ ನಿಮಗೆ ಗೊತ್ತು ತಾನೇ!…ಮುಂದಿನ ವರ್ಷ ಬಸ್ಟ್ಯಾಂಡ್ ಬಳಿ ಹೊಸ ವೆಂಚರ್ ಶುರು ಮಾಡ್ತಾನಂತೆ. ಅಕ್ಕ ಅಲ್ಲಿ ಒಂದು ಫ್ಲ್ಯಾಟ್ ಖರೀದಿ ಮಾಡ್ತಾಳಂತೆ. ನಮಗೆ ಕೂಡ ಫಸ್ಟ್ ಅಥವಾ ಸೆಕೆಂಡ್ ಫ್ಲೋರಿನಲ್ಲಿ ಅಪಾರ್ಟ್ಮೆಂಟಿಗಾಗಿ ಈಗಲೇ ಬುಕ್ ಮಾಡಿ ಅಂತ ಹೇಳ್ತಿದ್ದಾಳೆ… ಡಿಸ್ಕೌಂಟ್ ರೇಟಿನಲ್ಲಿ ಕೊಡಿಸ್ತಾಳಂತೆ… ಅದಕ್ಕಾಗಿ ನಮ್ಮ ಊರಿನಲ್ಲಿರುವ ಹಳೇ ಮನೆ ಕೆಡವಿ ಆರ್ ಸಿ ಸಿ ಮನೆ ಕಟ್ಟೋ ಬದಲು ಅದನ್ನು ಮಾರಿ ಬಂದ ಹಣದಿಂದ ಅಕ್ಕ ಹೇಳಿದಂತೆ ಫ್ಲ್ಯಾಟ್ ಬುಕ್ ಮಾಡೋದು ಒಳ್ಳೆಯದಲ್ವೇ… ಅತ್ತೆ ಕೂಡ ನಮ್ಮ ನಿರ್ಧಾರವನ್ನು ಖಂಡಿತ ಒಪ್ಪುತ್ತಾರೆ… ನೀವು ನಿಧಾನವಾಗಿ ಹೇಳಿ ಒಪ್ಪಿಸಿ… ಪಾಪ, ವಯಸ್ಸಿನಲ್ಲಿ ಹಿರಿಯರು… ಅವರ ಆಶೀರ್ವಾದ ಕೂಡ ನಮಗೆ ಬೇಕಲ್ಲವೇ!” ಎಂದು ಉದ್ವೇಗದ ಧ್ವನಿಯಲ್ಲಿ ನುಡಿದಳು.
ಗೀತಾಂಜಲಿ ಅಲ್ಲಿಂದ ಮರಳಿದ ಹತ್ತು ನಿಮಿಷಕ್ಕೇ ರೇಣುಕಮ್ಮ ಮಗನ ಹತ್ತಿರ ಬಂದು ಕುಳಿತಳು. ಅವರ ಮುಖದಲ್ಲೀಗ ಏನೋ ಶಾಂತ ಕಳೆ!ರೇಣುಕಮ್ಮ ಕೂಡ ಮೃದು ಸ್ವರದಲ್ಲಿ ನುಡಿದಳು. “ಗುಂಡೂ… ಇವೊತ್ತು ಬೆಳ್ಳಂಬೆಳಗ್ಗೆ ನಿನ್ನ ಚಿಕ್ಕಮ್ಮ ಫೋನ್ ಮಾಡಿದ್ದಳು. ವಯಸ್ಸಿನಲ್ಲಿ ಆಕೆ ನನಗಿಂತ ಚಿಕ್ಕವಳಾದರು ಬುದ್ಧಿವಂತಿಕೆಯಲ್ಲಿ ನನ್ನನ್ನು ಮೀರಿಸುತ್ತಾಳೆ…ಆಕೆ ನೀಡಿದ ಸಲಹೆ ತುಂಬಾ ಉತ್ತಮವಾದದ್ದು ಅಂತ ನನಗೆ ಅನಿಸ್ತಿದೆ… ಅಲ್ಲದೇ ನಿನ್ನ ಹೆಂಡತಿ ಆಲೋಚನೆ ಕೂಡ ಸರಿಯಾದದ್ದೇ… ಗೀತ ಚಿಕ್ಕ ಹುಡುಗಿಯಾದರೂ ಈ ವಯಸ್ಸಿನಲ್ಲಿ ಅತ್ತೆ ಚೆನ್ನಾಗಿರಬೇಕೆಂಬ ಹಂಬಲ ಎಷ್ಟು ಸೊಸೆಯಂದಿರಿಗೆ ಇರುತ್ತೆ ಹೇಳು? ಪಾಪ ನಾನೇ ಆಕೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಿಲ್ಲ. ಆದಷ್ಟು ಬೇಗ ನಮ್ಮ ಪುರೋಹಿತರನ್ನು ಭೇಟಿಯಾಗಿ ಮುಂದೆ ಬರೋ ಮಾಘ ಮಾಸದಲ್ಲಿ ಹೊಸ ಮನೆಯ ಶಂಕುಸ್ಥಾಪನೆ ಮಹೂರ್ಥ ನಿಗದಿಪಡಿಸೋಣ…ಅದಕ್ಕೂ ಮೊದಲು ಊರಲ್ಲಿನ ಹಳೆಯ ಮನೆಯನ್ನು ಕೆಡವಿ ಅದೇ ಜಾಗದಲ್ಲಿ ಹೊಸ ಆರ್ ಸಿ ಸಿ ಮನೆಯ ನಿರ್ಮಾಣದ ಪ್ಲಾನ್ ಹಾಕಿಸೋಣ…ಅದಕ್ಕಾಗಿ ನೀನು ಲೋನ್ ಅಪ್ಪ್ಲೈ ಮಾಡು… ಅಂತಹ ಅವಶ್ಯಕತೆ ಬಿದ್ದರೆ ನನ್ನ ಪೆನ್ಷನ್ ಮೇಲೆ ಸಹ ಸಾಲ ತೆಗೆಯೋಣ… ಇನ್ನೂ ಕಡಿಮೆ ಬಿದ್ದರೆ ನನ್ನ ಬಂಗಾರವಂತೂ ಇದ್ದೇ ಇದೆಯಲ್ಲ… ಇರು… ಒಳ್ಳೆಯ ಬಿಸಿ ಕಾಫಿ ಮಾಡಿಕೊಂಡು ಬರ್ತೇನೆ ಕುಡಿಯುವಿಯಂತೆ” ಎಂದು ಹೇಳಿ ಬಾಲ್ಕನಿಯಿಂದ ಹೊರಗೆ ಬಂದಳು.
ಖೈದಿ ಜೈಲಿನಿಂದ ತಪ್ಪಿಸಿಕೊಳ್ಳಲು ಕಷ್ಟಪಟ್ಟು ಸುರಂಗ ತೋಡಿದರೆ ಅದು ಸೀದಾ ಜೈಲರ್ ರೂಮಿನ ಒಳಗೆ ಹೋಯಿತಂತೆ…ಹಾಗಾಯಿತು ಪಾಪ ಗುಂಡಣ್ಣನ ಪರಿಸ್ಥಿತಿ… ಆಗ ಶಾಲೆಯಲ್ಲಿ ಎಂದೋ ಓದಿದ್ದು ನೆನಪಾಯಿತು ‘ಭೂಮಿ ದುಂಡಗಿದೆ’ ಎಂದು…ಏಕೆಂದರೆ ಎಲ್ಲಿಂದ ಸಮಸ್ಯೆ ಆರಂಭವಾಗಿತ್ತೋ ಎಲ್ಲ ಕಡೆ ಸುತ್ತು ಹಾಕಿ ಕೊನೆಗೆ ಮತ್ತೆ ಅಲ್ಲಿಗೆ ಬಂದು ನಿಂತಂತಾಗಿ ಕೂತಲ್ಲೇ ಗುಂಡಣ್ಣ ಅರೆಕ್ಷಣ ಕಂಪಿಸಿದ!
*****
19 thoughts on “‘ಭೂಮಿ ದುಂಡಗಿದೆ’”
ಕಥೆಯ ಅಂತ್ಯ ಅದ್ಭುತವಾಗಿದೆ. ಈ ರೀತಿ ತಿರುವು ಇರುತ್ತೆ ಅಂತ ಯೋಚಿಸಲೇ ಇಲ್ಲ. ಅಭಿನಂದನೆಗಳು ರಾಘವೇಂದ್ರ ಮಂಗಳೂರು ಅವರೇ
ಧನ್ಯವಾದಗಳು
ಒಂದು ಸಮಸ್ಯೆಯನ್ನು ಬಗೆಹರಿಸಲು ಹೋಗಿ ಇನ್ನೊಂದನ್ನು ಮೈಮೇಲೆ ಎಳೆದುಕೊಂಡ ಲಘುಬರಹ ಅನಿರೀಕ್ಷಿತ ತಿರುವಿನೊಂದಿಗೆ ಚೆನ್ನಾಗಿ ಮೂಡಿಬಂದಿದೆ.
