ಸೂರ್ಯೋದಯಕ್ಕಿಂತತುಸು ಮುಂಚೆಯೇ ಎಚ್ಚರಗೊಳ್ಳುವ ಕಾಡುಕೋಳಿಗಳ ಕೂಗಿಗೆ ಇತರ ಪಕ್ಷಿಗಳೂ ಎಚ್ಚೆತ್ತವು. ತಂತಮ್ಮ ರೆಕ್ಕೆಪುಕ್ಕಗಳನ್ನು ಬಿಚ್ಚಿ, ಹರಡಿ ಮೈಮುರಿಯುತ್ತ ಚೈತನ್ಯ ತುಂಬಿಕೊಂಡವು. ತಾವಿದ್ದ ದೈತ್ಯ ಆಲದ ಮರದಲ್ಲಿ ಮಾಗಿದ ಹಣ್ಣುಗಳನ್ನು ಲಘುಬಗೆಯಿಂದ ಕಿತ್ತು ತಿನ್ನುತ್ತ ಉಲ್ಲಾಸದಿಂದ ಹಾರಾಡ ತೊಡಗಿದವು. ಅವುಗಳ ಕುಟುಕಿನಿಂದ ತೊಟ್ಟು ಕಳಚಿ ಜಾರಿದ ಕೆಲವು ಹಣ್ಣುಗಳು ತಟಪಟನೇ ಸರೋಜ ಮತ್ತು ಲಕ್ಷ್ಮಣನ ಮೇಲೂ ಉದುರಿ ಬಿದ್ದುದರಿಂದ ಇಬ್ಬರಿಗೂ ಎಚ್ಚರವಾಯಿತು. ಕಣ್ಣು ಬಿಟ್ಟು ಸುತ್ತಲೂ ಗಮನಿಸಿದರು. ಮಸುಕು ಮಸುಕಾದ ಕತ್ತಲೆಯಿತ್ತು. ಒಂದುಕ್ಷಣ ತಾವೆಲ್ಲಿದ್ದೇವೆ ಎಂಬುದು ಇಬ್ಬರಿಗೂ ಹೊಳೆಯಲಿಲ್ಲ. ಬಳಿಕ ಮೆಲ್ಲನೆ ತಾವಿದ್ದ ಸ್ಥಿತಿಯ ಅರಿವಾಯಿತು. ಸರೋಜಾಳಿಗೆ ಸುಮಾರಾಗಿ ನಿದ್ರೆಯಾಗಿತ್ತು.ಅವಳು ಉಲ್ಲಾಸಗೊಂಡಿದ್ದಳು. ‘ಹೊರಡೋಣವಾ ಸರೂ, ಇನ್ನು ಸ್ವಲ್ಪ ಹೊತ್ತಲ್ಲಿ ಬೆಳಕಾಗುತ್ತದೆ!’ಎಂದು ಲಕ್ಷ್ಮಣನೆಂದಾಗ ಅವಳು, ‘ಹ್ಞೂಂ!’ಎಂದು ಎದ್ದು ನಿಂತಳು. ಇಬ್ಬರೂ ತಮ್ಮ ಗಂಟು ಮೂಟೆ ಹೊತ್ತು ಕಾಸರಪೇಟೆಯತ್ತ ಹೆಜ್ಜೆ ಹಾಕಿದರು. ಲಕ್ಷ್ಮಣ, ತಾನು ಮನೆಯಿಂದ ಹೊರಟು ಬರುವಾಗ ಅಪ್ಪನ ಕಿಸೆಯಿಂದ ಇನ್ನೂರು ರೂಪಾಯಿಗಳನ್ನು ಎಗರಿಸಿದ್ದ. ಆ ದುಡ್ಡು ಅವನ ಕಿಸೆಯಲ್ಲಿ ಕುಳಿತು ಧೈರ್ಯ ನೀಡುತ್ತಿತ್ತು. ಅಂತೂ ಅರ್ಧ ಗಂಟೆಯ ನಡಿಗೆಯ ನಂತರ ಕಾಸರಪೇಟೆಯನ್ನು ತಲುಪಿದರು. ಮುಂಜಾನೆ ಆರು ಗಂಟೆಯ ಮೊದಲ ಬಸ್ಸೊಂದು ಅನಂತೂರಿಗೆ ಹೊರಟು ನಿಂತಿತ್ತು. ಕೂಡಲೇ ಆ ಬಸ್ಸು ಹತ್ತಿದರು. ಟಿಕೆಟ್ ನೀಡಲು ಬಂದ ಕಂಡೆಕ್ಟರ್ ತನಿಯಪ್ಪ ಅಭ್ಯಾಸ ಬಲದಿಂದ ಇಬ್ಬರನ್ನೂ ಮಿಕಮಿಕ ದುರುಗುಟ್ಟಿದವನು ಟಿಕೇಟು ಹರಿದು ಕೊಟ್ಟು ದುಡ್ಡು ಪಡೆದುಕೊಂಡು ಮುಂದಿನ ಸೀಟಿನತ್ತ ಹೋದ. ಆದರೆ ಅವನ ವಕ್ರದೃಷ್ಟಿಗೆ ಈ ಬಡ ಪ್ರೇಮಿಗಳ ಎಳೆಯ ಹೃದಯಗಳು,‘ಇವನೆಲ್ಲಿ ತಮ್ಮವರ ಪರಿಚಯದವನೋ…?’ ಎಂಬ ಭಯದಿಂದ ಕಂಪಿಸಿದವು. ಆದ್ದರಿಂದ ಬಸ್ಸು ಅನಂತೂರು ತಲುಪುವವರೆಗೆ ಇಬ್ಬರೂ ಉಸಿರು ಬಿಗಿಹಿಡಿದು ಕುಳಿತರು.
ಮುಂದಿನೆರಡು ತಾಸಿನಲ್ಲಿ ಬಸ್ಸು ಅನಂತೂರು ತಲುಪಿತು. ಇಬ್ಬರೂ ಹಸಿವಿನಿಂದ ಕಂಗೆಟ್ಟಿದ್ದರು. ಅಲ್ಲೇ ಸಮೀಪವಿದ್ದ ಗಣೇಶ್ ಕಾಮತರ ಹೊಟೇಲು ಹೊಕ್ಕರು. ಇಡ್ಲಿ ಸಾಂಬಾರು ಮತ್ತು ಉಪ್ಪಿಟ್ಟವಲಕ್ಕಿ ತಿಂದು ಚಹಾ ಕುಡಿದು ಆರು ರೂಪಾಯಿ ಬಿಲ್ಲು ಕೊಟ್ಟು ಹೊರಗೆ ಬಂದು ಮುದ್ದಣಪುರದ ಬಸ್ಸು ಹತ್ತಿದರು. ತುಸು ಹೊತ್ತಲ್ಲಿ ಅಲ್ಲಿಗೆ ತಲುಪಿದವರು, ದೋಣಿ ಹಿಡಿಯಲು ಹೊಳೆ ಬಾಗಿಲಿನತ್ತ ನಡೆದರು. ಆವರೆಗೆ ದೋಣಿಯೇರಿ ಅಭ್ಯಾಸವಿರದ ಸರೋಜ ಭಯವಾಗಿ ದೋಣಿ ಹತ್ತಲು ಹಿಂಜರಿದಳು.ಲಕ್ಷ್ಮಣ ಆಕೆಯನ್ನು ಬಿಗಿಯಾಗಿ ಹಿಡಿದುಕೊಂಡು ಹತ್ತಿಸಿ ಜೊತೆಯಲ್ಲಿ ಕುಳಿತ.ದೋಣಿಯಲ್ಲಿದ್ದ ಹತ್ತಾರು ಹಿರಿಯ, ಕಿರಿಯ ಕೌತುಕದ ಕಣ್ಣುಗಳೆಲ್ಲ ಕ್ಷಣ ಹೊತ್ತು ಅಪರಿಚಿತ ಜೋಡಿಯನ್ನು ಆಪಾದಮಸ್ತಕ ದಿಟ್ಟಿಸುತ್ತ ತಂತಮ್ಮ ಮನಸ್ಥಿತಿಗೆ ತಕ್ಕಂತೆ ಅವರ ಬಗ್ಗೆ ಕಲ್ಪಿಸಿಕೊಂಡವು.ಆದರೆ ಸ್ವಲ್ಪ ಹೊತ್ತಲ್ಲಿ ಆ ಯೋಚನೆಗಳನ್ನು ಬದಿಗೆ ಸರಿಸಿ ವಿಶಾಲ ಹೊಳೆಯನ್ನೂ ಅದರ ಸುತ್ತಮುತ್ತಲಿನ ದೃಶ್ಯಗಳನ್ನೂ ಕಣ್ತಿಂಬಿಕೊಳ್ಳುತ್ತ ಸಾಗಿದುವು. ಆದರೆ ಇನ್ನು ಕೆಲವು ಕುತೂಹಲ ಆರದ ಕಣ್ಣುಗಳು ತಮ್ಮ ಸಹ ಪ್ರಯಾಣಿಕರತ್ತಲೇ ನೆಟ್ಟಿದ್ದವು,ಅವರ ಒಳ ಹೊರಗನ್ನು ಅವಲೋಕಿಸುವ ಕಾಲಹರಣದಲ್ಲಿ ತೊಡಗಿದ್ದವು. ಆದ್ದರಿಂದ ತಮ್ಮ ಸುತ್ತಮುತ್ತಲಿನ ವಿವಿಧ ದೃಷ್ಟಿಗಳನ್ನು ಎದುರಿಸಲು ಕೆಲಹೊತ್ತು ಚಡಪಡಿಸಿದ ಲಕ್ಷ್ಮಣ ಮತ್ತು ಸರೋಜ ಬಳಿಕ ತಾವೂ ಅದನ್ನು ಮರೆತು ನೀಲ ಹೊಳೆಯ ಸೌಂದರ್ಯವನ್ನು ಕಾಣುತ್ತ ಕುಳಿತವರು ಒಂದು ಗಳಿಗೆಯಲ್ಲಿ ಮುಂದಿನ ದಡವನ್ನು ತಲುಪಿದರು.
ಅಲ್ಲಿಂದ ಅವರು ಮರಳಿ ಬಸ್ಸು ಹತ್ತಿ ಶಿವಕಂಡಿಕೆಗೆ ತಲುಪುವ ಹೊತ್ತಿಗೆ ನಡು ನೆತ್ತಿಯಲ್ಲಿದ್ದ ಸೂರ್ಯ ಪಶ್ಚಿಮಕ್ಕೆ ವಾಲಿದ್ದ. ಶಿವಕಂಡಿಕೆಯ ಬಸ್ಸುನಿಲ್ದಾಣದಲ್ಲಿ ಇಳಿದವರಿಗೆ ಇನ್ನು ಮುಂದಿನ ತಮ್ಮ ತಾಣ ಯಾವುದು? ಎಂಬ ಕರಾಳ ಪ್ರಶ್ನೆ ಎದುರಾಯಿತು. ಅದೇ ಯೋಚನೆಯಲ್ಲಿದ್ದ ಲಕ್ಷ್ಮಣನಿಗೆ ತಟ್ಟನೆ ತನ್ನ ಮಾವ ಶಂಕರನ ನೆನಪಾಯಿತು. ಕೆಲವು ವರ್ಷಗಳ ಹಿಂದೆ ಶಂಕರ ಯಾವುದೋ ಕಾರಣಕ್ಕೆ ಮನೆಮಂದಿಯೊಂದಿಗೆ ಜಗಳವಾಡಿಕೊಂಡು ಊರು ಬಿಟ್ಟಿದ್ದ. ಅವನು ಚೌಳುಕೇರಿಯಲ್ಲಿ ಗಣೇಶ್ ಬೀಡಿ ಬ್ರಾಂಚಿನಲ್ಲಿ ಬೀಡಿ ಚೆಕ್ಕರ್ ಆಗಿ ಕೆಲಸ ಮಾಡುತ್ತಿದ್ದ ಎಂಬುದನ್ನು ಮನೆಯವರು ಹೇಳುತ್ತಿದ್ದುದು ಲಕ್ಷ್ಮಣನಿಗೆ ಗೊತ್ತಿತ್ತು. ಹಾಗಾಗಿ ಸ್ವಲ್ಪ ನಿರಾಳನಾದ. ಶಿವಕಂಡಿಕೆಗೆ ಬಂದುದರಿಂದ ಮೊದಲಿಗೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು ಹೋಗುವ ಎಂದು ಯೋಚಿಸಿದ. ‘ಸರೂ,ಇಲ್ಲೇ ಸಮೀಪದಲ್ಲಿ ಬ್ರಹ್ಮಲಿಂಗೇಶ್ವರನ ದೊಡ್ಡ ದೇವಸ್ಥಾನವಿದೆಯೆಂದು ಶಂಕರ ಮಾವ ಹೇಳುತ್ತಿದ್ದ. ಹೋಗಿ ದೇವರಿಗೆ ಕೈಮುಗಿದು ಮುಂದೆ ಹೋಗುವನಾ?’ ಎಂದ. ಸರೋಜಳಿಗೆ ಖುಷಿಯಾಯಿತು. ‘ಆಯ್ತು ಹೋಗುವ!’ ಎಂದಳು ಅವಳು ಹುರುಪಿನಿಂದ. ಲಕ್ಷ್ಮಣ ಬಸ್ಸೊಂದರ ಕಂಡೆಕ್ಟರನೊಡನೆ ದೇವಸ್ಥಾನದ ದಾರಿ ವಿಚಾರಿಸಿದ.ಅವನು ಸೂಚಿಸಿದ ದಾರಿಯಲ್ಲಿ ನಡೆದವರು ಒಂದು ಫರ್ಲಾಂಗ್ ದೂರದ ದೇವಸ್ಥಾನಕ್ಕೆ ಬಂದರು.
