ಮುಕ್ಕಾಲು ಶತಮಾನದ ಹೊಸ್ತಿಲಲಿ

ಸ್ವಾಭಿಮಾನದ ದಿಟ್ಟ ಧೀರ ನಡೆಯಲಿ ಸಾಗಿ
ಮುಕ್ಕಾಲು ಶತಮಾನದ ಹೊಸ್ತಿಲಲಿ ನಿಂತಿಹಳು ಭಾರತಾಂಬೆ
ಗೆಲ್ಮೆಯ ನಲ್ಮೆಯ ಒಲ್ಮೆಯ ಬಾಳ್ವೆಯಲೀಗ
ಹೊಸದೊಂದು ಘೋಷ ‘ಹರ್ ಘರ್ ತಿರಂಗ’

ಎಲ್ಲೆಲ್ಲೂ ಅಮೃತ ಮಹೋತ್ಸವದ ಸಡಗರ ಸಂಭ್ರಮ
ಮದುವಣಗಿತ್ತಿಯಂತೆ ಶೃಂಗಾರಗೊಂಡಿಹಳು ಭಾರತಾಂಬೆ
ವರ್ಷವಿಡೀ ಹಳೆಯ ಸೀರೆಯಲಿ ಬಡವಾಗುವ ದಿನಗಳು ಕಳೆದು
ಭರವಸೆಯ ಬೊಗಸೆ ತುಂಬಬಹುದು
ಹೊಂಗನಸಿನ ನಿರೀಕ್ಷೆಯಲಿ ನಿಂತಿಹಳು ಮಾತೆ

ಸ್ವಾತಂತ್ರರಾಗಲು ಶ್ರಮಬಲಿದಾನವ ನೀಡಿದವರೆಷ್ಟೋ...!
ಅದರ ಪರಿಪೂರ್ಣ ಅನುಭೂತಿ ಪಡೆದವರೆಷ್ಟೋ...!
ಪ್ರತಿ ವರ್ಷ ಆ ದಿನವ ಮರೆಯದ ಸಡಗರವಿದೆ
ಎಲ್ಲಿ ನೋಡಿದರಲ್ಲಿ ಮುದ್ದು ಮನಸಿನ ಮಕ್ಕಳ ಹೂನಗುವಿದೆ
ಬೆಳೆಯುವ ಭವಿಷ್ಯವನರಳಿಸುವ ಮನಸುಗಳ ನಡುವೆ
ದೇಶಪ್ರೇಮದ ಹಾಡು ಗುನುಗುತಿಹಳು ಭಾರತಾಂಬೆ

ಕಳೆದು ಹೋಗಿದೆ ಮುಕ್ಕಾಲು ಶತಮಾನ
ಹಳ್ಳಿಗಾಡಿನ ಮೂಲೆಯಲ್ಲಿರುವ ಅನ್ನದಾತನಿಗೆ
ಯಾರ ಕಪಿ ಮುಷ್ಠಿಯಲ್ಲಿದ್ದೆವು ಎಂದು ಬಿಡುಗಡೆಯಾದೆವೆಂಬರಿವಿಲ್ಲ
ಒಂದಿಷ್ಟು ಹೊಟ್ಟೆಯ ಹಸಿವು ತಣಿಯುತಿದೆ
ಗದ್ದೆ ಬಯಲಿನಲಿ ದಿನವಿಡೀ ಬೆವರ ಹನಿಸುವವನಿಗೆ
ಹಸುರು ಮಾಗಿ ತೆನೆ ತುಂಬಿ ಕೈಗೆ ಬಂದಿದೆ
ತುತ್ತು ಬಾಯಿಗೆಂದಾದರೂ ಬರುವುದೆಂಬಾಸೆಯೂ ಇದೆ

ಅಲ್ಲೆಲ್ಲೋ ತೆರೆಮರೆಯಲಿ ನಲುಗುವ ಅಮಾಯಕ ಜೀವಗಳಿಗೆ
ಈ ದೇಶ ಸುರಕ್ಷಿತವೆಂಬ ಧೈರ್ಯ ಬರಬೇಕು ಇನ್ನು
ಅನ್ಯಾಯ ಅಕ್ರಮ ಅಪರಾಧಗಳಿಗೆ ಬೀಳಬೇಕು ಕಡಿವಾಣ
ಹೊಟ್ಟೆಪಾಡಿಗಾಗಿ ದೇಶ ಬಿಟ್ಟು ಹೋದವರೆಷ್ಟೋ...!
ಮತ್ತೆ ಮರಳಿ ಗೂಡು ಸೇರುವ ದಿನಗಳು ಬರುವುದೇ...?
ಬರಿದಾದ ಒಡಲು ತುಂಬುವ ಭಾವೋದ್ವೇಗದಲಿ ಭಾರತಾಂಬೆ