ಅಭಿನಂದನೆಗಳು
ಧನ್ಯವಾದಗಳು
ನಮ್ಮ ಗುಂಡಣ್ಣ ತಿರುಗುವ, ಗುಂಡನೆಯ ಭೂಮಿಯ ಮೇಲೆ ನೆಲೆಸಿ, ತಾಯಿ ಹಾಗೂ ಅರ್ಧಾಂಗಿ ಈರ್ವರ ಮಧ್ಯೆ ಸಿಲುಕಿ ಒಂದು ಸಮಸ್ಯೆಯ ಪರಿಹಾರಕ್ಕಾಗಿ ಪ್ರಯತ್ನಿಸಿ, ಎರಡು ಆತಂಕಗಳನ್ನು ಎದುರಿಸಬೇಕಾಗಿ ಬಂದುದು ನಮ್ಮ ದೈನಂದಿನ ಜೀವನದಲ್ಲಿ ನಡೆಯುವ ಘಟನೆಗಳ ಕೈಗನ್ನಡಿಯೇ ಆಗಿದೆ.
ತಾವು ಪ್ರಸ್ತುತ ಪಡಿಸಿದ ಬರಹ ಅನಿರೀಕ್ಷಿತ ತಿರುವು ಪಡೆದು ಕುತೂಹಲ ಕೆರಳಿಸಿತು. ಗುಂಡಣ್ಣ ಮಾತ್ರ ತಿರುಗಿ ಎಲ್ಲಿದ್ದನೋ ಅಲ್ಲಿಗೇ ಮರಳಿದಂತಾಯಿತು.
ಚೆನ್ನಾಗಿ ಬರೆದಿದ್ದೀರಿ. 👏👏
ಧನ್ಯವಾದಗಳು ಸಾರ್
Very nice way of telling the story in a effective way. Congratulations 👍🎉🙏
Thank you Sir
ಕಥೆ ತುಂಬಾ ಚನ್ನಾಗಿದೆ. ಗೆದ್ದವಳು ನಾನೇ ಎನ್ನುವಂತೆ ಗೀತಾಂಜಲಿ ಪ್ಲ್ಯಾನ್ ಬ್ ಮುಂದಿಟ್ಟು ಪ್ಲ್ಯಾನ್ ಎ ಸಾಧಿಸಿದಳೆನ್ನಬಹುದು. ಕೊನೆಯಲ್ಲಿ, ಗುಂಡಣ್ಣ ಪಾಪ ಪಾಂಡು!
ಧನ್ಯವಾದಗಳು
ಕಥೆ ತುಂಬಾ ಚೆನ್ನಾಗಿದೆ. ಪ್ಲಾನ್ ಬಿ ಮುಂದಿಟ್ಟು ಪ್ಲ್ಯಾನ್ ಎ ಸಾಧಿಸಿ ಗೆದ್ದವಳು ನಾನೇ ಎಂದ ಗೀತಾಂಜಲಿ. ಕೊನೆಯಲ್ಲಿ ಸಹಜವಾಗಿ ಗುಂಡಣ್ಣ ಪಾಪ ಪಾಂಡು!
ಧನ್ಯವಾದಗಳು
ತುಂಬಾ ಚೆನ್ನಾಗಿದೆ ಮಂಗಳೂರು ಸರ್. ಅಭಿನಂದನೆಗಳು.🌷🌷
ಧನ್ಯವಾದಗಳು
ಕಥೆ ತುಂಬಾ ಸ್ವಾರಸ್ಯಕರವಾಗಿದೆ. ನಿರಾಯಾಸವಾಗಿ ಓದಿಸಿಕೊಂಡು ಹೋಗುತ್ತದೆ. ಅಭಿನಂದನೆಗಳು.
ಧನ್ಯವಾದಗಳು
ಒಂದು ಸಮಸ್ಯೆಯನ್ನು ಬಗೆಹರಿಸಲು ಹೋಗಿ ಇನ್ನೊಂದನ್ನು ಅನಾಯಾಸವಾಗಿ ಮೈಮೇಲೆ ಎಳೆದುಕೊಂಡ ಲಘುಬರಹ ಅನಿರೀಕ್ಷಿತ ತಿರುವಿನೊಂದಿಗೆ ಸೊಗಸಾಗಿ ಮೂಡಿ ಬಂದಿದೆ.
ಅಭಿನಂದನೆಗಳು
Very nice story.keep it up.
Thank you Sir