ಹಲವು ಶತಮಾನಗಳ ಹಿಂದೆ ಶೈವಾರಾಧಕರ ಕಾಲಘಟ್ಟದಲ್ಲಿ ನಿರ್ಮಿಸಲ್ಪಟ್ಟು ಲಿಂಗಾರಾಧನೆಗೊಳ್ಳುತ್ತ ಬಂದಿದ್ದ ಪುರಾತನ ದೇವಾಲಯದಲ್ಲಿ ಕೆಲವು ಶತಮಾನಗಳ ತರುವಾಯ ಶಿವನೊಂದಿಗೆ ಬ್ರಹ್ಮದೇವರೂ ಸಮ್ಮಿಲನಗೊಂಡು ಪೂಜಿಸಲ್ಪಡುತ್ತ ಬಂದಿದ್ದರು. ಪ್ರೇಮಿಗಳು ಭಕ್ತಿಯಿಂದ ದೇವಳ ಹೊಕ್ಕರು. ಹಿಂಗಾರ ಮತ್ತು ವಿವಿಧ ಪುಷ್ಪಗಳಿಂದ ಅಲಂಕೃತನಾಗಿದ್ದ ಆಳೆತ್ತರದ,ವಿಶಾಲ ಕಣ್ಣುಗಳ ದಪ್ಪ ಮೀಸೆಯ ಮತ್ತು ಶರಣು ಬಂದವರಿಗೆ ವೀರ ಪುರುಷನಂತೆ ಅಭಯ ನೀಡುವ ಭಂಗಿಯಲ್ಲಿ ಎದೆ ಸೆಟೆಸಿ ಕೈಯಲ್ಲಿ ನೀಳ್ಗತ್ತಿಯನ್ನು ಹಿರಿದು ನಿಂತು ನಾಸ್ತಿಕರಲ್ಲೂ ಭಯಭಕ್ತಿಯನ್ನು ಹುಟ್ಟಿಸುವಂತಹ ಬ್ರಹ್ಮಲಿಂಗೇಶ್ವರನ ಶಿಲಾಮೂರ್ತಿಯೆದುರು ಪ್ರೇಮಿಗಳಿಬ್ಬರೂ ನಮ್ರತೆಯಿಂದ ಕೈಮುಗಿದು ನಿಂತರು.‘ಅಪ್ಪಾ, ಬ್ರಹ್ಮಲಿಂಗೇಶ್ವರಾ…! ನಿನ್ನ ಸನ್ನಿಧಾನಕ್ಕೆ ಬಂದಿದ್ದೇವೆ. ನಮ್ಮ ಬದುಕಿಗೊಂದು ಭದ್ರ ನೆಲೆ ಕರುಣಿಸು ಪರಮಾತ್ಮಾ…!’ ಎಂದು ಇಬ್ಬರೂ ಆದ್ರ್ರರಾಗಿ ಮೊರೆಯಿಟ್ಟರು. ಮರುಕ್ಷಣ ಇಬ್ಬರಲ್ಲೂ ಚೈತನ್ಯ ಮೂಡಿತು. ತೆಳ್ಳಗೆ, ಬೆಳ್ಳಗಿನ ಹಿರಿಯ ಅರ್ಚಕರೊಬ್ಬರು ಇಬ್ಬರಿಗೂ ತೀರ್ಥ ಮತ್ತು ಗಂಧಪ್ರಸಾದವನ್ನು ನೀಡಿ ಹಾರೈಸಿದರು. ಎಳೆಯ ಮನಸ್ಸುಗಳು ಇನ್ನಷ್ಟು ಹುರುಪಿನಿಂದ ಮರಳಿ ಬಸ್ಸು ನಿಲ್ದಾಣದತ್ತ ಹೆಜ್ಜೆ ಹಾಕಿದವು. ಅಲ್ಲಿನ ಸಹ ಪ್ರಯಾಣಿಕರಲ್ಲಿ ವಿಚಾರಿಸಿ ಚೌಳುಕೇರಿಗೆ ಹೋಗುವ ಬಸ್ಸು ಹತ್ತಿದರು.
‘ಚೌಳು ಕೇರಿ ಬಂದಾಗ ತಿಳಿಸಿಬಿಡಿ ಆಯ್ತಾ…!’ ಎಂದು ಲಕ್ಷ್ಮಣ ಕಂಡೆಕ್ಟರ್‍ಗೆ ಸೂಚಿಸಿದ. ಆದರೆ ಅವನು ತನ್ನ ಸಹಜ ಉದಾಸೀನದಿಂದ, ‘ಚೌಳುಕೇರಿಗೆ ಬಸ್ಸಿವಲ್ಲಲ್ಲ ಅಣ್ಣಾ…!ನಾಲ್ಮುಖಪೇಟೆಯಲ್ಲಿ ಇಳಿದುಕೊಳ್ಳಿ. ಅಲ್ಲಿಂದ ಐದು ಮೈಲು ದೂರ ನಡೆದರೆ ಚೌಳುಕೇರಿ ಸಿಗುತ್ತದೆ!’ ಎಂದು ತಲೆಯೆತ್ತದೆ ಚಿಲ್ಲರೆ ಎಣಿಸುತ್ತಲೇ ಹೇಳಿ ಮುಂದೆ ಸಾಗಿದ. ಮತ್ತೊಂದು ಗಂಟೆಯಲ್ಲಿ ಪ್ರೇಮಿಗಳು ನಾಲ್ಮುಖ ಪೇಟೆಗೆ ಬಂದಿಳಿದು ಚೌಳುಕೇರಿಯ ದಾರಿ ಹಿಡಿದರು. ಬಸ್ಸು, ಲಾರಿ ಮತ್ತು ಕಾರುಗಳು ವಿರಳವಾಗಿ ಸಂಚರಿಸುತ್ತಿದ್ದ ಸಪೂರವಾದ ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲಿ ಸಾಗಿದವರು ಮಲ್ಲಕಳ ಹೊಳೆಯ ಸಮೀಪದ ಕಾಲು ದಾರಿಯನ್ನು ಹಿಡಿದರು. ಆ ಹಾದಿಯು ಅವರನ್ನು ಇನ್ನೆರಡು ಮೈಲಿ ದೂರದ ಚೌಳುಕೇರಿಯ ಮೊಗವೀರ ಬಡಾವಣೆಯೊಂದಕ್ಕೆ ತಂದು ಮುಟ್ಟಿಸಿತು.