ಯೌವನದ ಹಂತವನ್ನು ದಾಟಿದ ಎಪ್ಪತ್ತೈದರ ವಯೋವೃದ್ಧ 
ಜಗುಲಿಯ ಮೇಲೆ ತುಂಡು ಬಟ್ಟೆಯನ್ನು ಹಾಸಿ ಕೂತಿದ್ದಾನೆ
ಮನೆ ಮಂದಿಯೆಲ್ಲ ಆವನಿಂದ ಏನೂ ಸಿಕ್ಕಿಲ್ಲವೆಂಬ ಆಕ್ರೋಶದಿ
ಅಸಹಾಯಕತೆಯನ್ನು ಜರಿಯುತಿರುವಾಗ
ಮಾತಿನ ಚಾಟಿ ಏಟುಗಳ ಸಹಿಸಿಕೊಂಡು
ಗತ ದಿನಗಳನ್ನು ನೆನಪಿಸಿಕೊಂಡು
ಬನ್ನಿ ಮುನ್ನಡೆಯೋಣವೆಂದು ಕರೆಯುವ ಕೈಗಳನರಸುತ್ತಿದ್ದಾನೆ

ಎಲ್ಲಿಗೆ ಹೋಗಿ ಮುಟ್ಟಬೇಕೋ ಅಲ್ಲಿವರೆಗೆ ಹೋಗಿಲ್ಲವೆಂದು
ಒಪ್ಪು ತಪ್ಪುಗಳ ಅಪವಾದಗಳನ್ನು ಮಡಿಲಲಿ ಹುದುಗಿಸಿಕೊಂಡು
ಸ್ವಾತಂತ್ರ್ಯ ದಿನಂದು ಹೊಸ ಸೀರೆ ಉಡಿಸುವಾಗ
ಯಾಕೆ ಮಗಾ  ಈ ಅಲಂಕಾರ ವೈಭವವೆಂದು 
ರೋಧಿಸುತ್ತಿದ್ದವಳು ನಿರ್ಲಿಪ್ತತೆಯ ಪರದೆಯ ಸರಿಸಿದ್ದಾಳೆ
ಮನೆ ಮನೆ ಮನಸುಗಳು ಪರಿವರ್ತನೆಯಲಿ ಪರಿಪಕ್ವವಾಗಿ
ಮುಂಬರುವ ಶುಭಗಳಿಗೆಗೆ ಕಾಯುವ ಕುತೂಹಲಿಯಾಗಿದ್ದಾಳೆ

ಭಾರತಾಂಬೆಯ ಮೊಗದಲಿ ಗೆಲುವಿನ ಛಾಯೆ ಮಾಸದಿರಲು
ಹಸಿದೊಡಲು ತಣಿದು ಭದ್ರತೆಯ ಭಾವ ಬೆಸೆಯಬೇಕು
ಸಮಾನತೆ  ಯಾರನ್ನೋ ಒಲಿಸುವ ಕಾಯಕವಾಗಿರದೆ
ಎಲ್ಲರ ಪರವಾಗಿ ವರವಾಗಿ ನಿಲ್ಲುವ ಧ್ಯೇಯ ಮಂತ್ರವಾಗಬೇಕು
ನ್ಯಾಯ ನೀತಿಯಲಿ ಸತ್ಯಧರ್ಮದ ಹಾದಿಯಲಿ 
ಪರಿಶುದ್ಧತೆಯೆಡೆ ಸಾಗುವ ಅವಳ ಹೆಜ್ಜೆಯ ದನಿಯಾಗಬೇಕು
ಹರ್ ಘರ್ ತಿರಂಗ ನಿಜಾರ್ಥದಲಿ ರಾರಾಜಿಸಲು
ಸಮರಸ  ಭಾವದಿ ಜೊತೆಯಾಗಬೇಕು ನಾವು 


*******

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

15 thoughts on “ಮುಕ್ಕಾಲು ಶತಮಾನದ ಹೊಸ್ತಿಲಲಿ”

  1. Gururaja Sanil, udupi

    ಸಂದರ್ಭೋಚಿತವಾದ ಸುಂದರ ಕವನವನ್ನು ನೀಡಿದ ಅನಿತಾ ಅವರಿಗೆ ಹಾರ್ದಿಕ‌ ಅಭಿನಂದನೆ…

  2. Gururaja Sanil, udupi

    ಸಂದರ್ಭೋಚಿತವಾದ ಅರ್ಥಪೂರ್ಣ ಕವಿತೆಯಿದು. ಶ್ರೀಮತಿ ಅನಿತಾ ಅವರಿಗೆ ಅಭಿನಂಧನೆ….

  3. ಕವಿತೆ ಚೆನ್ನಾಗಿ ಮೂಡಿ ಬಂದಿದೆ ಅನೀಮಿಯಾ.. ಅಭಿನಂದನೆಗಳು 👍🎉

  4. Vishwanath Karnad

    Mukkalu shatamanada hostilannu muttida Bharati kandunda yellavannu smarisutta mundina ashottaragala mananavannu maduvalli kaviya bhavabhivyaktiya kushalate kanuttade
    Anita abhinandane…..

  5. Adv R.M. Bhandari, Mumbai

    On the occasion of Amrtotsva of our National Independence Day a well written lyric – welldone Anita n all the best for your future writings 👍👍😘

  6. Vishwanath Karnad

    Desha prema,samaja mukhagala kalaji,samraddhiya abhilashegalannu kavyamayavagi chitrisuva sundara rashtreeya kavite.abhinandane Anita….

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter