ಬೆಂಗಳೂರಿಗೆ ಸಮೀಪದ ಮಂಕೀಪುರದಲ್ಲಿ (ಮೊದಲು ಮಂಗೇನಹಳ್ಳಿ ಎಂದು ಕರೆಯಲಾಗುತ್ತಿತ್ತು. ಇತ್ತೀಚೆಗೆ ಹೆಸರು ಬದಲಾಯಿಸಲಾಗಿದೆ.) ಐವತ್ತೇಳನೇ ಸ್ವಾತಂತ್ರ್ಯ ದಿನೋತ್ಸವವನ್ನುಇಂಗ್ಲೆಂಡಿನ ಖ್ಯಾತ ಕೈಗಾರಿಕೋದ್ಯಮಿ ವಿದೇಶೀಯ, ಕುಟಿನೋ ಅವರ ಅಧ್ಯಕ್ಷತೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದ ಕೊನೆಯಲ್ಲಿ ವಿದೇಶೀ ಬ್ರಾಂಡಿನ ಕಂಪುಳ್ಳ ತಂಪು ಪಾನೀಯ ವಿತರಿಸಲಾಗುವುದೆಂದು ಮೊದಲೇ ಪ್ರಕಟಿಸಲಾಗಿತ್ತಾದ್ದರಿಂದ ಹತ್ತಿರದ ಹಳ್ಳಿಗಳಿಂದಲೂ, ನಗರದ ಹೊರ ಬಡಾವಣೆಗಳಿಂದಲೂ ಅನೇಕ ಜನರು ಮಂಕೀಪುರದ ಕಾರ್ಯಕ್ರಮಕ್ಕೇ ಜಮಾಯಿಸಿದ್ದರು. ಕುಟಿನೋ ಅವರು ಹೆಲಿಕಾಪ್ಟರಿನಿಂದ ಧರೆಗಿಳಿಯುತ್ತಿದ್ದಂತೆ ನೆರೆದ ನಾಗರಿಕರು ಅವರನ್ನುಮಂಡಿಯೂ ರಿಸ್ವಾಗತಿಸಿದರು. ಕುಟಿನೋಅವರು ಮುಗುಳು ನಗುತ್ತಾ‘ನಿಮ್ಮೆಲ್ಲರನ್ನೂ ನೋಡಿ ನನಗೆ ತುಂಬಾ ಸಂತೋಷ ಆಗಿದೆ’ಎಂದು (ಕನ್ನಡ ವಾಕ್ಯವನ್ನು ಅವರು ಇಂಗ್ಲಿಷಿಗೆ ಲಿಪ್ಯಾಂತರ ಮಾಡಿಸಿ ಕೊಂಡಿದ್ದರು) ಎಡವುತ್ತಾ ಮುಗ್ಗುರಿಸುತ್ತಾ ಹೇಳಿದಾಗ ಜನರ ಹರ್ಷ ಮುಗಿಲು ಮುಟ್ಟಿತು.
ಕುಟಿನೋ ಅವರು ಇಂಗ್ಲಿಷಿನಲ್ಲಿ ಹೇಳಿದ್ದನ್ನು ಹಳ್ಳಿಗರ ಅನುಕೂಲಕ್ಕಾಗಿ ಕನ್ನಡದಲ್ಲಿ ಅನುವಾದಿಸಿ ಹೇಳಲಾಗುತ್ತಿತ್ತು. ಕುಟಿನೋ ಅವರು ಹೇಳಿದರು, ‘ಬಹು ಹಿಂದೆ ನಾವು ಈ ದೇಶಕ್ಕೆ ಬಂದು ಆಡಳಿತ ಮಾಡಿ ವಾಪಸ್ಸಾಗಿದ್ದೆವು. ಆಗ ನೀವು ನಮಗೆ ‘ಕ್ವಿಟ್ ಇಂಡಿಯಾ’ ಎಂದಿರಿ. ಪರವಾಗಿಲ್ಲ, ನಾವು ಹೋದೆವು. ಈಗ ‘ಮತ್ತೆ ಬನ್ನಿ’ ಎಂದು