***
ಚೌಳುಕೇರಿಯ ಮೊಗವೀರ ಬಡಾವಣೆಯು ಸುಮಾರು ಐವತ್ತು ಅರವತ್ತು ಸಂಸಾರಗಳಿದ್ದ ಒಂದು ಪುಟ್ಟಗ್ರಾಮ. ಕೂಗಳತೆ ದೂರಕ್ಕೊಂದೊಂದು ಮನೆಗಳು. ಮನೆಗಳೆಂದರೆ ಈಗಿನ ಹಂಚು ಮತ್ತು ತಾರಸಿಯವಲ್ಲ.ಬಹಳ ಹಿಂದಿನ ಕಾಲದಲ್ಲಿ ತೀವ್ರ ಬಡತನದ ಕಾರಣಕ್ಕೆ ದೂರದ ಕುದುರುಬೆಟ್ಟು, ಬೆಂಗರೆ ಮತ್ತು ಶಿವಕಂಡಿಕೆ ಕರಾವಳಿಯಿಂದ ಕೆಲವು ಮೊಗವೀರ ಕುಟುಂಬಗಳು ವಲಸೆ ಹೊರಟವು, ವರ್ಷವಿಡೀ ಸಮೃದ್ಧವಾಗಿ ತುಂಬಿ ಹರಿಯುತ್ತಿದ್ದ ಮಲ್ಲಕಳ ಹೊಳೆಯತ್ತ ಬಂದರು. ಆ ಹೊಳೆಯಲ್ಲಿ ಹಲವು ಬಗೆಯ ಮೀನುಗಳೊಂದಿಗೆ ಬಣ್ಣಬಣ್ಣದ ಮೊಳಿಗಳು (ಕಪ್ಪೆಚಿಪ್ಪು) ಯಥೇಚ್ಛವಾಗಿ ಸಿಗುವುದನ್ನು ತಮ್ಮ ಅನುಭವ ಜ್ಞಾನದಿಂದ ತಿಳಿದು ನದಿಯ ಸಮೀಪವೇ ಹೊಸ ಬದುಕು ಕಟ್ಟಿಕೊಳ್ಳಲು ನಿರ್ಧರಿಸಿ ಮೊದಲಿಗೆ ಮಡಲಿನ ತಟ್ಟಿಕಟ್ಟಿ ಸಣ್ಣ ಸಣ್ಣ ಸೂರುಗಳನ್ನು ನಿರ್ಮಿಸಿ ಕೊಂಡು ನೆಲೆಸಿದರು. ಮಳೆಗಾಲ ಸಮೀಪಿಸುವುದರೊಳಗೆ ಅನತಿ ದೂರದ ಕೆಂಪುಮಣ್ಣಿನ ಸಣ್ಣ ಗುಡ್ಡೆಯೊಂದನ್ನು ಅಗೆದು ಮಣ್ಣು ಹೊತ್ತು ತಂದು, ಒಂದು ವಾರ ಕೊಳೆಯಿಸಿ ಹದಗೊಳಿಸಿ ಎರಡು ಮೂರು ಅಥವಾ ಸ್ವಲ್ಪ ಹೆಚ್ಚು ಸಾಮಥ್ರ್ಯವಿದ್ದವರು ನಾಲ್ಕೈದು ಚಿಕ್ಕಚಿಕ್ಕ ಕೋಣೆಗಳನ್ನು ಕಟ್ಟಿಕೊಂಡರು.ಅವುಗಳ ಮಾಡುಗಳಿಗೆ ಬಿದಿರಗಳುಗಳನ್ನು ಜೋಡಿಸಿ ಕಟ್ಟಿ ಸಮೀಪದ ಗುಡ್ಡದ ಮುಳಿಹುಲ್ಲು ತಂದು ಹಾಸಿ ಬೆಚ್ಚನೆಯ ಗುಡಿಸಲುಗಳನ್ನು ನಿರ್ಮಿಸಿಕೊಂಡರು. ಮಲ್ಲಕಳ ಹೊಳೆಯ ಮೀನುಗಾರಿಕೆ ಮತ್ತು ಮೊಳಿಯ ವ್ಯಾಪಾರದೊಂದಿಗೆ ಆಗಾಗ್ಗೆ ದೂರದ ಕುದುರುಬೆಟ್ಟುವಿನ ಸಮುದ್ರದ ಮೀನುಗಾರಿಕೆಗೂ ಹೋಗಿ ಶ್ರಮಿಸುತ್ತ ಬಾಳತೊಡಗಿದರು.
***
ಚೌಳುಕೇರಿ ಪ್ರವೇಶಿಸುತ್ತಲೇ ಮೊದಲಿಗೆ ಎದುರುಗೊಳ್ಳುವ ಮನೆ, ಅರವತ್ತರ ಹರೆಯದ ಮೊಗವೀರ ಮಹಿಳೆ ಅಕ್ಕಯಕ್ಕನದ್ದು. ಅವಳು ಒಂಟಿಯಾಗಿ ಬಾಳುತ್ತಿರುವವಳು,ತನ್ನ ದೇಹದಲ್ಲಿ ಶಕ್ತಿಯಿರುವವರೆಗೆ ಕುದುರುಬೆಟ್ಟಿನ ಮುಂಡ (ಬಂದರು) ಕ್ಕೆ ಹೋಗಿ ಹಸಿ ಮೀನು ಕೊಂಡು ತಂದು ಮಾರಾಟ ಮಾಡುತ್ತ ಬದುಕುತ್ತಿದ್ದಳು. ಆದರೆ ಈಗ ವಯಸ್ಸಾಗುತ್ತ ಬಂದುದರಿಂದ ಅವಳಿಗೆ ಆ ಕಾಯಕ ಕಷ್ಟವಾಗ ತೊಡಗಿತ್ತು. ಆದ್ದರಿಂದ ತಿಂಗಳು ಅಥವಾ ಎರಡು ತಿಂಗಳಿಗೊಮ್ಮೆ ಕುದುರುಬೆಟ್ಟುವಿಗೆ ಹೋಗಿ ಸಣ್ಣ ಮೀನುಗಾರರಿಂದ ಒಂದೆರಡು ಬುಟ್ಟಿ ನಂಗು ಮೀನು, ಬೂತಾಯಿ, ಬಂಗುಡೆ, ಅಡೆಮೀನು, ಕಲ್ಲೂರು ಮತ್ತು ಸಾಟೆಮೀನುಗಳನ್ನು ಖರೀದಿಸಿ ಅವುಗಳ ಹೊಟ್ಟೆ ಸೀಳಿ, ಒಳಾಂಗಗಳನ್ನು ಕಿತ್ತು ಶುದ್ಧಗೊಳಿಸಿ ಉಪ್ಪು ಬೆರೆಸಿ ಚೆನ್ನಾಗಿ ಒಣಗಿಸಿ ಬುಟ್ಟಿಯಲ್ಲಿ ತುಂಬಿಕೊಂಡು ತಿಂಗಳಿಗೊಮ್ಮೆ ಚೌಳುಕೇರಿ ಮತ್ತು ನಾಲ್ಮುಖ ಪೇಟೆಗಳಿಗೆ ಹೊತ್ತೊಯ್ದು ಮಾರಿ ಬರುತ್ತಿದ್ದಳು. ಇದೇ ಅಕ್ಕಯಕ್ಕನ ಮನೆಯೆದುರು ಇಂದು ಲಕ್ಷ್ಮಣ ಮತ್ತು ಸರೋಜ ಬಂದು ನಿಂತುಕೊಂಡು ಆಯಾಸದ ಉಸಿರುಬಿಟ್ಟರು.
‘ಹೋಯ್, ಮನೆಯಲ್ಲಿ ಯಾರಿದ್ದೀರಿ…?’ ಲಕ್ಷ್ಮಣ ಮೆಲುವಾಗಿ ಪ್ರಶ್ನಿಸಿದ. ಒಳಗಡೆ ಅಕ್ಕಯಕ್ಕ ರಾತ್ರಿಯ ಅನ್ನಕ್ಕೆ ನೀರಿಡುತ್ತಿದ್ದವಳು ಲಘುಬಗೆಯಿಂದ ಹೊರಗೆ ಬಂದು ನೋಡಿದಳು. ಹೊಸ ಮುಖಗಳು. ಗುರುತು ಹತ್ತಲಿಲ್ಲ.‘ಯಾರ್ ಬೇಕಿತ್ ಮಗಾ…?’ ಎಂದಳು.
‘ಅಮ್ಮಾ, ಇಲ್ಲೊಂದು ಗಣೇಶ್ ಬೀಡಿ ಬ್ರಾಂಚು ಇದೆಯಂತಲ್ಲಾ ಅದು ಎಲ್ಲಿದೆ…?’ಎಂದ ಲಕ್ಷ್ಮಣ.
‘ಓಹೋ…ಬೀಡಿ ಬ್ರೆಂಚ್ಚಾ? ಅದ್ ಇಲ್ಲಿಂದ ನೀವ್ ಬಂದ್ ದಾರಿಯಂಗೇ ಸೊಲ್ಪು ಹಿಂದ್ ಹೋಯ್ಕ್. ಅಲ್ ಬಲ್ಲ್ ಬದಿ ತಿರ್ಗ್‍ರೆ ಉಸ್ಮಾನ್ ಸಾಯಿಬ್ರ್ ಮನಿ ಸಿಕ್ಕತ್. ಅಲ್ಲೇ ಹತ್ರ ಇತ್ ಕಾಣಿ!’ ಎಂದ ಅಕ್ಕಯಕ್ಕ ಇಬ್ಬರನ್ನೂ ಅಡಿಯಿಂದ ಮುಡಿಯವರೆಗೆ ದಿಟ್ಟಿಸುತ್ತ ಹೇಳಿದಳು.‘ಈ ಜೋಡಿಗೆ ಇನ್ನೂ ಶೆಣ್ಣ್ ವಯಸ್. ನಮ್ ಕೇರಿಯವ್ರಂತೂ ಅಲ್ದೇ ಅಲ್ಲ!’ ಎಂದು ಕೊಂಡವಳಿಗೆ ಏನೋ ಅನುಮಾನ ಬಂತು.‘ಎಲ್ಲಿಂದ ಬಂದ್ರೀ ಮಗಾ…?’ ಎಂದವಳು ಕೇಳುತ್ತಿದ್ದಂತೆಯೇ ಸರೋಜ ಬವಳಿ ಬಂದಂತಾಗಿ ರಪ್ಪನೆ ಜಗುಲಿಯ ಮೇಲೆ ಕುಸಿದಳು. ‘ಅಯ್ಯೋ ದೇವ್ರೇ…! ಎಂತಾಯ್ತಮ್ಮಾ…? ಕೂಕಣಿ, ಕೂಕಣಿ. ಹೋ, ನಾನೊಬ್ಬ್‍ಳ್ ಪೆದ್ದಿ! ಕುಡಿಕೆ ನೀರ್ ತೆಕಬತ್ತೆ. ದೂರ್‍ದಿಂದ ನೆಡ್ಕ ಬಂದಿರಂದೇಳಿ ತೋರತ್!’ ಎಂದು ಗೊಣಗುತ್ತ ಸರಸರನೇ ಒಳಗೆ ಹೋಗಿ ಕಂಚಿನ ಬಿಂದಿಗೆಯಲ್ಲಿ ನೀರು ಮತ್ತು ಬೆಲ್ಲವನ್ನು ತಂದು ಸರೋಜಾಳಿಗೆ ನೀಡಿದಳು.ಇಬ್ಬರೂ ನೀರು ಕುಡಿದು ದಣಿವಾರಿಸಿಕೊಂಡರು.