ಕರೆಯುತ್ತಿದ್ದೀರಿ. ಸಂತೋಷ, ಮತ್ತೆ ಬಂದಿದ್ದೇವೆ. ನಿಮಗೆಲ್ಲ ಸಂತೋಷತಾನೆ ? (ಚಪ್ಪಾಳೆ). ಈ ದೇಶದಲ್ಲಿ ಅಂದು ನಾವು ಹೋದ ದಿನದಿಂದಲೂ ಈ ಆಗಸ್ಟ್ 15ರ ಕಾರ್ಯಕ್ರಮ ಸ್ವಾತಂತ್ರ್ಯೋತ್ಸವ ಎಂದು ಆಚರಿಸುತ್ತ ಬಂದಿದ್ದೀರಿ. ಹೋಗಲಿಕ್ಕೆ ಇದ್ದ ಸ್ವಾತಂತ್ರ್ಯ ಈಗ ಬರಲಿಕ್ಕೂ ಸಿಕ್ಕ ಹಾಗಾಯಿತು. ಇದು ನಿಜವಾದ ಸ್ವಾತಂತ್ರ್ಯ. (ಚಪ್ಪಾಳೆ, ಚಪ್ಪಾಳೆ). ಇದು ನಿಮ್ಮ ಪ್ರೀತಿ, ಅಭಿಮಾನ, ತಿಳಿವಳಿಕೆ, ದೂರ ದೃಷ್ಟಿಗಳನ್ನು ತೋರಿಸುತ್ತದೆ. (ಚಪ್ಪಾಳೆ, ಚಪ್ಪಾಳೆ, ಚಪ್ಪಾಳೆ). ನಾವು ನಿಮಗಾಗಿ ತಂಪು ಪಾನೀಯ ಕೊಡುತ್ತೇವೆ, ತಂಪು ಗಾಳಿ ಕೊಡುತ್ತೇವೆ. ನೀವು ಹೋರಾಡಲು ನಮ್ಮ ಬಂದೂಕುಗಳನ್ನು ಕೊಡುತ್ತೇವೆ. ನಮ್ಮ ವಿದೇಶೀ ಕಂಪನಿಗಳು ನಿಮ್ಮ ಸಮುದ್ರಗಳಿಂದಲೇ ನಿಮಗಿಂತ ಚೆನ್ನಾಗಿ ಉಪ್ಪು ತಯಾರಿಸಿ ನಿಮಗಾಗಿ ಕೊಡಲಿವೆ. ನಿಮ್ಮ ಭೂಮಿಯಲ್ಲಿ ನಾವು ನಿಮಗಾಗಿ ಹೂ, ಹಣ್ಣುಗಳನ್ನು ಬೆಳೆದು ಕೊಡುತ್ತೇವೆ. ರುಚಿಯಾದ ಬ್ರೆಡ್, ಪಿಜ್ಜಾಗಳ ಬ್ರೇಕ್‍ಫಾಸ್ಟ್ ಹವ್ಯಾಸ ನೀವು ಬೆಳೆಸಿಕೊಳ್ಳಲು ಪ್ರೋತ್ಸಾಹ ಕೊಡುತ್ತೇವೆ. ನೀವು ನಮ್ಮಂತೆ ಆಗಬೇಕು ಅಂತ ನಮಗೆ ಇಷ್ಟ. ಅದಕ್ಕಾಗಿ ನೀವು ಸ್ವಲ್ಪ ತ್ಯಾಗ ಮಾಡಬೇಕು. ನೀವು ಜಗತ್ತಿನಲ್ಲೇ ಅತಿದೊಡ್ಡ ತ್ಯಾಗಶೀಲರು (ಚಪ್ಪಾಳೆಯೇ, ಚಪ್ಪಾಳೆ) ನಿಮ್ಮ ಭಾಷೆ, ನಿಮ್ಮ ಸಂಪ್ರದಾಯ, ನಿಮ್ಮ ನಡಾವಳಿ ಎಂದು ಹೇಳೋ ದನ್ನು ಬಿಡಬೇಕು. ನೀವೆಲ್ಲರೂ ಇಂಗ್ಲಿಷ್ ಕಲಿಯಬೇಕು. ಇಂಗ್ಲಿಷ್ ಸಂಸ್ಕøತಿ ಮೈಗೂಡಿಸಿಕೊಳ್ಳಬೇಕು. ಆಗ ನೀವಿರುವ ಜಾಗವೇ ಇಂಗ್ಲೆಂಡ್ ಆಗುತ್ತದೆ’….