ಬಳಿಕ ಲಕ್ಷ್ಮಣ ತಮ್ಮ ಕತೆಯನ್ನು ಅಕ್ಕಯಕ್ಕನಿಗೆ ವಿವರಿಸತೊಡಗಿದ. ಆದರೆ ಯಾವುದಕ್ಕೂ ಸಹಾಯಕ್ಕಿರಲಿ ಎಂದು ಕೊಂಡು ಕೆಲವು ಸುಳ್ಳುಗಳನ್ನೂ ಬೆರೆಸಿ ಹೇಳುವ ಮೂಲಕ ಅವಳಲ್ಲಿ ಅನುಕಂಪವನ್ನು ಗಿಟ್ಟಿಸಿಕೊಳ್ಳಲೆತ್ನಿಸಿದ. ಸರೋಜ ಅಮಾಯಕಳಾಗಿ ಲಕ್ಷ್ಮಣನ ಮಾತು ಕೇಳುವುದರಲ್ಲಿ ಮಗ್ನಳಾದಳು. ‘ತಾವು ಅನಂತೂರಿನಿಂದ ಬಂದವರು. ಇಬ್ಬರೂ ನೆರಕರೆಯವರು ಮತ್ತು ಒಂದೇ ಜಾತಿಯವರು. ಒಬ್ಬರನ್ನೊಬ್ಬರು ತುಂಬಾ ಇಷ್ಟಪಟ್ಟೆವು. ಆದರೆ ಮನೆಯವರು ವಿರೋಧಿಸಿದರು. ವಿಧಿಯಿಲ್ಲದೆ ಸ್ನೇಹಿತರ ಸಹಾಯದಿಂದ ದೇವಸ್ಥಾನದಲ್ಲಿ ಮದುವೆಯಾಗಿ ಮನೆಗೆ ಹಿಂದಿರುಗಿದೆವು. ಆದರೂ ಅವರು ಒಳಗೆ ಸೇರಿಸಿಕೊಳ್ಳಲಿಲ್ಲ. ಬದಲಿಗೆ ಎರಡೂ ಕಡೆಯವರು ಸೇರಿ ನಮ್ಮನ್ನು ಹಿಡಿದು ಹೊಡೆದು ಕರಿಮಣಿ ಸರವನ್ನು ಕಿತ್ತು ಬಿಸಾಕಿ ಊರಿನಿಂದ ಹೊರಗಟ್ಟಿದರು. ಹಾಗಾಗಿ ಆ ಊರೇ ಬೇಡವೆಂದು ತೀರ್ಮಾನಿಸಿ ಇಷ್ಟು ದೂರ ಬಂದುಬಿಟ್ಟೆವು.ಇಲ್ಲೆಲ್ಲಾದರೂ ಸ್ವಲ್ಪ ಕಾಲದ ಮಟ್ಟಿಗೆ ಉಳಿದುಕೊಳ್ಳಲೊಂದು ಸಣ್ಣ ಸೂರು ಸಿಕ್ಕಿದರೆ ಬೀಡಿ ಕಟ್ಟಿಕೊಂಡು ಬದುಕುತ್ತೇವಮ್ಮಾ…!’ ಎಂದು ಲಕ್ಷ್ಮಣ ಅಕ್ಕಯಕ್ಕನೊಡನೆ ಆದ್ರ್ರವಾಗಿ ಹೇಳುತ್ತ ತಮ್ಮ ಅಸಹಾಯಕತೆಯನ್ನು ತೋಡಿಕೊಂಡ. ಆಗ ಸರೋಜಾಳ ಕಣ್ಣಾಲಿಗಳು ತುಂಬಿ ತೊಟ್ಟಿಕ್ಕುತ್ತಿದ್ದುವು.
ಯುವ ಪ್ರೇಮಿಗಳ ಕಣ್ಣೀರಿನ ಕಥೆಯನ್ನು ಕೇಳಿದ ಅಕ್ಕಯಕ್ಕನ ಮನಸ್ಸು ಸ್ವಲ್ಪ ಹೆಚ್ಚೇ ಕರಗಿತು. ಏಕೆಂದರೆ ಅವಳಿಗೂ ಲಕ್ಷ್ಮಣನಷ್ಟೇ ವಯಸ್ಸಿನ ತೊಮರನೆಂಬೊಬ್ಬ ಮಗನಿದ್ದ. ಅಕ್ಕಯಕ್ಕನ ಕುಟುಂಬ ಶಿವಕಂಡಿಕೆಯ ಕರಾವಳಿಯಲ್ಲಿ ವಾಸವಿದ್ದ ಕಾಲದಲ್ಲಿ ತೊಮರನು ಆಳ ಸಮುದ್ರದ ಮೀನುಗಾರಿಕೆಗೆ ಹೋಗುತ್ತಿದ್ದ. ಆವತ್ತೊಂದು ದಿನ ಹುಣ್ಣಿಮೆಯ ಮೊದಲ ಜಾವದ ಹಾಲು ಬೆಳದಿಂಗಳಲ್ಲಿ ತೊಮರನ ತಂಡವು ಎಂಟ್ಹತ್ತು ದಿನಗಳ ಪ್ರಯಾಣದ, ದೂರಸಮುದ್ರದ ಮೀನುಗಾರಿಕೆಗೆ ಹೊರಟಿತು. ನಾಲ್ಕು ದಿನಗಳವರೆಗೆ ಮುಂದೆ ಸಾಗಿದ ಹಡಗು ಐದನೆಯ ದಿನ ಶಾಂತ ಸಾಗರದ ನಟ್ಟನಡುವಿಗೆ ಬಂದು ನಿಂತಿತು. ಅಲ್ಲಿ ನಿರ್ದಿಷ್ಟ ಪ್ರದೇಶವೊಂದರ ಜಲರಾಶಿಯ ಆಳದಲ್ಲಿ ಸಣ್ಣ ಮೀನುಗಳ, ತಿಮಿಂಗಿಲ ಗಾತ್ರದ ಹಿಂಡೊಂದು ವೃತ್ತಾಕಾರದಲ್ಲಿ ಸುತ್ತಿ ಸುಳಿಯುತ್ತಿದ್ದುದನ್ನು ದೋಣಿಯ ತಂಡೇಲ ಗ್ರಹಿಸಿದ. ಕೂಡಲೇ ಮಾರಿಬಲೆ(ದೊಡ್ಡಬಲೆ)ಯನ್ನು ಬೀಸಲಾಯಿತು. ಅಷ್ಟೂ ಮೀನುಗಳು ಬಲೆಗೆ ಬಿದ್ದುವು. ತಮ್ಮ ಶ್ರಮಕ್ಕೆ ಸಂದ ಪ್ರತಿಫಲದಿಂದ ತೃಪ್ತರಾದಮೀನುಗಾರರು ಕಡಲರಾಜನಿಗೂ,ತಮ್ಮಿಷ್ಟದ ದೈವಗಳಿಗೂ ಭಕ್ತಿಯಿಂದ ಕೃತಜ್ಞತೆ ಸಲ್ಲಿಸಿದರು.
ದೂರ ಸಾಗರದ ಮೀನುಗಾರಿಕೆ ಎಂದರೆ ಮೀನುಗಾರರ ಪಾಲಿಗೆ ಅದೊಂದು ಸಾವು ಬದುಕಿನ ನಡುವೆ ಸರಸವಾಡುವಂಥ ಕಸುಬು! ಭೂಮಿಯ ಮೇಲೆ ದೊರಕುವ ಯಾವುದೇ ಆಸರೆ, ಭದ್ರತೆಗಳೂ ಸಿಗದಂತಹ ಪರಿಸ್ಥಿತಿಯಲ್ಲಿ ದುಡಿಯುವ ಕಾಯಕವನ್ನು ಆಯ್ದುಕೊಂಡಿರುವ ಮೊಗವೀರರು ಅದನ್ನು ಅತೀವ ಶ್ರದ್ಧೆಯಿಂದ ನಿರ್ವಹಿಸುತ್ತ ಬಂದವರು. ಇಂಥ ಶ್ರಮಜೀವಿಗಳಿಗೆ ಚಂಡಮಾರುತ, ಬಿರುಗಾಳಿ ಮತ್ತು ಕಡಲುಗಳ್ಳರಿಂದ ಆಗಾಗ ಒದಗುವ ಸಂಕಷ್ಟಗಳೊಂದಿಗೆ ಮೀನುಗಳ ಜೊತೆಯಲ್ಲಿ ಬಲೆಗೆ ಬೀಳುವ ಮತ್ತು ಮಾರಣಾಂತಿಕ ವಿಷದ ಕಡಲಹಾವುಗಳ ಅಪಾಯವೂ ಕಟ್ಟಿಟ್ಟ ಬುತ್ತಿಯಾಗಿತ್ತು. ಆದರೆ ಈ ಜನರು ಅವಕ್ಕೆಲ್ಲ ಹೆದರುವವರಲ್ಲ. ಹಾಗಾಗಿ ಅಂಥ ಹಾವುಗಳನ್ನು ಮೀನುಗಳ ರಾಶಿಯಿಂದ ಹೆಕ್ಕಿ ಮರಳಿ ಸಮುದ್ರೆಕ್ಕೆಸೆದು ಅವಕ್ಕೆ ಜೀವದಾನ ಮಾಡುತ್ತಾರೆ.
ಆವತ್ತು ತೊಮರನ ತಂಡವು ಬೀಸಿದ ಬಲೆಗೂ ದೊಡ್ಡ ಗಾತ್ರದ ‘ಕಡಲ್‍ಮರಿ’ ಎಂಬ ತೀಕ್ಷ್ಣ ವಿಷದ ಹಾವೊಂದು ಬಿದ್ದುಬಿಟ್ಟಿತು. ಅದು ತಪ್ಪಿಸಿಕೊಳ್ಳುವ ಧಾವಂತದಲ್ಲಿ ಬಲೆಯ ತೂತುಗಳಿಗೆ ಸಿಲುಕಿಕೊಂಡುಒದ್ದಾಡಿ ಅರೆಜೀವವಾಗಿಬಿಟ್ಟಿತು. ಇತ್ತ ಅದು ವಿಷಪೂರಿತ ಹಾವೆಂಬ ಅರಿವಿಲ್ಲದ ತೊಮರನ ಮನಸ್ಸು ಆ ಹಾವಿನ ನರಳಾಟಕ್ಕೆ ಮಿಡಿಯಿತು. ಅವನು ಅದನ್ನು ಬಿಡಿಸಲು ಮುಂದಾಗಿ ಬಲೆಯನ್ನು ಕತ್ತರಿಸತೊಡಗಿದ. ಮೊದಲೇ ಹೊಯ್ದಾಡಿ ನೋವು ಭಯದಿಂದ ಹೈರಾಣಾಗಿದ್ದ ಹಾವು ತೊಮರನ ಎಡಗೈ ಬೆರಳನ್ನು ತೀಕ್ಷ್ಣವಾಗಿ ಕಚ್ಚಿ ಹಿಡಿಯಿತು. ಅವನು ಅದನ್ನು ಲೆಕ್ಕಿಸದೆ ಬಲೆಯಿಂದ ಬಿಡಿಸಿದ.ಹಾವು ತಾನು ಕಚ್ಚಿದ ಹಿಡಿತವನ್ನು ಬಿಡದೆ ಅವನ ಬೆರಳಿನಲ್ಲಿ ನೇತಾಡುತ್ತಿತ್ತು. ಅದನ್ನೊಂದು ಸಾಹಸವೆಂದೋ ಅಥವಾ ತಮಾಷೆಯ ಸಂಗತಿಯೆಂದೋ ಭಾವಿಸಿದ ತೊಮರ ಆ ದೃಶ್ಯವನ್ನು ತನ್ನ ಜೊತೆಗಾರರಿಗೆ ಪ್ರದರ್ಶಿಸುತ್ತ ಖುಷಿಪಟ್ಟ. ಆದರೆ ತಂಡೇಲನಿಗೆ ಅದು ವಿಷದ ಹಾವೆಂದು ತಿಳಿದಿತ್ತು. ಹಾಗಾಗಿ ಎಲ್ಲರೂ ಕಂಗಾಲಾಗಿಬಿಟ್ಟರು. ಆಹೊತ್ತು ತಮ್ಮ ಊರಿನಿಂದ ಬಹಳವೇ ದೂರದಲ್ಲಿ ತೇಲುತ್ತಿದ್ದ ಆ ಹಡಗಿನಲ್ಲಿ ತೊಮರನನ್ನು ಉಳಿಸುವಂಥ ಯಾವ ಮಾರ್ಗೋಪಾಯವೂ ಇರಲಿಲ್ಲ.ಹೀಗಾಗಿ ತೊಮರ ಸುಮಾರು ಒಂದು ತಾಸಿನ ನಂತರ ವಿಲವಿಲನೇ ಒದ್ದಾಡಿ ಪ್ರಾಣಬಿಟ್ಟ. ಆದ್ದರಿಂದ ಮುಂದಿನ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ಅವರು ಕೂಡಲೇ ಹಿಂದಿರುಗಿದರಾದರೂ ಊರಿಗೆ ತಲುಪಲು ಮತ್ತೆ ನಾಲ್ಕು ದಿನಗಳು ಬೇಕಿದ್ದುವು.‘ಅಷ್ಟರಲ್ಲಿ ಹೆಣವು ಕೆಡುತ್ತದಲ್ಲಾ…! ಏನು ಮಾಡುವುದು..?’ಎಂದು ಬಹಳವೇ ಚಿಂತಿಸಿದ ತಂಡೇಲನು ಕೊನೆಗೆ ಮೀನುಗಳನ್ನು ಶೇಖರಿಸಿಡುವ ಶೈತ್ಯಾಗಾರದಲ್ಲಿ ತೊಮರನ ಹೆಣವನ್ನಿರಿಸಿಕೊಂಡು ಹಿಂದಿರುಗಿದ.