ಸಭೆಗೆ ಸಭೆಯೇ ರೋಮಾಂಚಗೊಂಡಿತ್ತು. ‘ನೀವು ವಾಪಸ್ಸು ಬಂದಿದ್ದು ಒಳ್ಳೆಯದಾಯಿತು’ ಎಂದು ಸಭಿಕರೆಲ್ಲರು ಹರ್ಷದಿಂದ ಕೋರಸ್ ಆಗಿ ಹೇಳಿದರು, ಕುಟಿನೊಅವರ ಇಂಟರ್ ನ್ಯಾಷನಲ್‍ಟೀಮಿನ ಪದಾಧಿಕಾರಿಗಳು ಸರ್ವರಿಗೂ ಫಾರಿನ್ ಟೋಪಿ ತೊಡಿಸಿದರು. ಎಲ್ಲರ ಮನೆಯಲ್ಲಿ ಅಡುಗೆಗೆಂದು ಫಾರಿನ್ ಉಪ್ಪನ್ನೇ ವಿತರಿಸಲಾಯಿತು. ಮಾರನೆ ದಿನದ ಬೆಳಗಿನ ನಾಷ್ಟಾಕ್ಕೆಂದು ಯುರೋಪಿಯನ್ ಪಿಜ್ಜಾ ಹಂಚಿದರು. ವಿದೇಶೀ ಕೋಲಾ ಕುಡಿದು ತೃಪ್ತರಾದ ಗ್ರಾಮಸ್ಥರ ಕಣ್ಣಲ್ಲಿ ತೇಗು ಹನಿಸಿಡಿದು ದೃಷ್ಟಿ ಮಂಜಾದಾಗ ಕಾಣಿಸಿದ್ದು :
ತಾಯಿ ಭಾರತಿಯ ದಿವ್ಯ ಮೂರುತಿ.
ಆಕೆ ದಿಗ್ಭ್ರಾಂತಳಾಗಿದ್ದಳು. ತನ್ನ ಮಂಕೀಪುರದ ಮಕ್ಕಳಿಗೆ ಕವಿದ ಈ ನವೀನ ಮಂಕಿಗೆ ಏನೆನನ್ನಬೇಕು ಎಂದು ತೋಚದೇ ಅವಳು ಮೂಕಳಾಗಿದ್ದಳು. ಅವಳಿಗೆ ಅನಂತ ಹಸ್ತಗಳು… ಎರಡು ಕೈಗಳಿಂದ ಕಣ್ಣುಗಳನ್ನೂ, ಎರಡು ಕೈಗಳಿಂದ ಕಿವಿಗಳನ್ನೂ, ಎರಡು ಕೈಗಳಿಂದ ಬಾಯನ್ನೂ, ಮುಚ್ಚಿಕೊಂಡು ಅವಳು ಅದೃಶ್ಯಳಾಗುವ ಹೊತ್ತಿಗೆ–ಕುಟಿನೊರ ಹೆಲಿಕಾಪ್ಟರ್ನಾಡಿಗೆ ಧೂಳೆರಚಿ ಆಗಸಕ್ಕೆ ಏರುತ್ತಿತ್ತು.
ಮಂಕೀಪುರದ ಜಾಣ ಜಾಣೆಯರು ಆಕಾಶದತ್ತ ಕೈಬೀಸುತ್ತಲೇ ಇದ್ದರು.ನನ್ನ ದುಸ್ವಪ್ನದಲ್ಲಿ ಕಂಡ ಈ ಘಟನೆಯನ್ನು ಇದ್ದುದಿದ್ದಂತೆ ವರದಿ ಮಾಡಲಾಗಿದೆ ‘Objective Correlative ’ಕಂಡು ಹಿಡಿಯಲು ಸಮಯವಿರಲಿಲ್ಲ. ದಯಮಾಡಿ ಕ್ಷಮಿಸುವುದು.
3 thoughts on “ಮಂಕೀಪುರವೆಂಬ ದುಸ್ವಪ್ನ”
Chintanna👏👏👏👍👍
ಮೊದಲು ಸ್ವಾತಂತ್ರ್ಯಕ್ಕಾಗಿ ಹೋರಾಟ, ನಂತರ ಪಾಶ್ಚಿಮಾತ್ಯರ ನಡೆ ನುಡಿಯ ತಾಕಕಲಾಟ, ಈ ನಡುವೆ ನಮ್ಮ ಸ್ವಾತಂತ್ರ್ಯ ದಿನಾಚರಣೆಯ ಒಡನಾಟ, ಒಟ್ಟಿನಲ್ಲಿ ಇದವೇ ನಮ್ಮ ಸ್ವತಂತ್ರ್ಯ ಭಾರತದ ಹೆಜ್ಜೆಗಳ ಓಡಾಟ.. ಸ್ವಪ್ನದಲ್ಲಿ
ಕಥೆ ಚೆನ್ನಾಗಿದೆ.
ಅಡ್ಡಾಡಿ..ಅದು ಸ್ವಪ್ನ ಎಂದು ತಿಳಿದು ನಿರಾಳವಾಯ್ತು. ಆದರೂ ಹೀಗೂ ಆಗಬಹುದೇನೋ ಅನ್ಸುತ್ತೆ.