ಆದರಿತ್ತ ಅಕ್ಕಯಕ್ಕನ ದುರಾದೃಷ್ಟವೆಂದರೆ ಅವಳ ಗಂಡ ಮೊದಲೇ ತೀರಿಕೊಂಡಿದ್ದ. ಈಗ ಇದ್ದ ಒಬ್ಬ ಮಗನೂ ಸಮುದ್ರಪಾಲಾದ. ಆ ಆಘಾತದಿಂದ ಕುಸಿದು ಹೋದವಳಿಗೆ ಕ್ರಮೇಣ ತನ್ನೂರಿನ ಮೇಲೆಯೇ ಜಿಗುಪ್ಸೆ ಬಂದು ಬಿಟ್ಟಿತು.ಹಾಗಾಗಿ ಆವತ್ತೊಂದು ದಿನ ತನ್ನದೆಂಬ ಎಲ್ಲರನ್ನೂ,ಎಲ್ಲವನ್ನೂ ತೊರೆದು ಚೌಳುಕೇರಿಗೆ ಬಂದುಬಿಟ್ಟಳು. ಹಾಗಾಗಿಯೇ ಇಂದು ಲಕ್ಷ್ಮಣನ ಕತೆ ಕೇಳಿದವಳ ಕರುಳು ಪುತ್ರ ಶೋಕದಿಂದ ಮಿಡಿಯುತ್ತಲಕ್ಷ್ಮಣನೇ ಅವಳಿಗೆ ತನ್ನ ಮಗನಾಗಿ ಕಾಣಿಸಿದ.
‘ಮನಿ ಬಾಡಿಗೆಗೆ ಇಲ್ ಯಾರ್ ಕೊಡ್ತ್‍ತ್ತ್ ಮಗಾ! ನೀವ್ ನಂಗೆ ಮಕ್ಕಳ್ ಇದ್ದಂಗೆ. ಹಾಂಗಾಯ್ ನಿಮ್ಗೊಂದ್ ಸ್ವಂತೆ ನೆಲಿ ಆಪಲೊರಿಗೆ ಇಲ್ಲೇ ಆಯ್ಕಣಿ!’ಎಂದ ಅಕ್ಕಯಕ್ಕ,ತನ್ನ ಗುಡಿಸಲಿನ ಒಂದು ಪಾಶ್ರ್ವದ ಉದ್ದನೆಯ ಇಳಿಮಾಡಿನ ಪಡಸಾಲೆಯನ್ನೇಅವರಿಗೆ ಬಿಟ್ಟುಕೊಟ್ಟಳು. ಆದ್ದರಿಂದ ಲಕ್ಷ್ಮಣ ಮತ್ತು ಸರೋಜ ಬಹಳ ನಿರಾಳರಾದರು. ಆವತ್ತಿನಿಂದ ಹಿರಿಯಳೂ, ಕರುಣಾಮಯಿಯೂ ಆದ ಅಕ್ಕಯಕ್ಕನೊಂದಿಗೆ ಲಕ್ಷ್ಮಣ, ಸರೋಜಾರ ಹೊಸಬಾಳ್ವೆ ಆರಂಭವಾಯಿತು. ದೇವರು ಯಾವತ್ತೂ ತಮ್ಮ ಕೈಬಿಡುವುದಿಲ್ಲ ಎನ್ನುವುದಕ್ಕೆ, ಗೊತ್ತುಗುರಿಯಿಲ್ಲದೆ ಕಂಗಾಲಾಗಿ ಹೊರಟು ಬಂದಂಥ ಸಂದರ್ಭದಲ್ಲಿಯೇ ಆ ಶಕ್ತಿಯು ಅಕ್ಕಯಕ್ಕನ ರೂಪದಲ್ಲಿ ನಮಗೊಂದು ನೆಲೆ ಕರುಣಿಸಿದ್ದೇ ಅದಕ್ಕೆ ಸಾಕ್ಷಿ! ಎಂದುಕೊಂಡ ಸರೋಜಾಳಲ್ಲಿ ಮರಳಿ ಧೈರ್ಯ ಮೂಡಿತು. ಇತ್ತ ತನ್ನ ಕಡೆಗಾಲದ, ಒಂಟಿತನದ ಬದುಕಿಗೆ ಉತ್ಸಾಹದ ಚಿಲುಮೆಯಂತಿದ್ದ ಯುವ ಜೋಡಿಯೊಂದು ಆಕಸ್ಮಿಕವಾಗಿ ಆಗಮಿಸಿದ್ದು ಅಕ್ಕಯಕ್ಕನ ಜೀವನೋತ್ಸಾಹವನ್ನುಚಿಗುರಿಸಿತು. ಆದ್ದರಿಂದ ಮರುದಿನ ಮುಂಜಾನೆ ಅವಳು ಹುರುಪಿನಿಂದ ಎದ್ದವಳು ಲಕ್ಷ್ಮಣ, ಸರೋಜಾಳಿಗೆ ಚಹಾ ತಿಂಡಿ ಮಾಡಿ ಕೊಟ್ಟಳು. ಬಳಿಕ ಲಕ್ಷ್ಮಣನನ್ನು ಬೀಡಿ ಚಕ್ಕರ್ ರಫೀಕ್ ಬ್ಯಾರಿಯ ಮನೆಗೆ ಕರೆದೊಯ್ದು ಮಾತಾಡಿಸಿ ತನ್ನ ಭರವಸೆಯ ಮೇಲೆ ಬೀಡಿ ಎಲೆ, ತಂಬಾಕು ಮತ್ತು ಅದಕ್ಕೆ ಬೇಕಾದ ಪರಿಕರಗಳನ್ನು ತೆಗೆಸಿಕೊಟ್ಟಳು.
(ಮುಂದುವರೆಯುವುದು)